ದೇವರಿಂದಾಗದ ಕೆಲಸ; ಸಾಧ್ಯವಾದದ್ದು ಹೇಗೆ? - ಚುಟುಕು ನೀತಿ ಕಥೆ

ದೇವರಿಂದಾಗದ ಕೆಲಸ; ಸಾಧ್ಯವಾದದ್ದು ಹೇಗೆ? - ಚುಟುಕು ನೀತಿ ಕಥೆ

ಕವಿ ನಾಗರಾಜ್ ಅವರ ಸಾರಗ್ರಾಹಿಯ ರಸೋದ್ಗಾರಗಳು -೧೫ ಬರಹವನ್ನು (ಕೊಂಡಿ : http://sampada.net/%E0%B2%B8%E0%B2%BE%E0%B2%B0%E0%B2%97%E0%B3%8D%E0%B2%B0%E0%B2%BE%E0%B2%B9%E0%B2%BF%E0%B2%AF-%E0%B2%B0%E0%B2%B8%E0%B3%8B%E0%B2%A6%E0%B3%8D%E0%B2%97%E0%B2%BE%E0%B2%B0%E0%B2%97%E0%B2%B3%E0%B3%81-15-%E0%B2%B0%E0%B2%BE%E0%B2%AE%E0%B2%B0%E0%B2%BE%E0%B2%9C%E0%B3%8D%E0%B2%AF-%E0%B2%B0%E0%B2%BE%E0%B2%B5%E0%B2%A3%E0%B2%B0%E0%B2%BE%E0%B2%9C%E0%B3%8D%E0%B2%AF#comment-168326) ಓದುತ್ತಿದ್ದಂತೆ ಬಹು ಹಿಂದೆ ಬಹುಶಃ ಚಂದಮಾಮ ಅಥವಾ ಬಾಲಮಿತ್ರದಲ್ಲಿ ಓದಿದ ಈ ಕಥೆ ನೆನಪಾಯಿತು. ಓದುಗರಿಗರೊಂದಿಗೆ ಹಂಚಿಕೊಳ್ಳೋಣವೆಂದು ಅದನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

