ಸಾರಗ್ರಾಹಿಯ ರಸೋದ್ಗಾರಗಳು -16: ದೇವರನ್ನು ಒಂದು ಜಾತಿಗೆ/ಕುಲಕ್ಕೆ ಕಟ್ಟಿಹಾಕಬೇಕೆ?

ಸಾರಗ್ರಾಹಿಯ ರಸೋದ್ಗಾರಗಳು -16: ದೇವರನ್ನು ಒಂದು ಜಾತಿಗೆ/ಕುಲಕ್ಕೆ ಕಟ್ಟಿಹಾಕಬೇಕೆ?

     ಶತಾಯುಷಿ ಪಂ. ಸುಧಾಕರ  ಚತುರ್ವೇದಿಯವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು.   ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ   
-ಕ.ವೆಂ.ನಾಗರಾಜ್.
- - - - - - - - - - - - - - - - - - - - - - - - - - - - - - 
ದೇವರನ್ನು ಒಂದು ಜಾತಿಗೆ/ಕುಲಕ್ಕೆ ಕಟ್ಟಿಹಾಕಬೇಕೆ?
     ಇದೆಲ್ಲಾ ಯಾಕೆ ಹೇಳ್ತಾ ಇದೀನಿ ಅಂದ್ರೆ, ದೇವರು ಯಾವತ್ತೂ ಕಚ್ಚಾಡಿ, ಹೊಡೆದಾಡಿ ಸಾಯಿರಿ ಅಂತ ಹೇಳಲ್ಲ. ಅವನು ಪ್ರೇಮಸ್ವರೂಪ, ಆನಂದಮಯ. ಎಲ್ಲರಿಗೂ ಪ್ರೀತಿ ತೋರಿಸತಕ್ಕವನು. ಎಲ್ಲಾ ಪ್ರಾಣಿಗಳಲ್ಲೂ ಸಮಾನವಾದ ಮಿತ್ರ ದೃಷ್ಟಿ ಇಟ್ಟುಕೊಳ್ಳುವ ಶಕ್ತಿ ಕೊಡು ಭಗವಂತ ಅಂತ ಪ್ರಾರ್ಥನೆ ಮಾಡ್ತೀವಿ. ಪ್ರಾರ್ಥನೆ ಮಾಡೋದು ಹಾಗೆ, ನಡೆಯೋದು? 'ಥೂ, ಇವನು ತುರುಕ, ಸಾಯಲಿ', 'ಇವನು ಕ್ರಿಶ್ಚಿಯನ್, ಧರ್ಮಭ್ರಷ್ಠ, ಇವನ ಮನೆ ಹಾಳಾಗಲಿ' ಹೀಗೆ ಮನಸ್ಸಿನಲ್ಲಿ ಅಂದುಕೊಂಡು 'ಓಂ' ಅಂದರೆ ಪ್ರಯೋಜನ ಇಲ್ಲ. 'ಇವನು ಹಿಂದೂ, ಕಾಫಿರ್, ಇವನು ಬದುಕಿರಲು ಲಾಯಕ್ಕಿಲ್ಲ' ಅಂತ ಅವರು ಹೇಳಿದರೆ ಅದೂ ದೇವರು ಒಪ್ಪುವ ಮಾತಲ್ಲ. ಸರ್ವಸ್ನೇಹಿ, ಎಲ್ಲರಿಗೂ ಬೇಕಾದ ಆ ಪರಮಾತ್ಮನನ್ನು ಒಂದು ಜಾತಿಗೆ, ಒಂದು ಕುಲಕ್ಕೆ ಕಟ್ಟಿ ಹಾಕೋದು ಸರಿಯಲ್ಲ. ನನಗೂ ಆ ಮುಸಲ್ಮಾನರಿಗೂ ಜಗಳ ಬರ್ತಾ ಇದ್ದದ್ದು ಹೀಗೇನೇ. ಈ ಕಥೆ ನಿಮಗೆ ಈ ಹಿಂದೆಯೇ ಹೇಳಿದ್ದೇನೆ. ಬಿಹಾರದಲ್ಲಿ ಭೂಕಂಪ ಆಯಿತು, ೧೯೩೪ರಲ್ಲಿ. ತುಂಬಾ ಸಾವುಗಳಾದವು. ನಾನೇ ಕಣ್ಣಿಂದ ನೋಡಿದೀನಿ. ಎಲ್ಲಿ ಮುಜಫರ್ ನಗರ ಅನ್ನುವ ಊರಿತ್ತೋ ಅಲ್ಲಿನ ಕ್ಲಾಕ್ ಟವರ್ ಮಾತ್ರ ಉಳ್ಕೊಂಡಿತ್ತು. ಊರೆಲ್ಲಾ ನಾಶವಾಗಿತ್ತು. ನೋಡಬಾರದ್ದನ್ನೆಲ್ಲಾ ಅಲ್ಲಿ ನೋಡಿದೆ. ಒಂದು ಮುಸಲ್ಮಾನರ ಕೇರಿಗೆ ಹೋಗಿದ್ದೆ. ನಾನೊಬ್ಬ ವಾಲಂಟಿಯರ್ ಆಗಿ ಹೋಗಿದ್ದೆ. ಅಲ್ಲಿ ಒಂದು ಮನೆಯಿಂದ 'ಬಚಾವೋ, ಬಚಾವೋ' ಅಂತ ಯಾರೋ ಕಿರುಚುತ್ತಿದ್ದರು. ನನ್ನ ಜೊತೆಗೆ ಸ್ನೇಹಲತಾ ಅನ್ನುವವರು ಇದ್ದರು. ಅವರು ಜಾಲಂಧರ್ ಆರ್ಯಸಮಾಜದ ಸೆಕ್ರೆಟರಿ.  ಅವರಿಗೆ ಹೇಳಿದೆ, "ನೋಡಮ್ಮಾ, ಯಾರೋ ಹೆಂಗಸರು ಕಿರುಚುತ್ತಾ ಇದ್ದಾರೆ. ನಾನು ಹೋದರೆ ಸರಿಯಾಗುವುದಿಲ್ಲ. ನೀನು ಹೋಗಿ ನೋಡಮ್ಮಾ" ಅಂದೆ. ಆಕೆ ಒಳಗೆ ಹೋದಳು. ಒಂದು ಹೆಂಗಸು ಮತ್ತು ಆಕೆಯ ಮಗುವಿನ ಮೇಲೆ ಮನೆಯ ತೊಲೆ ಬಿದ್ದಿತ್ತು. ಮಗು ಬದುಕಿತ್ತು. ಆಕೆ ಅರೆಜೀವವಾಗಿದ್ದಳು. ಮಗುವನ್ನಾದರೂ ಉಳಿಸೋಣವೆಂದು ಮಗುವನ್ನು ಎತ್ತಿಕೊಂಡು ಸ್ನೇಹಲತಾ ಬಾಗಿಲ ಹತ್ತಿರ ಬಂದಾಗ ಬಾಗಿಲೇ ಅವರ ಮೇಲೆ ಬಿದ್ದು ಸ್ನೇಹಲತಾ ಮತ್ತು ಮಗು ಇಬ್ಬರೂ ಸತ್ತುಹೋದರು. ನಮ್ಮ ಲೀಡರ್, "ನೀನು ಹೋಗದೆ, ಪಾಪ ಆ ಹೆಣ್ಣುಮಗಳನ್ನು ಏಕೆ ಸಾಯಿಸಿದೆ?" ಎಂದು ಸಿಟ್ಟು ಮಾಡಿದರು. "ನೀವು ಆಗಿದ್ರೆ ಹೋಗುತ್ತಿದ್ದರೇನೋ, ನನಗೆ ಧೈರ್ಯ ಬರಲಿಲ್ಲ" ಎಂದು ಸುಳ್ಳು ಹೇಳಿದೆ. ಸತ್ಯ ಏನೆಂದು ನನಗೆ ಗೊತ್ತು. ನಾನೇನು ಆ ಮಗು ಸಾಯಲಿ, ಆ ತಾಯಿ ಸಾಯಲಿ ಎಂದು ಬಯಸಿದ್ದೆನಾ? ಅದು ಆ ಭಗವಂತ ಕೋಪ ಮಾಡಿಕೊಂಡರೆ ಯಾರು ರಕ್ಷಣೆ ಕೊಡುತ್ತಾರೆ? ವಿಜ್ಞಾನಿಗಳು ನಾನು ಅಂಥ ಮನೆ ಕಟ್ಟಿಕೊಡ್ತೀನಿ, ಇಂಥ ಮನೆ ಕಟ್ಟಿಕೊಡ್ತೀನಿ, ಭೂಕಂಪ ಆದ್ರೂ ಬಿದ್ದು ಹೋಗಬಾರದು ಅಂತಾರೆ. ಜಪಾನಿನಲ್ಲಿ ಕಾರ್ಡ್ ಬೋರ್ಡ್ ಮನೆಗಳು, ಬಿದ್ರೂ ಯಾರೂ ಸಾಯಲ್ಲ. ಸದ್ಯಕ್ಕೆ ನಮ್ಮ ದೇಶದಲ್ಲಿ ಆ ಪರಿಸ್ಥಿತಿ ಇಲ್ಲ. ಈ ಭೂಕಂಪ ಬಂತು ಅಂತ ಇಟ್ಕೊಳ್ಳಿ, ನಾಸ್ತಿಕ ಹೇಳ್ತಾನೆ, "ಎಂಥಾ ದೇವರು ನಿಮ್ಮ ದೇವರು. ತಾನೇ ಮಾಡಿದ ರಚನೆ. ತಾನೇ ತನ್ನ ಮಕ್ಕಳನ್ನು ಸಾಯಿಸ್ತಾನೆ. ಅವನೆಂಥಾ ಕರುಣಾಳು? ಕ್ರೂರ, ಮಹಾಕ್ರೂರ" ಅಂತಾನೆ. ದೇವರು ಅಂದರೆ ನಮ್ಮ ಹಾಗೆ ಶರೀರಧಾರಿ ಆಗಿರೋನಲ್ಲ. ದೇವರು ಅವನಲ್ಲ. ಅವನು ವಿಶ್ವರೂಪ ಚೇತನ. ಸಂಪೂರ್ಣ ವಿಶ್ವಕ್ಕೆ ಚೈತನ್ಯ ನೀಡುವ ಅದ್ಭುತ ಶಕ್ತಿ. ಅವನು ಅನುಪಮ, ನಿರುಪಮ. ಅವನನ್ನು ವಿವರಿಸಲು ಸಾಧ್ಯವೇ ಇಲ್ಲ. ದೇವರು ಹೇಗಿದ್ದಾನೆ ಅಂದರೆ  ಹೇಗೆ ಇದ್ದಾನೋ ಹಾಗೆ ಇದ್ದಾನೆ ಅಂತ ಹೇಳಬಹುದೇ ಹೊರತು ಅವನನ್ನು ಹೋಲಿಕೆ ಮಾಡಲು ಆಗುವುದಿಲ್ಲ. ಅದನ್ನೇ ಮುಸಲ್ಮಾನರು ಬೇನಜೀರ್ ಅಂತಾರೆ. ಅದರ ಅರ್ಥವೂ ಅದೇ, ಅನುಪಮ, ನಿರುಪಮ ಅಂತಲೇ. ಮುಸಲ್ಮಾನರಿಗೆ ಬೇರೆ ಅಂತ ದೇವರಿಲ್ಲ, ಹಿಂದೂಗಳಿಗೆ ಬೇರೆ ದೇವರಿಲ್ಲ, ಕ್ರಿಶ್ಚಿಯನ್ನರಿಗೆ ಬೇರೆ ಅಂತ ದೇವರಿಲ್ಲ. ಇವೆಲ್ಲಾ ನಮ್ಮ ಕಲ್ಪನೆ ಅಷ್ಟೆ.
ಹಿಂದೂ ಆಗಿ ಪರಿವರ್ತಿತನಾದ ಪಾದ್ರಿ
     ನನ್ನ ಹತ್ತಿರ ಒಬ್ಬರು ಬರೋರು. ನಂದೇ ತಪ್ಪು. ಲಾರ್ಡ್ ರಿಚರ್ಡ್ ಕೈಥಾನ್ ಅಂತ ಅಮೆರಿಕನ್ ಮಿಷನರಿ. ಹಿಂದೂಗಳ ಮದ್ಯೆ ಮಾತನಾಡುವಾಗ ಮಹಾತ್ಮಾ ಗಾಂಧಿಯನ್ನು ಹೊಗಳೋನು. ಕ್ರಿಶ್ಚಿಯನ್ನರ ನಡುವೆ ಮಾತಾಡುವಾಗ ಎಲ್ಲಾ ಹಿಂದೂಗಳೂ ಕ್ರಿಶ್ಚಿಯನ್ನರೇ, ಕ್ರಿಸ್ತನ ಪ್ರಭಾವ ಅಷ್ಟೊಂದು ಆಗಿದೆ ಅನ್ನೋನು. ಅಮೆರಿಕಾಕ್ಕೆ ಕಳಿಸುವುದು ಒಂದು ರಿಪೋರ್ಟ್, ಇಲ್ಲಿ ಹೇಳೋದು ಇನ್ನೊಂದು ತರಹ. ನಾನೆ ಕೇಳಿದೆ, "ಏನು ಕೈಥಾನ್ ಸಾಹೇಬರೇ, ನಿಮ್ಮದು ಡುಯಲ್ ಪರ್ಸನಾಲಿಟೀನಾ?" ವೇದದಲ್ಲಿ 'ಮಿಥೂಯಾ' ಅಂತ ಬರುತ್ತೆ. ಅಂದರೆ ಒಳಗೊಂದು, ಹೊರಗೊಂದು! ಬಾಯಲ್ಲಿ ಹೇಳೋದು ಒಂದು, ಮನಸ್ಸಿನಲ್ಲಿ ಮತ್ತೊಂದು. "ನಿಮ್ಮ ಹತ್ತಿರ ವಾದ ಮಾಡುವುದಕ್ಕೆ ನನಗೆ ಆಗಲ್ಲ. ಫಾದರ್ ವಿವಿಯನ್ ಎಲ್ವಿನ್ ಅಂತ ಇದ್ದಾರೆ. ಅವರಿಗೆ ವೇದ, ಉಪನಿಷತ್ತು ಎಲ್ಲಾ ಗೊತ್ತು. ಅವರ ಹತ್ತಿರ ವಾದ ಮಾಡಿ" ಅಂತ ಹೇಳಿದರು. ಆ ಪಾದ್ರಿ ಮಧ್ಯಪ್ರದೇಶದ ಭೂಪಾಲಿನ ಆಚೆ ಒಂದು ಕಾಡಿನಲ್ಲಿ ಇದ್ದ. ತಮಾಷೆ ಅಂದ್ರೆ ಒಬ್ಬ ಆದಿವಾಸಿ ಹೆಂಗಸನ್ನು ಮದುವೆ ಮಾಡ್ಕೊಂಡಿದ್ದ. ಅವಳಿಗೆ ಹೇಳಿದ್ದ, "ನಿನಗೆ ಸ್ವರ್ಗ ಬೇಕಿದ್ರೆ ಕ್ರಿಶ್ಚಿಯನ್ ಆಗು" ಅಂತ. "ನಾನು ನನ್ನ ದೇವರನ್ನೇ ನಂಬೋದು. ನರಕಕ್ಕೇ ಹೋಗ್ತೀನಿ, ಸ್ವರ್ಗಕ್ಕೆ ಬರಲ್ಲ" ಅಂತ ಅಂದಿದ್ದಳು ಅವಳು. ಅವಳು ಒಂದು ತರಹ, ಅವಳದೂ ಒಂದು ತರಹದ ಭಕ್ತೀನೇ. ಅವನ ಹತ್ತಿರ ಹೋದೆ, ವಾದ ಮಾಡಿದೆ. ಐದು ನಿಮಿಷ ಜೋರು ಜೋರು ಜೋರಾಗಿ ಮಾತನಾಡಿದ. ನಂತರ ಅವನಿಗೆ ಅನ್ನಿಸಿರಬೇಕು, ತನ್ನ ಪಕ್ಷ ದುರ್ಬಲವಾಗ್ತಾ ಇದೆ ಅಂತ. ನಿಮ್ಮ ಹತ್ತಿರ ವಾದ ಮಾಡಕ್ಕೆ ಆಗಲ್ಲ ಅಂದ. 'ವಾದ ಮಾಡಬೇಡಪ್ಪಾ, ವಾದ ನಿಲ್ಲಿಸು ಬೇಕಾದರೆ. ಆದರೆ ನನ್ನ ಪ್ರಶ್ನೆಗೆ ಉತ್ತರ ಕೊಟ್ಟೆಯಾ?' ಅಂದದ್ದಕ್ಕೆ ಅವನು ತಲೆ ಕೆಟ್ಟು, "ಹಿಂದೂಯಿಸಮ್, ಕ್ರಿಶ್ಚಿಯಾನಿಟಿ - ಬೋತ್ ಗೋ ಟು ಡಾಗ್ಸ್" ಅಂದ್ಬಿಟ್ಟ. ನಾನು ಹೇಳಿದೆ, "ನಮ್ಮ ಹಿಂದೂ ಧರ್ಮ ಯಾವತ್ತೂ ಹೋಗೋದಿಲ್ಲ. ನಿಮ್ಮ ಕ್ರಿಶ್ಚಿಯಾನಿಟಿ ಬೇಕಾದ್ರೆ ಹೋಗಲಿ. ಎಲ್ಲರನ್ನೂ ಸಮ ಮಾಡಿ ಎಲ್ಲರನ್ನೂ ಸಾಯಿಸಬೇಕೆಂದಿದ್ದೀಯಾ?" ಕೊನೆಗೆ ಒಪ್ಪಿಕೊಂಡ, ಪಾಪ. "ನೀವು ಹೇಳೋದು ನಿಜ. ದೇವರು ಒಬ್ಬನೇ ಪರಮಾತ್ಮ. ಏಸುಕ್ರಿಸ್ತ ಒಬ್ಬನೇ ದೇವರ ಮಗ ಅಲ್ಲ. ನಾವು ಶೈತಾನನ ಮಕ್ಕಳೂ ಅಲ್ಲ. ನಾವೂ ಕೂಡ ಅದೇ ಪರಮಾತ್ಮನ ಮಕ್ಕಳು" ಅಂದ. "ಇವತ್ತಿನಿಂದ ನಾನೂ ಕೂಡಾ ಹಿಂದು. ಇನ್ನು ಮುಂದೆ ನಾನು ಫಾದರ್ ವಿವಿಯನ್ ಎಲ್ವಿನ್ ಅಲ್ಲ. ನಾನು ಧರ್ಮವೀರ್ ಅಂತ ಹೆಸರು ಇಟ್ಕೊಳ್ತೀನಿ" ಅಂತ ಹೇಳಿದ. 