ಬ್ರಹ್ಮಚಾರಿ: ಅಂದು-ಇಂದು
"ನಮ್ಮ ತಾತಾನೂ ಬ್ರಹ್ಮಚಾರಿ, ನನ್ನ ತಂದೇನೂ ಬ್ರಹ್ಮಚಾರಿ, ನಾನೂ ಬ್ರಹ್ಮಚಾರಿ" ಎಂದು ಹಾಸ್ಯವಾಗಿ ಹೇಳುವುದನ್ನು ಕೇಳಿಯೇ ಇರುತ್ತೇವೆ. ಈ ಹಾಸ್ಯದ ಅರ್ಥ ಬ್ರಹ್ಮಚಾರಿ ಅಂದರೆ ಕೇವಲ ಮದುವೆ ಆಗದಿರುವುದು ಅಷ್ಟೆ ಅಂತ. ನಿಜವಾದ ಬ್ರಹ್ಮಚರ್ಯ ಅಂದರೆ ಮದುವೆಯಾಗದಿರುವುದು ಮಾತ್ರ ಅಲ್ಲ. ಪರಮಾತ್ಮನ ವಿಚಾರದಲ್ಲಿ, ಆತ್ಮನ ಜ್ಞಾನದಲ್ಲಿ, ಜ್ಞಾನಾರ್ಜನೆಯಲ್ಲಿ ವಿಹರಿಸುವುದು ಎಂದು. ಇದು ಸಿದ್ಧಿಸಬೇಕಾದಲ್ಲಿ ಇಂದ್ರಿಯ ನಿಗ್ರಹ ಸಾಧಿಸುವುದು ಅತ್ಯವಶ್ಯ. ಬಾಲ್ಯಾವಸ್ಥೆಯಿಂದ ಸುಮಾರು 25 ವರ್ಷಗಳವರೆಗೆ ಅಂದರೆ ಜೀವನದ ಮೊದಲ ಕಾಲುಭಾಗದ ಅವಧಿಯನ್ನು ಬ್ರಹ್ಮಚಾರಿಗಳಾಗಿ, ಜಿತೇಂದ್ರಿಯರಾಗಿ ಜ್ಞಾನಾರ್ಜನೆಯಲ್ಲಿ ತೊಡಗುವುದಕ್ಕೆ ಬ್ರಹ್ಮಚರ್ಯವೆನ್ನಬಹುದು. ಇದು ಜೀವನದ ತಳಹದಿಯೆನ್ನಬಹುದು. ಯಾರ ಜೀವನದ ತಳಪಾಯ ಚೆನ್ನಾಗಿರುವುದೋ, ಭದ್ರವಾಗಿರುವುದೋ ಅವರ ಜೀವನ ಸಹ ಸುಂದರವಾಗಿರುತ್ತದೆ. ಹಿಂದಿನ ಕಾಲದಲ್ಲಿ ಕ್ಷತ್ರಿಯರಾಗಿರಲಿ, ಬ್ರಾಹ್ಮಣರಾಗಿರಲಿ, ಯಾವುದೇ ವರ್ಣಾಶ್ರಮಕ್ಕೆ ಸೇರಿದವರಾಗಿರಲಿ, ಉಪನಯನ ಸಂಸ್ಕಾರವಾದ ತಕ್ಷಣ ಯೋಗ್ಯ ಗುರುಕುಲವನ್ನು ಸೇರಿ ಗುರುಗಳೊಂದಿಗೇ ಇದ್ದು, ಆಶ್ರಮದ ಕೆಲಸಕಾರ್ಯಗಳೊಂದಿಗೆ ಕಲಿಕೆಯನ್ನೂ ಮಾಡುತ್ತಿದ್ದರು. ಗುರುಕುಲಗಳಲ್ಲಿ ಅವರವರಿಗೆ ತಕ್ಕಂತಹ, ಅಗತ್ಯವಾದಂತಹ ಕ್ಷಾತ್ರವಿದ್ಯೆಗಳಲ್ಲದೆ, ಇತರ ಕೆಲಸಗಳನ್ನೂ ಕಲಿಯುವುದರೊಂದಿಗೆ ವೇದ ವಿದ್ಯಾಭ್ಯಾಸವನ್ನೂ ಮಾಡಿಸಲಾಗುತ್ತಿತ್ತು. ಅವರುಗಳು 25 ವರ್ಷಗಳಾಗುವ ವೇಳೆಗೆ ಅವರುಗಳು ಸಂಪೂರ್ಣ ವಿಕಸಿತ ಮಾನವರಾಗಿ, ಬಲಿಷ್ಠರಾಗಿ, ಆತ್ನಸ್ಥೈರ್ಯ ಉಳ್ಳವರಾಗಿ ಹೊರಬರುತ್ತಿದ್ದರು. ನಂತರ ಗೃಹಸ್ಥರಾಗಿ ಮುಂದಿನ ಯಶಸ್ವೀ ಜೀವನಕ್ಕೆ ಕಾಲಿಡುತ್ತಿದ್ದರು.
