ಲಲಿತಾ (ಪೂಜೆಯ) ಹಾಡು
ಶ್ರೀ ಚಿದಂಬರ ಎನ್ನುವ ಭಗವದ್ಭಕ್ತರು ರಚಿಸಿರುವ ಮತ್ತು ಅವರೇ ಮುನ್ನುಡಿಯನ್ನು ಬರೆದಿರುವ, ಸೇವಾಸದನ, ಚಿದಂಬರಾಶ್ರಮ,ಗುಬ್ಬಿ ಇವರು ೧೯೭೭ರಲ್ಲಿ ಪ್ರಕಟಿಸಿದ ಲಲಿತಾ (ಪೂಜೆಯ) ಹಾಡಿನ ಕೇವಲ ೨೫ನಯಾಪೈಸೆ ಮುಖಬೆಲೆಯ ಚಿಕ್ಕ ಪುಸ್ತಕದ ಏಳನೆಯ ಆವೃತ್ತಿಯೊಂದು ಅದು ಹೇಗೋ ನನ್ನ ಸಂಗ್ರಹದಲ್ಲಿ ಸೇರಿಹೋಗಿದೆ. ಈಗ ಆ ಸೇವಾಶ್ರಮ ಇದೆಯೋ ಇಲ್ಲವೋ ಗೊತ್ತಿಲ್ಲ. ನನ್ನಲ್ಲಿರುವ ಪುಸ್ತಕವು ಸಂಪೂರ್ಣ ಜೀರ್ಣವಾಗಿದ್ದು ಅದನ್ನು ಹೆಚ್ಚು ಕಾಲ ಸಂಗ್ರಹಿಸಿ ಇಡಲಾಗದು. ಆದ್ದರಿಂದ ಅದರ ನಕಲನ್ನು ಬಹಳ ಹಿಂದೆ ಮಾಡಿಟ್ಟುಕೊಂಡಿದ್ದೆ. ಇಂತಹ ಅಮೂಲ್ಯವಾಗಿರುವ ಹಾಡೊಂದು ಕನ್ನಡಿಗರ ಜನಮಾನಸದಿಂದ ಮರೆಯಾಗಿ ಹೋಗಬಾರದೆಂಬ ಉದ್ದೇಶದಿಂದ ಇದನ್ನು ಸಂಪದದಲ್ಲಿ ಬೆಳಕಿಗೆ ತರಲು ಇಚ್ಛಿಸಿ ಅದನ್ನು ಯಥಾವತ್ತಾಗಿ ಇಲ್ಲಿ ಕೊಟ್ಟಿದ್ದೇನೆ. ಈ ಪದ್ಯದ ಇನ್ನೊಂದು ವಿಶೇಷವೇನೆಂದರೆ ಕನ್ನಡದಲ್ಲಿ ವಿರಳವಾಗಿರುವ ಸೀಸ ಪದ್ಯದ ಪ್ರಾಕಾರದಲ್ಲಿ ಇದರ ರಚನೆಯಾಗಿರುವುದು. ನಾಳೆ ವರಮಹಾಲಕ್ಷ್ಮಿ ವ್ರತವಿರುವುದರಿಂದ ಈ ಹಾಡನ್ನು ಈವಾಗ ಸೇರಿಸುವುದು ಉಚಿತವೆನಿಸಿದ್ದರಿಂದ ಎಂದೋ ಬೆರಳಚ್ಚಿಸಿ ಇಟ್ಟುಕೊಂಡಿದ್ದನ್ನು ಇಂದು ಕೊಡುತ್ತಿದ್ದೇನೆ. ಆಸಕ್ತಿಯುಳ್ಳವರು ವರಮಹಾಲಕ್ಷ್ಮಿವ್ರತದ ಶುಭ ಸಂದಂರ್ಭದಲ್ಲಿ ಹೇಳಿಕೊಳ್ಳಲು ಅನುವಾಗಬಹುದು. ಸಂಪದದಲ್ಲೇ ಅಷ್ಟಲಕ್ಷ್ಮಿಯರ ಕುರಿತ ಎರಡು ಹಾಡುಗಳು ಪ್ರಕಟವಾಗಿವೆ. ಆಸಕ್ತಿಯುಳ್ಳವರು ಅವನ್ನೂ ಕೂಡಾ ಈ ಕೊಂಡಿಯ ಮುಖಾಂತರ ಒಳಹೊಕ್ಕು ನೋಡಬಹುದು. http://sampada.net/blog/prasannasp/20/08/2010/27533
ನಿವೇದನ
ಸೋದರಿಯರೇ!
