'' ಅಪರಿಚಿತ " ಕಥಾನಕದ ಕುರಿತು....!

'' ಅಪರಿಚಿತ " ಕಥಾನಕದ ಕುರಿತು....!

                                                       ಒಂದು ಕಥಾನಕ " ಅಪರಿಚಿತ"ದ ಸುತ್ತ


ಪ್ರಿಯ ಸಂಪದಿಗರಿಗೆ ವಂದನೆಗಳು.


 


           ನಾನು ' ಸಂಪದ ' ಕನ್ನಡ ಬ್ಲಾಗಿಗೆ ಸೇರಿ ಸುಮಾರು ಹನ್ನೊಂದು ತಿಂಗಳುಗಳೆ ಸಂದಿವೆ.ಈ 'ಸಂಪದ ' ಎನ್ನುವ ಕನ್ನಡದ ಬ್ಲಾಗ್ ಒಂದು ತರಹ ಕನ್ನಡದ ಇಲೆಕ್ಟ್ರಾನಿಕ್ ಮಾದ್ಯಮದ ಮುಕ್ತ ವಿಶ್ವ ವಿದ್ಯಾಲಯವಿದ್ದಂತೆ ಎಂದು ನನ್ನ ಪ್ರಾಮಾಣಿಕ ಅನಿಸಿಕೆ. ಶಿಷ್ಟ ಸಾಹಿತಿಗಳು ಮತ್ತು ಅಕೆಡೆಮಿಕ್ ವಲಯದವರು ಮಾತ್ರ್ರ ಬರೆಯುವ ಸಂವಹಿಸುವ ಹಲವು ಕನ್ನಡ ಬ್ಲಾಗ್ಗಳಿವೆ. ಆದರೆ ಅವು ಯಾವವೂ ಈ ' ಸಂಪದ ' ದಷ್ಟು ಕ್ರಿಯಾತ್ಮಕವಾಗಿಲ್ಲ. ಅವುಗಳು ಉತ್ತಮ ಮತ್ತು ಮೌಲಿಕ ಬರಹಗಳನ್ನು ಪ್ರಕಟಸುತ್ತಿವೆ, ಆದರೂ ಅವು ' ಸಂಪದ 'ದಷ್ಟು ಜನಪ್ರಿಯತೆ ಪಡೆದಿಲ್ಲ ಎಂದು ನನ್ನ ಭಾವನೆ. ನನ್ನ ಈ ವಾಕ್ಯವನ್ನು ನಾನು ಯಾಕಾಗಿ ಬಳಸಿದೆನೆಂದರೆ ' ಸಂಪದ ' ದಲ್ಲಿ ಎಲ್ಲ ಆಸಕ್ತ ಬರಹಗಾರರಿಗೆ ಯಾವುದೆ ಶಿಷ್ಟ ಮತ್ತು ಶಿಷ್ಟವಲ್ಲದ ಎಲ್ಲರಿಗೂ ಮುಕ್ತ ಅವಕಾಶ ನೀಡುತ್ತ ಬಂದಿದೆ, ಇದಕ್ಕೆ ಕಾರಣ ನೀಡಬೇಕಿಲ್ಲ,


          ಈ ಬ್ಲಾಗಿಗೆ ಹರಿದು ಬರುತ್ತಿರುವ ಹೊಸ ಹೊಸ ಯುವ ಬರಹಗಾಠರರು ಮತ್ತು ಬರಹಗಾರ್ತಿಯರ ದಂಡು. ಅವರುಗಳು ಸಹ ಅಷ್ಟೆ ಅರ್ಥಪೂರ್ಣ ವಾಗಿ ತಮ್ಮವೆ ಆದ ವಿವಿಧ ಶೈಲಿಗಳನ್ನು ಪರಿಚಯಿಸುತ್ತಿದ್ದಾರೆ. ಸಂಪದದ ಬರಹಗಾರರಲ್ಲಿ ಪ್ರಬುದ್ಧರಿದ್ದಾರೆ, ಪ್ರಭುದ್ಧತೆಯೆಡೆಗೆ ಸಾಗಿದವರಿದ್ದಾರೆ. ಇದೊಂದು ನಿರಂತರ ಹರಿಯುತ್ತಿರುವ ಚಲನಶೀಲ ಗಂಗೆ. ಇದು ಜೀವಂತಿಕೆಯ ಪ್ರತೀಕ. ಜನ ಸಾಮಾನ್ಯ ಕನ್ನಡದ ಆಸಕ್ತ ಓದುಗನನ್ನು ಮತ್ತು ಬರಹ ಗಾರನನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸವನ್ನು ಈ' ಸಂಪದ ' ಬ್ಲಾಗ್ ಮಾಡುತ್ತಿದೆ.


