ಜಯಂತ ಕಾಯ್ಕಿಣಿಯವರೊಂದಿಗೆ ಒಂದು ಸಂಜೆ

ಜಯಂತ ಕಾಯ್ಕಿಣಿಯವರೊಂದಿಗೆ ಒಂದು ಸಂಜೆ

ಜಯಂತ್ ಕಾಯ್ಕಿಣಿ ಯವರೊಂದಿಗೆ  ಒಂದು ಸಂಜೆ
                                     - ಲಕ್ಷ್ಮೀಕಾಂತ ಇಟ್ನಾಳ
    ಇತ್ತೀಚೆಗೆ  ಸ್ಟಾರ್ ಸಾಹಿತಿ ಜಯಂತ್ ಕಾಯ್ಕಿಣಿ ಯವರನ್ನು  ಕಾಣುವ, ಕೇಳುವ  ಹಾಗೂ ಅವರೊಂದಿಗೆ ಮಾತನಾಡುವ ಅವಕಾಶವೊಂದು ನನಗೊದಗಿತ್ತು. ಅಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಹೆಸರಾಂತ ಸಾಹಿತಿ ಕಥೆ,  ಕಾದಂಬರಿಕಾರ ಯಶವಂತ ಚಿತ್ತಾಲರ ಕುರಿತು ಉಪನ್ಯಾಸವನ್ನು ಜಯಂತರವರಿಂದ ಕೇಳುವ ಸುಯೋಗ ನನಗೆ ಒದಗಿ ಬಂದಿತ್ತು. 
 
ಅವರು ನೀಡಿದ ಎರಡು ಉದಾಹರಣೆಗಳು ಬಹುಕಾಲ ನೆನಪಿನಲ್ಲಿ ಉಳಿಯುವಂತಹವು, 
 
    ಹಳ್ಳಿಯ ಗೆಳೆಯ ಸುಬ್ರಹ್ಮಣ್ಯ ಒಮ್ಮೆ ಬೆಂಗಳೂರಿಗೆ ಬಂದಾಗ, ದೊಡ್ಡ ಸಾಫ್ಟವೇರ್ ಕಂಪನಿಯೊಂದರಲ್ಲಿ ಸಿ ಇ ಒ ಹುದ್ದೆಯಲ್ಲಿದ್ದ ತನ್ನ ಬಾಲ್ಯದ ಸಹಪಾಠಿಯೊಬ್ಬನನ್ನು ನೋಡಲು ಹೋಗಿ, ಕಚೇರಿಯ  ತುಂಬ ಪ್ರಖರವಾದ ಬೆಳಕಿನಲ್ಲಿ ದೊಡ್ಡ ಕುರ್ಚಿಯಮೇಲೆ ಕುಳಿತವನಿಗೆ ಭೇಟಿಯಾಗಿ, ಕಣ್ತುಂಬ ಅವನನ್ನು ನೋಡಿ, ಅಭಿಮಾನದಿಂದ ಮಾತನಾಡಿಸಿದಾಗ ಗುರುತು ಪರಿಚಯವಿಲ್ಲದಂತೆ ವರ್ತಿಸಿದ ಅವನಿಗೆ, ತನ್ನ ಪರಿಚಯ ಹೇಳಿದಾಗಲೂ ಗುರುತು ಹಿಡಿಯದೇ, ದುಡ್ಡಿಗಾಗಿ  ಬಂದಿರಬಹುದೆಂದು ಅಸಢ್ಯೆಯಿಂದ ಕಡೆಗಣಿಸಿದ ಆ ಮಿತ್ರ, ವಿದ್ಯುತ್ ಕೈಕೊಟ್ಟು ಜವಾನ್ ತಂದಿಟ್ಟ ಮಿಣುಕು ದೀಪದ ಬೆಳಕಿನಲ್ಲಿ, ಆ ಗೆಳೆಯನನ್ನು   ನೋಡಿ “ಅರೇ! ಹೇ, ಸುಬ್ಬು ಯಾವಾಗ ಬಂದ್ಯೋ” ಎಂದು ಎದ್ದು ಬಂದು ತಬ್ಬಿಕೊಳ್ಳುವ  ಪ್ರಸಂಗ,  ಅವಶ್ಯಕತೆಗಿಂತ ಹೆಚ್ಚು ಸಂಪತ್ತಿ ( ಪ್ರಖರ ಬೆಳಕು) ನಲ್ಲಿ ಜೀವಿಸುತ್ತಿರುವ ಸಮುದಾಯಕ್ಕೆ, ಮಿಥ್ಯ ಮೌಲ್ಯಗಳ ಬೆನ್ನು ಹತ್ತಿದ್ದನ್ನು ಸಾಂಕೇತಿಕವಾಗಿ ವಿವರಿಸಿದ ರೀತಿ ನಿಜವಾಗಿಯೂ  ಕಣ್ಣು ತೆರೆಸುವಂತಿತ್ತು. 
 ಇನ್ನೊಮ್ಮೆ    ಸಮೀಪದ   ಯುವಬಂಧುವೊಬ್ಬ  ಯಾರನ್ನೋ   ಕುರಿತು ಇವರೊಂದಿಗೆ, ಜಯಂತ ಮಾಮ, “ ಅವರ ಫ್ಯಾಮಿಲಿ ತುಂಬ ಸಾಲಿಡ್, ಎರಡು ಬೀರ್ ಶಾಪ್ , ಎರಡು ಪೆಟ್ರೋಲ್ ಪಂಪ್ ಇದೆ. ಎಂಥ ಸಾಲಿಡ್ ಗೊತ್ತಾ” ಎಂದಾಗ, ಜಯಂತರವರು ಹೇಳಿದ ಮಾತನ್ನು ಗಮನಿಸಿ, “ಅದೆಂಥಾ ಸಾಲಿಡ್ಡೋ? ಅದೆಲ್ಲ “ಲಿಕ್ವಿಡ್” ಅಲ್ವೇನೋ!”  ಎಂದು ನೀಡಿದ ವಿವರಣೆ ಈಗಿನ ನಮ್ಮ ಸಾಫ್ಟವೇರ್ ಖಜಾನೆಗಳತ್ತ ಮುಗಿಬಿದ್ದ ಯುವಶಕ್ತಿಯು ಚಲಿಸುತ್ತಿರುವ ದಿಕ್ಕನ್ನು ತೀಕ್ಷ್ಣವಾಗಿ ಎಚ್ಚರಿಸಿದಂತಿತ್ತು.
 
