' ಅಪರಿಚಿತ ' ಭಾಗ:1(ಕಥೆ)
ನಿರ್ಗುಂಡಿ ಪೋಲಿಸ್ ಠಾಣೆಯ ಫೋನ್ ರಿಂಗುಣಿಸ ತೊಡಗಿತು. ಕಡತವೊಂದರ ಪರಿಶೀಲನೆಯಲ್ಲಿ ಮಗ್ನರಾಗಿದ್ದ ಪಿಎಸ್ಐ ಮಂಜಪ್ಪ ಗೌಡ ರಿಸೀವರ್ ಎತ್ತಿಕೊಂಡು 'ಹಲೋ ನಾನು ಪಿಎಸ್ಐ ಮಂಜಪ್ಪ ಗೌಡ ನಿರ್ಗುಂಡಿ ಪೋಲೀಸ್ ಠಾಣೆಯಿಂದ ಮಾತನಾಡುತ್ತಿರುವುದು ನೀವು ಯಾರು ?' ಎಂದರು.
ಆ ತುದಿಯಿಂದ ' ನಾನು ಕುಮರಿ ಗ್ರಾಮದ ಪಟೇಲ್ ಪರಮಯ್ಯ ಮಾತನಾಡುತ್ತಿರುವುದು. ' ಎಂದು ಉತ್ತರ ಬಂತು.
' ಏನು ವಿಷಯ ಪಟೇಲರೆ ' ಎಂದರು ಪಿಎಸ್ಐ ಮಂಜಪ್ಪಗೌಡರು. ಅದಕ್ಕೆ ಉತ್ತರವಾಗಿ ಪಟೇಲರು
' ಸ್ವಾಮಿ ಇಲ್ಲಿಯ ಬಿದರಕಾನಿನ ಕಾಡಿನ ಜಿಗ್ಗಿನಲ್ಲಿ ದೊಡ್ಡ ಹೊನ್ನೆಮರದ ರೆಂಬೆಯೊಂದಕ್ಕೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ ಈ ಬಗ್ಗೆ ಒಂದು ದೂರು ಬರೆಯಿಸಿ ನಮ್ಮ ರೋಡ್ ಕಾಂಟ್ರಾಕ್ಟರ್ ಕೆಲಸದ ಮೇಸ್ತ್ರಿ ಮುನಿಸ್ವಾಮಿ ಕೈಯಲ್ಲಿ ಕೊಟ್ಟು ಕಳಿಸಿದ್ದೇನೆ,ನೀವು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕಾನೂನು ಕ್ರಮ ಜರುಗಿಸಬೇಕು ' ಎಂದರು.
' ಪಟೇಲರೆ ಆ ವ್ಯಕ್ತಿ ಯಾರು ಏನು ಎಂಬುದರ ಬಗ್ಗೆ ನಿಮಗೆ ಮಾಹಿತಿ ಏನಾದರೂ ಇದೆಯೆ ?' ಎಂದರು ಮಂಜಪ್ಪ ಗೌಡರು.
' ಇಲ್ಲ ಸ್ವಾಮಿ ನಾನು ಇಲ್ಲಿ ಕುಮರಿಯ ಆಸುಪಾಸಿನಲ್ಲಿ ಅನೇಕ ಜನರನ್ನು ವಿಚಾರಿಸಿದೆ, ನಾನೂ ಸಹ ನಿನ್ನೆ ಸಂಜೆ ಸ್ಥಳಕ್ಕೆ ಹೋಗಿ ನೋಡಿಕೊಂಡು ಬಂದೆ,ನೇಣು ಹಾಕಿಕೊಂಡು ಸತ್ತವ ಯಾರು ಎನ್ನುವುದು ಪತ್ತೆಯಾಗಿಲ್ಲ'ಎಂದರು ಪಟೇಲ್ ಪರಮಯ್ಯ.
