ಅಮರ‌..ಮಧುರ..ಪ್ರೇಮ = ಭಾಗ 14

ಅಮರ‌..ಮಧುರ..ಪ್ರೇಮ = ಭಾಗ 14

ನೋಡ ನೋಡುತ್ತಿದ್ದಂತೆ ಮೂರು ತಿಂಗಳುಗಳು ಕಳೆದುಹೋದವು. ಅಮರ್ ಮಧುರಳ ಸಲಹೆಯಂತೆ ಈ ಬಾರಿಯ ಕಾಲೇಜ್ ಫೆಸ್ಟ್ ನ ಜವಾಬ್ದಾರಿಯನ್ನು ಹೊತ್ತುಕೊಂಡಿರಲಿಲ್ಲ. ಮಧುರ ಮುಂಚೆಯೇ ಹೇಳಿಬಿಟ್ಟಿದ್ದಳು. ಈ ಬಾರಿ ಓದಿನ ಕಡೆ ಗಮನ ಕೊಡು. ಆ ಜವಾಬ್ದಾರಿಯನ್ನು ಬೇರೆಯವರಿಗೆ ಒಪ್ಪಿಸು ಹಾಗೆಯೇ ನೀನು ಯಾವುದರಲ್ಲೂ ಭಾಗವಹಿಸುವುದು ಬೇಡ. ನಿನ್ನ ಸಂಪೂರ್ಣ ಗಮನ ಓದಿನ ಕಡೆಯೇ ಇರಲಿ. ಇಲ್ಲದಿದ್ದರೆ ನಿನ್ನ ಮನಸು ಬೇರೆ ಕಡೆ ಹರಿಯುತ್ತದೆ ಎಂದು ಹೇಳಿದ್ದರಿಂದ ಅದೆಲ್ಲದರಿಂದ ಹಿಂದೆ ಸರಿದು ಸಂಪೂರ್ಣ ಓದಿನ ಕಡೆ ಗಮನ ಹರಿಸಿದ್ದ.


ಕಾಲೇಜ್ ಫೆಸ್ಟ್ ಮುಗಿದ ಒಂದು ವಾರಕ್ಕೆ ಕ್ಯಾಂಪಸ್ ಇಂಟರ್ವ್ಯೂ ಗಳು ಶುರುವಾಗಿದ್ದವು. ಕೊನೆಯ ವರ್ಷದ ವಿದ್ಯಾರ್ಥಿಗಳು ಹುಮ್ಮಸ್ಸು, ಭಯ, ಕಾತುರ, ಕೌತುಕದಿಂದ ಪಾಲ್ಗೊಳ್ಳುತ್ತಿದ್ದರೆ ಜುನಿಯರ್ಸ್ ಗಳು ಸ್ವಯಂ ಸೇವಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಮರ್ ಪೂರ್ತಿಯಾಗಿ ಸಿದ್ಧನಾಗಿ ಬಂದಿದ್ದ. ಮೊಟ್ಟ ಮೊದಲ ಬಾರಿಗೆ ಹದಿನಾರು ಕಂಪನಿಗಳು ಇಂಟರ್ವ್ಯೂ ಗೆ ಬಂದಿದ್ದವು. ಕೆಲವು ಪ್ರತಿಷ್ಟಿತ ಕಂಪನಿಗಳು ಇದ್ದರೆ ಇನ್ನುಳಿದವು ಸಣ್ಣ ಪುಟ್ಟ ಕಂಪನಿಗಳು ಬಂದಿದ್ದವು. ಎಲ್ಲರೂ ಪ್ರತಿಷ್ಟಿತ ಕಂಪೆನಿಗಳಲ್ಲಿ ತಮಗೊಂದು ಕೆಲಸ ಸಿಗಲೆಂದು ಪ್ರಾರ್ಥಿಸುತ್ತಿದ್ದರು.


