ಕತೆ : ಸುನಂದ
'ಸುನಂದ ಮೇಡಮ್ , ಸಾರ್ ನಿಮ್ಮನ್ನು ಕರಿ ಅಂತ ಹೇಳಿದ್ರು' . ಕೆಲಸದಲ್ಲಿ ಮುಳುಗಿದ್ದ ಸುನಂದ ತಲೆ ಎತ್ತಿ ನೋಡಿದಳು. ಅಟೆಂಡರ್ ರಂಗಣ್ಣ , ಇವಳ ಮುಖ ನೋಡಿ ಹೊರಟು ಹೋದ
'ಏಕಿರಬಹುದು, ಬಾಸ್ ಕರೆಯುತ್ತಿರುವುದು. ತುಂಬಾ ದಿನವಾಯಿತು ಅವರು ಚೇಂಬರ್ ಒಳಗೆ ಕರೆದು ', ಎಂದು ನೆನೆಯುತ್ತ ಸುನಂದ ನಿದಾನಕ್ಕೆ ಎದ್ದು, ಅವಳ ಬಾಸ್ ಮಹೇಶ್ ಕುಳಿತ್ತಿದ್ದ ರೂಮಿನತ್ತ ಹೊರಟಳು. ಫ್ಲಾಪ್ ಡೋರನ್ನು ತಳ್ಳುತ್ತ ನಿದಾನಕ್ಕೆ ಒಳಗೆ ಹೋಗಿ ಎದಿರು ನಿಂತು.
'ಸಾರ್ ಕರೆದಿರ" ಎಂದಳು.
ಅವನು ಒಮ್ಮೆ ತಲೆ ಎತ್ತಿ ಇವಳತ್ತ ನೋಡಿದ ನಂತರ ಅವನ ಎದುರಿಗಿದ್ದ , ಕಂಪ್ಯೂಟರ್ ಪರದೆಯತ್ತ ಅವನ ದೃಷ್ಟಿ ತಿರುಗಿತು.
'ಈಗ ಹೇಗಿದ್ದೀರಿ" ಅವನ ಪ್ರಶ್ನೆ. ಮೊದಲಾದರೆ ಸುನಂದಳ ಮುಖ ನೋಡುವಾಗಲೆ ಅವನ ಮುಖವು ಅರಳುತ್ತಿತ್ತು, ಕುಳಿತುಕೊಳ್ಳಿ ಎಂದು ಎದುರಿನ ಖುರ್ಚಿ ತೋರಿಸುತ್ತಿದ್ದ. ಅವಳು ಅದನ್ನು ನೆನೆಯುತ್ತ
"ತೊಂದರೆ ಇಲ್ಲ ಚೆನ್ನಾಗಿದ್ದೇನೆ" ಎಂದಳು,
ಮಹೇಶ್.
"ನೋಡಿ, ನೀವು ತೊಂದರೆ ತೆಗೆದುಕೊಳ್ಳ ಬೇಡಿ, ಯಾವುದಕ್ಕು ಯೋಚಿಸಬೇಡಿ, ಎರಡು ಮೂರು ತಿಂಗಳು ರಜಾ ಹಾಕಿಬಿಡಿ, ನಾನು ಸ್ಯಾಂಕ್ಷನ್ ಮಾಡ್ತೀನಿ ,ಚಿಂತೆ ಬೇಡ ಅಪ್ ಕೋರ್ಸ್ ನೀವು ನಾರ್ಮಲ್ ಲೀವ್ ಅಪ್ಲೈ ಮಾಡಿ ಸಾಕು ಮೆಡಿಕಲ್ ಸಪೋರ್ಟ್ ಏನು ಬೇಕಿಲ್ಲ" ಎಂದ.
ಸುನಂದ ಕೊಂಚ ಆಶ್ಚರ್ಯದಿಂದಲೆ,
"ಬೇಡ ಸಾರ್, ಈಗ ರಜದ ಅಗತ್ಯವೇನಿಲ್ಲ, ಅಲ್ಲದೆ ನನಗೆ ಮನೆಯಲ್ಲಿ ಸುಮ್ಮನೆ ಕೂತಷ್ಟು ಹಿಂಸೆ, ಇಲ್ಲಾದರೆ ಕೆಲಸದಲ್ಲಿ ಕಾಲ ಕಳೆದುಹೋಗುತ್ತೆ' ಎಂದಳು,
ಅದಕ್ಕೆ ಮಹೇಶ, "ಅದೇನೊ ಸರಿಯೆ, ಆದರೆ ರಜಾ ಎನ್ನುವುದು ಇರುವುದೆ ಇಂತ ಸಮಯಕ್ಕೆ, ಅಲ್ಲವೆ, ಅರಾಮವಾಗಿ ಹಾಕಿ ಹೋಗಿ" ಎಂದ.
ಸುನಂದಳು "ಥ್ಯಾಂಕ್ಸ್ ಸರ್, ನನಗೆ ರಜಾ ಬೇಕೆನಿಸಿದರೆ ಖಂಡೀತಾ ಹಾಕ್ತೇನೆ," ಎನ್ನುತ್ತ ಹೊರಟಳು.
ಆದರೆ ಮಹೇಶ
"ಒಂದು ನಿಮಿಶ ಇವರೆ ನಿಲ್ಲಿ, " ಎಂದ, ಅವಳು ನಿಂತಂತೆ,
"ನೋಡಿ, ಸುನಂದರವರೆ, ನಿಮ್ಮ ಈ ಸ್ಥಿಥಿ ನಮಗು ಬೇಸರವೆ, ಆದರು ಏನು ಮಾಡುವುದು ಹೇಳಿ, ನೇರವಾಗಿ ಹೇಳುತ್ತಿದ್ದೇನೆ ಅಂತ ಬೇಸರಪಡಬೇಡಿ, ಅಪ್ ಕೋರ್ಸ್, ನಿಮ್ಮನ್ನು ನಾನು ಬಲವಂತ ಮಾಡಲು ಆಗಲ್ಲ ನೋಡಿ,ಆದರು, ನಾನು ನಿಮಗೆ ಪರಿಸ್ಥಿಥಿ ಹೇಳಲೆ ಬೇಕಲ್ವ, ಈಗ ಬೆಳಗ್ಗೆ, ನಿಮ್ಮ ಲೇಡೀಸ್ ಸ್ಟಾಫ್ ಎಲ್ಲ ಬಂದಿದ್ದರು, ಅವರು ಕೆಲವು ತೊಂದರೆ ಹೇಳ್ತಿದ್ದಾರೆ, ನಿಮ್ಮ ಬಗ್ಗೆಯೆ, ಅವರಿಗೆ ನಿಮ್ಮ ಬಗ್ಗೆ ಯಾವ ದ್ವೇಷವು ಇಲ್ಲ, ಆದರೂ, ಹ್ಯೂಮನ್ ಸೈಕಾಲಜಿ ನೋಡಿ, ಮತ್ತೆನಿಲ್ಲ, ಅವರಿಗೆಲ್ಲ ಚಿಂತೆ, ಅವರು ನಿಮ್ಮ ಜೊತೆಯೆ ರೆಸ್ಟ್ ರೂಮ್, ವಾಶ್ ರೂಮ್, ಮತ್ತೆ ಇರುವ ಪ್ರಿವಿಲೇಜ್ ನೆಲ್ಲ ಶೇರ್ ಮಾಡಬೇಕಲ್ವ, ಹಾಗಾಗಿ , ದೈ ಆರ್ ವರೀಡ್, ಅವರು ಮಾತನಾಡುವ ರೀತಿ ಗೊತ್ತಲ್ಲ, ನೀವು ರಜಾ ಹಾಕದಿದ್ದರೆ, ಅವರು ಎಲ್ಲರು ರಜಾ ಹಾಕಿ ಹೋಗ್ತೀವಿ ಅಂತ ಹೇಳಿದ್ದಾರೆ, ನಾನು ಎಲ್ಲ ಮ್ಯಾನೇಜ್ ಮಾಡ್ಬೇಕು ನೋಡಿ. ಅವರು ಹೇಳೋದು ತಪ್ಪು ಅಂತ ಹೇಳಕ್ಕಾಗಲ್ಲ.ಯಾರೆ ಆಗಲಿ ಹೆದರಿಕೆ ಸಾಮಾನ್ಯ ನೋಡಿ. ನೀವು ಕೆಲವು ಕಾಲ ಅಷ್ಟೆ, ರಜಾ ಹಾಕಿ ಬಿಡಿ. ನಂತರ ನಾರ್ಮಲ್ ಗೆ ಬಂದ ತಕ್ಷಣ , ನೀವು ರಿಪೋರ್ಟ್ ಮಾಡಿಕೊಳ್ಳ ಬಹುದು ಅಲ್ವ, ಸಾರಿ ತಪ್ಪು ತಿಳಿಯಬೇಡಿ, ನನಗು ಗೊತ್ತು ಈ ರೀತಿ ಎಲ್ಲ ಹೇಳುವುದು ತಪ್ಪು ಅಂತ"
ಮಹೇಶ ಹೇಳುತ್ತಿರುವಂತೆ, ಅವಳ ಬುದ್ದಿ ಮಂಕಾಯಿತು, ಏನಾಗುತ್ತಿದೆ. ಅಲ್ಲ ಕಡೆಯ ಪಕ್ಷ ನನ್ನ ಕ್ಲೋಸ್ ಫ್ರೆಂಡ್ ಶರ್ಮಿಳಾ ಆದರು ನನಗೆ ತಿಳಿಸಬಹುದಿತ್ತು, ಮತ್ತೆ ನೆನಪಾಯಿತು, ಬೆಳಗ್ಗೆ ಬಾಸ್ ಚೇಂಬರ್ ಒಳಗಿನಿಂದ ಎಲ್ಲರ ಜೊತೆ ಅವಳು ಹೊರಬಂದಿದ್ದನ್ನು ನೋಡಿದ ನೆನಪಾಯಿತು. ಸುನಂದಳಿಗೆ ಮತ್ತೇನು ತೋಚಲಿಲ್ಲ. ಮೌನವಾಗಿ ಎದ್ದು ಹೊರಬಂದಳು. ತನ್ನ ಜಾಗದಲ್ಲಿ ಸ್ವಲ್ಪ ಕಾಲ ಮೌನವಾಗಿ ಕುಳಿತಳು, ಕಡೆಗೆ ನಿರ್ದರಿಸಿದಳು, ತಾನೀಗ ರಜಾ ಹಾಕುವುದೆ ಸರಿ. ಟೇಬಲ್ ಡ್ರಾದಿಂದ, ಫಾರ್ಮ್ ಹೊರತೆಗೆದು ಅದನ್ನು ಬರ್ತಿ ಮಾಡಿದಳು. ಮರುದಿನದಿಂದ ಪೂರ ಮೂರು ತಿಂಗಳು, ರಂಗಣ್ಣನನ್ನು ಕೈ ಸನ್ನೆಯಿಂದ ಹತ್ತಿರ ಬಾ ಎಂದು ಕರೆದಳು,
" ಬಾಸ್ ಕೈಲಿ ಕೊಡು" ಎನ್ನುತ್ತ ಅವನ ಕೈಗೆ ತನ್ನ ರಜಾ ವಿನಂತಿಯ ಕಾಗದಗಳನ್ನು ತಲುಪಿಸಿದಳು. ನಿದಾನಕ್ಕೆ ಅಲ್ಲಿಂದ ಎದ್ದು ಹೊರಟಳು.
