ದುರಂತ‌

ದುರಂತ‌

                  ಬೆಳಗ್ಗೆಯಿಂದ  ಶಂಕರ  ಏನೋ ಒಂದು ರೀತಿಯ  ದುಗುಡ ,  ಗಾಬರಿ ತುಂಬಿದ ಸಂತಸದಲ್ಲಿದ್ದ. ಹೊಸ  ಕೆಲಸದ  ಸಂದರ್ಶನಕ್ಕೆಂದು  ಹೊರಟಿದ್ದ.  ಸಂದರ್ಶನ  ಹೇಗಿರಬಹುದು? ಏನು  ಪ್ರಶ್ನೆ ಕೇಳಬಹುದು?  ಒಂದು ವೇಳೆ ಆ ಕೆಲಸ  ನನಗೇ  ಸಿಕ್ಕಿದರೆ  ನಾನು ಹೇಗೆಲ್ಲಾ ಇರಬಹುದು ಎಂಬ ಗುಂಗಿನಲ್ಲಿ  ರಾತ್ರಿಯೆಲ್ಲಾ  ನಿದ್ದೆಯಿಲ್ಲದೇ  ಕಳೆದಿದ್ದ .  ಸಂದರ್ಶನದಲ್ಲಿ  ಯಾವುದೇ  ಸಂಘರ್ಶವಿಲ್ಲದೇ  ಇವನಿಗೆ  ಕೆಲಸ  ದೊರೆಯಿತು.  ಮನಬಂದ  ಹಾಗೆ ವ್ಯಯಿಸಿದರೂ  ಮಿಕ್ಕುವಷ್ಟು  ಸಂಬಳ  ಹಾಗೂ  ಅನೇಕ ಸವಲತ್ತುಗಳ  ಬಗ್ಗೆ ನೆನೆದು, ಅವನ ಕಾಲು  ನೆಲದ  ಮೇಲೆ ನಿಲ್ಲದಂತಾಗಿತ್ತು.  ಅದೇ  ಖುಶಿಯಲ್ಲಿ  ಸಿಹಿಸುದ್ದಿಯೊಂದಿಗೆ,  ಸಿಹಿತಿಂಡಿ ಹಿಡಿದು ಮನೆಗೆ ಬಂದ. ಖುಶಿಯ ಸುದ್ದಿಯನ್ನು  ಮೊದಲು  ಅಮ್ಮನಿಗೇ  ಹೇಳಬೇಕೆಂದು  ಮುಗ್ಧ ಮಗುವಿನಂತೆ " ಅಮ್ಮಾ , ಅಮ್ಮಾ " ಅಂತ ಮನೆಯೆಲ್ಲಾ  ಹುಡುಕಾಡಿದ.  ಮಗನ  ಧ್ವನಿಯಲ್ಲಿದ್ದ  ಸಂತಸವನ್ನು  ಮನದುಂಬಿಕೊಂಡು  ಶಂಕರನ ಅಮ್ಮ  ಅಡುಗೆ  ಮನೆಯಿಂದ  ಹೊರಬಂದರು. ತನಗೆ ಕೆಲಸ ಸಿಕ್ಕಿದ  ವಿಷಯ  ತಿಳಿಸಿ, ಅಮ್ಮನ  ಬಾಯಿ ಸಿಹಿ ಮಾಡುವ  ಆತುರದಲ್ಲಿ , ಅವನ ಕೈಯಲ್ಲಿದ್ದ  ಕೆಲವು  ಕಾಗದಗಳು  ಕೆಳಗೆ ಬೀಳುತ್ತವೆ.  ಶಂಕರನ  ಹಿಂದೆಯೇ  ನಿಂತಿದ್ದ  ಅವನ  ತಂದೆ, ಕುತೂಹಲ  ಮತ್ತು  ಅನುಮಾನಮಿಶ್ರಿತ  ಭಾವದಿಂದ  ಆ ಕಾಗದಗಳನ್ನು  ಕೈಗೆತ್ತಿಕೊಂಡು  ಕಣ್ಣಾಡಿಸುತ್ತಾರೆ.  ತಮ್ಮ  ಕಣ್ಣುಗಳನ್ನು  ತಾವು  ನಂಬಲಾಗದೇ ಕುಸಿದುಬೀಳುತ್ತಾರೆ.  ತಾಯಿ - ಮಗ ಇಬ್ಬರೂ  ಸುಧಾರಿಸಿಕೊಂಡು  ಶಂಕರನ  ತಂದೆಯನ್ನು  ಆಸ್ಪತ್ರೆಗೆ  ಸೇರಿಸಿದಾಗ  ತಿಳಿಯುತ್ತೆ ಅವರು  ತೀವ್ರ  ಹ್ರುದಯಾಘಾತದಿಂದ   ಬಳಲಿರುತ್ತಾರೆ ಮತ್ತು  ಅವರಿಗೆ  ಶೀಘ್ರವಾಗಿ  ಶಸ್ತ್ರಚಿಕಿತ್ಸೆಯ  ಅವಶ್ಯವಿದೆ ಎಂದು.  ಅತ್ತೂ- ಅತ್ತು  ಕಣ್ಣೀರು  ಬತ್ತಿ ಹೋದಮೇಲೆ  ಶಂಕರನ  ತಾಯಿ ಮಗನಿಗೆ  ಕೇಳುತ್ತಾರೆ  "ನಿಮ್ಮ ತಂದೆ  ನೋಡಿದ ಕಾಗದ ಯಾವುದು? ಅಂತಹ  ವಿಷಯ  ಅದರಲ್ಲಿ  ಏನಿತ್ತು? " ಅಂತ.  ಶಂಕರ  ಹಣೆಯ ಮೇಲೆ  ಹನಿಗೂಡುತ್ತಿದ್ದ  ಬೆವರನ್ನು  ಒರೆಸಿಕೊಳ್ಲುತ್ತಾ,  ಒಣಗುತ್ತಿದ್ದ  ನಾಲಗೆಯಿಂದ ತೊದಲುತ್ತಾ" ಅಮ್ಮ ಅದು..... ಅದು  ಅಪ್ಪನ ಮರಣ ಪ್ರಮಾಣ ಪತ್ರ "  ಎಂದು  ನುಡಿಮುತ್ತುದುರಿಸುತ್ತಾನೆ.  " ಅಯ್ಯೋ ಪಾಪಿ,  ಇಂತಹ  ದುರ್ಬುದ್ಧಿ  ಯಾಕೋ  ಬಂತು ನಿನಗೆ?  ಅಂತಹ  ದುರ್ಗತಿ  ನಿನಗೇನು  ಬಂದಿತ್ತು? "  ಎಂದು  ದುಖಃದಿಂದ  ಅಬ್ಬರಿಸುವಾಗ  ಅವಳ ಮಾತನ್ನು  ಅರ್ಧಕ್ಕೆ  ತಡೆದು " ಅಮ್ಮಾ ನಿನಗೇನು ಗೊತ್ತು? ಆ  ಸಂಸ್ಥೆ  ತಂದೆಯಿಲ್ಲದವರಿಗೆ  ಮಾತ್ರ  ಸಹಾಯ  ಮಾಡುತ್ತೆ"  ಎಂದು  ನುಡಿದ  ಶಂಕರ , ತಾಯಿಯ  ಮುಂದಿನ  ಪ್ರಶ್ನೆಗಳಿಗ - ಕಣ್ಣೀರಿಗೆ ನಿರುತ್ತರನಾಗುತ್ತಾನೆ.   

Rating
No votes yet

Comments