' ಅಲ್ಲ ಪಟೇಲರೆ ನೀವು ಸ್ಥಳಕ್ಕೆ ಬೇಟಿ ನೀಡಿ ಬಂದಿದ್ದೀರಿ, ಆ ಸಾವಿನ ಕುರಿತು ನಿಮ್ಮ ಅನಿಸಿಕೆಯೇನು, ಜನ ಏನು ಮಾತನಾಡಿಕೊಳ್ಳುತ್ತಾರೆ ' ಎಂದರು ಮಂಜಪ್ಪ ಗೌಡರು.
' ಜನಕ್ಕೇನು ಸ್ವಾಮಿ ತಲೆಗೊಂದು ಮಾತನಾಡುತ್ತಾರೆ, ಯಾರೋ ನೇಣುಹಾಕಿ ಕೊಲೆ ಮಾಡಿದ್ದಾರೆಂದು ಕೆಲವರೆಂದರೆ,ಇನ್ನು ಕೆಲವರು ಇವನನ್ನು ಕೊಲೆಮಾಡಿ ತಂದು ಇಲ್ಲಿ ನೇಣು ಹಾಕಿದ್ದಾರೆ ಎಂದು ಮಾತನಾಡಿ ಕೊಳ್ಳುತ್ತಿದ್ದಾರೆ. ಈ ಕುರಿತು ಖಚಿತವಾಗಿ ಕಂಡವರು ಕೇಳಿದವರು ಯಾರೂ ಇಲ್ಲ ' ಎಂದರು ಪಟೇಲ ಪರಮಯ್ಯ..
' ಈ ಅಂತೆ ಕಂತೆಗಳನ್ನು ನಂಬುವುದು ಹೇಗೆ ಪಟೇಲರೆ ' ಎಂದರು ಮಂಜಪ್ಪಗೌಡ.
' ನಾನು ಗಮಿನಿಸಿದ ಪ್ರಕಾರ ನೇಣು ಹಾಕಿಕೊಂಡವ ಸುಮಾರು ಐವತ್ತರ ಆಸುಪಾಸಿನ ಸಧೃಢ ವ್ಯಕ್ತಿ. ಮೃತ ಪಟ್ಟು ಕೆಲವು ದಿನಗಳೇ ಆಗಿದ್ದು ಮುಖ ಕಪ್ಪಗಾಗಿದ್ದು ಹುಳುಗಳು ಹರಿದಾಡುತ್ತಿವೆ.ಆತ ಕಂದು ಬಣ್ಣದ ಪ್ಯಾಂಟ್ ಮತ್ತು ತಿಳಿ ಹಳದಿ ಬಣ್ಣದ ಬುಶ್ ಶರ್ಟ ಧರಿಸಿದ್ದಾನೆ.ಕಾಲಲ್ಲಿ ಕಪ್ಪು ಬಾರಿನ ಚಪ್ಪಲಿಗಳು ಹಾಗೆಯೆ ಇವೆ.ಆತ ನೇಣು ಹಾಕಿಕೊಂಡ ಜಾಗ ಗುಡ್ಡದ ಕೆಳಗಿನ ಇಳಿಜಾರು ಪ್ರದೇಶವಾಗಿದ್ದು, ದಟ್ಟವಾಗಿ ಗಿಡಗಂಟಿಗಳು ಹಬ್ಬಿ ಹರಡಿವೆ. ಅಸಾಧ್ಯವಾದ ದುರ್ನಾತ ಸುತ್ತಮತ್ತ ಹರಡಿದೆ. ಹೊರಗಿನಿಂದ ಕರೆತಂದು ಕೊಲೆಮಾಡಿ ಹಾಕುವಂತಹ ಜಾಗ ಇದಲ್ಲ. ಯಾರು ಬಂದರೂ ಕುಮರಿ ಗ್ರಾಮದ ಮೂಲಕವೇ ಬರಬೇಕು.ನನಗನಿಸಿದ ಮಟ್ಟಿಗೆ ಹೊರಗಿನವ ಯಾರೋ ಇಲ್ಲಿಗೆ ಬಂದು ನೇಣು ಹಾಕಿ ಕೊಂಡಿರಬೆಕು ಎನಿಸುತ್ತೆ. ಯಾವುದಕ್ಕೂ ನೀವು ಸ್ಥಳಕ್ಕೆ ಬನ್ನಿ ' ಎಂದರು ಪರಮಯ್ಯ..
