ಸಾರಗ್ರಾಹಿಯ ರಸೋದ್ಗಾರಗಳು -15: ರಾಮರಾಜ್ಯ - ರಾವಣರಾಜ್ಯ

ಸಾರಗ್ರಾಹಿಯ ರಸೋದ್ಗಾರಗಳು -15: ರಾಮರಾಜ್ಯ - ರಾವಣರಾಜ್ಯ

     ಶತಾಯುಷಿ ಪಂ. ಸುಧಾಕರ  ಚತುರ್ವೇದಿಯವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು.   ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ
-ಕ.ವೆಂ.ನಾಗರಾಜ್.

******************************

ರಾಮರಾಜ್ಯ - ರಾವಣರಾಜ್ಯ
      "ನೇತ್ರ, ಕರ್ಣ, ನಾಲಿಗೆ, ನಾಸಿಕ, ಚರ್ಮ - ಈ ಪಂಚೇಂದ್ರಿಯಗಳು ಇದಾವಲ್ಲಾ, ಇವುಗಳಿಂದ ಶತ್ರುಗಳಲ್ಲದವರೂ ಶತ್ರುಗಳಾಗುತ್ತಾರೆ. ಆದ್ದರಿಂದ ಹೇ, ಜೀವಾತ್ಮ, ಎಲ್ಲರನ್ನೂ ನಿನ್ನ ಮಿತ್ರರೆಂದೇ ತಿಳಿ" - ಇದು ಒಂದು ವೇದ ಮಂತ್ರದ ಅರ್ಥ. ರಾಮಾಯಣ ಓದಿ, ಮಹಾಭಾರತ ಓದಿ, ನಿಮಗೆ ತಿಳಿಯುತ್ತೆ. ಎಲ್ಲಿ ಇಂದ್ರಿಯ ನಿಗ್ರಹ ಇಲ್ಲವೋ, ಆತ್ಮಬಲ ಇಲ್ಲವೋ, ಎಲ್ಲಿ ಇಂದ್ರಿಯಗಳ ರಾಜ್ಯ ಇರುತ್ತದೋ ಅಲ್ಲಿ ಯಾವತ್ತೂ ಯುದ್ಧ, ಸಂಕಟ, ನರಕ ಇರುತ್ತದೆ. ಎಲ್ಲಿ ಆತ್ಮ ಬಲ ಜಾಸ್ತಿ ಇರುತ್ತೋ ಎಲ್ಲಿ ಇಂದ್ರಿಯಗಳು ಆತ್ಮನ ವಶದಲ್ಲಿದ್ದು ಕೆಲಸ ಮಾಡುತ್ತವೋ ಅಲ್ಲಿ ನಮಗೆ ಸ್ವರ್ಗ ಸಿಗುತ್ತದೆ, ರಾಮರಾಜ್ಯ ಅನ್ನಿಸುತ್ತದೆ. ಈ ಕಣ್ಣಿನಿಂದ ಒಬ್ಬ ಕಟುಕ ಕುರಿಯನ್ನು ಕತ್ತರಿಸುವುದನ್ನೂ ನೋಡಬಹುದು, ಗಗನಚುಂಬಿ ಹಿಮಾಲಯವನ್ನೂ ನೋಡಬಹುದು. ಪೆಸಿಫಿಕ್ ಮಹಾಸಾಗರವನ್ನೂ ನೋಡಬಹುದು. ಈ ಕಿವಿಯಿಂದ ಕೆಟ್ಟ ಕೆಟ್ಟ ಹಾಡುಗಳನ್ನೂ ಕೇಳಬಹುದು, ಒಳ್ಳೆಯ ಭಜನೆಗಳನ್ನೂ ಕೇಳಬಹುದು. ಅದರಿಂದ ಒಳ್ಳೆಯದು, ಕೆಟ್ಟದು ಅಂತ ಹೇಳಬಹುದು. ಈಗ ನಾನು ಶುರು ಮಾಡಿರುವುದು ಇದೇ ವಿಷಯ. ಆತ್ಮದ ರಾಜ್ಯ ಇರಬೇಕೋ, ಇಂದ್ರಿಯ ರಾಜ್ಯ ಇರಬೇಕೋ? ಇಂದ್ರಿಯ ರಾಜ್ಯ ಇರಬೇಕು ಅನ್ನುವುದಾದರೆ ರಾವಣ ರಾಜ್ಯ ಆಗುತ್ತೆ, ರಾಮರಾಜ್ಯ ಆಗುವುದಿಲ್ಲ. ರಾಮರಾಜ್ಯ ಆಗಬೇಕೆಂದರೆ ಆತ್ಮ ಬಲ ಗಟ್ಟಿಯಾಗಬೇಕು.  