ವ್ಯೂಹ(ಪತ್ತೇದಾರಿ ಕಾದಂಬರಿ)-ಅಧ್ಯಾಯ-5

ವ್ಯೂಹ(ಪತ್ತೇದಾರಿ ಕಾದಂಬರಿ)-ಅಧ್ಯಾಯ-5

ರಘು ಆ ಬಟ್ಟೆಯನ್ನು ತೆಗೆದುಕೊಂಡು ಸೀದಾ ಕೆ ಸಿ ಜೆನೆರಲ್ ಆಸ್ಪತ್ರೆಗೆ ನಡೆದನು.ಅಲ್ಲಿದ್ದ ಡಾಕ್ಟರ ಗೆ ಆ ಬಟ್ಟೆಯನ್ನು ನೀಡಿ ಅದನ್ನು ವಿವರವಾಗಿ ಪರಿಶೀಲಿಸಿ ರಿಪೋರ್ಟ್ ತಯಾರು ಮಾಡುವಂತೆ ತಿಳಿಸಿದನು.ಒಂದು ವಾರದ ನಂತರ ಬಂದ ಆ ರಿಪೋರ್ಟಿನಲ್ಲಿ ಒಂದು ಅಚ್ಚರಿಯಾದಂತಹ ವಿಷಯ ಕಾದಿತ್ತು.ಅದೇನೆಂದರೆ ಆ ಬಟ್ಟೆಯಲ್ಲಿದ್ದ ರಕ್ತದ ಕಲೆಗಳು ಕೇವಲ ವಿನಯನದ್ದಷ್ಟೇ ಆಗಿರಲಿಲ್ಲ.ಅದರಲ್ಲಿ ವಿನಯನ ರಕ್ತದ ಕಲೆಗಳ ಜೊತೆ ಇನ್ನೊಬ್ಬ ವ್ಯಕ್ತಿಯ ರಕ್ತದ ಕಲೆಗಳೂ ಇದ್ದವು.ಇದರಿಂದ ರಘುವಿಗೆ,ವಿನಯನ ಕೊಲೆಯ ಮೊದಲು ಅವನು ಇನ್ನೊಬ್ಬ ವ್ಯಕ್ತಿಯ ಜೊತೆ ಹೊಡೆದಾಡಿದ್ದಾನೆ.ಆ ಹೊಡೆದಾಟದಲ್ಲಿ ಇನ್ನೊಬ್ಬ ವ್ಯಕ್ತಿಗೂ ಕೂಡ ಗಾಯಗಳಾಗಿವೆ ಮತ್ತು ಆ ವ್ಯಕ್ತಿಯೇ ವಿನಯನ ಕೊಲೆ ಮಾಡಿದ್ದಾನೆ,ಎಂಬ ವಿಷಯ ಸ್ಪಷ್ಟವಾಯಿತು.ಆ ವ್ಯಕ್ತಿ ಯಾರಿರಬಹುದು ? ಎಂದು ಯೋಚಿಸಿದ ರಘು,ವಿನಯನ ಹಾಸ್ಟೆಲಿಗೆ ಹೋಗಿ,ಅವನ ಸ್ನೇಹಿತರನ್ನು ಆ ರಾತ್ರಿ ಏನು ನಡೆಯಿತು ? ಎಂದು ವಿಚಾರಿಸಬೇಕೆಂದು ನಿರ್ಧರಿಸಿದನು.

