ಶೈವಮತದ ಹಲವು ಮುಖಗಳು : ಭಾಗ ೧ - ಮುನ್ನುಡಿ, ಪರಿಚಯ, ಕಾಲಾಮುಖರು ಮತ್ತು ಕಾಪಾಲಿಕರು

ಶೈವಮತದ ಹಲವು ಮುಖಗಳು : ಭಾಗ ೧ - ಮುನ್ನುಡಿ, ಪರಿಚಯ, ಕಾಲಾಮುಖರು ಮತ್ತು ಕಾಪಾಲಿಕರು

      ಈ ಹಿಂದೆ ಸಂಪದದಲ್ಲಿ, "ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ" ಎನ್ನುವ ಲೇಖನ ಮಾಲಿಕೆಯನ್ನು ಸೇರಿಸಿದ್ದೆ. ಸಂಪದಿಗರ ನಿರಂತರ ಪ್ರೋತ್ಸಾಹ ಮತ್ತು ಅವರು ಎತ್ತಿದ ಕೆಲವು ಪ್ರಶ್ನೆಗಳಿಗೆ ಪೂರಕವಾಗಿ ನಮ್ಮ ಧರ್ಮದ ವಿವಿಧ ಮಜಲುಗಳನ್ನು ತಿಳಿಯಬೇಕೆನಿಸಿ ನನ್ನಲ್ಲಿರುವ ಪುಸ್ತಕಗಳನ್ನು ತಿರುವಿ ಹಾಕುತ್ತಿದ್ದಾಗ ನನ್ನ ಮನಸ್ಸನ್ನು ಹೊಕ್ಕದ್ದೇ 'Facets of Saivism - Swami Harshananda' ಎನ್ನುವ ಆಂಗ್ಲ ಭಾಷೆಯ ಪುಸ್ತಕ. ಈ ಪುಸ್ತಕವು ಸಣ್ಣ ಕೈಪಿಡಿಯ ರೂಪದಲ್ಲಿದ್ದು ಅತ್ಯಂತ ಪ್ರಬುದ್ಧ ಮತ್ತು ವಿದ್ವತ್ಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಇದರ ಅನುವಾದವನ್ನೂ ಕೈಗೊಂಡು ಸಂಪದಿಗರೊಂದಿಗೆ ಹಂಚಿಕೊಳ್ಳೋಣವೆಂದು ಕೊಂಡು ಶ್ರಾವಣ ಮಾಸದ ಈ ಶುಭ ಸಮಯದಲ್ಲಿ ಇದನ್ನು ನಿಮ್ಮ ಮುಂದಿಡುತ್ತಿದ್ದೇನೆ. ಈ ಕಾರ್ಯಕ್ಕೆ ಸ್ವಾಮಿ ಹರ್ಷಾನಂದರ ಆಶೀರ್ವಾದವೂ ನನ್ನ ಮೇಲಿರಲೆಂದು ಮತ್ತು ಭಗವಂತನ ಕೃಪೆ ತಮ್ಮೆಲ್ಲರಿಗೂ ದೊರೆಯಲೆಂದು ಈ ಮೂಲಕ ಪ್ರಾರ್ಥಿಸುತ್ತಿದ್ದೇನೆ. 

                                                                                     ಮುನ್ನುಡಿ

        ವೇದಕಾಲೀನ ನಂತರದ ಹಿಂದೂ ಧರ್ಮದಲ್ಲಿ ಭಗವಂತನ ರೂಪವನ್ನು ಶಿವ, ಶಕ್ತಿ (ದೇವಿ) ಮತ್ತು ವಿಷ್ಣು ಈ ಮೂರು ದೇವತೆಗಳ ಮುಖಾಂತರ ಬಿಂಬಿಸಲಾಗಿದೆ. 
 