ಇಂದು ಪರಿಸ್ಥಿತಿ ಹೇಗಿದೆ? ಮಕ್ಕಳು ಹುಟ್ಟುತ್ತಲೇ ಬೇಬಿ ಕೇರ್, ಡೇ ಕೇರ್ ಗಳಲ್ಲಿ ಬೆಳೆಯುತ್ತವೆ. ಹುಟ್ಟುವ ಮುನ್ನವೇ ಆ ಸಂಸ್ಥೆಗಳಿಗೆ ಲಕ್ಷಾಂತರ ರೂ.ಗಳು ಡೊನೇಶನ್ ಕೊಟ್ಟು ಜಾಗ ಕಾಯ್ದಿರಿಸಿರುತ್ತಾರೆ. ಎಲ್.ಕೆ.ಜಿ., ಯುಕೆಜಿಗಳಿಗೂ ಇದೇ ಹಣೆಬರಹ. ಅಪ್ಪ, ಅಮ್ಮ ಇಬ್ಬರೂ ದುಡಿಯಲು (?) ಹೋಗುತ್ತಾರೆ. ವೀಕೆಂಡುಗಳಲ್ಲಿ ಸುಸ್ತಾಗಿ ಗೊಣಗಾಡಿಕೊಂಡು ಕಳೆಯುತ್ತಾರೆ. ಲಕ್ಷಾಂತರ ರೂ. ಕೊಟ್ಟು ಪ್ರತಿಷ್ಠಿತವೆನ್ನುವ ಶಾಲೆಗೆ ಸೇರಿಸುವ ಕಾರಣವೂ ಸಹ ಮುಂದೆ ಮಕ್ಕಳು ಲಕ್ಷಾಂತರ ರೂ. ಸಂಪಾದಿಸಲಿ ಎಂದೇ, ಜ್ಞಾನವಂತರಾಗಲಿ, ಒಳ್ಳೆಯ ಪ್ರಜೆಗಳೆನಿಸಲಿ ಎಂದಲ್ಲ. ಅಂದರೆ ವಿದ್ಯಾಭ್ಯಾಸದ, ಜೀವನದ ಮೊದಲ ಆದ್ಯತೆ ಹಣ ಸಂಪಾದನೆ ಎಂಬುದೇ ಆಗಿದೆ. ಹೆಚ್ಚು ಅಂಕ ಗಳಿಸುವ ಆತಂಕ ಪ್ರತಿ ಪರೀಕ್ಷೆಯಲ್ಲಿ ಮಕ್ಕಳಿಗೆ ಎದುರಾಗುತ್ತದೆ. ಆತಂಕ, ಆತಂಕ, ಆತಂಕ! ಓದಲು ಆತಂಕ, ಬರೆಯಲು ಆತಂಕ, ಹೆಚ್ಚು ಅಂಕ ಗಳಿಸಲು ಆತಂಕ, ಬೇಕಾದ ಸೀಟುಗಳನ್ನು ಪಡೆಯಲು ಆತಂಕ, ಬೇಕಾದ ಶಾಲೆ ಸೇರುವ ಆತಂಕ, ಓದಿಯಾದ ಮೇಲೆ ಕೆಲಸಕ್ಕೆ ಸೇರುವ ಆತಂಕ, ಸೇರಿದ ಮೇಲೆ ಹೆಚ್ಚು ಸಂಪಾದಿಸುವ ಆತಂಕ!! ಇಂದ್ರಿಯ ನಿಗ್ರಹ ಎಂಬುದಕ್ಕೆ ಇಂದಿನ ವಿದ್ಯಾಭ್ಯಾಸ ಕ್ರಮದಲ್ಲಿ ಅರ್ಥ ಇರುವಂತೆ ತೋರುತ್ತಿಲ್ಲ. ಪ್ರಾಥಮಿಕ ಶಾಲಾ ಹಂತದಲ್ಲೇ ಪ್ರೇಮ, ಪ್ರೀತಿ, ಕಾಮಗಳ ಸುಳಿಯಲ್ಲಿ ಸಿಲುಕುವುದನ್ನು ಕಾಣುತ್ತಿರುವ ಭಾಗ್ಯ ನಮ್ಮದು. ಇನ್ನು ಕಾಲೇಜು ಕ್ಯಾಂಪಸುಗಳಂತೂ ಪ್ರೇಮಲೋಕದ ಅಡ್ಡೆಯಾಗಿರುವುದರೊಂದಿಗೆ ಎಲ್ಲಾ ರೀತಿಯ ದುಶ್ಚಟಗಳಿಗೆ ಉಗಮಸ್ಥಾನಗಳಾಗಿವೆ. ಜೀವನದ ತಳಪಾಯವೇ ಆತಂಕದಲ್ಲಿ ಕಳೆದರೆ ಉಳಿದ ಜೀವನವೂ ಹಾಗೆಯೇ ಮುಂದುವರೆಯುತ್ತದೆ. ಬಹುತೇಕವಾಗಿ, ಮಾಡುವ ಕೆಲಸಕ್ಕೂ, ಓದಿದ ವಿದ್ಯೆಗೂ ಅರ್ಥಾರ್ಥ ಸಂಬಂಧವಿರುವುದೇ ಇಲ್ಲ. ಇನ್ನು ಹಿಂದಿನ ಕಾಲದ ಬ್ರಹ್ಮಚರ್ಯಕ್ಕೂ,, ಈಗಿನ ಸ್ಥಿತಿಗೂ ಹೋಲಿಸಲು ಸಾಧ್ಯವೇ ಇಲ್ಲ. ಹಿಂದೆ ಸಮಾಜವನ್ನು ಪೋಷಿಸುವ ನವಯುವಕ ಯುವತಿಯರು ತಯಾರಾಗುತ್ತಿದ್ದರೆ, ಇಂದು ಅಂತಹುದನ್ನು ನಿರೀಕ್ಷಿಸಲು ಸಾಧ್ಯವಿದೆಯೆ? ಬೇವಿನ ಬೀಜ ಬಿತ್ತಿ ಬೆಳೆದ ಮರದಲ್ಲಿ ಮಾವಿನಹಣ್ಣನ್ನು ನಿರೀಕ್ಷೆ ಮಾಡಬಹುದೆ? ಹೋಗಲಿ ಬಿಡಿ, ಅವರು ಪಡೆದದ್ದು ಅವರಿಗೆ, ನಾವು ಪಡೆದದ್ದು ನಮಗೆ! ಬ್ರಹ್ಮಚರ್ಯಾಶ್ರಮದ ಬಗ್ಗೆ ಪಂಡಿತ ಸುಧಾಕರ ಚತುರ್ವೇದಿಗಳು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ ಬನ್ನಿ.
-ಕ.ವೆಂ.ನಾಗರಾಜ್.
