'ಅವಸಾನ' (ಕಥೆ ) ಭಾಗ 3

'ಅವಸಾನ' (ಕಥೆ ) ಭಾಗ 3

 


     ಮತ್ತೆ ಜೀವನೋತ್ಸಾಹ ತಳೆದ ಭಾಸ್ಕರನ್ ನಾಯರ ಪುನಃ ಕೇರಳಕ್ಕೆ ಹೋಗಿ ಎರ್ನಾಕುಲಂ ಕಡೆಯಿಂದ ಮತ್ತೊಬ್ಬಳನ್ನು ಕಟ್ಟಕೊಂಡು ಬಂದು ಹುಲ್ಲೆಣ್ಣೆ ಮತ್ತು ನಾಟಾ ದಂಧೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ. ಒಮ್ಮೆ ಹದಗೆಟ್ಟಿದ್ದ ನಾಯರನ ಕುಟುಂಬ ಜೀವನ ಮೊದಲಿನ ಉಚ್ಛ್ರಾಯತೆಯನ್ನು ಪಡೆಯಲೆ ಇಲ್ಲ ಜನರು ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ ನಾಯರನ ಎರಡನೆ ಸಂಬಂಧದ ಕುರಿತು ಆಡಿಕೊಳ್ಳ ತೊಡಗಿದರು. ತಾನು ಮಾಧವಿಯನ್ನು ಮದುವೆ ಮಾಡಿಕೊಂಡು ಬಂದಿರುವುದಾಗಿ ನಾಯರನ ವಿವರಣೆ. ಆದರೆ ಆತನಿಗಾಗದವರು ಮಾಧವಿಯನ್ನು ಅತ ಓಡಿಸಿಕೊಂಡು ಬಂದಿರುವನೆಂದು ಆಡಿಕೊಳ್ಳ ತೊಡಗಿ ದರು. ಜನರ ಸಣ್ಣತನ ಮತ್ತು ಕುಚೇಷ್ಟೆ ಗಳನ್ನು ಕಡೆಗಣಿಸಿ ಬಿಡುವ ಉದಾರತನವನ್ನು ನಾಯರ್ ತೋರದೆ ಮಧ್ಯಪಾನದಲ್ಲಿ ತನ್ನ ನೋವನ್ನು ಮರೆಯಲು ಪ್ರಯತ್ನಪಟ್ಟ. ಕುಡಿತದ ಅಮಲಿನಲ್ಲಿ ಮನೆಗೆ ಬರುತ್ತಿದ್ದ ನಾಯರ್ ಮಾಧವಿಯನ್ನು ವಿನಾಕರಣ ವಾಗಿ ಆಕೆಯ ತಪ್ಪಿಲ್ಲದೆ ದಂಡಿಸ ತೊಡಗಿದ. ಆಕೆಯು ಎಷ್ಟೆ ಸಹನೆಯಿಂದ ಸಹಿಸಿ ಕೊಂಡರೂ ನಾಯರನ ಕೋಪ ಇಳಿಯು ತ್ತಿರಲಿಲ್ಲ. ಆಕೆಯ ಸಹನೆ ಆತನನ್ನು ಮತ್ತಷ್ಟು ಕೆಣಕಿದಂತಾಗಿ ಮನದಣಿಯೆ ಬೈದು ಆಕೆಯನ್ನು ಹೊಡೆದು ಬಡಿದು ಮಾಡಿ ಹಿಂಸಿಸ ತೊಡಗಿದ. ಬರ ಬರುತ್ತ ವಿಕೃತ ಸ್ವಭಾವದವನಾಗ ತೊಡಗಿದ, ಏನೂ ತೋಚದಂತಾದ ಅಪರಿಚಿತ ಸ್ಥಳಕ್ಕೆ ಬಂದ ಮಾಧವಿ ಕ್ರಮೇಣ ಭಾಸ್ಕರನ್ ನಾಯರನಿಂದ ಮಾನಸಿಕವಾಗಿ ದೂರವಾಗುತ್ತ ಬಂದಳು. ತನ್ನ ಮತ್ತು ಮಾಧವಿಯ ವಯಸ್ಸಿನ ಅಂತರ ಮತ್ತು ತನ್ನ ದುರ್ನಡತೆಯನ್ನು ಭಾಸ್ಕರನ್ ನಾಯರ ತಿಳಿಯಲಾರದವನಾದ. ಎಂತಹ ನಿಕೃಷ್ಟ ಹುಳುವಾದರೂ ತನ್ನ ಮೇಲಿನ ಆಕ್ರಮಣವನ್ನು ಪ್ರತಿಭಟಿಸುತ್ತದೆ. ನಾಯರ ವಿಷಯ ದಲ್ಲಿಯೂ ಇದೇ ಆಯಿತು. ಮೊದ ಮೊದಲು ಹೊಡೆತ ಬಡಿತ ಗಳನ್ನು ತಾಳಿಕೊಳ್ಳುತ್ತಿದ್ದ ಮಾಧವಿ ಕ್ರಮೇಣ ಅವರ ಬಿಡಾರದಿಂದ ಅನತಿ ದೂರದಲ್ಲಿ ವಾಸವಾಗಿದ್ದ ವೇಲಾಯುಧನ್ ಗೆ ಹತ್ತಿರವಾದಳು. ಇಂತಹ ವರ್ತಮಾನಗಳು ಬಹು ಬೇಗನೆ ರೆಕ್ಕೆ ಪುಕ್ಕಗಳೊಂದಿಗೆ ಜನರ ಕಿವಿ ತಲುಪುತ್ತವೆ. ಈ ಪುಕಾರು ಜನದಿಂದ ಜನಕ್ಕೆ ಹಬ್ಬಿ ಬಿದ್ರಕಾನಿನ ಮನೆ ಮನೆಗೂ ತಲುಪಿತು.