ಸಂಜೆ ಮನೆಗೆ ಹೋಗುವಾಗ ಅಪರೂಪಕ್ಕೊಮ್ಮೆ ಬಸ್ಸಿನಲ್ಲಿ ಸೀಟು ಸಿಗುವುದುಂಟು. ಅವಳು ಮತ್ತೊಂದು ವಿಷಯ ಗಮನಿಸಿದ್ದಳು, ಈ ನಡುವೆ ಕೆಲವೊಮ್ಮೆ ತಾನು ಕುಳಿತ ನಂತರ ತನ್ನ ಪಕ್ಕದಲಿ ಜಾಗವಿದ್ದರು ಅಲ್ಲಿ ಯಾರು ಬೇಗ ಕುಳಿತುಕೊಳ್ಳಲು ಬರುತ್ತಿರಲಿಲ್ಲ. ಹತ್ತಿರ ಬಂದವರು ಅವಳ ಮುಖವನ್ನೊಮ್ಮೆ ನೋಡುತ್ತ ಹಾಗೆ ನಿಂತು ಬಿಡುವರು.
ಈ ದಿನ ಅವಳ ಮನಸ್ಸು ಹಳೆಯ ನೆನಪಲ್ಲಿ ತೇಲುತ್ತಿತ್ತು. ಮದುವೆಯಾಗಿ ಸರಿಸುಮಾರು ಹದಿನೈದು ವರ್ಷ ಕಳೆದಿತ್ತು. ಪತಿ ನಟರಾಜ, ಹಾಗು ಮಗಳು ಶಿಲ್ಪರ ಪುಟ್ಟ ಕುಟುಂಬ. ಜೊತೆಯಲ್ಲಿ ಅತ್ತೆ , ಮಾವ ಹಾಗು ನಾದಿನಿ ಅನುರಾದ. ಆರು ಜನರಿದ್ದರು, ದೊಡ್ಡ ಮನೆಯಾದ ಕಾರಣ ತೊಂದರೆ ಏನಿರಲಿಲ್ಲ. ಮಾವನವರ ಪೆನ್ ಷನ್ ಹಣ, ತನ್ನ ಹಾಗು ಗಂಡನ ಸಂಬಳ. ಹೆಚ್ಚು ಖರ್ಚಿಲ್ಲದ ಸಂಸಾರ ಎಲ್ಲವು ನೆಮ್ಮದಿಯಾಗಿಯೆ ಇತ್ತು. ಅತ್ತೆಯ ಮಾತು ಒಂದು ರೀತಿ ಸುತ್ತ ಬಳಸು ಆದರು ತೀರ ಕೆಟ್ಟವರೇನಲ್ಲ. ಮಾವನವರಾದರೊ ನಿವೃತ್ತ ಮನದವರು. ದುಡಿಯುವ ಸೊಸೆ ತಾನಾದ್ದರಿಂದ ಅವಳಿಗೆ ಮನೆಯಲ್ಲಿ ಸಾಕಷ್ಟು ಬೆಲೆಯು ಇದ್ದಿತ್ತು.
ಮಗಳು ಶಿಲ್ಪ ಆಗಲೆ ಹೈಸ್ಕೂಲ್ ಸೇರಿದ್ದಳು. ಚಿಕ್ಕವಯಸಿನಿಂದಲು ತನ್ನ ಅಮ್ಮ ಕೆಲಸಕ್ಕೆ ಹೋಗುವದನ್ನು ಹೊಂದಿಕೊಂಡೆ ಬೆಳೆದವಳು ಅವಳು. ಆದರೆ ಮನೆಯಲ್ಲಿರುವಾಗ ಸದಾ ಅಮ್ಮನ ಸೆರಗೆ ಬೇಕು ಸದಾ ಸುತ್ತಿಕೊಂಡಿರಲು. ಮೊದಲಿಗೆ ಅತ್ತೆಯಾವರು ಅನ್ನುತ್ತಿದ್ದರು,
'ಬೆಳಗಿನಿಂದ ಸೇವೆಗೆ ನಾನು ಬೇಕು ಸಂಜೆ ಅಮ್ಮ ಬರುತ್ತಲೆ , ಅತ್ತ ಸೇರಿಬಿಡುತ್ತಾಳೆ, ಎಲ್ಲಿ ಹೋಗುತ್ತೆ, ತನ್ನದು ಅನ್ನುವ ಬಾಂದವ್ಯ'
ತನಗೋ ಬೆಳಗ್ಗೆ ಆಫೀಸಿಗೆ ಹೊರಡುವ ತರಾತುರಿ ಅ ನಡುವೆಯೆ
'ಅಮ್ಮ ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸು' , 'ಟವೆಲ್ ಕೊಡು' , 'ಪುಸ್ತಕ ಸಿಗುತ್ತಿಲ್ಲ' ಹೀಗೆ ಪ್ರತಿಯೊಂದಕ್ಕು ತನ್ನನ್ನು ಕರೆಯುವ ಮಗಳು,
'ನನ್ನ ಗಾಡಿ ಕೀ ಎಲ್ಲಿಟ್ಟೆ ನೋಡೆ' ಎನ್ನುವ ಗಂಡ.
"ಸುನಂದ ನಿನಗೆ ಲೇಟ್ ಆಗಲ್ವ ಬೇಗ ಸಿದ್ದ ಆಗಮ್ಮ" ಎನ್ನುವ ಅತ್ತೆ,
ಪೇಪರು ಹಿಡಿದು ದೀಕ್ಷೆಯಲ್ಲಿ ಕುಳಿತ ಮಾವ.
ಈಗೊಂದು ಆರು ತಿಂಗಳಿಂದ ಎಲ್ಲವು ಬದಲಾಗಿತ್ತು. ಮಗಳು ಅವಳನ್ನು ಕೂಗುವುದು ನಿಲ್ಲಿಸಿದ್ದಳು.
"ಅಜ್ಜಿ ಟವೆಲ್ " ಎಂದು ಕೂಗುತ್ತಿದ್ದಳು, ಒಮ್ಮೆ ತಾನು ತೆಗೆದುಕೊಂಡು ಹೋದರೆ, ಮುಖ ಸಪ್ಪೆಯಾಗಿ "ನೀನೆಕ್ಕಮ್ಮ ತರಲು ಹೋದೆ" ಅನ್ನುವಳು.
"ಅಮ್ಮ ನನ್ನ ಕರ್ಚೀಫ್ ನೋಡಿದೆಯ" ಎಂದು ಈ ವಯಸಿನಲ್ಲು ಅವರ ಅಮ್ಮನನ್ನು ಕೇಳುವ ಅವಳ ಗಂಡ.
