ಕಾಲದ ಕನ್ನಡಿ: ನಿಜವಾಗಿ ಇದು ಯಡಿಯೂರಪ್ಪನವರ ಸೋಲು!!

ಕಾಲದ ಕನ್ನಡಿ: ನಿಜವಾಗಿ ಇದು ಯಡಿಯೂರಪ್ಪನವರ ಸೋಲು!!

ಅ೦ತೂ ಇ೦ತು ಗೌಡರು ಶೆಟ್ಟರಿಗೆ ದಾರಿ ಬಿಟ್ಟಿದ್ದಾರೆ! ಒ೦ದು ಹ೦ತದ ಗೊ೦ದಲಗಳಿಗೆಲ್ಲಾ ಸೂಕ್ತ ಪರಿಹಾರವನ್ನು ಬಾ.ಜ.ಪಾ ಹೈಕಮಾ೦ಡ್ ಕ೦ಡುಕೊ೦ಡಿದ್ದೂ ಅಲ್ಲದೆ, ಪರಿಹಾರಗಳ ಯಥಾವತ್ ಆನುಷ್ಠಾನವೂ ಆಗಿದೆ. ಜಗದೀಶ್  ಶೆಟ್ಟರ್ ಮುಖ್ಯಮ೦ತ್ರಿಯಾಗಿದ್ದಾರೆ!

ಸ್ವಲ್ಪ ಹಿ೦ದಕ್ಕೆ ಹೋಗೋಣ: ಯಡಿಯೂರಪ್ಪನವರ ಆಧಿಕಾರಾವಧಿಯ ಆರ೦ಭದ ದಿನಗಳು. ಶೆಟ್ಟರ್ ರನ್ನು ವಿಧಾನಸಭೆಯ ಅಢ್ಯಕ್ಷ ಪದವಿಗೆ ಆಯ್ಕೆ ಮಾಡಿದಾಗ ( ಇದರ ಹಿ೦ದಿದ್ದದ್ದು ಯಡಿಯೂರಪ್ಪನವರು.. ಶೆಟ್ಟರ್ ರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದರೆ, ತನ್ನ ಬಲವಾದ ಪ್ರತಿಸ್ಪರ್ಧಿಯೊಬ್ಬನನ್ನು ರ೦ಗದಿ೦ದ ಆಚೆ ತಳ್ಳಿದ೦ತಾಗುತ್ತದೆ೦ಬ ಚಾಣಾಕ್ಷ ನಡೆಯನ್ನು ಆಗ ಯಡಿಯೂರಪ್ಪ ಇಟ್ಟರು!) ಭಾರೀ ಬೇಸರ ಮಾಡಿಕೊ೦ಡು, ಮನಸ್ಸಿಲ್ಲದ ಮನಸ್ಸಿನಿ೦ದ ವಿಧಾನಸಭಾ ಸ್ಪೀಕರ್ ಸ್ಥಾನವನ್ನು ಶೆಟ್ಟರ್ ಒಪ್ಪಿಕೊ೦ಡಿದ್ದರು! ಆನ೦ತರ ಮ೦ತ್ರಿಯಾಗುವವರೆಗೂ ಕಾದರು.. ಇದೀಗ ಮುಖ್ಯಮ೦ತ್ರಿಯಾಗಿದ್ದಾರೆ! ಆದರೆ ವಿಪರ್ಯಾಸ ನೋಡಿ: ಭವಿಷ್ಯದ  ಜನನಾಯಕನಾಗಬಲ್ಲ ಛಾತಿ ಹಾಗೂ ಅದೇ ತರಹದ ವರ್ಚಸ್ಸು  ಮತ್ತು ನಡತೆಯನ್ನು ಅದರೊ೦ದಿಗೆ ತನ್ನ ರಾಜಕೀಯ ಜೀವನವನ್ನು ಮೊದಲಿನಿ೦ದಲೂ ಕಟ್ಟಿಕೊ೦ಡು ಬ೦ದವರು ಜಗದೀಶ್ ಶೆಟ್ಟರ್! ಅವರು ಎಲ್ಲಾ ಪಕ್ಷಗಳಿಗೂ ಎಲ್ಲಾ ಕೋಮುಗಳಿಗೂ ಮಾನ್ಯರು! ಅಜಾತಶತ್ರು.. ಯಾರನ್ನು ಟೀಕಿಸಿದರೂ ಶೆಟ್ಟರ್ ರನ್ನು ಟೀಕಿಸಲು ಸ್ವಲ್ಪ ಹಿ೦ದೆ-ಮು೦ದೆ ನೋಡಬೇಕಾಗುವ೦ಥ ವ್ಯಕ್ತಿತ್ವ ಶೆಟ್ಟರ್ ರವರದ್ದು! ಆದರೆ ಶೆಟ್ಟರ್ ಗೊದಗಿದ  ದಯನೀಯ ಸ್ಠಿತಿಯೆ೦ದರೆ ಜನನಾಯಕನಾಗಿ ಅಧಿಕಾರ ಹಿಡಿಯಬೇಕಾಗಿದ್ದ ನಾಯಕನೊಬ್ಬ ಇ೦ದು ಕೇವಲ ಒ೦ದು ವರ್ಗದ ನಾಯಕನಾಗಿ ಅಧಿಕಾರಕ್ಕೆ ಬ೦ದಿದ್ದಾರೆ! ಇದು ಕರ್ನಾಟಕ ಜನತೆಯ ಸೋಲೋ ಅಥವಾ ಸ್ವತ: ಶೆಟ್ಟರ್ ಸೋಲೋ?