     ಒದು ದಿನ ಚಿಂಕ್ರ ಈ ವಿಷಯವನ್ನು ಗಡಂಗಿನಲ್ಲಿ ಭಾಸ್ಕರನ್ ನಾಯರನ ಎದುರಿಗೆ ಆಡಿಕೊಂಡ. ಹೆಡೆ ತುಳಿದ ಹಾವಿ ನಂತಾದ ಭಾಸ್ಕರನ್ ನಾಯರ ಚಿಂಕ್ರನನ್ನು ಅಲ್ಲಿಯೆ ತೀವ್ರವಾಗಿ ಥಳಿಸಿದ. ಮಾನಸಿಕ ಸ್ಥಿಮಿತ ಕಳೆದುಕೊಂಡ ಭಾಸ್ಕರನ್ ಉದ್ವಿಗ್ನನಾಗಿ ಬಿದ್ರಕಾನ ಹೊಳೆಯನ್ನು ದಾಟಿ  ತನ್ನ ಬಿಡಾರದೆಡೆಗೆ ನಡೆದ. ಇತ್ತ ಪ್ರಜ್ಞಾಶೂನ್ಯನಾದ ಚಿಂಕ್ರನನ್ನು ಗಡಂಗಿನ ಮಾಲಿಕ ಮೊದಲಿಯಾರ ಶಬ್ಬೀರನ ಖಟಾರಾ ವಾಹನದಲ್ಲಿ ಹಾಕಿ ಮಾವಿನಕೊಪ್ವದ ಸರ್ಕಾರಿ ಆಸ್ಪತ್ರೆಗೆ ಕಳಿಸಿಕೊಟ್ಟ. ತನ್ನ ಐವತ್ತು ವರ್ಷಗಳ ಸಾರ್ವಜನಿಕ ಜೀವನದಲ್ಲಿ ಮೊದಲ ಬಾರಿಗೆ ನಾಯರ ಕ್ರಿಮಿನಲ್ ಮೊಕದ್ದಮೆ ಯೊಂದರಲ್ಲಿ ಸಿಲುಕಿಕೊಂಡ. ತಲೆಗೆ ತೀವ್ರ ಪೆಟ್ಟು ತಿಂದ ಚಿಂಕ್ರನ ಹೇಳಿಕೆಯ ಆಧಾರದ ಮೇಲೆ ಕೊಲೆ ಪ್ರಯತ್ನದ ಕೇಸು ದಾಖಲು ಮಾಡಿಕೊಂಡ ಮಾವಿನ ಕೊಪ್ಪದ ಪೋಲೀಸ್ ಠಾಣೆಯ ಅಧಿಕಾರಿ ಮಾರಪ್ಪ ಸಿಬ್ಬಂದಿಯೊಂದಿಗೆ ಶಬ್ಬೀರನ ಖಟಾರಾ ವಾಹನದಲ್ಲಿಯೆ ಆ ದಿನ ಮದ್ಯ ರಾತ್ರಿ ಮೊದಲಿಯಾರನ ಗಡಂಗಿಗೆ ಬಂದ. ಭಾಸ್ಕರ್ರನ್ ನಾಯರ ಬಿದ್ರಕಾನಿನ ತನ್ನ ಬಿಡಾರಕ್ಕೆ ತೆರಳಿದ ವಿಷಯ ತಿಳಿದ ಮಾರಪ್ಪ ಮತ್ತು ಸಿಬ್ಬಂದಿ ಬಿದ್ರಕಾನಿನ ಹೊಳೆ ದಾಟಿ ಅವನ ಬಿಡಾರಕ್ಕೆ ತೆರಳಿದರು. ಅವರಿಗೆ ದಾರಿ ತೋರಿಸಲು ಮೋಯ್ದು ಮತ್ತು ಉನ್ನಿ ಕೃಷ್ಣನ್ ರವರು ತಮ್ಮ ಸಹಾಯಕರಾದ ಜೇಕಬ್ ಮತ್ತು ತನ್ವೀರ್ ರವರನ್ನು ಕಳುಹಿಸಿದರು



