ಅತಿಥಿ ಸತ್ಕಾರ!

ಅತಿಥಿ ಸತ್ಕಾರ!

ಅಪ್ಪಯ್ಯ ಹೇಳಿದ್ದ ಕತೆ – ೦೪

ಅತಿಥಿ ಸತ್ಕಾರ!

ಬಹು ದಿನಗಳ ಹಿಂದೆ ಓರ್ವ ಹರಿದಾಸರು ಇದ್ದರು. ಅವರಿಗೆ ತಮ್ಮದೇ ಆದ ಯಾವು ಬಂಧು ವರ್ಗಗಳಿರಲಿಲ್ಲ. ಹಾಗಾಗಿ ಒಂದೂರಿನಿಂದ ಇನ್ನೊಂದು ಊರಿಗೆ ಪಯಣಿಸುತ್ತಾ, ಆ ಊರ ಶಾಲೆಗಳಲ್ಲೋ, ದೇವಸ್ಥಾನಗಳಲ್ಲೋ ಹರಿಕಥಾ ಕಾಲಕ್ಷೇಪ ನಡೆಸಿಕೊಡುತ್ತಿದ್ದರು. ಆಯಾ ಊರಿನ ಹಿರಿಯ ಗೃಹಸ್ಥರ  ಮನೆಗಳವರು ನೀಡುವ ಊಟೋಪಾಚಾರಗಳನ್ನು  ಸ್ವೀಕರಿಸುತ್ತಿದ್ದರು.


ಹತ್ತೂರುಗಳನ್ನು ಪದೇ ಪದೇ ಸುತ್ತಾಡುವ ಆ ಹರಿದಾಸರಿಗೆ, ತಮ್ಮ ಆದರಾತಿಥ್ಯ ಮಾಡುವ  ಅಂಥ ಪ್ರತಿ ಮನೆಯವರೊಂದಿಗೂ ಪರಿಚಯ ಬೆಳೆದುಬಿಟ್ಟಿತ್ತು. ಆದರೆ, ಒಂದು ಊರಿನ ಗೃಹಸ್ಥರ ವರ್ತನೆ ಅನ್ಯರ ಮನೆಯವರ ವರ್ತನೆಗಿಂತ ತುಂಬಾ ಭಿನ್ನವಾಗಿ ಕಂಡುಬರುತ್ತಿತ್ತು. ಎಲ್ಲಾ ಮನೆಗಳವರೂ ಊಟೋಪಚಾರ ನೀಡಿ ಕಳುಹಿಸುತ್ತಿದ್ದರಾದರೂ, ಆ ಮನೆಯವರೆಲ್ಲರ ಪರಿಚಯ ಹೆಚ್ಚಾಗಿ ಆಗುತ್ತಿರಲಿಲ್ಲ. ಅದರೆ ಆ ಒಂದು ಗೃಹಸ್ಥರ ಮನೆಯಲ್ಲಿ ಎಲ್ಲರ ಪರಿಚಯವೂ ಆಗಿಬಿಟ್ಟಿತ್ತು. ಅದಕ್ಕೆಲ್ಲಾ ಆ ಗೃಹಸ್ಥರೇ ಕಾರಣರಾಗಿದ್ದರು.

ಹರಿದಾಸರು ಆ ಗೃಹಸ್ಥರ ಮನೆಯೊಳಗೆ ಕಾಲಿಟ್ಟರೆ ಸಾಕು, ಆ ಗೃಹಸ್ಥರು ಮನೆಯ ಸದಸ್ಯರನ್ನೆಲ್ಲಾ ಕರೆದು ಪರಿಚಯ ಮಾಡಿಕೊಡುತ್ತಿದ್ದರು. ಅವರಲ್ಲಿ ಒಬ್ಬೊಬ್ಬರಿಗೂ ಒಂದೊಂದು ರೀತಿಯಲ್ಲಿ ಹರಿದಾಸರ ಊಟೋಪಚಾರಗಳಲ್ಲಿ ನೆರವಾಗುವಂತೆ ಆದೇಶ ನೀಡುತ್ತಿದ್ದರು. ಓರ್ವ ಸದಸ್ಯ ನೀರು ನೀಡಿದರೆ, ಇನ್ನೋರ್ವ ಒರೆಸುವ ಬಟ್ಟೆ ನೀಡಬೇಕಾಗುತ್ತಿತ್ತು, ಹೀಗೆ ಅತಿಥಿ ಸತ್ಕಾರದಲ್ಲಿ, ಆಲ್ಲಿ ಎಲ್ಲರಿಗೂ ಒಂದೊಂದು ಕೆಲಸ ಇದ್ದೇ ಇರುತ್ತಿತ್ತು. ಹರಿದಾಸರು ಮನೆಯಿಂದ ಹೊರಡಲು ತಯಾರಾಗಿ ನಿಂತಾಗ, ಆ ಗೃಹಸ್ಥರು ಮತ್ತೆ ಆ ಮನೆಯ ಸದಸ್ಯರನ್ನೆಲ್ಲಾ ಕರೆದುಕೊಂಡು, ಹರಿದಾಸರ ಜೊತೆಗೆ ಬೀದಿಯ ಕೊನೆಯ ತನಕ ನಡೆದು ಬಂದು, ನಮಸ್ಕರಿಸಿ ಬೀಳ್ಕೊಡುತ್ತಿದ್ದರು. ಹರಿದಾಸರಿಗೆ ನಮಸ್ಕಾರ ಮಾಡುವಂತೆ ಎಲ್ಲರಿಗೂ ಸೂಚಿಸುತ್ತಿದ್ದರು. ಅವರಲ್ಲಿ ಒಂದು ಮೂರು ವರುಷದ ಚಿಕ್ಕ ಮಗು ಕೂಡ ಇರುತ್ತಿತ್ತು. ಆ ಮಗು ಕೂಡ ಈ ನಿಯಮವನ್ನು ಪಾಲಿಸಬೇಕಾಗುತ್ತಿತ್ತು.

