ಬಲೆಗೆ ಬಿದ್ದಾಗ...

ಬಲೆಗೆ ಬಿದ್ದಾಗ...

ಎರಡು ತಿಂಗಳ ಹಿಂದಿನ ಘಟನೆ..

ರಾತ್ರಿ ಹನ್ನೆರಡು ಗಂಟೆಯ ಸಮಯ. ಸಂಪದ ಓದುವುದರಲ್ಲಿ ಮಗ್ನನಾಗಿದ್ದೆ. ಸಣ್ಣಗೆ.. ಶಬ್ದ ಕೇಳಿಸಿತು. ಗಮನಕ್ಕೆ ಬಂದರೂ ಓದು ಮುಂದುವರೆಸಿದೆ. ಪುನಃ ಶಬ್ದವಾಯಿತು. (ಭಯಾನಕ ಶಬ್ದವಾಗಿರುತ್ತಿದ್ದರೆ ಹೋಗಿ ಹಾಸಿಗೆಯೊಳಗೆ ಸೇರಿಕೊಳ್ಳುತ್ತಿದ್ದೆ. :) ಹೆಂಡತಿಯನ್ನು ಎಬ್ಬಿಸಿ ಅದೇನದು ಶಬ್ದ ನೋಡು ಎಂದು ಹೇಳುತ್ತಿದ್ದೆ.) ಸಣ್ಣ ಶಬ್ದವಾದುದರಿಂದ ಶಬ್ದದ ಮೂಲ ಹುಡುಕಿಕೊಂಡು ಹೋದೆ..ಕಂಡದ್ದು ಸಣ್ಣ ಕೀಟ!

ಜೇಡರ ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತಾ ಶಬ್ದ ಮಾಡುತ್ತಿತ್ತು. ಜೇಡ ಅದನ್ನು ತಿರುಗಿಸಿ, ತಿರುಗಿಸಿ ತನ್ನ ಬಲೆಯಲ್ಲಿ ಸುತ್ತುತ್ತಿತ್ತು.

ರಾತ್ರಿ ಸೆಖೆ ಎಂದು ಕಿಟಕಿ ತೆರೆದಿಟ್ಟದ್ದರಿಂದ, ಲೈಟ್ ಬೆಳಕಿಗೆ, ಕೀಟ ರೂಮೊಳಗೆ ಬಂದಿರಬಹುದು. ಚಿಕ್ಕ ಜೇಡಕ್ಕೆ ಅನಿರೀಕ್ಷಿತ ಮಿಡ್ನೈಟ್ ಭೋಜನ ಎಂದು ಯೋಚಿಸಿ ಪುನಃ ಬಂದು ಸಂಪದದಲ್ಲಿ ಮುಳುಗಿದೆ.

ಆದರೆ ಆ ಕೀಟ ಆಗಾಗ ಶಬ್ದ ಮಾಡುತ್ತಲೇ ಇತ್ತು. ಅಸಹಾಯಕ ಸ್ಥಿತಿಯಲ್ಲಿರುವ ಕೀಟ "ಹೆಲ್ಪ್ ಹೆಲ್ಪ್" ಎಂದು ಮೊರೆ ಇಟ್ಟಾಗ, ಇಷ್ಟು ದೊಡ್ಡ ದೇಹ ಇಟ್ಟುಕೊಂಡು ರಕ್ಷಿಸದೇ ಇರುವುದು ತಪ್ಪಲ್ವಾ, ಎಂದು ಆಲೋಚಿಸಿ, ಮೇಜಿನ ಮೇಲೆ ಇದ್ದ TOI ಪೇಪರನ್ನು ರೌಂಡಾಗಿ ಸುತ್ತಿ, ಜೇಡರ ಬಲೆಯಿಂದ ಕೀಟವನ್ನು ಬಿಡಿಸಿ ಬಂದೆ. 

ಸ್ವಲ್ಪ ಸಮಯದ ನಂತರ ಪುನಃ ಅದೇ ಶಬ್ದ!

ನೋಡಿದರೆ........ಜೇಡರ ಬಲೆಯಿಂದ ನಾನದನ್ನು ಬಿಡಿಸಿದರೂ, ಜೇಡ ಅದಕ್ಕೆ ಸುತ್ತಿದ ಬಲೆಯಿಂದ ಬಿಡಿಸಲಾಗದೇ ಒದ್ದಾಡುತ್ತಿತ್ತು. ಈಗೇನು ಮಾಡವುದು? ಇಷ್ಟು ಸಣ್ಣ ಕೀಟವನ್ನು ಜೇಡ ಸುತ್ತಿದ ಬಲೆಯಿಂದ ಬಿಡಿಸುವುದು ಹೇಗೆ?

ಮೊಬೈಲಲ್ಲಿ ಅದರ ಫೋಟೋ ತೆಗೆದೆ. ಆ ಫೋಟೋವನ್ನು ಇಮೇಜ್ ಎಡಿಟರ್‌ಗೆ ಹೋಗಿ, ದೊಡ್ಡದು ಮಾಡುತ್ತಾ ಹೋದೆ. ದೊಡ್ಡದಾದ ಚಿತ್ರದಲ್ಲಿ, ಜೇಡರ ಬಲೆಯನ್ನು ಎಲ್ಲಿಂದ ಬಿಡಿಸಿದರೆ ಕೀಟದ ರೆಕ್ಕೆಗೆ ಹಾನಿಯಾಗುವುದಿಲ್ಲ ಎಂದು ನೋಡಿಕೊಂಡೆ. ಕಸಬರಿಕೆಯ ಕಡ್ಡಿಯೊಂದನ್ನು ಸಣ್ಣದಾಗಿ ನಾಲ್ಕು ಸೀಳು ಮಾಡಿ, ಅದರಿಂದ ಬಿಡಿಸುತ್ತಿದ್ದೆ. ಫೋಟೋ ತೆಗೆಯುವುದು, ಎನ್ಲಾರ್ಜ್ ಮಾಡುವುದು,ಬಲೆ ಬಿಡಿಸುವುದು..ಆ ಕೀಟವೂ ಪ್ರಯತ್ನಿಸುತ್ತಿತ್ತು. ನಡು ನಡುವೆ ಬಲ ಹಾಕಿ ಜಂಪ್ ಮಾಡುತ್ತಿತ್ತು. ಒಂದು ಸುತ್ತು ಕುತ್ತಿಗೆಗೆ ಸುತ್ತಿದ್ದರೆ ಸಾಕಿತ್ತು..ಈ ಜೇಡ ನೋಡಿದರೆ "ದ್ರೌಪದಿಯ ಸೀರೆ" ತರಹ ಸುತ್ತಿದ್ದೇ ಸುತ್ತಿದ್ದು.... :)

ಹೆಲ್ಪ್ ಎಂದು ಕ್ಷಣ ಕ್ಷಣವೂ ಮೊರೆಯಿಟ್ಟ ಕೀಟ, ಕೊನೆಗೆ ಒಂದು ಫೋಟೋಗೆ ಪೋಸ್ ಸಹ ಕೊಡದೆ ಹಾರಿ ಹೋಯಿತು.

-ಗಣೇಶ.

Rating
No votes yet

Comments