                                                                               *


     ಇತ್ತ ವಿಕ್ಷಿಪ್ತ ಗೊಂಡಿದ್ದ ಭಾಸ್ಕರನ್ ನಾಯರ ತನ್ನ ಬಿಡಾರದೆಡೆಗೆ ಸಾಗಿದ್ದ. ಸೀಗೆ ಹುಣ್ಣಿಮೆಯ ಬೆಳದಿಂಗಳ ರಾತ್ರಿ, ಹಸಿರು ಮೈದುಂಬಿ ನಿಂತ ದಟ್ಟ ಕಾನನ, ಕಾಡು ಸುಮಗಳ ಸುಗಂಧವನ್ನು ಹೊತ್ತು ತರುತ್ತಿದ್ದ ಮಲಯ ಮಾರುತ, ನೀಲ ಆಗಸದಲ್ಲಿ ತಾರೆಗಳ ಮೇಳ, ಪೂರ್ವ ದಿಗಂತದಲ್ಲಿ ಮೇಲು ಮೇಲಕ್ಕೆ ಸಾಗುತ್ತಿರುವ ಪೂರ್ಣ ಚಂದಿರ, ಚಂದಿರ ನೊಂದಿಗೆ ಕಣ್ಣು ಮುಚ್ಚಾಲೆ ಯಾಡುತ್ತ ಸಾಗುತ್ತಿರುವ ಬಿಳಿಯ ತೆಳು ಮೋಡಗಳು, ಅಬೇಧ್ಯವಾಗಿ ದಕ್ಷಿಣೋತ್ತರವಾಗಿ ಹರಡಿ ಕೊಂಡಿರುವ ದಟ್ಟ ಹಸುರಿ ನಿಂದ ಆವೃತವಾಗಿರು ಸಹ್ಯಾದ್ರಿ ಪರ್ವತ ಶ್ರೇಣಿ, ಎಲ್ಲವೂ ಸೇರಿ ಸ್ವರ್ಗವೆಂಬುದೇನಾದರೂ ಇದ್ದರೆ ಅದು ಕನಕಗಿರಿಯ ಕಾನನದ ಬಯಲುಗಳಲ್ಲಿ ಗಿರಿ ಕಂದರಗಳಲ್ಲಿ ಝರಿ ತೊರೆಗಳಲ್ಲಿ ಇದೆ ಎನ್ನುವ ವಾಡಿಕೆಯ ಮಾತು ಶಬ್ದಶಃ ನಿಜವಾಗಿತ್ತು.