      ಈ ಕಿರು ಪುಸ್ತಕದಲ್ಲಿ ಶೈವ ಸಿದ್ಧಾಂತದ ವಿವಿಧ ಮುಖಗಳನ್ನು ಮತ್ತು ಅದು ಒಳಗೊಂಡಿರುವ ವಿಷಯಗಳನ್ನು ಆದಷ್ಟೂ ಸರಳ ಭಾಷೆಯಲ್ಲಿ ಓದುಗನಿಗೆ ಪರಿಚಯ ಮಾಡಿಸುವ ಒಂದು ಪ್ರಯತ್ನವನ್ನು ಕೈಗೊಳ್ಳಲಾಗಿದೆ. 
 
        ಶೈವ ಮತಾನುಯಾಯಿಗಳಿಗೆ ಅವರ ಪಂಥದ ಬಗ್ಗೆ ಮೂಲಭೂತ ತಿಳುವಳಿಕೆಯನ್ನು ಕೊಡುವ ಉದ್ದೇಶವು ಈ ಪುಸ್ತಕದ ಆಶಯ. ಶೈವ ಮತಾನುಯಾಯಿಗಳಲ್ಲದವರೂ ಕೂಡಾ ಇವನ್ನು ತಿಳಿಯ ಬಯಸಿದರೆ ಅವರೂ ಕೂಡಾ ಈ ಮತದ ಬಗ್ಗೆ ತಲೆದೂಗುವಂತಹ ಒಂದಷ್ಟು ಮಾಹಿತಿಯನ್ನು ಗಳಿಸಿಕೊಳ್ಳಬಹುದು. 
 
           ಈ ಕೈಪಿಡಿಯನ್ನು ಕೂಡಾ ಹಿಂದೂ ಧರ್ಮದ ಬಗ್ಗೆ ತಿಳಿಯಲಿಚ್ಛಿಸುವ ವಿದ್ಯಾರ್ಥಿಗಳು ಹಿಂದಿನ ಪುಸ್ತಕಗಳಿಗೆ ತೋರಿದ ಆದರಣೆಯ ರೀತಿಯಲ್ಲಿಯೇ ಮುಂದುವರೆಸುತ್ತಾರೆಂದು ಆಶಿಸುತ್ತೇನೆ. 
                                                                                                                                                              -ಸ್ವಾಮಿ ಹರ್ಷಾನಂದ
---------------------------------------------------------------------------------------------
                                                                     ಪರಿಚಯ
          ಶೈವ ಮತವೆಂದರೆ ಯಾರು ಶಿವನನ್ನು ದೇವರೆಂದು ತಿಳಿದು, ಅವನನ್ನು ಪರಮಾತ್ಮನೆಂದು ನಂಬುತ್ತಾರೆಯೋ ಅವರು ಅನುಸರಿಸುವ ಧರ್ಮ ಮತ್ತು ತತ್ವವೆಂದು ಸರಳವಾಗಿ ಹೇಳಬಹುದು.   
 
