ಬಿಸಿಲು ಕೋಲು- ಜಾಗತಿಕ ಪ್ರಸಿದ್ಧಿಯ , ಕನ್ನಡದ ಹೆಮ್ಮೆಯ ಛಾಯಾಗ್ರಾಹಕನ ಕುರಿತಾದ ಪುಸ್ತಕ

ಬಿಸಿಲು ಕೋಲು- ಜಾಗತಿಕ ಪ್ರಸಿದ್ಧಿಯ , ಕನ್ನಡದ ಹೆಮ್ಮೆಯ ಛಾಯಾಗ್ರಾಹಕನ ಕುರಿತಾದ ಪುಸ್ತಕ

ಒಬ್ಬಾತ ಎಂಟು ವರುಷದವನಿದ್ದಾಗಲೇ ತಾಯಿ ತೀರಿಕೊಳ್ಳುತ್ತಾಳೆ, ತಂಗಿಯಂದಿರನ್ನು ಸಂಬಂಧಿಕರು ಕರೆದುಕೊಂಡು ಹೋಗುತ್ತಾರೆ. ತಂದೆ , ಅಣ್ಣ ಮತ್ತು  ಈತ ಈ ಮೂವರೇ ಮನೆಯಲ್ಲಿ. ಅಣ್ಣ ಮತ್ತು ತಮ್ಮ  ಮೂವರಿಗೂ ಅಡಿಗೆ ಮಾಡುತ್ತಾರೆ. ತಂದೆ ದಿನಾಲೂ ಸಂಜೆ ತಡವಾಗಿ ಮನೆಗೆ ಬರುತ್ತಾರೆ.  ಈತನು SSLC ಮುಗಿಸಲು ನಾಲ್ಕು ವರ್ಷ ತೆಗೆದುಕೊಳ್ಳುತ್ತಾನೆ. ಸಿನೆಮಾ ಹುಚ್ಚು. ಸಿನೆ ಫೋಟೋಗ್ರಾಫರ್ ಆಗಬೇಕೆಂದು ಮುಂಬೈ ಹೋಗಿ ವಾಪಸ್ ಬರುತ್ತಾನೆ. ನಂತರ ಪುಣೆಗೆ ಹೋಗಿ ವಾಪಸ್ ಬರುತ್ತಾನೆ.  ಮುಂದೆ JJ ಪಾಲಿಟೆಕ್ನಿಕ್ ಸೇರುತ್ತಾನೆ. (  ಅಲ್ಲಿ  ಒಂದೇ ಕ್ಯಾಮೆರಾ  ಇದೆ , ಅದನ್ನು ತೋರಿಸಿ ಅದರಲ್ಲಿನ ವ್ಯೂ ಫೈಂಡರ್ ಮೂಲಕ ನೋಡಲು ಬಿಟ್ಟು ಮಾತ್ರ ಸಿನೆ ಛಾಯಾಗ್ರಹಣದ ಪಾಠ ಹೇಳುತ್ತಾರೆ! )  ಮುಂದೆ ಸಿನೆಮಾ  ಸೇರುತ್ತಾನೆ. ವೈಯುಕ್ತಿಕ ಜೀವನದಲ್ಲಿ ಹೆಂಡತಿ ಒಂದು ಮಗುವನ್ನು ಹೆತ್ತು ಬಿಟ್ಟು ತೀರಿಕೊಳ್ಳುತ್ತಾಳೆ. ಆ ಮಗು ಬುದ್ಧಿಮಾಂದ್ಯದ್ದು . 