ಈ ಸಂಯಮ ಬೇಕು ಅನ್ನುವುದು ರಾಮಾಯಣ, ಮಹಾಭಾರತ ಎಲ್ಲದರಲ್ಲೂ ಇದೆ. ರಾಮನ ಸಂಹಾರ ಆಗಿಹೋಗಿದೆ. ಯುದ್ಧಕಾಂಡದಲ್ಲಿ ಆ ಸನ್ನಿವೇಶದ ವರ್ಣನೆ ಬರುತ್ತೆ. 'ಏಕಂ ಶಿರಃ ದ್ವೌಬಾಹುಃ' - ಇದು ಅಲ್ಲಿ ಬರುವ ರಾವಣನ ವರ್ಣನೆ, ಸತ್ಯ ಅಲ್ಲಿ ಬಂತು, ಹತ್ತು ತಲೆಗಳು, ಇಪ್ಪತ್ತು ಕೈಗಳು ಅಂತ ಇಲ್ಲ. ಪತಿ ರಾವಣನ ಶವವನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಮಹಾರಾಣಿ ಮಂಡೋದರಿ ಶೋಕಿಸುತ್ತಾ ಹೇಳುತ್ತಾಳೆ: "ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ನೀನು ಮೂಲೋಕಗಳನ್ನೂ ಗೆದ್ದೆ. ಆದರೆ ಇಂದ್ರಿಯಗಳು ತಮ್ಮನ್ನು ತುಳಿದು ನೀನು ಮೇಲಕ್ಕೇರಿದುದನ್ನು ಮರೆತಿರಲಿಲ್ಲ. ತಮ್ಮ ಬಲದಿಂದಲೇ ನೀನು ಮೇಲಕ್ಕೆ ಬಂದೆಯೆಂದು ನಿನ್ನನ್ನು ನಂಬಿಸಿದವು. ಇಂದ್ರಿಯಗಳ ಮಾತು ಕೇಳಿ ನೀನು ನಾಶವಾದೆ" ಎಂದು ಹೇಳುತ್ತಾಳೆ. ಇಂದ್ರಿಯಗಳಿಗೆ ದಾಸರಾದರೆ ಕೆಳಗೆ ಬೀಳುತ್ತೇವೆ, ಒಡೆಯರಾದರೆ ಮೇಲೇರುತ್ತೇವೆ. ಆತ್ಮ ಬೇಕೋ, ಇಂದ್ರಿಯ ಬೇಕೋ? ಹಾಗಾದರೆ ಇಂದ್ರಿಯಗಳು ಬೇಡವಾ ಅಂತ ಕೇಳಬೇಡಿ. ಕಣ್ಣು ಬೇಡವಾ, ಕುರುಡರಾಗಬೇಕಾ? ಕಿವಿ ಬೇಡವಾ, ಕಿವುಡರಾಗಬೇಕಾ? ಬೇಕು, ಇಂದ್ರಿಯಗಳು ಬೇಕು, ಅದರೆ ಅವು ನಿಮ್ಮ ಅಧೀನದಲ್ಲಿರಲಿ. ಅವುಗಳ ಅಧೀನದಲ್ಲಿ ನೀವಿರಬೇಡಿ..ಈಮಾತನ್ನು ಹೇಳೋದನ್ನು ಹೇಳ್ತಾ ಇರುತ್ತೀವಿ, ಕೇಳೋದನ್ನು ಕೇಳ್ತಾ ಇರುತ್ತೀವಿ. ಯಥಾ ಪ್ರಕಾರ ನಡೆದುಕೊಳ್ಳುತ್ತೀವಿ.

     ಕಣ್ಣಿದೆ ನೋಡಿ, ಆದರೆ ಕೆಟ್ಟದ್ದೇ ನೋಡಬೇಡಿ, ಒಳ್ಳೆಯದನ್ನು ನೋಡಲು ಪ್ರಯತ್ನ ಪಡಿ. ಕಿವಿಯಿದೆ. ಯಾವಾಗಲೂ ಕೆಟ್ಟ ಕೆಟ್ಟ ಹಾಡುಗಳನ್ನೇ ಕೇಳಲು ಕೂತ್ಕೋತೀವಿ. ಒಳ್ಳೆಯ ಭಗವಂತನ ಭಕ್ತಿ, ಭಜನೆ, ಸನ್ಮಾರ್ಗಕ್ಕೆ ಸಂಬಂಧಿಸಿದ್ದನ್ನು ಕೇಳಲು ಕಿವಿ ಇರಲಿ. ಹೀಗೆ ನಮ್ಮ ಪಂಚೇಂದ್ರಿಯಗಳು ಇವೆಯಲ್ಲಾ, ಯಾವ ರೀತಿ ಉಪಯೋಗಿಸಿಕೊಳ್ತೀವೋ ಆ ರೀತಿ ಫಲ ಸಿಗುತ್ತೆ. ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ಶತ್ರು ಅಲ್ಲದವರನ್ನೂ ಶತ್ರುಗಳನ್ನಾಗಿ ಮಾಡುತ್ತದೆ. 'ನೀನು ಹಿಂದೂ ಅಲ್ಲವಾ? ಮುಸಲ್ಮಾನನಲ್ಲ, ಆದ್ದರಿಂದ ಕಾಫಿರ್, ನಿನಗೆ ಬದುಕೋದಿಕ್ಕೆ ಅಧಿಕಾರವಿಲ್ಲ', 'ನೀನು ಮುಸ್ಲಿಮ್, ಧರ್ಮಭ್ರಷ್ಠ, ನೀನು ಇರಬಾರದು', ಇತ್ಯಾದಿ ಮಾತುಗಳು. . ಹಿಂದೂ-ಮುಸ್ಲಿಮ್ ಯುದ್ಧ. ಅತ್ತಲಾಗೆ ಆ ದೇವರಿಗೂ ಬುದ್ಧಿ ಇಲ್ಲ, ಇತ್ತಲಾಗೆ ಈ ದೇವರಿಗೂ ಬುದ್ಧಿ ಇಲ್ಲ. ಇವರಿಬ್ಬರಿಗೂ ಬುದ್ಧಿ ಬರೋದೇ ಇಲ್ಲ. ಕಚ್ಚಾಡಿಕೊಂಡು ಸಾಯೋದು. ನಿಜವಾದ ಪರಮಾತ್ಮ ಯಾವತ್ತೂ ಹಾಗೆ ಮಾಡೋದಿಲ್ಲ. ಒಂದು ಮಾತು, ಭಗವಂತ ಹೊರಗಿನಿಂದ ಮಾತನಾಡುವುದಿಲ್ಲ. ಹೃದಯದಿಂದ, ಒಳಗಿನಿಂದ, ಅಂತರಂಗದಿಂದ ಮಾತನಾಡುತ್ತಾನೆ. ನೀವು ಜಗತ್ತನ್ನು ಮರೆಯಿರಿ, 2 ನಿಮಿಷ, 3 