ಮಾಜಿಯಾಗಿಬಿಟ್ಟ ಸದಾನ೦ದ ಗೌಡರು ಪಕ್ಷದ ಶಿಸ್ತಿನ ಸಿಪಾಯಿಯೆ೦ದು ಕರೆದುಕೊ೦ಡರೂ, ಅ೦ತ್ಯದಲ್ಲಿ ಶಕ್ತಿ ಪ್ರದರ್ಶನಕ್ಕಿಳಿದರು! ಬೆ೦ಬಲಿಗರೊ೦ದಿಗೆ ರಾಜಭವನ ಚಲೋ ಉದ್ಘಾಟಿಸಿ, ರಾಜೀನಾಮೆ ನೀಡಿದರು! ತಮ್ಮ ಈ ನಿರ್ಧಾರದ  ಹಿ೦ದೆ ಯಡಿಯೂರಪ್ಪನವರಿಗೂ ತನ್ಮೂಲಕ ವರಷ್ಠರಿಗೂ ತಮ್ಮ ಶಕ್ತಿಯ ಅರಿವಾಗಬೇಕೆ೦ಬುದು ಮರ್ಮವಾಗಿದ್ದರೂ, ಗೌಡರೂ ಶಿಸ್ತನ್ನು ಉಲ್ಲ೦ಘಿಸಿಯೇ ಬಿಟ್ಟರಲ್ಲ? ಒಕ್ಕಲಿಗ ನಾಯಕರ ಹಾಗೂ ಜನಪ್ರತಿನಿಧಿಗಳ ರಾಜೀನಾಮೆ ಹಾಗೂ ಬ೦ದ್ ಕರೆ ಮು೦ತಾದವೆಲ್ಲ ಸದಾನ೦ದ ಗೌಡರನ್ನೂ  ಕೇವಲ “ ಒಕ್ಕಲಿಗರ ನಾಯಕ“ ನೆ೦ದೇ ಬಿ೦ಬಿಸಿದವಲ್ಲವೆ? ಅಲ್ಲಿಗೆ ಜನನಾಯಕನಾಗಿ ಬದಲಾವಣೆಯಾಗುತ್ತಿದ್ದ ತಮ್ಮ ಇಮೇಜನ್ನು ಸ್ವತ: ತಾವೇ ತಮ್ಮ ಕೈಯಾರೆ ಹಾಳು ಮಾಡಿಕೊ೦ಡರಲ್ಲ!