ಅವಳಿಗೆ ಎಲ್ಲ ಅರ್ಥವಾಗುತ್ತಿತ್ತು. ಎಲ್ಲವು ಕಳೆದೆರಡು ವರ್ಷದಿಂದ ಪ್ರಾರಂಬವಾದ, ತನ್ನ ಜೀವನವನ್ನೆ ಬದಲಾಯಿಸಿದ, ಕಾಯಿಲೆ ಇದು. ಮೊದಲಲ್ಲಿ ಮೇಲು ಹೊಟ್ಟೆಯಲ್ಲಿ ಅದೇನೊ ನೋವು ಕಾಣಿಸಿಕೊಂಡಿತು. ತಾನೆ ಕೆಲವು ಮಾತ್ರೆ ತೆಗೆದುಕೊಂಡಳು. ನಂತರ ಅದೇನೊ ನೋವು ಶಮನಕ್ಕೆ ಬರುತ್ತಿಲ್ಲ ಅನಿಸಿದಾಗ ಡಾಕ್ಟರ್ ಹತ್ತಿರ ಹೋದಳು. ಪರೀಕ್ಷೆ ಮಾಡಿದ ಡಾಕ್ಟರ್ ಕೆಲವು ಸಾರಿ ಗ್ಯಾಸ್ಟ್ರಿಕ್ ಸಮಸ್ಯೆಗು ಇದೇ ರೀತಿ ತೊಂದರೆಯಾಗುವುದುಂಟು ಎನ್ನುತ್ತ ಕೆಲವು ಮಾತ್ರೆಗಳನ್ನು ನೀಡಿ. ಕಾಫಿ ಟಿ ಮುಂತಾದವುಗಳನ್ನು , ಅತಿಯಾದ ಎಣ್ಣೆ ಹಾಗು ಹಾಗು ಸಿಹಿಗಳನ್ನು ತೆಗೆದುಕೊಳ್ಳ ಬೇಡಿ ಎಂದ ತಿಳಿಸಿದರು. ಸ್ವಲ್ಪ ಕಡಿಮೆ ಆಯಿತು ಅನ್ನಿಸಿದ ನೋವು ಮತ್ತೆ ಮತ್ತೆ ಜಾಸ್ತಿಯಾಗುತ್ತಿತ್ತು. ಪದೆಪದೆ ಆಫೀಸಿಗು ರಜಾ ಹಾಕಬೇಕಾಗುತ್ತಿತ್ತು. ಡಾಕ್ಟರ್ ಗಳು ಸರಿಯಾಗಿ ನೋಡುತ್ತಿಲ್ಲ ಎಂದು ಗಂಡ ನಟರಾಜನಿಗೆ ಕೋಪ ಹಾಗಾಗಿ ಡಾಕ್ಟರ್ ಗಳನ್ನು ಹಲವು ಸಾರಿ ಬದಲಿಸಿದರು. ಎಕ್ಸ್ ರೆ , ಇ.ಸಿ.ಜಿ ಅಂತವೆಲ್ಲ ಆಯಿತು. ಸಮಸ್ಯೆ ಮಾತ್ರ ಪರಿಹಾರವಾಗಲಿಲ್ಲ. ಪದೆ ಪದೆ ಜ್ವರ ಬೇರೆ ಪ್ರಾರಂಬವಾಯಿತು. ಅದನ್ನು ಒಮ್ಮೆ ಜಾಂಡೀಸ್ ಎಂದು ಪರಿಗಣಿಸಿ ಅದಕ್ಕೆ ಬೇರೆ ಟ್ರೀಟ್ ಮೆಂಟ್ ಆಯಿತು. ಹೀಗೆ ಆರು ತಿಂಗಳು ಸರಿಯಾಗಿ ಕಾಯಿಲೆ ಏನು ಎಂದು ತಿಳಿಯದೆ ಪರದಾಡಿದರು.
ನಂತರ ಅವರ ಫ್ಯಾಮಿಲಿ ಡಾಕ್ಟರ್ ಗೀತ ಅವಳ ಬವಣೆಯನ್ನೆಲ್ಲ ಕಾಣುತ್ತ, ಮತ್ತೆ ಎಕ್ಸ್ ರೇ ಮುಂತಾದುವುಗಳನ್ನೆಲ್ಲ ತೆಗೆಸಿ , ಪರೀಕ್ಷಿಸಿ ದವರು ಏಕೊ, ಅದು ಕ್ಯಾನ್ಸರ್ ಇರಬಹುದೆ ಎಂದು ಅನುಮಾನಟ್ಟಾಗ ಮನೆಯವರೆಲ್ಲ ಬೆಚ್ಚಿಬಿದ್ದರು. ಮತ್ತೆ ಓಡಾಟ ಪ್ರಾರಂಬವಾಯಿತು. ಡಾ! ಗೀತರವರು ಅವಳನ್ನು ಕಿದ್ವಾಯ್ ಗೆ ರೆಫೆರ್ ಮಾಡಿದರು. ಸುನಂದಳಂತು ಎಲ್ಲ ದೇವರನ್ನು ಬೇಡುತ್ತ, ತನಗೆ ಕ್ಯಾನ್ಸರ್ ಅಂತ ಕಾಯಿಲೆಗಳು ಇಲ್ಲದಿರಲಿ, ಎಂದು ಪ್ರಾರ್ಥಿಸುತ್ತ, ಕಿದ್ವಾಯ್ ಗೆ ಪರೀಕ್ಷೆಗೆ ಹೋದಳು. ಆದರೆ ಜೀವನದ ನಿಯಮದ ಮುಂದೆ ಅವಳ ನಿರೀಕ್ಷೆಗಳೆಲ್ಲ ತಲೆಕೆಳಗಾದವು. ಡಾಕ್ಟರ್ ಗಳು ಅವಳಿಗೆ ಕ್ಯಾನ್ಸರ್ ಇರುವುದು ದೃಡಪಡಿಸಿದರು. ಅವರು ಹೇಳಿದಂತೆ ಅದು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್. ಅಲ್ಲದೆ ಅವಳ ಕಾಯಿಲೆಯನ್ನು ಕ್ಯಾನ್ಸರ್ ಎಂದು ಕಂಡುಹಿಡಿಯುವ ಹೊತ್ತಿಗೆ ಸಾಕಷ್ಟು ತಡವಾಗಿದೆ ಎಂದರು. ಮತ್ತೆ ಯಾವುದೆ ತಡ ಮಾಡದೆ ಅವಳ ಟ್ರೀಟ್ ಮೆಂಟ್ ಪಾರಂಬವಾಯಿತು. ಅವಳು ಆಗಲೆ ಕಡೆಯ ಹಂತದಲ್ಲಿದ್ದಳು. ಜೀವದಲ್ಲಿ ಉಳಿಯುವ ಅವಕಾಶ ಶೇಕಡ ೨೦ ಕ್ಕಿಂತ ಕಡಿಮೆ. ಅದನ್ನು ಕೇಳುವಾಗಲೆ ಅವಳ ಆತ್ಮಸ್ಥೈರ್ಯವೆಲ್ಲ ಉಡುಗಿ ಹೋಗಿತ್ತು. ಮಾನಸಿಕವಾಗಿ ಎಲ್ಲಕ್ಕು ಸಿದ್ದವಾದಳು.
ಕ್ಯಾನ್ಸರ್ ಸೆಲ್ ಗಳು ಅಕ್ಕಪಕ್ಕದ ಅಂಗಾಂಗಗಳಿಗು ವ್ಯಾಪಿಸಲು ಪ್ರಾರಂಬವಾಗಿತ್ತು. ಮೊದಲ ಹಂತದ ಅಪರೇಶನ್ ಮಾಡಲಾಯಿತು. ನಂತರೆ ಕೆಲವು ಕಾಲ ರೇಡಿಯೊ ಥೆರಫಿ ಸಣ್ಣ ಹಂತದಲ್ಲಿ ನಡೆಸಲಾಯಿತು. ಕಡೆಯಲ್ಲಿ ಕಿಮೋ ಥೆರೆಪಿ ಪಾರಂಬಿಸಿದಾಗ ಅವಳು ಹೈರಾಣವಾಗಿದ್ದಳು. ಹಾಗು ಅವಳು ಆಕೆ ಡಾಕ್ಟರ್ ಗಳನ್ನು ಕೇಳಿದಳು, ಇದೆಂತದು ಡಾಕ್ಟರ್ ಎಲ್ಲ ವಿದವಾದ ಟ್ರೇಟ್ ಮೆಂಟ್ ಕೊಡುತ್ತೀರಿ, ರೇಡಿಯೊ ಥೆರಪಿ ನಂತರ ಕಿಮೋ ಥೆರಪಿ ಬೇಡ ಅಲ್ಲವೆ ಎಂದು. ಆದರೆ ಡಾಕ್ಟರ್ ಗಳು ತುಂಬಾ ಗಂಭೀರವಾಗಿ ಚಿಂತಿಸಿ ತಮ್ಮ ನಿರ್ದಾರ ಕೈಗೊಂಡಿದ್ದರು. ಅವರಿಗೆ ಅವಳ ಜೀವೆ ಉಳಿಸುವದೊಂದೆ ಗುರಿ. ಉಳಿದ ಪರಿಣಾಮಗಳೆಲ್ಲ ಅವರು ಲಕ್ಷಿಸುತ್ತಿರಲಿಲ್ಲ.