ನಮ್ಮ ಹಿರಿಯರು ಮನೆಯಲ್ಲಿ ಮಾತನಾಡುವುದು ಸಂಸ್ಕೃತದಲ್ಲಿ. ಆದುದರಿಂದ ನಮ್ಮ ಮಂತ್ರಗಳೆಲ್ಲಾ ಆ ಭಾಷೆಯಲ್ಲಿಯೇ ಇರುವುವು. ಈಚೆಗೆ ದಕ್ಷಿಣ ದೇಶದಲ್ಲಿ ಬೇರೆ ಬೇರೆ ಭಾಷೆಗಳು ಹುಟ್ಟಿ ಬೆಳೆದುದರಿಂದ ಸಂಸ್ಕೃತವು ನಮಗೆ ದೂರವಾಗಿ ಬಿಟ್ಟಿದೆ. ಅ ಭಾಷೆಯಲ್ಲಿರುವ ಮಂತ್ರಗಳು ನಮಗೆ ಅರ್ಥವಾಗುವುದಿಲ್ಲ. ಆದರೂ ಸಂಸ್ಕೃತದ ಅಭಿಮಾನವು ಮಾತ್ರ ನಮ್ಮನ್ನು ಬಿಟ್ಟಿಲ್ಲ. ಆದುದರಿಂದ ಮಂತ್ರಗಳನ್ನೇ ತಪ್ಪಾಗಿ ಹೇಳಿಕೊಂಡು ಕೆಲವು ಸಮಯಗಳಲ್ಲಿ ದೇವರನ್ನು ಪೂಜಿಸುವೆವು. ಒಂದೊಂದು ವೇಳೆ ಅದರಲ್ಲಿವುದೊಂದು ನಾವು ಮಾಡುವುದೊಂದು ಎಂಬಂತಾಗುವುದು. ಪೂಜೆ ವ್ರತಗಳನ್ನು ಮಾಡಿಸುವ ಪುರೋಹಿತರನೇಕರಿಗೇ ಅರ್ಥವು ಗೊತ್ತಿರುವುದಿಲ್ಲ.
ಈ ಕೊರತೆಯನ್ನು ತಪ್ಪಿಸುವುದಕ್ಕಾಗಿಯೇ ಈ ಪೂಜೆಯ ಹಾಡು ಸಿದ್ಧವಾಗಿದೆ. ಇದನ್ನು ಹೇಳುವಾಗಲೇ ಅರ್ಥವಾಗುವುದು. ಅರ್ಥದೊಡನೆ ಹೃದಯದಲ್ಲಿ ಭಕ್ತಿಯು ಹುಟ್ಟುವುದು. ಭಕ್ತಿಯಿಂದ ಮನಸ್ಸಿಗೆ "ಶಾಂತಿ" ಬರುವುದು. ಆಗ ಮಾತ್ರ ಪೂಜೆಯು ಸಾರ್ಥಕವಾಗುವುದು.
ಇದು ಶಾಸ್ತ್ರದ ನಿಯಮಕ್ಕೆ ಅನುಸಾರವಾಗಿದೆ. ಪುರೋಹಿತರ ಅವಶ್ಯಕತೆಯೇ ಇಲ್ಲದಂತೆ ನೀವು ಜಗನ್ಮಾತೆಯನ್ನು ಪೂಜಿಸಿ ನಿಮ್ಮ ಹೃದಯದ ಪವಿತ್ರ ಪ್ರೇಮವನ್ನು ಆಕೆಯ ಪಾದದಲ್ಲಿಟ್ಟು ಆನಂದಿಸ ಬಹುದು. ಇದಕ್ಕೆ ಮುಂಚೆ "ಪೂಜೆಯೆಂದರೇನು?" ಎಂಬುದನ್ನು ತಿಳಿದುಕೊಳ್ಳಬೇಕಲ್ಲವೇ?
ನಮ್ಮ ಶಾಸ್ತ್ರಗಳು ಪೂಜೆಗೆ ಹದಿನಾರು ಲಕ್ಷಣಗಳನ್ನು ಹೇಳಿದ್ದಾರೆ. ಈ ಪೂಜೆಯೂ ಅದಕ್ಕೆ ತಕ್ಕಂತೆ ಇದೆ. ಜಗತ್ತಿಗೆಲ್ಲಾ ಯಜಮಾನನಾದ ದೇವೆನೊಬ್ಬನಿರುವನು. ಆತನೇ ನಮಗೆಲ್ಲಾ ತಂದೆ, ಆತನು ತನ್ನ ಶಕ್ತಿಯಿಂದಲೇ ಈ ಜಗತ್ತಿನ ಕೆಲಸಗಳನ್ನೆಲ್ಲಾ ನಡೆಸುತ್ತಿರುವನು. ಆ ಪರಮಾತ್ಮನ ಶಕ್ತಿಯೇ ನಮ್ಮ ತಾಯಿ. ನಾವೀಗ ಮಾಡುತ್ತಿರುವುದೇ ಆ ತಾಯಿಯ ಪೂಜೆ. ಆಕೆಯ ಅಪಾರ ಶಕ್ತಿಯನ್ನು ಜ್ಞಾಪಿಸಿಕೊಂಡು, ತಾಯಿಯೇ ನನ್ನೆದುರಿಗಿರುವಳೆಂದು ಭಾವಿಸುವುದು ಧ್ಯಾನ. ಆಕೆಯನ್ನು ಪೂಜಿಸುತ್ತಿರುವೆನೆಂದು ತಿಳಿಯುವುದೇ ಆವಾಹನ, ಕಾಲುತೊಳೆಯುವುದಕ್ಕೆ ನೀರನ್ನು ಕೊಡುವುದು ಪಾದ್ಯ. ಕೈ ತೊಳೆದು ಬಾಯಿಮುಕ್ಕಳಿಸಲು ನೀರು ಕೊಡುವುದು ಅರ್ಘ್ಯ, ಆಚಮನಗಳು.
