ಬಾಲಿವುಡ್ಡಿನ ಸೂಪರ್ ಹಿಟ್ ತಾರೆ "ರಾಜೇಶ್ ಖನ್ನಾ "

ಬಾಲಿವುಡ್ಡಿನ ಸೂಪರ್ ಹಿಟ್ ತಾರೆ "ರಾಜೇಶ್ ಖನ್ನಾ "

ಬಾಲಿವುಡ್ಡಿನ ಮೊದಲ ಸೂಪರ್ ಸ್ಟಾರ್ ‘ ರಾಜೇಶ ಖನ್ನ ‘ ಅನಾರೋಗ್ಯದ ನಿಮಿತ್ತ ಪದೆಪದೆ ಇತ್ತೀಚಿನ ದಿನಗಳಲ್ಲಿ ಮುಂಬೈನ ಓಶಿವಾರಾದ ತನ್ನ ಮನೆಯಿಂದ ಲೀಲಾವತಿ ಆಸ್ಪತ್ರೆಗೆ, ಅಲ್ಲಿಂದ ಮನೆಗೆ ಮತ್ತೆ ಆಸ್ಪತ್ರೆಗೆ ಹೀಗೆ ಎರಡು ಮೂರು ತಿಂಗಳಿಂದ ಆಸ್ಪತ್ರೆಗೆ ಹೋಗಿ ಬರುತ್ತಿದ್ದ.ಆತನಿಗೆ ಏನು ಕಾಯಿಲೆ ? ಹೃದಯ ಸಮ್ಮಂಧಿ ಕಾಯಿಲೆ ಎಂದು ಕೆಲವರೆಂದರೆ, ಇನ್ನು ಕೆಲವರು ಆತ ಲಿವರ್ ತೊಂದರೆಯಿಂದ ಬಳಲುತ್ತಿದ್ದಾನೆ ಎಂದರೆ ಇನ್ನು ಹಲವರು ಆತ ಬರಿ ನಿಶ್ಯಕ್ತಿಯಿಂದ ಬಳಲುತ್ತಿದ್ದಾನೆ ಎನ್ನುತ್ತಿದ್ದರು, ಹೀಗಾಗಿ ಆತನ ಅನಾರೋಗ್ಯದ ಕುರಿತು ಸರಿಯಾದ ಮಾಹಿತಿ ದೊರೆಯುತ್ತಿಲ್ಲ. ಆತ ಈಗ ತನ್ನ ಪತ್ನಿ ಡಿಂಪಲ್ ಳೊಂದಿಗೆ ಇದ್ದಾನೆ. ಆತನ ಕಾಯಿಲೆ ಕುರಿತು ಹೆಚ್ಚಿನ ವಿವರ ಗಳು ತಿಳಿದು ಬರುತ್ತಿಲ್ಲ ಎನ್ನುವುದೆ ವಿಷಾದದ ಸಂಗತಿ. ಆತನ ದಿನಗಳು ಮುಗಿಯುತ್ತ ಬಂದವೆ ? ಎಂಬ ಆಲೋಚನೆ ಮನದಲ್ಲಿ ಮೂಡಿದಾಗ ಒಂದು ತರಹದ ವಿಷಣ್ಣತೆ ಮೂಡಿ ಮಾಯವಾಗುತ್ತದೆ. ಆತನ ನಂತರದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಇಂದಿಗೂ ತನ್ನ ಅಭಿಮಾನಿಗಳ ಮಾನಸದಲ್ಲಿ ಸೂಪರ್ ಸ್ಟಾರ್ ಆಗಿಯೆ ಉಳಿದಿದ್ದಾನೆ. ಆತನ ಮತ್ತು ಆತನ ಕುಟುಂಬದ ಸಂತಸದ ಇಲ್ಲವೆ ಆತಂಕದ ಘಟನೆಗಳ ಬಗ್ಗೆ ಸ್ಪಂದಿಸಿ ಆತನ ಬ್ಲಾಗಿಗೆ ಸಾವಿರಾರು ಜನ ಸ್ಪಂದಿಸುತ್ತಾರೆ. ಈ ಅಭಿಮಾನ ಮೊದಲ ಸೂಪರ್ ಸ್ಟಾರ್ ರಾಜೇಶ ಖನ್ನಾಗೆ ಯಾಕೆ ಹರಿದು ಬರಲಿಲ್ಲ ಎನ್ನುವ ವಿಷಯ ಕಾಡುತ್ತದೆ. ಈಗ್ಗೆ ಸುಮಾರು ಕೆಲ ತಿಂಗಳುಗಳ ಹಿಂದೆ ಆತನನ್ನು ಆತನ ಜೀವಮಾನದ ಸಾಧನೆ ಗಾಗಿ ಐಫಾ ಆಯ್ಕೆ ಮಾಡಿದ್ದು ಆತ ಆ ಸಮಾರಂಭಕ್ಕೆ ಬಂದಿದ್ದ. ಅದೇ ಸಮಾರಂಭದಲ್ಲಿ ರಾಜೇಶ ಖನ್ನಾನನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಿದ್ದ ಅಮಿತಾಬ್ ಬಚ್ಚನ್ ಸಕುಟುಂಬ ಪರವಾರ ಸಮೇತ ಬಂದು ಅತಿ ಸಂತಸದಿಂದ ಆಸೀನನಾಗಿದ್ದ. ಆದರೆ ಸನ್ಮಾನ ಗೊಳ್ಳಲಿದ್ದ ಈ ರಾಜೇಶ ಖನ್ನಾ ಎಲ್ಲ ಹಿರಿತೆರೆ ಮತ್ತು ಕಿರುತೆರೆಗಳ ಸೆಲೆಬ್ರಿಟಿಗಳ ಮಧ್ಯ ಏಕಾಂಗಿಯಾಗಿ ಗೋಚರಿಸಿದ. ಆತನ ಅಭಿಮಾನಿಗಳಿಗೆ ಇದೊಂದು ಮುಜುಗರದ ಸನ್ನಿವೇಶ ವಾಗಿತ್ತು. ಆತನನ್ನು ಮೊದಲ ನೋಟಕ್ಕೆ ಗುರುತಿಸಲಾಗಲಿಲ್ಲ, ಆತ ದೈಹಿಕವಾಗಿ ಅಷ್ಟು ಬದಲಾಗಿದ್ದ. ಆತ ಪ್ರಸ್ತುತ ನಯ ನಾಜೂಕಿನ ಥಳಕು ಬಳುಕಿನ ಜಗ್ಗತ್ತಿಗೆ ನಗಣ್ಯನಾಗಿದ್ದ. ಆತ ಜೀವಮಾನದ ಸಾಧನೆ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ತೆರಳಿದ, ಉಪಸ್ಥಿತ ಗಣ್ಯರು ಕರತಾಡನ ಮಾಡಿದರು, ಆದರೆ ಅಮಿತಾಬನಿಗೆ ಮತ್ತೂ ರಾಜೇಶ ಖನ್ನನಿಗೆ ಮಾಡಿದ ಕರತಾಡನಗಳಲ್ಲಿ ಒಂದು ವ್ಯತ್ಯಾಸ ಗೋಚರಿಸಿತು. ನಿಧಾನಕ್ಕೆ ಹೆಜ್ಜೆಗಳನಿಡುತ್ತ ಸಾಗಿದ ರಾಜೇಶ ಖನ್ನ ವೇದಿಕೆಗೆ ಹೋಗಿ ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ. ಆತನ ಮಾತಿನಲ್ಲಿ ಓಂದು ಓಘವಿತ್ತು, ತನ್ನ ಗತಕಾಲದ ಬಗ್ಗೆ ಏನೋ ಹೇಳಲು ನೋಡಿದ, ಆದರೆ ಆತ ಶಬ್ದಗಳಿಗಾಗಿ ತಡಕಾಡುತ್ತಿದ್ದ. ಆತನ ಮಾತುಗಳು ಕೃತಕ ವೆನ್ನಿಸು ವಂತಿದ್ದವು, ಅವುಗಳಲ್ಲಿ ಒಂದು ಸುಸಂಬದ್ಧತೆ ಇರಲಿಲ್ಲ. ಆತನ ಮಾತುಗಳ ಈ ಅಸಂಬದ್ಧತೆ ಆತನ ಬದುಕಿನ ಅಸಂಬದ್ಧತೆ ಕೂಡ ಆಗಿತ್ತು. ಒಬ್ಬ ಸೂಪರ್ ಸ್ಠಾರ್ ಸಫಲ ಬದುಕಿನ ಸಂತೃಪ್ತತೆಯಿಂದ ನಿಂತಿದ್ದರೆ ಇನ್ನೊಬ್ಬ ವಿಫಲತೆಯ ಪ್ರತೀಕ ದಂತಿದ್ದ. ಆತನ ಅಭಿಮಾನಿಗಳಾಗಿದ್ದ ನಮ್ಮಂತಹವರಿಗೆ ಈ ಕಾರ್ಯಕ್ರಮ ಬೇಗ ಮುಗಿದರೆ ಸಾಕೆನಿಸಿತ್ತು. ಆತನ ವರ್ತಮಾನದ ಸ್ಥಿತಿ ಶೋಚನೀಯ ವಾಗಿತ್ತು. ರಾಜೇಶ ಖನ್ನ ವೈಯಕ್ತಿಕ ಬದುಕಿ ನಲ್ಲಿ ವಿಫಲನಾಗಿದ್ದರೂ ಆತನ ಸಿನೆಮಾ ಬದುಕು ಅತ್ಯುತ್ತಮ ವಾಗಿಯೆ ಇತ್ತು. ಅಮಿತಾಬ್ ಮಾಸ್ ಜನ ಸಮೂಹದ ಮೂಲಕ ಸೂಪರ್ ಸ್ಟಾರ್ ಪಟ್ಟಕ್ಕೆ ಏರಿದ್ದರೆ, ರಾಜೇಶ ಖನ್ನನ ಬೆನ್ನಿಗೆ ಕ್ಲಾಸ್ ಜನಸಮೂಹವಿತ್ತು. ಹೀಗಾಗಿ ರಾಜೇಶ ಖನ್ನಾನ ಚಿತ್ರಗಳು ಗಳಿಕೆಯಲ್ಲಿ ಯಾವತ್ತೂ ಹಿಂದೆ ಬೀಳಲಿಲ್ಲ. ಈ ಮೊದಲ ಸೂಪರ್ ಸ್ಟಾರ್ ಸಾಗಿ ಬಂದ ಹಾದಿ ಹೂವಿನ ಹಾದಿಯಾಗಿರದೆ ಅದೊಂದು ದುರ್ಗಮ ದಾರಿಯಾಗಿತ್ತು. ಅದರಲ್ಲಿ ಸಾಗಿ ಬಂದ ತನ್ನ ಅವಕಾಶ ಕ್ಕಾಗಿ ಕಾದ ಯಶಸ್ಸಿನ ಮರೀಚಿಕೆಯನ್ನು ಹಿಡಿದ. ಅಮಿತಾಬನದೂ ಕೂಡ ಇದೆ ಹಾಡು. ಈ ಯಶಸ್ಸನ್ನು ಅಮಿತಾಬ ಅರಗಿಸಿಕೊಂಡ ಆದರೆ ರಾಜೇಶ ಖನ್ನಾಗೆ ಅರಗಿಸಿ ಕೊಳ್ಳಲಾಗಲಿಲ್ಲ. ಎನ್ನುವುದು ಖೇದದ ಸಂಗತಿ. ಸನ್ 1942 ರ ಡಿಸೆಂಬರ್ 29 ರಂದು ಅಮೃತಸರದಲ್ಲಿ ರಾಜೇಶ ಖನ್ನ ಜನಿಸಿದ. ತನ್ನ ವಿದ್ಯಾಭ್ಯಾಸದ ನಂತರ ತನ್ನನ್ನು ನಾಟಕ ರಂಗದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ, ನಾಟಕ ಗಳಲ್ಲಿ ಅಭಿನಯಿಸಿದ. ಮುಂಬೈನ ಮಾಯಾ ನಗರಿಯಲ್ಲಿ ತನ್ನ ಬದುಕನ್ನು ಕಟ್ಟಿಕೊಳ್ಳುವ ಹಂಬಲ ದಿಂದ ಬಂದ, ಕಾದ ತನ್ನ ಸ್ಥಾನ ಸುಭದ್ರ ಗೊಳಿಸಿಕೊಂಡ. ಆದರೆ ಇದು ಅಷ್ಟು ಸುಲಭವಿತ್ತೆ ? ಉಹ್ಞೂಂ ಇರಲಿಲ್ಲ. 1966 ರ ಕಾಲ ಮುಂಬೈನ ಬಾಲಿವುಡ್ ನ ಖ್ಯಾತ ನಾಮರಾದ ದಿಲೀಪ ಕುಮಾರ, ರಾಜ ಕಪೂರ, ದೇವ ಆನಂದ, ರಾಜೇಂದ್ರ ಕುಮಾರ ಮತ್ತು ರಾಜ ಕುಮಾರ ರವರ ಕಾಲಮಾನ ಮುಗಿಯುತ್ತ ಬಂದಿತ್ತು. ರಾಜಕಪೂರನ ‘ ಸಂಗಮ್ ‘, ದಿಲೀಪ ಕುಮಾರನ ‘ ಗಂಗಾ ಜಮುನಾ ‘, ರಾಜೇಂದ್ರ ಕುಮಾರನ “ ಸೂರಜ್ ‘ ಮತ್ತು ‘ ಆರ್ಝೂ ‘, ದೇವಾ ನಂದನ ‘ ‘ ಗೈಡ್ ‘ ಮತ್ತು ರಾಜಕುಮಾರನ ‘ ವಕ್ತ್ ‘, ‘ ಕಾಜಲ್ ‘ ಮತ್ತು ‘ ಹಮ್ ರಾಝ್ ‘ ನಂತಹ ಸೂಪರ್ ಹಿಟ್ ಚಿತ್ರಗಳ ನಂತರ ಆ ಪ್ರಮಾಣದ ಯಶಸ್ವಿ ಚಿತ್ರಗಳು ಅವರಿಂದ ಬರಲಿಲ್ಲ. ಅವರ ಸ್ಥಾನಗಳನ್ನು ತುಂಬಲು ಸಮರ್ಥ ನಟರುಗಳು ಬರಬೇಕಿತ್ತು. ಪ್ರಸಾದ ಪ್ರೊಡಕ್ಶನ್ ತಯಾರಿಕೆಯ ‘ ದಾದಿಮಾ ‘ ಚಿತ್ರ ಮೂಲಕ ದಿಲೀಪರಾಜ, ‘ ದೊಸ್ತಿ ‘ ಚಿತ್ರದ ಸಹನಟನ ಪಾತ್ರಧಾರಿ ಸಂಜಯ ( ಈಗಿನ ಸಂಜಯ ಖಾನ್ ) ಈತ ಹಾಲಿವುಡ್ ಚಿತ್ರ ವೊಂದರಲ್ಲಿ ಸಣ್ಣ ಪಾತ್ರ ವೊಂದ ರಲ್ಲಿ ಕಾಣಿಸಿ ಕೊಂಡಿದ್ದ. ವಿ.ಶಾಂತಾರಾಮರ ನೀಲ್ ಕಮಲ್ ಆರ್ಟ್ಸ ಲಾಂಛನದ ‘ ಗೀತ ಗಾಯಾ ಪತ್ಥರೋನೆ ‘ ಮೂಲಕ ತೆರೆಗೆ ಬಂದ ಜಿತೆಂದ್ರ ‘ ಗುನಾ ಹೋಂಕಾ ದೇವತಾ’ ಮತ್ತು ‘ ಮೆರೆ ಹುಜೂರ್ ‘ ಚಿತ್ರಗಳಲ್ಲಿ ಕಾಣಿಸಿ ಕೊಂಡಿದ್ದ. ನವೀನ ನಿಶ್ಚಲ್ ‘ ಸಾವನ್ ಬಾಧೋ ‘ ಚಿತ್ರದ ಮೂಲಕ ತೆರೆಗೆ ಬಂದಿದ್ದ, ಸುನಿಲ್ ದತ್ತ ತನ್ನ ಚಿತ್ರ ತಯಾರಿಕಾ ಸಂಸ್ಥೆ ಅಜಂತ ಆರ್ಟ್ಸ ಮೂಲಕ ತನ್ನ ತಮ್ಮ ಸೋಮದತ್ತನನ್ನು ತೆರೆಗೆ ತಂದ. ಈ ಚಿತ್ರ ದಲ್ಲಿ ನಾಯಕ ಸೋಮದತ್ತ ಸೇರಿದಂತೆ, ನಾಯಕಿ ಲೀನಾ ಚಂದಾವರಕರ, ಖಳನಾಯಕ ನಾಗಿ ವಿನೋದ ಖನ್ನ ಇನ್ನೊಂದು ಸಹ ಪಾತ್ರದಲ್ಲಿ ಮಧುಮತಿ ಎನ್ನುವವರೊಬ್ಬರನ್ನು ಸುನಿಲ ದತ್ತ ಪರಿಚಯಿ ಸಿದ್ದ, ಆದರೆ ಮುಂದೆ ಚಲನಚಿತ್ರ ರಂಗದಲ್ಲಿ ಗಟ್ಟಿಯಾಗಿ ನಿಂತವರು ಲೀನಾ ಮತ್ತು ವಿನೋದ ಮಾತ್ರ. ಎರಡು ಮೂರು ಚಿತ್ರಗಳಲ್ಲಿ ಅಭಿನಯಿಸಿದ ಸೋಮದತ್ತ ತೆರೆ ಮರೆಗೆ ಸರಿದುಹೋದ. ‘ ಸಾತ್ ಹಿಂದುಸ್ತಾನಿ ' ಹಾಗೂ ' ಬಾಂಬೆ ಟು ಗೋವಾ ‘ ಚಿತ್ರಗಳ ಮೂಲಕ ಅಮಿತಾಬ್ ಬಂದ. ಅದೇ ರೀತಿ ರಾಕೇಶ ರೋಶನ್, ವಿನೋದ ಮೆಹ್ರಾ, ಸಂಜೀವ ಕುಮಾರ. ಬಾಲ ನಟನಾಗಿ ಆರ್.ಕೆ.ಬ್ಯಾನರ್ ನ ಮೂಲಕ ‘ ಮೇರಾ ನಾಮ್ ಜೋಕರ್ ‘ ಚಿತ್ರದಲ್ಲಿ ಬಾಲ ನಟನ ಪಾತ್ರದಲ್ಲಿ ರಿಷಿ ಕಪೂರ ನಟಿಸಿ ರಾಷ್ಟ್ರಮಟ್ಟದ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದ. ಅದೇ ಆರ್ .