ನಾ ತಲೆ ತಿನ್ನೋದ್ ಬಿಡಾಕಿಲ್ಲ !!!

ನಾ ತಲೆ ತಿನ್ನೋದ್ ಬಿಡಾಕಿಲ್ಲ !!!

 

ಬೇರೇನಾದರೂ ಹೇಳುವ ಮೊದಲಿಗೇ ಕೆಲವೊಂದು ’ವಿಶೇಷ ಸೂಚನೆ’ಗಳನ್ನು ಕೊಟ್ಟುಬಿಡುತ್ತೇನೆ....

ಇನ್ನೊಬ್ಬರ ತಲೆ ಕೆಡಿಸಿ, ಅವರು ತಲೆಗೂದಲು ಕಿತ್ತಿಕೊಂಡು ಬೋಳಾಗುವಲ್ಲಿ ನನ್ನದೇನೂ ಖುಷಿ ಇಲ್ಲ ...  ನಿಮಿಷದಲ್ಲಿ ತಲೆಗೂದಲು ಬೆಳೆಯುತ್ತದೆ, ನಾಲ್ಕಾರು ಹುಡುಗಿಯರ ಮಧ್ಯೆ ಬಾಂಡ್’ನಂತೆ ನಿಲ್ಲುತ್ತೀರ ಎಂದು ರೀಲು ಬಿಡುವ ಕಂಪನಿಯಿಂದ ನನಗೇನೂ ಲಭವಿಲ್ಲ ... ಜೊತೆಗೆ ಯಾವ ಕೇಶ ತೈಲಿಗರೂ ನಾ ತಿಂದ ಪ್ರತಿ ತಲೆಗೆ ಇಂತಿಷ್ಟು ಕೊಡ್ತೀವಿ ಎಂದು ನನ್ನೊಂದಿಗೆ ಕಾರಾರು ಮಾಡಿಕೊಂಡಿಲ್ಲ ...

 

ಆದ್ರೂನೂವೆ ನಾ ತಲೆ ತಿನ್ನೋದ್ ಬಿಡಾಕಿಲ್ಲ !!!

 

ಅದ್ಸರಿ, ನಾನ್ ತಲೆ ತಿನ್ನೋದಾದ್ರೂ ಏತಕ್ಕೆ? ನಾನು ತಲೆ ತಿನ್ನುವುದು ನನ್ನ ಖುಷಿಗೆ ಮಾತ್ರ !! ಇಷ್ಟು ಮಾತ್ರ ಹೇಳಿ ತಲೆ ತಿನ್ನುವ ಕಾರ್ಯಕ್ರಮವನ್ನು ಆರಂಭಿಸುತ್ತೇನೆ ....

 

ನಾನು ಆರಡಿ ಇದ್ದೇನೆ ಎಂಬೋದೂ ಒಂದು ಸಾಮಾನ್ಯ ಮಾತು ... ನನ್ನ ತಲೆಯ ತುಟ್ಟತುದಿ, ಭೂಮಿಯಿಂದ ಆರಡಿ ಮೇಲಕ್ಕೆ ಇದೆ ಎಂಬೋದೂ ತಲೆ ತಿನ್ನೋ ಮಾತು ... ನಾನು ಆರಡಿ ಇಲ್ಲ ಅಂಬೋದು ಸಂಪೂರ್ಣ ಬೇರೆಯೇ ಮಾತು .... 

 

ಎಲ್ರೂ ನೆಟ್ಟಗೆ ಮಾತನಾಡಿದ್ರೆ ಅದರಲ್ಲಿ ಏನಿರುತ್ತೆ ಮಜ ... "ಇನ್ನು ಕೆಲವೇ ಘಂಟೆಗಳಲ್ಲಿ ಹಲವಾರು ಜನರು ಒಂದೆಡೆ ಕೂಡಿ ಒಂದು ಬಾಲನ್ನು ಬೂಟುಗಾಲಲ್ಲಿ ಯದ್ವಾತದ್ವಾ ತದುಕಲಿದ್ದಾರೆ" ಅಂತನ್ನೋ ಬದಲು "೨:೩೦ಕ್ಕೆ ಯೂರೋ  ಕಪ್ ಫ಼ೈನಲ್ಸ್ ಪಂದ್ಯ ಆರಂಭವಾಗಲಿದೆ" ಎಂದಿದ್ದರೆ ಸಾಕಾಗಿತ್ತು ... ನನ್ನದು ಮೊದಲನೆಯ ಪೈಕಿ ...