********************
ಬ್ರಹ್ಮಚರ್ಯ
ಸಾಮಾನ್ಯತಃ ಮಾನವನ ಆಯಸ್ಸು ನೂರು ವರ್ಷಗಳ ಪರಿಮಿತಿಯುಳ್ಳದ್ದು. 'ಶತಂ ಜೀವ ಶರದೋ ವರ್ಧಮಾನಃ ||' (ಋಕ್.10.161.4.) - ಅಭಿವೃದ್ಧಿ ಹೊಂದುತ್ತಾ ನೂರು ವರ್ಷಗಳ ಕಾಲ ಜೀವಿಸು - ಎಂಬುದು ವೇದದ ಆದೇಶ. ಸಾಫಲ್ಯವನ್ನು ಗಳಿಸುವ ಸಲುವಾಗಿ, ವೇದಗಳು ಈ ನೂರು ವರ್ಷಗಳನ್ನು ನಾಲ್ಕು ಸಮಭಾಗಗಳಾಗಿ ಭಾವಿಸಿ, ಒಂದೊಂದು ಭಾಗಕ್ಕೂ ಆಶ್ರಮ ಎಂಬ ಹೆಸರನ್ನು ಕೊಡುತ್ತವೆ. ಎಲ್ಲ ಬಗೆಯ ಶಕ್ತಿಗಳನ್ನೂ ವರ್ಧಿಸಿಕೊಳ್ಳುವ ಸಲುವಾಗಿ ಬ್ರಹ್ಮಚರ್ಯ, ವರ್ಧಿತ ಶಕ್ತಿಗಳನ್ನು ತನ್ನ ಮತ್ತು ಸಮಾಜದ ಹಿತಕ್ಕೆ ಉಪಯೋಗಿಸುವ ಸಲುವಾಗಿ ಗಾರ್ಹಸ್ಥ್ಯ, ಆಧ್ಯಾತ್ಮಿಕ ಸಾಧನೆಯೊಂದಿಗೆ, ರಾಷ್ಟ್ರದ ಮಕ್ಕಳಿಗೆ ಶಿಕ್ಷಣದಾನಕ್ಕಾಗಿ ವಾನಪ್ರಸ್ಥ ಹಾಗೂ ಸಾಂಸಾರಿಕ ಮೋಹದ ಪೂರ್ಣತ್ಯಾಗ ಮಾಡಿ, ಆಧ್ಯಾತ್ಮಿಕ ಸಾಧನೆ ಮಾಡುತ್ತಾ ಜಗದುಪಕಾರಾರ್ಥವಾಗಿ ಸದ್ಧರ್ಮ ಪ್ರಚಾರ ಮಾಡುವುದಕ್ಕಾಗಿ ಸಂನ್ಯಾಸ. ಹೀಗೆ ವೈದಿಕ ಧರ್ಮ ನಾಲ್ಕು ಆಶ್ರಮಗಳನ್ನು ವಿಧಿಸುತ್ತದೆ.
ಜನ್ಮದಿಂದಾರಂಭಿಸಿ, 25 ವರ್ಷ ಪೂರ್ತಿಯಾಗುವವರೆಗೆ, ಮಾನವನು ಬ್ರಹ್ಮಚಯಶ್ರಮವನ್ನು ಪಾಲಿಸಬೆಕು. ಬ್ರಹ್ಮಚರ್ಯ ಎಂಬ ಶಬ್ದದ ಆರ್ಥ, ಪರಮಾತ್ಮನಲ್ಲಿ ಮತ್ತು ವೇದಗಳಲ್ಲಿ ವಿಹಾರ, ವಿಹರಿಸುವುದು ಎಂದಾಗುತ್ತದೆ. ಈ ಮಹೋಚ್ಚವಾದ ಗುರಿಯನ್ನು ಮುಟ್ಟಬೇಕಾದರೆ, ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯು ಪೂರ್ಣತಃ ಜಿತೇಂದ್ರಿಯರಾಗಬೇಕಾದುದು ಅನಿವಾರ್ಯ. ಇದೇ ಕಾರಣದಿಂದ, ಬ್ರಹ್ಮಚರ್ಯ ಎಂಬ ಶಬ್ದಕ್ಕೆ ಸಾಧಾರಣತಃ ಇಂದ್ರಿಯ ನಿಗ್ರಹ ಎಂಬರ್ಥ ಕೊಡಲ್ಪಡುತ್ತದೆ.