     ಭಾಸ್ಕರನ್ ನಾಯರ ಪ್ರಕೃತಿ ಸೌಂದರ್ಯವನ್ನು ಸವಿಯಲಾರದಷ್ಟು ಅರಸಿಕನೇನೂ ಆಗಿರಲಿಲ್ಲ. ತನ್ನ ಗತ ಜಿವನದ ಆಳಕ್ಕೆ ಇಳಿದ ನಾಯರ ತನ್ನ ಯೌವನದ ರಸ ನಿಮಿಷಗಳ ಆಸ್ವಾದನೆಗೆ ತೊಡಗಿದ. ಸರಿ ಸುಮಾರು ಐದು ದಶಕಗಳ ಹಿಂದಿನ ಮಾತು ; ಪ್ಲೇಗ್ ಕಾಯಿಲೆಯಿಂದ ತಂದೆ ತಾಯಿ ತಮ್ಮಂದಿರು ತೀರಿ ಕೊಂಡ ನಂತರ ಭಾಸ್ಕರನ್ ನಾಯರ ತನ್ನ ಚಿಕ್ಕಪ್ಪ ಮಾಧವನ್ ನಾಯರನ ಆಶ್ರಯದಲ್ಲಿ ಬೆಳೆದ. ಚಿಕ್ಕಮ್ಮಳ ತಿರಸ್ಕಾರ ಭಾವನೆ ಚಿಕ್ಕಪ್ಪನ ಅವಗಣನೆ , ತಂದೆ ತಾಯಿ ತಮ್ಮಂದಿರನ್ನು ಕಳೆದುಕೊಂಡ ಅನಾಥ ಭಾವ ಅವನನ್ನು ಹೆಚ್ಚು ದಿನ ಅಲ್ಲಿ ಇರಗೊಡಲಿಲ್ಲ. ಅದು ಕಳೆದ ಶತಮಾನದ ಎರಡನೆ ದಶಕದ ಪ್ರಾರಂಭದ ದಿನಗಳು. ಆತ ಯೌವನಕ್ಕೆ ಕಾಲಿಟ್ಟ ಹೊಸತು, ಎಲ್ಲ ಸುಪ್ತ ಕಾಮನೆಗಳನ್ನು ಹೊಂದಿದ್ದ ಸ್ಪುರದ್ರೂಪಿ ಭಾಸ್ಕರನ್ ಒಂದು ಸಲ ಕಣ್ಣಾನೂರಿಗೆ ಹೋಗಿದ್ದವನಿಗೆ ಅಮ್ಮು ಕುಟ್ಟಿ ಕಣ್ಣಿಗೆ ಬಿದ್ದಳು. ಆಕೆಯ ಸೌಂದರ್ಯ ಮತ್ತು ಸುಮಧುರ ವ್ಯಕ್ತಿತ್ವಕ್ಕೆ ಮರುಳಾದ. ಸುಮ್ಮನೆ ಆದ ಪರಿಚಯ ಪ್ರೇಮಕ್ಕೆ ತಿರುಗುವಲ್ಲಿ ಹೆಚ್ಚು ಕಾಲ ಹಿಡಿಯಲಿಲ್ಲ. ಈ ವಿಷಯ ಅರಿತ ಅಮ್ಮು ಕುಟ್ಟಿಯ ಅಣ್ಣಂದಿರು ಮಧವನ್ ನಾಯರನ ಮನೆಗೆ ಬಂದು ಆತನಿಗೆ ಧಮಕಿ ಹಾಕಿ ಭಾಸ್ಕರನ್ ನಾಯರನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕೆಂದೂ ಇಲ್ಲದಿದ್ದಲ್ಲಿ  