ನೋಡುತ, ನೋಡುತ ನಿಂತುಬಿಟ್ಟೆನಲ್ಲೆ!
ನೋಡುತ, ನೋಡುತ ನಿಂತುಬಿಟ್ಟೆನಲ್ಲೆ
- ಲಕ್ಷ್ಮೀಕಾಂತ ಇಟ್ನಾಳ
ಜಗಜಿತ್ ಸಿಂಗ್ ಯಾರಿಗೆ ಗೊತ್ತಿಲ್ಲ. ಗಜಲ್ ಜಗತ್ತು ಕಂಡ ಅದ್ಭುತ ಮಾಂತ್ರಿಕ ಹಾಡುಗಾರ, ಮೋಡಿಗಾರ. ಅವರ ನೂರಾರು ಗಜಲ್ ಗಳಲ್ಲಿ ಒಂದಾದ, ‘ ಆಪ್ ಕೋ ದೇಖ ಕರ ದೇಖತಾ ರೆಹಗಯಾ’ ಗಜಲ್ ಬಗ್ಗೆ ಒಂದು ನೋಟ.
‘ಆಪ್ ಕೋ ದೇಖ ಕರ ದೇಖತಾ ರಹಗಯಾ’ ಪ್ರೇಮಿಗಳ ಅನುಭವವನ್ನು ಅವರು ದಾಟಿ ಬಂದ ಆ ಹಾದಿಯ ನೆನಪನ್ನು ಇನ್ನೂ ಹಸಿ ಪಸೆ ಆರದ ಹಾಗೆಯೇ ಸೆರೆಹಿಡಿದುಬಿಡುವ ಗಜಲ್. ಅದೆಂತಹ ಅನುಭವಪೂರ್ಣ ಸಾಹಿತ್ಯದ ಸಾಲುಗಳು!. ಕೇಳುಗನನ್ನು ಅಂದಿನ ದಿನಗಳ ತನ್ನ ಪ್ರೇಮದ ದಿನಗಳಿಗೆ ಖಂಡಿತ ಕರೆದೊಯ್ಯುತ್ತಾರೆ ಜಗಜಿತ್ ಸಿಂಗಜಿ..
‘ಆಪ್ ಕೋ ದೇಖಕರ್ ದೇಖ್ತಾ ರಹಗಯಾ
ಔರ್ ........ಕೆಹನೇ ಕೊ ಕ್ಯಾ ರಹಗಯಾ’ ,
ಅಕರ್ಷಿತ ಹೃದಯಗಳು ಒಂದನ್ನೊಂದು ಸಮೀಪಿಸಿದಾಗ ಮಾತನಾಡಿಸುವ ಧೈರ್ಯ ಎಲ್ಲಿಂದ ಬರಬೇಕು. ಜಗವೇ ಬಾಯ್ದೆರೆದ ಅನುಭವ. ಇನ್ನು ಮಾತನಾಡಿಸಲು ಒದಗಿ ಬಂದ ಅವಕಾಶದ ಕ್ಷಣಗಳಲ್ಲಿ, ‘ಚಾಹತೋಂಕೆ ಚಿರಾಗ್ ಆಂಖೋಂ ಸೇ ಜಲಾಯೇಂಗೆ’ ಎಂದೊಬ್ಬ ಶಾಯರ್ ಹೇಳುವ ಹಾಗೆ, ಅಂದಿನ ಪ್ರೇಮಿಯೂ ಕಣ್ಣೋಟಗಳಿಂದಲೇ ಮಾತನಾಡಿದ್ದೇ ಬಂತು. ಇನ್ನು ಮಾತನಾಡಲು ಧ್ವನಿ ಎಲ್ಲಿಂದ ಬರಬೇಕು. ಅದು ಅಪ್ಪಟ ಪ್ರೇಮದ ದಿನಗಳು. ಈಗಿನ ಹಾಗೆ ಮುಂಜಾನೆ ಒಬ್ಬಳು ಸಂಜೆಗಿನ್ನೊಬ್ಬಳ ಕಲ್ಪನೆ ಅಲ್ಲಿರಲಿಲ್ಲ. ಕಾವ್ಯಕಲ್ಪನೆಯ ಪ್ರೇಮ ಸೃಷ್ಟಿಗಳ ವೃಷ್ಟಿಗಳ ದಿನಗಳವು. ಆದರೂ ಮನುಷ್ಯರೇ ತಾನೇ! ಅದುಮಿಟ್ಟಷ್ಟು ಪುಟಿದು ಹೊರಹೊಮ್ಮುವ ಸ್ವಭಾವ ಪ್ರೇಮದ್ದು, ಅಂತೆಯೇ ಪ್ರೇಮಿಗಳದ್ದು. ಇದನ್ನೇ ಜಗಜಿತ್ ಸಿಂಗ್ ಗಜಲ್ ನಲ್ಲಿ,