    ಉಪನ್ಯಾಸದಲ್ಲಿ ಚಿತ್ತಾಲರ ಕುರಿತು ಹೇಳುತ್ತ ಮುಂಬಯಿಯಲ್ಲಿ ಅವರೊಡನಿದ್ದ ಒಡನಾಟದ  ಬಗ್ಗೆ ಸವಿಸ್ತಾರವಾಗಿ ವಿವರಿಸಿ, ಅವರ ಮೇಲೆ ತಮಗೆ ಇದ್ದ ಪ್ರೀತಿ, ವಿಶ್ವಾಸ, ಅವರ ಒಡನಾಟದಲ್ಲಿ ಬೆಳೆದ  ಸಾಹಿತ್ಯ ವೈಖರಿ ಗಳನ್ನು ಪ್ರಸ್ತುತಪಡಿಸಿದ ರೀತಿ ತುಂಬ ಆಪ್ಯಾಯಮಾನ. ಅವರನ್ನು  ಅಳವಾಗಿ ಅಭ್ಯಸಿಸಿದ್ದು ಅಲ್ಲದೇ, ಚಿತ್ತಾಲರು ತಮ್ಮ ಕಥಾ ಕಾದಂಬರಿಗಳ ಕರಡು ತಯಾರಿಸಿದ ಕೂಡಲೇ ಜಯಂತರನ್ನು   ಬ್ಯಾಂಡ್ ಸ್ಟ್ಯಾಂಡ ನಲ್ಲಿರುವ ( ಮುಂಬಯಿಯ ಬ್ಯಾಂಡ್ ಸ್ಯಾಂಡ, ನಮ್ಮ ಬೆಂಗ   ಳೂರಿನ ಬ್ರಿಗೇಡ್ ರೋಡ್,  ಧಾರವಾಡದ ಸುಭಾಸ ರೋಡ್ ತರಹ ಯುವ ಪ್ರೇಮಿಗಳು ಸಂಜೆ ವಾಯು ವಿಹಾರ? ಮಾಡುವ ತಾಣ) ತಮ್ಮ ಮನೆಗೆ ಕರೆದು ಇವರ ಮುಂದೆ ಓದಿ ಹೇಳುವಾಗ ಇವರು ಮಾಡುತ್ತಿದ್ದ ತುಂಟಾಟಗಳನ್ನು ನೆನಪಿಸಿಕೊಂಡ ಪ್ರಸಂಗಗಳು ತುಂಬ ಮುದನೀಡಿದವು. ಅವರ ಶಿಕಾರಿ, ಪುರುಷೋತ್ತಮ, ಮೂರು ದಾರಿಗಳು  ಕೃತಿಗಳ ಕುರಿತು ಹೇಳುತ್ತ ಚಿತ್ತಾಲರು ತಮ್ಮ ಕೃತಿಯಲ್ಲಿ ಅಳವಡಿಸಿದ ಯಾವದೇ   ಪ್ರಸಂಗಗಳನ್ನು ತುಂಬ ಆಳವಾಗಿ ಅಧ್ಯಯನ ಮಾಡಿ ಅವುಗಳೊಡನೆ ತಾದಾತ್ಮ್ಯ ಸಾಧಿಸಿದ  ನಂತರವೇ ಅವರು ಆ ಅನುಭವಗಳನ್ನು ಅಕ್ಷರರೂ¥ಕ್ಕೆ ಇಳಿಸುತ್ತಿದ್ದರೆಂದು ಹೇಳುವ ಸಂದರ್ಭದಲ್ಲಿ ಜಯಂತರವರು ಕೊಟ್ಟ ಉದಾಹರಣೆ ಮೆಚ್ಚುವಂತಹುದು.  ಹೂವುಗಳ ಮಕರಂzವನ್ನು ಕೃತಕವಾಗಿ ಹೀರಿ ಸಂಗ್ರಹಿಸಿದರೆ ಜೇನಾದೀತೇ? ಎನ್ನುವ ಆ ಹೋಲಿಕೆಯ ವಿವರಣೆ ಬಹು ಸುಂದರ. ನೂರು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಾಗದ ಹೋಲಿಕೆ. ಇದನ್ನು ಇಂದಿನ ಪೀಳಿಗೆಯ ದಿಢೀರ್ ಯುವಸಾಹಿತ್ಯ ಲೇಖಕರು ನಿಜವಾಗಿಯೂ ಅಳವಡಿಸಿಕೊಳ್ಳಬೇಕು.
   ಜಿ.ಎಸ್. ನಾಯಕರು? ಚಿತ್ತಾಲರ ಒಂದು ಕೃತಿಯ ವಿಮರ್ಶೆಯಲ್ಲಿ ಸಾವನ್ನು “ಕುಸುರಿಯಂತೆ” ಚಿತ್ರಿಸಲಾಗಿದೆ ಎಂದಿದ್ದನ್ನು ಚಿತ್ತಾಲರು ಅದೆಷ್ಟು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಉತ್ತರ ರೂಪವಾಗಿ ಪ್ರಸಿದ್ಧ  ಕಥೆ ‘ಕಥೆಯಾದಳು ಹುಡುಗಿ’  ಬರೆದದ್ದು ಎನ್ನುವ ಸಂಗತಿ,  ಆ  ಕಥೆಯ ಹುಟ್ಟಿನ ಹಿಂದಿನ ಪ್ರವರ ಮೊಟ್ಟ ವೊದಲು ಸಾಹಿತ್ಯ ಲೋಕಕ್ಕೆ ತಿಳಿಯಿತು. ಕಥೆಗಾರರಾಗಬೇಕೆನಿಸಿದವರು ಖಂಡಿತ ಚಿತ್ತಾಲರ ‘ಶಿಕಾರಿ’ ಓದಲೇಬೇಕು,  ಪ್ರತಿ ಕಥೆಯ ಸಿಧ್ಧತೆಗಳನ್ನು  ಸೂಕ್ಷ್ಮವಾಗಿ ಗಮನಿಸಬೇಕು ಎಂದು ಅದರ ರಸವನ್ನು ಉಣಬಡಿಸಿದರು. 
 