ವಿಪರೀತ ಪರಿಣಾಮ ಎದುರಿಸ ಬೇಕಾಗುವದೆಂದೂ ಎಚ್ಚರಿಕೆಯನ್ನು ಕೊಟ್ಟು  ಹೋದರು. ಚಿಕ್ಕಮ್ಮಳ ಕಿರುಕುಳ ಹೆಚ್ಚಾಗಲು ಇಷ್ಟು ಸಂಗತಿ ಸಾಕಾಯಿತು. ಒಂದು ದಿನ ತಲೆ ರೋಸಿಹೋಗಿ ಮನೆಯಿಂದ ಹೊರಟ ಭಾಸ್ಕರನ್ ನಾಯರ ಸಹ್ಯಾದ್ರಿ ಪರ್ವತ ಶ್ರೇಣಿಯ ಕನಕಗಿರಿಗೆ ಬಂದು ಬಿದ್ರಕಾನ ಹೊಳೆ ದಾಟಿ ದಟ್ಟ ಕಾನನದ ಒಳ ಹೊಕ್ಕ. ಕಣಿವೆಬೈಲಿನಲ್ಲಿ ಹನ್ನೆರಡೂ ತಿಂಗಳು ಸಮೃದ್ಧವಾಗಿ ಹರಿಯುವ ತೊರೆಯ ಜಾಗ ಅದರ ಪಕ್ಕ ವಿಸ್ತಾರವಾಗಿ ಹರಡಿದ ಫಲ ವತ್ತಾದ ಭೂಮಿ ಅತನ ಗಮನಕ್ಕೆ ಬಂತು. ಅಲ್ಲಿ ಸಮೃದ್ಧವಾಗಿ ಬೆಳೆಯುತ್ತಿದ್ದ ಹುಲ್ಲೆಣ್ಣೆಯ ಹುಲ್ಲಿನಿಂದ ಹುಲ್ಲೆಣ್ಣೆ ತೆಗೆಯಲು ಪ್ರಾರಂಭಿಸಿದ. ಉಳಿದ ಜಾಗದಲ್ಲಿ ಭತ್ತ ಕಬ್ಬುಗಳನ್ನು ಬೆಳೆದ. ಕನಕಗಿರಿಯ ಸುಂದರ ಪರಿಸರ ವಿರಳ ಜನವಸತಿ ಮೇಲಾಗಿ ಏರುತ್ತಿರುವ ಆತನ ಯೌವನ, ಆತನಿಗೆ ಸಂಗಾತಿಯ ಅವಶ್ಯಕತೆ ಯನ್ನು ತಂದೊಡ್ಡಿತು. ಹೊಸಭಾಷೆ, ಹೊಸಪರಿಸರ ಮತ್ತು ಹೊಸಜನ ; ತನ್ನವರೆನ್ನುವವರು ಯಾರೂ ಇಲ್ಲದ ಭಾಸ್ಕರನ್ ನಾಯರನ ಮನಸು ಅಮ್ಮು ಕುಟ್ಟಿಯ ಕಡೆಗೆ ಹರಿಯ ತೊಡಗಿತು. ಎಲಿಝಬೆತ್ ರಾಣಿಯ ಭಾರತ ಭೇಟಿಯ ಸಂಧರ್ಭವದು, ಕಾರಣಾಂತರದಿಂದ ಕೇರಳಕ್ಕೆ ತೆರಳಿದ ಭಾಸ್ಕರನ್ ಅಮ್ಮುಕುಟ್ಟಿ ಯೊಂದಿಗೆ ಮರಳಿ ಬಂದು ಬಿದ್ರಕಾನ ಹೊಳೆಯನ್ನು ದಾಟಿ ತನ್ನ ಬಿಡಾರವಾದ ಕಣಿವೆಬೈಲಿಗೆ ಬಂದು ಶಾಶ್ವತ ವಾಗಿ ನೆಲೆನಿಂತ.