ಈ ವರ್ತನೆ ಬೇರೆ ಯಾರ ಮನೆಯಲ್ಲೂ ಕಾಣ ಸಿಗದೇ ಇದ್ದುದರಿಂದ, ಹರಿದಾಸರ ತೀರ ಕುತೂಹಲಕ್ಕೆ ಕಾರಣವಾಗಿತ್ತು. ಒಂದು ದಿನ ಹೀಗೆಯೇ ಬೀದಿಯ ಕೊನೆಯಲ್ಲಿ ಎಲ್ಲರಿಂದಲೂ ಬೀಳ್ಕೊಳ್ಳುವ ಸಂದರ್ಭದಲ್ಲಿ, ಆ ಗೃಹಸ್ಥರನ್ನು ಪ್ರಶ್ನಿಸುತ್ತಾರೆ. “ಮಹನೀಯರೇ, ತಾವು ಪ್ರತಿ ಬಾರಿಯೂ ನಾನು ಬಂದಾಗ ಎಲ್ಲರಿಗೂ ಪರಿಚಯಿಸುವುದು, ಹಾಗೂ ಎಲ್ಲರಿಂದಲೂ ನನ್ನ ಉಪಚಾರ ಮಾಡಿಸುವುದು ಮತ್ತು ಕೊನೆಗೆ ಎಲ್ಲರಿಂದಲೂ ನಮಸ್ಕಾರ ಮಾಡಿಸಿ ಬೀಳ್ಕೊಡುವುದು, ಇವೆಲ್ಲದರ ಹಿಂದಿನ ಉದ್ದೇಶವೇನು, ಮರ್ಮವೇನು ಎಂದು ನಾನು ಅರಿಯಬಹುದೇ?”

ಆಗ ಆ ಗೃಹಸ್ಥರು, “ಸ್ವಾಮೀ, ತಾವು ನಮ್ಮ ಅತಿಥಿಗಳು. ಅತಿಥಿಗಳು ದೇವರಿಗೆ  ಸಮಾನ ಅನ್ನುವುದನ್ನು ನಮ್ಮ ಹಿರಿಯರು ನಮಗೆ ಬೋಧಿಸಿದ್ದಾರೆ. ಆ ನಿಟ್ಟಿನಲ್ಲಿ,  ಅತಿಥಿಗಳ ಉಪಚಾರ ಮಾಡುವುದು  ನಮ್ಮ ಮನೆಯ ಸದಸ್ಯರೆಲ್ಲರ ಕರ್ತವ್ಯವಲ್ಲವೇ? ಇನ್ನು ಈ  ಚಿಕ್ಕ ಮಗುವನ್ನೂ ಬಿಡದೇ ಎಲ್ಲರನ್ನೂ ಈ ಬೀದಿಯುದ್ದಕ್ಕೂ ಕರೆದುಕೊಂಡು ಬರುವುದಕ್ಕೆ ಕಾರಣವೂ ಕೂಡ ಅದೇ ಆಗಿದೆ. ಮನೆಗೆ ಬಂದ ಅತಿಥಿಗಳನ್ನು, ಎಲ್ಲರೂ ಒಂದೇ ಮನಸ್ಸಿನಿಂದ, ಸ್ವಾಗತಿಸಿ, ಉಪಚರಿಸಿ, ಬೀಳ್ಕೊಡುವ ಅಗತ್ಯ ಇದೆಯೆನ್ನುವುದನ್ನು ನಾನು ನನ್ನ ಮನೆಯ ಸದಸ್ಯರೆಲ್ಲರಿಗೂ ಕಲಿಸಿಕೊಡಬೇಕಾದುದು ನನ್ನ ಕರ್ತವ್ಯ.  ನನ್ನ ಹಿರಿಯರು ನನಗೆ ಕಲಿಸಿದುದನ್ನು, ನಾನು ನನ್ನ ಕಿರಿಯರಿಗೆ ಕಲಿಸಿಕೊಡಬೇಕಾಗಿದೆ. ಹಾಗಾಗಿಯೇ ಈ ಪರಿಪಾಠ ಇಟ್ಟುಕೊಂಡು ಅದನ್ನು ಪಾಲಿಸುತ್ತಿದ್ದೇನೆ. ಮುಂದೆ ಅವರ ಜೀವನದಲ್ಲಿ ಅವರು ಇದೇ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿಕೊಂಡು, ಬೆಳೆಸಿಕೊಂಡು, ತಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುತ್ತಾ ಸಾಗಬೇಕಲ್ಲವೇ?” ಅಂದರು.

ಹರಿದಾಸರಿಗೆ ಅತೀವ ಆನಂದವಾಯ್ತು. “ಮಹನೀಯರೇ, ತುಂಬಾ ಸಂತಷವಾಯ್ತು.  ತಮ್ಮ ಈ ನೀತಿ ಪಾಠವನ್ನು ಇನ್ನು ಮುಂದೆ ನನ್ನ ಹರಿಕಥೆಗಳ  ಮುಖಾಂತರ ಈ ಹತ್ತೂರ ಜನರಿಗೆ ತಲುಪಿಸುತ್ತೇನೆ” ಎಂದು ನುಡಿದು, ನಮಸ್ಕರಿಸಿ, ಬೀಳ್ಕೊಂಡು, ಮುಂದಿನೂರಿಗೆ ಸಾಗಿದರು.

*****

Rating
No votes yet

Comments