ಇಂಟರ್ವ್ಯೂ ಶುರುವಾಗುವ ಮುನ್ನ ಅಮರ್ ಮಧುರಗೆ ಕರೆ ಮಾಡಿದ. ಹಲೋ ಮಧು ಎಲ್ಲಿದ್ದೀಯ? ಇಂಟರ್ವ್ಯೂ ಗೆ ಹೋಗುವ ಮುನ್ನ ಒಮ್ಮೆ ನಿನ್ನನ್ನು ನೋಡಬೇಕು ಎನಿಸುತ್ತಿದೆ. ಅಮರ್, ನಾನು ಇಲ್ಲೇ ಎಂಟನೆ ಸ್ಟಾಲ್ ನಲ್ಲಿ AMR Technologies ಕಂಪನಿಯ ಸ್ವಯಂ ಸೇವಕಿಯಾಗಿದ್ದೇನೆ. ನೀನು ಎಲ್ಲಿದ್ದೀಯ? ಮಧು ನಾನು ಇಲ್ಲೇ ಮೊದಲನೇ ಸ್ಟಾಲ್ ಬಳಿ ಇದ್ದೀನಿ ಬರ್ತ್ಯಾ? ಹಾ ಮಧು ಅಲ್ಲೇ ಇರು ಬರ್ತೀನಿ ಎಂದು ಕರೆ ಕಟ್ ಮಾಡಿ ಮೊದಲನೇ ಸ್ಟಾಲ್ ಬಳಿ ಬಂದಳು.  ಏನ್ಸಾರ್ ಫುಲ್ ಮಿಂಚಿಂಗ್ ಇವತ್ತು. ಅಮರ್ ಫಾರ್ಮಲ್ಸ್ ನಲ್ಲಿ ಸೂಪರ್ ಆಗಿ ಕಾಣ್ತಾ ಇದ್ಯಾ ಕಣೋ. ಅಮರ್ Infosys , TCS , HP , WIPRO ಇವಿಷ್ಟು ದೊಡ್ಡ ಕಂಪನಿಗಳು ಇನ್ನೆಲ್ಲ ಸಣ್ಣ ಸಣ್ಣ ಕಂಪನಿಗಳು ಬಂದಿವೆ. ಆಲ್ ದಿ ಬೆಸ್ಟ್ ಕಣೋ. ಮಧು ಆಗಲೇ ನನ್ನ ಕೆಲಸ ನಿರ್ಧಾರ ಆಗಿ ಹೋಗಿದೆ ಮಧು. ಜಪಾನ್ ಮೂಲದ Emlee ಅನ್ನೋ ಕಂಪನಿಯಲ್ಲಿ ನನ್ನ ಕೆಲಸ ಸಿದ್ಧ ಮಾಡಿಟ್ಟಿದ್ದಾರೆ ನಮ್ಮಪ್ಪ. ನನಗೆ ನಮ್ಮದೇ ಕಂಪನಿಯಲ್ಲಿ ಕೆಲಸ ಮಾಡಲು ಇಷ್ಟ ಇಲ್ಲ ಅಂದಿದ್ದಕ್ಕೆ ನಮ್ಮ ಕಂಪನಿ ಜೊತೆ ಭಾಗಸ್ವಾಮಿಯಾಗಿರುವ Emlee ಕಂಪನಿಯಲ್ಲಿ ಕೆಲಸ ಮಾಡು ಎಂದರು. ಹೌದು ಅಮರ್ ಆ ಕಂಪೆನಿಯೂ ಬಂದಿದೆ ಇಲ್ಲಿಗೆ. ಹೌದು ಮಧು ಇಲ್ಲಿ ಸುಮ್ಮನೆ ನನ್ನ ಸಾಮರ್ಥ್ಯ ತಿಳಿಯಲು ಇಂಟರ್ವ್ಯೂ ಮಾಡುತ್ತಾರೆ ಅಷ್ಟೇ.