         ವೇದಗಳಲ್ಲಿ ಪ್ರತಿಪಾದಿಸಿರುವ ಭಯಂಕರನಾದ ರುದ್ರ ಮತ್ತು ಅವೈದಿಕ (ಅನಾರ್ಯ) ಅಥವಾ ದ್ರಾವಿಡರಿಂದ ಮಂಗಳಕರನೆಂದು ಪರಿಗಣಿಸಲ್ಪಡುವ ಶಿವನು ಬೇರೆ ಬೇರೆಯೋ ಅಥವಾ ಇವರೀರ್ವರೂ ಶತಮಾನಗಳ ಕಾಲ ವಾದವಿವಾದ ಮಾಡಿ ಕಡೆಯಲ್ಲಿ ಸಂಧಾನ ಮಾಡಿಕೊಂಡು ಅವನನ್ನು ಒಬ್ಬನೇ ದೇವನೆಂದು ಒಪ್ಪಿಕೊಂಡು ಅದರಿಂದ  'ಶಿವ-ಮಹದೇವ' ಅಂದರೆ ಮಂಗಳಕರನಾದ ಮಹಾನ್ ದೇವನೆನ್ನುವ ಹೊಸ ದೈವದ ಉಗಮವಾಯಿತೋ ಎನ್ನುವುದು ಚರ್ಚಾಸ್ಪದ ವಿಷಯ. ಸಿಂಧೂ ಕಣಿವೆಯ ನಾಗರೀಕತೆಯನ್ನು ಹಿಂದೊಮ್ಮೆ ಅದು ಆರ್ಯಪೂರ್ವ, ಅವೈದಿಕ ಅಥವಾ ದ್ರಾವಿಡ ಸಂಸ್ಕೃತಿಯೆಂದು ತಿಳಿಯಲ್ಪಟ್ಟಿತ್ತು ಆದರೆ ಕಾಲಾನಂತರ ಅದು ವೈದಿಕ ಸಂಸ್ಕೃತಿಯ ಮುಂದುವರೆದ ಭಾಗವೆಂದು ಪರಿಗಣಿಸಲ್ಪಟ್ಟು; ವಾಸ್ತವವಾಗಿ ಮುಂದಿನ ಹಂತದಲ್ಲಿ, ವಿದ್ವಾಂಸರು ಅಲ್ಲಿ ದೊರೆತ ಕೆಲವೊಂದು ಮುದ್ರೆಗಳ ಮೇಲೆ ಎತ್ತು ಮತ್ತು ತ್ರಿಶೂಲದೊಂದಿಗೆ ಬಿಂಬಿತನಾಗಿರುವ ಶಿವನು ಮಾತೃ ದೇವತೆಯಂತೆಯೇ ವೇದಕಾಲೀನ ದೈವವೆಂದು ಒಪ್ಪಿಕೊಳ್ಳಬೇಕಾಯಿತು. 
 
         ಮುಂದಿನ ಕೃತಿಗಳಲ್ಲಿ ಶಿವನನ್ನು ಪ್ರಳಯಕಾರಕ ಮತ್ತು ಪ್ರಪಂಚವನ್ನು ಅಂತ್ಯಗೊಳಿಸುವವನೆಂದು ಚಿತ್ರಿಸಿದ್ದರಿಂದ ಅವನು ಭಯಂಕರನಾದ 'ರುದ್ರ'ನಾಗಬೇಕಾಯಿತು. ಆದ್ದರಿಂದ ಶಿವನನ್ನು ತನ್ನ ಮಕ್ಕಳಿಗೆ, ಸಂತತಿಗೆ, ಪಶುಗಳಿಗೆ ಮತ್ತು ಆಸ್ತಿಗಳೆಡೆಗೆ ಶುಭಪ್ರದನಾಗಿರೆಂದು ಋಗ್ವೇದದಲ್ಲಿ ಪ್ರಾರ್ಥಿಸಿರುವುದು ವಾಸ್ತವವಾಗಿ ಸರಿಯಾಗಿಯೇ ಇದೆ. ಅದು ಹೇಗೇ ಇರಲಿ, ಅವನಿಗೆ ಅಪಾಯಕಾರಿಯಲ್ಲದ ಉಪಕಾರಿಯಾದ ಶಂಭುವೆಂಬ ರೂಪವೂ ಇದ್ದು; ಅವನು ದೇವಲೋಕದ ವೈದ್ಯನಾಗಿದ್ದು ನಮ್ಮನ್ನು ರೋಗರುಜಿನಗಳಿಂದ ಗುಣಪಡಿಸುವುದಲ್ಲದೇ ನಮ್ಮ ಪಶುಗಳನ್ನೂ ಕಾಪಾಡುತ್ತಾನೆ. 
 
           ಅಥರ್ವ ವೇದ ಮತ್ತು ಶ್ವೇತಾಶ್ವತರ ಉಪನಿಷತ್ತಿನ (ಶ್ಲೋಕ ೧.೧೦; ೩.೨; ೪.೧೨,೨೧,೨೨; ೩.೧೪; ೪.೧೦) ಕಾಲಕ್ಕಾಗಲೇ ಅವನ ಪರಿಕಲ್ಪನೆ ಇನ್ನಷ್ಟು ವಿಸ್ತಾರವಾಗಿ ಅವನನ್ನು ಪರಮಾತ್ಮ ಅಥವಾ ಅತ್ಯುನ್ನತನಾದನೆಂದು ಪರಿಗಣಿಸಲಾಯಿತು. 
 
