ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ?
ದೇವರನ್ನು ನೋಡಲಾಗದು, ಅನುಭವಿಸಬೇಕು
ನಾನು ಸೌಭಾಗ್ಯದಿಂದಲೋ, ದುರ್ಭಾಗ್ಯದಿಂದಲೋ ಮುದ್ರೆಯವರ ಮನೆಯಲ್ಲಿ ಹುಟ್ಟಿದೀನಿ. ಭಗವಂತನ್ನ ನಾನು ಕೇಳ್ಕೊಳ್ಳಲಿಲ್ಲ. ಮುದ್ರೆಯವರ ಮನೆಯಲ್ಲಿ ಹುಟ್ಟಿಸಪ್ಪಾ ಅಂತ. ಮನುಷ್ಯನಾಗಿ ಹುಟ್ಟಲು ಯೋಗ್ಯ ಅಂತ ನನಗೆ ಮನುಷ್ಯ ಜನ್ಮ ಕೊಟ್ಟ. ಇದನ್ನು ಯಾಕೆ ಹೇಳ್ತಾ ಇದೀನಿ ಅಂದ್ರೆ, ಪರಮಾತ್ಮ, ಪರಿಪೂರ್ಣ, ವಿಶ್ವವ್ಯಾಪಕ, ಈ ಜೀವಾತ್ಮ ಪರಿಚ್ಛಿನ್ನ. ಕೇವಲ ಒಂದು ಜಾಗದಲ್ಲಿ ಇರತಕ್ಕವನು. ಅದೂ ಕೂಡ ಎಷ್ಟು? ಜೀವಾತ್ಮನ ವಿಸ್ತಾರ, ಉದ್ದ, ಅಗಲ, ಎಷ್ಟಿದೆ ಗೊತ್ತಾ? 'ಬಾಲಾಗ್ರ . . . . .', ದೇವರೇ! ಲೆಕ್ಕದಲ್ಲಿ ನನ್ನ ತಲೆ ಹಾಗೆ ಹಾಗೆಯೇ. ಇಲ್ಲಿ ಲೆಕ್ಕ ಮಾಡಬೇಕೆಂದರೆ, ಬಾಲಾಗ್ರದ ಶತಭಾಗ, ಒಂದು ಕೂದಲಿನ ತುದಿಯ ೧೦೦ನೆಯ ಒಂದು ಭಾಗ, ಕೂದಲನ್ನು ಉದ್ದುದ್ದ ಸೀಳಬೇಕು, ಅಡ್ಡಡ್ಡಲಾಗಿ ಅಲ್ಲ, ಅದನ್ನು ಮತ್ತೆ ಸೀಳಿ ೧೦೦ನೆಯ ಒಂದು ಭಾಗ ತೆಗೆಯಬೇಕು. ಹೀಗೆ ಆರು ಸಲ ಸೀಳಬೇಕು. ಕೊನೆಗೆ ಎಷ್ಟು ಸೂಕ್ಷ್ಮವಾಗಿ ಆ ಕೂದಲು ಉಳಿದುಕೊಳ್ಳುತ್ತದೋ ಅಷ್ಟು ಸೂಕ್ಷ್ಮ ಈ ಜೀವಾತ್ಮ. ಆಮೇಲೆಯೇ ಅವನನ್ನು ನೋಡುವುದಕ್ಕೆ ಆಗುವುದು. ಒಬ್ಬ ಶಿಷ್ಯ ಗುರುವನ್ನು ಕೇಳ್ತಾನೆ, "ಅದ್ಯಾಕೆ ಅಷ್ಟು ಸೂಕ್ಷ್ಮವಾದ ಅವನನ್ನು ಹುಡುಕಿಕೊಂಡು ಹೋಗಬೇಕು? ಅವನ ಪಾಡಿಗೆ ಅವನಿರಲಿ ಸೂಕ್ಷ್ಮವಾಗಿ, ನಮ್ಮ ಪಾಡಿಗೆ ನಾವು ಇರೋಣ." ಪರಮಾತ್ಮ ಜ್ಞಾನವಿಲ್ಲದೆ ಯಾವ ಜ್ಞಾನವೂ ಸಿಕ್ಕುವುದಿಲ್ಲ. ಈ ಪ್ರಪಂಚದ ಜ್ಞಾನ ಅಂದರೆ - ಸೈಂಟಿಸ್ಟ್ಗಳನ್ನು ಕೇಳಿ- ಎಷ್ಟು ನಕ್ಷತ್ರಗಳಿವೆ ಅಂತ. ಯಾರಿಗೂ ಉತ್ತರ ಹೇಳಕ್ಕಾಗಲ್ಲ. ಗ್ರಹಗಳು, ಹೇಳಿಬಿಡ್ತಾರೆ, ಸೋಮ, ಮಂಗಳ, ಬುಧ, . ಅಂತ. ಈ ನವಗ್ರಹಗಳೂ ಕೂಡ ಪೌರಾಣಿಕರು ಮಾಡಿರೋದು. ಚಂದ್ರ ಗ್ರಹ ಅಲ್ಲ, ಉಪಗ್ರಹ. ಅಲ್ಲಿ ಇರೋದು ಎಂಟು ಗ್ರಹಗಳೇ. ಚಂದ್ರನಿಗೂ ಪೂರ್ಣಗ್ರಹದಂತೇ ಲೆಕ್ಕ ಹಾಕುತ್ತಾರೆ. [ಸೂರ್ಯ ನಕ್ಷತ್ರ ಅಲ್ಲವೇ?] ಆ ಚಂದ್ರನ ವಿವರವನ್ನು, ಚಂದ್ರಲೋಕದ ವರ್ಣನೆಯನ್ನು ಪದ್ಮಪುರಾಣದಲ್ಲಿ, ಗರುಡಪುರಾಣದಲ್ಲಿ, ಬ್ರಹ್ಮ ವೈವಸ್ವತ ಪುರಾಣದಲ್ಲಿ ನೀವು ನೋಡಬೇಕು. ಆಶ್ಚರ್ಯ ಆಗುತ್ತೆ. ಯಮದೂತರು, ಎಷ್ಟು ಅಗಲ, ಎಷ್ಟು ಉದ್ದ, ಎಷ್ಟು ಎತ್ತರ ಇದಾರೆ ಅವರು? ಅವರ ಕಾಲು ನೆಲದ ಮೇಲೆ ಇದ್ದರೆ ತಲೆ ಆಕಾಶದಲ್ಲಿರುತ್ತಂತೆ. ಆ ಪುರಾಣ ಹೇಳುವ ಮಾತು. ಅಂಥವರು ಯಮದೂತರು, ಯಮ ಅಲ್ಲ. ಯಮದೂತರೇ ಅಷ್ಟು ಗಾತ್ರ ಇದ್ದರೆ, ಒಂದು ಮನೆಯಲ್ಲಿ ಸಾವು ಆದರೆ ಯಮದೂತರು ಆ ಮನೆಯೊಳಗೆ ಹೇಗೆ ಹೋಗ್ತಾರೆ? ಎಲ್ಲಾ ಯೋಚನೆ ಮಾಡಿದರೆ, ನೀವು ಎಷ್ಟು ಯೋಚನೆ ಮಾಡಿ, 'ತ್ವಂ ಸಂಪ್ರಶ್ನಂ ಭುವನಾಯ . . .', ಪ್ರಶ್ನೆ ಕೇಳುತ್ತಾ ಹೋಗಿ, ಕೊನೆಗೆ ಕೇಳಬೇಕಾದ್ದು ಇನ್ನೂ ಪ್ರಶ್ನೆ ಇರುತ್ತೆ. ಕೇಳುತ್ತಾ ಕೇಳುತ್ತಾ ನೀನು ಮೌನಿ ಆಗುತ್ತೀಯಲ್ಲಾ, ಸಾಕಾಯ್ತಪ್ಪಾ, ಗಂಟಲು ಒಣಗಿ ಹೋಯಿತು, ಇನ್ನು ಮಾತಾಡಕ್ಕೆ ಆಗಲ್ಲ, ಅಂತ ಸ್ಥಿತಿ ಬಂದಾಗ ಉಂಟಾಗುವ ಮೌನ, ಆ ಮೌನವೂ ಕೂಡ ಒಂದು ವಾಣೀನೇ, ಮೌನವಾಣಿ. ಅದೂ ಭಗವಂತನನ್ನೇ ತೋರಿಸುತ್ತೆ. ತಮಾಷೆ, ಇನ್ನೊಬ್ಬ ಶಿಷ್ಯ ಕೇಳ್ತಾನೆ, "ಸ್ವಾಮಿ, ಅವನು ಸರ್ವವ್ಯಾಪಕ, ನಾವು ಒಂದು ಕಡೆ ಇರತಕ್ಕವರು, ನಾವು ಹೆಚ್ಚು ಅಂದರೆ ನಮ್ಮ ಕಣ್ಣು ಎಷ್ಟು ದೂರ ಹೋಗಬಹುದು, ಅಷ್ಟು ಕಾಣಬಹುದು, ಅದರ ಆಚೆ ಪ್ರಪಂಚ ಇಲ್ಲವಾ?" ಪ್ರಪಂಚ ಇದೆ, ದೇವರೂ ಇದ್ದಾನೆ. 'ಹಿಮಾಲಯ ನೋಡಿದಿಯಾ' ಅಂದರೆ 'ನೋಡಿದೀನಿ' ಅಂತ ಹೇಳ್ತೀವಿ. ಅದು ಡಾರ್ಜಿಲಿಂಗಿನಿಂದ ಹಿಡಿದು ಹಿಂದೂಖುಷ್ ಪರ್ವತದವರೆಗೆ ೨೫೦೦ ಮೈಲಿಗಳ ವರೆಗೆ ಹರಡಿಕೊಂಡಿದೆ. ನಾನು ಹಿಮಾಲಯ ಪರ್ವತ ನೋಡಿದೆ ಅಂದಾಗ, ಸುಳ್ಳು ಹೇಳ್ತಾ ಇಲ್ಲ, ನೋಡಿದೆ, ಅಂದರೆ ಮಾತು ತಪ್ಪು, ಅಂದರೆ ಹಿಮಾಲಯವನ್ನು ನೋಡಲಿಲ್ಲ, ಹಿಮಾಲಯದ ಒಂದು ಭಾಗವನ್ನು ನೋಡಿದೆ ಅನ್ನಬೇಕು. ಯಾರು ಇಷ್ಟೊಂದೆಲ್ಲಾ ದಾರ್ಶನಿಕವಾಗಿ ಯೋಚನೆ ಮಾಡ್ತಾರೆ?
ಮತ್ತೆ ಒಬ್ಬ ಗುರುವನ್ನು ಶಿಷ್ಯ ಕೇಳ್ತಾನೆ, "ಪ್ರಪಂಚದಲ್ಲಿ ಇಷ್ಟೆಲ್ಲಾ ವ್ಯಾಪಿಸಿಕೊಂಡಿದಾನೆ, ಭಗವಂತ, ಆ ಪೂರ್ಣ ಭಗವಂತನನ್ನು ತಿಳಿಯಲು ಸಾಧ್ಯವಾ? ನೀವು ಇಷ್ಟೇ ಇದೀರಿ? ಒಂದು ಕಡೆ ಇರುವವರು." ಆಗ ಗುರು ಹೇಳ್ತಾನೆ, "ನೀನು ಒಂದು ಗ್ಲಾಸು ಶರಬತ್ತು ಮಾಡ್ತೀಯ. ನೀನು ಶರಬತ್ತು ಮಾಡಲು ನೀರು ಎಷ್ಟು ಹಾಕ್ತೀಯೋ, ನಿಂಬೆಹುಳಿ ಎಷ್ಟು ಹಾಕ್ತೀಯೋ ಅಷ್ಟೇ ಸಕ್ಕರೆ ಹಾಕ್ತೀಯಾ? ಇಲ್ಲ. ಸಕ್ಕರೆ ಹಾಕೋದು ಸ್ವಲ್ಪವೇ. ಆದರೆ ಶರಬತ್ತಿನ ಯಾವುದೇ ಭಾಗವನ್ನು ತೆಗೆದುಕೊಂಡು ನೀವು ರುಚಿ ನೋಡಿದರೆ ನಿಮಗೆ ಸಿಹಿ ಗೊತ್ತಾಗುತ್ತೆ. " 'ಇಲ್ಲ ನನಗೆ ಉಪ್ಪಿನ ರುಚಿ ಬಂತು' ಅಂತ ಹೇಳಿದರೆ ಅವನು ಮೋಸಗಾರ. ಇದನ್ನು ತತ್ವಶಃ ನಾವು ತಿಳಿಯಬೇಕು. ಒಂದು ತೊಟ್ಟು ಶರಬತ್ತನ್ನು ನಾಲಿಗೆಯ ಮೇಲೆ ಹಾಕಿಕೊಂಡು ರುಚಿ ನೋಡಿ ಅದು ಸಿಹಿ ಅಂತ ನಾನು ಹೇಳುತ್ತೇನೆ. ನನ್ನನ್ನು ಸುಳ್ಳ ಅಂತೀರಾ? ಇಲ್ಲ. ಅದೇ ರೀತಿ ಭಗವಂತನನ್ನು - ಸಾಗರ ರೂಪ ಅಂತಾ ಕೂಡಾ ಹೇಳ್ತಾರೆ - ಅನುಭವಿಸಿ ತಿಳಿಯಬೇಕೇ ಹೊರತು ನೋಡಲಾಗದು. ಒಂದು ಪೂರ್ಣ ಜಗತ್ತನ್ನೇ ಮೊದಲು ನೋಡಿ, ಜಗತ್ತು ಅಂದರೆ ಈ ಭೂಮಿ ಒಂದೇ ಅಲ್ಲ, ಸೂರ್ಯ, ಚಂದ್ರ, ಎಲ್ಲಾ ಗ್ರಹಗಳು, ಲೆಕ್ಕವಿಲ್ಲದಷ್ಟು ನಕ್ಷತ್ರಗಳು, ಇವೆಲ್ಲಾ ಒಟ್ಟಿಗೆ ಸೇರಿ ಬ್ರಹ್ಮಾಂಡ ಅಂತಾರೆ. ಹಾಗಾದರೆ ಆ ಬ್ರಹ್ಮಾಂಡವನ್ನು ತಿಳಿಯಲು ಸಾಧ್ಯವೇ? ಭೌತಿಕ ಬ್ರಹ್ಮಾಂಡವನ್ನಂತೂ ತಿಳಿದುಕೊಳ್ಳಲು ಸಾಧ್ಯವೇ ಇಲ್ಲ. ಯಾಕೆ ಅಂದರೆ ಸೈಂಟಿಸ್ಟುಗಳು ಎಷ್ಟು ಎಷ್ಟು ಅನ್ವೇಷಣೆ ಮಾಡ್ತಾ ಇದಾರೋ ಅಷ್ಟಷ್ಟು ಬೇರೆ ಬೇರೆ ನಕ್ಷತ್ರಗಳು ಕಾಣಿಸುತ್ತಾ ಇರುತ್ತವೆ. ಇದುವರೆಗೆ ನವಗ್ರಹ ಅಂತ ನಮ್ಮವರು ಹೇಳ್ತಾ ಇದ್ದರು. ಪ್ರತಿಯೊಂದು ಶುಭಕಾರ್ಯ ಮಾಡಬೇಕಾದರೂ ಕೂಡ ಮೊದಲು ನವಗ್ರಹಗಳಿಗೆ ದಾನ ಕೊಡಬೇಕು ಅಂತಾರೆ. ಪಾಪ, ಆ ನವಗ್ರಹಗಳಿಗೆ ಏನು ಬೇಕಾಗಿದೆ? ಪುರೋಹಿತರಿಗೆ ದಾನ-ದಕ್ಷಿಣೆ ಬೇಕಾಗಿದೆ, ಪೂಜೆ ಮಾಡಿದ ಮೇಲೆ ಆ ದಾನಗಳನ್ನು ಗ್ರಹಗಳು ಬಂದು ತೆಗೆದುಕೊಂಡು ಹೋಗೋದಿಲ್ಲ. ಪುರೋಹಿತರಿಗೇ ಹೋಗುತ್ತೆ. ಅದಕ್ಕೋಸ್ಕರ ಈ ನಾಟಕಗಳನ್ನೆಲ್ಲಾ ಆಡ್ತಾರೆ.