ಆಕೆಗೆ ಸ್ನಾನಮಾಡಿಸಿ, ಬಟ್ಟೆಯುಡಿಸಿ, ಕುಪ್ಪಸವನ್ನು ತೊಡಿಸುತ್ತಿರುವೆನೆಂದು ಭಾವಿಸುವುದೇ ಸ್ನಾನ, ವಸ್ತ್ರ ಕಂಚುಕ ಸೇವೆಗಳು, ಅರಿಸಿನ ಕುಂಕುಮ, ಚಂದ್ರಗಳನ್ನಿಡುವುದಂತೂ ನಿಮಗೆ ಗೊತ್ತೇ ಇದೆ. ಶುಭಕ್ಕಾಗಿ ಅಕ್ಷತೆಯೂ, ಹೂ ಮುಡಿಸುವುದೂ ನಿಮಗೆ ತಿಳಿಯದ ವಿಷಯಗಳಲ್ಲ. ಹೊರಗಿನ ಹೂಗಳೊಡನೆ ನಿಮ್ಮ ಮನಸ್ಸೆಂಬ ಹೂವನ್ನೇ ತಾಯಿಯ ಪಾದದಲ್ಲಿಡುವುದನ್ನು ಮಾತ್ರ ಮರೆಯಬೇಡಿ. ಗಂಧ ಧೂಪಗಳು ಸುವಾಸನೆಯನ್ನು ಬೀರುವುದಕ್ಕಾಗಿ. ನೀವು ಪ್ರೇಮದಿಂದ ಮಾಡಿದ ಅಡಿಗೆಯನ್ನು ಅರ್ಪಿಸುವುದೇ ನೈವೇದ್ಯ. ತಾಂಬೂಲವು ನಿಮಗೆ ಹೊಸದಲ್ಲ. ದೀಪವೂ ಮಂಗಳಾರತಿಯೂ ಬೆಳಕುಮಾಡಿ ಗೌರವತೋರಿಸುವುದಕ್ಕಾಗಿ. ಬೊಗಸೆ ತುಂಬ ಬಿಡಿ ಹೂಗಳನ್ನರ್ಪಿಸುವುದು ಪುಷ್ಪಾಂಜಲಿ. ತಾಯಿಗೆ ಬಲವಂದು, ಜಗನ್ಮಾತೆಗೆ ಜಯವಾಗಲೆಂದು ಪ್ರಾರ್ಥಿಸಿ, ನಮಸ್ಕರಿಸುವುದೇ ಪ್ರದಕ್ಷಿಣೆ ನಮಸ್ಕಾರಗಳು.
ನನ್ನ ತಪ್ಪುಗಳನ್ನೆಲ್ಲಾ ಕ್ಷಮಿಸಿ ಕಾಪಾಡಬೇಕೆಂದು ಬೇಡಿಕೊಳ್ಳುವುದೇ ಪೂಜೆಯ ಕೊನೆಯ ಭಾಗ. ಆದುದರಿಂದ ಈ ಕ್ರಮವನ್ನು ತಿಳಿದು ಮನದಣಿಯುವಂತೆ ಪೂಜಿಸಿ, ನಲಿದು ಆನಂದಿಸಬೇಕೆಂಬುದೇ ಈ ಸೋದರನ ಕೋರಿಕೆ.
ಸೋದರಿಯರೇ! ನೀವು ಈ "ಲಲಿತಾ" ಬಾಲೆಯನ್ನು ಪ್ರೇಮದಿಂದ ಇದಕ್ಕೆ ಮುಂಚೆಯೇ ಆದರಿಸಿರಿ. ಸೋದರಿಯರನೇಕರು ಈಗಲೂ ಲಲಿತೆಯನ್ನು ಅಪೇಕ್ಷಿಸುತ್ತಿರುವರು. ಅವರ ಸಂತೋಷಕ್ಕಾಗಿಯೇ ಈಕೆಯು ಏಳನೆಯಾವರ್ತಿ ನಿಮ್ಮನ್ನು ಹುಡುಕಿಕೊಂಡು ಬರುತ್ತಿರುವಳು.
ಸರ್ವೇಶ್ವರಿಯು ನಿಮಗೆ ಮಂಗಳವನ್ನುಂಟು ಮಾಡಲಿ!
ಶ್ರೀ ಚಿದಂಬರ
==============================
ಲಲಿತಾ
++-++-++-
!!ಸೀಸಪದ್ಯ - ದ್ವಿಪದಿ!!
ಮಂಗಳಶ್ಲೋಕ :- ಶ್ರೀ ಗುರುವಿನಡಿಗೆರಗಿ ಗಣಪತಿಗೆ ತಲೆಬಾಗಿ!
ಶಾರದೆಗೆ ಸೆರೆಗೊಡ್ಡಿ ಬೇಡುತೀಗ!!
ಸಾಗರಾವೃತ ಭೂಮಿಗಾಧಾರ ಶಕ್ತಿ!
ಸಂಪನ್ನೆ ದೇವಿಯ ಪೂಜೆ ಮಾಳ್ಪೆನೀಗ !! ೧ !!
ಧ್ಯಾನ:- ಶ್ರೀ ಲಲಿತೆ ಶುಭಗಾತ್ರೆ ಸರಸಿಜೋಪಮ ನೇತ್ರೆ!
ಕೋಟಿ ಸೂರ್ಯಪ್ರಭೆಯ ದೇವಿ ನೀನು!!
ಲಾಲಿಸುತ ಪೊರೆಯಮ್ಮ ಲೋಕಮೂರರ ಮಾತೆ!
ಎಂದು ಧ್ಯಾನಿಸುತಿರುವೆನೀಗ ನಾನು !! ೨ !!
ಆವಾಹನ:- ವಿಶ್ವವಂದಿತೆ ದೇವಿ ಸಕಲಧಾರೆ ನೀ!
ನೆಂದು ನಮಿಸುವೆ ನಿನ್ನ ಚರಣಯುಗವ!!
ವಿಶ್ವತೋಮುಖರೂಪೆಗಾವಾಹನೆಯ ಮಾಳ್ಪ!
ಧೈರ್ಯವಂ ಕ್ಷಮಿಸೆಂದು ಬೇಡುತಿರುವೆ !! ೩ !!
ಆಸನ:- ನಿನ್ನ ಸೂತ್ರದೊಳಿಹುದು ಲೋಕನಾಟಕವೆಲ್ಲ!
ನೀನಿರುವೆ ವಿಶ್ವಕಾಧಾರವಾಗಿ!!
ಸನ್ನುತಾಂಗಿಯೇ ನಿನಗೆ ಆಸನವನೆಂತಿಡಲಿ!
ಪೇಳಿಪಾಲುಪುದೆನ್ನ ಲೋಕಮಾತೆ !! ೪ !!
ಪಾದ್ಯ:- ಪಂಕಜೋದ್ಭವೆ ದೇವಿ ವಾಗ್ದೇವಿ ಗಿರಿಜಾತೆ!
ಪಾಕಶಾಸನವಂದ್ಯ ಪಾದಪದ್ಮೆ!!
ಬಿಂಕವೆಲ್ಲವ ಬಿಟ್ಟು ಪಾದ್ಯವನ್ನರ್ಪಿಪೆನು!
ಸರ್ವಮಂಗಳೆ ನಿನ್ನ ಚರಣಕೀಗ !! ೫ !!
ಅರ್ಘ್ಯ:- ಅಭಯ ಹಸ್ತವನೀಡು ಕಮಲಾಕ್ಷಿದೇವಿ ನೀ!
ನುರುತದ ಪ್ರೇಮದಿಂ ಪೊರೆಯುತೆನ್ನ!!
ಸಭಯಭಕ್ತಿಯೊಳೀಗಳರ್ಪಿಸುವ ಅರ್ಘ್ಯವಂ!
ಸ್ವೀಕರಿಸಿ ಪೊರೆಯಮ್ಮ ಲೋಕಮಾತೆ !! ೬ !!
ಆಚಮನ:- ವಿಮಲಗಂಗಾದೇವಿ ಪಾಪನಾಶಕತೇಜೆ!
ಸರ್ವಪಾವನರೂಪೆ ಪುಣ್ಯ ಜನನಿ!!
ಕಮಲಾಕ್ಷಿದೇವಿ ನಾನಾಚಮನವರ್ಪಿಸುವೆ!
ಪಾಪಪುಣ್ಯವ ಮರೆಸಿ ಪೊರೆಯೆ ತಾಯೆ !! ೭ !!
ಸ್ನಾನ:- ಪಂಚತತ್ವದ ದೇಹವಿಂದು ನಿನಗರ್ಪಿಸುವೆ!
ವಂಚನೆಯಿಲ್ಲದೆ ನಿನ್ನಪಾದದೆಡೆಗೆ!!
ಸಂಚಿತ ಪ್ರಾರಬ್ಧವೆಂಬ ಪಂಚಾಮೃತವ!
ನಂತರಂಗದ ಭಾವಶುದ್ಧಿಯಿಂದ !! ೮ !!
ಶುದ್ಧಸತ್ವಳು ನೀನು ಬದ್ಧಸತ್ವಳು ನಾನು!
ಬುದ್ಧಿಹೀನಳ ಸಲಹು ಪರಮಮಾತೆ!!
ಸದ್ಧರ್ಮಸಾಮ್ರಾಜ್ಯಪದವಿಯೊಳು ನಿಲಿಸೆಂದು!
ಸ್ನಾನಮಾಡಿಸುತಿರುವೆ ದೇವಿ ನಿನಗೆ !! ೯ !!
ವಸ್ತ್ರ:- ಜಗದಂಬೆ ಲಲಿತಾಂಬೆ ದೇವದೇವನ ಬೊಂಬೆ!
ಮೂಲೋಕವಾವರಿಸಿದಂಬರಾಖ್ಯೆ!!
ಮುಗುಳುನಗೆಯೊಳಗೆನ್ನ ವಸ್ತ್ರಸೇವೆಯನೊಪ್ಪಿ!
ಸೌಭಾಗ್ಯ ಸುಖವಿತ್ತು ಪೊರೆಯೆ ತಾಯೆ !! ೧೦ !!
ಕಂಚುಕ:- ಮಾನಮರ್ಯಾದೆಗಳ ರೀತಿನೀತಿಗಳೆಲ್ಲ!
ಮಾನವರ ನಾಟಕಕೊದಳಂಗವೆಂಬ!!