ಕೆ.ಬ್ಯಾನರ್ ನ ‘ ಕಲ್ ಆಜ್ ಔರ್ ಕಲ್ ‘ ಚಿತ್ರದ ನಾಯಕ ನಟ ಮತ್ತು ನಿರ್ದೇಶಕನಾಗಿ ರಣಧೀರ ಕಪೂರ ತೆರೆಗೆ ಬಂದ. ಈ ಚಿತ್ರ ಸುಮಾರು ಯಶಸ್ಸನ್ನು ಕೂಡ ಪಡೆಯಿತು. ಇಂತಹ ಹೊಸಬರ ಮಧ್ಯೆ ರಾಜೇಶ ಖನ್ನ ತನ್ನ ಸ್ಥಾನ ಭದ್ರ ಪಡಿಸಿಕೊಳ್ಳ ಬೇಕಿತ್ತು. ಅಂತೂ ಈತನ ಶ್ರಮಕ್ಕೆ ಬೆಲೆ ಸಿಗುವ ಕಾಲ ಬಂತು. 1967 ರಲ್ಲಿ ಚೇತನ ಆನಂದರ 'ಆಖರಿ ಖತ್ ' ನಲ್ಲಿ ಇಂದ್ರಾಣಿ ಮುಖರ್ಜಿ ಜೊತೆ ಆಭಿನಯಿಸಿದ, ಆಗಲೆ ಚಿತ್ರ ಪ್ರೇಮಿಗಳು ರಾಜೇಶ ಖನ್ನಾನಲ್ಲಿ ಒಬ್ಬ ಪ್ರಬುದ್ಧ ನಟನನ್ನು ಗುರುತಿಸಿದ್ದರು. ನಂತರ ಎನ್ ಸಿ ಸಿಪ್ಪಿ ತಯಾರಿಕೆಯ ‘ ರಾಜ್ ‘ ಚಿತ್ರದಲ್ಲಿ ಬಬಿತಾ ಜೊತೆ ನಟಿಸಿದ. ಇಬ್ಬರಿಗೂ ಜೋಡಿಯಾಗಿ ಅಭಿನಯಿಸಿದ ಮೊದಲ ಚಿತ್ರವಾಗಿತ್ತು, ಚಿತ್ರ ಸೋಲಲಿಲ್ಲ ವಾದರೂ ಅಷ್ಟಾಗಿ ಹಣ ಮಾಡಲಿಲ್ಲ. ದೇವೇಂದ್ರ ಗೋಯಲ್ ತಯಾರಿಕೆಯ ‘ ದಸ್ ಲಾಖ್ ‘ ನಲ್ಲಿ ಬಬಿತಾ ಜೊತೆ ಮತ್ತು ಆ ಕಾಲದ ಖ್ಯಾತ ತಾರೆ ಸಾಧನಾ ಜೊತೆ ‘ ಏಕ ಫೂಲ್ ದೋ ಮಾಲಿ ‘ ಚಿತ್ರಗಳ್ಲಿ ಸಂಜಯ ನಟಿಸಿದ ಮತ್ತು ಹಣ ಗಳಿಕೆಯಲ್ಲಿ ಯಶಸ್ವಿಯಾಗಿ ಜುಬಿಲಿ ಆಚರಿಸಿದವು ಕೂಡ. ಜಿತೇಂದ್ರ ಲೀನಾ ಜೊತೆ ‘ ಹಮ್ ಜೋಲಿ ‘ ಮತ್ತು ಬಬಿತಾ ಜೊತೆ ‘ ಫರ್ಜ ‘ ಚಿತ್ರಗಳಲ್ಲಿ ಅಭಿನಯಿಸಿದ, ಅವೂ ಕೂಡ ಜುಬಿಲಿ ಆಚರಿಸಿದ ಚಿತ್ರಗಳೆ. ಆ ವೇಳೆಗೆ ಸಾಧನಾ ಮತ್ತು ವೈಜಯಂತಿಮಾಲಾ ನಿವೃತ್ತಿಯ ಅಂಚಿನಲ್ಲಿದ್ದರು. ಬಿ.ಅನಂತಸ್ವಾಮಿ ಯವರ ತಯಾರಿಕೆ ‘ ಸಪನೋಂಕಾ ಸೌದಾಗರ್ ‘ ನಲ್ಲಿ ದಕ್ಷಿಣದ ನೃತ್ಯ ವಿಶಾರದೆ ಹೇಮಾ ಮಾಲಿನಿ ನಟಿಸಿದ್ದಳು. ಆಕೆಯ ಅಭಿನಯ ನೃತ್ಯ ಪ್ರೇಕ್ಷಕರ ಮೆಚ್ಚುಗೆ ಪಡೆದವು. ಹೀಗಾಗಿ ಹೇಮಾ ಮಾಲಿನಿ ಮತ್ತು ಲೀನಾ ಚಂದಾವರಕರ ಕ್ರಮೇಣ ವೈಜಯಂತಿ ಮಾಲಾ ಮತ್ತು ಸಾಧನಾರ ಸ್ಥಾನ ತುಂಬಿದರು. ಆಗ ಜಿತೆಂದ್ರ ಮತ್ತು ಲೀನಾ ಜೊಡಿ ಜನಪ್ರಿಯ ಜೋಡಿ ಎನಿಸಿತ್ತು, ಜೊತೆಗೆ ಬಬಿತಾಳ ಮಾರ್ಕೆಟ್ ಸಹ ಕುದುರಿ ಆಕೆ ಶಮ್ಮಿ ಕಪೂರ, ಶಶಿ ಕಪೂರ, ಜಿತೇಂದ್ರ್, ಸಂಜಯ, ಬಿಶ್ವಜೀತ, ರಣಧೀರ ಕಪೂರ ಮುಂತಾದ ಖ್ಯಾತನಾಮ ನಾಯಕರ ಜೊತೆ ಅಭಿನಯಿಸಿ ಯಶಸ್ವಿ ನಟಿ ಎನಿಸಿ ಕೊಂಡಿದ್ದಳು. ಇವರೆಲ್ಲರ ಮಧ್ಯೆ ಸತ್ಯಜೀತ್ ರೇ ಯವರ ‘ ದೇವಿ ‘ ಎಂಬ ಬಂಗಾಲಿ ಚಿತ್ರದ ಮೂಲಕ ತೆರೆಗೆ ಬಂದಿದ್ದ ಬಂಗಾಳಿ ಚೆಲುವೆ ಶಕ್ತಿ ಸಾಮಂತರ ‘ ಕಶ್ಮೀರ್ ಕಿ ಕಲಿ ‘ ಚಿತ್ರೆದ ಮೂಲಕ ತೆರೆಗೆ ಬಂದು ಅಭಿನಯ ರೂಪ ಎರಡೂ ಇದ್ದ ಆಕೆ ಒಂದು ದೊಡ್ಡ ಬ್ರೆಕ್ ಗೆ ಆಕೆ ಕಾದಿದ್ಳು. 1970 ರಲ್ಲಿ ಶಕ್ತಿ ಸಾಮಂತರ ‘ ಆರಾಧನಾ ‘ ಚಿತ್ರದಲ್ಲಿ ಶರ್ಮಿಳಾಗೆ ದ್ವಿಪಾತ್ರ ವಿದ್ದು ಆಕೆಗೆ ಎದುರು ನಟನಿಗೆ ಸಹ ತಂದೆ ಮಗನಾಗಿ ಆಭಿನಯಿಸುವ ಸ್ಪರ್ಧಾತ್ಮಕ ಪಾತ್ರವಿತ್ತು. ಆ ಪಾತ್ರಕ್ಕೆ ರಾಜೇಶ ಖನ್ನಾ ಆಯ್ಕೆಯಾದ. ಸಮರ್ಥವಾಗಿ ನಟಿಸಿದ. ಆರಾಧನಾ ಸಿಲ್ವರ ಮತ್ತು ಗೋಲ್ಡನ್ ಜುಬಿಲಿ ಕಂಡ ಚಿತ್ರ. ನಾಯಕ ನಟನಾಗಿ ರಾಜೇಶ ಖನ್ನಾ ಯಶಸ್ವಿ ಯಾಗಿದ್ದ. ಅದೇ ವರುಷ ಹೇಮಾ ಮಾಲಿನಿ ಮತ್ತು ಶಮ್ಮಿ ಕಪೂರ ಜೊತೆ ಜಿಪಿ ಸಿಪ್ಪಿ ಯವರ ಚಿತ್ರ ‘’ ಅಂದಾಜ್ ‘ ನಲ್ಲಿ ನಟಿಸಿದ, ಅದೂ ಯಶಸ್ವಿ ಚಿತ್ರವೆ. ಅಲ್ಲಿಂದ ರಾಜೇಶ ಖನ್ನಾ ಹಿಂದಿರುಗಿ ನೋಡಲಿಲ್ಲ. 1970 ರಿಂದ 1980 ರವರೆಗೆ ರಾಜೇಶ ಖನ್ನಾನದೆ ಕಾಲ. ಆತ ಸತತವಾಗಿ ಹದಿನೈದು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ. ಆತನ ಆಭಿನಯದ ಕೊನೆಯ ಚಿತ್ರ ಲೈಲಾ ಖಾನ್ ಜೊತೆ ನಟಿಸಿದ ‘ ವಫಾ ‘ ಚಿತ್ರ. ಆತ ಒಟ್ಟು 180 ಚಿತ್ರಗಳಲ್ಲಿ ನಟಿಸಿದ. ಮೂರು ಬಾರಿ ಅತ್ಯುತ್ತಮ ನಟ ಎಂದು ಫಿಲಂ ಫೇರ್ ಪ್ರಶಸ್ತಿ ಪಡೆದ. ಒಟ್ಟು