ನಿಮಿಷ, 4 ನಿಮಿಷ ಭಗವಂತನನ್ನು ಮನಸ್ಸಿನಲ್ಲಿಟ್ಟಿರಿ. ಆಗ ನಿಮಗೆ ಆನಂದವೋ ಆನಂದ ಸಿಕ್ಕುತ್ತೆ. ವ್ಯಾಕರಣ ಓದಿದೆ, ವೇದ ಓದಿದೆ, ನನಗೆ ವೇದಗಳ ಅರ್ಥ ಗೊತ್ತಿದೆ ಅಂದರೆ ಸಾಕಾಗುವುದಿಲ್ಲ. ಯಾವನ ಹೃದಯ ಶುದ್ಧವಾಗಿರುತ್ತೋ ಅವನಿಗೆ ಅರ್ಥವಾಗುತ್ತೆ. ಯಾರ ಮನಸ್ಸಿನಲ್ಲಿ ಪರಿಶುದ್ದಿ ಇಲ್ಲವೋ ಅವನಿಗೆ ಯಾವತ್ತೂ ಅರ್ಥವಾಗುವುದಿಲ್ಲ.   'ಹೇ ಜೀವಾತ್ಮ, ಯಾರನ್ನೂ ಶತ್ರು ಅಂತ ತಿಳಕೋಬೇಡ. ಎಲ್ಲಾ ನಿನ್ನ ಮಿತ್ರರೇ'- ಈ ಜ್ಞಾನ ಬಂದ ಮೇಲೆ ಸುಮ್ಮನೆ ಕುಳಿತಿರಬೇಡ. ಪ್ರಭುವಿನಿಂದ ಕೂಡಿದ ಜಗತ್ತಿನ ಪ್ರಾಪ್ತಿಗಾಗಿ ಹೋರಾಡು. ಹೋರಾಟ ಅಂದ್ರೆ ಹಿಂದೂ-ಮುಸ್ಲಿಮ್ ಕುಸ್ತಿ ಅಲ್ಲ. ಜ್ಞಾನ ಪ್ರಸಾರ ಮಾಡುವುದು. ಪರಮಾತ್ಮ ಅಂದರೆ 14ನೇ ಆಕಾಶದಲ್ಲೋ, 12ನೇ ಆಕಾಶದಲ್ಲೋ ಇರ್ತಾನೆ ಅಂತ ಹೇಳ್ತಾರಲ್ಲಾ, ಆ ಪರಮಾತ್ಮ ಅಲ್ಲ. ಎಲ್ಲಿಂದ ತೆಗೆದುಕೊಂಡು ಬಂದರೋ ಆ ಆಕಾಶಗಳನ್ನ! 7ನೆಯ ಆಕಾಶ ಅಂತ ಇದೆಯಂತೆ, ಅಲ್ಲಿಗೆ ಹೋದ ಜೀವಾತ್ಮಗಳೆಲ್ಲಾ ಒಂಟೆಗಳಾಗ್ತಾರಂತೆ. ಒಂಟೆ ಆಗುವುದಕ್ಕೆ ಅಲ್ಲಿಗೆ ಹೋಗಬೇಕಾ ನಾವು? ಮನುಷ್ಯರಾಗಿ ಇರೋಕ್ಕೆ ಆಗಲ್ವಾ? ಇವೆಲ್ಲಾ ಮನುಷ್ಯನ ಕೆಟ್ಟ ಕಲ್ಪನೆ. ದೇವರ ಹೆಸರು ಹೇಳೋದು, ಮಾಡೋದೆಲ್ಲಾ ದೆವ್ವದ ಕೆಲಸ. ದೇವರ ಕೆಲಸ ಏನೂ ಮಾಡೋದಿಲ್ಲ.