‘ಉಸ್ ಕೆ ಹೋಟೋಂ ಪೆ ಕುಛ್ ಕಾಂಪ್ ತಾ ರಹಗಯಾ
ಆತೆ ಆತೆ ಮೆರಾ ನಾಮ್ ಸಾ ರಹಗಯಾ’
ವಾಹ್! ಎಷ್ಟೊಂದು ಸರಳವಾಗಿ ಅಂದಿನ ದಿನಕ್ಕೆ ಒಯ್ಯುತ್ತವಲ್ವೆ. ಪ್ರತಿ ಹದಿ ಹೃದಯ ಅನುಭವಿಸಿದ ಅಳಲದು. ಅವಳ ಒಂದೊಂದು ನೋಟಕ್ಕಾಗಿ, ದರ್ಶನಕ್ಕಾಗಿ ಕಾಲೇಜು ಅಂಗಳಗಳಲ್ಲಿ, ‘ಆ’ ಹುಡುಗಿ ಬರುವ ದಾರಿಗಳಲ್ಲಿ, ಎಲ್ಲೆಂದರಲ್ಲಿ, ಗಂಟೆಗಟ್ಟಳೆ ಕಾಯುವ ಪ್ರೇಮಿ ಈಗೆಲ್ಲಿ. ಇನ್ನು ಮಾತನಾಡಿಸುವ ಅವಕಾಶವೇ?. ಸಾದ್ಯವೇ ಇರದಂತಹ ಪರಿಸ್ಥಿತಿ. ಹೊರಗಿನ ಪರಿಸ್ಥಿತಿಯಲ್ಲ, ಒಳಪರಿಸ್ಥಿತಿ, ಅವರವರ ಅಂತರ್ಯಗಳು, ವಿವೇಕಗಳು ಬಹತೇಕರನ್ನು ತಡೆಹಿಡಿದು, ' ಇದು ಅಲ್ಲ, ಇದು ಸಲ್ಲ,' ಎಂದೇ ಹೇಳುತ್ತಿದ್ದುವು ಸಮಾಜದೊಂದಿಗೆ, ಹೀಗಾಗಿ ಅಂದಿನ ದಿನಗಳಲ್ಲಿ ಪ್ರೇಮಿ ಒಳಗೂ ಒಂಟಿ, ಹೊರಗೂ ಒಂಟಿ!. ಬಹಳಷ್ಟು ಸಂದರ್ಭಗಳಲ್ಲಿ ಮೇಲಿನಂತೆ ಕಣ್ಣೋಟ, ಕುಡಿನೋಟಗಳಲ್ಲಿ ವ್ಯವಹಾರ. ಅದರಲ್ಲಿರೋ 'ಮಜಾ' ಸವಿದವರಿಗೇ ಗೊತ್ತು, ಸ್ವರ್ಗಕ್ಕೆ ಕಿಚ್ಚು ಹಚ್ಚುವ ಗಳಿಗೆಗಳವು ಅಂದಿನ ಕಾಲದಲ್ಲಿ. ಮಾತನಾಡಿಸುವ ಅವಕಾಶ ಸಿಕ್ಕಿದರಂತೂ ಭೂಮಿಯೇ ಕುಸಿದ ಅನುಭವ ಇಬ್ಬರಿಗೂ! ಹಾಗೇನಾದರೂ ಅವಕಾಶ ಸಿಕ್ಕಿ ಮಾತನಾಡಿಸಿದಾಗ, ಮೈಯೆಲ್ಲ ಬೆವರು ಇಬ್ಬರಿಗೂ. ನಾಲಿಗೆ ತೊದಲುವುದೆಂದರೇನೆಂದು ತಿಳಿಯಲು ಇಂಥವರನ್ನು ಕೇಳಬೇಕಿತ್ತು ಅಂದಿನ ದಿನಗಳಲ್ಲಿ. ಆದರೂ ಅರೆಗಳಿಗೆಯಲ್ಲೇ ಅವನೊಬ್ಬ ಹೀರೋ! ಅವನಂಥ ಪಡ್ಡೆಗಳಿಗೆ ಅವನೊಬ್ಬ ಆದರ್ಶ. ಪುಕ್ಕಟೆ ಗೈಡ್. ದಾರ್ಶನಿಕ!