 
    ಯಾವದೇ ಪ್ರಶಸ್ತಿಗಾಗಿ ಹಂಬಲಿಸದೇ ಸಾಹಿತ್ಯ ಸೇವೆ ಮಾಡಲು ಹೇಳಿದ ಕಿವಿಮಾತು ಈ ಸಂದರ್ಭದಲ್ಲಿ ಅವಶ್ಯವಾಗಿತ್ತು. ಕಥೆಗಾಗಲಿ , ಕಾದಂಬರಿಗಾಗಲಿ, ಯಾವುದೇ ಸಾಹಿತ್ಯ ಪ್ರಶಸ್ತಿಗಾಗಿ ಹಂಬಲಿಸದೇ  ಪ್ರಶಸ್ತಿ ಬಂದಲ್ಲಿ ಅದು ಆ ಪುಸ್ತಕಕ್ಕೆ ಬಂದಿದೆ. ಬರದಿದ್ದರೆ ಆ ಪುಸ್ತಕಕ್ಕೆ ಬರಲಿಲ್ಲ ಎಂಬುದರ ಅರಿವು ನಾವು ಮಾಡಿಕೊಳ್ಳಬೇಕಿದೆ. ಅಂದಾಗ ಆ ಪುಸ್ತಕದಲ್ಲಿ ಇರಬಹುದಾದ ನ್ಯೂನತೆಗಳ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸಲು ಸಾಧ್ಯವಾಗುತ್ತದೆ ಎಂದಿದ್ದು ಮೆಚ್ಚತಕ್ಕದ್ದೇ.
 