ಮಾನಸೋನ್ನತಿಯಿತ್ತು ಪೊರೆಯಬೇಕೆಂದೆನುತ!
ಕಂಚುಕವನರ್ಪಿಸುವೆ ತಾಯೆ ನಿನಗೆ !! ೧೧ !!
ಮಂಗಳ ದ್ರವ್ಯ} ಪರಮಮಂಗಳೆ ನೀನು ಶಿವಶಕ್ತಿ ಪರಿಪೂರ್ಣೆ!
ಅರಿಸಿನ ಕುಂಕುಮ} ಸೌಭಾಗ್ಯ ಸಂಪದವ ನೀಡೆನುತಲಿ!!
ಅರಿಸಿನವ ಕುಂಕುಮನಿಡುತಿಂದು ಪೂಜಿಸುವೆ!
ದಾರಿದ್ರ್ಯನಾಶಿನಿಯೆ ಲೋಕಮಾತೆ !! ೧೨ !!
ಚಂದ್ರ:- ಸಿಂಧುಸಂಭವೆ ದೇವಿ ಪರಮ ಕರುಣಾಸಿಂಧು!
ಸಿಂಧುಶಯನನ ಪಟ್ಟದರಸಿಯೆಂದು!!
ಸಿಂಧೂರವನ್ನಿಡುವೆ ಪಾಪಸಿಂಧುವಿನಿಂದ
ಲೆನ್ನ ಕೈಪಿಡಿದೆತ್ತಿ ಪೊರೆಯೆ ತಾಯೆ !! ೧೩ !!
ಗಂಧ:- ವಾಸನಾಕ್ಷಯರೂಪೆ ಅಪವರ್ಗಸುಖದಾತೆ!
ಸಚ್ಚಿತ್ಸುಖಾನಂದ ಪೂರ್ಣರೂಪೆ!!
ವಾಸನಾದ್ರವ್ಯವನ್ನಿಡುವೆ ನಿರ್ವಾಸನೆಯ
ಸುಖವನ್ನು ಕೊಡುಯೆಂದು ದೇವಿ ನಿನಗೆ !! ೧೪ !!
ಅಕ್ಷತೆ:- ಅಕ್ಷತೆಯನ್ನರ್ಪಿಸುವೆನಂಬುಜಾಕ್ಷಿಯೆ ದೇವಿ!
ಕಂಜನಾಭನ ರಮಣಿ ಪೂರ್ಣಪ್ರಜ್ಞೆ!!
ಅಕ್ಷಯದ ಸುಖವಿತ್ತು ಸುಕ್ಷೇಮದಿಂದೆಮ್ಮ!
ರಕ್ಷಣೆಯ ಮಾಡಮ್ಮ ದೇವಿ ಸುಭೆಗೆ !! ೧೫ !!
ಪುಷ್ಪ:- ಪುಷ್ಪದೊಳಗಡಿಗಿರ್ಪ ಪರಿಮಳದ ಸೌಗಂಧ!
ಶಕ್ತಿರೂಪಳೆ ನಿನಗೆ ವಂದಿಸುತಲಿ!!
ಬಾಷ್ಪಲೋಚನಳಾಗಿ ಪ್ರೇಮಪೂರಿತ ಹೃದಯ!
ಪುಷ್ಪವನ್ನರ್ಪಿಸುವೆ ದೇವಿ ನಿನಗೆ !! ೧೬ !!
ಧೂಪ:- ಸತ್ಕರ್ಮ ಸದ್ಧರ್ಮ ಸೌಗಂಧಯುಕ್ತದಾ!
ಶ್ರದ್ಧೆ ಭಕ್ತಿಯೊಳಿಟ್ಟ ಮನಸಿನಿಂದ!!
ಸತ್ಕರಿಸಿ ಕೊಡುತಿರುವೆ ಪಾಪಪುಣ್ಯವ ನಿನಗೆ!
ಧೂಪರೂಪದೊಳಿಂದು ಪೊರೆಯೆ ತಾಯೆ !! ೧೭ !!
ದೀಪ:- ಕೋಟಿಸೂರ್ಯ ಪ್ರಭೆಯ ಚಿಚ್ಛಕ್ತಿರೂಪಿ ನೀ!
ಪರಬೊಮ್ಮನಾಧಾರವಲ್ತೆ ದೇವಿ!!
ಸಾಟಿಯಲ್ಲವು ನಿನಗೆ ನಾನಿಡುವ ದೀಪದಾ!
ಮಂಕು ಬೆಳಕಿದ ನೋಡಿ ನಗುವೆ ತಾಯೆ !! ೧೮ !!
ನೈವೇದ್ಯ:- ಅನ್ನಪೂರ್ಣಾದೇವಿ ವಾತ್ಸಲ್ಯ ಪರಿಪೂರ್ಣೆ!
ಜೀವಮಾತ್ರರಿಗನ್ನವಿಡುವ ತಾಯೆ!!
ಅನ್ನವನು ಮುಂದಿಟ್ಟು ಮಗುಳೆ ಕೊಂಡೊಯ್ಯುತಿಹ!
ನೈವೇದ್ಯ ನಗೆಗೇಡಿದಲ್ತೆ? ಪೇಳೌ !! ೧೯ !!