          ರುದ್ರಶಿವನ ಕಲ್ಪನೆಯ ಬೆಳವಣಿಗೆಯೊಂದಿಗೆ ಅವನ ಪ್ರತೀಕವಾದ 'ಲಿಂಗ'ವನ್ನು ಮುಖ್ಯವಾದ ಸಂಕೇತವೆಂಬ ಕಲ್ಪನೆಯೂ ವೃದ್ಧಿಯಾಯಿತು. ಲಿಂಗವು ಅರ್ಧಗೋಲಕಾರವಿರುವ ಕಂಬವನ್ನು ಹೋಲುತ್ತದೆ. ಲಿಂಗದ ಆಕಾರವು ಎಲ್ಲಾ ಕಡೆಯಿಂದಲೂ ದುಂಡಗಿರುವುದರಿಂದ, ಅದು ಬಹುಶಃ, ದೇವರು ಎಲ್ಲಾ ರೀತಿಯ ನಾಮರೂಪಗಳನ್ನು, ನಿರಾಕಾರ, ನಿರ್ವಿಶೇಷನೆಂದು ತಿಳಿಸುವ ಸ್ಥೂಲ ಕಲ್ಪನೆಯಾಗಿರಬಹುದು. ಆದರೆ ಕೆಲವು ವಿದ್ವಾಂಸರು ಅದನ್ನು ಯಾವುದೋ ಆದಿವಾಸಿ ಬುಡಕಟ್ಟಿನವರು ಶಿಶ್ನವನ್ನು ಪೂಜಿಸುತ್ತಿದ್ದ ಪದ್ಧತಿಯ ಪಳಯುಳಿಕೆ ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಅದನ್ನು ವೇದ ಕಾಲದಲ್ಲಿ ಬಳಸುತ್ತಿದ್ದ ಯೂಪಸ್ಥಂಭ ಅಥವಾ ಬಲಿ-ಕಂಬದ ಮಾರ್ಪಾಡಾದ ರೂಪವೆಂದು ತಿಳಿಸುತ್ತಾರೆ; ಏಕೆಂದರೆ ಯಾಗಶಾಲೆ (ಆಹುತಿ ಮಂಟಪ)ಗಳೇ ಕಾಲಕ್ರಮೇಣ ವಿಕಾಸಗೊಂಡು ಈಗ ಸಾಮಾನ್ಯವಾಗಿ ಕಂಡುಬರುವ ಹಿಂದೂ ದೇವಾಲಯಗಳಾಗಿ ಪರಿವರ್ತಿತಗೊಂಡಿವೆ. ಲಿಂಗವನ್ನು ಶಿಶ್ನದ ಪ್ರತೀಕವೆಂದು ಒಪ್ಪಿಕೊಂಡರೂ ಕೂಡಾ ಮೂರನೆಯ ವರ್ಗಕ್ಕೆ ಸೇರಿದ ಪಂಡಿತರು, ಅದು ಸೃಷ್ಟಿಕರ್ತನಾದ ಭಗವಂತನ ಉತ್ಪತ್ತಿ ಮಾಡುವ ಕ್ರಿಯೆಯನ್ನು ಪ್ರತಿನಿಧಿಸುತ್ತದೆಯಾದ್ದರಿಂದ ಅದರಲ್ಲಿ ತಪ್ಪೇನು ಇಲ್ಲವೆಂದು ಸಮರ್ಥಿಸುತ್ತಾರೆ. 
 