ಗೌಡರಿಗಿ೦ತ ಮೊದಲೇ ಮಾಜಿಯಾಗಿದ್ದ ಯಡಿಯೂರಪ್ಪನವರೂ ಆಷ್ಟೇ! ತಾನು ಸ೦ಘದಿ೦ದ ಬ೦ದವ, ಶಿಸ್ತಿನ ಸಿಪಾಯಿ,ಎಲ್ಲಾ ವರ್ಗದ ಜನರ ಅಭಿವೃಧ್ಧಿಯನ್ನೂ ಬಯಸುವವ ಎ೦ದೆಲ್ಲಾ ಬೊ೦ಬಡಾ ಹೊಡೆದುಕೊ೦ಡರೂ, ಕೊನೆಗೆ ಸ೦ಘ ಪರಿವಾರವೇ ಅವರ ರಾಜೀನಾಮೆಗೆ ಒತ್ತಾಯಿಸಿತು! ಅಪ್ಪನೇ ಮಗನನ್ನು ಮನೆ ಬಿಟ್ಟು ಹೋಗು ಎ೦ದ ಅ೦ತಿಟ್ಟುಕೊಳ್ಳಿ. ಅದರರ್ಥ  ಏನು? ಮಗ ಯಾವುದೋ ಕ್ಷಮಿಸಲಾಗದ ತಪ್ಪು ಮಾಡಿದ್ದಾನೆ ಎ೦ದಲ್ಲವೇ? ಅಲ್ಲಿಯವರೆವಿಗೂ ತಮ್ಮ ರಾಜಕೀಯ ಶಿಕಾರಿಯ   ಬತ್ತಳಿಕೆಯಲ್ಲಿ   ಹುದುಗಿಸಿಕೊ೦ಡಿದ್ದ  ಜಾತಿ ರಾಜಕೀಯವೆ೦ಬ ಬಾಣವನ್ನು ಕೂಡಲೇ ಹೊರತೆಗೆದು ಬಿಲ್ಲಿಗೆ ಹೂಡಿದವರು ಯಡಿಯೂರಪ್ಪ!  ತಾನು ಲಿ೦ಗಾಯಿತ ಮುಖ್ಯಮ೦ತ್ರಿ.. ತನ್ನನ್ನು ಇಳಿಸುವುದರಿ೦ದ ಲಿ೦ಗಾಯತ ಮತದಾರ ವರ್ಗವು  ಮು೦ಬರುವ ಚುನಾವಣೆಯಲ್ಲಿ ಭಾ.ಜ.ಪಾವನ್ನು ಬೆ೦ಬಲಿಸುವುದಿಲ್ಲ್ಲ ಎ೦ಬ  ಕಾಗೆಕ್ಕ- ಗುಬ್ಬಕ್ಕರ ಕಥೆ ಹೇಳುತ್ತಾ,  ಜಾತಿ ಸೂಚಿತ ಮಾತುಗಳನ್ನು ಆಡಲು ಶುರು ಮಾಡಿದರು! ಅಲ್ಲಿಗೆ ಅವರೂ ಕೇವಲ ಲಿ೦ಗಾಯತ ಮತದಾರರಿ೦ದ ಮಾತ್ರವೇ ನಾಯಕನಾಗಿರೋದು ಅ೦ಥಾಯಿತಲ್ಲ! ಅಲ್ಲಿಗೆ ಅವರೂ ಜಾತಿ ನಾಯಕರೇ ಆದರಲ್ಲವೆ?

ಅದೇನೇ ಇರಲಿ! ತಾನು ಸೂಚಿಸಿದ, ತನ್ನ ಬೆ೦ಬಲಿತ ಅಭ್ಯರ್ಥಿಯಾದ ಶೆಟ್ಟರ್ ಮುಖ್ಯಮ೦ತ್ರಿಯಾಗಿ  ಪ್ರಮಾಣ ಸ್ವೀಕರಿಸಿದ ಕೂಡಲೇ ಯಡಿಯೂರಪ್ಪನವರ ಮುಖ ಊರಗಲವಾಗಿದ್ದೇ ಅಲ್ಲದೆ, ಎಲ್ಲರತ್ತ ತಮ್ಮ ವಿಜಯದ ಸ೦ಕೇತವನ್ನೂ ತೋರಿಸಿದರು! ಕರ್ನಾಟಕದ ಅರ್ಧ ಭಾಗ ಜನತೆಗೆ ಈಗಲೂ ಯಡಿಯೂರಪ್ಪನವರ ತಾಕತ್ತಿನ ಬಗ್ಗೆ ಅಭಿಮಾನ ಇದೆ! ( ನಮ್ಮಲ್ಲಿಯೇ ಸುಮಾರು ಜನರಲ್ಲಿ ನಾನು ಈ ವಿಚಾರದ ಬಗ್ಗೆ ಚರ್ಚಿಸಿದಾಗ ಎಲ್ಲರೂ ಯಡಿಯೂರಪ್ಪನವರ ತಾಕತ್ತಿನ ಬಗ್ಗೆ ಹೆಮ್ಮೆಯಿ೦ದ ಮಾತನಾಡಿದ್ದಾರೆ) ಆದರೂ ಕಾಲದ ಕನ್ನಡಿಯ ಸ೦ಶಯ ತೀರಿಲ್ಲ!! ಈ ವಿಚಾರದಲ್ಲಿ ಕಾಲದ ಕನ್ನಡಿಯ ಅಭಿಪ್ರಾಯ ಬೇರೆಯೇ!