ತಾಂಬೂಲ:-ಸೌಂದರ್ಯ ಗುಣರೂಪೆ ಸತ್ಕಾಮ ಪರಿಪೋಷೆ!
ಸೌಂದರ್ಯದಧಿದೇವಿ ಮದನ ಮಾತೆ!!
ಸೌಂದರ್ಯ ಸೌಭಾಗ್ಯ ವೃದ್ಧಿಮಾಳ್ಪಾ!
ಪಚ್ಚಕರ್ಪೂರ ವೀಳ್ಯವನ್ನರ್ಪಿಸುವೆನು !! ೨೦ !!
ನೀರಾಜನ:-ಪಂಚವಿಷಯಗಳಿಂದ ಕೂಡಿದಿಂದ್ರಿಯಚಯವ!
ನರಸುತ್ತಲಿಂದು ಜ್ಞಾನಾಗ್ನಿಯೊಳಗೆ!
ಪಂಚಾರತಿಯಮಾಡಿ ಬೇಡಿಕೊಂಬುವೆ ದೇವಿ!
ಭವತಾಪಪರಿಹಾರೆ ಭಕ್ತವರದೆ !! ೨೧ !!
ಪುಷ್ಪಾಂಜಲಿ:-ಜನ್ಮಜನ್ಮಾಂತರದಿ ನಾಗೈದ ಪಾಪ!
ಸಂಚಯವೆಲ್ಲ ನಿನ್ನಡಿಯೊಳಿಡುತಲೀಗ!!
ಜನ್ಮಮರಣದ ನಾಶಗೈವ ನಿನ್ನುಡಿಯಲ್ಲಿ
ಅರ್ಪಿಸುವೆ ಪುಷ್ಪದಂಜಲಿಯ ನಾನು !! ೨೨ !!
ಪ್ರದಕ್ಷಿಣೆ:- ಎಲ್ಲ ಕಡೆಯಲಿ ನೀನೆ ಎಡಬಲದಲಿ ನೀನೆ!
ನಿನ್ನ ಸುತ್ತಲು ತಿರುಗಲೆತುಂಟಹುದು!!
ಎಲ್ಲರೂಪದ ನಿನ್ನ ಸುತ್ತಲರಿಯದೆ ನಾನು!
ನನ್ನ ಸುತ್ತಲು ತಿರುಗುತಿಹೆನು !! ೨೩ !!
ನಮಸ್ಕಾರ:- ಜ್ಞಾನರೂಪಳೆ ಜಯತು ಜಯತು ಜ್ಞಾನಬೋಧೆ!
ಭಕ್ತವತ್ಸಲೆ ದೇವಿ ಜಯತು ಜಯತು!!
ಜ್ಞಾನಕರ್ಮವು ಭಕ್ತಿಯೆಂಬ ದಾರಿಗಳೊಳಗೆ!
ನೈಜ ಜ್ಞಾನವನೀಗ ತಾಯೆ ಜಯತು !! ೨೪ !!
ನಾನು ಏನನು ಅರಿಯೆ ನೀನು ಎಲ್ಲವನರಿವೆ!
ನಾನು ನನ್ನದಿದೆಂಬ ಭಾವ ಮರೆಸಿ!!
ನೀನೀಗಲೆನ್ನ ನಿನ್ನುಡಿಯಲ್ಲಿ ಹಾಕಿಕೊಂ!
ಡಭಿಮಾನ ಬಿಡುವಂತೆ ಮಾಡು ತಾಯೆ !! ೨೫ !!
ಜಯತು ಕರುಣಾಸಾಂದ್ರೆ ಜಯತು ಮಂಗಳರೂಪೆ!
ಜಯತು ಜಯ ಮಹದಾದಿ ಮಾಯೆ ಜಯತು!!
ಜಯತು ದೇವರದೇವಿ ಶ್ರೀ ಚಿದಂಬರ ರೂಪೆ!
ನೀಡು ನನಗೀಗ ಸಕಲ ಸುಖವ !! ೨೬ !!
ಉಪಸಂಹಾರ:- ತಪ್ಪು ನೆಪ್ಪುಗಳೆಲ್ಲ ಕಾಪಾಡು ತಾಯೆ ನೀ!
ಕ್ಷಮಿಸುತೆನ್ನಪರಾಧ ಸಂಚಯವನು!!
ತಪ್ಪು ಮಾಡದ ಬುದ್ಧಿ ಪಾಲಿಸುತ್ತಲಿ ಎನ್ನ
ಪೊರೆ ಕರುಣದಾ ಮಾತೆ ದಾತೆ !! ೨೭ !!
ಕಪ್ಪಿಟ್ಟದ್ದು:- ಕಪ್ಪು ದುಃಖವು ಸುಖವಿದೆಂಬ ಭಾವವು ಕಪ್ಪು!
ಜನ್ಮ ಜನ್ಮಾಂತರದ ಪಾಪ ಕಪ್ಪು!!
ಕಪ್ಪು ಬಾಲ್ಯದ ಭ್ರಾಂತಿ ಯೌವನದ ಸುಖದಿಚ್ಛೆ!
ಯಿಂದ ಕೂಡಿದ ಮನವದದುವೆ ಕಪ್ಪು !! ೨೮ !!