         ಶೈವಮತವು ಪ್ರಾರಂಭದಲ್ಲಿ ಶಿವನನ್ನು ಪರಮಾತ್ಮನೆಂದು ಒಪ್ಪಿಕೊಂಡು ಅವನನ್ನು ಸರಳ ನಂಬಿಕೆ ಮತ್ತು ಪೂಜಾವಿಧಾನಗಳಿಂದ ಆರಾಧಿಸುತ್ತಿದ್ದರೂ ಕೂಡಾ, ಶತಮಾನಗಳ ಕಾಲಾವಧಿಯಲ್ಲಿ ಅದು ಹಲವಾರು ಶಾಖೆಗಳು ಮತ್ತು ಉಪಪಂಗಡಗಳಾಗಿ ಕವಲೊಡೆಯಿತು. ಇವುಗಳಲ್ಲಿ ಆರು ಪಂಗಡಗಳು ಭಾರತೀಯ ಧಾರ್ಮಿಕ ಚರಿತ್ರೆಯಲ್ಲಿ ತಮ್ಮ ಚಿರಮುದ್ರೆಯನ್ನು ಒತ್ತಿದ್ದರೂ ಕೂಡಾ ಅವುಗಳಲ್ಲಿ ಎರಡು ಅಥವಾ ಮೂರು ಮಾತ್ರ ಇಂದಿಗೂ ಜೀವಂತವಾಗಿವೆ ಮತ್ತು ಪ್ರವರ್ಧಮಾನವಾಗಿವೆ. ಇವನ್ನು ಇಂಗ್ಲೀಷ ಅಕ್ಷರದ ಅನುಕ್ರಮಕ್ಕನುಗುಣವಾಗಿ ಪರಿಶೀಲಿಸೋಣ. 
-----------------------------------------------------------------------------------------------------
                                                                    ಕಾಲಾಮುಖರು
           ವೇದಗಳಲ್ಲಿನ ರುದ್ರನ ಭಯಂಕರ ವರ್ಣನೆಗಳಿಂದ ಪ್ರಭಾವಿತಗೊಂಡು ಹಲವಾರು ವಿಲಕ್ಷಣ ಪಂಗಡಗಳು ಕಾಲಾಂತರದಲ್ಲಿ ಹುಟ್ಟಿಕೊಂಡವು. ರುದ್ರ-ಶಿವನನ್ನು ಭೈರವ ಮತ್ತು ಚಂಡಿ ಎಂದು ಆರಾಧಿಸುವ ಕಾಲಾಮುಖರು ಮತ್ತು ಕಾಪಾಲಿಕರು ಅಂತಹ ಎರಡು ಪಂಗಡಗಳು. 
 
           ಕಾಲಾಮುಖರನ್ನು ಆ ಹೆಸರಿನಿಂದ ಕರೆಯಲು ಬಹುಶಃ ಅವರು ಕಪ್ಪು ಸಂಕೇತ ಮತ್ತು ಪ್ರತೀಕಗಳಿಂದ ತಮ್ಮ ಮುಖ-ಚಹರೆಗಳನ್ನು ವಿರೂಪಗೊಳಿಸಿಕೊಳ್ಳುತ್ತಿದ್ದುದೇ ಕಾರಣವಿರಬಹುದು. 
 
          ಶೈವತತ್ವದ ವಿದ್ವಾಂಸರು ಕಾಲಾಮುಖ ಪಂಗಡವನ್ನು, 'ಲಕುಲೀಶ' ಅಥವಾ 'ನಕುಲೀಶ'ನ 'ಪಾಶುಪತ ಮತ'ದಿಂದ ಆವಿರ್ಭವಿಸಿದ ಶಾಖೆಯಿರಬೇಕೆಂದು ಪರಿಗಣಿಸುತ್ತಾರೆ. 
 