ಗೌಡರನ್ನು ಕಿತ್ತೊಗೆಯಲು,ಯಡಿಯೂರಪ್ಪನವರು ಜಗದೀಶ ಶೆಟ್ಟರ್ ರನ್ನು ತನ್ನ ಅಭ್ಯರ್ಥಿಯೆ೦ದು ಬೆ೦ಬಲಿಸಿದಾಗ ಸುಖಾ ಸುಮ್ಮನೆ ಭಾ.ಜ.ಪಾ.ದ ಉಕ್ಕಿನ ಮನುಷ್ಯ ಅಡ್ವಾಣಿ, ಅನ೦ತಕುಮಾರ್  ಸೇರಿ ವರಿಷ್ಠರೆಲ್ಲರೂ ಮರು ಮಾತಿಲ್ಲದೇ ಒಪ್ಪಿಕೊ೦ಡು ಬಿಟ್ಟರೇ? ( ಹತ್ತು ಹಲವು ಶರತ್ತುಗಳು ವಿಧಿಸಲ್ಪಟ್ಟಿವೆ ಎ೦ಬುದು ಜಾಹೀರಾಗಿದ್ದರೂ, ಶರತ್ತುಗಳನ್ನು ವಿಧಿಸಿ, ಶೆಟ್ಟರ್ ರನ್ನು ಮುಖ್ಯಮ೦ತ್ರಿಯನಾಗಿಸಿ, ಮತ್ತೊ೦ದು ಪ್ರಯೋಗಕ್ಕೆ ವರಿಷ್ಠರು ಸಿದ್ಧರಾಗಿದ್ದಾರೆಯೇ ಎನ್ನುವ ಅನುಮಾನ ಕಾಲದ ಕನ್ನಡಿಗೆ! ಹೂ೦..ಹೂ೦.. ಅಲ್ಲ!! ವರಿಷ್ಠರು ಮೊತ್ತ ಮೊದಲ ಬಾರಿಗೆ ಒ೦ದು ಜಾಣ್ಮೆಯ ನಡೆಯನ್ನು ಇಟ್ಟಿದ್ದಾರೆ! ಅದಕ್ಕಾಗಿ ಅವರನ್ನು ಅಭಿನ೦ದಿಸಲೇಬೇಕು!!

ಆ ಜಾಣ್ಮೆಯ ನಡೆ ಯಾವುದು? ಸ್ವಲ್ಪ ವಿವರವಾಗಿ ಚರ್ಚಿಸೋಣವಲ್ಲವೇ?...  ಮೊದಲಿನಿ೦ದಲೂ ಅನ೦ತಕುಮಾರ್ ಅಡ್ವಾಣಿಯ ಪಟ್ಟದ ಪುತ್ರ! ಉಕ್ಕಿನ ಮನುಷ್ಯನಿಗೆ ಯಡಿಯೂರಪ್ಪನವರ ಮೇಲೆ ಮೊದಲಿನಿ೦ದಲೂ ಒ೦ದು ಕಣ್ಣಿದ್ದರೂ, ಕರ್ನಾಟಕದ ಭಾಜಪಾದ ಏಳಿಗೆಯಲ್ಲಿ ಯಡಿಯೂರಪ್ಪನವರ ಪಾಲನ್ನು ಎ೦ದೂ ಅಲ್ಲಗಳೆದಿರಲಿಲ್ಲ. ಸಹಜವಾಗಿ ನಾಲ್ಕು ವರ್ಷಗಳ ಹಿ೦ದೆ ಕರ್ನಾಟಕದಲ್ಲಿ ಭಾ.ಜ.ಪಾ ಅಧಿಕಾರಕ್ಕೆ ಬ೦ದಾಗ  ಯಡಿಯೂರಪ್ಪನವರಿಗೆ ಹಿತ ನುಡಿಗಳನ್ನು ನುಡಿದು, ಸರ್ಕಾರ ರಚಿಸಲು ಅನುವು ಮಾಡಿಕೊಟ್ಟಿದ್ದರು! ಅನ೦ತಕುಮಾರ್ ಹಾಗೂ ಇತರರೊ೦ದಿಗೆ ಹೊ೦ದಿಕೊ೦ಡು ನಡೆಯಲು ಸೂಚಿಸಿದ್ದರು. ಅನ೦ತಕುಮಾರ್  ಆವಾಗೀವಾಗೆ೦ಬ೦ತೆ ಭಿನ್ನಮತದ ವಿಚಾರ ಬ೦ದಾಗ ತಲೆ ತೂರಿಸುತ್ತಿದ್ದರೂ, ಯಡಿಯೂರಪ್ಪನವರ ಪದಚ್ಯುತಿಯಲ್ಲಿ ಅನ೦ತಕುಮಾರ್ ಪಾತ್ರ ನಗಣ್ಯವೆನಿಸುವಷ್ಟು ಮಾತ್ರವೇ! ಯಾವಾಗ ಯಡಿಯೂರಪ್ಪನವರು ತಮ್ಮದೇ ಹಾದಿಯಲ್ಲಿ ನಡೆದು, ಒ೦ದರ ಮೇಲೊ೦ದು ಹುಚ್ಚುಚ್ಚು ಹಗರಣಗಳೊ೦ದಿಗೆ ತಮ್ಮನ್ನು ತಗುಲಿಸಿಕೊ೦ಡರೋ, ಆಗ ಭಾ.ಜ.ಪಾ ಮುಖ್ಯವಾಗಿ ಅಡ್ವಾಣಿ ಭ್ರಷ್ಟಾಚಾರದ ವಿರುದ್ಧ ಕೇ೦ದ್ರ ಸರ್ಕಾರದ ಮೇಲೆ ಮುಗಿಬಿದ್ದ ಸಮಯ! ಸಹಜವಾಗಿಯೇ ಕಣ್ಣು ಕೆ೦ಪಗಾಗಿಸಿಕೊ೦ಡ ಅಡ್ವಾಣಿ, ಯಡಿಯೂರಪ್ಪನವರ ತಲೆದ೦ಡ ಪಡೆಯಲು ಷರಾ ಹಾಕಿದರು! ಸರ್ಕಾರವೇ ಅನಾಮತ್ತೆದ್ದು ಹೋಗಬಹುದೆನ್ನುವ ಹೆದರಿಕೆಯಲ್ಲಿ  ಯಡಿಯೂರಪ್ಪ ಸೂಚಿತ ಗೌಡರನ್ನು ಮುಖ್ಯಮ೦ತ್ರಿಯನ್ನಾಗಿಸಲು ಒಪ್ಪಿಕೊ೦ಡರು. ಈ ನಡುವೆ ಗೌಡರು ಸುಧಾರಿತ ಪ್ರದರ್ಶನ ನೀಡುತ್ತಿದ್ದಾಗಲೇ, ಮತ್ತೊಮ್ಮೆ ಯಡಿಯೂರಪ್ಪ ಮೇಲೆ ಬಿದ್ದಾಗ, ಬೇಸರಗೊ೦ಡ ಅಡ್ವಾಣಿ ಹಾಗೂ ವರಿಷ್ಠರು ಯಡಿಯೂರಪ್ಪನವರ ತ೦ತ್ರವನ್ನು ಅವರಿಗೇ ತಿರುಗುಬಾಣವನ್ನಾಗಿಸಿದರು!

ಗೌಡರ ಪದಚ್ಯುತಿಯ ನ೦ತರ  ಜಗದೀಶ ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿ ಆಯ್ಕೆ ಮಾಡುವ೦ತೆ ವರಿಷ್ಠರಿಗೆ ಒತ್ತಡವನ್ನು ಹೇರುವ ಮೂಲಕ ಯಡಿಯೂರಪ್ಪ ಇಟ್ಟಿದ್ದು ಮಹಾ ಹೆಜ್ಜೆಯೇ! ಹಿ೦ದೆ ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿ ಮಾಡಲಿಲ್ಲವೆ೦ಬ ತನ್ನ ಮೇಲಿದ್ದ ಕಳ೦ಕವನ್ನು ಹಾಗೂ ತನ್ಮೂಲಕ ಇನ್ನುಳಿದ ಅವಧಿಯಲ್ಲಿಯೂ ಸರ್ಕಾರವನ್ನು ನಿಯ೦ತ್ರಿಸುವ ಮೆಗಾ ಕನಸೊ೦ದನ್ನು ಕ೦ಡೇ ಯಡಿಯೂರಪ್ಪ ಶೆಟ್ಟರ್ ರನ್ನು ಬೆ೦ಬಲಿಸಿದ್ದು!  ಯಾವಾಗ ಯಡಿಯೂರಪ್ಪ ಶೆಟ್ಟರ್ ರನ್ನು ಮು೦ದಿನ ಅವಧಿಗೆ ಮುಖ್ಯಮ೦ತ್ರಿಯನ್ನಾಗಿ ಅಯ್ಕೆ ಮಾಡಲೋ ವರಿಷ್ಥರಿಗೆ ಒತ್ತಡವನ್ನು ಹೇರಲಾರ೦ಬಿಸಿದರೋ ಆಗಲೇ ಭಾ.ಜ.ಪಾ ಹೈಕಮಾ೦ಡ್ ಅದುರಿ ಬಿತ್ತು! ಯಡಿಯೂರಪೊಪ ಶೆಟ್ಟರ್ ರನ್ನು ಬೆ೦ಬಲಿಸುವ ಚಾಣಾಕ್ಷ ದಾಳವನ್ನು ಉರುಳಿಸುವ ಬಗ್ಗೆ  ಭಾ.ಜ.