           ಒಬ್ಬ ಹಿಂದೂ ಹಾಗೂ ಒಬ್ಬ ಮುಸಲ್ಮಾನರಿಬ್ಬರೂ ಆಪ್ತ ಮಿತ್ರರಾಗಿದ್ದರು. ಅವರು ಎಂಥಹ ಕಷ್ಟ ಕಾಲದಲ್ಲೇ ಆಗಲಿ ಒಬ್ಬರನ್ನು ಬಿಟ್ಟು ಒಬ್ಬರು ಅಗಲುತ್ತಿರಲಿಲ್ಲ. ಅವರಿಬ್ಬರೂ ಕೂಡಿಕೊಂಡು ಒಮ್ಮೆ ದೂರದ ಊರಿಗೆ ಪ್ರಯಾಣ ಕೈಗೊಂಡರು. ದೇವರು ಇವರ ಸ್ನೇಹವನ್ನು ಪರೀಕ್ಷಿಸಬೇಕೆಂದು ಒಬ್ಬ ವ್ಯಾಪಾರಿಯ ರೂಪದಲ್ಲಿ ಕಾಣಿಸಿಕೊಂಡು ಹಿಂದೂವನ್ನು ಪ್ರತ್ಯೇಕವಾಗಿ ಕರೆದು; ನೋಡು ನೀನು ಆ ಮುಸಲ್ಮಾನ ಸ್ನೇಹಿತನ ಸಹವಾಸ ಬಿಟ್ಟರೆ ನಿನಗೆ ಸಾವಿರ ವರಹಗಳನ್ನು ಕೊಡುತ್ತೇನೆಂದನಂತೆ. ಆಗ, "ನನಗೆ ನಿನ್ನ ಸಾವಿರ ವರಹಗಳೂ ಬೇಡ ನಿನ್ನ ಸಹವಾಸವೂ ಬೇಡ, ನನಗೆ ನನ್ನ ಮಿತ್ರನ ಗೆಳೆತನವೊಂದೇ ಸಾಕು" ಎಂದನಂತೆ. ಸ್ವಲ್ಪ ಸಮಯದ ನಂತರ ಇನ್ನೊಬ್ಬ ವ್ಯಾಪಾರಿಯ ರೂಪದಲ್ಲಿ ದೇವರು ಮುಸಲ್ಮಾನನಿಗೆ ಕಾಣಿಸಿಕೊಂಡು ಅವನಿಗೂ ಅದೇ ರೀತಿ ಪ್ರಲೋಭನೆ ಒಡ್ಡಿದನಂತೆ. ಆಗ ಆ ಮುಸಲ್ಮಾನನೂ ಕೂಡಾ ತನ್ನ ಹಿಂದೂ ಮಿತ್ರನಂತಯೇ ಅವನು ಕೊಟ್ಟ ಸಹಸ್ರ ವರಹಗಳನ್ನು ತಿರಸ್ಕರಿಸಿ ತನಗೆ ಆ ಹಿಂದೂವಿನ ಮಿತ್ರತ್ವವೊಂದೇ ಸಾಕು ಎಂದನಂತೆ. ದೇವರಿಗೆ ಇವರನ್ನು ಮತ್ತಷ್ಟು ಪರೀಕ್ಷಿಸಬೇಕೆನಿಸಿದ್ದರಿಂದ ಅವರಿಬ್ಬರಿಗೂ ಪ್ರತ್ಯೇಕವಾಗಿ ಒಬ್ಬ ಸುಂದರ ಯುವತಿಯ ರೂಪದಲ್ಲಿ ಕಾಣಿಸಿಕೊಂಡು ನೀನು ನಿನ್ನ ಮಿತ್ರನ ಸಹವಾಸ ಬಿಡುವುದಾದರೆ ನಿನ್ನನ್ನು ಮದುವೆಯಾಗುತ್ತೇನೆಂದು ಹೇಳಿದನಂತೆ. ಆಗ ಆ ಮಿತ್ರರಿಬ್ಬರೂ ಮೊದಲಿನಂತೆಯೇ ಆ ಸುಂದರಿಯ ಪ್ರೇಮವನ್ನು ತಮ್ಮ ಗೆಳೆತನವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ತಿರಸ್ಕರಿದರಂತೆ. ಇದೇ ರೀತಿಯಾಗಿ ದೇವರು ಅವರಿಬ್ಬರಿಗೂ ಹಲವಾರು ರೀತಿಯ ಪರೀಕ್ಷೆಗಳನ್ನು ಒಡ್ಡಿದರೂ ಕೂಡಾ ಅವರಿಬ್ಬರೂ ಬೇರೆ ಬೇರೆಯಾಗಿರಲು ಒಪ್ಪಲಿಲ್ಲವಂತೆ. ಆಗ ದೇವರು ಬೇಸತ್ತು ಇವರನ್ನು ನಾನು ಬೇರೆ ಮಾಡಲಾರೆ ಎಂದುಕೊಂಡು ಹೊರಡುವುದರಲ್ಲಿದ್ದನಂತೆ. ಅಷ್ಟರಲ್ಲಿ ಆ ಪ್ರದೇಶದಲ್ಲಿ ಒಂದು ಕಡೆ ಒಂದು ಗುಡಿಯೂ ಮತ್ತೊಂದು ಕಡೆ ಒಂದು ಮಸೀದಿಯೂ ಕಾಣಿಸಿದವಂತೆ. ಆಗ ಆ ಮಿತ್ರರಿಬ್ಬರೂ ತಮ್ಮ ಸ್ನೇಹವನ್ನು ಮತ್ತಷ್ಟು ಉತ್ತಮ ಪಡಿಸಲು ಸಹಾಯ ಮಾಡುವಂತೆ ತಮ್ಮ ತಮ್ಮ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಲು ಬೇರೆ ಬೇರೆ ದಾರಿ ಹಿಡಿದರಂತೆ. ಆಗ ದೇವರು ನನ್ನ ಕೈಲಾಗದ್ದನ್ನು ಈ ಮತಸ್ಥಾಪಕರು ಮಾಡಿದ್ದನ್ನು ಕಂಡು ಬೆರಗಾಗಿ ಮೂಗಿನ ಮೇಲೆ ಬೆರಳಿಟ್ಟುಕೊಂಡನಂತೆ!
 

Rating
No votes yet

Comments