' ಪಟೇಲರೆ ಮುನಿಸ್ವಾಮಿ ನಮ್ಮ ಠಾಣೆಗೆ ಎಷ್ಟು ಗಂಟೆಗೆ ಬರಬಹುದು ' ಎಂದು ಮಂಜಪ್ಪ ಗೌಡರು ಮರು ಪ್ರಶ್ನಿಸಿದರು.
' ಸ್ವಾಮಿ ನಾನು ಆತನನ್ನು ಬೆಳಗಿನ ಆರು ಗಂಟೆಯ ಬಸ್ಸಿಗೆ ಹೋಗಲು ಹೇಳಿದ್ದೇನೆ. ಆತ ನಿಮ್ಮಲ್ಲಿಗೆ ಸುಮಾರು ಹತ್ತು ಗಂಟೆಗೆ ಬಂದು ತಲುಪ ಬಹುದು ' ಎಂದರು ಪರಮಯ್ಯ.
' ಪಟೇಲರೆ ನಾನು ದಫೇದಾರ ನುಸ್ರತ್ ಅಲಿ ಜೊತೆಗೆ ಒಬ್ಬ ಪೋಲೀಸಿನವರನ್ನು ಈಗಲೆ ಕಳಿಸಿ ಕೊಡುತ್ತೇನೆ, ಅವರು ನಿಮ್ಮಲ್ಲಿಗೆ ಮಧ್ಯಾನ್ಹ ಸುಮಾರು ಒಂದು ಗಂಟೆಗೆ ಬಂದು ತಲುಪಬಹುದು,ನೀವೂ ಸಹ ಮೂರು ಜನ ಪಂಚರೊಡನೆ ಸ್ಥಳದ್ದಲ್ಲಿರಿ.ಮುನಿಸ್ವಾಮಿ ದೂರು ತಂದು ಕೊಟ್ಟ ತಕ್ಷಣ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತಕ್ಷಣ ನಾನೂ ಹೊರಟು ಬರುತ್ತೇನೆ.ಕೃತ್ಯ ನಡೆದ ಸ್ಥಳ ಕಾಡಿನ ಒಳಭಾಗವಾಗಿದ್ದು ಸ್ಥಳ ಪತರಿಶೀಲಿಸಿ ಪಂಚನಾಮೆ ಜರುಗಿಸಲು ಸುಮಾರು ಸಮಯ ಹಿಡಿಯುತ್ತೆ. ಕತ್ತಲು ಕವಿಯುವ ಮುನ್ನವೆ ಪೋಸ್ಟ ಮಾರ್ಟಂ ಜರುಗಿಸಬೇಕು, ಇದೆಲ್ಲ ಈ ದಿನವೇ ಮುಯಲು ಸಾಧ್ಯವೆ ' ಎಂದರು ಮಂಜಪ್ಪ ಗೌಡರು.
' ದಫೆದಾರರು ಮತ್ತು ಪೋಲೀಸಿನವರು ಇಲ್ಲಿಗೆ ಬರಲಿ, ನಾನು ಕುಮರಿ ಆಸ್ಪತ್ರೆಯ ಡಾ|| ಮಂಜುನಾಥ ಅವರಿಗೆ ಈ ಬಗ್ಗೆ ಮಾಹಿತಿ ಕಳಿಸುತ್ತೇನೆ.ನೀವು ಪ್ರಕರಣ ದಾಖಲಾದ ತಕ್ಷಣ ಒಂದು ವಾಹನ ಮಾಡಿಕೊಂಡು ಬಂದರೆ ಈ ದಿನವೆ ಎಲ್ಲ ಮುಗಿಯ ಬಹುದು ' ಎಂದರು ಪರಮಯ್ಯ.