'ಸಂತೋಷವಾಗಿ ಇಟ್ಕೋ' ಅಂದೆ. ಅವನಷ್ಟಕ್ಕೆ ಅವನೇ ಧರ್ಮವೀರ್ ಅಂತ ಹೆಸರು ಕೊಟ್ಟುಕೊಂಡ. ಮಾತ್ರವಲ್ಲ, ಎಷ್ಟು ಜನರನ್ನು ಕ್ರಿಶ್ಚಿಯನ್ ಆಗಿ ಮಾಡಿದ್ದನೋ ಅವರಲ್ಲಿ ಅರ್ಧದಷ್ಟು ಜನರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತಂದ. ಇದು ಸ್ವಾಮಿ ದಯಾನಂದರ ಸತ್ಯಾರ್ಥ ಪ್ರಕಾಶದ ಪ್ರಭಾವ. ಕೊನೆಗೆ ಕ್ರಿಶ್ಚಿಯನರೇ ಒಪ್ಪಿಕೊಳ್ತಾರೆ. 'ಆ ಸತ್ಯಾರ್ಥ ಪ್ರಕಾಶ ಇರುವವರೆಗೆ ನಮಗೆ ಉಳಿಬಾಳಿಲ್ಲ' ಅಂತಾರೆ. ಮುಸಲ್ಮಾನರೂ ಒಪ್ಪುತ್ತಾರೆ, 'ಆ ದಯಾನಂದರು ಹೇಳೋದೆಲ್ಲಾ ಸರಿಯೇ, ತಪ್ಪೇನಿಲ್ಲ. ಆದರೆ ನಮ್ಮ ಮಹಮದ್ ಪೈಗಂಬರ್ ಅನ್ನು ಅವರು ಒಪ್ಪೋದಿಲ್ಲ. ಆದ್ದರಿಂದ ಅವರೂ ಕಾಫಿರ್'.
ದೇವರು ಪಕ್ಷಪಾತಿಯೇ?
     ಇದೇ ಸಂದರ್ಭದಲ್ಲಿ ನೆನಪಾಗ್ತಾ ಇದೆ. ಬಿಹಾರದಲ್ಲಿ ಭೂಕಂಪ ಆದಾಗ ಒಬ್ಬ ಮುಸಲ್ಮಾನ್ ಖಾಜಿ ನನ್ನ ಜೊತೆಯಲ್ಲಿದ್ದ. ಅವನೇ ಶುರು ಮಾಡಿದ,"ನೋಡಿ, ಇಲ್ಲಿ ಹಿಂದೂಗಳು ಜಾಸ್ತಿ. ಅದಕ್ಕೇ ಭೂಕಂಪ ಆಯ್ತು.. ಇರಾನಿನಲ್ಲಿ, ಪರ್ಷಿಯಾದಲ್ಲಿ ಆಗಲಿಲ್ಲ. ಟರ್ಕಿಸ್ತಾನದಲ್ಲಿ ಆಗಲಿಲ್ಲ". ಬಿಹಾರದ ಭೂಕಂಪದಲ್ಲಿ 50000 ಜನ ಸತ್ತರು. ಮರು ದಿನ ಪೇಪರ್‌ನಲ್ಲಿ ಸುದ್ದಿ ಬಂತು, ಟರ್ಕಿಸ್ತಾನದಲ್ಲಿ ಭೂಕಂಪ ಆಗಿ ಒಂದು ಲಕ್ಷಕ್ಕಿಂತ ಹೆಚ್ಚು ಜನ ಸತ್ತರು ಅಂತ. ನಾನು ಕೇಳಿದೆ, "ಏನಪ್ಪಾ, ಅಲ್ಲಿ ಖುದಾ ಇಲ್ಲವಾ? ಅಲ್ಲೂ ಸಾವು ಆಯ್ತಲ್ಲಾ?" ಈ ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ ಇವೆಲ್ಲಾ ಮನುಷ್ಯರ ಕೈಯಲ್ಲಿಲ್ಲ. ಆ ನಿಯಾಮಕ ಇದ್ದಾನೆ. ಎಲ್ಲಾ ಅವನ ನಿಯಮದಂತೆ ಆಗುತ್ತೆ. ನಾವು ಎಷ್ಟು ಜಂಬ ಮಾಡಿದ್ರೂ ಕೂಡ, ಭೂಮಿ ನಡುಗಿದಾಗ, 'ಏಯ್, ನಿಲ್ಲು' ಅಂತ ಹೇಳೋಕ್ಕಾಗಲ್ಲ. ಏನಾಗಬೇಕೋ ಅದು ಆಗೇ ಅಗುತ್ತೆ.
ಪರಮಾತ್ಮನನ್ನು ಗೌರವಿಸಿ
     [ . . . .* ಟಿಪ್ಪಣಿ ಗಮನಿಸಿ.] ಇದೆಲ್ಲಾ ನಾವುಮನುಷ್ಯರು ಮಾಡಿಕೊಳ್ಳೋದು. ನಾವು. ದೇವರಿಗೆ ಗೌರವ ಕೊಡ್ತೀವಿ ಅನ್ನೋದು, ನೋಡಿದ್ರೆ ಹೀಗೆ. ನಾವು ಕುಣಿಸಿದ ಹಾಗೆ ಕುಣೀಬೇಕು ಅವನು. ದಾಸರೂ ಅದನ್ನೇ ಹೇಳ್ತಾರೆ. ಭಕ್ತ ಮಲಗಿ ಭಜನೆ ಮಾಡಿದರೆ ದೇವರು ಕುಳಿತು ಕೇಳ್ತಾನೆ. ಕುಳಿತು ಭಜನೆ ಮಾಡಿದರೆ ನಿಂತು ಕೇಳ್ತಾನೆ. ನಿಂತು ಹೇಳಿದರೆ ಕುಣ್ಕೊಂಡು ಕೇಳ್ತಾನೆ. ಇದಾ ದೇವರಿಗೆ ಕೊಡುವ ಗೌರವ? ಅದನ್ನು ಎಷ್ಟು ಭಕ್ತಿಯಿಂದ ಕೇಳ್ತಾರೆ ಗೊತ್ತಾ? ರುಕ್ಮಿಣೀ ಪರಿಣಯ, ಪದ್ಮಾವತೀ ಪರಿಣಯ, ಶ್ರೀನಿವಾಸ ಕಲ್ಯಾಣ,..ಮಾಡಿದ್ದೂ ಮಾಡಿದ್ದೇ. ದೇವರಿಗೇ ಮದುವೆ ಮಾಡೋರು ದೇವರ ಭಕ್ತರೋ, ಅಪ್ಪಂದಿರೋ ಅನ್ನುವ ಪ್ರಶ್ನೆ ಬರುತ್ತೆ. ಎಲ್ಲಿಯವರೆಗೆ ದೇವರು ಬರ್ತಾನೆ, ಹೋಗ್ತಾನೆ ಅಂತಾ ಅನ್ನುವವರೆಗೆ ದೇವರು ಯಾವತ್ತೂ ಸಿಗುವುದಿಲ್ಲ. ವೇದ ಹೇಳುತ್ತೆ:
ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ |
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ || (ಯಜು.೪೦.೫.)
ಆ ಪರಮಾತ್ಮ ಜಗತ್ತನ್ನೆಲ್ಲಾ ಓಡಾಡಿಸುತ್ತಾನೆ. ತಾನು ಅಲ್ಲಾಡುವುದಿಲ್ಲ. ನಾನು ಅನೇಕ ಸಲ ಹೇಳ್ತಾ ಇರ್ತೀನಿ. ರೈಲು ಕಂಬಿ ಧೃಢವಾಗಿದ್ದರೆ ರೈಲು ಅದರ ಮೇಲೆ ಹೋಗುತ್ತೆ. ಕಂಬಿಯೇ ಧೃಢವಾಗಿಲ್ಲದಿದ್ದರೆ ರೈಲಿನ ಗತಿಯೇನು? ಪರಮಾತ್ಮ ಬರ್ತಾನೆ, ಹೋಗ್ತಾನೆ ಇವೆಲ್ಲಾ ಮಾನಸಿಕ ವ್ಯಾಪಾರ. ನಿಜವಾಗಿ ಪರಮಾತ್ಮನನ್ನು ನೆನೆದರೆ ನಮ್ಮ ಮನಸ್ಸಿನಲ್ಲೇ ಇದಾನೆ. ಪರಮಾತ್ಮ ಎಲ್ಲೋ ಮೆಕ್ಕಾದಲ್ಲೋ, ಮದೀನಾದಲ್ಲೋ, ಜೆರೂಸಲೇಮಿನಲ್ಲೋ, ಕಾಶಿಯಲ್ಲೋ, ರಾಮೇಶ್ವರದಲ್ಲೋ ಇದಾನೆ ಅಂದ್ರೆ ಅರ್ಥ ಇದೆಯಾ? ಬೆಂಗಳೂರು ಏನು ಪಾಪಿ ಊರಾ? ಇಲ್ಲಿ ಇಲ್ಲವಾ ದೇವರು? ತೀರ್ಥಯಾತ್ರೆ ಹೋಗ್ತಾರಲ್ಲಾ ಅವರಿಗೆ ಅದಕ್ಕೇ ಹೇಳೋದು. ಯಾಕೆ ಬೆಂಗಳೂರು ಪವಿತ್ರ ಅಲ್ಲವಾ? ಇಲ್ಲಿ ಭಗವಂತ ಇಲ್ಲವಾ? ಇಲ್ಲಿ ಭಗವಂತನ ಸ್ಮರಣೆ ಮಾಡಕ್ಕೆ ಆಗಲ್ವಾ?
ಗಂಗಾಜಲ
      ಕಾಶಿಯಲ್ಲಿ ಹಕ್ಕಿಬೈಲಿ ಅಂತ ಸ್ಥಳ ಇದೆ. ಪ್ರಜಾಪತಿ ಬ್ರಹ್ಮ ಅಲ್ಲಿ ಯಜ್ಞ ಮಾಡಿದ್ದನಂತೆ. ಅವಾಗಿನಿಂದ ಇದು ಪವಿತ್ರವಾದ ಸ್ಥಾನವಂತೆ. ಯಾರಿಗೆ ಮೋಕ್ಷ ಬೇಕೋ ಅವರು ಇಲ್ಲಿ ಸ್ನಾನ ಮಾಡಬೇಕಂತೆ. ನಾನು ಹೋದೆ. ನಾನು ಒಳ್ಳೆ ಮಾರ್ವಾಡಿ ಸೇಠ್ ಇದ್ದ ಹಾಗಿದ್ದೆ. ಕಚ್ಚೆ ಪಂಚೆ, ಲಾಂಗ್ ಕೋಟು, ತಲೆ ಮೇಲೆ ಪಗಡಿ ಇವೆಲ್ಲಾ ಹಾಕಿಕೊಂಡು ಸೇಠಜಿ ಇದ್ದ ಹಾಗಿದ್ದೆ. ಅಲ್ಲಿ ಪಂಡಾಗಳು. "ಸೇಠಜಿ, ಸ್ನಾನ್ ಕರೋ", ಅಂದರು. "ಇಲ್ಲಪ್ಪಾ, ನಾನು ಇಲ್ಲಿ ಸ್ನಾನ ಮಾಡೋದಿಲ್ಲ. ಅಲ್ಲಿ ಗೋಮುಖ-ಗಂಗಾನದಿ ಹಿಮಾಲಯದಿಂದ ಕರಗಿ ನೀರಾಗಿ ಹರಿದು ಬರುತ್ತಲ್ಲಾ, ಅಲ್ಲಿ ಸ್ನಾನ ಮಾಡ್ತೀನಿ. ಇಲ್ಲಿ ನೀವೇ ಮಾಡ್ಕೊಳ್ಳಿ" ಅಂದೆ. ಹಿಮಾಲಯ ಪರ್ವತದಲ್ಲಿ ಹಾದು ಬರುವ ಆ ನೀರಿಗೆ ಔಷಧೀಯ ಗುಣಗಳಿವೆ. ನಿಮಗೂ ಗೊತ್ತಿರಬಹುದು. ಎಲ್ಲರ ಮನೆಯಲ್ಲೂ ಕಾಶಿಯಿಂದ ತಂದ ಗಂಗಾನದಿಯ ನೀರನ್ನು ಥಾಲಿಯ ಒಳಗೆ ಇಟ್ಟುಕೊಂಡಿರ್ತಾರೆ. ಹೆಚ್ಚೇನು ಹೇಳಲಿ? ಸರ್ ಸಿ.ವಿ.ರಾಮನ್ ಗೊತ್ತಲ್ಲಾ? ಅವರು ಬೆಂಗಳೂರಿನಲ್ಲೇ ಸತ್ತರು. ಅವರು ಸಾಯುವ ಸಮಯ ಬಂದಾಗ ಗಂಗೋದಕ ಬಾಯಿಗೆ ಬಿಡು ಅಂತ ಹೇಳ್ತಿದ್ರಂತೆ. ಆ ಸೈಂಟಿಸ್ಟಿಗೂ ಗಂಗಾಜಲ ಬೇಕಾಯ್ತು. ಒಂದು ಸತ್ಯವಾದ ಸತ್ವ, ಆ ಗಂಗಾಜಲ ಇದೆಯಲ್ಲಾ ಅದು ಎಷ್ಟು ಕಾಲ ಇಟ್ಟರೂ ಹಾಳಾಗುವುದಿಲ್ಲ. ಬೇರೆ ನೀರು ಮಾರನೇ ದಿನಕ್ಕೇ ಕೆಟ್ಟು ಹೋಗಿರುತ್ತೆ. ಅದು ಗೊತ್ತಾಗಲು ಎಲ್ಲರೂ ತಿಳಕೊಂಡ ಹಾಗೆ ಮೂಢನಂಬಿಕೆ ಬೇಕಾಗಿಲ್ಲ. ಹಿಮಾಲಯದ ತಪ್ಪಲಿನಲ್ಲಿ ಇರುವ ಔಷಧೀಯ ಗುಣಗಳುಳ್ಳ ಮಣ್ಣಿನ ಮೇಲೆ ಹಾಯ್ದು ಬರುವ ಆ ನೀರಿನಲ್ಲಿ ಔಷಧೀಯ ಗುಣಗಳಿವೆ. ಅದರ ಫಲ ಇದು. ಈ ರೀತಿ ವಿವೇಚನೆ ಮಾಡಬೇಕು.