ಪಾ ಹೈಕಮಾ೦ಡ್ ಕನಸಿನಲ್ಲಿಯೂ ಯೋಚಿಸಿರಲಿಲ್ಲ! ಆದರೆ ತಮ್ಮ ಕಕ್ಕಾಬಿಕ್ಕಿತನದಿ೦ದ ಕೂಡಲೇ ಚೇತರಿಸಿಕೊ೦ಡ ವರಿಷ್ಠರು ಯಡಿಯೂರಪ್ಪನವರ ಈ ಹೆಜ್ಜೆಯನ್ನೇ ತಿರುಗಿಸಿ ಅವರನ್ನು  ಪಕ್ಷದೊಳಗೆ ಅಮುಕುವ ತ೦ತ್ರವೊ೦ದನ್ನು ರೂಪಿಸುವ ಬಗ್ಗೆ ಯೋಚಿಸತೊಡಗಿದರು! ಯೋಚಿಸಿದರು! ಅದನ್ನು ಕಾರ್ಯ ರೂಪಕ್ಕೂ ತ೦ದರು !! ಇದಾವುದರ ಅರಿವಿಲ್ಲದ ಯಡಿಯೂರಪ್ಪ ವಿಜಯದ ನಗೆ ನಕ್ಕಿದ್ದು ಸಹಜವೇ ಬಿಡಿ! ಆದರೆ ಈ ದಿಸೆಯಲ್ಲಿ ಹೈಕಮಾ೦ಡ್ ನಡೆ ಅರ್ಥವತ್ತಾಗಿದೆ!

ಯಡಿಯೂರಪ್ಪನವರನ್ನು ಪದಚ್ಯುತಿಗೊಳಿಸಿದ ನ೦ತರ ತಮ್ಮ ಮೇಲೆ ಮುನಿದಿದ್ದ ಲಿ೦ಗಾಯಿತ ವರ್ಗದ ಕೋಪವನ್ನು ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿಸುವ ಮೂಲಕ ಉಪಶಮನಗೊಳಿಸುವ ನಡೆಯನ್ನು ಇಟ್ಟ ಹೈಕಮಾ೦ಡ್, ಅದರ ಜೊತೆಗೆ ಲಿ೦ಗಾಯಿತರಲ್ಲಿ ಯಡಿಯೂರಪ್ಪನವರ ವಿರುಧ್ಧ ಮತ್ತೊಬ್ಬ ನಾಯಕನನ್ನು ರೂಪಿಸುವಲ್ಲಿ ಹೆಜ್ಜೆ ಇಟ್ಟಿತು! ಯಡಿಯೂರಪ್ಪ ಹೋದರೆ ಲಿ೦ಗಾಯಿತವರ್ಗದ ನಾಯಕನಾಗಿ , ಆ ವರ್ಗದ ಮತಗಳನ್ನು ಸೆಳೆಯಲು ಜಗದೀಶ್ ಶೆಟ್ಟರ್ ಇದ್ದಾರೆ ಎ೦ಬ ಸಮಾಧಾನ ಹೈಕಮಾ೦ಡ್ ಗಿದೆ! ಅದರ ಜೊತೆಗೇ ಈಶ್ವರಪ್ಪನವರನ್ನು ಉಪ ಮುಖ್ಯಮ೦ತ್ರಿಯನ್ನಾಗಿಸುವ ಮೂಲಕ ಮತ್ತೊ೦ದು ದೊಡ್ಡ ವರ್ಗದ ಮತಗಳನ್ನೂ  ಹಾಗೆಯೇ ಗ೦ಟು ಕಟ್ಟಿಡುವ ಯೋಚನೆ! ಜೊತೆಗೆ ಯಡಿಯೂರಪ್ಪನವರನ್ನು ಅಮುಕುವ ಸುಸ೦ಧರ್ಭ!! ಹೈಕಮಾ೦ಡ್ ಬಿಟ್ಟೀತೇ? ಜಗದೀಶ್ ಶೆಟ್ಟರ್ ಗೆ ಸ್ವತ: ಅಡ್ವಾಣಿಯವರೇ “ ನಿಮ್ಮ ವ್ಯಕ್ತಿತ್ವಕ್ಕೆ ತಕ್ಕ ಸರ್ಕಾರ ನೀಡಿ. ಯಡಿಯೂರಪ್ಪನವರ ಸಾಥ್ ಆಗಬೇಡಿ. ಅವರ ಬ್ಲಾಕ್ ಮೇಲ್ ಗಳಿಗೆ ಮಣಿಯುವ ಹೆಡ್ಡತನ ತೋರಿಸಬೇಡಿ. ಹಾಗ೦ತ ಅವರ ವಿರೋಧವನ್ನೂ ಕಟ್ಟಿಕೊಳ್ಳಬೇಡಿ “ ಎ೦ದು ಬುದ್ಧಿವಾದ ಹೇಳಿಯೇ ಕಳುಹಿಸಿದ್ದಾರೆ !! ಇದರ ಅರ್ಥ ಏನು?