ನಾನು ಹೇಳ್ತಾ ಇದ್ದೆ, ಯಾವ ರೀತಿ ಆ ಶರಬತ್ತಿನ ಒಂದು ತೊಟ್ಟನ್ನು ನಾಲಿಗೆ ಮೇಲೆ ಹಾಕಿಕೊಂಡರೆ ಆ ಪೂರ್ತಿ ಶರಬತ್ತಿನ ರುಚಿ ಗೊತ್ತಾಗುತ್ತೋ ಹಾಗೇನೇ ಭಗವಂತ ನಮ್ಮ ಹೃದಯದಲ್ಲಿ ಇರ್ತಾನೆ, ಅಲ್ಲಿ ಜೀವಾತ್ಮನೂ ಇರ್ತಾನೆ, ಇಬ್ಬರೂ ಇರ್ತಾರೆ, ಆದರೆ ಇಬ್ಬರೂ ಸೂಕ್ಷ್ಮ, ಪ್ರಕೃತಿ ಮೇಲಿನಿಂದ ಕೆಳಕ್ಕೆ ಬರುತ್ತೆ, ಪರಮಾತ್ಮನನ್ನ ಸಚ್ಚಿದಾನಂದ ಸ್ವರೂಪ ಅಂತೀವಿ, ಒಂದು ಮೆಟ್ಟಲು ಕೆಳಗೆ ಇಳೀತೀವಿ, ಸತ್ ಚಿತ್ ಸ್ವರೂಪ ಜೀವ ಅಂತ, ಆನಂದಕ್ಕೆ ಖೋತಾ, ಆನಂದ ಇಲ್ಲ. ಪ್ರಕೃತಿ ಹತ್ತಿರ ಬಂದರೆ ಚೈತನ್ಯ ಕೂಡಾ ಇಲ್ಲ. ಬರೀ ಪರಮಾಣು ಜಡ ಸಮೂಹ. ಅದು ಇನ್ನೂ ಕೆಳಗೆ ಹೋಯಿತು. ಆದ್ದರಿಂದ ಋಷಿಮುನಿಗಳು ಹೇಳ್ತಾರೆ, 'ನಿನಗಿಂತ ಮೇಲಿರುವ ಪರಮಾತ್ಮ ಆನಂದಮಯ, ಅವನನ್ನು ಕುರಿತು ಧ್ಯಾನ ಮಾಡು, ಈ ಜಡ ಪ್ರಕೃತಿಯನ್ನು ಧ್ಯಾನ ಮಾಡಿದರೆ ಪ್ರಯೋಜನವಿಲ್ಲ.' ನನ್ನನ್ನು ಮೂರ್ತಿಪೂಜಕರು ಕೇಳುವುದು ಇದೇ ಪ್ರಶ್ನೆ, "ಪಂಡಿತಜಿ, ಏನೂ ಇಲ್ಲದೆ ಹೋದರೆ ಮನಸ್ಸನ್ನು ಎಲ್ಲಿ ನಿಲ್ಲಿಸುವುದು? ಒಂದು ಬೇಕು, ಕಲ್ಲಿಂದೋ, ಮಣ್ಣಿಂದೋ, ಕಟ್ಟಿಗೆಯದೋ, ಯಾವುದರದೋ ಒಂದು ಬೇಕು, ಪ್ರತೀಕ ಅದರಲ್ಲಿ ಮನಸ್ಸನ್ನು ನಿಲ್ಲಿಸಬಹುದು." ನಾನು ಕೇಳೋದು, "ನೀವು ಯಾರಲ್ಲಿ ಮನಸ್ಸನ್ನು ನಿಲ್ಲಿಸಬೇಕು ಅಂತಿದೀರಿ? ಪರಮಾತ್ಮನಲ್ಲಿ. ಪರಮಾತ್ಮ ಅದರೊಳಗೆ ಇದಾನೆ ಅನ್ನೋದೇನೋ ನಿಜ, ಅದೇ ಪರಮಾತ್ಮನಾ?" ಅದೇ ಪರಮಾತ್ಮ ಆಗಿದ್ದರೆ, ನಾವು ಹೇಳಿದ ಹಾಗೆ ಕೇಳಬೇಕಾಗಿತ್ತು. ಭಗವಂತ, ನೀನು