ನೋವು ಅನ್ನುವುದು ಅವಳ ದಿನ ನಿತ್ಯದ ಹಾಡಾಯಿತು. ರೆಡಿಯೋ ಥೆರೆಪಿಯ ಹಂತದಲ್ಲಿ ಅವಳಿಗೆ ರಾತ್ರಿಗಳು ನಿದ್ದೆಯಿಲ್ಲದ ರಾತ್ರಿಗಳಾದವು. ರಾತ್ರಿ ಪೂರ್ತಿ ಅವಳು ಕೆಲವೊಮ್ಮೆ ಎದ್ದು ಕುಳಿತಿರುತ್ತಿದ್ದಳು. ಅವಳ ತಾಯಿ ಹೇಳುತ್ತಿದ್ದ ಮಾತುಗಳು ನೆನಪಾದವು. ಯಾವುದೆ ಕಾಯಿಲೆ ಇರುವಾಗ ಅದರ ನೋವುಗಳು ಸಾಮಾನ್ಯವಾಗಿ ರಾತ್ರಿಯ ವೇಳೆಗಳಲ್ಲಿ ಉಲ್ಬಣಗೊಳ್ಳುವುದು. ಹಗಳು ಬಿಸಿಲು ಏರಿದಂತೆ ಸ್ವಲ್ಪ ನೋವು ಶಮನ ಗೊಳ್ಳುವುದು. ಆ ಮಾತು ನಿಜವಾಗಿತ್ತು. ಹಗಲಿನ ನೋವು ರಾತ್ರಿ ದ್ವಿಗುಣಗೊಳ್ಳುತ್ತಿತ್ತು. ಸುಮ್ಮನೆ ರಾತ್ರಿ ಕುಳಿತವಳಿಗೆ ಯಾವುದೊ ಯೋಚನೆಗಳು ಆವರಿಸುತ್ತಿದ್ದವು.
ಒಮ್ಮೆ ಸರಿರಾತ್ರಿಯಲ್ಲಿ ಕುಳಿತವಳಿಗೆ ಬಸ್ಸಿನಲ್ಲಿ ನಡೆದ ಘಟನೆಯೊಂದು ನೆನಪಿಗೆ ಬಂದಿತು. ದೂರದಿಂದ ತನ್ನ ಪಕ್ಕದಲ್ಲಿ ಸೀಟು ಖಾಲಿ ಇರುವದನ್ನು ಗಮನಿಸಿದ ಯುವಕನೊಬ್ಬ ಆತುರವಾಗಿ ಬಂದು ಕುಳಿತ. ಸೆರಗು ಹೊದ್ದು ಕಿಟಕಿಯತ್ತ ಮುಖ ಮಾಡಿದ್ದ ತಾನು ಏನಕ್ಕೊ ಮುಖ ಒಳಗೆ ತಿರುಗಿಸಿದಾಗ ಆ ಯುವಕ ಗಾಭರಿಗೊಂಡವನಂತೆ ಎದ್ದು ನಿಂತು ಹಿಂದೆ ಹೋಗಿದ್ದ. ಒಮ್ಮೆಲೆ ಬಂದ ಆ ನೆನಪಿನಿಂದ ಅವಳಿಗೆ ಅದೇಕೊ ನಗು ಉಕ್ಕಿ ಉಕ್ಕಿ ಬಂದಿತು.
ಸರಿರಾತ್ರಿಯಲ್ಲಿ ಅವಳ ನಗುವಿನಿಂದ ರೂಮಿನಲ್ಲಿ ಮಲಗಿದ್ದ ಅವಳ ಅತ್ತೆ, ಮತ್ತೊಂದಡೆ ರೂಮಿನಿಲ್ಲದ್ದ ಅವಳ ಗಂಡ ನಟರಾಜ ಎದ್ದು ಬಂದಿದ್ದರು. ನಟರಾಜನಿಗೇಕೊ ಅನುಮಾನ, ಬಹುಷಃ ಕ್ಯಾನ್ಸರ್ ಸೆಲ್ ಗಳು ಅತಿಯಾಗಿ ಬೆಳೆದು ಬೆನ್ನುಮೂಳೆ ಹಾಗು ಮೆದುಳನ್ನು ಆಕ್ರಮಿಸಿರಬಹುದು ಅದಕ್ಕೆ ಹಾಗೆ ಆಡುತ್ತಿದ್ದಾಳೆ ಎಂದು. ಕಡೆಗೆ ಡಾಕ್ಟರ್ ಬಳಿ ಪ್ರಸ್ತಾಪ ಮಾಡಿ ಅವರ ಕೈಲಿ ಬೈಸಿಕೊಂಡಿದ್ದ.
ಥೆರಫಿಗಳ ಪರಿಣಾಮ ದೇಹದ ಮೇಲೆ ಕಾಣಲು ಪ್ರಾರಂಬವಾಯಿತು. ಮೊದಲಲ್ಲಿ ತಲೆಯ ಕೂದಲೆಲ್ಲ ಉದುರಲು ಪಾರಂಬವಾದಗ ಅವಳು ಹೆದರಿದಳು, ಆದರೆ ಡಾಕ್ಟರ್ ಗಳೆ ಹೇಳಿದರು, ಅದೆಲ್ಲ ಏನು ಮಾಡಲಾಗಲ್ಲ, ಅವೆಲ್ಲ ಪರಿಣಾಮಗಳು ನಿರೀಕ್ಷಿತವೆ. ಬೇಕಾದರೆ ಟೋಫನ್ ಧರಿಸಿ ಎಂದು. ಅವಳು ಅದನ್ನು ಮಾಡಿ ನೋಡಿದಳು. ಆದರೆ ಕಣ್ಣ ಮೇಲಿನ ಹುಬ್ಬು ಎಲ್ಲ ಉದುರಿ ಮುಖ ವಿಕಾರವಾಗಿ ಕಾಣಲು ಪ್ರಾರಂಬವಾಯಿತು, ಯಾರಿಗು ಮುಖ ತೋರಿಸಲು ನಾಚಿಕೆ ಎನಿಸುತ್ತಿತ್ತು. ಆದರೆ ಅವಳು ಎಲ್ಲವನ್ನು ಸಹಿಸಲೆ ಬೇಕಿತ್ತು.
ಕಿಮೋ ಥೆರಫಿಯ ಕಡೆಯ ಹಂತಕ್ಕೆ ಬರುತ್ತಿದ್ದಂತೆ , ಮತ್ತೊಂದು ಪರಿಣಾಮ ಕಾಣಿಸಿತು. ಮೊದಲು ಬೆನ್ನ ಮೇಲೆ ತೋಳ ಮೇಲೆ ಕಾಣಿಸಿಕೊಂಡ ಕೀವು ಗುಳ್ಳೆಗಳ್ಳು ಮುಖದ ಮೇಲೆಲ್ಲ ವ್ಯಾಪಿಸಿತು. ಕೆಲವು ದೊಡ್ಡ ದೊಡ್ಡ ಗಾಯದಂತೆ ಮುಖದ ಮೇಲೆಲ್ಲ ಕಾಣಿಸುತ್ತಿತ್ತು. ಸುನಂದ ಬಹಳ ಮುಜುಗರ, ದುಃಖ ಅನುಭವಿಸಿದಳು. ತನ್ನ ಮುಖ ನೋಡುವುದು ಅವಳಿಗೆ ಶಾಪದಂತೆ ಅನ್ನಿಸಿತ್ತು. ಕನ್ನಡಿ ಎದುರು ಹೋಗುವುದೆ ನಿಲ್ಲಿಸಿದ್ದಳು. ಅಷ್ಟಕ್ಕು ಕನ್ನಡಿ ಎದುರಿಗೆ ನಿಂತು ಅವಳು ಏನು ಮಾಡುವದಿತ್ತು. ಬಾಚಲು ತಲೆಯಲ್ಲಿ ಕೂದಲೆ ಇರಲಿಲ್ಲ. ವಿಕಾರ ಮುಖ.