ಪರೀಕ್ಷೆ ಮುಗಿದ ನಂತರ ಕೆಲಸಕ್ಕೆ ಸೇರಬೇಕು. ಇನ್ನೇನು ಅಮರ್ ಕೆಲಸದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲವಲ್ಲ. ಅದೇನೋ ಸರಿ ಮಧು ಆದರೆ ಒಂದು ದೊಡ್ಡ ಬೇಸರದ ಸಂಗತಿ ಇದೆ. ಏನು ಅಮರ್? ಮಧು ಮೊದಲ ಎರಡು ವರ್ಷ ನಾನು ಜಪಾನಿನಲ್ಲಿ ಕೆಲಸ ಮಾಡಬೇಕು. ಈ ಊರು, ಜನ, ಸ್ನೇಹಿತರು ಮುಖ್ಯವಾಗಿ ನಿನ್ನನ್ನು ಬಿಟ್ಟು ಎರಡು ವರ್ಷ ಯಾವುದೋ ಅಪರಿಚಿತ ದೇಶದಲ್ಲಿ ಜೀವನ ನಡೆಸಬೇಕು ಮಧು. ಅದೇ ನನಗೆ ಬೇಸರ. ಅಮರ್ ಹೇಗಿದ್ದರೂ ಕಾಲೇಜ್ ಮುಗಿದ ಮೇಲೆ ನೀನು ಎಲ್ಲಾದರೂ ಬೇರೆ ಕಡೆ ಹೋಗೆ ಹೋಗಬೇಕು ಅಲ್ಲವ. ನಾನೇನೂ ಸದಾ ಕಾಲ ನಿನ್ನ ಜೊತೆ ಇರಲು ಸಾಧ್ಯವಿಲ್ಲ ಅಲ್ಲವ? ಅದಕ್ಯಾಕೆ ಅಷ್ಟು ಬೇಸರ ಪಡುತ್ತೀಯ? ನಿನಗೆ ಅಷ್ಟೂ ಬೇಸರ ಆದರೆ ಫೋನ್ ಅಂತೂ ಇದ್ದೆ ಇದೆ. ನಿನಗೆ ಯಾವಾಗ ಬೇಕೋ ಅವಾಗ ಫೋನ್ ಮಾಡು.


(ಮಧು ನನ್ನ ಮನಸಿನ ಸ್ಥಿತಿ ನಿನಗೆ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ, ಮಧು ಐ ಲವ್ ಯೂ, ಐ ಅಂ ಗೋಯಿಂಗ್ ಟು ಮಿಸ್ ಯೂ...) ಆಯ್ತು ಮಧು. ನೀನು ಹೇಳಿದ ಹಾಗೇನೆ ಆಗಲಿ. ಇನ್ನೇನು ಒಂದು ತಿಂಗಳಲ್ಲಿ ಈ ಕಾಲೇಜ್ ಜೀವನ ಮುಗಿದು ಹೋಗುತ್ತದೆ. ಎಲ್ಲವನ್ನೂ ಬಿಟ್ಟು ಹೋಗಬೇಕೆಂದರೆ ಮನಸು ಭಾರವಾಗುತ್ತಿದೆ. ಇಲ್ಲಿ ಕಳೆದ ಪ್ರತಿಯೊಂದು ದಿನವೂ ಅಮೃತ ಘಳಿಗೆ ಇದ್ದಂತೆ. ನಾಲ್ಕು ವರ್ಷದಲ್ಲಿ ಎಷ್ಟೋ ಜನ ಸ್ನೇಹಿತರು, ಅವರ ಜೊತೆ ಕಳೆದ ಆ ಸುಮಧುರ ಕ್ಷಣಗಳು, ಕೆಲವೊಮ್ಮೆ ಸಂತೋಷ, ಕೆಲವೊಮ್ಮೆ ದುಃಖ, ಕೆಲವೊಮ್ಮೆ ಕೋಪ, ತಾಪ, ನಗು,ಅಳು, ಮಜಾ, ತುಂಟಾಟ, ಹುಡುಗಾಟ, ಈ ಕಾಲೇಜು , ಲೆಕ್ಚರರ್ಸ್,  ಎಲ್ಲವನ್ನೂ ಬಿಟ್ಟು ಹೋಗಬೇಕೆಂದರೆ ಎಂದು ಗಂಟಲು ತುಂಬಿಬಂದು ಮಾತು ಹೊರಡಲಿಲ್ಲ. ಅಮರನ ಕಣ್ಣುಗಳಲ್ಲಿ ನೀರು ತುಂಬಿತ್ತು.


