ಗೌರಿ ನೀಲಿ ಮಸಿಯಲ್ಲಿ ಪತ್ರ ಬರೆದದ್ದು - ಜಮಾನಾದ ಜೋಕುಗಳು ೫

ಗೌರಿ ನೀಲಿ ಮಸಿಯಲ್ಲಿ ಪತ್ರ ಬರೆದದ್ದು - ಜಮಾನಾದ ಜೋಕುಗಳು ೫

    ಗೌರಿಯನ್ನು ಮದುವೆ ಮಾಡಿಕೊಟ್ಟು ಗಂಡನ ಮನೆಗೆ ಕಳುಹಿಸುವ ಸಮಯ ಬಂದಿತು. ಆಗಿನ ಕಾಲದಲ್ಲಿ ಈಗಿನಂತೆ ಮೊಬೈಲು ಅಥವಾ ಟೆಲಿಫೋನು ಇರಲಿಲ್ಲ. ಒಂದು ವೇಳೆ ಟೆಲಿಫೋನು ಇದ್ದರೂ ಕೂಡ ದೂರದಲ್ಲಿರುವ ಫೋಸ್ಟಾಫಿಸಿನಲ್ಲಿ ಕಾಲ್ ಬುಕ್ ಮಾಡಿ ಘಂಟೆಗಟ್ಟಲೆ ಅಥವಾ ಕೆಲವೊಮ್ಮೆ ದಿನಗಟ್ಟಲೆ ಕಾದ ಮೇಲೆ ಸಂಪರ್ಕ ಸಿಗುತ್ತಿತ್ತು. ಹೀಗಾಗಿ ಜನರ ವ್ಯವಹಾರವೇನಿದ್ದರೂ ಪತ್ರ ಮುಖೇನವೇ ಹೆಚ್ಚಾಗಿ ನಡೆಯುತ್ತಿತ್ತು. ಗೌರಿಯನ್ನು ಮದುವೆ ಮಾಡಿಕೊಟ್ಟದ್ದು ದೂರದ ಊರಿಗೆ; ಆ ಊರಿನಲ್ಲಿ ಅವಳ ಕಷ್ಟ ಸುಖ ಕೇಳಲಿಕ್ಕೆ ತಮ್ಮ ಹತ್ತಿರದ ನೆಂಟರಾರೂ ಇಲ್ಲದ ಕಾರಣ ಅವರ ತಂದೆ ತಾಯಿಗಳು ಅವಳಿಗೆ ಹೇಳಿದರು, ನಿನ್ನ ಗಂಡನ ಮನೆ ಸೇರಿದ ಮೇಲೆ ಅಲ್ಲಿಯ ಕ್ಷೇಮ ಸಮಾಚಾರಕ್ಕೆ ಪತ್ರ ಬರೆ ಎಂದರು. ಒಂದು ವೇಳೆ ಅಲ್ಲಿಯ ಪರಿಸ್ಥಿತಿ ಚೆನ್ನಾಗಿರದೆ, ಗೌರಿ ಬರೆದ ಪತ್ರವನ್ನೇನಾದರೂ ಗಂಡನ ಮನೆಯವರು ನೋಡಿದರೆ ಆಗಬಹುದಾದ ಅನಾಹುತವನ್ನು ತಪ್ಪಿಸಲಿಕ್ಕೆ ಅವರ ತಾಯಿ ಒಂದು ಉಪಾಯವನ್ನು ಮಗಳಿಗೆ ಹೇಳಿಕೊಟ್ಟರು. ಅದರಂತೆ ಅಲ್ಲಿ ಎಲ್ಲವೂ ಚೆನ್ನಾಗಿದೆಯೆಂದರೆ ನೀಲಿ ಷಾಯಿಯಲ್ಲಿ ಪತ್ರ ಬರೆ; ಒಂದು ವೇಳೆ ಪರಿಸ್ಥಿತಿ ಚೆನ್ನಾಗಿರದಿದ್ದರೂ ಕೂಡಾ ಅಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಕೆಂಪು ಷಾಯಿಯಲ್ಲಿ ಪತ್ರ ಬರೆ; ಆಗ ನಮಗೆ ಅಲ್ಲಿನ ಪರಿಸ್ಥಿತಿ ಅರ್ಥವಾಗುತ್ತದೆಂದರು.  ಗಂಡನ ಮನೆಗೆ ಹೋದ ಗೌರಿಯಿಂದ ಸ್ವಲ್ಪ ದಿನಗಳಲ್ಲಿ ಅವಳ ತವರಿಗೆ ಪತ್ರ ಬಂತು, ಅದನ್ನು ನೀಲಿ ಮಸಿಯಲ್ಲಿ ಬರೆದದ್ದರಿಂದ ಗೌರಿಯ ತಾಯಿಗೆ ಖುಷಿಯೋ ಖುಷಿ ತನ್ನ ಮಗಳು ಒಳ್ಳೆಯ ಮನೆ ಸೇರಿದ್ದಾಳೆಂದು. ಪತ್ರ ಓದಿ ಮುಗಿಸಿ ಅದನ್ನು ತನ್ನ ಗಂಡನಿಗೆ ತೋರಿಸಬೇಕೆನ್ನುವಷ್ಟರಲ್ಲಿ ಕಡೆಯಲ್ಲಿ ಚಿಕ್ಕದಾಗಿ ಮಗಳು ಬರೆದಿದ್ದಳು: ಅಮ್ಮ ಕಾಗದ ಬರೆಯಲು ನನಗೆ ಕೆಂಪು ಮಸಿ ಸಿಗಲಿಲ್ಲ!


 

Rating
No votes yet

Comments