' ಪಟೇಲರೆ ನಾನು ಈ ನಿರ್ಗುಂಡಿಗೆ ಬಂದು ಬರಿ ಭಾಡಿಗೆ ವಾಹನಕ್ಕೆ ದುಡ್ಡು ಕಟ್ಟುವುದೇ ಆಗಿ ಹೋಯಿತು, ಕಳ್ಳ ....ಮಕ್ಕಳಿಗೆ ಬೇರೆ ಎಲ್ಲಿಯೂ ಜಾಗಇರಲ್ಲವಾ ಎಲ್ಲ ಇಲ್ಲಿಗೆ ಬಂದು ಸಾಯ್ತಾರ ' ಎಂದು ಗೊಣಗಿಕೊಂಡ ಪಿಎಸ್ಐ ಮಂಜಪ್ಪ ಗೌಡರು
' ನುಸ್ರತ್ ಅಲಿ ಬನ್ನಿ ಇಲ್ಲಿ ' ಎಂದು ಕರೆದರು.
ಸಬ್ ಇನಸ್ಪೆಕ್ಟರ್ ಕೊಠಡಿಗೆ ಬಂದ ದಫೆದಾರ್ ನುಸ್ರತ್ ಅಲಿ ' ಏನು ಸಾರ್ ?' ಎಂದರು.
' ಈಗ ಕುಮರಿಯ ಪಟೇಲ್ ಪರಮಯ್ಯ ನವರಿಂದ ಫೋನ್ ಬಂದಿತ್ತು, ಯಾರೋ ಒಬ್ಬರು ಬಿದರಕಾನ್ ಕಾಡಿನ ಜಿಗ್ಗಿನಲ್ಲಿ ಹೊನ್ನೆ ಮರದ ರೆಂಬೆಯೊಂದಕ್ಕೆ ನೇಣು ಹಾಕಿಕೊಂಡು ಮೃತ ಪಟ್ಟಿರುವ ಬಗ್ಗೆ ಫೋನ್ ಮಾಡಿದ್ದರು ' ಎಂದರು ಮಂಜಪ್ಪಗೌಡ.
' ನೀವು ಫೋನ್ನಲ್ಲಿ ಮಾತನಾಡುತ್ತಿರುವುದನ್ನು ನಾನು ಕೇಳಿಸಿಕೊಂಡೆ ' ಎಂದರು ನುಸ್ರತ್ ಅಲಿ.
' ನುಸ್ರತ್ ನೀವು ಒಂದು ಕೆಲಸ ಮಾಡಿ, ಡೇ ಡ್ಯೂಟಿಯಲ್ಲಿ ಯಾರು ಸಿಗುತ್ತಾರೋ ಆ ಪೈಕಿ ಒಬ್ಬ ಪಿಸಿ ಯನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಪಂಚರನ್ನು ಇಟ್ಟುಕೊಂಡು ಇರಿ,ಮುನಿಸ್ವಾಮಿ ದೂರು ತಂದು ಕೊಟ್ಟ ನಂತರ ಪ್ರಕರಣ ದಾಖಲಿಸಿ, ಎಫ್ಐಆರ್ ಡಿಸ್ ಪ್ಯಾಚ್ ಮಾಡಿ ನಾನೂ ಬರುತ್ತೇನೆ ' ಎಂದರು ಮಂಜಪ್ಪ ಗೌಡ.
' ಸರ್ ಎಲ್ಲಿದಾರೆ ಜನ, ಹಗಲು ಕರ್ತವ್ಯಕ್ಕೆ ಇದ್ದ ಮೂರು ಜನರನ್ನು ಶಿವಪುರಕ್ಕೆ ಬಂದೋಬಸ್ತ ಕರ್ತವ್ಯಕ್ಕೆ ಮೊನ್ನಯೆ ಕಳಿಸಲಾಗಿದೆ. ರಾತ್ರಿ ಗಸ್ತ ಕರ್ತವ್ಯದ ಪಿಸಿ ಕೆಂಚೆಗೌಡನಿಗೆ ಮಧ್ಯಾನ್ಹ ಬರಲು ಹೇಳಿದೆ, ಆತ ಶಿವಪುರ ಎಸ್ಪಿ ಕಛೇರಿಗೆ ಅರ್ಜಂಟ್ ಟಪಾಲ್ ತೆಗೆದುಕೊಂಡು ಹೋಗಬೇಕು.ರೈಟರ್ ರಾಮಾಂಜನೇಯ ಮತ್ತು ವೈರ್ ಲೆಸ್ ಕರ್ತವ್ಯದ ಪರಮೇಶಿಯನ್ನು ಬಿಟ್ಟರೆ ಮತ್ಯಾರು ಇದ್ದಾರೆ ಸಾರ್ ' ಎಂದರು ನುಸ್ರತ್ ಅಲಿ.
' ನುಸ್ರತ್ ನೀವು ರಾಮಾಂಜನೇಯನನ್ನು ಕರೆದುಕೊಂಡು ಹೋಗಿ ಇನ್ಕ್ವೆಸ್ಟ್ ಬರೆಯಲು ನಿಮಗೆ ಅನುಕೂಲ ವಾಗುತ್ತೆ ' ಎಂದರು ಮಂಜಪ್ಪಗೌಡ.
' ಸಾರ್ ಈ ದಿನ ಮಧ್ಯಾನ್ಹ ದೊಳಗೆ ಹತ್ತು ವರ್ಷಗಳ ಕ್ರೈಂ ಸ್ಟ್ಯಾಟೆಸ್ಟಿಕ್ಸ್ ಮತ್ತು ಇತರೆ ವಿವರಗಳನ್ನು ಎಸ್ಪಿ ಕಛೇರಿಯಿಂದ ಕೇಳಿದ್ದಾರೆ. ಆತ ಬೆಳಗಿನ ಆರು ಗಂಟೆಗೆ ಬಂದು ವಿವರ ಕಲೆ ಹಾಕುತ್ತಿದ್ದಾನೆ ' ಎಂದರು ನುಸ್ರತ್ ಅಲಿ.
' ಹಾಗಿದ್ದರೆ ವೈರ್ಲೆಸ್ ಡ್ಯೂಟಿಯ ಪರಮೇಶಿಯನ್ನು ಕರೆದುಕೊಂಡು ಹೋಗಿ ' ಎಂದರು ಮಂಜಪ್ಪಗೌಡ.
' ಕಂಟ್ರೋಲ್ಗೆ ಕಳಿಸಲು ನಮ್ಮಲ್ಲಿಂದ ಹತ್ತು ಮೆಸೇಜ್ಗಳು ಇವೆ, ಅಷ್ಟೇ ಪ್ರಮಾಣದ ಮೆಸೇಜ್ಗಳು ಅಲ್ಲಿಂದ ನಮಗೆ ಬರಲು ಬಾಕಿ ಇವೆ ' ಎಂದರು ನುಸ್ರತ್.
' ಅವು ನಿನ್ನೆ ರಾತ್ರಿ ಬರೆದ ಮೆಸೇಜ್ಗಳು ಇನ್ನೂ ಯಾಕ್ರಿ ಅವು ಬಾಕಿ ಇವೆ, ಸರಿಯಾಗಿ ಅವುಗಳನ್ನು ಕಳಿಸೋಕ್ಕೆ ಆಗಲ್ಲವೇನ್ರಿ ' ಎಂದು ದನಿ ಏರಿಸಿ ಮಂಜಪ್ಪ ಗೌಡ ಮಾತನಾಡಿದರು.
' ಸಾರ್ ಇದು ನಮ್ಮ ಜಿಲ್ಲಾ ವ್ಯಾಪ್ತಿಯ ಹೊರ ಪ್ರದೇಶ, ಮೇಲಾಗಿ ಗುಡ್ಡ ಬೆಟ್ಟ ಕಾಡಿನ ಮಧ್ಯೆ ಇರು ವಂತಹುದು. ಒಮ್ಮೊಮ್ಮೆ ಡಿಸ್ಟರ್ಬನ್ಸ್ ಪ್ರಾರಂಭ ವಾಯಿತೆಂದರೆ ರಾತ್ರಿ ಏನು ಹಗಲು ಸಹ ಮೆಸೇಜ್ ಕಳಿಸಲು ಆಗುವುದಿಲ್ಲ, ಮೇಲಾಗಿ ಮೂರು ನಾಲ್ಕು ದಿನಗಳಿಂದೆ ಮುಂಗಾರಿನ ಆರ್ಭಟ ಜಾಸ್ತಿಯಾಗಿದೆ ' ಎಂದರು ನುಸ್ರತ್.