          ಯಾವುದೆ ಶಿಷ್ದ ಅಧ್ಯಯನದ ಹಿನ್ನೆಲೆಯಿಲ್ಲದ ಕನಿಷ್ಟ ಪದವಿಧರನೂ ಅಲ್ಲದ ನನ್ನ ಎಲ್ಲ ಪ್ರಾಕಾರದ ಬರಹಗಳನ್ನು ' ಸಂಪದ ' ದಲ್ಲಿ ಹಾಕಿ ನನ್ನಂತಹ ಜನ ಸಾಮನ್ಯ ಸಾಹಿತ್ಯಾಸಕ್ತನನ್ನು ಮುಕ್ತವಾಗಿ ಪ್ರೋತ್ಸಾಹಿಸಿದೆ. ಯಾಕೆಂದರೆ ನನ್ನ ಬರವಣಿಗೆಯ ಮಿತಿ ನನಗೆ ಗೊತ್ತಿದೆ, ಆದರೂ ನನ್ನ ಬರಹಗಳನ್ನು ಮೆಚ್ಚಿ ಪ್ರತಿಕ್ರಿಯಿಸಿ ನಾನು ಹೆಚ್ಚು ಹೆಚ್ಚು ಬರವಣಿಗೆಯಲ್ಲಿ ತೊಡಗಿ ಕೊಳ್ಳುವಂತೆ ಮಾಡಿದ ' ಸಂಪದ ' ಓದುಗ ವೃಂದವಿದೆ. ಹೀಗಾಗಿ ನಾನು ಇದನ್ನು ಕನ್ನಡದ ಇಲೆಕ್ಟ್ರಾನಿಕ್ ಮಾಧ್ಯಮದ ಮುಕ್ತ ವಿಶ್ವ ವಿದ್ಯಾಲಯವೆಂದು ಕರೆದದ್ದು. ಇಲ್ಲಿ ನನ್ನಂತಹ ಎಲ್ಕೆಜಿ ಮಟ್ಟದವನಿಂದ ಹಿಡಿದು ಸ್ನಾತಕೋತ್ತರ ಮಟ್ಟದವರನ್ನು ಸಹ ಒಳಗೊಂಡಿದೆ ಎನ್ನುವ ಕಾರಣಕ್ಕೆ.


           ಇಲ್ಲಿ ಹಿರಿ ಕಿರಿಯ ಸಂಪದದ ಕ್ರಿಯಾಶೀಲ ಓದುಗ ವೃಂದ ಎಲ್ಲ ಬರಹಗಳನ್ನು ಓದಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸುವ ಪರಿ ವಿಸ್ಮಯ ಹುಟ್ಟಿಸುತ್ತದೆ. ಸಂಪದಕ್ಕೆ ನಾನು ಪರಿಚಯಿಸಲ್ಪಡದೆ ಹೋಗಿದ್ದರೆ ಹೀಗೆ ನಿಯಮಿತವಾಗಿ ಬರೆಯಲಾಗುತಿರಲ್ತಿಲ್ಲ. ಇಲ್ಲಿ ನಾನು ನನ್ನ ಬರಹಗಳ ಗುಣಮಟ್ಟದ ಬಗ್ಗೆ ಹೇಳುತ್ತಿಲ್ಲ ಸಂಖ್ಯೆಗಳ ಕುರಿತು ಹೇಳುತ್ತಿದ್ದೇನೆ. ಹೀಗಾಗಿ ಸಂಪದ ಈಗ ನನ್ನ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಈ ಸಂಭರ್ಭದಲ್ಲಿ ಸಂಪದದ ಓದುಗರು ಅಲ್ಲದೆ ಅದರ ರೂವಾರಿ ಶ್ರೀಯುತ ಹರಿ ನಾಡಿಗ ಮತ್ತು ಅವರ ತಂಡಕ್ಕೆ ಕೃತಜ್ಞತೆ ಸಲ್ಲಿಸ ಬಯಸುತ್ತೇನೆ.


           ನಾನು ನನ್ನ ಹೊಸದೊಂದು ಕಥಾನಕದ ಕುರಿತು ಅನಿಸಿಕೆಗಳನ್ನು ಹಂಚಿಕೊಳ್ಳ ಬೇಕೆಂದು ಹೊರಟವನು ಮಧ್ಯದಲ್ಲಿ ಈ ರೀತಿ ವಿಷಯಾಂತರ ಮಾಡಿದ್ದಕ್ಕೆ ಕ್ಷಮೆಯಿರಲಿ. ನಾನು ಬರೆದ ಲೇಖನ ಕವನ ಚುಟುಕುಗಳನ್ನು ಬಿಟ್ಟು ಕೆಲವು ಕಥೆಗಳು ಸಂಪದದ ಬ್ಲಾಗಿನಲ್ಲಿ ಬೆಳಕು ಕಂಡಿವೆ. ಅವುಗಳಲ್ಲಿ ಕೆಲವೆ ಕೆಲವನ್ನು ಹೊರತು ಪಡಿಸಿ ಎಲ್ಲವನ್ನೂ ಅನೇಕರು ಓದಿದ್ದಾರೆ ಪ್ರತಿಕ್ರಿಯಿಸಿದ್ದಾರೆ. ಅವರುಗಳೆ ನನ್ನ ಬರವಣಿಗೆಯ ಪ್ರೇರಕ ಶಕ್ತಿ.


           ಈ ಘಟ್ಟದಲ್ಲಿ ವಿಶೇಷವಾಗಿ ಒಮ್ಮೆ ನನ್ನವೆ ಕಥೆಗಳನ್ನು ಕುರಿತು ಸ್ವ ವಿಮರ್ಶೆಗೆ ತೊಡಗಿದಾಗ ಒಂದು ವಿಷಯ ನನಗೆ ಗೋಚರ ವಾಯಿತು. ನಿಗೂಢ, ಆಲದಮರ, ಅವಸಾನ ಕಥೆಗಳು ಸಾವಿನ ಸುತ್ತ ಅರಳಿಕೊಂಡ ಕಥಾನಕ ಗಳು. ಅಂತ್ಯ ಸಾವಿನಂಚಿನಲ್ಲಿರುವ ವ್ಯಕ್ತಿಯ ಸುತ್ತ ಬಿಚ್ಚಿಕೊಳ್ಳುವ ಕಥೆಯಾದರೆ ಉಳಿದಂತೆ ಪಾಪಪ್ರಜ್ಞೆ, ಅಜ್ಜನಫೋಟೊ ಮತ್ತು ರಾಮನ ಸೈಕಲ್ ಸವಾರಿ ಕಥೆಗಳು ಕಥಾ ನಾಯಕರ ಗತಕಾಲದ ನೆನಪುಗಳ ಮೂಲಕ ಬಿಚ್ಚಿಕೊಂಡು ಅವುಗಳನ್ನು ವರ್ತಮಾನದ ಜೊತೆ ಸಮೀಕರಿಸು ವಂತಹವುಗಳು. ಇನ್ನು ನಿರ್ಣಯ ಒಂದು ಸಾಧಾರಣ ಕಥಾನಕ ಇದನ್ನು ಸಹ ಕೆಲವರು ಮೆಚ್ಚಿದರು. ಆ ಪೈಕಿ ಯುವಕರೊಬ್ಬರ ಮೆಚ್ಚುಗೆ ನನ್ನಲ್ಲಿ ಕುತೂಹಲ ಮೂಡಿಸಿತು. ಮತ್ತು ಇತ್ತೀಚೆಗೆ ಕೆಲ ವಾರಗಳ ಹಿಂದೆ ಸಂಪದದ ಪ್ರಮುಖ ಓದುಗ ಮತ್ತು ಪ್ರತಿಕ್ರಿಯೆದಾರರ ಪೈಕಿ ಒಬ್ಬರಾದ ಶ್ರೀಯುತ ಸಪ್ತಗಿರಿ ಯವರು ತಮ್ಮ ಪ್ರತಿಕ್ರಿಯೆಯೊಂದರಲ್ಲಿ ಹಾಸ್ಯಲೇಖನ ವೊಂದನ್ನು ಪ್ರಕಟಸುವಂತೆ ಕೋರಿದ್ದರು. ಅದಕ್ಕೆ ನಾನು ಬಹಳ ಉತ್ಸಾಹದಿಂದಲೆ ಪ್ರಯತ್ನಿಸುವೆ ಪ್ರಯತ್ನಿಸುವೆ ಎಂದು ಕೂಡ ಮರು ಪ್ರತಿಕ್ರಿಯಿಸಿದ್ದೆ.


            ನಂತರ ಆ ನಿಟ್ಟಿನಲ್ಲಿ ಅಲೋಚಿಸಲು ಪ್ರಾರಂಭಿಸಿದಾಗಲೆ ನನ್ನ ಮಿತಿಯ ಅರ್ಥ ನನಗಾದದ್ದು. ಲೇಖಕ ನಾಗುವುದು ಎಷ್ಟು ಕಷ್ಟವೋ ಅದಕ್ಕೂ ಕಷ್ಟ ಒಬ್ಬ ಹಾಸ್ಯಲೇಖಕ ನಾಗುವುದು. ಹೀಗಾಗಿ ಹಾಸ್ಯಮಯವಾಗಿ ಬರೆಯುವ ಪ್ರತಿಕ್ರಿಯಿಸುವ ಪ್ರತಿಕ್ರಿಯಿಸಿ ಕೊಳ್ಳುವ ಸಂಪದದ ಬರಹಗಾರರು ಓದುಗರು ಮತ್ತು ಪ್ರತಿಕ್ರಿಯೆದಾರರು ನನಗೆ ಬಹಳ ಇಷ್ಟವಾಗುತ್ತ್ತಾರೆ. ಇತ್ತೀಚೆಗೆ ಸಂಪದಿಗ ಬರಹಗಾರರು ಧಾಮರ್ಿಕ ಸಾಮಾಜಿಕ ರಾಜಕೀಯ ವೈಜ್ಞಾನಿಕ ಲೇಖನಗಳನ್ನು ಮತ್ತು ಹಾಸ್ಯಲೇಖನ ಮುಂತಾದ ವೈವಿಧ್ಯಮಯ ಬರಹಗಳನ್ನು ಗಳನ್ನು ಬಹಳ ಅದ್ಭುತವಾಗಿ ಬರೆಯುತ್ತಿದ್ದಾರೆ. ಹೀಗಾಗಿ ಒಮ್ಮೊಮ್ಮೆ ನನಗೆ ನನ್ನ ಬರವಣಿಗೆಗಳು ಏಕತಾನ ವಾಗುತ್ತಿವೆಯೆ, ಕೆಲ ಕಾಲ ಬರವಣಿಗೆಯನ್ನು ನಿಲ್ಲಿಸಿ ಬರಿ ಸಂಪದದ ಓದುಗನಾಗಿ ಮುಂದುವರಿದು ಬಿಡಲೆ ಎಂಬ ಭಾವನೆ ಸುಳಿದು ಹೋದದ್ದು ನಿಜ.


             ಇಂತಹ ಸಂಧರ್ಭದಲ್ಲಿಯೆ ನನ್ನದೊಂದು ಕಥಾನಕ ಅಂಕುರಗೊಂಡು ಬೆಳೆಯ ತೊಡಗಿತ್ತು. ಈ ಕಥಾನಕದ ಶೀರ್ಷಿಕೆ 'ಅಪರಿಚಿತ ' . ಇದು ಹನ್ನೊಂದು ಕಂತುಗಳಲ್ಲಿ ಬಿಚ್ಚಿ ಕೊಳ್ಳುವ ಕಥಾನಕ. ಇದರ ವಸ್ತು ಸುಮಾರು ವರ್ಷಗಳಿಂದ ಬೀಜ ರೂಪದಲ್ಲಿ ನನ್ನ ಮನದಾಳದಲ್ಲಿತ್ತು. ಆದರೆ ಕೃತಿಗಿಳಿಸಲಾಗಿರಲಿಲ್ಲ. ಯಾಕೆಂದರೆ ಮೂಲತಃ ನಾನೊಬ್ಬ ಸೋಮಾರಿ ಬರಹಗಾರ. ಬರಹಗಾರನಿಗೆ ಈ ಸೋಮಾರಿತನ ಸಲ್ಲದು. ಜೊತೆಗೆ ಇದು ಒಬ್ಬ ವ್ಯಕ್ತಿಯ ಆತ್ಮಹತ್ಯಾ ಕಥನ. ಈ ಕಥಾನಕ ಮೋಡಗಟ್ಟುತ್ತಿದ್ದ ಸಂಧರ್ಭದಲ್ಲಿಯೆ ಸಪ್ತಗಿರಿಯವರು ಹಾಸ್ಯಲೇಖನ ವೊಂದನ್ನು ಬರೆಯಲು ಕೋರಿದ್ದರು. ಆಗ ನಾನು ಯೋಚಿಸಿದ್ದು ಈ ಕಥಾನಕವನ್ನು ಹಾಸ್ಯರೂಪದಲ್ಲಿ ದಾಖಲಿಸು ವುದು ಸಾಧ್ಯವೆ ಎಂದು ಯೋಚಿಸಿದೆ. ಆ ಕಥಾನಕದ ನಿರೂಪಣೆಗೆ ತೊಡಗಿದಂತೆ ಈ ಕಥಾನಕ ಹಾಸ್ಯದ ಮಾದರಿಗೆ ಹೊಂದಿಕೊಳ್ಳುವಂತಹುದಲ್ಲ ಎಂಬುದರ ಅರಿವು ಕ್ರಮೇಣ ನನಗಾಗುತ್ತ ಬಂತು.


