" ನಕ್ಕು ನಲಿಸಿದ ನರಸಿಂಹ ರಾಜು "....ಒಂದು ಸ್ಮರಣೆ

" ನಕ್ಕು ನಲಿಸಿದ ನರಸಿಂಹ ರಾಜು "....ಒಂದು ಸ್ಮರಣೆ

 



                        ಕನ್ನಡದ ಹಾಸ್ಯ ಸಾರ್ವಭೌಮ  ನರಸಿಂಹ ರಾಜು



     ಇಂದು ಜುಲೈ 24, ಕನ್ನಡದ ಹಾಸ್ಯ ನಟ ' ನರಸಿಂಹ ರಾಜು ' ಬದುಕಿದ್ದಿದ್ದರೆ 87 ನೇ ವಸಂತಕ್ಕೆ ಕಾಲಿರಿ ಸಿರುತ್ತಿದ್ದರು. ಆದರೆ ಅವರು ಗತಿಸಿ 33 ವರ್ಷಗಳೆ ಸಂದು ಹೋಗಿವೆ. ಅದರೂ ಆತ ಇಂದಿಗೂ ಜನ ಮಾನಸದಿಂದ ಅಳಿಸಿ ಹೋಗಿಲ್ಲ, ಅದು ಆತ ಗಳಿಸಿಕೊಂಡ ಸ್ಥಾನ. 1926 ನೇ ಜುಲೈ 24 ರಂದು ಜನಿಸಿದ ನರಸಿಂಹರಾಜುವಿನ ಬದುಕು ಸುಖದ ಸುಪ್ಪತ್ತಿಗೆಯಾಗಿರಲಿಲ್ಲ.


    ಸ್ವಾತಂತ್ರ ಪೂರ್ವ ಕಾಲ ನಾಟಕ ರಂಗದ ವೈಭವದ ದಿನಗಳ ಕಾಲ. ಗುಬ್ಬಿ ವೀರಣ್ಣ,ಮಾಸ್ಟರ್ ಹಿರಣ್ಣಯ್ಯ ( ಸೀನಿಯರ್ ), ಸುಬ್ಬಯ್ಯ ನಾಯಡು ಮುಂತಾದವರ ನಾಟಕ ಕಂಪನಿಗಳು ನಟನಾಸಕ್ತರಿಗೆ ವೇದಿಕೆಗಳಾಗಿದ್ದವು ನಟನಾಸಕ್ತಿಯಿದ್ದ ಮೇಲಾಗಿ ಬದುಕಿಗೆ ಒಂದು ನೆಲೆ ಬೇಕಿದ್ದ ನರಸಿಂಹರಾಜು ಗುಬ್ಬಿ ವೀರಣ್ಣನವರ ನಾಟಕ ಕಂಪನಿಗೆ ಸೇರುತ್ತಾರೆ, ಒಬ್ಬ ಸಾಮಾನ್ಯ ಗೇಟ್ ಕೀಪರ್ ಆಗಿ ಅವರ ಹವ್ಯಾಸ ಮತ್ತು ವೃತ್ತಿ ಮುಂದುವರಿಯುತ್ತವೆ. ಹಾಸ್ಯ ನಟರಾಗಿ ರಂಗ ಪ್ರವೇಶ ಮಾಡಿ ತನ್ನದೆ ಒಂದು ನಟನಾ ಛಾಪು ಮೂಡಿಸಿ ಪ್ರಸಿದ್ಧಿಗೆ ಬರುತ್ತಾರೆ. ಅಲ್ಲಿ ಬರಿ ನಟನೆಯಷ್ಟೆ ಅಲ್ಲ ಎಲ್ಲ ಕೆಲಸಗಳನ್ನು ಎಲ್ಲ ನಟರೂ ಮಾಡ ಬೇಕಿರುತ್ತದೆ, ನರಸಿಂಹರಾಜೂ ಸಹ ಆ ನಿಯಮಕ್ಕೆ ಹೊರತಾಗುವುದಿಲ್ಲ. ದುಡಿಯುತ್ತಾರೆ ಗ್ರಹಿಸುತ್ತಾರೆ ಪ್ರಸಿದ್ಧ ಹಾಸ್ಯ ನಟರಾಗಿ ಹೊರ ಹೊಮ್ಮುತ್ತಾರೆ. ಆಗ ಕನ್ನಡ ಚಲನಚಿತ್ರ ರಂಗ ಗರಿ ಗಟ್ಟುತ್ತಿದ್ದ ಕಾಲ ಅದು. ಹೊಸ ಚಿತ್ರ ' ಬೇಡರ ಕಣ್ಣಪ್ಪ ' ಚಿತ್ರ ತಯಾರಿಕಾ ಸಂಸ್ಥೆ ಕಲಾವಿದರ ಹುಡುಕಾಟದಲ್ಲಿರುತ್ತದೆ. ಆಗ ಆ ಚಿತ್ರಕ್ಕೆ ಆಯ್ಕೆಯಾಗುವವರೆ ಗುಬ್ಬಿ ನಾಟಕ ಕಂಪನಿಯ ಮುತ್ತುರಾಜ ( ರಾಜಕುಮಾರ ), ನರಸಿಂಹರಾಜು, ಜಿ.ವಿ.ಅಯ್ಯರ ಮತ್ತು ಬಾಲಕೃಷ್ಣ. ಅದರ ನಾಯಕಿ ಮಾತ್ರ ಆಗಿನ ಪಂಚ ಭಾಷಾ ತಾರೆ ಪಂಡರಿಬಾಯಿ. ಆ  ಚಿತ್ರ ಯಶಸ್ವಿಯಾಗುತ್ತದೆ, ಮತ್ತೆ ಇವರಾರೂ ಹಿಂತಿರುಗಿ ನೋಡುವುದಿಲ್ಲ. ಈ ಎಲ್ಲರೂ ಕನ್ನಡ ಚಿತ್ರರಂಗದಲ್ಲಿ ತಮ್ಮ ಸ್ಥಾನಗಳನ್ನು ಕಂಡು ಕೊಳ್ಳುತ್ತಾರೆ.