ಡಾಕ್ಟರ್ ಗಳ ಬಳಿ ತನ್ನ ಅವಸ್ಥೆಯ ಬಗ್ಗೆ ಪ್ರಸ್ಥಾಪ ಮಾಡಿದಳು ಅವರು "ನೋಡಮ್ಮ ಇಂತವೆಲ್ಲ ಏನು ಮಾಡುವದಕ್ಕೆ ಆಗುವದಿಲ್ಲ, ಕ್ಯಾನ್ಸರ್ ಗೆ ಚಿಕಿತ್ಸೆ ಮಾಡುವಾಗ ಹೀಗೆಲ್ಲ ಅಡ್ಡಪರಿಣಾಮಗಳು ಆಗುತ್ತವೆ. ಅದು ಎಲ್ಲರಲ್ಲು ಒಂದೆ ರೀತಿ ಇರಲ್ಲ, ನಿನಗೆ ಹೀಗೆ ಆಗಿದೆ . ಏನು ಮಾಡುವುದು. ಆದರು ನಾವು ಇದನ್ನು ಪಾಸಿಟೀವ್ ಆಗಿಯೆ ನೋಡುತ್ತೇವೆ. ಇದನ್ನು ಒಳ್ಳೆಯ ಲಕ್ಷಣವೆಂದು ನಿರ್ದರಿಸುತ್ತೇವೆ" ಎಂದರು. ಅವಳಿಗೆ ಆಶ್ಚರ್ಯವಾಯಿತು,
"ಇದೆಂತದು ಡಾಕ್ಟರ್, ನನ್ನ ಈ ವಿಕಾರ ಮುಖ, ನವೆ, ನೋವು, ಇವೆಲ್ಲ ಒಳ್ಳೆಯ ಲಕ್ಷಣ ಹೇಗೆ ಆಗುತ್ತದೆ" ಅಂದಳು ನೋವಿನಿಂದ. ಅದಕ್ಕೆ ಡಾಕ್ಟರ್
"ಹಾಗಲ್ಲಮ್ಮ, ನಿನ್ನ ಮುಖ ಮೈ ಎಲ್ಲ ಕೀವು ಗುಳ್ಳೆಯಾಗುತ್ತಿದೆ ಅಂದರೆ, ನಿನ್ನ ದೇಹದೊಳಗಿನ ರೋಗ ವಿರೋದಿ ಶಕ್ತಿ , ಸಶಕ್ತವಾಗಿದೆ, ಯಾವುದೊ ಹೊರಗಿನ ಶಕ್ತಿಯ ವಿರುದ್ದ ಹೋರಾಡುತ್ತಿದೆ ಎಂತಲೆ ಲೆಕ್ಕ ಅಲ್ಲವೆ, ನೋಡು ಕಿಮೊಥೆರಪಿ ಯಿಂದ ಕ್ಯಾನ್ಸರ್ ಕಣಗಳ ಮೇಲೆ ಪರಿಣಾಮವಾಗಿದೆ, ಅದರ ಪರೀಕ್ಷೆಯಲ್ಲಿ ಗೊತ್ತಾಗುತ್ತಿದೆ, ಅದೀಗ ಹರಡುತ್ತಿಲ್ಲ, ಅಂದರೆ ಅದರ ಶಕ್ತಿ ಕುಂದುತ್ತಿದೆ, ಔಷದದ ಅಡ್ಡ ಪರಿಣಾಮ , ಕೂದಲು ಉದರುವುದು, ಹಾಗು ಕೀವು ಗುಳ್ಳೆಗಳು ಆಗುತ್ತಿದೆ, ಇವೆಲ್ಲ ಥೆರಪಿ ನಂತರ ತಾನಾಗೆ ಸರಿ ಹೋಗುತ್ತದೆ" ಎಂದರು.
ಸುನಂದ "ಹಾಗಿದ್ದಲ್ಲಿ ನನ್ನ ತಲೆಯ ಕೂದಲು ಮತ್ತೆ ಬೆಳೆಯುತ್ತದ ಡಾಕ್ಟರ್ " ಕೇಳಿದಳು, ಅಸಹಾಯಕತೆಯಿಂದ
ಅದಕ್ಕೆ ಡಾಕ್ಟರ್ "ಹೌದಮ್ಮ ಖಂಡೀತ, ಕ್ಯಾನ್ಸರ್ ಗೆ ಕೊಡುತ್ತಿರುವ ಔಷದಿ ಥೆರೆಪಿಗಳ ಕೋರ್ಸ್ ಮುಗಿಯಲಿ, ಎಲ್ಲವು ತಾನಾಗೆ ಕಂಟ್ರೋಲ್ ಗೆ ಬರುತ್ತದೆ, ಮುಖ್ಯವಾಗಿ ನಿನಗೆ ಬೇಕಾದುದ್ದು, ವಿಶ್ವಾಸ, ಆತ್ಮ ಶಕ್ತಿ" ಎಂದರು
ಅವಳಿಗೆ ಆತ್ಮಶಕ್ತಿಯೇನೊ ದೃಡವಾಗಿಯೆ ಇತ್ತು, ಆದರೆ ಅವಳಿಗೆ ನೋವು ಆಗುತ್ತಿದ್ದುದ್ದು, ಪರಿಚಿತರ ಪ್ರತಿಕ್ರಿಯೆಗಳಿಂದ. ಹೊರಗಿನವರು ಹೋಗಲಿ, ಮನೆಯಲ್ಲಿ ಮಗಳು, ಅತ್ತೆ ಗಂಡ ಇವರೆ ತನ್ನ ಜೊತೆ ಮಾತನಾಡುವಾಗ ಮುಜುಗರ ತೋರಿಸುತ್ತಿದ್ದರು. ಅವಳ ಮುಖ ನೋಡದೆ , ಬೇರೆ ಕಡೆ ಮುಖ ತಿರುಗಿಸುತ್ತಿದ್ದರು. ಆಫೀಸಿನಲ್ಲಿಯು ಅಷ್ಟೆ , ಎಷ್ಟೋ ವರ್ಷಗಳಿಂದ ಅವಳಿಗೆ ಸ್ನೇಹಿತರಾಗಿದ್ದವರೆಲ್ಲ ದೂರ ಉಳಿದರು. ಮಾತನಾಡಿದರು ಸಹ ,ಅಪರಿಚಿರರಂತೆ ವರ್ತಿಸುತ್ತಿದ್ದರು.
ಕಡೆಗೊಮ್ಮೆ ತನ್ನ ಅವಳ ಗಂಡ ನಟರಾಜನು ಪರೋಕ್ಷವಾಗಿ ಎಂಬಂತೆ ಅವಳ ಮೇಲೆ ಅರೋಪ ಹೊರಸಿದ, ಕ್ಯಾನ್ಸರ್ ವಂಶವಾಹಿಯಾಗಿ ಹರಿಯುವ ಕಾಯಿಲೆ, ಮೊದಲೆ ಅವಳ ವಂಶದಲ್ಲಿ ಯಾರಿಗಾದರು ಇದ್ದೀತು, ಆದರೆ ಅದನ್ನು ಮದುವೆಗೆ ಮೊದಲೆ ಹೇಳದೆ ತನಗೆ ಅವಳ ಅಪ್ಪ ಅಮ್ಮ ಮೋಸ ಮಾಡಿದ್ದಾರೆ ಎಂದು. ಮದುವೆಯಾದ ಹದಿನೈದು ವರ್ಷದ ನಂತರದ ಈ ಅರೋಪಕ್ಕೆ, ಈಗ ಬದುಕಿಯೆ ಇಲ್ಲದ ಅವಳ ಅಪ್ಪ ಅಮ್ಮನ ಮೇಲಿನ ಆರೋಪಕ್ಕೆ ಅವಳು ನಿರುತ್ತರಳಾಗಿ ಅಂತರಂಗದಲ್ಲಿಯೆ ರೋದಿಸಿದಳು.
ಈಗ ತನ್ನ ಸ್ನೇಹಿತೆಯರೆಲ್ಲ ಒಂದಾಗಿ ನಿಂತು, ಆಫೀಸಿನಲ್ಲಿ ಬಾಸ್ ಬಳಿ ಹೋಗಿ, ಇವಳು ತಮ್ಮ ಜೊತೆಯೆ ಇದ್ದರೆ, ಎಲ್ಲರು ಒಟ್ಟೆಗೆ ರಜಾ ಹೋಗುವದಾಗಿ ಹೇಳಿಬಂದಿದ್ದಾರೆ, ಆ ಗುಂಪಿನಲ್ಲಿ, ತನ್ನ ಬಹುಕಾಲದ ಗೆಳತಿ, ಶರ್ಮಿಳಾ ಅಂದರೆ ಶಮ್ಮಿ ಸಹಾ ಸೇರಿದ್ದಾಳೆ ಅನ್ನುವಾಗ ಅವಳಿಗೆ ದುಃಖವೆನಿಸಿತು. ಅವಳಿಗೆ ಎಷ್ಟೆ ದುಃಖವಾದರು ಕಣ್ಣಾಲ್ಲಿಯಲ್ಲಿ ನೀರು ಬರಲ್ಲ. ಅದು ಕೆಲವೊಮ್ಮೆ ಕ್ಯಾನ್ಸರ್ ನ ಅಡ್ಡಪರಿಣಾಮವಂತೆ. ಶಮ್ಮಿ ಹಲವು ಬಾರಿ ತನ್ನಿಂದ ಪಡೆದಿದ್ದ ನೆರವೆಲ್ಲ ನೆನಪಿಗೆ ಬಂದಿತು. ಕಡೆಗೆ ಹಾಳಾಗಲಿ, ಇವರ ಸಹವಾಸವೆ ಬೇಡ ಎನ್ನುತ್ತ , ಮೂರು ತಿಂಗಳಿಗೆ ರಜಾ ಬರೆದುಕೊಟ್ಟು ಬಂದಿದ್ದಳು. ಹಾಗೆಂದು ಅವಳು ಕೆಲಸಕ್ಕೆ ರಾಜಿನಾಮೆ ಕೊಡುವಂತಿಲ್ಲ. ಅವಳಿಗೆ ತನ್ನ ಇಲಾಖೆಯ ಬಗ್ಗೆ ಕೃತಜ್ಞತೆಯ ಭಾವವಿದೆ, ಅವಳ ಚಿಕಿತ್ಸೆಯ ಪ್ರತಿ ರೂಪಾಯಿಯನ್ನು ಅವಳ ಇಲಾಖೆ ಬರಿಸಿತ್ತು.