ಮಲಗಿಕೊಂಡುಬಿಟ್ಟಿದ್ದೀಯಪ್ಪಾ, ಸ್ವಲ್ಪ ಎದ್ದು ಕುಳಿತುಕೊಳ್ಳಪ್ಪಾ, ಆ ಬೊಂಬೆ ಎದ್ದು ಕೂತ್ಕೋಬೇಕಾಗಿತ್ತು. ನಿಂತ್ಕೋ ಅಂದರೆ ನಿಂತುಕೊಳ್ತಾನಾ? ತಾತ್ಪರ್ಯ ಏನು? ಸೂಕ್ಷ್ಮತಮ ತತ್ವ ಇದೆಯಲ್ಲಾ, ಸೂಕ್ಷ್ಮ ಜ್ಞಾನದ ಕಣ್ಣಿಗೆ ಕಾಣುತ್ತೆಯೇ ಹೊರತು, ಈ ಕಣ್ಣಿಗೆ ಏನೂ ಕಾಣೋದಿಲ್ಲ. ಮತ್ತೆ ಈ ಕಣ್ಣು ಹೇಗೆ ಅನುಭವಿಸುತ್ತೆ? ನಿಮ್ಮ ಕಣ್ಣನ್ನು ನೀವು ನೋಡ್ತೀರಾ? ಕನ್ನಡಿ ಹಿಡಕೊಂಡರೆ ನಿಮ್ಮ ಬಲಗಣ್ಣು ಎಡಗಣ್ಣಾಗಿ, ಎಡಗಣ್ಣು ಬಲಗಣ್ಣಾಗಿ ಕಾಣುತ್ತೆ. ನಿಮ್ಮ ಬೆನ್ನನ್ನು ನೀವು ನೋಡ್ತೀರಾ? ನನ್ನ ಬೆನ್ನನ್ನು ನೋಡಿಕೊಳ್ಳುವುದಕ್ಕೆ ಆಗುವುದಿಲ್ಲ, ಆದ್ದರಿಂದ ಬೆನ್ನೇ ಇಲ್ಲ ಅನ್ನೋಕಾಗುತ್ತಾ? ಆ ಬೆನ್ನು ಇಲ್ಲದಿದ್ದರೆ ನಾವು ಹಾವಿನ ಹಾಗೆ ಸುತ್ತಿಕೊಂಡು ಹೋಗಬೇಕಾಗುತ್ತೆ. ಬೆನ್ನು ಮೂಳೆ ಇರೋದರಿಂದಲೇ ನಾವು ನೆಟ್ಟಗಿದ್ದೇವೆ. ಹೀಗೆ ಅನುಮಾನ ಪ್ರಮಾಣ ಅಂತ ಹೇಳ್ತಾರೆ. ಆಲೋಚನೆ ಮಾಡಿ, ಆ ವಸ್ತುವನ್ನು ನೋಡಿ, ಅದರ ಗುಣವನ್ನು ಹಿಡಿದು ಇದು ಹೀಗೇನೇ ಅಂತ ಹೇಳ್ತೀವಲ್ಲಾ ಅದು. ನಾವು ಯಾವ ಪದಾರ್ಥ ನೋಡುತ್ತೇವೆ ಅದರ ಆಕಾರವನ್ನು ಮಾತ್ರ ನೋಡ್ತೀವಿ. ಚಿನ್ನದ ಬೊಂಬೆ ಇದೆ ಅಂತ ಇಟ್ಕೊಳ್ಳಿ, ನಮ್ಮ ಕಣ್ಣು ಆ ಚಿನ್ನ ಥಳಥಳ ಹೊಳೆಯುತ್ತಾ ಇರಬಹುದು, ಅದು ಬೇರೆ ವಿಷಯ, ಆ ಚಿನ್ನ ನಾನು ನೋಡುತ್ತಾ ಇದೇನಾ? ಚಿನ್ನದ ಹೊಳಪನ್ನು ನೋಡ್ತಾ ಇದೇನೇ ಹೊರತು ಚಿನ್ನ ನೋಡ್ತಾ ಇಲ್ಲ. ಈ ರೀತಿ ದಾಸರು ಇದ್ದಾರಲ್ಲಾ, ತಾವೂ ದಾರಿ ತಪ್ತಾರೆ, ಬೇರೆಯವರನ್ನೂ ದಾರಿ ತಪ್ಪಿಸ್ತಾರೆ.