             ಇದು ಸಾವಿನ ಕುರಿತ ಕಥಾನಕವೇ ಆದರೂ, ಇದು ಬಹುತೇಕ ಭಾಗ ಸಂವಾದದ ರೂಪದಲ್ಲಿ ಬಿಚ್ಚಿಕೊಳ್ಳು ವಂತಹುದು. ಆದರೂ ಸಂವಾದಗಳಲ್ಲಿಯೆ ಕಥಾವಸ್ತುವಿನ ಮಿತಿಯಲ್ಲಿಯೆ ಹಾಸ್ಯಪರತೆಯನ್ನು ತರುವ ಸೂಕ್ಷ್ಮ ಪ್ರಯತ್ನ ನಡೆದಿದೆ ಎಂದು ನನ್ನ ಅನಿಸಿಕೆ. ಈ ಸುಧೀರ್ಘವಾದ ನೀಳ್ಗತೆ ಸಂಪದದ ಓದುಗರನ್ನು ಆಕಳಿಸುವಂತೆ ಮಾಡಲಿಕ್ಕಿಲ್ಲ ಎಂದು ನನ್ನ ಭಾವನೆ. ' ನಿರ್ಣಯ ' ಅತಿ ಚಿಕ್ಕ ಕಥಾನಕವಾದರೆ ' ಅಪರಿಚಿತ ' ಒಂದು ದೀರ್ಘ ಕಥಾನಕ. ನಿರ್ಣಯವನ್ನು ಲಂಬಿಸಲು ಯೋಚಿಸಿದೆ ಆಗಲಿಲ್ಲ, ಅಷ್ಟೆ ಇದ್ದರೆ ಚೆನ್ನ ಎನ್ನಿಸಿತು. ಅದು ಕೂಡ ಮೆಚ್ಚುಗೆ ಪಡೆಯಿತು. ಅಪರಿಚಿತ ವನ್ನು ಸ್ವಲ್ಪ ಸಂಕ್ಷೀಪ್ತ ಗೊಳಿಸಲು ಸಾಧ್ಯವೆ ಎಂದು ಯೋಚಿಸಿದೆ ಅದು ಕೇಳಲಿಲ್ಲ. ತನ್ನದೆ ಸ್ವರೂಪದ ಧೀರ್ಘತೆಯನ್ನು ಪಡೆಡು ಸಂವಾದ ರೂಪದಲ್ಲಿ ಬೆಳೆಯುತ್ತ ಹೋಯಿತು. ಈ ಕಥಾನಕದ ಪೂರ್ವಭಾವಿ ಪೀಠಿಕೆ ಇಷ್ಟು ಸಾಕೆನಿಸುತ್ತದೆ. ತಪ್ಪು ಒಪ್ಪುಗಳು ಮತ್ತು ಲೋಪ ದೋಷಗಳು ಪ್ರತಿಕ್ರಿಯೆ ಮೂಲಕ ವ್ಯಕ್ತಗೊಳ್ಳಲಿ.


                                                                                                               ಇಂತಿ ತಮ್ಮ ವಿಶ್ವಾಸಿ ಸಂಪದಿಗ 


                                                                                                                 ಹನುಮಂತ ಅನಂತ ಪಾಟೀಲ.

Rating
No votes yet

Comments