ಇಲ್ಲೊಬ್ಬ ಶಾಯರ್ ಹೇಳುವುದನ್ನು ನೋಡಿ,
‘ಕಭೀ ತೋ ಗುಜರನಾ ಹೋ ತುಮ್ ಕೋ ಹಮಾರೆ ದಿಲ್ ಕೆ ರಾಸ್ತೋಂ ಸೆ
ಹಮ್ ಫೂಲ್ ಬನ್ ಕರ ತೇರೀ ರಾಹೋಂ ಮೆ ಬಿಖರ ಜಾಯೇಂಗೆ ‘
'ತನ್ನ ಪ್ರೀತಿಯ ಹುಡುಗಿ ಹೃದಯದ ದಾರಿಯಲಿ ಹಾದು ಹೋಗುವಾಗ ಹೂ ಹಾಸಿಗೆಯಾಗಿ ಪಸರಿಸಿ ಪವಡಿಸುವ ಉತ್ಕಟ ಹಂಬಲ ' ಎಂದೆಲ್ಲ ಪ್ರೇಮ ಪರಾಕಾಷ್ಠೆಯನ್ನು ತೋಡಿಕೊಳ್ಳುವ ಅಭಿಲಾಷೆ ಇವನಿಗೆ,
ಆದರೆ, ಪ್ರೀತಿಸುತ್ತಿದ್ದ ಅದೇ ಆ ಹುಡುಗಿ ಅವನ ಮುಂದೆಯೇ................... ಹಾಯ್ದು ............... ಹೋಗುತ್ತಿದ್ದಾಗ , ...........ಏನೆಲ್ಲ ಅಂದುಕೊಂಡವನಿಗೆ , ಏನೂ ಮಾಡಲಾಗದೇ, ರಸ್ತೆಯ ಹಾಗೆ ತಾನೂ ಸುಮ್ಮನೇ ನೋಡುತ್ತ ನಿಲ್ಲುವ ಇವನ ಪರಿ ಅನುಭವಿಸಿದವರೇ ಹೇಳಬೇಕು. ಹೇಳಬೇಕೆನಿಸಿದ ಮಾತುಗಳು, ಕೇಳಬೇಕೆನಿಸಿದ ಪ್ರಶ್ನೆಗಳು ಮನದಲ್ಲಿಯೇ ಹಾಗೆಯೇ ಬೆಚ್ಚಗೆ ತನ್ನಲ್ಲೇ ಉಳಿಯುವ ಅ ದಿನಗಳು! ಆ ಗುಂಗುಗಳು ಈಗೆಲ್ಲಿ! ಈಗಿನವರಿಗೆ ಆ ಮೃದುತ್ವದ ಮಧುರ ಭಾವಗಳ ಅವಕಾಶವೇ ಇಲ್ಲ. ಒಂದರ್ಥದಲ್ಲಿ ನತದೃಷ್ಟರು!, ಎಲ್ಲ ಫಟಾಫಟ್!. ಮೋಬೈಲ್, ಚಾಟ್, ನೆಟ್ಗಳಲ್ಲಿ ತಮ್ಮಲ್ಲಿಯ ಭಾವನೆಗಳನ್ನು ಇನ್ನೂ ಶೈಶವದಲ್ಲಿಯೇ ಉಸುರಿಕೊಳ್ಳುವದರಿಂದ ಆ ಪರಮ ಉತ್ಕಟತೆಯ ಪ್ರೇಮ ಅನುಭವ, ಅನುಭಾವ , ಆ ವಿರಹ ನೋವು, ಅದೆಲ್ಲಿಂದ ಬರಬೇಕು?. ಈಗದೊಂದು ವ್ಯಾಪಾರ ಬಿಡಿ. 'ನೀನನಗಿದ್ದರೆ ನಾನಿನಗೆ'.