     ಇವರ ಪೈಕಿ ರಾಜಕುಮಾರ ನಾಯಕ ನಟನಾಗಿ ಸ್ಥಾಪಿತಗೊಂಡರೆ ಬಾಲಕೃಷ್ಣ ಹಾಸ್ಯ ನಟನೆಯಲ್ಲದೆ ಖಳನಾಯಕ ಮತ್ತು ಚಾರಿತ್ರಿಕ ಪಾತ್ರಗಳಲ್ಲಿ ಕಾಣಿಸಿ ಕೊಳ್ಳುತ್ತಾರೆ. ಆದರೆ ತಮ್ಮ ಬದುಕಿನ ಪ್ರಾರಂಭದಿಂದ ಹಿಡಿದು ಕೊನೆಯ ವರೆಗೂ ಹಾಸ್ಯ ನಟರಾಗಿ ಸ್ಥಾಪಿತರಾಗಿ ಯಶಸ್ಸು ಗಳಿಸಿದ್ದು ನರಸಿಂಹರಾಜು ಮಾತ್ರ. 1950 ರಿಂದ 1970 ರ ಕಾಲಮಾನ ಹಾಸ್ಯಕ್ಕೆ ಹಾಸ್ಯ ನಟರಿಗೆ ನಾಯಕ ನಟರಷ್ಟೆ ಪ್ರಾಧಾನ್ಯತೆ ಗಳಿರುತ್ತಿದ್ದವು. ಹಾಲಿವುಡ್ ನಲ್ಲಿ ಚಾರ್ಲಿ ಚಾಪ್ಲಿನ್, ಆತನ ನಂತರದಲ್ಲಿ ಲಾರೆಲ್ ಎಂಡ್ ಹಾರ್ಡಿ ಮುಂಚೂಣಿಯಲ್ಲಿದ್ದು ಜನ ಮನ ರಂಜಿಸಿದವರು. ಅದೇ ರೀತಿ ಕನ್ನಡದ ಲಾರೆಲ್ ಮತ್ತು ಹಾರ್ಡಿ ಎಂದು ಪ್ರಸಿದ್ಧರಾದವರು ಈ ಬಾಲಕೃಷ್ಣ ಮತ್ತು ನರಸಿಂಹರಾಜು ಜೋಡಿ. ಇವರಿಬ್ಬರೂ ತಮಿಳಿನ ಖ್ಯಾತ ಹಾಸ್ಯನಟ ತಾಯ್ ನಾಗೇಶ, ಹಿಂದಿಯ ಜಾನಿ ವಾಕರ್, ಮೆಹಮ್ಮೂದ್, ಧುಮಾಳ, ಓಂ ಪ್ರಕಾಶ, ಮುಕ್ರಿ, ಪೋಪಟ್ ಲಾಲ್ ( ರಾಜೆಂದ್ರ ನಾಥ ), ಮತ್ತು ಮೋಹನ ಛೋಟಿ ಯವರಷ್ಟೆ ಇವರೀರ್ವರೂ ಪ್ರಸಿದ್ದಿ ಪಡೆದಿದ್ದರು.


     ಆದರೆ ಪೀಚು ದೇಹದ ವಕ್ರ ದಂತಪಂಕ್ತಿಯ ಈ ಹಾಸ್ಯ ನಟ ಅದನ್ನೆ ತನ್ನ ಭಂಡವಾಳ ಮಾಡಿಕೊಂಡು ಜನರಂಜಿಸಿ ಬೆಳೆದ ಪರಿ ಮಾತ್ರ ಅತ್ಯದ್ಭುತ. 1950 ರಿಂದ ಯಶಸ್ವಿ ಹೆಜ್ಜೆ ಗಳನ್ನಿಡಲು ಪ್ರಾರಂಭಿಸಿದ ಕನ್ನಡ ಚತ್ರ ರಂಗ ಕನ್ನಡ ಪ್ರಮುಖ ನಟರಾದ ಕುಮಾರ ತ್ರಯರನ್ನು ಪಡೆಯುತ್ತದೆ. ಅವರಿಗೆ ಸರಿಸಮವಾಗಿ ಈ ಹಾಸ್ಯ ಜೋಡಿ ಕನ್ನಡ ಚಲನಚಿತ್ರ ರಂಗದಲ್ಲಿ ನೆಲೆಯೂರುತ್ತದೆ. ಈ ಹಾಸ್ಯ ನಟ ನರಸಿಂಹರಾಜು ರಾಜಕುಮಾರ, ಉದಯಕುಮಾರ ಮತ್ತು ಕಲ್ಯಾಣಕುಮಾರ ಜೊತೆ ನಟಿಸಿ ರಾಜೇಶ, ಶ್ರೀನಾಥ, ಗಂಗಾಧರ ಮತ್ತು ವಿಷ್ಣುವರ್ಧನರ ಕಾಲದ ವರೆಗೂ ಪ್ರಮುಖ ಹಾಸ್ಯ ನಟರಾಗಿಯೆ ಮುಂದುವರಿಯುತ್ತಾರೆ, ನಂತರದಲ್ಲಿ ಹುಣಸೂರು ಕೃಷ್ಣಮೂರ್ತಿಯವರ ಚಿತ್ರ ' ವೀರ ಸಂಕಲ್ಪ ' ಮೂಲಕ ತೆರೆಗೆ ಬಂದ ದ್ವಾರಕೀಶ ಸಹ ಇವರದೆ ಪರಂಪರೆಯಲ್ಲಿ ಮುಂದುವರಿದು ಹಾಸ್ಯ ನಟನೆಯ ಜೊತೆಗೆ ನಿರ್ಮಾಪಕ ನಿರ್ದೇಶಕರಾಗಿ ಪ್ರಸಿದ್ಧರಾಗುತ್ತಾರೆ.  


     ಆ ಕಾಲದಲ್ಲಿ ನರಸಿಂಹರಾಜು ಎಷ್ಟು  ಬ್ಯೂಸಿಯಾಗ ಗಿರುತ್ತಿದ್ದರೆಂದರೆ ನಾಯಕ ನಟರ ಕಾಲ್ ಶೀಟ್ ದೊರೆತರೂ  ನರಸಿಂಹರಾಜುರವರ ಕಾಲ್ಶೀಟ್ ದೊರೆಯುವುದು ಕಷ್ಟವಿತ್ತು. ಎಂಬುದು. ಅದನ್ನು ನಾವು ಈಗಿನ ದಿನಮಾನಗಳಲ್ಲಿ ಊಹಿಸುವುದೇ ಕಷ್ಟ. ನರಸಿಂಹರಾಜು ಬಿ.ಜಯ, ಎಂ.ಎನ್.ಲಕ್ಷ್ಮಿದೇವಿ, ಕಲಾ ಮತ್ತು ರಮಾದೇವಿ ಯವರ ಜೊತೆ ಅನೇಕ ಚಿತ್ರಗಳಲ್ಲಿ ಹಾಸ್ಯ ಜೋಡಿಯಾಗಿ ಅಭಿನಯಿಸಿ ಯಶಸ್ವಿ ಚಿತ್ರಗಳನ್ನು ನೀಡಿದ್ದರು. ನಾಯಕ ನಾಯಕಿಯರಿಗೆ ಸಮಾನವಾಗಿ ಇವರ ಡ್ಯಯೆಟ್ಗಳು ಇರುತ್ತಿದ್ದವು. ಆ ಹಾಡುಗಳು ಇಂದಿಗೂ ಪ್ರಸಿದ್ಧ ಹಾಡುಗಳು ಕೂಡ. ನರಸಿಂಹರಾಜು ಎಲ್ಲ ನಾಯಕ ನಟರ ಜೊರೆಗೆ ಅಭಿನಯಿಸಿದ್ದರೂ  ರಾಜಕುಮಾರ ಜೊತೆ ಅಭಿನಯಿಸಿದ ಚಿತ್ರಗಳು ಹೆಚ್ಚು. ರಾಜಕುಮಾರ ತಮ್ಮ ಸ್ವಂತ ಬ್ಯಾನರ್ ಗಳಲ್ಲಿಯ ಚಿತ್ರಗಳಿಗೆ ಸೀಮಿತರಾಗುತ್ತಿದ್ದಂತೆ ಇವರೀರ್ವರ ಜೋಡಿ ಮುರಿಯಿತು ಎಂದೇ ಹೇಳಬೇಕು. ನರಸಿಂಹರಾಜು ಚಿತ್ರಗಳೆಂದರೆ ಎಲ್ಲ ನಾಯಕ ನಟರ ಚಿತ್ರಗಳನ್ನೆ ಉಲ್ಲೇಖಿಸ ಬೇಕಾಗುತ್ತದೆ.


     ನರಸಿಂಹರಾಜು ಅವರಿಗೂ ಒಮ್ಮೆ ತಾವು ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸಬೇಕೆಂಬ ಆಶೆ ಇತ್ತು. ಅದನ್ನು ತಮ್ಮ ಸ್ವಂತ ತಯಾರಿಕೆಯ ಚಿತ್ರ ' ಫ್ರೊಫೆಸರ್ ಹುಚ್ಚೂರಾಯ ' ಚಿತ್ರದಲ್ಲಿ ಲೀಲಾ ವತಿಯವರ ಜೊತೆ ಅಭಿನಯಿಸುವುದರ ಮೂಲಕ ಈಡೇರಿಸಿ ಕೊಂಡರು. ಆ ಚಿತ್ರದಲ್ಲಿ ಇವರ ಜೊತೆ ದಾರಕೀಶ, ವೈಶಾಲಿ  ಕಾಸರವಳ್ಳಿ ) ಮುಂತಾದವರ ಅಭಿನಯವಿತ್ತು, ಅದು ತಕ್ಕ ಮಟ್ಟಿಗೆ ಯಶಸ್ವಿಯಾಯಿತು ಕೂಡ. ಇವರು ಹಾಸ್ಯ ನಟರಾಗಿ ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು.