ಬಾಲಕ ಮತ್ತು ಬಾಲಿಕೆಯು ಎಂಟು ವರ್ಷ ಪ್ರಾಯದವರಾದಾಗ, ಅವರ ಉಪನಯನ ಸಂಸ್ಕಾರವಾಗಿ, ವೇದಾರಂಭವೂ ನಡೆದು ಅವರು ಗುರುಕುಲವನ್ನು ಸೇರುತ್ತಾರೆ. ಪ್ರಾಪಂಚಿಕ ಹವ್ಯಾಸಗಳಿಂದ ಮತ್ತು ಪ್ರಲೋಭನಕಾರೀ ವಾತಾವರಣದಿಂದ ದೂರವಿದ್ದು, ಆಧ್ಯಾತ್ಮಿಕವಾದ ಸಾತ್ವಿಕ ವಾಯುಮಂಡಲದಲ್ಲಿ ಸ್ವತಃ ಶ್ರಮಸಹಿಷ್ಣುಗಳಾಗಿ, ತಮ್ಮ ಬೌದ್ಧಿಕ ಹಾಗೂ ಮಾನಸಿಕ ಶಕ್ತಿಗಳನ್ನು ಏಕೀಕರಿಸಿ, ವೇದವಿದ್ಯೆ ಹಾಗೂ ಲೌಕಿಕವಿದ್ಯೆಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಸರಳ ಜೀವನ, ಉದಾತ್ತ ವಿಚಾರ - ಎಂಬ ಕಥನಕ್ಕೆ ತಥ್ಯದ ರೂಪ ನೀಡುತ್ತಾರೆ. ಸದಾಚಾರಿಗಳೂ, ಬ್ರಹ್ಮನಿಷ್ಠರೂ, ಶ್ರೋತ್ರೀಯರೂ ಆದ ಆಚಾರ್ಯರ ಅಧೀನದಲ್ಲಿದ್ದು ಸ್ವತಃ ಸಚ್ಚರಿತ್ರರೂ, ಶರೀರಾತ್ಮ-ಬುದ್ಧಿ-ಮನೋಬಲಯುಕ್ತರೂ, ಗಂಭೀರ ವಿದ್ವಾಂಸರೂ, ಆಜೀವಿಕಾ ಸಂಪಾದನ ಸಮರ್ಥರೂ ಆಗುತ್ತಾರೆ. ಸಂಯಮಿಗಳಾಗಿ ಸರ್ವವಿಧ ಶಕ್ತಿಗಳ ಸಂಚಯವನ್ನೂ ಮಾಡಿಕೊಳ್ಳುತ್ತಾರೆ. ಅಥರ್ವವೇದದ ಮಾತುಗಳಲ್ಲಿ ಅವರ ಸ್ವರೂಪ ಹೀಗಿರುತ್ತದೆ:
ಬ್ರಹ್ಮಚಾರೀ ಬ್ರಹ್ಮ ಭ್ರಾಜದ್ಭಿಭರ್ತಿ ತಸ್ಮಿನ್ದೇವಾ ಅಧಿ ವಿಶ್ವೇ ಸಮೋತಾಃ |
ಪ್ರಾಣಾಪಾನೌ ಜನಯನ್ನಾದ್ವ್ಯಾನಂ ವಾಚಂ ಮನೋ ಹೃದಯಂ ಬ್ರಹ್ಮ ಮೇಧಾಮ್ || (ಅಥರ್ವ.11.5.24.)
[ಬ್ರಹ್ಮಚಾರೀ] ಬ್ರಹ್ಮಚಾರಿಯು [ಪ್ರಾಣಾಪಾನೌ ವ್ಯಾನಮ್] ಪ್ರಾಣ, ಅಪಾನ ಮತ್ತು ವ್ಯಾನ, ಈ ಮೂರು ಪ್ರಾಣ ಸಕ್ತಿಗಳನ್ನೂ, [ವಾಚಮ್] ವಾಣಿಯನ್ನೂ, [ಮನಃ] ಮನಸ್ಸನ್ನೂ, [ಹರದಯಮ್] ಹೃದಯವನ್ನೂ, [ಬ್ರಹ್ಮ] ವೇದಜ್ಞಾನವನ್ನೂ, [ಮೇಧಾಮ್] ಬುದ್ಧಿಯನ್ನೂ, [ಆತ್ ಜನಯನ್] ಸರ್ವರೀತಿಯಲ್ಲಿಯೂ ವರ್ಧಿಸಿಕೊಳ್ಳುತ್ತಾ, [ಭ್ರಾಜತ್ ಬ್ರಹ್ಮ] ಪ್ರಕಾಶಮಾನವಾದ ಬ್ರಹ್ಮತತ್ವವನ್ನು [ಬಿಭರ್ತಿ] ದರಿಸುತ್ತಾನೆ. [ತಸ್ಮಿನ್ ಅಧಿ] ಅವನಲ್ಲಿ [ವಿಶ್ವೇ ದೇವಾಃ] ಸಮಸ್ತ ಇಂದ್ರಿಯ ಶಕ್ತಿಗಳೂ, ದಿವ್ಯ ಗುಣಗಳೂ, [ಸಂ ಓತಾಃ] ಹಾಸು ಹೊಕ್ಕಾಗಿ ಹೆಣೆದು ಬರುತ್ತವೆ.