ಅವಳು ನಿರ್ದರಿಸಿದ್ದಾಳೆ, "ಈ ಋಣವನ್ನು ತಾನು ಬದುಕಿರುವವರೆಗು ಅಥವ ಕೆಲಸಕ್ಕೆ ಹೋಗುವವರೆಗು ಮರೆಯದೆ, ಇಲಾಖೆಗಾಗಿ ತಾನು ಕಷ್ಟಬಿದ್ದು ದುಡಿಯುವೆ ಎಂದು"
ಮನೆಯಲ್ಲಿ ಅತ್ತೆ ಹಾಗು ಗಂಡನಿಗೆ ವಿಷಯ ತಿಳಿಸಿದಳು ಸುನಂದ. ತಾನು ಮೂರು ತಿಂಗಳು ರಜಾ ಹಾಕಿರುವೆನೆಂದು.
ಗಂಡ ನುಡಿದ "ಹೋಗಲಿ ಬಿಡು, ಹೇಗು ಮೂರು ತಿಂಗಳಿಗೆ, ಅನು ಮದುವೆ ಇದೆ ಅದರ ಕೆಲಸಕ್ಕು ಸಹಾಯವಾಗುತ್ತೆ " ಎಂದು, ಆದರೆ ಅತ್ತೆ ಏಕೊ ಮಾತೆ ಆಡಲಿಲ್ಲ. ಮೌನವಾದರು. ಮಗಳು ಸರಿ ರೂಮು ಸೇರಿ ಓದಿಗೆ ಕುಳಿತರೆ ಯಾವ ವಿಷಯಕ್ಕು ಬರುತ್ತಿರಲಿಲ್ಲ.
ಮರುದಿನ ಅತ್ತೆ ಮಾಡಿದ ತಿಂಡಿ ತಿಂದು, ಡಬ್ಬಿಗೆ ಹಾಕಿ ಮಗಳು ಸ್ಕೂಲಿಗೆ ಹೊರಟಳು. ಸುನಂದ ಅತ್ತೆಗೆ ಸಹಾಯಕ್ಕೆ ಹೋದರೆ ಅವರು ನವಿರಾಗಿಯೆ
"ಇರಲಿ ಬಿಡಮ್ಮ, ನೀನು ಹೊರಗೆ ಇರು, ಏಕೆ ಕಷ್ಟ ಪಡುವೆ, ಸುದಾರಿಸಿಕೊ, ನಾನೆಲ್ಲ ಮಾಡುತ್ತೇನೆ" ಎಂದರು. ಸ್ವಲ್ಪ ಹೊತ್ತು ಕಳೆಯಿತು, ಪೇಪರ್ ಓದಿ ಮುಗಿಸಿ, ಗಂಡ ಎಲ್ಲಿ ಕಾಣುತ್ತಿಲ್ಲ ಎಂದು ಹುಡುಕಿ ಮಹಡಿಯ ಮೇಲಿನ ರೂಮಿಗೆ ಹೊರಟಳು. ಮೇಲೆ ಬಾಲ್ಕನಿಯಲ್ಲಿ ಯಾರೊ ಮಾತನಾಡುವುದನ್ನು ಕೇಳಿ ಅತ್ತ ತಿರುಗಿದಳು, ಅತ್ತೆಯ ದ್ವನಿ ಕೇಳಿಸುತ್ತಿತ್ತು
"ನಿನಗೆ ಅರ್ಥವಾಗಲ್ಲವೊ, ಮದುವೆಗೆ ಬರಿ ಮೂರು ತಿಂಗಳಿದೆ, ಇನ್ನು ಬೀಗರು , ಅಳಿಯ ಎಂದು ಅವರ ಓಡಾಟಗಳು ಇರುತ್ತವೆ, ಈಗಂತು ಅವರ್ಯಾರಿಗು ತಿಳಿಸದೆ ಸುಮ್ಮನಿದ್ದೇವೆ, ನಾಳೆ ಅವರುಗಳು ಇವಳ ಮುಖನೋಡಿ, ಕ್ಯಾನ್ಸರ್ ಎಂದು ಭಯ ಬಿದ್ದರೆ, ನಮ್ಮ ಅನುರಾಧಳ ಗತಿ ಏನೊ, ಮದುವೆಗೆ ಏನಾದರು ತೊಂದರೆಯಾದರೆ" . ಸುನಂದಳ ಗಂಡ ಹೇಳುತ್ತಿದ್ದ
"ಸರಿಯಮ್ಮ , ಆದರೆ ಅವಳಿಗೆ ಅವಳ ಮನೆಯಲ್ಲಿಯೆ ಇರಬೇಡ ಎಂದು ಹೇಳಲು ಅಗುತ್ತ ಹೇಳು, ಅಲ್ಲದೆ ಅನುರಾಧ ಮದುವೆಗೆ ಅವಳು ಐದು ಲಕ್ಷ ತನ್ನ ಪ್ರಾವಿಡೆಂಟ್ ಫಂಡ್ ನಿಂದ ಕೊಡುತ್ತೀನಿ ಎಂದು ಅಪ್ಪನ ಕೈಲಿ ಹೇಳಿದ್ದಾಳೆ, ಅರ್ಥ ಮಾಡಿಕೊ" ಎಂದ.
ಅದಕ್ಕೆ ಅತ್ತೆ "ಅದಕ್ಕು ಇದಕ್ಕು ಏನೊ ಸಂಬಂದ, ಮನೆಯ ಸೊಸೆಯಾಗಿ, ತನ್ನ ನಾದಿನಿ ಮದುವೆಗೆ ಸಹಾಯ ಮಾಡುವುದು ಅವಳ ಕರ್ತವ್ಯ ಮಾಡುತ್ತಾಳೆ ಬಿಡು. ನಾನಂತು ಅವಳಿಗೆ ಉಪಾಯವಾಗಿಯೆ, ಹೇಳುತ್ತೇನೆ, ನೀನು ಕೆಲಸಕ್ಕೆ ಹೋಗಮ್ಮ, ಎಂದು" ಎಂದರು. ಸುನಂದಳ ಗಂಡ ನಟರಾಜ
"ಸರಿ ನಿನ್ನ ಇಷ್ಟವಮ್ಮ ಏನಾದರು ಮಾಡಿಕೊ" ಎಂದು ಮಾತು ಮುಗಿಸಿದ. ಅಲ್ಲಿಂದ ನೇರ ಕೆಳಗೆ ಬಂದಳು ಸುನಂದ.
ಈಗವಳ ಮನಸ್ಸು ಮತ್ತೆ ವಿಹ್ವಲವಾಯಿತು.
ಇದೆಂತ ತನ್ನ ಬಾಳು. ಆಫೀಸಿಗೆ ಹೋದರೆ "ರಜಾ ಹಾಕಿ ಮನೆಯಲ್ಲಿರಿ " ಅಂತಾರೆ ,
ಮನೆಯಲ್ಲಿದ್ದರೆ " ಸುಮ್ಮನೆ ಆಫೀಸಿಗೆ ಹೋಗು ನೋವು ಮರೆಯುತ್ತೆ " ಅಂತಾರೆ,
ಯಾರಿಗು ಬೇಡವಾದ ತನ್ನ ಬದುಕಿನ ಬಗ್ಗೆ ಅವಳಿಗೆ ದುಃಖ ಉಕ್ಕಿ ಬಂದಿತು. ಸಮಯ ನೋಡಿದಳು , ಆಫೀಸಿಗೆ ಹೊರಡಲು ಇನ್ನು ಕಾಲವಿತ್ತು, ಸರಿ ಎಂದು ಸ್ನಾನಕ್ಕೆ ಹೋಗಿ ಸಿದ್ದವಾಗಿ, ಅತ್ತೆಯ ಮುಂದೆ ನಿಂತು
"ಅತ್ತೆ ನಾನು ಆಫೀಸಿಗೆ ಹೋಗುತ್ತೇನೆ" ಎಂದಳು. ಸುನಂದಳ ಅತ್ತೆಗೆ ಸ್ವಲ್ಪ ಆಶ್ಚರ್ಯವೆ ಆಯಿತು, ಆದರು ತೋರಗೊಡದೆ
"ಸರಿಯಮ್ಮ ನಾನು ಅದೆ ಅಂದುಕೊಂಡೆ, ಸುಮ್ಮನೆ ಮನೆಯಲ್ಲಿದ್ದರೆ ಇಲ್ಲದ ಯೋಚನೆಗಳು, ಕೆಲಸದಲ್ಲಿದ್ದರೆ ಮನಸ್ಸು ನಿರಾಳ, ಕುಳಿತಷ್ಟ ದೇಹಕ್ಕೆ ಕಾಯಿಲೆ ಜಾಸ್ತಿ ಅಂತಾರೆ, ನೀನು ಹೋಗಿ ಬಾ ಪರವಾಗಿಲ್ಲ, ಮನೆಯಲ್ಲಿ ಹೇಗೊ ನಡೆಯುತ್ತದೆ " ಎಂದರು.