' ಇವೆಲ್ಲ ಕಥಿ ಹೇಳಬ್ಯಾಡ್ರಿ, ಅವರವರ ಡ್ಯೂಟಿ ಅವರು ಮಾಡಬೇಕು ಕಣ್ರಿ, ಹೀಂಗ ಮೆಸೇಜ್ ಪೆಂಡಿಂಗ್ ಇಟ್ಟು ಹೋದರ ಯಾರ್ರಿ ಜವಾಬ್ದಾರ್ರು ' ಎಂದು ಮಂಜಪ್ಪಗೌಡ ಸಿಟ್ಟಾದರು.
' ವೈರಲೆಸ್ ಡ್ಯೂಟಿಗೆ ನಾವು ಹಾಕೋದೆ ಒಬ್ರನ್ನ, ಅಂವ ಬೆಳಿಗ್ಗೆ ಎಂಟು ಗಂಟೆಗೆ ಬಂದರ ರಾತ್ರಿ ಹೋಗೋದು ಹತ್ತು ಗಂಟೆಗೆ.ಕಂಟ್ರೋಲ್ ರೂಮ್ ನವರಿಗೆ ಅವರು ಕಳಸೋ ಮೆಸೆಜ್ ಗಳಷ್ಟೆ ಮುಖ್ಯ,ನಮ್ಮ ಮೆಸೇಜ್ಗಳ ಬಗ್ಗೆ ಅವರು ಅಷ್ಟಾಗಿ ನಿಗಾ ವಹಿಸಲ್ಲ. ಅಲ್ಲಿ ಮೂರು ಶಿಫ್ಟ ಗಳಲ್ಲಿ ಆಪರೇಟರ್ ಗಳ ಬದಲಾವಣೆ ಆಗುತ್ತಿರುತ್ತೆ, ಕೆಲವರು ಮಾತ್ರ ನಮ್ಮ ಮೆಸೇಜ್ಗಳನ್ನು ತೆಗೆದು ಕೊಳ್ಳುತ್ತಾರೆ,ಇನ್ನು ಕೆಲವರು ತಮ್ಮ ಮೆಸೇಜ್ ಗಳನ್ನ ಮಾತ್ರ ಕ್ಲಿಯರ್ ಮಾಡಿಕೊಂಡು ಹೋಗತಾರ.ಬದಲಿ ಡ್ಯೂಟಿ ಆಪರೇಟರ್ ಅಲ್ಲಿ ಬಂದಾಗ ನಮ್ಮ ಪೆಂಡಿಂಗ್ ಮೆಸೇಜ್ಗಳ ಬಗ್ಗೆ ಹೇಳಿದರೆ,ಇಷ್ಟೊತ್ತಿನ ತನಕ ಏನ್ ಮಾಡಿದ್ರಿ ಆವಾಗ ಕಳಿಸೋಕೆ ಆಗಲಿಲ್ವೇನ್ರಿ,ಮೊದಲು ನಮ್ಮ ಮೆಸೇಜ್ ಕ್ಲೀಯರ್ ಆಗ್ಲಿ ಆ ಮೇಲೆ ನಿಮ್ಮ ಮೆಸೇಜ್ ವಿಚಾರ ಅಂತಾರ. ಅವರು ಜಿಲ್ಲಾ ಕೇಂದ್ರದ ಕಛೇರಿಯೊಳಗ ಇರೋವರು ಅವರ ಜೊತೆ ಕಡ್ಡಿ ಮುರದ್ಹಂಗ ಮಾತಾಡೋಕ ಆಗೋಲ್ಲ. ಎಲ್ಲ ಠಾಣೆಗಳಿಗೆ ವೈರ್ಲೆಸ್ ಕೊಟ್ರು, ಆದರ ಅದಕ್ಕ ಬೇರೆ ಮೆನ್ ಅಲಾಟ್ ಮಾಡ್ಲಿಲ್ಲ. ಠಾಣೆಯ ಅಲೋಕೇಶನ್ ಎಲ್ಲ ಹಿಂದಿನ ಕಾಲದ್ದ,ಆದರ ಅಪರಾಧ ಪ್ರಕರಣ ಒಂದಕ್ಕ ಹತ್ತರಷ್ಟು ಹೆಚ್ಚು ಆಗ್ಯಾವ ಇದನೆಲ್ಲ ಯಾರಿಗೆ ಹೇಳೊದು ' ಎಂದರು ನುಸ್ರತ್ ಅಲಿ..