ಅಮರ್ ಯಾಕೋ ಇಷ್ಟೊಂದು ಸೆಂಟಿ ಆಗ್ತಾ ಇದ್ದೀಯ. ಇದೆಲ್ಲ ಜೀವನದ ಒಂದು ಭಾಗ ಅಷ್ಟೇ. ಅಷ್ಟಕ್ಕೇ ಇಷ್ಟೊಂದು ವ್ಯಾಕುಲಗೊಂಡರೆ ಹೇಗೆ? ಮಧು ನಿನಗೆ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ, ನನ್ನ ಸ್ಥಾನದಲ್ಲಿ ನೀನಿದ್ದರೆ ನಿನಗೆ ಆ ಕಷ್ಟ ಏನೆಂದು ಗೊತ್ತಾಗುತ್ತಿತ್ತು. ಇಷ್ಟು ಬೇಗ ಈ ದಿನ ಬರುತ್ತದೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ ಮಧು. ಎಲ್ಲಕ್ಕಿಂತ ನಿನ್ನನ್ನು ಬಿಟ್ಟು ಹೋಗಬೇಕಲ್ಲ ಆ ನೋವೆ ಹೆಚ್ಚಾಗಿ ಕಾಡುತ್ತಿದೆ. ನಿನ್ನೊಡನೆ ಕಳೆದ ಪ್ರತಿಯೊಂದು ಘಳಿಗೆಯೂ ನನಗೆ ಬಹಳ ಅತ್ಯಮೂಲ್ಯವಾದುದು. ಅದರಲ್ಲೂ ನಿನ್ನೊಡನೆ ಭದ್ರ ಗೆ ಹೋಗಿದ್ದು ಅಲ್ಲಿ ನಿನ್ನ ಹುಟ್ಟಿದ ಹಬ್ಬ ಆಚರಿಸಿದ್ದು ಎಲ್ಲ ಇನ್ನೂ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ ಈಗ ಅದೆಲ್ಲ ಬರೀ ನೆನಪುಗಳು ಎಂದು ದುಃಖ ತಡೆಯಲಾರದೆ ಕಣ್ಣಿಂದ ನೀರು ಸುರಿಯಲು ಶುರುವಾಯಿತು.


ಅಮರ್ ಪ್ಲೀಸ್ ಕಂಟ್ರೋಲ್. ಅನಗತ್ಯವಾಗಿ ಸೀನ್ ಕ್ರಿಯೇಟ್ ಆಗತ್ತೆ. ಏನಿದು ಚಿಕ್ಕ ಮಕ್ಕಳ ಹಾಗೆ ಬಾ ಪಕ್ಕಕ್ಕೆ ಎಂದು ಕರೆದುಕೊಂಡು ಹೋಗಿ ಅಮರ್ ಮೊದಲು ಕಣ್ಣು ಒರೆಸಿಕೊ. ಒಳ್ಳೆ ಹೆಣ್ಣು ಮಕ್ಕಳ ಹಾಗೆ ಅಳುತ್ತಿದ್ದೀಯ ಏನಪ್ಪಾ ನೀನು. ನೀನು ಅಷ್ಟೊಂದು ಭಾವುಕನಾದರೆ ಹೇಗೆ ಪ್ಲೀಸ್ ಕಂಟ್ರೋಲ್ ಮಾಡ್ಕೋ. ಮಧು ನನಗೆ ನಿನ್ನನ್ನು ಬಿಟ್ಟಿರಲು ಆಗುತ್ತಿಲ್ಲ ಎಂದು ಸ್ಥಳದ ಪರಿವೆಯನ್ನು ಮರೆತು ಮಧುರಳನ್ನು ತಬ್ಬಿಕೊಂಡು ಗಳಗಳನೆ ಅಳಲು ಶುರು ಮಾಡಿದ. ಅಮರನ ವರ್ತನೆಯಿಂದ ಬೆಚ್ಚಿಬಿದ್ದ ಮಧುರ ಅಮರ್ ಏನು ಮಾಡ್ತಿದೀಯ ಇದು ಕಾಲೇಜ್ ಕಣೋ ಯಾರಾದರೂ ನೋಡಿದರೆ ಅನಾಹುತ ಆಗುತ್ತೆ ಮೊದಲು ಬಿಡು ಎಂದು ಅವನನ್ನು ಬಿಡಿಸಿಕೊಂಡಳು. ತಕ್ಷಣ ತನ್ನ ತಪ್ಪಿನ ಅರಿವಾದ ಅಮರ್ ಸುತ್ತಲೂ ಯಾರೂ ಗಮನಿಸಿಲ್ಲವೆಂದು ಖಚಿತಪಡಿಸಿಕೊಂಡು ಮಧು ಐ ಅಂ ವೆರಿ ಸಾರಿ ಭಾವೋದ್ವೇಗಕ್ಕೆ ಒಳಗಾಗಿ ನಿನ್ನನ್ನು ತಬ್ಬಿಕೊಂಡೆ.


ದಯವಿಟ್ಟು ನನ್ನನ್ನು ಕ್ಷಮಿಸು. ನನ್ನನ್ನು ನಾನು ಎಷ್ಟು ಕಂಟ್ರೋಲ್ ಮಾಡಿಕೊಂಡರೂ ತಡೆದುಕೊಳ್ಳಲಾಗಲಿಲ್ಲ ನನ್ನ ಲಿಮಿಟ್ ಮೀರಿ ವರ್ತಿಸಿದೆ. ನನ್ನನ್ನು ಕ್ಷಮಿಸು ಮಧು. ಪರವಾಗಿಲ್ಲ ಅಮರ್ ನಿನ್ನ ಪರಿಸ್ಥಿತಿ ಅರ್ಥ ಆಗತ್ತೆ. ಆದರೆ ಯಾಕೆ ನನ್ನನ್ನು ಇಷ್ಟು ಹಚ್ಚಿಕೊಂಡಿದ್ದೀಯೋ ಅರ್ಥ ಆಗುತ್ತಿಲ್ಲ. ಹ್ಮ್...ಬಿಡು ಮೊದಲು ಹೋಗಿ ಇಂಟರ್ವ್ಯೂ ಪೂರ್ತಿ ಮಾಡಿಕೊಂಡು ಬಾ. ಆಮೇಲೆ ಮಾತಾಡೋಣ. ಮೊದಲು ಕಣ್ಣು ಒರೆಸಿಕೊಂಡು ಮುಖ ತೊಳೆದು ಸ್ವಲ್ಪ ನೀರು ಕುಡಿದು ಸಮಾಧಾನ ಮಾಡಿಕೊಂಡು ಹೋಗು. ಆಲ್ ದಿ ಬೆಸ್ಟ್. ಓಕೆ ಮಧು ಥ್ಯಾಂಕ್ಸ್ ಅ ಲಾಟ್ ನಾನು ಆಮೇಲೆ ಸಿಕ್ತೀನಿ ಬೈ.ಮೊದಲೇ ಎಲ್ಲ ನಿಗದಿ ಆಗಿದ್ದರಿಂದ ಇಂಟರ್ವ್ಯೂ ಮಾಡಲು ಬಂದಿದ್ದ ವ್ಯಕ್ತಿ ಬರೀ ಅಮರನ ಹಳೆಯ ವರ್ಷದ ಫಲಿತಾಂಶಗಳನ್ನು ಪರಿಶೀಲಿಸಿ ಸಾಮಾನ್ಯ ಜ್ಞಾನದ ಬಗ್ಗೆ ಒಂದೆರೆಡು ಪ್ರಶ್ನೆಗಳನ್ನು ಕೇಳಿ ಅವನನ್ನು ಬೀಳ್ಕೊಟ್ಟ.


