ನಿಮ್ಮನ್ನು ಹಡೆದ ತಾಯಿ ಬಂಜೆ: ಆಧ್ಯಾತ್ಮಿಕ ಸ್ವಾರಸ್ಯಕರ ಪ್ರಸಂಗ

ನಿಮ್ಮನ್ನು ಹಡೆದ ತಾಯಿ ಬಂಜೆ: ಆಧ್ಯಾತ್ಮಿಕ ಸ್ವಾರಸ್ಯಕರ ಪ್ರಸಂಗ

    ರಾಮಾನುಜಾಚಾರ್ಯರಿಗಿಂತ ಮೊದಲು ವಿಶಿಷ್ಠಾದ್ವೈತದ ಪ್ರಮುಖ ಪ್ರತಿಪಾದಕರಾಗಿದ್ದ ಯಾಮುನಾಚಾರ್ಯರು ಬಾಲಕನಾಗಿದ್ದಾಗಲೇ ಸಕಲವಿದ್ಯಾಪಾರಂಗತರಾಗಿದ್ದರು. ಅವರಿಗೆ ಐದು ಜನ ಶಿಷ್ಯರಿದ್ದರು ಮತ್ತು ಅವರೆಲ್ಲರೂ ಯಾಮುನಾಚಾರ್ಯರ ಭಾಗಶಃ ಅಂಶಗಳನ್ನು ಮಾತ್ರ ತಿಳಿದವರಾಗಿದ್ದರು. ಅವರೆಲ್ಲರ ಬಳಿ ಕಾಲಾನಂತರದಲ್ಲಿ ಶ್ರೀ ರಾಮಾನುಜರು ಶಿಷ್ಯತ್ವವನ್ನು ಸ್ವೀಕರಿಸಿ ಯಾಮುನಾಚಾರ್ಯರ ಸಂಪೂರ್ಣ ವಿದ್ವತ್ ಪಾಂಡಿತ್ಯವನ್ನು ಪಡೆದರೆನ್ನುವುದು ಒಂದು ಐತಿಹ್ಯ. ಇಂತಹ ಯಾಮುನಾಚಾರ್ಯರ ಬಾಲ ಪ್ರತಿಭೆಯನ್ನು ಅವರು ಹನ್ನೆರಡು ವರ್ಷ ವಯಸಿನವರಾಗಿದ್ದಾಗಿನ ಸ್ವಾರಸ್ಯಕರ ಪ್ರಸಂಗವೊಂದು ಪ್ರಚುರಪಡಿಸುತ್ತದೆ. ಪಾಂಡ್ಯರಾಜನ ಆಸ್ಥಾನ ಪಂಡಿತನಾಗಿದ್ದ ವಿದ್ವಜ್ಜನ ಕೋಲಾಹಲನೆಂದು ಪ್ರಸಿದ್ಧಿ ಪಡೆದಿದ್ದ ಮಹಾವಿದ್ವಾಂಸ ಮತ್ತು ಗರ್ವಿಷ್ಠನೊಡನೆ ವಾದಮಾಡಿ  ಯಾಮುನಾಚಾರ್ಯರು ಗೆದ್ದದ್ದೇ ಆ ಪ್ರಸಂಗ.  ಆ ಕೋಲಹಲಾನಾದರೋ ತನ್ನಿಂದ ವಾದದಲ್ಲಿ ಸೋಲಿಸಲ್ಪಟ್ಟವರಿಂದ ವರ್ಷಕ್ಕೊಂದಾವರ್ತಿ ಕಪ್ಪ ಕಾಣಿಕೆಗಳನ್ನೂ ಸ್ವೀಕರಿಸುತ್ತಿದ್ದ. ಯಾಮುನಾಚಾರ್ಯರ ಗುರುಗಳಾದ ಭಾಷ್ಯಾಚಾರ್ಯರು ಕೂಡಾ ಒಮ್ಮೆ ಅವನಿಂದ ವಾದದಲ್ಲಿ ಸೋತು ಅವನಿಗೆ ಕೊಡಬೇಕಾಗಿದ್ದ ಕಪ್ಪವನ್ನು ಎರಡು ಮೂರು ವರ್ಷಗಳಾದರೂ ಕಠಿಣ ಪರಿಸ್ಥಿತಿಗಳಿಂದಾಗಿ ಸಲ್ಲಿಸಲಾಗಿರುವುದಿಲ್ಲ. ಅದನ್ನು ಸಂಗ್ರಹ ಮಾಡಲು ಬಂದ ಕೋಲಾಹಲನ ಶಿಷ್ಯನು ಭಾಷ್ಯಾಚಾರ್ಯರು ಮಠದಲ್ಲಿಲ್ಲದಾಗ ಅವರ ಶಿಷ್ಯನಾದ ಯಾಮುನಾಚಾರ್ಯರ ಬಳಿ ಕೆಟ್ಟದ್ದಾಗಿ ನಡೆದುಕೊಳ್ಳುತ್ತಾನೆ ಮತ್ತು ಅವನಿಂದ ತನ್ನ ಗುರುಗಳು ವಾದದಲ್ಲಿ ಸೋತು ಕೋಲಾಹಲನಿಗೆ ಬಾಕಿಯಿದ್ದ ಕಪ್ಪದ ಬಗ್ಗೆ ತಿಳಿದು ಬಂದಾಗ ತಾನೇ ಸ್ವತಃ ಆ ಪಂಡಿತನೊಡನೆ ವಾದ ಮಾಡಿ ಗೆಲ್ಲುತ್ತೇನೆಂದು ಪಂಥಾಹ್ವಾನವನ್ನು ನೀಡುತ್ತಾನೆ. ಅದರಂತೆ ಪಾಂಡ್ಯರಾಜನ ಆಸ್ಥಾನದಲ್ಲಿ ವಿದ್ವಜ್ಜನ ಕೋಲಾಹಲ ಮತ್ತು ಬಾಲಕನಾದ ಯಾಮುನಾಚಾರ್ಯರ ನಡುವೆ ವಾದ ವಿವಾದ ನಡೆಯುತ್ತದೆ.