*************************
ನಾಗರಾಜನ ಟಿಪ್ಪಣಿ:
     [ . . .*] ಈ ಭಾಗದಲ್ಲಿ ಪಂಡಿತರು ಬಿಹಾರದ ಭೂಕಂಪದ ಸಮಯದಲ್ಲಿ ಜೊತೆಗಿದ್ದ ಖಾಜಿಗೂ ತಮಗೂ ನಡೆದ ಸಂಭಾಷಣೆಯ ಕುರಿತು ಹೇಳಿದ್ದರು. 'ಭಗವಾನ್ ಕೃಷ್ಣ ಏಕೆ ಕಪ್ಪಗಾದ' ಎಂಬ ಕಥೆಯನ್ನು ಕೃಷ್ಣನನ್ನು ಹೀಯಾಳಿಸುವ ರೀತಿಯಲ್ಲಿ ಖಾಜಿ ಹೇಳಿದ್ದರೆ, ಅದಕ್ಕೆ ಪ್ರತಿಯೇಟು ನೀಡಿದ್ದ ಪಂಡಿತರು 'ಮುಸಲ್ಮಾನರು ಏಕೆ ತಲೆ ಬೋಳಿಸಿ ಗಡ್ಡ ಬಿಡುತ್ತಾರೆ' ಎಂಬುದಕ್ಕೆ ಅದೇ ಕಥೆಯನ್ನು ಮುಂದುವರೆಸಿ ಹೇಳಿದ್ದರು. ಸಂಭಾಷಣೆಯ ಪೂರ್ಣ ವಿವರವನ್ನು ತಿಳಿಸಬಹುದಾಗಿದ್ದರೂ ಸೂಕ್ಷ್ಮ ವಿಷಯವೆಂಬ ಕಾರಣಕ್ಕೆ ತಿಳಿಸಿಲ್ಲ. ಹಿಂದೂ ದೇವ-ದೇವತೆಗಳನ್ನು ಹೀಯಾಳಿಸುವ ಕೆಲಸ ಇತರರಿಂದ ಆಗುತ್ತಲೇ ಇದೆ. ದೇವ-ದೇವತೆಗಳ ಚಿತ್ರಗಳನ್ನು ಚಪ್ಪಲಿಗಳ ಮೇಲೆ, ಒಳ ಉಡುಪುಗಳ ಮೇಲೆ ಮುದ್ರಿಸುವುದು, ಅವಹೇಳನಕಾರಿ ಮತ್ತು ಪ್ರಚೋದನಕಾರಿ ಬರಹಗಳನ್ನು ಪ್ರಕಟಿಸುವುದು, ಆ ದೇವ-ದೇವತೆಗಳ ವೇಷಗಳನ್ನು ಹಾಕಿಕೊಂಡು ಅಶ್ಲೀಲವಾಗಿ ನೃತ್ಯ ಮಾಡುವುದು, ಇತ್ಯಾದಿಗಳನ್ನು ಕಾಣುತ್ತಿರುತ್ತೇವೆ. ಪ್ರಖ್ಯಾತ ಚಿತ್ರಕಾರ ಹುಸೇನರು ಸರಸ್ವತಿಯ ನಗ್ನ ಚಿತ್ರ ರಚಿಸಿದ್ದನ್ನು ಕಲೆಯ ಹೆಸರಿನಲ್ಲಿ ಬೆಂಬಲಿಸಿದವರು, ಧಾರ್ಮಿಕ ಭಾವನೆಗೆ ಧಕ್ಕೆ ತಂದರೆಂದು ವಿರೋಧಿಸಿದವರಿಗೇನೂ ಕಡಿಮೆಯಿರಲಿಲ್ಲ. ಈ ರೀತಿ ದೇವರನ್ನು ಗೌರವದಿಂದ ಕಾಣಲಾಗದ ಮನಸ್ಥಿತಿಯ ಕುರಿತು ಪಂಡಿತರ ವಿಷಾದ ವ್ಯಕ್ತವಾಗಿದೆ.
 *****************
ಹಿಂದಿನ ಲೇಖನಕ್ಕೆ ಲಿಂಕ್:

sampada.net/%E0%B2%B8%E0%B2%BE%E0%B2%B0%E0%B2%97%E0%B3%8D%E0%B2%B0%E0%B2%BE%E0%B2%B9%E0%B2%BF%E0%B2%AF-%E0%B2%B0%E0%B2%B8%E0%B3%8B%E0%B2%A6%E0%B3%8D%E0%B2%97%E0%B2%BE%E0%B2%B0%E0%B2%97%E0%B2%B3%E0%B3%81-15-%E0%B2%B0%E0%B2%BE%E0%B2%AE%E0%B2%B0%E0%B2%BE%E0%B2%9C%E0%B3%8D%E0%B2%AF-%E0%B2%B0%E0%B2%BE%E0%B2%B5%E0%B2%A3%E0%B2%B0%E0%B2%BE%E0%B2%9C%E0%B3%8D%E0%B2%AF

 

Comments