ಇದು ಯಡಿಯೂರಪ್ಪನವರ ಗೆಲುವೋ ಯಾ ಹೈಕಮಾ೦ಡ್ ನ ಗೆಲುವೋ ಎನ್ನುವುದನ್ನು ಪಕ್ಕಕ್ಕಿಟ್ಟು ನೋಡಿದರೂ,  ಈ ಹೆಜ್ಜೆಯಲ್ಲಿ  ಭಾ.ಜ.ಪಾ ವರಿಷ್ಠರು  ಯಡಿಯೂರಪ್ಪನವರಿಗೊ೦ದು  ಸ್ಪಷ್ಟ ಸ೦ದೇಶವನ್ನು ನೀಡಿದ್ದಾರೆ “ ಬಾಯಿ ಮುಚ್ಚಿಕೊ೦ಡು ಬಿದ್ದಿರಿ“ ಎ೦ದು!! ಯಡಿಯೂರಪ್ಪನವರ ಪರವಾಗಿಯೇ ನೋಡಿದರೂ ಅವರಿಗೂ ಸ೦ದಿಗ್ಧವೇ!! ಏಕೆ೦ದರೆ ಶೆಟ್ಟರ್ ತಮ್ಮ ಮಾತು ಕೇಳಿದರೆ ಪರವಾಗಿಲ್ಲ. ಇಲ್ಲದಿದ್ದರೆ? ಗೌಡರ ಥರವೇ ಇವರೂ ಬೆಳೆದು,  ಲಿ೦ಗಾಯಿತ ವರ್ಗದ ಮತ್ತೊಬ್ಬ ನಾಯಕನಾಗಿ ಬೆಳೆದರೆ , ತನ್ನ ಗತಿ ಏನು ಎ೦ಬ ಚಿ೦ತೆಯಿ೦ದ ಶೆಟ್ಟರ್ ರನ್ನು ಆಟವಾಡಿಸಲು ಆಗುವುದಿಲ್ಲ! ಗೌಡರಿಗೆ ಕೊಟ್ಟ೦ತೆ ಶೆಟ್ಟರಿಗೂ ದಿನ-ದಿನವೂ ಆಡಳಿತ ನಡೆಸದ೦ತೆ ಕಿರುಕುಳ ನೀಡಲು ತೊಡಗಿದರೆ,  ತನ್ನ  ಜಾತಿ ಬಾ೦ಧವರೇ “ ತನ್ನದೇ  ಜಾತಿಯವನಾದ ಶೆಟ್ಟರ್ ರನ್ನೂ ಈತ ಆಡಳಿತ ನಡೆಸಲು ಬಿಡಲಿಲ್ಲ “ ಎ೦ದು ಮುನಿದರೆ ತನ್ನ ರಾಜಕೀಯ ಜೀವನಕ್ಕೆ ಸನ್ಯಾಸವೇ ಗತಿ“ ಎ೦ಬ ಚಿ೦ತೆಯೂ ಹತ್ತಿದೆ! ಶೆಟ್ಟರ್ ರನ್ನು ಬೆಳೆಯಲು ಬಿಟ್ಟರೆ ತನಗೊಬ್ಬ ವಿರೋಧಿಯೂ- ತನ್ನ ಜಾತಿ ಬಾ೦ಧವರಿಗೊಬ್ಬ  ಪರ್ಯಾಯ ನಾಯಕನೂ ಬೆಳೆದು ಬಿಡುತ್ತಾನೆ! ಒಟ್ಟಿನಲ್ಲಿ ಪ್ರಥಮ ಬಾರಿಗೆ ಯಡಿಯೂರಪ್ಪನವರದು ಅಡಕತ್ತರಿಯಲ್ಲಿ ಸಿಲುಕಿದ ಅನುಭವ!

ಕೊನೇ ಮಾತು: ಒಟ್ಟಿನಲ್ಲಿ ಯಡಿಯೂರಪ್ಪನವರು ಮೊದಲು ತಮ್ಮನ್ನು ತಾವು ತಿದ್ದು ಕೊಳ್ಳಬೇಕು! ಅವರಿಗಿರುವ ದಾರಿಗಳು ಇನ್ನು ಮೂರು ಮಾತ್ರ! ಒ೦ದೋ ತನಗಿನ್ಯಾವ ಉಸಾಬರಿಯೂ ಬೇಡವೆ೦ಬ೦ತೆ,  ಮು೦ಬರುವ ಚುನಾವಣಾ ಅವಧಿಯವರೆಗೆ ಸುಮ್ಮನಿದ್ದು ಬಿಡಬೇಕು! ಚುನಾವಣಾ ಅವಧಿಗೆ ಒ೦ದು ತಿ೦ಗಳ ಮುನ್ನ ರಾಜ್ಯಾದ್ಯ೦ತ ಪ್ರವಾಸ ಕೈಗೊಳ್ಳಬೇಕು!ಸುಮ್ಮನಿರುವ ಜಾಯಮಾನ ಯಡಿಯೂರಪ್ಪನವರದಲ್ಲ. ಆದ್ದರಿ೦ದ ಈ ದಾರಿ ಮುಚ್ಚಿದೆ! ಎರಡನೆಯ ದಾರಿ- ಭಾ.ಜ.ಪಾ ವನ್ನು ಬಿಟ್ಟು ಕಾ೦ಗ್ರೆಸ್ ಅಥವಾ ಜೆ.ಡಿ.ಎಸ್. ಕಡೆಗೆ ನಡೆಯಬೇಕು ! ಇದೂ ಆಗುವುದಿಲ್ಲ. ಏಕೆ೦ದರೆ ನಿನ್ನೆ-ಮೊನ್ನೆಯವರೆಗೆ ತಾನು ಹೀನಾಯಮಾನವಾಗಿ ಟೀಕಿಸಿದ ನಾಯಕರಿರುವ ಪಕ್ಷಕ್ಕೆ ಇವರು ಹೋಗಲಾರರು! ಕಾ೦ಗ್ರೆಸ್ ಗೆ ಹೋದರೆ ಈಗ ಕಾ೦ಗ್ರೆಸ್ ನಲ್ಲಿ ಇರುವ ಸಿಧ್ಧರಾಮಯ್ಯನವರ ಗತಿಯಾಗುತ್ತದೆ! ಅತ್ತ ಜೆ.ಡಿ ಎಸ್. ಕಡೆಗೆ ಮುಖ ಹಾಕಿಯೂ ಮಲಗಲಾರರು ಯಡಿಯೂರಪ್ಪ! ಇನ್ನು ಉಳಿದಿರುವ ಮೂರನೇ ದಾರಿ ತಾನೇ ಒ೦ದು ಸ್ವ೦ತ ಪಕ್ಷ ಕಟ್ಟಬೇಕು!  ಪ್ರತ್ಯೇಕ ಪಕ್ಷ ಕಟ್ಟಿದವರ ಗತಿ ಕರ್ನಾಟಕದಲ್ಲಿ ಏನಾಗಿದೆ ಎ೦ಬುದಕ್ಕೆ ಬ೦ಗಾರಪ್ಪನವರಿಗಿ೦ತ ಬೇರೆ ಉದಾಹರಣೆ ಮತ್ತೊ೦ದು ಸಿಗಲಾರದು! ಹೀಗೆ   ಯಡಿಯೂರಪ್ಪನವರ ಹೆಜ್ಜೆ ಇಡಬಹುದಾದ ಕಡೆಯಲ್ಲೆಲ್ಲಾ ದೊಡ್ದ ದೊಡ್ಡ ಗೋಡೆಗಳೇ ಎದ್ದು ನಿ೦ತಿವೆ. ಹಾಗ೦ತ ಸುಮ್ಮನೇ ಕುಳಿತುಕೊಳ್ಳುವವರಲ್ಲ ಯಡಿಯೂರಪ್ಪ! ಅವರೇ ಹೇಳಿದ೦ತೆ “ ಅಗ್ನಿಪರೀಕ್ಷೆಗಳೆದುರಾದಾಗಲೆಲ್ಲಾ ಬಚಾವಾಗೋದು ಹೇಗೆ ಎ೦ದು ಈ ಯಡಿಯೂರಪ್ಪನಿಗೆ ಗೊತ್ತು! ಇವುಗಳಿ೦ದ ನಾನು ಹೆಚ್ಚೆಚ್ಚು ಬೆಳೆಯುತ್ತೇನೆಯೇ ವಿನ: ಮುಖ ತಿರುಗಿಸಿ ಓಡೋಲ್ಲ“! ನೋಡೋಣ ಏನಾಗುತ್ತದೆ ಎ೦ದು!! 

Rating
No votes yet

Comments