 

ಮತ್ತೊಂದು ಉದಾಹರಣೆ ... ಮನೆಗೆ ಬಂದ ಮಗ "ಅಮ್ಮಾ, ನಾ ಬಂದೆ ... ಸಿಕ್ಕಾಪಟ್ಟೆ ಹಸಿವೆ. ತಟ್ಟೆ ಹಾಕಮ್ಮ" ಅನ್ನುವ ಬದಲು ಹೀಗೆ ಸಂಭಾಷಣೆ ನೆಡೆಸಿ ತಲೆ ತಿಂದ್ರೆ ಹೇಗೆ?

 

"ಅಮ್ಮಾ .... ಅಮ್ಮಾ" 

 

"ಲೋ! ಶಂಕ್ರೂ, ಬಂದ್ಯಾ?" 

 

"ಹೌದಮ್ಮ ... ಬಂದೆ" 

 

"ಬಾಪ್ಪಾ" 

 

"ಆಯ್ತಮ್ಮ ಬಂದೆ" 

 

"ಅಮ್ಮಾ .... ಅಮ್ಮಾ" 

 

"ಏನೋ?" 

 

"ಅಮ್ಮಾ" 

 

"ಅದೇನೋ? ಹೇಳೋ" 

 

"ಅದೇನೋ ಗೊತ್ತಿಲ್ಲಮ್ಮ ... ನಿನ್ ನೋಡ್ತಿದ್ರೆ, ಏನು ಹೇಳೋಕ್ಕೆ ಹೋಗ್ತೀನೋ ಅದು ..." 

 

"ತಾಯಿ ಮಗನ ಸಂಬಂಧ ಅಂದ್ರೆ ಹಾಗೇ ಕಣೋ" 

 

"ಅಮ್ಮಾ ಅಮ್ಮಾ" 

 

"ಹೇಳಪ್ಪ" 

 

"ಅಮ್ಮಾ ಅದೂ ಅದೂ" 

 

"ಇರಲಿ ಹೇಳೋ" 

 

"ಅದೂ ತುಂಬಾ ಹಸಿವೆ ಆಗ್ತಿದೆ ಕಣಮ್ಮ" 

 

"ಅಯ್ಯೋ, ಕಂದಾ ... ಹೌದೇನೋ .. ಅದಕ್ಯಾಕಪ್ಪ ಇಷ್ಟು ಸಂಕೋಚ" 

 

"ಹಾಗೇನಿಲ್ಲಮ್ಮ" 

 

"ಬಾಪ್ಪಾ ... ನಿನಗೆ ಇಷ್ಟಾ ಅಂತ ಸೊಪ್ಪಿನ ತೊವ್ವೆ ಮಾಡಿದ್ದೀನಿ " 

 

"ಆಯ್ತಮ್ಮ.." 

 

"ಬೇಗ ಬಾಪ್ಪ" 

 

"ಆಯ್ತಮ್ಮ ತಟ್ಟೆ ಹಾಕಮ್ಮ ... ಈಗ ಬಂದೆ"

 

ಯಪ್ಪಾ ... ಶಿವನೇ ... ಕುಯ್ಸ್ಕೊಂಡ್ ಕುಯ್ಸ್ಕೊಂಡ್ ರಕ್ತವೇ ಬಂದುಬಿಡ್ತಲ್ಲಯ್ಯ ಅನ್ನಬೇಡಿ ...

 

ಅದೂ ಮಾತು ... ಇದೂ ಮಾತು ...