ಕಪ್ಪೆಚಿಪ್ಪನು ಬೆಳ್ಳಿಯೆಂದು ತಿಳಿವುದೇ ಕಪ್ಪು!
ಕತ್ತಲೆಯು ಬೆಳಕೆಂಬ ಭ್ರಾಂತಿ ಕಪ್ಪು!!
ಕಪ್ಪು ಹಗ್ಗದೊಳಿರ್ಪ ಸರ್ಪರಾಜನ ಭ್ರಾಂತಿ!
ಜಗದಿ ದೇವನ ಕಾಣದಿಹುದೆ ಕಪ್ಪು !! ೨೯ !!
ಹರಿಯು ಹರನೆಂತೆಂಬ ಭೇದಭಾವದಿ!
ಲೋಕಕೀಶದೇವನ ಮರೆವುದದುವೆ ಕಪ್ಪು!!
ಗುರುದೇವನಂಘ್ರಿ ಪಂಕಜದ ಭಜನೆಯ ಮರೆತು!
ವಾದಮಾಡುತ ಬುದ್ಧಿಯದುವೆ ಕಪ್ಪು !! ೩೦ !!
ನೀರಿನಿಂದಲೆ ಬೇರೆಯಾಗಿ ತೋರುವ ಗುಳ್ಳೆ!
ರೂಪಭೇದದಿ ನಿಜವ ಮರೆಸುವಂತೆ!!
ತೋರಿ ಭ್ರಾಂತಿಯ ನೀವ ಜಗವೆ ನೀನಿಂತೆಂಬ!
ನಿಜವ ಮರೆಸುವುದದುವೆ ದೊಡ್ಡ ಕಪ್ಪು !! ೩೧ !!
ಕಪ್ಪದೊಂದೇ ಜಗದಿ ನಾಟ್ಯವಾಡುತ ನರನ!
ಕೋತಿಯಂದದಿ ಕುಣಿಸುತಿರುತಲಿಹುದು!!
ಕಪ್ಪು ಕಣ್ಣನು ಮುಚ್ಚುತೆನ್ನ ಮನವನು ಶತ್ರು!
ದುರ್ಗಮಧ್ಯದಿ ಬಂಧಿಸಿಹುದು ತಾಯೆ !! ೩೨ !!
ಇಂತು ತೋರುತಲೆನ್ನ ಮನವ ಮೋಹಿಪ!
ಕಪ್ಪಿನೊಳಗೆ ಬೆರೆಸುತಲೀಗ ಜ್ಞಾನರಸವ!!
ಸಂತಸದಿ ಕಾಡಿಗೆಯಮಾಡಿ ನಾನರ್ಪಿಸುವೆ!
ಕಂಜಲೋಚನೆ ನಿನ್ನ ನೇತ್ರಯುಗಕೆ !! ೩೩ !!
ಪ್ರಸಾದ ಕೇಳುವುದು:- ಪ್ರೇಮಪುಷ್ಪವನೀಡು ಜಗದಂಬೆ ಎನಗೀಗ!
ಳಕ್ಷಯದ ಸೌಖ್ಯವನು ಬೇಡುತಿಹೆನು!!
ನೇಮದೊಳು ನಿನ್ನಲ್ಲಿ ಖಂಡವಿಲ್ಲದ ಭಕ್ತಿ!
ವೈರಾಗ್ಯ ವಿಷಯದೊಳು ಪುಟ್ಟಿಸಮ್ಮ !! ೩೪ !!
ಆರೋಗ್ಯವೈಶ್ವರ್ಯದಧಿಕಾರ ಸಂಪತ್ತು!
ಪಾಪಪುಣ್ಯ ವಿಚಾರ ಬುದ್ಧಿಯೊಡನೆ!!
ನಾರಾಯಣಾಂಘ್ರಿ ಪದ್ಮದೊಳಿಟ್ಟ ಮನವ ನೀ!
ನಿಂದು ಕರುಣಿಸುತೆನ್ನ ಪತಿಯ ಪೊರೆಯೆ !! ೩೫ !!
ಪತಿಯ ಪುತ್ರರನೆಲ್ಲ ನಿನ್ನ ರೂಪದಿ ಕಂಡು!
ನಾನು ನನ್ನದಿದೆಂಬ ಭಾವ ಮರೆದು!!
ನುತಿಸಿ ನಿನ್ನಡಿಗಳನು ಪೂಜಿಸುವ ಪರಮಾರ್ಥ!
ಬೋಧಯನು ಪಡೆವಂತೆ ಹರಿಸು ತಾಯೆ !! ೩೬ !!
=====================================
ಆರತಿ
(ಜಯ ಸಚ್ಚಿದಾನಂದ ಶ್ರೀ ಸೀತಾರಾಮ ಎಂಬಂತೆ)
ಜಯ ಸಚ್ಚಿತ್ಸುಖರೂಪೆ ಪರಬ್ರಹ್ಮನರಸಿ!
ಜಯ ಜಗನ್ಮಯ ದೇವಿ ಜಗದಾದಿ ಮಾಯೆ !!ಪ!!
ನಿನ್ನ ಲೀಲೆಯೊಳಡಗಿಹುದೀ ಬ್ರಹ್ಮಾಂಡ!
ನಿನ್ನ ಚೈತನ್ಯದೊಳಂಶ ಈ ಪಿಂಡ!!