    ಮೊದಲು ಬಾಲಕನೆಂದು ಪರಿಗಣಿಸಿ ಕೋಲಾಹಲನು ಯಾಮುನಾಚಾರ್ಯರಿಗೆ ವ್ಯಾಕರಣ ಮೊದಲಾದ ಗ್ರಂಥಗಳಿಂದ ಸುಲಭವಾದ ಪ್ರಶ್ನೆಗಳನ್ನು ಹಾಕುತ್ತಾನೆ ಅವುಗಳನ್ನು ತಡಮಾಡದೇ ಅವರು ಉತ್ತರಿಸುತ್ತಾರೆ. ಅವರಿಗೆ  ಕೋಲಾಹಲನು ಶಾಸ್ತ್ರ ಗ್ರಂಥಗಳಿಂದ ಕ್ಲಿಷ್ಟವಾದ ಪ್ರಶ್ನೆಗಳನ್ನು ಕೇಳಿದಾಗ ಆಗಲೂ ಕೂಡಾ ಯಾಮುನಾಚಾರ್ಯರು ಅವನ ಎಲ್ಲಾ ಪ್ರಶ್ನೆಗಳಿಗೆ ಲೀಲಾಜಾಲವಾಗಿ ಉತ್ತರಿಸುತ್ತಾರೆ. ಕೋಲಾಹಲನು ಇನ್ನಷ್ಟು ಪ್ರಶ್ನೆಗಳನ್ನು ಈ ಬಾಲಕನನ್ನು ಸೋಲಿಸಬೇಕೆಂದು ಆಲೋಚಿಸುತ್ತಿರಬೇಕಾದರೆ ಯಾಮುನಾಚಾರ್ಯರು ನಾನು ಬಾಲಕನೆಂದು ನನ್ನನ್ನು ತುಚ್ಛವಾಗಿ ಕಾಣಬೇಡ, ಜನಕನ ಆಸ್ಥಾನದಲ್ಲಿ ಬಂಡಿ ಎಂಬ ಪಂಡಿತನನ್ನು ಸೋಲಿಸಿದ ಅಷ್ಟಾವಕ್ರನೂ ಕೂಡಾ ಕೇವಲ ಬಾಲಕನಾಗಿದ್ದನಷ್ಟೇ. ಹಾಗೆ ನೋಡಿದರೆ ಗೂಳಿಯು ನಿಮಗಿಂತ ದೊಡ್ಡದಾಗಿದ್ದ ಮಾತ್ರಕ್ಕೇ ಅದು ನಿಮಗಿಂತ ದೊಡ್ಡ ಪಾಂಡಿತ್ಯ ಹೊಂದಿರುತ್ತದೆಯೋ ಎಂದು ಛೇಡಿಸುತ್ತಾರೆ. ಇದರಿಂದ ಕೋಲಾಹಲನು ಕುಪಿತಗೊಂಡರೂ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸದೆ ಹೋಗಲಿ ನೀನೆ ನನಗೆ ಕೆಲವು ಪ್ರಶ್ನೆಗಳನ್ನು ಕೇಳು ಅವನ್ನು ನಾನು ಸಮರ್ಪಕವಾಗಿ ಉತ್ತರಿಸುತ್ತೇನೆ ಎನ್ನುತ್ತಾನೆ. ಆಗ ಬಾಲ ಯಾಮುನಾಚಾರ್ಯನು ಮೂರು ಪ್ರಸ್ತಾವನೆಗಳನ್ನು ಅವನ ಮುಂದಿಡುವುದಾಗಿಯೂ ಮತ್ತು ಅವನ್ನು ಕೋಲಾಹಲನು ಸಮರ್ಪಕವಾಗಿ ಖಂಡಿಸಬೇಕೆಂದು ಸವಾಲೆಸೆಯುತ್ತಾನೆ ಮತ್ತು ಒಂದು ವೇಳೆ ಅದರಲ್ಲಿ ತಾನು ಸೋತರೆ ಜೀವನ ಪರ್ಯಂತ ಕೋಲಾಹಲನ ಸೇವಕನಾಗಿರುವುದಾಗಿ ಹೇಳುತ್ತಾನೆ.