ನಿಜವಾಗಿ ಬ್ರಹ್ಮಚಾರಿ-ಬ್ರಹ್ಮಚಾರಿಣಿಯರು ಬಲಿಷ್ಠವಾದ ಮನಸ್ಸು, ಪರಿಪುಷ್ಟವಾದ ವಾಣಿ, ಧೃಢವಾದ ಶರೀರ, ವಿಶಾಲವಾದ ಹೃದಯ, ಪೂರ್ಣ ವಿಕಸಿತವಾದ ಬುದ್ಧಿ, ಅದ್ಭುತ ವೇದಜ್ಞಾನ, ಪ್ರಾಣಶಕ್ತಿ - ಎಲ್ಲವನ್ನೂ ಪಡೆದುಕೊಂಡು, ಮೈವೆತ್ತ ದಿವ್ಯಶಕ್ತಿಗಳಂತೆ ವಿರಾಜಿಸುತ್ತಾರೆ. ಸತತವೂ ಸಾಧಿಸಿಕೊಂಡು ಬಂದ ಸಂಯಮದ ಮಧುರ ಮಹಿಮೆಯ ಪರಿಣಾಮದಿಂದ ಆದರ್ಶ ಮಾನವರಾಗಿ ಗುರುಕುಲದಿಂದ ಮರಳಿ ಪಿತೃಗೃಹಕ್ಕೆ ಪ್ರವೇಶಿಸುತ್ತಾರೆ. ಸಚ್ಚರಿತ್ರೆಯ ಸ್ಫುಟ ಸತ್ಯದ ಪ್ರಭಾವದಿಂದ ಸರ್ವರ ಸ್ತುತಿಗೂ ಪಾತ್ರರಾಗುತ್ತಾರೆ. ನಿಜವಾದ ಬ್ರಹ್ಮಚರ್ಯದ ಬಣ್ಣಿಸಲಾಗದ ಬಲ್ಮೆಯಿದು.
ಕನ್ಯೆಯರ ಕಾಯ, ಪ್ರಕೃತಿನಿಯಮಾನುಸಾರ ಪುರುಷ ಶರೀರಕ್ಕಿಂತ ಬೇಗನೇ ಯೌವನದಲ್ಲಿ ಪ್ರವೇಶ ಮಾಡುವ ಕಾರಣ, ಅವರ ಬ್ರಹ್ಮಚರ್ಯದ ಕನಿಷ್ಠ ಮಿತಿ ೧೬ ವರ್ಷಗಳದ್ದಾಗಿದೆ. ಆದರೆ, ಕನ್ಯೆಯರೇ ಆಗಲಿ, ಬ್ರಹ್ಮಚರ್ಯದ ಕನಿಷ್ಠ ಮಿತಿ ತೀರಿದೊಡನೆ, ವಿವಾಹಿತರಾಗಲೇಬೇಕೆಂಬ ಬಲವದ್ಬಂಧನವೇನೂ ಇಲ್ಲ. ಆ ಮನೋಭಾವ, ಮನೋನಿಗ್ರಹ ಸಾಮರ್ಥ್ಯ, ಯಾವುದಾದರೊಂದು ಉನ್ನತ ಧ್ಯೇಯಕ್ಕಾಗಿ ಜೀವನವನ್ನು ಮೀಸಲಿಡುವ ಧೃಢವಾದ ಭಾವನೆಯಿದ್ದಲ್ಲಿ, ತಮಗೆ ಸೂಕ್ತವೆಂದು ತೋರುವಷ್ಟು ಕಾಲ ಅಥವಾ ಜೀವನ ಪೂರ್ತ ಬ್ರಹ್ಮಚರ್ಯಾಶ್ರಮದಲ್ಲೇ ಇರಬಹುದು. ಆದರೆ ಇದು ಎಲ್ಲರಿಗೂ ಸಾಧ್ಯವಾಗುವ ವಿಷಯವಲ್ಲ.
*************
Comments
ಉ: ಬ್ರಹ್ಮಚಾರಿ: ಅಂದು-ಇಂದು
In reply to ಉ: ಬ್ರಹ್ಮಚಾರಿ: ಅಂದು-ಇಂದು by Chikku123
ಉ: ಬ್ರಹ್ಮಚಾರಿ: ಅಂದು-ಇಂದು
ಉ: ಬ್ರಹ್ಮಚಾರಿ: ಅಂದು-ಇಂದು
In reply to ಉ: ಬ್ರಹ್ಮಚಾರಿ: ಅಂದು-ಇಂದು by RAMAMOHANA
ಉ: ಬ್ರಹ್ಮಚಾರಿ: ಅಂದು-ಇಂದು