ನಿನ್ನ ಹೊರತು ಮತ್ತಿನ್ನೇನನು ಅರಿಯೆ!
ಸನ್ನುತಾಂಗಿಯೆ ಕೃಪೆಮಾಡೆನ್ನ ಪೊರೆಯೆ !!೧!!
ಮೂರು ಮೂರ್ತಿಯ ಶಕ್ತಿಯೊಡನೆ ನೀ ಕೂಡಿ!
ಮೂರು ಗುಣಗಳಿಂದಲೀ ಜಗವ ಮಾಡಿ!!
ಮೂರು ಮೂರಾಗಿ ಮತ್ತೆಣಿಕೆಯಿಲ್ಲದ ರೀತಿ!
ಪಾರವಿಲ್ಲದ ನಾಮರೂಪಭೇದದಿ ಮೆರೆವೆ !!೨!!
ಜಯತು ದೇವರೆ ದೇವಿ ಜಯತು ಮಂಗಳ ರೂಪೆ!
ಜಯತು ಸರ್ವಾಧಾರೆ ಲಲಿತಾಂಬೆ ಜಯತು!!
ಜಯತು ಮೋಹನಮೂರ್ತಿ ಜಯ ಕರುಣಸಾಂದ್ರೆ!
ಜಯತು ಚಿದಂಬರ ಸದ್ಗುರು ರೂಪೆ !!೩!!
====================
ಶ್ರದ್ಧಾ ಭಕ್ತಿ ಪುಷ್ಪಾಂಜಲಿ
++-++-++-++-++-++-
ಇದೊಂದು ಪುಟ್ಟ ಗ್ರಂಥ. ಹೃದಯವನ್ನು ಪರಮಾತ್ಮನ ಪಾದದಲ್ಲಿಟ್ಟು ಆತನ ಸಾಕ್ಷಾತ್ಕಾರಕ್ಕೆ ಹಗಲಿರುಳೂ ದುಡಿಯುತ್ತಿರುವ ಸಾಧಕನಿಗೆ ಕೈದೀಪ. ಇದರ ಬೆಲೆಯು ಭಕ್ತನಿಗೆ ಮಾತ್ರ ಗೊತ್ತಾಗಬಲ್ಲುದು.
=================
ಸೇವಾಸದನ ಪ್ರೆಸ್, ಆಶ್ರಮ ಗುಬ್ಬಿ
===========
ಶ್ರೀ ರಾಜ ರಾಜೇಶ್ವರಿ ಚಿತ್ರಕೃಪೆ: ಗೂಗಲ್
Comments
ಉ: ಲಲಿತಾ (ಪೂಜೆಯ) ಹಾಡು
In reply to ಉ: ಲಲಿತಾ (ಪೂಜೆಯ) ಹಾಡು by ananthesha nempu
ಉ: ಲಲಿತಾ (ಪೂಜೆಯ) ಹಾಡು
ಉ: ಲಲಿತಾ (ಪೂಜೆಯ) ಹಾಡು
In reply to ಉ: ಲಲಿತಾ (ಪೂಜೆಯ) ಹಾಡು by ಗಣೇಶ
ಉ: ಲಲಿತಾ (ಪೂಜೆಯ) ಹಾಡು
In reply to ಉ: ಲಲಿತಾ (ಪೂಜೆಯ) ಹಾಡು by venkatesh
ಉ: ಲಲಿತಾ (ಪೂಜೆಯ) ಹಾಡು
In reply to ಉ: ಲಲಿತಾ (ಪೂಜೆಯ) ಹಾಡು by ಗಣೇಶ
ಉ: ಲಲಿತಾ (ಪೂಜೆಯ) ಹಾಡು
ಉ: ಲಲಿತಾ (ಪೂಜೆಯ) ಹಾಡು
In reply to ಉ: ಲಲಿತಾ (ಪೂಜೆಯ) ಹಾಡು by sathishnasa
ಉ: ಲಲಿತಾ (ಪೂಜೆಯ) ಹಾಡು
ಉ: ಲಲಿತಾ (ಪೂಜೆಯ) ಹಾಡು
In reply to ಉ: ಲಲಿತಾ (ಪೂಜೆಯ) ಹಾಡು by RAMAMOHANA
ಉ: ಲಲಿತಾ (ಪೂಜೆಯ) ಹಾಡು
In reply to ಉ: ಲಲಿತಾ (ಪೂಜೆಯ) ಹಾಡು by makara
ಉ: ಲಲಿತಾ (ಪೂಜೆಯ) ಹಾಡು
In reply to ಉ: ಲಲಿತಾ (ಪೂಜೆಯ) ಹಾಡು by ಗಣೇಶ
ಉ: ಲಲಿತಾ (ಪೂಜೆಯ) ಹಾಡು
ಉ: ಲಲಿತಾ (ಪೂಜೆಯ) ಹಾಡು
In reply to ಉ: ಲಲಿತಾ (ಪೂಜೆಯ) ಹಾಡು by H A Patil
ಉ: ಲಲಿತಾ (ಪೂಜೆಯ) ಹಾಡು
In reply to ಉ: ಲಲಿತಾ (ಪೂಜೆಯ) ಹಾಡು by Premashri
ಉ: ಲಲಿತಾ (ಪೂಜೆಯ) ಹಾಡು