     ಹಾಸ್ಯ ಚಕ್ರವರ್ತಿ ನರಸಿಂಹರಾಜು 1979 ನೇ ಜುಲೈ 2೦ ರಂದು ಗತಿಸಿ ಹೋದರು.  ಅವರು ನಮ್ಮನ್ನಗಲಿ 33 ವರ್ಷಗಳೆ ಸಂದಿವೆ, ಆದರೂ ಅವರು ಇಂದು ಜನಮಾನಸದಲ್ಲಿ ಇದ್ದಾರೆ, ಅದೇ ಅವರ ಹೆಗ್ಗಳಿಕೆ. ಅವರ ಅಭಿನಯದ ತಾಕತ್ತು ಎಂಥದು ಎಂಬುದನ್ನು ಇದು ತೋರಿಸುತ್ತದೆ. ಅವರು ಹಾಸ್ಯ ನಟರಾಗಿದ್ದರೂ ವೈವಿಧ್ಯಮಯವಾದ ವಿವಿಧ ಪಾತ್ರಗಳಲ್ಲಿ ನಟಿಸಿ ರಂಜಿಸಿದರು. ಅವರ ಅಭಿನಯ ಎಲ್ಲಿಯೂ ಅತಿರೇಕ ವೆನ್ನಿಸುವಂತಿರಲಿಲ್ಲ. ಅಶ್ಲೀಲ ಅಂಗಿಕಾಭಿನಯ ವಿರಲಿಲ್ಲ. ದ್ವಂದಾರ್ಥದ ಸಂಭಾಷಣೆಗಳಿರಲಿಲ್ಲ. ಅವರ ಸ್ವಂತ ಚಿತ್ರ  ಫ್ರೊಫೆಸರ್ ಹುಚ್ಚೂರಾಯ  ಚಿತ್ರದಲ್ಲಿ ಡಿವಿಜಿ ಯವರ ಮಂಕು ತಿಮ್ಮನ ಕಗ್ಗದಲ್ಲಿ ' ನಗಬೇಕು ನಗಿಸಬೇಕು ಅದು ಜೀವನ ಧರ್ಮ ' ಎಂಬ ಬಗ್ಗೆ ಒಂದು ಉಲ್ಲೇಖವಿದೆ. ಅದೇ ಸಾಲನ್ನೆ ಬಳಸಿಕೊಂಡಿದ್ದಾರೆ. ಅದರ ಪ್ರಾರಂಭಿಕ ಸಾಲುಗಳು ಈ ರೀತಿ ಇವೆ.


                                             ನಗಬೇಕು ನಗಿಸಬೇಕು
                                             ಅದೇ ನನ್ನ ಧರ್ಮ 
                                             ನಗಲಾರೆ ಅಳುವೆನೆಂದರೆ
                                             ಅದು ನಿಮ್ಮ ಕರ್ಮ


     ನಗಿಸುವುದನ್ನೆ ತಮ್ಮ ಕಾಯಕ ಮಾಡಸಿಕೊಂಡಿದ್ದ ನರಸಿಂಹರಾಜು ಕನ್ನಡದ ಯಶಶ್ವಿ ಹಾಸ್ಯ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅದು ಹಾಸ್ಯ ಬ್ರಹ್ಮ ' ನರಸಿಂಹರಾಜು ' ಅವರ ವೈಶಿಷ್ಟ್ಯ. ನೆನಪು ಪ್ರತಿವರ್ಷ ಹಾಗೆಯೆ ನವೀಕರಣ ಗೊಳ್ಳುತ್ತಿರಲಿ.


 


ಚಿತ್ರಕೃಪೆಃ ಅಂತರ್ ಜಾಲ



                                                    ***


    


 


 

Rating
No votes yet

Comments