ಜಗಜಿತ್ ಹಾಡಿನಲ್ಲಿ ಬರೋದು ಅಂದಿನ ದಿನಗಳ ಪ್ರೇಮದನುಭವದ, ಪಡಿಪಾಟಲಿನ, ಮೂಕವೇದನೆಯ ನವಿರು ಭಾವಗಳ ಮಿಳಿತ, ಮಿಡಿತಗಳ ಅನುಭವ ಜನ್ಯ ಸಾಲುಗಳು.
‘ವೋ ಮೆರೇ ಸಾಮನೇ……………….. ಹೀ ಗಯಾ
ಔರ ಮೈಂ
ರಾಸತೇ ಕೀ ತರಹ ದೇಖತಾ ರಹಗಯಾ’
....................
...............................
ಮತ್ತೆ ನಮ್ಮನ್ನು ಪ್ರೇಮಲೋಕದಿಂದ ಲೌಕಿಕಕ್ಕೆ ಕರೆತರುತ್ತೆ ಗಜಲ್..
‘ಝೂಟ್ ವಾಲೆ ಕಹೀಂ ಸೆ ಕಹೀಂ ಬಢಗಯೆ
ಔರ್ ಮೈ ಥಾ ಕೆ ಸಚ್ ಬೋಲ್ತಾ ರಹಗಯಾ’
ಇಂದಿನ ದಿನಮಾನಗಳಲ್ಲಿ ಬದುಕಿನ ಗತಿ. ನಾವು ಎತ್ತ ಸಾಗುತ್ತಿದ್ದೇವೆ. ಮೌಲ್ಯಗಳ ಅಧಪತನದ ಕುರಿತು ತನ್ನದೇ ಧಾಟಿಯಲ್ಲಿ ಚಾಟಿ ಬೀಸುತ್ತದೆ ಗಜಲ್
‘ಸುಳ್ಳು ದಗಾಖೋರರು, ಭ್ರಷ್ಟರು ಎಲ್ಲ ಕಡೆಗಳಲ್ಲಿ, ಎಲ್ಲಿಂದೆಲ್ಲಿಗೆ ಏರಿದ್ದಾರೆ ಸಮಾಜದಲ್ಲಿ, ಆದರೆ ಸತ್ಯ, ಪ್ರಾಮಾಣಿಕನಾಗಿ ನಿಂತಲ್ಲಿಯೇ ನಿಂತಿದ್ದೇನೆ ಶ್ರೀಸಾಮಾನ್ಯನಾಗಿ!’ ಎನ್ನುತ್ತಾರೆ ಜಗಜಿತ್ ಜಿ.. ಸೀದಾ ಮರ್ಮಕ್ಕೇ ತಟ್ಟುವ ವಿಚಾರವಲ್ಲವೇ.
ಒಮ್ಮೆ ಸುಮ್ಮನೆ ಜಗಜಿತ ಜಿ ಯವರ ಈ ಗಜಲ್ ಕೇಳಿ ನೋಡಿ! ಅವರು ಅನುಭವಿಸಿ ಹಾಡುವ ಧಾಟಿ ನೋಡಿ.
ಜೀವನ ರಸಾನುಭೂತಿ ನೀಡುವ ಗಜಲ್ ಗಳು ಈ ಕಾರಣಕ್ಕಾಗಿಯೇ ಅಜರ ಅಮರ..
Rating
Comments
ಉ: ನೋಡುತ, ನೋಡುತ ನಿಂತುಬಿಟ್ಟೆನಲ್ಲೆ!
In reply to ಉ: ನೋಡುತ, ನೋಡುತ ನಿಂತುಬಿಟ್ಟೆನಲ್ಲೆ! by makara
ಉ: ನೋಡುತ, ನೋಡುತ ನಿಂತುಬಿಟ್ಟೆನಲ್ಲೆ!
ಉ: ನೋಡುತ, ನೋಡುತ ನಿಂತುಬಿಟ್ಟೆನಲ್ಲೆ!
In reply to ಉ: ನೋಡುತ, ನೋಡುತ ನಿಂತುಬಿಟ್ಟೆನಲ್ಲೆ! by H A Patil
ಉ: ನೋಡುತ, ನೋಡುತ ನಿಂತುಬಿಟ್ಟೆನಲ್ಲೆ!