 ಮಗು ಶಾಲೆಯಿಂದ ಬಂದು ಅಮ್ಮನಿಗೆ ಮಿಸ್ ಏನೇನು ಹೇಳಿದ್ದು ಎಂದು ನೆನಪಿಸಿಕೊಂಡು ಹೇಳಿದ ಹಾಗೆ  ಕರಾವಳಿ ಕನ್ನಡವನ್ನು ಧಾರವಾಡ ಮಿಶ್ರಿತ ಭಾಷೆಯಲ್ಲಿ ಚಿತ್ತಾಲರ ಬಗ್ಗೆ ಟಿಪ್ಪಣಿಗಳನ್ನು  ಹುಡುಕಿ ಹುಡುಕಿ ಜಯಂತರು ಹೇಳಿದ್ದು ಜಸ್ಟ್ ಡೌನ್ ಟು ಅರ್ಥ್. ಕಪಟವಿಲ್ಲದ, ಮುಖವಾಡವಿಲ್ಲದ, ಜಟ್ಟ್ ಸೀದಾ ಸಾದಾ. ಇದೇ ನಮಗೆಲ್ಲ  ನೇರವಾಗಿ ತಟ್ಟಿದ್ದು., ನಿಜವಾಗಿಯೂ ಮಾನವೀಯ ಮೌಲ್ಯಗಳನ್ನು ಮೈತುಂಬ ಅಳವಡಿಸಿಕೊಂಡ ಶ್ರೀಸಾಮಾನ್ಯ, ಸಾಹಿತ್ಯ ದೈತ್ಯ ವಾಮನ.
 ಉಪನ್ಯಾಸ ಮಾತ್ರ ಚಿತ್ತಾಲರ ಸಾಹಿತ್ಯವನ್ನು “ಸುಬ್ಬುವಿನ ಮಿಣುಕು ದೀಪ”ದಂತೆ ಓದದವರಿಗೆ ಕಿಚ್ಚುಹಚ್ಚಿ ಓದುವಂತೆ ಪ್ರೇರೇಪಿಸಿದ್ದು ಸುಳ್ಳಲ್ಲ.
 ಕಾರ್ಯಕ್ರಮ ಮುಗಿದ ಬಳಿಕ ನಾನು ನನ್ನ ಪರಿಚಯ ಹೇಳುತ್ತಿದ್ದಂತೆ ಕೂಡಲೇ ನನ್ನ ಪರಿಚಯ ಹಿಡಿದು, ಹಿಂದಿನ ದಿನ ನಾನು ಅವರಿಗೆ ಕಳುಹಿಸಿದ ಒಂದು ಈಮೇಲ್ ವಿಷಯದ ಕುರಿತು ನೆನಪು ಮಾಡಿ ಹೇಳಿದ್ದು ಅಲ್ಲದೇ  ಅದರ ಕುರಿತು ಚರ್ಚಿಸಿದರು. ಹಾಗೂ ಅವರೊಡನೆ ಖಾಸಗಿಯಾಗಿ   ಚರ್ಚಿಸುತ್ತಿರುವ ಸಂದರ್ಭದಲ್ಲಿ ಅವರೊಬ್ಬ ಉತ್ತಮ ಪಕ್ಷಿ  ಪ್ರೇಮಿ ಎಂಬುದು ತಿಳಿದು ಖುಶಿಯಾಯಿತು. ಏಕೆಂದರೆ ನಾನೂ ಕೂಡ  ಒಬ್ಬ   ಪಕ್ಷಿ ಪ್ರೇಮಿ. ಅವರ ಮಾತುಗಳನ್ಮ್ನ ಕೇಳುತ್ತ ಆಸ್ವಾದಿಸುತ್ತ   ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಅವರ ಓದಿನ ಆಳ ವಿಸ್ತಾರ ಅಗಾಧ. ಸಾಹಿತ್ಯ ಸವಿ ಸವಿದ ಧನ್ಯತೆಗಳೊಂದಿಗೆ ಅಂದು ಅವರನ್ನು ಬೀಳ್ಕೊಟ್ಟೆವು.
 
 
Rating
No votes yet

Comments