ಆದರೆ ಈ ಲೋಕ ಯಾರನ್ನಾದರೂ  ನೆನಪಿಟ್ಟುಕೊಳ್ಳೋದು  ಅವರ ವೈಯುಕ್ತಿಕ ವಿಷಯಗಳಿಗಾಗಿ ಅಲ್ಲ್!  ಅವರು ಲೋಕಕ್ಕೆ ಕೊಟ್ಟ ಕೊಡಿಗೆಗಾಗಿ!   ಈತನನ್ನು ನೆನಪಿನಲ್ಲಿಟ್ಟುಕೊಳ್ಳೋದು ಈತನ ಅಧ್ಭುತ  ಛಾಯಾಗ್ರಹಣಕ್ಕಾಗಿ. ಹೌದು! ಇವರು  ಹಿಂದಿಯ ಪ್ಯಾಸಾ, ಕಾಗಜ್ ಕೇ ಫೂಲ್ ಮುಂತಾದ ಗುರುದತ್ ಅಭಿನಯ ಮತ್ತು ನಿರ್ದೇಶನದ ಕಪ್ಪುಬಿಳುಪು  ಚಿತ್ರಗಳ ಕಾವ್ಯಮಯ ಛಾಯಾ ಚಿತ್ರಗ್ರಾಹಕರಾಗಿ ಭಾರತೀಯ ಚಿತ್ರರಂಗದಲ್ಲೂ ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದ ಹೆಮ್ಮೆಯ ಕನ್ನಡಿಗ ವಿ.ಕೆ.ಮೂರ್ತಿ.   ತಮಸ್ ,ಭಾರತ್ ಏಕ್ ಖೋಜ್ ಧಾರಾವಾಹಿಗಳಿಗೂ ಕೆಲಸ ಮಾಡಿದ್ದಾರೆ . ಕನ್ನಡದಲ್ಲಿ 'ಹೂವು-ಹಣ್ಣು'   ಚಿತ್ರದಲ್ಲಿ  ಇವರದು ಛಾಯಾಗ್ರಹಣ. 

 

ಇವರ ಬಗೆಗಿನ ಪುಸ್ತಕ ಉಮಾರಾವ್ ಬರೆದಿದ್ದಾರೆ. ವಿ.ಕೆ.ಮೂರ್ತಿಯವರ ಮಾತುಗಳಲ್ಲದೆ , ಅವರ ಸಂಪರ್ಕಕ್ಕೆ  ಬಂದ ಎಲ್ಲ ಜನರಲ್ಲದೆ, ಅವರಿಂದ ಪ್ರಭಾವಿತರಾದ ಪ್ರಖ್ಯಾತರ ಮಾತುಗಳು ಇಲ್ಲಿವೆ.

ತುಂಬಾ ಮುದ್ದಾದ ಹೊದಿಕೆ ಇದೆ. ಹಾಲು ಬಿಳಿ ಕಾಗದ.  ಈ ಪುಸ್ತಕ ಓದುತ್ತಿದ್ದಂತೆ ಅದರಲ್ಲಿ ಹೆಸರಿಸಿದ ಚಿತ್ರಗಳ ಸೀಡೀ ತಂದು ನೋಡಬೇಕೆಂಬ ಆಸೆ ಆಯಿತು!. ಸುಮ್ಮನೆ ಕತೆಯನ್ನೋ ಸಂಭಾಷಣೆಯನ್ನೋ ಗಮನಿಸುತ್ತಿದ್ದ ನಾನು ಚಿತ್ರವನ್ನೂ ಛಾಯಾಚಿತ್ರಗ್ರಹಣವನ್ನೂ  ಗಮನಿಸುವಂತೆ ನನ್ನನ್ನು ಶಾಶ್ವತವಾಗಿ ಮಾರ್ಪಡಿಸಿದೆ!

ಸಿನೆಮಾ ಬಗ್ಗೆ ಆಸಕ್ತಿ ಇದ್ದವರು ಓದಲೇಬೇಕಾದ ಪುಸ್ತಕ ಇದು.  ಇದರಲ್ಲಿ ಅನೇಕ ಹಿಂದಿ ಚಿತ್ರರಂಗದ ನಟ ನಟಿಯರ , ನಿರ್ದೇಶಕರ ವಿಷಯಗಳು ಪ್ರಾಸಂಗಿಕವಾಗಿ ಬರುವುದು  ಒಂದು ಬೋನಸ್.

Rating
No votes yet

Comments