ಆಕಾಶದಲ್ಲಿ ಮೋಡ ಕಂಡಾಗ, ಆಕಾರದಲ್ಲಿ ತುಂಬಾ ಚಿಕ್ಕ ಚಿಕ್ಕದಾದ ಇರುವೆಗಳು ಏನು ಮಾಡುತ್ತವೆ ಗೊತ್ತಾ? ದವಸ, ಆಹಾರವನ್ನು ಹೊತ್ತುಕೊಂಡು ಸಾಲು ಸಾಲಾಗಿ ಹೋಗಿ ಗೂಡಲ್ಲಿ ಇಟ್ಟುಕೊಳ್ಳುತ್ತವೆ. ಯಾಕೆ ಅಂದ್ರೆ ಮಳೆಗಾಲದಲ್ಲಿ ಹೊರಕ್ಕೆ ಬರಕ್ಕೆ ಆಗಲ್ಲ ಅಂತ. ಅಷ್ಟು ಸಣ್ಣ ಇರುವೆಗೆ ತಲೆ ಎಷ್ಟಿರಬಹುದು, ಅದರ ಒಳಗೆ ಮೆದುಳು ಎಷ್ಟಿರಬಹುದು? ಅಷ್ಟು ಸೂಕ್ಷ್ಮವಾದ ಮೆದುಳು ಇರುವೆಗೆ ಕೂಡಾ ಇದೆ. ಹೀಗಿರುವಾಗ ಆ ಪರಮಾತ್ಮನ ವಿಷಯದಲ್ಲಿ ನಾವು ಮಾತಾಡೋದೇನು? ಅವನನ್ನು ಮರೆಮಾಡಿ ನಾವು ಕದಿಯಬಹುದು, ಮೋಸ ಮಾಡಬಹುದು, ಸುಳ್ಳು ಹೇಳಬಹುದು ಅಂತ ಹೇಳಿ ನಾವು ಭಾವಿಸುತ್ತೇವಲ್ಲಾ, ಅದು ಸಾಧ್ಯವಾ? ಅವನು ಸಹಸ್ರಾಕ್ಷ, ಸಹಸ್ರಪಾತ್, ಅವನಿಗೆ ಎಲ್ಲಾ ಕಡೆಯೂ ಕಣ್ಣಿದೆ, ಅಂದರೆ ಕಣ್ಣಿಲ್ಲದೆ ನೋಡತಕ್ಕ ಶಕ್ತಿ ಆ ವಿಶ್ವಚೇತನನಲ್ಲಿ ಇದೆ. ಅವನಿಗೆ ಕಿವಿಯಿಲ್ಲ, ದೇವರ ಕಿವಿ ಯಾವುದು ತೋರಿಸುತ್ತೀರಾ? ಆದರೆ ಅವನು ಕೇಳದೇ ಇರುವ ಪದಾರ್ಥವೇ ಇಲ್ಲ. ಪ್ರತಿಯೊಂದನ್ನೂ ಅವನು ಕೇಳ್ತಾನೆ, ಪ್ರತಿಯೊಬ್ಬರನ್ನೂ ಅವನು ನೋಡ್ತಾನೆ. ಎಲ್ಲವೂ ಅವನಿಗೆ ಗೊತ್ತಾಗುತ್ತೆ. ಮತ್ತೆ ಅವನಿಗೆ ಕಾಲು ಇದೆಯಾ? ಇಲ್ಲ. ಆದರೆ ಅವನು ಇಲ್ಲದೆ ಇರುವ ಜಾಗವೇ ಇಲ್ಲ. 'ಪಾತ್' ಅಂದರೆ ಕಾಲು ಅಂತ ಇಟ್ಕೋಬೇಡಿ. ಕಾಲಿನ ಕೆಲಸ ಏನು? ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗೋದು. ಅವನು ಮೊದಲೇ ಇದ್ದು ಬಿಟ್ಟಿದ್ದಾನೆ. ಹೋಗೋದೆಲ್ಲಿಗೆ? ಆ ಸಮಸ್ಯೆಯೇ ಇಲ್ಲ ಅವನಿಗೆ. ನಾವು ಕೂಗ್ತೀವಲ್ಲಾ, 'ಗೋವಿಂದಾ, ಅಪರಾಧ ಸಹಸ್ರಾಣಿ . . ' ಹಗಲೂ ರಾತ್ರಿ ಲಕ್ಷಾಂತರ ಪಾಪ ಮಾಡಿರ್ತೀನಿ. ನಿನ್ನ ದಾಸ ಅಂದುಕೊಂಡುಬಿಟ್ಟು ನನ್ನನ್ನು ಕ್ಷಮಿಸು, ಅಂತ. ಹಾಗೆ ದೇವರು ಕ್ಷಮಿಸಕ್ಕೆ ಶುರು ಮಾಡಿದರೆ ಪ್ರಪಂಚ ನಡೆಯುವ ಹಾಗೇ ಇರಲಿಲ್ಲ, ಯಾವ ಕೆಲಸವೂ ನಡೆಯುವ ಹಾಗಿರಲಿಲ್ಲ. ಆ ಪರಮಾತ್ಮನ ದಯೆ, ಎಲ್ಲರ ಮೇಲಿದೆ. ತಾಯಿ-ತಂದೆಗಳು ತಪ್ಪು ಮಾಡಿರುವ ಮಕ್ಕಳನ್ನು ದಂಡಿಸ್ತಾರೆ, ಕೋಪ ಇದೆಯೇನು ಅವರಿಗೆ ಮಕ್ಕಳ ಮೇಲೆ? ಇಲ್ಲ. ಮಗು ಸುಧಾರಿಸಲಿ, ಒಳ್ಳೆಯ ಗುಣ ಕಲಿತುಕೊಳ್ಳಲಿ ಅಂತ ದಂಡಿಸುತ್ತಾರೆ. ಆ ಪರಮಾತ್ಮ ವಿಶ್ವತಸ್ಚಕ್ಷು, ಎಲ್ಲಾ ಕಡೆಯೂ ನೋಡಬೇಕು ಅವನು, ವಿಶ್ವತೋಮುಖ ಎಲ್ಲಾ ಕಡೆ ಮುಖ ಇರಬೇಕು. ಆ ಮುಖ ಎಲ್ಲೋ ಒಂದು ಕಡೆಗೆ ತಿರುಗಿಕೊಂಡಿದ್ದರೆ? ಒಂದೇ ಕಡೆ ಇದಾನಾ ಅವನು?
*****************
ಹಿಂದಿನ ಲೇಖನಕ್ಕೆ ಲಿಂಕ್:
Comments
ಉ: ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ?
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ? by partha1059
ಉ: ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ?
ಉ: ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ?
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ? by Chikku123
ಉ: ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ?
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ? by kavinagaraj
ಉ: ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ?
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ? by Prakash Narasimhaiya
ಉ: ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ?
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ? by kavinagaraj
ಉ: ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ?
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ? by Premashri
ಉ: ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ?