ಮೂಲಾನಕ್ಷತ್ರದ ಅನಿಷ್ಟದವಳೇ....

ಮೂಲಾನಕ್ಷತ್ರದ ಅನಿಷ್ಟದವಳೇ....

ಹಾಯ್ ಪುಟ್ಟಿ
"ಏನೇ ನಮ್ಮ ಅಪ್ಪಾ, ಅಮ್ಮನ್ನೇ ಗಯ್ಯಾಳಿ ಮನೆತನದವರು ಅಂತೀಯಾ? ನಿಂಗೆ ಕೊಬ್ಬು ತುಂಬಾ ಹೆಚ್ಚಾಗಿದೆ. ನೀನು ಏನು ಹೇಳಿದರೂ ನಾನು ತಿರುಗಿ ಮಾತಾಡಲ್ಲ ಅನ್ನೋ ಭಾವ ನಿನ್ನಲ್ಲಿ ಮೂಡಿದೆ. ನೋಡು ಇದು ನಿಂಗೆ ಲಾಸ್ಟ್ ವಾರ್ನಿಂಗ್. ಇನ್ನೊಂದು ಸಲ ಈ ರೀತಿ ಕಿರಿಕ್ ಮಾಡಿದ್ಯಾ ಅವಳು ಸರಿಯಿಲ್ಲ ಅಂತಾ ನಿಮ್ಮೂರಿಗೆಲ್ಲಾ ಹಬ್ಬಿಸುತ್ತೇನೆ. ನನ್ನಂತಹ ಪಾಪದ ಹುಡುಗನ ಜೊತೆಯೇ ಜಗಳ ಕಾಯೋ ಜಗಳಗಂಟಿ ಅಂತಾ ನಿಮ್ಮುರಿನ ಬಾಯಿಬಡುಕ ಹೆಂಗಸರಿದ್ದಾರಲ್ಲ, ಅದೇ ಸೀತಮ್ಮ, ಮೀನಾಕ್ಷಮ್ಮ...ಅವರ ಹತ್ರಾ ಹೇಳ್ತೀನಿ. ಆಮೇಲೆ ನಿನ್ನ ಮದ್ವೆಯಾಗಕೆ ಯಾರು ಬರಲ್ಲ. ಆಮೇಲೆ ಸಾಯೋವರೆಗೂ ನಿಮ್ಮಪ್ಪನ ಮನೇಲಿ ಮುಸುರೆ ತಿಕ್ಕಿಕೊಂಡು ಬಿದ್ದಿರಬೇಕು ನೀನು. ಆತರಹ ಮಾಡ್ತೀನಿ ನೋಡು" ಅಂತೆಲ್ಲಾ ಚೆನ್ನಾಗಿ ಬೈಯಬೇಕು ಅನ್ನೋವಷ್ಟು ಕೋಪ ಬಂದಿತ್ತು ನಿನ್ನ ಮೇಲೆ ನೀನು ಬರೆದ ಕಾಗದ ತೆರೆದು ನೋಡಿದಾಗ.
ತಕ್ಷಣ ನಿಮ್ಮಪ್ಪ ನಿಂಗೆ ಮೂಲಾನಕ್ಷತ್ರದ ಅನಿಷ್ಟ ಅಂತಾ ಬೈಯ್ಯುತ್ತಿದ್ದದ್ದು ನೆನಪಾಯಿತು. ಹಾಗಾಗಿ ನಾನು ಬೈಯಬೇಕು ಅಂದುಕೊಂಡಿದ್ದನ್ನೆಲ್ಲಾ ಕ್ಯಾನ್ಸ್‌ಲ್ ಮಾಡಿಬಿಟ್ಟೆ. ನಾನು ಬೈಯ್ಯೋದು, ಅದಕ್ಕೆ ನೀನು ಬೇಸರವಾಗೋದು ಕೊನೆಗೆ ನೀನು ತುಂಗಾ ನದಿಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳೋದು...ತುಂಗಾ ನದಿಗೆ ಹೋಗಿ ಹಾರ್ತಿಯಾ ಅಂದ್ರೆ ನಾನು ಬೈಯ್ಯಬೇಕು ಅಂದುಕೊಂಡಿದ್ದನ್ನೆಲ್ಲಾ ಖಂಡಿತವಾಗಿಯೂ ಬೈಯ್ಯುತ್ತಿದೆ. ಆದ್ರೆ ನಂಗೆ ಗೊತ್ತಿಲ್ವಾ ನೀನೆಷ್ಟು ಸೋಮಾರಿ ಅಂತಾ! ಸಾಯಲಿಕ್ಕೆ ತುಂಗಾ ನದಿವರೆಗೆ ನಡೆದುಕೊಂಡು ಹೋಗಬೇಕಾ? ನಮ್ಮ ಮನೆ ಹಿತ್ತಲಿನಲ್ಲಿರೋ ಬಾವಿ ಹಾರಿದರೆ ಆಗಲ್ವಾ ಅನ್ನೋ ಜಾತಿಯವಳು ನೀನು. ನೀನು ಬಾವಿಹಾರಿ ಸತ್ತರೆ ನಂಗೆ ಪ್ರಾಬ್ಲಂ! ಅಯ್ಯೋ ನಾನು ಜೀವನದಲ್ಲಿ ಉಳಿಸಿದ ಹಣಯೆಲ್ಲಾ ಖರ್ಚುಮಾಡಿ ಈ ಭಾವಿ ತೋಡಿಸಿದ್ದೆ ಈ ಮುಂಡೆಗೆ ಸಾಯಲಿಕ್ಕೆ ಈ ಭಾವಿನೇ ಬೇಕಿತ್ತಾ? ಅಂತಾ ನಿಮ್ಮಪ್ಪ ಜೋಯ್ಸ್ ಖಂಡಿತಾ ಕೂಗಾಡುತ್ತಾನೆ. ನಂಗೆ ಮುಸುರೆ ತಿಕ್ಕಿಕೊಡುತ್ತಿದ್ದವಳು, ನೀರೆತ್ತಿಕೊಡುತ್ತಿದ್ದವಳು ಸತ್ತೇ ಹೋದ್ಲಲ್ಲಾ..ನನ್ನ ಬಲಗೈ ಮುರಿದೇ ಹೋಯಿತಲ್ಲಾ ಅಂತಾ ನಿಮ್ಮಮ್ಮ ಕಿರುಚಾಡುತ್ತಾಳೆ. ನಿನ್ನ ಸಾವಿಗೆ ನಾನು ಬರೆದ ಪತ್ರವೇ ಕಾರಣ ಅಂತಾ ಊರವರಿಗೆಲ್ಲಾ ಹೇಳುತ್ತಾಳೆ. ಆಮೇಲೆ ಪೋಲಿಸ್‌ನವರು ಬಂದು ಸುಮ್ನೆ ನಂಗೆ ಕಿರಿಕಿರಿ ಮಾಡ್ತಾರೆ. ನೀನು ಬಾವಿ ಹಾರಿ ಸಾಯೋದು ಎಷ್ಟೆಲ್ಲಾ ನಷ್ಟ ಉಂಟುಮಾಡತ್ತೆ ಅಂತಾ ಆಲೋಚಿಸಿದ ಮೇಲೆ ನಾನು ಬೈಯ್ಯಬೇಕು ಅಂದುಕೊಂಡಿದ್ದನ್ನೆಲ್ಲಾ ಕ್ಯಾನ್ಸಲ್ ಮಾಡಿಬಿಟ್ಟೆ. ಈವಾಗ್ಲೂ ಕಾಲಮಿಂಚಿಲ್ಲ. ನೀನು ಬೈದರೆ ನಾನು ತುಂಗಾ ನದಿ ಹಾರಿಯೇ ಸಾಯುತ್ತೀನಿ ಅಂತಾ ಭರವಸೆ ಕೊಡು. ಖಂಡಿತಾ ನಾನು ನಿನಗೆ ಈ ಪತ್ರದ ಮೊದಲನೆ ಸಾಲುಗಳಲ್ಲಿ ಹೇಳಿದ ದಾಟಿಯಲ್ಲೇ ಬೈಯ್ಯುತ್ತೀನಿ!
ಮತ್ತೆ ಏನು ಕಾರುಬಾರು ಊರಲ್ಲಿ. ನಮ್ಮೂರಲ್ಲಿ ಕಾರು ಇಲ್ಲ, ಬಾರು ಇಲ್ಲ ಅಂತಿಯಾ ನೀನು ಅಂತಾ ನಂಗೆ ಗೊತ್ತು ಆದ್ರೂ ಸುಮ್ನೆ ಕೇಳಿದೆ. ಹೆದರಬೇಡ ನಾನು ಬಂದ ಮೇಲೆ ನಿಮ್ಮೂರಿಗೆ ಕಾರು ಅಥವಾ ಬಾರು ಎರಡರ ಒಳಗೆ ಯಾವುದಾದರೂ ಒಂದು ಎಂಟ್ರಿಕೊಡತ್ತೆ! ಬೆಂಗಳೂರೆಂಬ ಈ ಸಿಮೆಂಟು ಜಂಗಲ್ಲಿನ ಲೈಪು ತುಂಬಾ ಬೋರ್ ಆಗ್ತಾ ಇದೆ ಕಣೇ. ಜಗಳ ಆಡೋಣ ಅಂದ್ರು ಯಾರು ಸಿಗಲ್ಲ. ಅದೇ ಕೆಲಸವಿಲ್ಲದ ಹಾಳು ಆಫೀಸು, ಸೊಳ್ಳೆ ತುಂಬಿರುವ ರೂಂಮು ಇದೆ ನನ್ನ ಸದ್ಯದ ಪ್ರಪಂಚವಾಗಿಬಿಟ್ಟಿದೆ. ಆದ್ರೂ ದುಡಿಲೇಬೇಕು. ನನಗೋಸ್ಕರ ಅಲ್ಲದಿದ್ದರೂ ನಿನ್ನ ಕಟ್ಟಿಕೊಳ್ಳುತ್ತೀನಲ್ಲಾ ಅದಕ್ಕಾದರೂ ದುಡಿಯಬೇಕು! ಹೋಗ್ಲಿಬಿಡು ನನ್ನ ಕಷ್ಟ ನಿನ್ನ ಹತ್ತಿರ ಹೇಳಿ ನಿನಗ್ಯಾಕೆ ಸುಮ್ನೆ ಖುಷಿಯಾಗೋ ಹಾಗೆ ಮಾಡಲಿ. ಮತ್ತೆ ಸಮಾಚಾರ.
ಮಳೆ ಸಖತ್ತಾಗಿ ಹೊಯ್ಯುತ್ತಾ ಇದೆ ಅಂದೆ ಅಲ್ವಾ? ಛೇ ನಿಮ್ಮೂರಿನ ಮಳೆ ನೆನೆಸಿಕೊಂಡರೆ, ಮಳೆಯಲ್ಲಿ ನಾನು ನೀನು ನೆನೆಯೋದನ್ನಾ ನೆನಪಿಸಿಕೊಂಡರೆ ನಂಗೆ ತುಂಬಾ ಫೀಲ್ ಆಗತ್ತೆ ಕಣೇ. ಅಂದಹಾಗೆ ಬೆಂಗಳೂರಿನ ಮಳೆ ಕಥೆಯನ್ನಿನ್ನು ನಿಂಗೆ ಹೇಳಿಲ್ಲಾ ಅಲ್ವಾ? ಮುಂದಿನ ಪತ್ರದಲ್ಲಿ ಹೇಳ್ತೀನಿ. ಅಲ್ಲಿವರೆಗೂ ನೀನು ಬೆಂಗಳೂರು ಮಳೆ ಹೇಗಿರಬಹುದು ಅಂತಾ ಸುಮ್ನೆ ಆಲೋಚನೆ ಮಾಡ್ತಾ ಇರು. ಟಾಟಾ....ಬಾಬಾಯ್...
ಇಂತಿ ನಿನ್ನವ

Rating
No votes yet

Comments