ಅಮರ್ ಆಚೆ ಬಂದು ಮಧುರಗೆ ಹುಡುಕಾಡಿದ. ಮಧುರ ಅಲ್ಲೆಲ್ಲೂ ಕಾಣಲಿಲ್ಲ. ಕೂಡಲೇ ಫೋನ್ ಮಾಡಲೆಂದು ಫೋನ್ ತೆಗೆದ ಅಷ್ಟರಲ್ಲಿ ಪ್ರೇಮ ಕರೆ ಮಾಡಿದಳು. ಛೆ ಈ ಸಮಯದಲ್ಲಿ ಇವಳ್ಯಾಕೆ ಕರೆ ಮಾಡಿದಳು. ಮೊದಲೇ ನನ್ನ ತಲೆ ಸರಿ ಇಲ್ಲ ಇನ್ನು ಅವಳೇನಾದರೂ ಮಾತಾಡಿ ನಾನು ಅದಕ್ಕೆ ತಿರುಗಿ ಬೈದರೆ...ಬೇಡವೇ ಬೇಡ..ಎಂದುಕೊಂಡು ಅವಳ ಕರೆ ಕಟ್ ಮಾಡಿ ಮಧುರಗೆ ಕರೆ ಮಾಡಿದ. ಹಾಯ್ ಮಧು ನನ್ನ ಇಂಟರ್ವ್ಯೂ ಮುಗಿತು. ನೀನೆಲ್ಲಿ ಇದ್ದೀಯ ಇಲ್ಲೆಲ್ಲೂ ಕಾಣಲೇ ಇಲ್ಲ. ಅದಕ್ಕೆ ಕರೆ ಮಾಡಿದೆ. ಅಮರ್ ಯಾಕೋ ತಲೆ ತುಂಬಾ ನೋಯ್ತಾ ಇತ್ತು. ಅದಕ್ಕೆ ವಾಪಸ್ ಪೀಜೀಗೆ ಬಂದು ಬಿಟ್ಟೆ. ಆಮೇಲೆ ನಿನಗೆ ಫೋನ್ ಮಾಡೋಣ ಎಂದುಕೊಂಡಿದ್ದೆ ಅಷ್ಟರಲ್ಲಿ ನೀನೆ ಕರೆ ಮಾಡಿದೆ. ಯಾವಾಗಿಂದ ಸೇರಬೇಕಂತೆ ಕೆಲಸಕ್ಕೆ. ಯಾವಾಗ ಹೋರಾಡಬೇಕು ಜಪಾನ್ ಗೆ?. ಮಧು ಅದು ಬಿಡು ನಿನಗ್ಯಾಕೆ ಇದ್ದಕ್ಕಿದ್ದಂತೆ ತಲೆ ನೋವು? ಮಾತ್ರೆ ಏನಾದರೂ ತೆಗೆದುಕೊಂಡೆಯ? ಮಧು ಮೊದಲೇ ನನ್ನ ಮನಸು ಸರಿ ಇರಲಿಲ್ಲ ಅದರಲ್ಲಿ ಇವಾಗ ನಿನಗೆ ತಲೆ ನೋವು ಎಂದಮೇಲೆ ಇನ್ನೂ ಕೆಟ್ಟು ಹೋಯಿತು.ಅಮರ್ ಬೆಳಗ್ಗಿಂದ ತಲೆ ನೋಯ್ತಾ ಇತ್ತು. ಇವತ್ತು ನಿನ್ನ ಇಂಟರ್ವ್ಯೂ ಇತ್ತಲ್ವಾ ಅದಕ್ಕೆ ಒಮ್ಮೆ ನಿನಗೆ ಶುಭ ಕೋರಿ ಹೋಗೋಣ ಎಂದು ಬಂದಿದ್ದೆ ಅಷ್ಟೇ. ಅದಕ್ಕೆ ನಿನಗೆ ಶುಭ ಕೋರಿ ನಾನು ವಾಪಸ್ ಬಂದು ಬಿಟ್ಟೆ. ನೀನೇನೂ ಚಿಂತೆ ಮಾಡಬೇಡ. ಅದು ಪರೀಕ್ಷೆಗಳು ಹತ್ತಿರ ಬರುತ್ತಿದೆಯಲ್ಲ ಅದಕ್ಕೆ ರಾತ್ರಿ ಓದುತ್ತ ಮಲಗುವುದು ತಡ ಆಗ್ತಾ ಇದೆ. ಹಾಗಾಗಿ ತಲೆನೋವು ಅಷ್ಟೇ. ಸ್ವಲ್ಪ ರಿಲಾಕ್ಸ್ ಮಾಡಿದರೆ ಎಲ್ಲ ಸರಿ ಹೋಗತ್ತೆ. ನಾಳೆ ಮೀಟ್ ಮಾಡುತ್ತೇನೆ ಓಕೆನ ನೀನು ಸುಮ್ಮನೆ ಎಲ್ಲ ವಿಷಯಕ್ಕೆ ತಲೆ ಕೆಡಿಸಿಕೊಳ್ಳದೆ ಆರಾಮಾಗಿ ಪರೀಕ್ಷೆಯ ಕಡೆ ಗಮನ ಕೊಡು. ಓಕೆ ಬೈ...ಬೈ ಮಧು

Rating
No votes yet

Comments