ಅವರವರ ಭಾವಕ್ಕೆ......

ಅವರವರ ಭಾವಕ್ಕೆ......

 

ಮೊನ್ನೆ ಶನಿವಾರ ಆಷಾಡಮಾಸದ ಏಕಾದಶಿ . ನಮ್ಮ ಮನೆಗೆ ಬೆಂಗಳೂರಿನಿಂದ ಬಂದಿರುವ ನನ್ನ ಬೀಗರು ಮತ್ತು ಅವರ ಕುಟುಂಬ ಬೆಳಗಾಗೆದ್ದು ಮಾವಿನಕೆರೆ ವೆಂಕಟರಮಣನ ದರ್ಶನಕ್ಕೆಂದು ಹೋಗಿ ಬಂದರು. ಅಲ್ಲಿಂದ ಬಂದಕೂಡಲೇ ನನ್ನ ಸೊಸೆಯ ತಮ್ಮ ಗಣೇಶನನ್ನು "ದೇವರ ಸೇವೆ ಆಯ್ತೇನಪ್ಪಾ? " ಎಂದೆ. - ಆಯ್ತು ಅಂಕಲ್ ಅಂದ -"ದೇವರನ್ನು ನೋಡಿದ್ಯಾ? ಎಂದೆ - ಹೂ ಅಂಕಲ್ ನೋಡಿದೆ, ಎಂದ. ಆ ನಂತರದ ಸರದಿಯಲ್ಲಿ ಕಣ್ಣಿಗೆ ಬಿದ್ದವರು ನಮ್ಮ ಬೀಗರ ತಾಯಿ ಎಪ್ಪತ್ತೈದು ವರ್ಷದ ವೃದ್ಧೆ. ಕೈಲಾಗದಿದ್ದರೂ ಅವರು ತಮ್ಮ ಮನೆದೇವರ ದರ್ಶನ ಮಾಡಲೇ ಬೇಕೆಂದು ಹಟ ಮಾಡಿ ಹೋಗಿದ್ದವರು. -ಅಜ್ಜೀ, ದೇವರನ್ನು ನೋಡಿದಿರಾ? ಎಂದೆ. - ಹೂ ನೋಡಿದೆ. ಚೆನ್ನಾಗಿ ದರ್ಶನವಾಯ್ತು, ಎಂದರು ಆನಂತರ ಹೋಗಿದ್ದ ಎಲ್ಲಾ ಐದೂ ಮಂದಿಯಿಂದಲೂ ದೇವರ ದರ್ಶನ ವಾಯ್ತೆಂಬ ಉತ್ತರ ಸಿಕ್ಕಿತು. ಹೋಗಿದ್ದ ಕಾರಲ್ಲಿ ಐದು ಜನ ಮಾತ್ರ ಹೋಗಲು ಅವಕಾಶ ಇತ್ತು, ಹಾಗಾಗಿ ಐದು ಜನರಿಗೆ ಮಾತ್ರ ದರ್ಶನವಾಯ್ತು. ಒಂದು ಟ್ರೈನ್ ನಲ್ಲಿ ಹೋಗಿದ್ದರೆ ನೂಕು ನುಗ್ಗಲಿನಲ್ಲಿ ಸಾವಿರಾರು ಜನ ದರ್ಶನ ಪಡೆಯುತ್ತಿದ್ದರು! ಪುಣ್ಯಕ್ಷೇತ್ರಗಳಲ್ಲಿ ನೋಡ್ತೀವಲ್ಲವೇ? ಹಾಂ, ತಲೆಹರಟೆ ಬೇಡ. ವಿಷಯ ಪ್ರವೇಶಿಸೋಣ. ಈ ಐದೂ ಮಂದಿಗೂ ನಾಟಕೀಯವಾಗಿ ಉತ್ತರ ಕೊಡಬೇಕೆನಿಸಲಿಲ್ಲ. ಮುಗ್ಧವಾಗಿಯೇ ವಿಶಯ ತಿಳಿಸಿದ್ದರು.ಎಲ್ಲರ ಬಾಯಲ್ಲೂ " ನಾನು ದೇವರನ್ನು ನೋಡಿದೆ, ಎಂಬ ಉತ್ತರ!! ಎಲ್ಲರ ಮುಖದಲ್ಲೂ ಸಂತಸ.ತಮಾಶೆ ಮಾಡಬೇಕೆಂದಿದ್ದ ನನಗೆ ತಮಾಶೆಗೂ ವಾದ ಮಾಡಬೇಕೆನಿಸಲಿಲ್ಲ. ಇಷ್ಟು ಸಮಯ ಆನಂದವಾಗಿರುವ ಇವರೊ ಡ ನೆ ನಾನು ರಡ್ದುವಾದ ಮಾಡಿ ಅವರ ಮನಸ್ಸನ್ನು ಕೆಡಿಸಲು ನನಗೆ ಇಷ್ಟವಾಗಲಿಲ್ಲ. ಅವರು ನಿಜವಾಗಿಯೂ ದೇವರನ್ನು ನೋಡಿದರಾ? ನೋಡಿದರು, ಎಂದಾದರೆ ತರ್ಕ ಮಾಡುವವರಿಂದ ಪ್ರಶ್ನೆ ಸಿದ್ಧವಾಗಿರುತ್ತೆ. " ದೇವರು ಹೇಗಿದ್ದ?" ಆ ಪ್ರಶ್ನೆ ಬಂದಕೂಡಲೇ ಇವನ್ಯಾರೋ ತಲೆ ಹರಟೆ ಎಂಬುದು ಅವರಿಗೆ ಖಾತ್ರಿ ಯಾಗಿರುತ್ತೆ. ಅವರವರ ಭಾವಕ್ಕೆ ಅವರವರ ಬಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ ಹರನ ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ ನರರೇನು ಭಾವಿಪರೋ ಅದರಂತೆ ತೋರುವನು|| ಎಷ್ಟು ಅದ್ಭುತವಾಗಿ ಬಣ್ಣಿಸಿದ್ದಾರೆ, ಅಲ್ಲವೇ? ಅವರು ತಲೆಹರಟೆ ಮಾಡ ಲಿಲ್ಲ."ನರರೇನು ಭಾವಿಪರೋ ಅದರಂತೆ ತೋರುವನು"-ಎಂದು ಬರೆಯುವಾಗ ಕವಿಯೂ ಕೂಡ ಭಗವಂತನು ಕಾಣಿಸುತ್ತಾನೆ, ಎಂದೇ ದೃಢ ವಿಶ್ವಾಸದಿಂದ ಹೇಳಿದ್ದಾನೆ. ಹೌದು, "ತೋರುವುದು" ಅಂದರೆ ಏನು? ಅದನ್ನೇ "ದರ್ಶನ" ಅನ್ನೋಣವೇ? ನಮ್ಮ ದೇಶದಲ್ಲಿ ಅನೇಕ ದಾರ್ಶನಿಕರು ಆಗಿಹೋಗಿದ್ದಾರೆ. ಅವರ ತಪಸ್ಸಿನಬಲದಿಂದ ಭಗವಂತನನ್ನು ಕಾಣಲು ಅವರಿಗೆ ತೋರಿದ ಹಾದಿ" ದರ್ಶನ" ಆಗಿರಬೇಕು. ಅಂದರೆ ಭಗವಂತನನ್ನು ಸಾಕಾರರೂಪದಲ್ಲಿಯೇ ನೋಡಬೇಕೇ? ನೋಡಲು ಸಾಧ್ಯವೇ? ಭಕ್ತರೆಲ್ಲಾ ದೇವರ ಗುಡಿಯಲ್ಲಿ ಸಾಮಾನ್ಯವಾಗಿ ನೋಡುವುದೇನು? ಗರ್ಭಗೃಹದಲ್ಲಿರುವ ವಿಗ್ರಹವನ್ನು ನೂಕುನುಗ್ಗಲಲ್ಲಿ ನೋಡಿದರೆ ಸಾಕು ಅವರಲ್ಲಿ ಕೃತಾರ್ಥ ಭಾವನೆ! ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಇಡೀ ದಿನರಾತ್ರಿ ಕ್ಯೂ ನಲ್ಲಿ ನಿಲ್ಲಬೇಕು. ಅಯ್ಯಪ್ಪನ ದರ್ಶನ ಮಾಡಲು ನೂರಾರು ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಸಾಗಬೇಕು.............. ಅದೇ ಸಮಯದಲ್ಲಿ ಎಲ್ಲೋ ಒಬ್ಬ ಕಣ್ಮುಚ್ಚಿ ಕುಳಿತು ದೇವರನ್ನು ಕಾಣಲು ಹಂಬಲಿಸುತ್ತಾನೆ. ದೇವಾಲಯಗಳಿಗೆ ಹೋಗದೆ ಕಣ್ಮುಚ್ಚಿ ಕುಳಿತು ಅವನೊಳಗೆ ಭಗವಂತನನ್ನು ಕಾಣ ಬೇಕೆನ್ನುವವನು ದೇವಾಲಯಕ್ಕೆ ಹೋಗುವ ಜನರನ್ನು ಕನಿಷ್ಟವಾಗಿ ಕಾ ಣ ಬಾರದು. ಹಾಗೆಯೇ ಗುಡಿಯ ವಿಗ್ರಹದಲ್ಲಿ ಭಗವಂತನನ್ನು ಕಾಣುವವರೂ ಕೂಡ. ಇರಲಿ. ಭಗವಂತನಿಗೆ ಆಕಾರ ಕೊಡಲು ಸಾಧ್ಯವೇ? ಅವನು ನಿರಾಕಾರಿ. ಅವನನ್ನು ದೇವಾಲಯದಲ್ಲಿ ಬಂಧಿಸಲು ಸಾಧ್ಯವೇ? ಅವನು ಸರ್ವ ವ್ಯಾಪಿ. ಅವನಿಗೆ ದೂಪ,ದೀಪ, ನೈವೇದ್ಯ ಬೇಕೇ? ಎಲ್ಲವೂ ಅವನೇ ಕೊಟ್ಟಿದ್ದು. ಭಗವಂತನೆಂಬುದು ಒಂದು ನಿಯಂತ್ರಕ ಶಕ್ತಿ. ಇಡೀ ಬ್ರಹ್ಮಾಂಡವನ್ನು ನಿಯಂತ್ರಿಸುತ್ತಿರುವ ಆ ಶಕ್ತಿಗೆ ನಮ್ಮಿಂದ ಭಿಕ್ಷೆ ಬೇಕೇ? ಆದರೆ ನಾವು ಮಾಡುವ ಎಲ್ಲಾ ಕ್ರಿಯೆಗಳೂ ನಮ್ಮ ಆನಂದಕ್ಕಾಗಿ. ಆನಂದವೇ ದೇವರು. ದೇವರ ತಟ್ಟೆಗೆ ದಕ್ಷಿಣೆ ಹಾಕಲು ನಮಗೆ ಸಾಧ್ಯವೇ? ದೇವರಿಗೆ ಕವಚ ಮಾಡಿಸಿಕೊಟ್ಟೆ! ಗುಡಿಯ ಕಟ್ಟಿಸಿಕೊಟ್ಟೆ!! ಸೀರೆ ಕೊಟ್ಟೆ! ರೇಶ್ಮೆ ಪಂಚೆ ಉಡಿಸಿದೆ!! ಹೀಗೆಲ್ಲಾ ಹೇಳುವುದು ಎಷ್ಟು ಮಾತ್ರ ಸರಿ? ಎಂದು ಚಿಂತಿಸೋಣ. ಕೊಸರು: ಇವತ್ತು ಏಕಾದಶಿ ,ಎಂದೆ ಅಲ್ಲವೇ? ಇವರೆಲ್ಲಾ ಉಪವಾಸ ಹೋಗಿ ದೇವರ ದರ್ಶನ!? ಮಾಡಿ ಬಂದರು. ಆದರೆ "ಪುಳಿಯೋಗರೆ, ಪೊಂಗಲ್" ಮಾಡಿ ಅರ್ಚಕರು ಅಲ್ಲಿ ದೇವರಿಗೆ ನೈವೇದ್ಯ ಮಾಡಿದ್ದರು!! ಇವರಿಗೆಲ್ಲಾ ಪ್ರಸಾದ ಭರ್ಜರಿಯಾಗೇ ಸಿಕ್ಕಿತು.

Rating
No votes yet

Comments