    "ನಿಮ್ಮನ್ನು ಹಡೆದ ನಿಮ್ಮ ತಾಯಿ ಬಂಜೆಯಲ್ಲ" ಎಂದು ಆ ಬಾಲಕನು ಮೊದಲ ಪ್ರಸ್ತಾವವನ್ನು ಆ ವಿದ್ವಾಂಸನ ಮುಂದಿಟ್ಟು ಅದನ್ನು ಖಂಡಿಸುವಂತೆ ಹೇಳುತ್ತಾನೆ. ಆಗ ಆ ಕೋಲಾಹಲನು ನನ್ನ ತಾಯಿ ನನ್ನನ್ನು ಹೆತ್ತ ಮೇಲೆ ಅವಳು ಹೇಗೆ ಬಂಜೆಯಾಗುತ್ತಾಳೆ? ಆದ್ದರಿಂದ ಅದಕ್ಕೆ ಉತ್ತರಿಸಲಾಗದೆ, ಮೌನವಾಗಿದ್ದುಕೊಂಡು ಮುಂದಿನ ಪ್ರಶ್ನೆಯನ್ನು ಎದುರು ನೋಡುತ್ತಾನೆ. ಆಗ ಆ ಬಾಲಕನು, "ಈ ಪಾಂಡ್ಯರಾಜನು ಪರಮ ಋಜುಮಾರ್ಗದಲ್ಲಿರುವವನು, ಇದನ್ನು ದಯವಿಟ್ಟು ಖಂಡಿಸು" ಎನ್ನುತ್ತಾನೆ. ತನಗೆ ಆಶ್ರಯವಿತ್ತ ರಾಜನ ಬಗ್ಗೆ ಅವನು ಹೇಗೆ ತಾನೆ ರಾಜನು ಧರ್ಮಭ್ರಷ್ಟ ಎಂದು ಹೇಳಿಯಾನು, ಆದ್ದರಿಂದ ಅವನು ಬಾಯಿ ಮುಚ್ಚಿಕೊಂಡು, ಮುಂದಿನ ಪ್ರಶ್ನೆಯನ್ನು ಎದುರು ನೋಡುತ್ತಾನೆ. ಆಗ ಆ ಬಾಲಕನು, "ಓ ವಿದ್ವಜ್ಜನ ಸಭಿಕರನೆ, ಇದೋ ನನ್ನ ಮೂರನೆಯ ಪ್ರಸ್ತಾವನೆ, ನಮ್ಮೆದುರಿಗೆ ಕುಳಿತಿರುವ ಈ ಮಹಾರಾಣಿಯು ಸಾವಿತ್ರಿಯಂತೆ ಪರಿಶುದ್ಧಳು" ಇದನ್ನು ಸಾಧ್ಯವಾದರೆ ಖಂಡಿಸು ಎನ್ನುತ್ತಾನೆ. ಆಗ ತನ್ನ ಬಾಯನ್ನು ಕಟ್ಟಿಹಾಕಲು ಈ ಉದ್ದಟನಾದ ಬಾಲಕನು ಈ ರೀತಿ ಆಟ ಹೂಡಿದ್ದಾನೆಂದು ಕೋಲಾಹಲನು ತಿಳಿದು ವಿಪರೀತವಾಗಿ ಕೋಪಗೊಂಡು ಕೇವಲ ನನ್ನ ಬಾಯಿಕಟ್ಟಿ ಹಾಕಿ; ನಾನು  ಪ್ರಶ್ನೆಗಳನ್ನು ಉತ್ತರಿಸದಂತೆ ಮಾಡಿದ ಮಾತ್ರಕ್ಕೆ ನಾನು ಸೋತನೆಂದು ಅರ್ಥವಲ್ಲ, ಇದಕ್ಕೆ ಸಮರ್ಪಕ ಉತ್ತರಗಳನ್ನು ನೀನು ಹೇಳದಿದ್ದರೆ ನೀನು ಸೋಲುವುದು ಮಾತ್ರವಲ್ಲದೆ ರಾಜನಿಂದ ಮರಣದಂಡನೆಗೆ ಗುರಿಯಾಗಬೇಕಾಗುತ್ತದೆ ಎಂದು ಗುಡುಗುತ್ತಾನೆ. ಸಭಿಕರಲ್ಲಿ ಕೆಲವರು ಕೋಲಾಹಲ ಪಂಡಿತನನ್ನು ಬೆಂಬಲಿಸಿ ಗಲಾಟೆಯೆಬ್ಬಿಸಿದರೆ ಉಳಿದವರು ಬಾಲಕ ಕೇಳಿದ ಪ್ರಶ್ನೆಗಳಿಗೆ ಪಂಡಿತನು ಉತ್ತರಿಸಲಾಗದ್ದರಿಂದ ಅವನು ಸೋತಂತೆ ಎಂದು ಹುಯಿಲೆಬ್ಬಿಸಿದರು. ಆಗ ಎಲ್ಲರನ್ನೂ ಶಾಂತರೀತಿಯಿಂದ ಕುಳಿತುಕೊಳ್ಳುವಂತೆ ಆ ಬಾಲಕನು ನಮ್ರನಾಗಿ ವಿನಂತಿಸಿಕೊಂಡು ತಾನು ಶಾಸ್ತ್ರರೀತ್ಯಾ ತನ್ನ ಪ್ರಸ್ತಾವನೆಗಳನ್ನು ಒಂದೊಂದಾಗಿ ಖಂಡಿಸುತ್ತೇನೆಂದು ಹೇಳಿದಾಗ ಸಭೆ ಮೌನವಾಯಿತು.

    ಮೊದಲನೇ ಪ್ರಸ್ತಾವ; ಮನುಸಂಹಿತೆಯ (೯.೬೧) ಮೇಧಾತಿಥಿ ಭಾಷ್ಯದಲ್ಲಿ "ಏಕಪುತ್ರೋ ಹ್ಯಪುತ್ರ ಇತಿ ಲೋಕಾವದಾತ್" ಎಂದು ಹೇಳಿದೆ. ಒಬ್ಬ ಮಗ ಮಗನಲ್ಲ ಎನ್ನುತ್ತಾರೆ, ಒಂದೇ ಮಗುವಿನ ತಾಯಿಯನ್ನು ಬಂಜೆಯೆನ್ನ ಬಹುದು. ಆದ್ದರಿಂದ ಒಂದೇ ಮಗನನ್ನು ಹೆತ್ತಿರುವ ನಿನ್ನ ತಾಯಿ-ನಿನ್ನಂತಹ ಮಹನೀಯನನ್ನೇ ಆದರೂ - ನಮ್ಮ ಶಾಸ್ತ್ರಗಳ ಪ್ರಕಾರ ಬಂಜೆಯೆಂದೇ ಪರಿಗಣಿಸಲ್ಪಡುತ್ತಾಳೆ.

    ಎರಡನೆಯದಾಗಿ, ಕಲಿಯುಗದಲ್ಲಿ ಧರ್ಮವು ಒಂದು ಕಾಲಿನ ಮೇಲೆ ನಿಂತಿರುವುದೆಂದು ಹೇಳುತ್ತಾರೆ, ಎಂದರೆ ಅಧರ್ಮವು ಮೂರು ಕಾಲಿನಲ್ಲಿ ನಿಂತಿದೆ ಎಂದಾಯಿತು. ಮನುಸಂಹಿತೆಯಲ್ಲಿ (ಅದೇ ಮೇಧಾತಿಥಿ ಭಾಷ್ಯ ೮.೩೪) ಸರ್ವತೋ ಧರ್ಮಷಡ್ಭಾಗೋ ರಾಜ್ಞೋ ಭವತಿ ರಕ್ಷತಃ l ಅಧರ್ಮಾದಪಿ ಷಡ್ಭಾಗೋ ಭವತಸ್ಯ ಹ್ಯರಕ್ಷತಃ ll ಎಂದು ಹೇಳಲಾಗಿದೆ. ಎಂದರೆ ಪ್ರಜೆಗಳನ್ನು ಚೆನ್ನಾಗಿ ಪರಿಪಾಲಿಸುವ ರಾಜನು ಪ್ರಜೆಗಳ ಪುಣ್ಯದ ಆರನೆಯ ಒಂದು ಭಾಗವನ್ನು ಪಡೆದುಕೊಳ್ಳುತ್ತಾನೆ; ಚೆನ್ನಾಗಿ ಪರಿಪಾಲಿಸಲಾಗದಿದ್ದಾಗ ಅವರ ಪಾಪದ ಆರನೆಯ ಒಂದು ಭಾಗ ಅವನಿಗೆ ಬಂದು ಸೇರುತ್ತದೆ. ಕಲಿಯುಗದಲ್ಲಿ ಅಧರ್ಮದ್ದೇ ಮೇಲುಗೈಯಾಗಿರುವುದರಿಂದ, ರಾಜನು ಎಷ್ಟೇ ಚೆನ್ನಾಗಿ ಪ್ರಜಾಪರಿಪಾಲನೆ ಮಾಡಿದರೂ, ಕಲಿಯ ಪ್ರಭಾವದಿಂದ ಪ್ರಜೆಗಳು ಸಹಜವಾಗಿಯೇ ಅಧರ್ಮಿಗಳಾಗಿರುತ್ತಾರೆ; ರಾಜನು ಅವರ ಪಾಪದ ಆರನೆಯ ಒಂದು ಭಾಗವನ್ನು ಸ್ವೀಕರಿಸಲೇ ಬೇಕಾಗುತ್ತದೆ. ಆದ್ದರಿಂದ, ಶಾಸ್ತ್ರರೀತ್ಯಾ ಹೇಳುವುದಾದರೆ, ರಾಜನಾದವನು ಪಾಪಭಾರವನ್ನು ಹೊರಲೇಬೇಕು; ಎಂದ ಮೇಲೆ ಹೇಗೆ ತಾನೇ ಋಜುಮಾರ್ಗದಲ್ಲಿ ಉಳಿದಾನು?