     ಭಾಸ್ಕರನ್ ನಾಯರನ ಮನ ತುಂಬಿದ್ದ ಅಮ್ಮುಕುಟ್ಟಿ ಅವನ ಮನೆಯನ್ನೂ ತುಂಬಿದಳು. ಮನೆ ಹುಲ್ಲೆಣ್ಣೆ ಬೆಳೆ ಭತ್ತ ಕಬ್ಬು ಬೆಳೆಯುವ ಪೂರ್ಣ ಜವಾಬ್ದಾರಿಯನ್ನು ತನ್ನ ವಶಕ್ಕೆ ತೆಗೆದುಕೊಂಡ ಆಕೆ ಸುಮಾರು ಮೂರೂವರೆ  ದಶಕಗಳ ಕಾಲ ಕಣಿವೆ ಬೈಲಿನ ರಾಣಿಯಂತೆಯೆ ಮೆರೆದಳೆಂದು ಹೇಳಬೇಕು. ಮನೆ ಮತ್ತು ಜಮೀನಿನ ಜವಾಬ್ದಾರಿ ಯಿಂದ ಬಿಡುಗಡೆ ಪಡೆದ ಭಾಸ್ಕರನ್, ಒಮ್ಮೆ ದೀಪಾವಳಿ ಹಬ್ಬದ ಸಂಧರ್ಭದಂದು ಕಲೆಕ್ಟರ್ ಸ್ಯಾಮುವೆಲ್ ವಾಲ್ಟೇರ್ ತನ್ನ ಹೆಂಡತಿ ಲಿಂಡಾ ಮತ್ತು ಮಕ್ಕಳಾದ ಡೇನಿಯಲ್ ಹಾಗೂ ಲೀಸಾ ರೊಂದಿಗೆ ಕನಕಗಿರಿ ಫಾರೆಸ್ಟ್ ಗೆಸ್ಟ್ ಹೌಸ್ಗೆ ಬಂದಾಗ ಬೇಟೆಯಾಡುವ ಹವ್ಯಾಸವಿದ್ದ ಆತ ಭಾಸ್ಕರನ್ ನಾಯರನ ಬೇಟೆಯ ಖಯಾಲಿಯನ್ನು ತಿಳಿದ ಆತ ಭಾಸ್ಕರನ್ ನಾಯರನಿಗೆ ಹೇಳಿ ಕಳಿಸಿ ಬರಮಾಡಿ ಕೊಂಡು ಆತ ಕನಕಗಿರಿ ದಂಡಕಾರಣ್ಯದ ಕಣಿವೆಬೈಲಿನಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿರುವ ವಿಷಯ ತಿಳಿದು ಕೊಂಡು ಆತನ ಧೈರ್ಯಕ್ಕೆ ಮೆಚ್ಚಿದ. ತನ್ನ ಮೃಗಯಾ ವಿಹಾರಕ್ಕೆ ಒಬ್ಬ ಒಳ್ಳೆಯ ಮಾರ್ಗದರ್ಶಕ ಮತ್ತು ಜೊತೆಗಾರ ಸಿಕ್ಕಿದಂತಾಯಿತು. ಆ ಬಳಿಕ ಕೆಲ ಸಮಯದಲ್ಲಿ  ಸ್ಯಾಮುವೆಲ್ ಮತ್ತು ಭಾಶ್ಕರನ್ ನಾಯರರು ನಡೆಸಿದ ಟಸ್ಕರ್ ಬೇಟೆ. ಸ್ಯಾಮುವೆಲ್ನ ಜೀವ ಉಳಿಸಿದ ಭಾಸ್ಕರನ್ ಬಿಳಿ ದೊರೆಗೆ ಇನ್ನಷ್ಟು ಹತ್ತಿರದವನಾಗಿ ಕನಕಗಿರಿ ದಂಡಕಾರಣ್ಯದ ಅರಣ್ಯ ಉತ್ಪನ್ನಗಳ ಖರೀದಿ ಮತ್ತು ಮಾರಾಟದ ಗುತ್ತಿಗೆಯನ್ನು ಪಡೆದು ಆ ವ್ಯವಹಾರವನ್ನು ಬಿಳಿಯರ ಆಳ್ವಿಕೆ ಕೊನೆಗೊಳ್ಳುವ ವರೆಗೆ ನಡೆಸಿಕೊಂಡು ಬಂದ. ಮನೆಯ ಜವಾಬ್ದಾರಿ ಇರಲಿಲ್ಲ ಎಲ್ಲವನ್ನೂ ಅಮ್ಮುಕುಟ್ಟಿ ಜವಾಬ್ದಾರಿಯುತವಾಗಿ ನೋಡಿ ಕೊಳ್ಳುತ್ತಿದ್ದಳು. ಅರಣ್ಯ ಉತ್ಪನ್ನಗಳ ಗುತ್ತಿಗೆ ವ್ಯವಹಾರ, ಕೈಯಲ್ಲಿ ಹಣಕಾಸು ಭರ್ಜರಿಯಾಗಿ ಓಡಾಡುತ್ತಿತ್ತು. ತಾನು ಬಿಳಿ ದೊರೆಗೆ ಹತ್ತಿರದವನೆಂಬ ಠೇಂಕಾರ, ಜನ ಸಾಮಾನ್ಯರೊಂದಿಗೆ ಬೆರೆಯದೆ ಒಂದು ದ್ವೀಪವಾಗಿ ಬಾಳಿದ.