ಹದಿನಾಲ್ಕು ಬಾರಿ ಅತ್ತ್ಯುತ್ತಮ ನಟನ ಸ್ಪರ್ದೇಗೆ ಆಯ್ಕೆ ಯಾಗಿದ್ದ. ಆತನ ಹಲವು ಯಶಸ್ವಿ ಚಿತ್ರಗಳನ್ನು ಹೆಸರಿಸುವುದಾದಲ್ಲಿ ಆಖರಿ ಖತ್, ರಾಜ್, ಬಹಾರೋಕೆ ಸಪನೆ, ಸಚ್ಚಾ ಝೂಟಾ, ದಿ ಟ್ರೇನ್, ಇತ್ತೆಫಾಕ್, ಆರಾಧನಾ, ಅಮರ ಪ್ರೇಮ, ಹಾಥಿ ಮೆರೆ ಸಾಥಿ, ಆಪ್ ಕಿ ಕಸಮ್, ದಾಗ್, ಮೆಹಬೂಬಾ, ಮೆರೆ ಜೀವನ್ ಸಾಥಿ, ನಮಕ್ ಹರಾಮ್, ಆನಂದ್, ಸಫರ್, ಅಂದಾಜ್, ಖಾಮೋಶಿ, ರೋಟಿ, ದೋ ರಾಸ್ತೆ, ಪ್ರೆಮ್ ನಗರ್, ಸೌತೆನ್, ಆಖಿರ್ ಕ್ಯ್ಞೂಮುಂತಾದವುಗಲೂ. ಈತ ಹೆಚ್ಚಾಗಿ ಅಭಿನಯಿಸಿದ್ದು ಹೇಮಾ ಮಾಲಿನಿ, ಶರ್ಮಿಳಾ ಟ್ಯಾಗೊರ್ ಮತ್ತು ಮುಮ್ತಾಝ್ ಜೊತೆ ಅವರ ಜೊತೆಗೆ ಅಭಿನಯಿಸಿದ ಚಿತ್ರಗಳೆಲ್ಲ ಯಶಸ್ವಿ ಚಿತ್ರಗಳೆ. ಇವರಲ್ಲದೆ ನಂದಾ, ಬಬಿತಾ, ತನುಜಾ, ಇಂದ್ರಾಣಿ ಮುಖರ್ಜಿ, ರೇಖಾ, ಝೀನತ್ ಅಮಾನ್, ಲೀನಾ ಚಂದಾವರಕರ್, ಕಿರಣ್ ಜುನೆಜಾ, ಸಿಂಪಲ್ ಕಪಾಡಿಯಾ, ಪದ್ಮಿನಿ ಕೊಲ್ಹಾಪುರೆ, ಸ್ಮಿತಾ ಪಾಟೀಲ, ಶಬಾನಾ ಆಜ್ಮಿ, ಟೀನಾ ಮುನೀಮ್ ಮಂತಾದವರ ಜೊತೆ ಕೂಡ ಅಭಿನಯಿಸಿದ. ಚಿತ್ರ ಬದುಕಿನಲ್ಲಿ ಯಶಸ್ಸು ಸಾಧಿಸಿದ್ದ ಖನ್ನಾ ತನ್ನ ವೈಯಕ್ತಿಕ ಜೀವನದಲ್ಲಿ ಎಡವಿದ್ದ. ತನ್ನ ಜಮಾನಾದಲ್ಲಿ ಕಾಕಾ ಎಂದೆ ಗುರುತಿಸಲ್ಪಟ್ಟಿದ್ದ ಈತ ‘ ಬಾಬ್ಬಿ ‘ ಖ್ಯಾತಿಯ ತನಗಿಂತ ಬಹಳ ಚಿಕ್ಕವಳಾದ ಡಿಂಪಲ್ ಳನ್ನು ಮದುವೆಯಾದ. ಇವರಿಗೆ ಎರಡು ಜನ ಹೆಣ್ಣು ಮಕ್ಕಳಾದರು. ಇವರ ದಾಂಪತ್ಯ ಜೀವನ 11 ವರ್ಷ ನಡೆಯಿತು. ಈ ಕಾಲ ಅಕ್ಷರಶಹ ಡಿಂಪಲ್ ಗೆ ಗೃಹ ಬಂಧನದ ಕಾಲವೆಂದೆ ಹೇಳಬೇಕು. ಸಹನೆಗೂ ಒಂದು ಮಿತಿಯಿರುತ್ತದೆ. ಹೆಣ್ಣು ಹೆಂಡ ಈತನ ದೌರ್ಬಲ್ಯ ಗಳಾಗಿದ್ದವು, ಒಂದು ದಿನ ಈಕೆ ತನ್ನ ಮಕ್ಕಳೊಡನೆ ಹೊರ ನಡೆದಳು. ಇದಕ್ಕೂ ಮೊದಲು ಈತ ಅಂಜು ಮಹೇಂದ್ರು ಎಂಬ ನಟಿಯ ಜೊತೆ ತನ್ನ ಮನೆಯಲ್ಲಿ ಒಂದೇ ಸೂರಿನಲ್ಲಿ ಇದ್. ಡಿಂಪಲ್ ಬರುವಾಗ ಈಕೆಯನ್ನು ಹೊರ ದಬ್ಬಿದ. ಡಿಂಪಲ್ ಹೋದ ನಂತರ ಮತ್ತೆ ಟೀನಾ ಮುನೀಮ್ ಜೊತೆ ಒಂದೆರಡು ವರ್ಷ ತನ್ನ ಮನೆಯಲ್ಲಿ ಇದ್ದ. ನಂತರ ಆಕೆಯೂ ಅಂಬಾನಿ ಕುಟುಂಬದ ಸೊಸೆಯಾಗಿ ಹೊರ ನಡೆದಳು. ಮನೆ ಬಿಟ್ಟು ಹೊರನಡೆದ ಡಿಂಪಲ್ ಳ ತನ್ನ ಹಾಗೂ ಮಕ್ಕಳ ಬದುಕಿಗಾಗಿ ಮತ್ತೆ ನಟನೆಗೆ ಬಂದಳು. ಆಕೆಯದೆ ಅಭಿಮಾನಿ ವೃಂದವಿತ್ತು ಆಕೆ ಯಶಸ್ವಿ ಯಾದಳೂ ಕೂಡ. ಆಕೆಯ ಅಭಿನಯದ ‘ ರುಡಾಲಿ ‘ ಸಾರ್ವಕಾಲಿಕ ಶ್ರೇಷ್ಟ ಚಿತ್ರ. ಮನೆಯಿಂದ ಹೊರ ನಡೆದ ಡಿಂಪಲ್ ಬಗ್ಗೆ ಕೂಡ ವದಂತಿಗಳಿದ್ದವು. ಆಕೆಗೆ ರಿಷಿ ಕಪೂರ, ರಮೇಶ ಸಿಪ್ಪಿ ಮತ್ತು ಸನ್ನಿ ಡಿಯೋಲ್ ಜೊತೆ ಅಫೇರ್ ಇದ್ದವೆಂದು. ರಂಗು ರಂಗಿನ ಲೋಕದಲ್ಲಿ ವದಂತಿಗಳಿಗೇನು ಬರವೆ? ಅವು ತಮ್ಮ ಪಾಡಿಗೆ ತಾವಿದ್ದವು ಇವರ ಪಾಡಿಗೆ ಇವರಿದ್ದರು. ಇಷ್ಟಾದರೂ ರಾಜೇಶ ಖನ್ನಾ ಮತ್ತು ಡಿಂಪಲ್ ಇಬ್ಬರೂ ವಿವಾಹ ವಿಚ್ಛೇದನ ಪಡೆದಿರಲಿಲ್ಲ. ಏರಿಕೆಯ ದಿನಗಳಲ್ಲಿ ಆತ ತನ್ನ ಅಹಂ ನಲ್ಲಿಯ ಮುಳುಗಿದ್ದ. ಕಾಲ ಆತನನ್ನು ಹಣ್ಣು ಮಾಡುತ್ತ ಬಂದಿತ್ತು. ಹೀಗಾಗಿ ರಾಜೇಶ ಖನ್ನಾ ಆ ದಿನ ಪ್ರಶಸ್ತಿ ಸ್ವೀಕರಿಸುವ ವೇಳೆ ಒಂಟಿಯಾಗಿ ಬಂದಿದ್ದ. ಆತನ ಈ ಏಕಾಂಗಿತನ ಆತನ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿತ್ತು. ರಾಜೇಶ ಖನ್ನ ನಿನ್ನ ವೈಯಕ್ತಿಕ ಬದುಕು ಏನೇ ಆಗಿದ್ದಿರಲಿ, ನೀನು ಒಬ್ಬ ಶ್ರೇಷ್ಟ ನಟನಾಗಿದ್ದೆ, ನಿನ್ನನ್ನು ನಾವು ಅಭಿಮಾನಿಗಳು ಮೆಚ್ಚಿದ್ದೇವೆ, ನಿನ್ನ ವೈಯಕ್ತಿಕ ಬದುಕಿನ ಸೋಲಿಗೆ ವಿಷಾದ ಪಟ್ಟಿದ್ದೇವೆ . ಕಳೆದು ಹೋದುದನ್ನು ಮರೆತು ಬಿಡು, ಬೇಗ ಗುಣಮುಖ ನಾಗಿ ಮರಳಿ ಬಾ. ಯಶಸ್ವಿ ಮುಸ್ಸಂಜೆ ಬದುಕು ನಿನ್ನದಾಗಲಿ. ಚಿತ್ರ ಕೃಪೆ:http://www.nowpubli…

Rating
No votes yet

Comments