ಅವಳು ಸರಿ ಎನ್ನುತ್ತ ಸಿದ್ದವಾಗಿ, ಹೊರಟು ಬಸ್ ಸ್ಟಾಪಿಗೆ ಬಂದಳು. ಸಾಮಾನ್ಯವಾಗಿ ವಿಧಾನಸೌದಕ್ಕೆ ಹೋಗುವ ಬಸ್ಸಿನಲ್ಲಿ ಅಷ್ಟೊಂದು ರಶ್ ಕಡಿಮೆ. ಕ್ಯೂನಲ್ಲಿ ನಿಂತು ಬಸ್ ಹತ್ತಿ ಕಿಟಕಿ ಪಕ್ಕ ಕುಳಿತಳು, ಆಫೀಸ ಇರುವುದು ಮಲ್ಟಿಸ್ಟೋರ್ಡ್ ಬಿಲ್ಡಿಂಗ್ ನಲ್ಲಿ, ಏಕೊ ಕಾರ್ಪೋರೇಶನ್ ದಾಟುವಾಗಲೆ ಅವಳಿಗೆ ಮಂಕು ಕವಿಯಿತು. ಮತ್ತೆ ಆಫೀಸಿನಲ್ಲಿ ಎಲ್ಲರನ್ನು ಎದುರಿಸಬೇಕು. ಯಾರಿಗು ತಾನು ಈಗ ಅಲ್ಲಿ ಹೋಗುವುದು ಇಷ್ಟವಿಲ್ಲ, ಕಾನೂನಿನಂತೆ ಅವರೇನು ಮಾಡಲಾರರು, ಆದರೆ ಮನಸ್ಸು? ಮುಂದಿನ ಸ್ಟಾಪಿನಲ್ಲಿ ಇಳಿದಳು. ನಿರ್ದರಿಸಿದಳು , ಈದಿನ ಆಫೀಸಿಗೆ ಹೋಗುವುದೆ ಬೇಡ ನಾಳೆ ನೋಡೋಣ ಎಂದು.
ಕೆಳಗೆ ಇಳಿದ ಸುನಂದ ಈಗ ಚಿಂತಿತಳಾದಳು, ಎತ್ತ ಹೋಗುವುದು , ಹುಡುಕಿ ಹೋಗುವಂತ ಸ್ನೇಹಿತರು ಯಾರು ಇಲ್ಲ, ಇದ್ದರು ಈ ಅವಸ್ಥೆಯಲ್ಲಿ ಬೇಡ. ಡಾಕ್ಟರ ಹತ್ತಿರ ಹೋಗಬಹುದು , ಆದರೆ ಅದೇಕೊ ಬೇಸರ, ಈ ದಿನ ಹೋಗುವ ಅಗತ್ಯವೇನಿಲ್ಲ. ಹಾಗೆ ಚಿಂತಿಸಿ ನಡೆಯುತ್ತ ಹೊರಟು ಅವಳಿಗೆ ಗೊತ್ತಿಲ್ಲದೆ ಕಬ್ಬನ್ ಪಾರ್ಕ ಒಳಗೆ ರಸ್ತೆಯಲ್ಲಿ ನಡೆಯುತ್ತ ಹೊರಟಳು, ಸ್ವಲ್ಪ ಸುತ್ತಾಡುವಾಗ ಸುಸ್ತಾಯಿತು. ಹಾಗೆ ಮರ ಒಂದರ ಕೆಳಗೆ ಇದ್ದ ಬೆಂಚಿನಲ್ಲಿ ಹೋಗಿ ಕುಳಿತಳು. ಏನು ಮಾಡುವುದು ಎಂಬ ನಿರ್ದಾರವಿಲ್ಲ. ಎಲ್ಲಿ ಹೋಗುವುದು ಎಂದು ತಿಳಿದಿಲ್ಲ. ಒಳಗಿನ ಔಷದಿಗಳ ಪ್ರಭಾವ, ಹಾಗು ಬಿಸಿಲಿನಲ್ಲಿ ನಡೆದ ಸುಸ್ತು ಕಣ್ಣು ಎಳೆಯುತ್ತಿತ್ತು. ಅವಳಿಗೆ ಗೊತ್ತಿಲ್ಲದೆ ತೂಕಡಿಕೆ ಬಂದಿತು.
ಹತ್ತಿರ ಯಾರೊ ಮಾತನಾಡುತ್ತ ಇದ್ದಂತೆ ಅನ್ನಿಸಿ ಕಣ್ಣು ಬಿಟ್ಟಳು . ಮುಂದೆ ತಾಯಿ ತಂದೆಯ ಜೊತೆ ಹೋಗುತ್ತಿದ್ದ, ಮಗು ಒಂದು ಅವರ ಅಮ್ಮನ ಹತ್ತಿರ ಗಲಾಟೆ ಮಾಡುತ್ತಿತ್ತು
"ಮಮ್ಮಿ, ನನಗೆ ದುಡ್ಡು ಕೊಡು,ಅಲ್ಲಿರುವ ಬೆಗ್ಗರ್ ಅಂಟಿಗೆ ಹಾಕಬೇಕು" ಎಂದು,
ಪದೆ ಪದೆ ಕಾಡುವ ಮಗುವಿನ ಕಾಟ ತಾಳದೆ , ಆಕೆ ತನ್ನ ಬ್ಯಾಗಿನಲ್ಲಿ ಹಣ ಹುಡುಕಿ ಆ ಮಗುವಿನ ಕೈಗಿತ್ತಳು. ಸುನಂದ ನೋಡುತ್ತಿರುವಂತೆ ಆ ಮಗು ನಿದಾನವಾಗಿ ಅವಳ ಕಡೆಗೆ ನಡೆದು ಬಂದಿತು,ಅವಳತ್ತ ನೋಡುತ್ತ
"ತಗೋ" ಎನ್ನುತ್ತ , ಒಂದು ರೂಪಾಯಿ ಕಾಯಿನ್ ಅನ್ನು ಅವಳತ್ತ ಹಾಕಿ ಅವಳ ಅಮ್ಮನತ್ತ ಓಡಿ ಹೋಯಿತು. ಸುನಂದಳಿಗೆ ಭೂಮಿ ಬಿರಿದಂತೆ ಅನಿಸಿತು, ಅಯ್ಯೊ ಇದೇನು ಆ ಮಗು ತನ್ನನ್ನು ಬಿಕ್ಷುಕಿ ಎಂದು ಭಾವಿಸಿದೆ. ಇದೆಲ್ಲಿಗೆ ಬಂದಿತು ತನ್ನ ಜೀವನ. ಈಗ ಕಾಯಿಲೆಯನ್ನು ಮೀರಿ ಕಣ್ಣ ನೀರು ಅವಳ ಕಣ್ಣಲ್ಲಿ ತುಂಬಿತು. ಆ ಮಗುವು ಹಾಕಿದ್ದನ್ನು ಕಂಡ ಮತ್ತೊಂದು ಮಗುವು ಅದೆ ರೀತಿ ಬಂದು ಒಂದು ರುಪಾಯಿಯನ್ನು ಅವಳ ಮುಂದೆ ಹಿಡಿಯಿತು. ಅವಳು ಆ ಮಗುವಿನ ಮುಖವನ್ನೆ ನೋಡಿದಳು.ಕೈ ಚಾಚಲಿಲ್ಲ. ಆ ಮಗುವಿಗೆ ಭಯವಾಗಿ , ರೂಪಾಯಿಯನ್ನು ಅವಳತ್ತ ಎಸೆದು ಓಡಿಹೋಯಿತು.
ಅಲ್ಲಿ ಎಷ್ಟು ಹೊತ್ತು ಕುಳಿತಳೊ ಸುನಂದ ಅವಳಿಗೆ ತಿಳಿಯದು. ಕಣ್ಣು ಮುಚ್ಚಿದವಳಿಗೆ ತನ್ನ ಹತ್ತಿರ ಯಾರೊ ಮಾತನಾಡುತ್ತಿರುವಂತೆ ಅನ್ನಿಸಿತು. ಕಣ್ತೆರೆದರೆ, ಯಾರೊ ಇಬ್ಬರು ಗಂಡಸರು, ಹಾಗು ಒಬ್ಬಾಕೆ ಹೆಂಗಸು. ತನ್ನ ಹತ್ತಿರ ನಿಂತು ತಮಿಳಿನಲ್ಲಿ,
" ಏ ನಡಿ ಹೋಗೋಣ ಇಲ್ಲಿ ಕುಳಿತು ಏನು ಮಾಡ್ತಿದ್ದಿ " ಎಂದ ಅವರಲ್ಲಿ ಒಬ್ಬ. ಅವಳಿಗೆ ಅವರು ಯಾರು ಎಂದು ಅರ್ಥವಾಗುತ್ತಿಲ್ಲ.
"ನೀವೆಲ್ಲ ಯಾರು" ಎಂದಳು ಕನ್ನಡದಲ್ಲಿ
"ಅದು ಆಮೇಲೆ ಗೊತ್ತಾಗುತ್ತೆ ನಡಿ" ಎಂದು ಬಲವಂತವಾಗಿ ಅವಳ ತೋಳಿಗೆ ಕೈಹಾಕಿ ಎಳೆಯುತ್ತ, ರಸ್ತೆಯತ್ತ ನಡೆದರು. ಅವಳಿಗೆ ಸಾಕಷ್ಟು ಗಾಭರಿಯಾಯಿತು, ಇದೇನು ನಡುರಸ್ತೆಯಲ್ಲಿ ಹೀಗೆ ಎಳೆದಾಡುತ್ತಿದ್ದಾರೆ, ಪೋಲಿಸರನ್ನು ಕರೆಯಲೆ ಎಂದುಕೊಂಡಳು. ಅವರಲ್ಲಿ ಒಬ್ಬ ಅವಳ ಹೆಗಲಿನಲ್ಲಿ ಇದ್ದ ವ್ಯಾನಿಟಿ ಬ್ಯಾಗಿಗೆ ಕೈ ಹಾಕಿದ. ಅವಳು ನಿರ್ದರಿಸಿದಳು, ಅನುಮಾನವಿಲ್ಲ ಕಳ್ಳರೆ,
"ಏಯ್ ಬಿಡೋ ಅದು ನನ್ನ ಬ್ಯಾಗು " ಎನ್ನುತ್ತ ಕೊಸರಾಡಿದಳು.