           ಈ ಕಾಲಾಮುಖರು (ಕೆಲವೊಮ್ಮೆ ಎಕ್ಕೋಟಿ ಮುನಿಗಳೆಂದು ಕರೆಯುವುದುಂಟು) ಕಾಶ್ಮೀರದ ದೇವವ್ರತ ಮುನಿಯ ಅನುಯಾಯಿಗಳಿಗೆ ಸಂಭಂದಿಸಿದವರಿರಬೇಕು. ಕಾಲಾಮುಖರು ಕ್ರಿ.ಶ. ೭೦೦-೧೨೦೦ರ ಮಧ್ಯಕಾಲದಲ್ಲಿ ಆಂಧ್ರ ಪ್ರದೇಶ ಮತ್ತು ಕರ್ನಾಟಕಗಳಲ್ಲಿ ಬಹಳಷ್ಟು ಶಕ್ತಿಶಾಲಿಗಳಾಗಿದ್ದರು. ಕರ್ನಾಟಕದ ಶಿವಮೊಗ್ಗಾ ಜಿಲ್ಲೆಯಲ್ಲಿರುವ ಕೇದಾರೇಶ್ವರ ದೇವಸ್ಥಾನ ಮತ್ತು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿರುವ ಶ್ರೀಶೈಲ ದೇವಾಲಯ ಪಟ್ಟಣಗಳು ಇವರ ಪ್ರಮುಖ ನೆಲೆಗಳಾಗಿದ್ದವು. ಚಾಲುಕ್ಯ ರಾಜರ (ಕ್ರಿ. ಶಕ ೧೧ನೆಯ ಶತಮಾನದ) ಶಿಲಾಶಾಸನಗಳು ಕಾಲಾಮುಖರಿಗೆ ರಾಜಾಶ್ರಯ ನೀಡಿದ್ದವು ಎಂದು ಸಾರುತ್ತವೆ. ಅವರ ಗುರುವೊಬ್ಬನಾದ ಸರ್ವೇಶ್ವರ ಶಕ್ತಿದೇವನ ಒಡೆತನದಲ್ಲಿ ೭೭ ಗುಡಿಗಳು ಇದ್ದವು ಎಂದು ತಿಳಿದು ಬರುತ್ತದೆ. ಅವರುಗಳು ಶಿಸ್ತುಬದ್ಧ ಜೀವನ ಕ್ರಮಕ್ಕೆ ಮತ್ತು ವಿದ್ವತ್ ಪಾಂಡಿತ್ಯಕ್ಕೆ ಹೆಸರಾಗಿದ್ದರು. 
 
           ಆದರೆ ಕೆಲವು ಘೋರವೆನಿಸುವ ಪದ್ಧತಿಗಳಾದ ಮಾನವನ ತಲೆಬುರುಡೆಯಲ್ಲಿ ಮದ್ಯವನ್ನು ಸೇವಿಸುವುದು, ಸ್ಮಶಾನಗಳ ಬೂದಿಯನ್ನು ಮೈಯಿಗೆ ಬಳಿದುಕೊಳ್ಳುವುದು, ನರಮಾಂಸ ಭಕ್ಷಣೆ ಮತ್ತು ಅನೈತಿಕ ಜೀವನ ವಿಧಾನಗಳು ಅವರನ್ನು ಸಾಮಾಜಿಕ ಬಹಿಷ್ಕರಣೆಗೆ ಗುರಿಮಾಡಿದವು. 
 
            ಕಾಲಾಮುಖ ಪದ್ಧತಿಯ ಬೋಧಕರು ಎರಡು ಗುಂಪುಗಳಾಗಿ ವಿಭಜಿಸಲ್ಪಟ್ಟಿದ್ದರು, ಅವೆಂದರೆ - ರಾಶಿ ಮತ್ತು ಶಕ್ತಿ. 
 
          ಕಾಲಾಮುಖರ ಪ್ರಸಿದ್ಧ ಬೋಧಕನಾದ ರಾಜರಾಜಗುರು (ಕ್ರಿ.ಶ. ೧೩೭೦ ಆಸುಪಾಸಿನವನು) ಎನ್ನುವವನು ಯತಿ ವಿದ್ಯಾರಣ್ಯ (ಕ್ರಿ.ಶ. ೧೪ನೇ ಶತಮಾನ) ಇವರ ಸಮಕಾಲೀನನಾಗಿದ್ದನು. 
-----------------------------------------------------------------------------------
                                                                       ಕಾಪಾಲಿಕರು
 
        ಕಾಪಾಲಿಕರೆಂಬ ಶಕ್ತಿಯುತವಾದ ಶೈವ ಪಂಗಡದವರಿಗೆ ಆ ಹೆಸರು ಬರಲು ಕಾರಣವೇನೆಂದರೆ ಅವರು ತಮ್ಮ ಭಿಕ್ಷಾ ಪಾತ್ರೆಯನ್ನಾಗಿ ಕಪಾಲ ಅಥವಾ ಮಾನವನ ತಲೆಬುರುಡೆಯನ್ನು ಉಪಯೋಗಿಸುತ್ತಿದ್ದದ್ದು. ಅವರು ಮನುಷ್ಯರ ತಲೆಬುರುಡೆಗಳಿಂದ ಮಾಡಿದ ಹಾರವನ್ನು ತಮ್ಮ ಕೊರಳಿನಲ್ಲಿ ಧರಿಸುತ್ತಿದ್ದದ್ದೂ ಇನ್ನೊಂದು ಕಾರಣ. ಅವರು ೭ನೇ ಶತಮಾನದ ನಂತರ ಸುಮಾರು ೫೦೦ ವರ್ಷಗಳ ಕಾಲ ಆಂಧ್ರ ಪ್ರದೇಶದ ಶ್ರೀಶೈಲ ಪ್ರಾಂತ್ಯದಲ್ಲಿ ಹಾಗೂ ತಮಿಳುನಾಡಿನ ಕೆಲವು ಭಾಗಗಳಾದ ಕಾಂಚೀಪುರ, ತಿರುವೊಟ್ರಿಯೂರ್, ಮೆಲ್ಪಾಡಿ ಮತ್ತು ಕೊಡುಂಬಾಲೂರ್ ಪ್ರಾಂತಗಳಲ್ಲಿ ಬಹಳ ಕ್ರಿಯಾಶೀಲರಾಗಿ ಮತ್ತು ಬಲಶಾಲಿಗಳಾಗಿದ್ದರು. ಭೈರವ ಮತ್ತು ಚಂಡಿಯ ಆರಾಧನೆ, ಮದ್ಯಸೇವನೆ, ಮಾನವ ಮಾಂಸ ಭಕ್ಷಣೆ, ಬೂದಿಯಿಂದ ಮೈಯ್ಯನ್ನು ಬಳಿದುಕೊಳ್ಳುವುದು, ಮಂತ್ರದಂಡವನ್ನು ಆಯುಧದಂತೆ ಹಿಡಿದು ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದದ್ದು ಮತ್ತು ಸ್ವಚ್ಛಂದ/ಮುಕ್ತ/ವಿವೇಚನಾರಹಿತ ಲೈಂಗಿಕತೆ ಇವೆಲ್ಲಾ ಆ ಪಂಗಡದ ಅನುಯಾಯಿಗಳಲ್ಲಿ ಸರ್ವೇಸಾಮಾನ್ಯವಾಗಿದ್ದವು. 
 
            ಶಬರತಂತ್ರ ಎನ್ನುವ ಕೃತಿಯ ಪ್ರಕಾರ ಆದಿನಾಥನಿಂದ ಹಿಡಿದು ಮಲಯಾರ್ಜುನನವರೆಗೆ ಈ ಪಂಥದಲ್ಲಿ ೨೪ ಬೋಧಕರಿದ್ದರು. ಕಾಪಾಲಿಕರು ವೈಷ್ಣವ ಧರ್ಮದ ಉಗ್ರ ವ್ಯತಿರೇಕಿಗಳಾಗಿದ್ದರು. 
------------------------------------------------------------------------------------
ವಿ.ಸೂ. ಇದು 'Facets of Saivism - Swami Harshananda' ಎನ್ನುವ ಆಂಗ್ಲ ಭಾಷೆಯ ಪುಸ್ತಕದ ಅನುವಾದದ ಭಾಗ. ಪ್ರಕಟಣೆ ಶ್ರೀ ರಾಮಕೃಷ್ಣ ಆಶ್ರಮ, ಬೆಂಗಳೂರು (ಪುಟಗಳು ೩ ಮತ್ತು ೯ರಿಂದ ೧೭)
----------------------------------------------------------------------------------------------------
 
                                                                                   ಮುಂದುವರೆಯುವುದು..........
 
 
 
 
 

 

Rating
Average: 5 (1 vote)

Comments