ಪೇಟೆಗೆ ಬಂದ ಹಳ್ಳಿ ಹೈದನ ಬಾಳು

ಪೇಟೆಗೆ ಬಂದ ಹಳ್ಳಿ ಹೈದನ ಬಾಳು

ಇಂದಿನ ಬೆಳಗಿನ (14-7-2012) ಹೊಸ ದಿಗಂತ ಪೇಪರ್ ಓದುತ್ತಿದ್ದಂತೆ ಮನಸ್ಸಿಗೆ ತುಂಬಾ ಬೇಸರವೆನಿಸಿ ಇದನ್ನು ಬರೆಯಲು ಕುಳಿತೆ.  ಏಕೋ ಏನು ಹೇಳಬೇಕೆಂದೇ ತೋಚುತ್ತಿಲ್ಲ.  ಕಾರಣ ಇದೇ ಸಂಪದದಲ್ಲಿ 30-8-2010ರಂದು ಚಾನೆಲ್ ವೊಂದರಲ್ಲಿ ಬರುತ್ತಿದ್ದ ಹಳ್ಳಿ ಹೈದ ಪೇಟೆಗೆ ಬಂದ ರಿಯಾಲಿಟಿ ಷೋ ಬಗ್ಗೆ ಅದೇ ಹಣೆ ಬರಹದೊಂದಿಗೆ ಲೇಖನವೊಂದನ್ನು ಬರೆದಿದ್ದೆ.  

ಅದರಲ್ಲಿ ಭಾಗವಹಿಸಿದ ಸ್ಫರ್ಧಿಗಳ ಮುಂದಿನ ಭವಿಷ್ಯ ಏನಾಗಬಹುದು ಮತ್ತು ಅದರ ಜವಾಬ್ದಾರಿ ಹೊರುವವರಾರು?  ಈ ಬಗ್ಗೆ ಯೋಚಿಸಬೇಡವೇ ಎಂಬುದೇ ಆ ಲೇಖನದ ಸಾರಾಂಶ.  ಅಂದು ನಾನು ಯೋಚಿಸಿದಂತೆ ಅದೇ ರಿಯಾಲಿಟಿ ಷೋ ದಲ್ಲಿ ಭಾಗವಹಿಸಿ ಬಹುಮಾನವನ್ನೂ ಪಡೆದುಕೊಂಡ ಹೈದನು ಇಂದು ಮಾನಸಿಕ ಆಸ್ಪತ್ರೆಯಲ್ಲಿ ಕುಳಿತಿದ್ದ ಚಿತ್ರದೊಂದಿಗೆ . ಅವನ ತಂದೆ ತಾಯಿಯರ ಅಳಲು ಇತ್ಯಾದಿ ಗಳು ಇಂದಿನ ಹೊಸದಿಗಂತದ ಒಳ ಪುಟದಲ್ಲಿ ಪ್ರಕಟವಾಗಿದೆ.


ಅಂದಿನ ಲೇಖನದಲ್ಲಿಯೇ ಕೊನೆಯ ಸಾಲಾಗಿ ಹೀಗೆ ಬರೆದಿದ್ದೆ "ಗುಡ್ಡ ಸುಟ್ಟಮೇಲೆ ದರಕು ಒಬ್ಬಳಿಸುವುವ ಬದಲು ಚಿಂತಿಸಿ ಹೆಜ್ಜೆ ಇಡಬಾರದೇ?  ನಿಮ್ಮೆಲ್ಲರ ಅಭಿಪ್ರಾಯ? ??????"  ಈ ಬಗ್ಗೆ ಕೆಲವರು ತಮ್ಮ ಪ್ರತಿಕ್ರಿಯೆಯನ್ನೂ ಬರೆದಿದ್ದರು.  ಇದು ಕೇವಲ ಅರಣ್ಯ ರೋದನವಾಯಿತಷ್ಟೆ.  ಈ ಹೈದರಿಗೆ ಗೆದ್ದರೆ ಹಣ ಬರುತ್ತದೆ ಸರಿ ಆದರೆ ಇದರಿಂದ ಕುಟುಂಬಕ್ಕೆ - ಸಮಾಜಕ್ಕೆ ಒಳಿತಾಗಬಹುದೇ? ಈ ಹೈದರು ಮಾನಸಿಕ ಸ್ವಾಸ್ಥ್ಯ ಇಟ್ಟುಕೊಳ್ಳಬಲ್ಲರೇ? ಇದಕ್ಕೆ ಬಹುಮಾನ ಗೆದ್ದ ಒಬ್ಬ ಹೈದ ಉತ್ತರ ನೀಡಿದಂತಾಗಿದೆ.  ಉಳಿದವರ ಪರಿಸ್ಥಿತಿ ಇನ್ನೂ ಬೆಳಕಿಗೆ ಬರಬೇಕಾಗಿದೆ ಅಷ್ಟೆ. ಉಳಿದವರು ಹೇಗೇ ಇದ್ದರೂ  ಅವರಿಗೆ ಈ ಗ್ಲಾಮರ್ ಇಲ್ಲದ ಕಾರಣ  ಪರಿಸ್ಥಿತಿ ಬೆಳಕಿಗೆ ಬರಲಾರದು.  ಅದು ಅಲ್ಲಿಯ ಸ್ಥಳೀಯರನ್ನೇ ಕೇಳಿ ನೋಡಬೇಕಷ್ಟೆ.


ಇನ್ನಾದರೂ ಸಮಾಜದ ಕನ್ನಡಿಗಳಾದ  ಚಾನೆಲ್ ಗಳು ಹಣದಾಸೆಯಿಂದ ಚಲ್ಲಾಟ ಬಿಟ್ಟು ತಮ್ಮ ಸಾಮಾಜಿಕ ಜವಾಬ್ದಾರಿಯ ಬಗ್ಗೆ  ಒಂದು ಗಂಭೀರ ಚಿಂತನೆ ನಡೆಸಲಿ ಎಂಬುದೇ  ನನ್ನ ಆಶಯ ಅಷ್ಟೆ.

 ಈ ಹಿಂದೆ ಬರೆದ ಲೇಖನದ ಕೊಂಡಿ: http://sampada.net/forum/27694

Comments