 

ಕೆಲವು ದಿನಗಳ ಹಿಂದಿನ ಮಾತು ... ಒಪ್ಪತ್ತಿನ ಟಿ.ವಿ’ಯ ಧಾರಾವಾಹಿ ನೋಡಿ ಕಣ್ಣೀರು ಹಾಕಲಾಗದ ಪರಿಸ್ಥಿತಿಯಲ್ಲಿದ್ದ ಒಂದು ಸಂಸಾರಕ್ಕೆ ನಮ್ಮಲ್ಲಿ ಟಿ.ವಿ ಕೊಟ್ಟೆವು. ಕೊಟ್ಟ ಮರುದಿನವೇ ನಮ್ಮಲ್ಲಿ ಬಂದು ಕೇಳಿದರು "ರಿಮೋಟ್’ಗೆ ಸೆಲ್ಲು ಹೊಸಾದ? ಹಳತಾ?" ಅಂತ ... D ಗೆ D ಕೊಟ್ರೆ H ಗೆ ಹೋಗಿ M ಹಾಕಿದ್ರಂತೆ ಅಂತ ಅಂದು ಹೊಸಾ ಬ್ಯಾಟರಿಗಳನ್ನು ಕೊಟ್ಟು ಕಳಿಸಿ ಎಲ್ಲೋ ಹೋಗಲಿದ್ದವನು ಹೊರಟು ಹೋದೆ.

 

ಆಮೇಲೆ ಮನೆಗೆ ಬಂದೆ .... ಆಗ್ಲೇ ಅದೇನೋ ಹೇಳಿದ್ಯಲ್ಲ ಏನದು ಅಂದ್ರು ಮನೆ ಜನ ... ಆಗ ಅರಿವಾಯ್ತು ನಾ ಹೇಳಿದ ಮಾತು ಯಾರಿಗೂ ಅರ್ಥವಾಗಿರಲಿಲ್ಲ ಅಂತ .... ನಿಮಗೇನಾದ್ರೂ ಅರ್ಥವಾಯಿತಾ?

 

ಹೋಗ್ಲಿ ಬಿಡಿ ... D ಗೆ D ಕೊಟ್ರೆ H ಗೆ ಹೋಗಿ M ಹಾಕಿದ್ರು ಅಂದ್ರೆ "ಧರ್ಮಕ್ಕೆ ದಟ್ಟಿ ಕೊಟ್ರೆ ಹಿತ್ತಲಿಗೆ ಹೋಗಿ ಮೊಳ ಹಾಕಿದ್ರಂತೆ" ಅಂತ ... ಅಷ್ಟುದ್ದ ಗಾದೆ ಹೇಳೋಕ್ಕೆ ಟೈಮ್ ಇರಲಿಲ್ಲ ಬೆಳಿಗ್ಗೆ !!!

 

ತಲೆ ಹೇಗೆಲ್ಲಾ ತಿನ್ನಬಹುದು ಎಂಬೋದಕ್ಕೆ ಇನ್ನೊಂದು ಊಹಿತ ಪ್ರಸಂಗ ... ಅಂದು, ಪಾರ್ಥರ ’ಸುನಂದ’ ಕಥೆಯ ಮೊದಲ ಸಾಲು ಓದಿದ ಕೂಡಲೆ ತಲೆಗೆ ಬಂದ ತಲೆತಿನ್ನೋ ತಲೆಹರಟೆ ಇದು .... ನಾಟಕದ ಸಂಭಾಷಣೆ ಓದಿದ ಹಾಗೆ ಓದಿಕೊಳ್ಳಿ ...

 

ಜವಾನ : {ನಮ್ರತೆಯಿಂದ} "ಸುನಂದಾ ಮೇಡಮ್, ಸಾಹೇಬ್ರು ನಿಮ್ಮನ್ನು ಕರಿ ಅಂದ್ರು" ... 

 

ಸುನಂದ : {ಸಿಡುಕುತ್ತ} "ನಾನು ಕಪ್ಪು ಅಂತ ನನಗೂ ಗೊತ್ತು. ಅವರೇನು ಹೇಳೋದು?" 

 

ಜವಾನ : {ಗಲಿಬಿಲಿಯಿಂದ} "ಅಯ್ಯೋ! ಹಾಗಲ್ಲಾ ಮೇಡಮ್ ನಾ ಹೇಳಿದ್ದು, ಅವರು ನಿಮ್ಮನ್ನು ಕರೀತಾರೆ ..." 

 

ಸುನಂದ : {ಅರ್ಧಕ್ಕೇ ತಡೆದು} "ಸಾಕು! ಹೌದಪ್ಪಾ ಹೌದು ... ಬಿಳೀ ಜಿರಳೆ ರಮ್ಯಾ ನಿನಗೆ ಮಿನುಗೋ ತಾರೆ ... ನಾನು ’ಕರೀ’ತಾರೆ ಅಲ್ವೇ?" 

