ನಿನಗಾಗುವ ಆ ನೋವಿಗೆ ಕಾದಿರುವೆ

ನಿನಗಾಗುವ ಆ ನೋವಿಗೆ ಕಾದಿರುವೆ

ಕವನ

ನಿನಗಾಗುವ ಆ ನೋವಿಗೆ ಕಾದಿರುವೆ

ನಾನು ಮಳೆಯಲ್ಲಿ ನಿಂತು ಅತ್ತೆ ಯುಗಗಳಿಂದ.
ಅತ್ತಾಗಲೆಲ್ಲ,ಬಿದ್ದ ಮಳೆ ಹನಿಯು,
ನನ್ನ ಕಣ್ಣೀರ ನೆಕ್ಕಿ ಹೋಯ್ತು.
ನಾನು ಅತ್ತದ್ದು ನಿನಗೆ ಗೊತ್ತಾಗಲೆಯಿಲ್ಲ.
ಸಿಡಿಲು ಗುಡುಗುಗಳ ನಡುವೆ ಸಿಲುಕಿ
ಸದ್ದಿಲ್ಲದಂತಾಗಿರುವ ನನ್ನ ಆಕ್ರಂದನ,
ನಿನಗೆ ಕೇಳಿಸಲೇಯಿಲ್ಲ.
ಇರಲಿ ಬಿಡು ಎಂದು ನಾನು ಬಿಸಿಲಿಗೆ ಬಂದೆ.
ಕಣ್ಗಳ ಬಟ್ಟಲಲ್ಲಿದ ಅಷ್ಟು ಇಷ್ಟು ನೀರು
ಆವಿಯಾಗಿ ಹೋಯ್ತು.
ಒಣಗಿದ ಗಂಟಲೊಳಗೆ ದ್ವನಿಯಿಲ್ಲ.
ತುಟಿಗಳು ಅಳುಗಾಡಿಸಿದರೂ
ನಾನೀಗ ಮೌನಿ.
ಈ ಮೌನದಲ್ಲೇ ಹೇಳಬಾರದ್ದೇನೋ
ಹೇಳಿಬಿಡುವ ಭೀತಿಯಲ್ಲಿ,
ನಾನು ಮಾತಿನ ಗುಡುಸಲಿಗೂ ಬೆಂಕಿ ಹಚ್ಚಿಬಿಟ್ಟೆ.
ಅಟ್ಟದ ಮೇಲಿರುವ ನಗುವನ್ನು,
ಒಲೆಯ ಮುಂದಿರುವ ಅಳುವನ್ನು,
ಕತ್ತಲೆ ಕೋಣೆಯಲ್ಲಿರುವ ನೋವನ್ನು,
ಎಲ್ಲವೂ ಸುಟ್ಟು ಬಿಟ್ಟೆ.
ಹೀಗಿರುವಲ್ಲಿಯೇ,
ನೀನು ಬಸುರಿಯಂದು ತಿಳಿದುಬಂದ
ಸುದ್ದಿಯ ಸ್ಪಂದನಕೆ,
ಹೊಟ್ಟೆಕಿಚ್ಚಿನ ಹುಳುವಿನ ತತ್ತಿಯೊಂದು
ನನ್ನ ಹೊಟ್ಟೆಯೊಳಗಿಟ್ಟು ನಾನೂ ಬಸರಾದೆ.
ಹಡೆದೆ ಅದೇ ಹುಳು.
ನಿನ್ನ ಪ್ರಸವದ ವೇದನೆಗಿನ್ನು ಸ್ವಲ್ಪವೇ ದಿನ,
ನಿನಗಾಗುವ ಆ ನೋವಿಗೆ ಕಾದಿರುವೆ.
ಆ ನೋವ ನೀಡುವ ಮಗುವಾಗಿ ಬರಲು,
ನಾನು ನನ್ನ ಸಾವಿಗೆ ಕಾದಿರುವೆ.
ದಯವಿಟ್ಟು ಆಶಿರ್ವದಿಸು

ರಾಜೇಂದ್ರಕುಮಾರ್ ರಾಯಕೋಡಿ – Copyright©

Comments