          ಆತನ ಕುರಿತು ಹಬ್ಬಿದ ವರ್ಣರಂಜಿತ ಕಥೆಗಳಿಗೆ ಗ್ರಾಸವಾದ, ಆತನು ಅನುಭೋಗಿಸಿದ ಹೆಣ್ಣುಗಳಿಗೆ ಲೆಖ್ಖವಿಲ್ಲ, ಆತ ಕಣ್ಣಿಟ್ಟರೆ ಸಾಕು ಅವಳು ಆತನಿಗೆ ದಕ್ಕಲೆ ಬೇಕುಇಲ್ಲವಾದರೆ ಆತ ಮೃಗವಾಗಿ ಬಿಡುತ್ತ್ತಿದ್ದ, ಆತನಿಗೆ ಮೈ ಮನ ಒಪ್ಪಿಸಿದವರಿಗೆ ಧಾರಾಳಿಯಾದ, ಒಪ್ಪದವರ್ನ್ನು ಬಲಾತ್ಕರಿಸಿದ. ತನ್ನ ಎದುರು ನಿಂತವರನ್ನು ಮುಗಿಸಿ ಹಾಕಿದ, ಬಿದ್ರಕಾನಿನ ಹಳ್ಳದಲ್ಲಿ ತೇಲಿದ ವರೆಷ್ಟೋ ! ಕನಕಗಿರಿ ಅರಣ್ಯದಲ್ಲಿ ಮಣ್ಣಾದವರೆಷ್ಟೋ !! ಈ ವದಂತಿಗಳನ್ನು ತಿಮ್ಮಪ್ಪಯ್ಯ ಒಂದು ಕಾಲದಲ್ಲಿ ನಂಬಿದವರೆ. ಈ ಅಂತೆಕಂತೆಗಳನ್ನು ಹಬ್ಬಿಸಿದವರು ಆತನನ್ನು ಕಂಡರಾಗದ, ವಿನಾಕಾರಣ ಆತನ ಬಗೆಗೆ ಸಂಶಯ ಬೆಳೆಸಿ ಕೊಂಡವರು, ಆತನ ಏಳಿಗೆಯನ್ನು ಸಹಿಸದವರು ಮುಂತಾದವರ ಫಿತೂರಿ ಎಂದು. ಆ ಭಾಗದ ಎಲ್ಲ ನಿಗೂಢ ಘಟನೆಗಳನ್ನು ಭಾಸ್ಕರನ್ ನಾಯರನ ತಲೆಗೆ ಕಟ್ಟಿದರು, ಅವನ ವ್ಯಕ್ತಿತ್ವಕ್ಕೆ ಕಳಂಕ ತಂದರು. ಆತನಿಗೆ ವಯಸ್ಸಾಗಿ ಮಧ್ಯ ವ್ಯಸನಿಯಾಗಿ ತನ್ನ ವೈಯಕ್ತಿಕ ಜೀವನ ವನ್ನು ಹಾಳು ಮಾಡಿ ಕೊಂಡರೂ ಯಾರೂ ಆತನ ಬಗೆಗೆ ಕನಿಕರಿಸಲಿಲ್ಲ. ಅವನನ್ನು ಛೇಡಿಸಿ ಅವಮಾನಿಸಿದರು. ಕೆಲವರು ತಿಳಿದು ಮಾಡಿರ ಬಹುದು, ಕೆಲವರು ತಿಳಿಯದೆ ಮಾಡಿರ ಬಹುದು. ಚಿಂಕ್ರನ ಘಟನೆ ಒಂದು ಉದಾಹರಣೆಯಷ್ಟೆ.



                                                                                                             ( ಮುಂದುವರಿದಿದೆ)


ಮೊದಲ ಹಾಗು ಎರಡನೇ ಭಾಗಕ್ಕೆ ಲಿಂಕ್


!)sampada.net/blog/%E0%B2%85%E0%B2%B5%E0%B2%B8%E0%B2%BE%E0%B2%A8-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-1/19/06/2012/37117


2)sampada.net/blog/%E0%B2%85%E0%B2%B5%E0%B2%B8%E0%B2%BE%E0%B2%A8-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-2/21/06/2012/37137

Rating
No votes yet

Comments