 

ಜವಾನ : {ರೋಸಿಹೋಗಿ} "ಅಯ್ಯೋ ಶಿವನೇ, ಮೇಡಂ ಸಾಹೇಬ್ರು ನಿಮ್ಮನ್ನು ಕರಿ ಅಂದ್ರು ಅಂತ ಹೇಳಿದೆ ಅಷ್ಟೇ"

 

ಸುನಂದ : "ಆಹಹಹ! ಅವರು ಕರಿ ಅಂದ್ರು ಅಂತ ನೀನು ಬಂದು ಕರಿಯೋಕ್ಕೆ ನಾನೇನು ಬೀದಿ ಬೋಂಡಾನಾ?" 

 

ಜವಾನ : {ತಲೆ ಚಚ್ಚಿಕೊಳ್ಳುತ್ತ} "ಅಯ್ಯೋ, ಮೇಡಂ, ನನ್ನನ್ನು ಹುರೀ ಬ್ಯಾಡಿ .. ಅವರು ಕೂಗ್ತಾ ಇದ್ದಾರೆ, ಬನ್ನಿ" 

 

ಸುನಂದ : {ಕೈಯಲ್ಲಿದ್ದ ಪೆನ್ನನ್ನು ಬಿಸುಟು} "ಇದು ಇನ್ನೂ ಸರಿ ... ನಿನ್ ಮನೆ ಕಾಯೋಗಾ ... ಅವರು ಕೂಗಿದ್ರು ಅಂತ ನಾನು ಹೋಗಿ ಅವರ ಮುಂದೆ ನಿಂತುಕೊಳ್ಳಲಿಕ್ಕೆ, ನಾನೇನು ಆಟೋರಿಕ್ಷಾನಾ?" 

 

ಜವಾನ : {ಪೆಚ್ಚು ಮೋರೆ ಹಾಕಿಕೊಂಡು} "ಯಾಕೆ ಮೇಡಮ್, ನನ್ ತಲೆ ತಿಂತೀರಾ? ಅವರು ನಿಮ್ ಹತ್ತಿರ ಮಾತನಾಡಬೇಕಂತೆ, ಕರ್ಕೊಂಡ್ ಬಾ ಅಂದ್ರು" 

 

ಸುನಂದ : {ದುರುಗುಟ್ಟಿ ನೋಡಿ} "ಎಲಾ ಇವನ, ಕರ್ಕೊಂಡ್ ಬಾ ಅನ್ನೋಕ್ಕೆ ನನಗೇನು ಕುರುಡಾ? ದಪ್ಪ ಕನ್ನಡಕ ಹಾಕಿರಬಹುದು, ಆದ್ರೆ ಕಣ್ಣು ಕಾಣುತ್ತೆ, ತಿಳ್ಕೋ" ... 

 

ಜವಾನ : {ಸಿಕ್ಕಾಪಟ್ಟೇ ಕನ್ಫ್ಯೂಸ್ ಆಗಿ} "ಆಯ್ತು, ಮೇಡಂ, ಒಂದು ನಿಮಿಷ ಇರಿ, ಬರ್ತೀನಿ" 

 

ಸುನಂದ : {ಕೆಟ್ಟದಾಗಿ ನೋಡುತ್ತ} "ಅಲ್ಲಯ್ಯಾ, ಇಲ್ಲೇ ಇರದೆ ಎಲ್ಲಿಗೆ ಹೋಗ್ತೀನಿ ... ನನಗೆ ಇನ್ನೂ ಹದಿನೈದು ವರ್ಷ ಸವೀಸ್ ಇದೆ" 

 

ಜವಾನ : {ಕೈ ಜೋಡಿಸಿ} "ನನ್ ಬಿಡಿ ಮೇಡಂ, ಈಗ ಬರ್ತೀನಿ" 

 

ಸುನಂದ : "ಅಲ್ಲಯ್ಯ, ನಾನೇನು ನಿನ್ನನ್ನ ಹಿಡ್ಕೊಂಡಿದ್ದೀನಾ ಬಿಡೋದಕ್ಕೆ ... ಒಳ್ಳೇ ತಿಕ್ಕಲ ಸಹವಾಸ ಆಯ್ತಲ್ಲ?" 

 

ಜವಾನ : "ಮೇಡಂ, ನಾನೂ ಅದೇ ಹೇಳಬೇಕೂ ಅಂತಿದ್ದೆ ... ಈಗ ನಾನು ಹೋಗಿ ಸಾಹೇಬರನ್ನೇ ಇಲ್ಲಿಗೇ ಬನ್ನಿ ಅಂತ ಕರೀತೀನಿ, ಆಗಬಹುದಾ?" 

 

ಸುನಂದ : {ಶಾಂತತೆಯಿಂದ} "ಸರಿ ಹೋಯ್ತು ... ನಾನಿದ್ದ ಕಡೆ ಬಂದು ಮಾತನಾಡೋಕ್ಕೆ, ಆ ಸಾಹೇಬರೇನು ನನ್ ಗಂಡನೇ? ನಾನೇ ಬರ್ತೀನಿ ನಡಿ"

 

ಮೂಲೆಯಲ್ಲಿದ್ದ ವಾಸ್’ನಲ್ಲಿದ್ದ ನೀರನ್ನು ತಲೆಗೆ ಸುರಿದುಕೊಂಡ ಜವಾನ !!!

 

ಜವಾನ ’ಕರಿ’ ಅನ್ನೋ ಪದವನ್ನೇ ತನ್ನ ಜೀವನದಿಂದ ಕಿತ್ತುಹಾಕಿ ಬಿಡುತ್ತೇನೆ ಅಂತ ತೀರ್ಮಾನ ಮಾಡುವ ಮುನ್ನ ಯಾರೋ ಕರೆದರು "ಲೇಯ್! ಕರಿಸುಬ್ಬಯ್ಯ! ಸಾಹೇಬ್ರು ಆಗ್ಲಿಂದ ಬೆಲ್ ಹೊಡೀತಿದ್ದಾರೆ, ಕೇಳಿಸ್ತಿಲ್ವಾ?" ಅಂದ್ರು !!! 

 

ಇದಿಷ್ಟು ಜವಾನ ಕರಿಸುಬ್ಬಯ್ಯನ ಕಥೆಯಾಯ್ತು ...

 

ನೀವುಗಳು ಇನ್ನೂ ತಲೆಗೂದಲು ಕಿತ್ಕೊಂಡಿಲ್ಲ ಅಂದ್ರೆ ಮತ್ತೊಂದೆರಡು ಮಾತು ....

 

ಲಂಡನ್’ನಲ್ಲೇ ಹುಟ್ಟಿ ಬೆಳದೆವನ ಹಾಗೆ ಆಡೋ ನನ್ ಸ್ನೇಹಿತನೊಬ್ಬ ಮೊನ್ನೆ ಸಂಜೆ ಕರೆ ಮಾಡಿದ ... ಅವರ ಮನೆಗೆ ಕರೀಬೇಕು ಅಂತ ಕರೆ ಮಾಡಿದ್ದ ... ಸಂಜೆ ಏನು ಕಾರ್ಯಕ್ರಮ ಅಂತ ಕೇಳೋ ಬದಲು "hey guy! what's on your plate this evening?" ಅಂದ ... ನಾನು, ಹಳ್ಳಿ ಗಮಾರ ಹೇಳ್ದೆ "ಏನಿಲ್ ಕಣಣ್ಣೋ ... ಅವರೇಕಾಳ್ ಉಪ್ಪಿಟ್" ಅಂತ

 

ಒಂದಂತೂ ನಿಜ ....

 

ಬಿಳೀ ಮೂಳೆಯ ಮೇಲೆ ಕರಿ ತೊಗಲಿನ ಹೊದಿಕೆ

ಕರೀ ತೊಗಲಿನ ಮೇಳೆ ಬಿಳೀ ಪೌಡರ್’ನ ತಡಿಕೆ

 

ಇರೋ ತನಕ ನನ್ನಂತಹ ಜನ ತಲೆ ತಿನ್ತಾನೇ ಇರ್ತಾರೆ ....

 

ಏನೋ ನನ್ ಕೈಲಾದ ಮಟ್ಟಿಗೆ ನಿಮ್ ತಲೆ ತಿಂದಿದ್ದೀನಿ ಅಂದುಕೊಂಡಿದ್ದೀನಿ ... ಈಗ ನಿಮ್ಮ ಸರದಿ !!!

 

 

Comments