"ಇವಳದಂತೆ , ಇವಳದು, ಕಳ್ಳ ,, ಡೆ, ಹತ್ತೆ ವ್ಯಾನು ' ಎನ್ನುತ್ತ ಅವಳ ವ್ಯಾನಿಟಿ ಬ್ಯಾಗನ್ನು ಜೋರಾಗಿ ತಿರುಗಿಸಿ ಎಸೆದ. ಬ್ಯಾಗು ಗಾಳಿಯಲ್ಲಿ ತೇಲುತ್ತ ಹೋಗಿ ಮರದ ಬುಡದಲ್ಲಿ ಬಿದ್ದಿತು. ಅದರಲ್ಲಿ ಅವಳ ಪರ್ಸ್ ಹಾಗು ಮೊಬೈಲ್ ಇದ್ದಿತ್ತು. ಅವಳು ಕೊಸರಾಡಿದಾಗ, ಹಿಂದಿನಿಂದ ಒಬ್ಬ ಜೋರಾಗಿ ಅವಳ ತಲೆಯ ಮೇಲೆ ಪಟ್ ಎಂದು ಏಟು ಕೊಟ್ಟ,.ಅವಳಿಗೆ ತಲೆಯೆಲ್ಲ ದಿಂ ಎಂದಿತು. ಅವರು ನೂಕಿದಂತೆ, ಅವಳು ಅವರು ನಿಲ್ಲಿಸಿದ್ದ ವ್ಯಾನಿನ ಒಳಗೆ ನೂಕಲ್ಪಟ್ಟಳು.
ಹೊರಗಿನಿಂದ ಬಾಗಿಲು ಹಾಕಲ್ಪಟ್ಟಿತ್ತು. ಇದೇನು ಎಂದು ಅವಳು ನೆನಸುವಾಗಲೆ ವಾಹನ ಅಲ್ಲಿಂದ ಹೊರಟಿತು. ತನ್ನನ್ನು ಯಾರೊ ಕಿಡ್ನಾಪ್ ಮಾಡುತ್ತಿದ್ದಾರೆ ಯಾರ ಸಹಾಯಕ್ಕಾಗಿ ಕೂಗಲಿ ಅವಳಿಗೆ ತಿಳಿಯಲಿಲ್ಲ. ಅವಳು ಅದೆ ವ್ಯಾನಿನಲ್ಲಿ ತನ್ನೆ ಜೊತೆ ಇದ್ದ ಮತ್ತೆ ಮೂವರನ್ನು ಆಗಷ್ಟೆ ಗಮನಿಸಿದಳು. ಅವರೆಲ್ಲ ನೋಡುವಾಗಲೆ ತಿಳಿಯುತ್ತಿದೆ ತಿರುಪೆಯವರು ಎಂದು. ಅವಳಿಗೆ ಅರ್ಥವಾಗುತ್ತಿಲ್ಲ ಸಂದರ್ಭ. ಸ್ವಲ್ಪ ಹೊತ್ತಿನಲ್ಲೆ ವಾಹನ ಗೇಟ್ ಮೂಲಕ ಕಟ್ಟಡ ಒಂದನ್ನು ಪ್ರವೇಶಿಸಿತು, ಆಗ ಅವಳು ಅಲ್ಲಿದ್ದ ಬೋರ್ಡ್ ಗಳನ್ನು ಗಮನಿಸಿದಳು,
"ದೇವರೆ, ಇದು ಮಾಗಡಿ ರಸ್ತೆಯಲ್ಲಿನ, ಬೆಗ್ಗರ್ಸ್ ರಿಹೆಬಿಲೇಟಶನ್ ಸೆಂಟರ್, ಬಿಕ್ಷುಕರ ಪುನರ್ವಸತಿ ಕೇಂದ್ರ!! , ತನ್ನನ್ನೇಕೆ ಇಲ್ಲಿಗೆ ತರುತ್ತಿದ್ದಾರೆ " ಅಂದುಕೊಂಡವಳಿಗೆ , ಸ್ವಲ್ಪ ಕಾಲದಲ್ಲಿಯೆ ಪರಿಸ್ಥಿಥಿ ತಿಳಿಯಿತು, ಕಬ್ಬನ್ ಪಾರ್ಕಿನಲ್ಲಿ ಮರದ ಕೆಳಗೆ ಕುಳಿತಿದ್ದ ನನ್ನನ್ನು ಬಿಕ್ಷುಕಿ ಎಂದು ತಪ್ಪು ಭಾವಿಸಿ ತನ್ನನ್ನು ಇಲ್ಲಿಗೆ ಕರೆತಂದಿದ್ದಾರೆ. ರಸ್ತೆಯಲ್ಲಿ ಹುಚ್ಚು ನಾಯಿಗಳನ್ನು ವಾಹನಕ್ಕೆ ಹಿಡಿದು ತುಂಬುವ ರೀತಿ ತನ್ನನ್ನು ಹಿಡಿದು ಇಲ್ಲಿಗೆ ತಂದಿದ್ದಾರೆ, ತುಂಬಲು. ಸುನಂದಳಿಗೆ ಕಾಲ ಕೆಳಗಿನ ಭೂಮಿ ಕುಸಿಯುತ್ತಿರುವಂತೆ ಅನ್ನಿಸಿತು. ಅವಮಾನ ,ಅಪಮಾನ ನಾಚಿಕೆ ಅಸಹಾಯಕತೆ ಅವಳನ್ನು ಆವರಿಸಿತು.
-------------------------------------
....... ಮುಂದಿನ ಬಾಗದಲ್ಲಿ ಮುಕ್ತಾಯ
ಎರಡನೆ ಬಾಗ http://www.sampada…
Rating
Comments
ಉ: ಕತೆ : ಸುನಂದ
In reply to ಉ: ಕತೆ : ಸುನಂದ by bhalle
ಉ: ಕತೆ : ಸುನಂದ
In reply to ಉ: ಕತೆ : ಸುನಂದ by partha1059
ಉ: ಕತೆ : ಸುನಂದ
In reply to ಉ: ಕತೆ : ಸುನಂದ by Chikku123
ಉ: ಕತೆ : ಸುನಂದ
In reply to ಉ: ಕತೆ : ಸುನಂದ by partha1059
ಉ: ಕತೆ : ಸುನಂದ
In reply to ಉ: ಕತೆ : ಸುನಂದ by kavinagaraj
ಉ: ಕತೆ : ಸುನಂದ
ಉ: ಕತೆ : ಸುನಂದ
In reply to ಉ: ಕತೆ : ಸುನಂದ by maheshbakali
ಉ: ಕತೆ : ಸುನಂದ
ಉ: ಕತೆ : ಸುನಂದ
In reply to ಉ: ಕತೆ : ಸುನಂದ by makara
ಉ: ಕತೆ : ಸುನಂದ
ಉ: ಕತೆ : ಸುನಂದ
In reply to ಉ: ಕತೆ : ಸುನಂದ by Prakash Narasimhaiya
ಉ: ಕತೆ : ಸುನಂದ
ಉ: ಕತೆ : ಸುನಂದ
In reply to ಉ: ಕತೆ : ಸುನಂದ by Ambikapraveen
ಉ: ಕತೆ : ಸುನಂದ
In reply to ಉ: ಕತೆ : ಸುನಂದ by partha1059
ಉ: ಕತೆ : ಸುನಂದ
In reply to ಉ: ಕತೆ : ಸುನಂದ by Premashri
ಉ: ಕತೆ : ಸುನಂದ
ಉ: ಕತೆ : ಸುನಂದ
In reply to ಉ: ಕತೆ : ಸುನಂದ by Chitradurga Chetan
ಉ: ಕತೆ : ಸುನಂದ
ಉ: ಕತೆ : ಸುನಂದ
In reply to ಉ: ಕತೆ : ಸುನಂದ by swara kamath
ಉ: ಕತೆ : ಸುನಂದ
ಉ: ಕತೆ : ಸುನಂದ
In reply to ಉ: ಕತೆ : ಸುನಂದ by Jayanth Ramachar
ಉ: ಕತೆ : ಸುನಂದ
ಉ: ಕತೆ : ಸುನಂದ
In reply to ಉ: ಕತೆ : ಸುನಂದ by H A Patil
ಉ: ಕತೆ : ಸುನಂದ
ಉ: ಕತೆ : ಸುನಂದ :ಗುರುಗಳೆ
In reply to ಉ: ಕತೆ : ಸುನಂದ :ಗುರುಗಳೆ by venkatb83
ಉ: ಕತೆ : ಸುನಂದ :ಗುರುಗಳೆ
In reply to ಉ: ಕತೆ : ಸುನಂದ :ಗುರುಗಳೆ by Harish Anehosur
ಉ: ಕತೆ : ಸುನಂದ :ಗುರುಗಳೆ
ಉ: ಕತೆ : ಸುನಂದ