ಇನ್ನು ನನ್ನ ಮೂರನೆಯ ಪ್ರಸ್ತಾವ - "ಮನು ಹೇಳುತ್ತಾನೆ (ಅದೇ ಮೇಧಾತಿಥಿ ಭಾಷ್ಯ ೭.೭) ಸೋಗ್ನಿರ್ಭವತಿ ವಾಯುಶ್ಚ, ಸೋsರ್ಕಃ ಸೋಮಃ ಸ ಧರ್ಮರಾಟ್ l ಸ ಕುಬೇರಃ ಸ ವರುಣಃ ಸ ಮಹೇಂದ್ರಃ ಪ್ರಭಾವತಃ ll ಎಂದರೆ, ರಾಜನಾದವನು ತನ್ನ ಪರಾಕ್ರಮದ ವಿಚಾರದಲ್ಲಿ ಅಗ್ನಿ, ವಾಯು, ಸೂರ್ಯ, ಚಂದ್ರ, ಯಮ, ಕುಬೇರ, ವರುಣ ಮತ್ತು ಇಂದ್ರ ಇವರೆಲ್ಲರ ಅಂಶಸಂಭೂತನಾಗಿರುತ್ತಾನೆ. ಆದ್ದರಿಂದ, ರಾಣಿಯು ಕೇವಲ ರಾಜನೆಂಬ ಒಬ್ಬ ವ್ಯಕ್ತಿಯ ಹೆಂಡತಿಯಲ್ಲ ಅವಳು ಈ ಅಷ್ಟದಿಕ್ಪಾಲಕರಿಗೂ ಹೆಂಡತಿಯಾಗುತ್ತಾಳೆ, ಎಂದಮೇಲೆ ಅವಳು ಪರಿಶುದ್ಧಳೆಂದು ಹೇಗೆ ಹೇಳುವುದು?

    ಇದಾದ ನಂತರ ರಾಣಿ ಮತ್ತು ರಾಜನಿಗೆ ಮೊದಲೇ ನಡೆದಿದ್ದ ಪಣದ ಷರತ್ತಿನ ಪ್ರಕಾರ, ಪಾಂಡ್ಯರಾಜನು ಆ ಬಾಲಕನಿಗೆ ಅರ್ಧರಾಜ್ಯವನ್ನು ಕೊಡುತ್ತಾನೆ. ಆಮೇಲೆ ಆ ಬಾಲಕ ವಿದ್ವಜ್ಜನ ಕೋಲಾಹಲನನ್ನು ಕ್ಷಮಿಸಿದನೆಂದು ಹೇಳಬೇಕಾಗಿಯೇ ಇಲ್ಲ.

    ವಿ.ಸೂ: ಈ ಮೇಲಿನ ಪ್ರಸಂಗವು ಸ್ವಾಮಿ ರಾಮಕೃಷ್ಣಾನಂದರಿಂದ ಮೂಲ ಬೆಂಗಾಲಿಯಲ್ಲಿ ರಚಿಸಲ್ಪಟ್ಟ ಮತ್ತು ಡಾll ಹೆಚ್. ರಾಮಚಂದ್ರಸ್ವಾಮಿಯವರು ಕನ್ನಡಕ್ಕೆ ಅನುವಾದ ಮಾಡಿ ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು ಇವರಿಂದ ಪ್ರಕಾಶಿಸಲ್ಪಟ್ಟಿರುವ ಶ್ರೀ ರಾಮಾನುಜರ ಜೀವನ ಚರಿತ್ರೆಯ ಕೃತಿಯ ಆಧಾರದ ಮೇಲೆ ಬರೆಯಲಾಗಿದೆ.

    ಇದಕ್ಕೆ ಪ್ರೇರಣೆಯಾದದ್ದು ಶ್ರೀಯುತ ಪ್ರಕಾಶರು, ಶ್ರೀನಾಥ್ ಭಲ್ಲೆಯವರ -  ನಾ ತಲೆತಿನ್ನೋದ್ ಬಿಡಾಕಿಲ್ಲ ಬರಹಕ್ಕೆ ಬರೆದ ಪ್ರತಿಕ್ರಿಯೆಯಿಂದ. ಕೊಂಡಿಗಾಗಿ ಇಲ್ಲಿ ಚಿವುಟಿಸಿ: http://sampada.net/%E0%B2%A8%E0%B2%BE-%E0%B2%A4%E0%B2%B2%E0%B3%86-%E0%B2%A4%E0%B2%BF%E0%B2%A8%E0%B3%8D%E0%B2%A8%E0%B3%8B%E0%B2%A6%E0%B3%8D-%E0%B2%AC%E0%B2%BF%E0%B2%A1%E0%B2%BE%E0%B2%95%E0%B2%BF%E0%B2%B2%E0%B3%8D%E0%B2%B2
 

Rating
No votes yet

Comments