ಗಾಂಧೀಜಿಯೊಡನೆ ಸರಸ-ವಿರಸ
     ಗಾಂಧೀಜಿಗೂ ನನಗೂ ಈ ವಿಚಾರದಲ್ಲಿ ಕುಸ್ತಿ ಆಗುತ್ತಿತ್ತು. ಸೇವಾಗ್ರಾಮದಲ್ಲಿ 'ರಘುಪತಿ ರಾಘವ ರಾಜಾರಾಮ್. . ' ಕಣ್ಣು ಮುಚ್ಚಿ ಚಪ್ಪಾಳೆ ತಟ್ಟಿ ಭಜನೆ ಮಾಡೋರು. ಜಾಕಿರ್ ಹುಸೇನ್, ಮೌಲಾನಾ ಆಜಾದ್ ಸೇರಿದಂತೆ ಮುಸಲ್ಮಾನರೂ ಕೂಡ ಹೇಳೋರು, ಚಪ್ಪಾಳೆ ಹಾಕೋರು. ನಾನು ಸುಮ್ಮನೇ ಕುಳಿತಿರುತ್ತಿದ್ದೆ. ಗಾಂಧೀಜಿ ಕೇಳ್ತಾ ಇದ್ದರು: "ನೀನು ಯಾಕೆ ಹೇಳಲ್ಲ? ನೀನು ಮುಸಲ್ಮಾನರಿಗಿಂತ ಕಡೆ." ನಾನು ಉತ್ತರಿಸುತ್ತಿದ್ದೆ, "ಪಾಪ, ಅವರನ್ನೇಕೆ ಅನ್ನುತ್ತೀರಿ? ಅವರು ಯಾಕೆ ಹೇಳ್ತಾರೆ ಅಂದರೆ ನಿಮ್ಮನ್ನು ಮೆಚ್ಚಿಸೋಕೆ ಹೇಳ್ತಾರೆ. ನಾನು ನಿಮ್ಮನ್ನು ಮೆಚ್ಚಿಸಬೇಕಾಗಿಲ್ಲ. ನಾನು ನನ್ನ ಆತ್ಮನನ್ನು, ಪರಮಾತ್ಮನನ್ನು ಮೆಚ್ಚಿಸಬೇಕಷ್ಟೆ." ಗಾಂಧೀಜಿ, "ನೀನು ಎಷ್ಟು ಕಾಲದಿಂದ ನನ್ನ ಜೊತೆ ಇದ್ದೀಯಾ, ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲವಾ? ನಿನ್ನ ಓಂ ನನ್ನ ರಾಮ. ನೀನು ಯಾರನ್ನು ಓಂ ಅನ್ನುತ್ತೀಯೋ ಅವನನ್ನು ನಾನು ರಾಮ ಅನ್ನುತ್ತೇನೆ" ಅನ್ನೋರು. ನಾನು, "ರಾಮ ಅಂತ ಕರೆಯಿರಿ, ಏನಂತಲಾದರೂ ಕರೆಯಿರಿ, ನಾನು ಒಪ್ಪುತ್ತೇನೆ. ಆದರೆ ಭಗವಂತನನ್ನು ರಘುಪತಿ, ಸೀತೆ ಇವೆಲ್ಲವನ್ನೂ ಸೇರಿಸಿಕೊಂಡು ಹೇಳೋದು ನನಗೆ ಸರಿ ಕಾಣುವುದಿಲ್ಲ. ರಘು ಅಂದರೆ ವೇಗವಾಗಿ ಓಡುವವನು ಎಂದು ಅರ್ಥ, ರಘುಪತಿ ಅಂದರೆ ವೇಗವಾಗಿ ಓಡುವವರ ಒಡೆಯ. ರಾಘವ ಅಂದರೆ ರಘುಕುಲದಲ್ಲಿ ಹುಟ್ಟಿದವನು ಅಂತ. ಅವನನ್ನು ಪರಮಾತ್ಮ ಅಂತ ಹೇಗೆ ಭಾವಿಸಲಿ? ನನ್ನ ದೃಷ್ಟಿಯ ಪರಮಾತ್ಮನೇ ಬೇರೆ. ಆದ್ದರಿಂದ ನನಗೆ ಓಂ ಮಾತ್ರ ಸಾಕು" ಅಂತ ಹೇಳ್ತಾ ಇದ್ದೆ. ಬೆಳಗಿನ ಜಾವದಲ್ಲಿ ಚಳಿಯಲ್ಲಿ ಕುಳಿತು ಭಜನೆ ಮಾಡಿದ್ದೇ ಮಾಡಿದ್ದು, ಸುಮಾರು ಮುಕ್ಕಾಲು ಗಂಟೆ ಹೊತ್ತು. ಸೇವಾಗ್ರಾಮದಲ್ಲಿ ಇದ್ದದ್ದು ಎಲ್ಲಾ ಹರಕಲು ಮುರುಕಲು ಗುಡಿಸಲುಗಳೇ. ಆ ಮುದುಕ ಕಣ್ಣು ಮುಚ್ಚಿಕೊಂಡಿದ್ದನ್ನು ಗಮನಿಸಿ ಜಾಗ ಖಾಲಿ ಮಾಡುತ್ತಿದ್ದೆ. ನಾನು ಒಂದು ಸ್ಟೌ ಇಟ್ಟುಕೊಂಡಿದ್ದೆ. ಹೋಗಿ ಕಾಫಿ ಮಾಡಿಕೊಂಡು ಕುಡಿದು ಬಂದು ಮತ್ತೆ ಕುಳಿತುಕೊಳ್ಳುತ್ತಿದ್ದೆ. ಆ ಘಾಟಿ ಮುದುಕ ಕೇಳದೆ ಇರುತ್ತಿರಲಿಲ್ಲ, "ಎಲ್ಲಿ ಹೋಗಿದ್ದೆ?" ನಾನು, "ಅಗ್ನಿಹೋತ್ರ ಮಾಡೋಕ್ಕೆ ಹೋಗಿದ್ದೆ" ಅನ್ನುತ್ತಿದ್ದೆ. ಸ್ಟೌನಲ್ಲಿ ಅಗ್ನಿ ಇರುತ್ತಿತ್ತಲ್ಲಾ? ಅವರೂ ನಗುತ್ತಾ, "ನಿನ್ನ ಸಹವಾಸ ಸಾಕಪ್ಪಾ" ಅನ್ನುತ್ತಿದ್ದರು. ನನಗೂ, ಗಾಂಧೀಜಿಗೂ ಯಾವತ್ತೂ ಒಪ್ಪಂದ ಆಗಲೇ ಇಲ್ಲ. ಆದರೆ ನಮ್ಮ ಸ್ನೇಹಕ್ಕೆ ಅದು ಧಕ್ಕೆ ತರಲಿಲ್ಲ. ಕೊನೆಗೂ ಹೇ ರಾಮ್ ಅಂತಲೇ ಪ್ರಾಣ ಬಿಟ್ಟ. ಈಗ ಅವನಿಲ್ಲ. ಅವನ ಆತ್ಮಕ್ಕೆ ಯಾಕೆ ಕಷ್ಟ ಕೊಡಬೇಕು? ನಾನು ಸಂಧಿ ಮಾಡಿಕೊಳ್ತೀನಿ. ಅವನ ರಾಮನೇ ನನ್ನ ಓಂ, ಒಪ್ಪಿಕೊಳ್ತೀನಿ, ಇಷ್ಟು ಸಾಕು.

 
[ಗಾಂಧೀಜಿಯ ಚಿತ್ರಕೃಪೆ: ಅಂತರ್ಜಾಲದಿಂದ ಹೆಕ್ಕಿ ಬಳಸಿದೆ]

 

Comments