' ನೀವು ಹೇಳೋದು ಸರೀರಿ, ಆದ್ರ ಇದನೆಲ್ಲಾ ಯಾರು ಯಾರಿಗೆ ಹೇಳಬೇಕ್ರಿ, ಹಂಗೆಲ್ಲ ಅನಕೋತ ಹೋದ್ರ ನೌಕರಿ ಮಾಡ್ಲಿಕ್ಕೆ ಆಗತದೇನ್ರಿ, ಕೆಲಸಕ್ಕ ಅಂತ ಬಂದ ಮ್ಯಾಲ ಸ್ವಲ್ಪ ಜವಾಬ್ದಾರೀನೂ ಬೇಕ್ರಿ ' ಎಂದರು ಮಂಜಪ್ಪ ಗೌಡ.
' ರಾತ್ರಿ ಗಸ್ತು ಡ್ಯೂಟಿಯ ಪರಸಪ್ಪನಿಗೆ ಹೇಳಿ ಕಳಸ್ರಿ ' ಎಂದರು ಮಂಜಪ್ಪ ಗೌಡ.
' ಅವನ ಬಂದ ನೀವ ಹೇಳಿ ಸಾರ್ ' ಎಂದರು ನುಸ್ರತ್ ಅಲಿ.
' ಡ್ಯೂಟಿ ಅಲಾಟ್ಮೆಂಟ್ ಸಹ ನಾನ ಮಾಡಬೇಕೇನ್ರಿ, ನೀವು ಒಬ್ಬ ಸೀನೀಯರ್ ಪರ್ಸನ್ ಆಗಿ ಹೀಂಗೆಲ್ಲ ಮಾತಾಡ್ತೀರಲ್ರಿ ' ಎಂದು ಮಂಜಪ್ಪ ಗೌಡರು ರೇಗಿದರು.
( ಮುಂದುವರಿದುದು )
Rating
Comments
ಉ: ' ಅಪರಿಚಿತ ' ಭಾಗ:1(ಕಥೆ)
In reply to ಉ: ' ಅಪರಿಚಿತ ' ಭಾಗ:1(ಕಥೆ) by partha1059
ಉ: ' ಅಪರಿಚಿತ ' ಭಾಗ:1(ಕಥೆ)
ಉ: ' ಅಪರಿಚಿತ ' ಭಾಗ:1(ಕಥೆ)
In reply to ಉ: ' ಅಪರಿಚಿತ ' ಭಾಗ:1(ಕಥೆ) by bhalle
ಉ: ' ಅಪರಿಚಿತ ' ಭಾಗ:1(ಕಥೆ)
ಉ: ' ಅಪರಿಚಿತ ' ಭಾಗ:1(ಕಥೆ)
In reply to ಉ: ' ಅಪರಿಚಿತ ' ಭಾಗ:1(ಕಥೆ) by makara
ಉ: ' ಅಪರಿಚಿತ ' ಭಾಗ:1(ಕಥೆ)
ಉ: ' ಅಪರಿಚಿತ ' ಭಾಗ:1(ಕಥೆ)
In reply to ಉ: ' ಅಪರಿಚಿತ ' ಭಾಗ:1(ಕಥೆ) by kamalap09
ಉ: ' ಅಪರಿಚಿತ ' ಭಾಗ:1(ಕಥೆ)
ಉ: ' ಅಪರಿಚಿತ ' ಭಾಗ:1(ಕಥೆ)
In reply to ಉ: ' ಅಪರಿಚಿತ ' ಭಾಗ:1(ಕಥೆ) by swara kamath
ಉ: ' ಅಪರಿಚಿತ ' ಭಾಗ:1(ಕಥೆ)