ರಘು ವಿನಯನ ಹಾಸ್ಟೆಲಿಗೆ ಹೋಗಿ,ಅವನ ಸ್ನೇಹಿತರ ಹತ್ತಿರ ಆ ರಾತ್ರಿ ನಡೆದ ವಿವರಗಳನ್ನು ತಿಳಿಸುವಂತೆ ಕೇಳಿಕೊಂಡನು.ಅವನ ಸ್ನೇಹಿತರಿಂದ ರಘುವಿಗೆ ತಿಳಿದು ಬಂದ ವಿಷಯಗಳೆನೆಂದರೆ,ಆ ರಾತ್ರಿ ಸುಮಾರು ಹತ್ತು ಗಂಟೆಯ ಸಮಯ ಹಾಸ್ಟೆಲಿನಲ್ಲಿ ಎಲ್ಲ ಹುಡುಗರೂ ಮರುದಿನ ಪರೀಕ್ಷೆ ಇದ್ದಿದರಿಂದ ಓದಿನಲ್ಲಿ ಮಗ್ನರಾಗಿದ್ದರು.ಆಗ ಯಾರೋ ಹಾಸ್ಟೆಲಿನ ವರಾಂಡದಲ್ಲಿ ಜೋರಾಗಿ ನಡೆದುಕೊಂಡು ಹೋಗಿದ್ದು ಕೇಳಿಸಿತು.ಹಾಗೆಯೇ ಆ ವ್ಯಕ್ತಿ ನಡೆದುಕೊಂಡು ಹೋಗಿ ವಿನಯನ ಕೋಣೆಯನ್ನು ಸೇರಿಕೊಂಡಿತು.ಸ್ವಲ್ಪ ಸಮಯದ ನಂತರ ವಿನಯನ ಕೋಣೆಯ ಬಾಗಿಲು "ಧಡ್" ಎಂದು ಶಬ್ದ ಮಾಡಿಕೊಂಡು ಮುಚ್ಚಲ್ಪಟ್ಟಿತು.ಸ್ವಲ್ಪ ಹೊತ್ತಿನಲ್ಲಿಯೇ ವಿನಯನ ಕೋಣೆಯಿಂದ ಜೋರಾದ ಮಾತುಗಳು ಕೇಳಿಬಂದವು.ಆ ಮಾತುಗಳಿಂದ ವಿನಯ ಮತ್ತು ಅವನ ಕೋಣೆಯ ಸಹಪಾಟಿ ಮನುವಿನ ನಡುವೆ ಯಾವುದೋ ಕಾರಣಕ್ಕಾಗಿ ಜಗಳ ನಡೆಯುತ್ತಿದೆ ಎಂದು ಗೊತ್ತಾಯಿತು.ಆದರೆ ಎಲ್ಲ ಹುಡುಗರೂ ಓದಿನಲ್ಲಿ ಮಗ್ನರಾಗಿದ್ದುದರಿಂದ ಈ ಜಗಳದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ.ಆಮೇಲೆ ಸ್ವಲ್ಪ ಹೊತ್ತಿನ ನಂತರ ಆ ರೂಮಿನಿಂದ ಯಾರೋ ಒಬ್ಬರು ಹೊರಗೆ ಓಡಿದ ಸದ್ದು ಕೇಳಿಸಿತು.ನಂತರ ಆ ವ್ಯಕ್ತಿಯ ಹಿಂದೆ ಇನ್ನೊಬ್ಬ ವ್ಯಕ್ತಿಯೂ ಕೂಡ ಓಡಿ ಹೋದ ಸದ್ದು ಕೇಳಿಸಿತು.ನಂತರ ಹಾಸ್ಟೆಲ್ ಶಾಂತವಾಯಿತು.ಎಲ್ಲ ಹುಡುಗರು ಬೆಳಗ್ಗೆ ಎದ್ದಾಗ ಹಾಸ್ಟೆಲಿನ ಬಳಿ ತುಂಬಾ ಜನರು ಸೇರಿದ್ದರು.ಅದರ ಬಗ್ಗೆ ವಿಚಾರಿಸಿದಾಗಲೇ ಎಲ್ಲರಿಗೂ ವಿನಯನ ಕೊಲೆಯ ವಿಷಯ ತಿಳಿದದ್ದು.

ಈ ವಿವರಗಳನ್ನು ಕೇಳಿದ ರಘು,ಆ ದಿನ ವಿನಯ ಮತ್ತು ಮನುವಿನ ನಡುವೆ ನಡೆದ ಜಗಳವೇ ಈ ಕೊಲೆಗೆ ಕಾರಣವಿರಬಹುದೆಂದು ಊಹಿಸಿದನು.ರಘು ಮನುವಿನ ಬಗ್ಗೆ ವಿಚಾರಿಸಿದಾಗ,ಮನು ಕೊಲೆಯಾದ ದಿನದಿಂದ ಹಾಸ್ಟೆಲಿಗೆ ಆಗಲಿ ಅಥವಾ ಕಾಲೇಜಿಗೆ ಆಗಲಿ ಬಂದಿಲ್ಲವೆಂದು ತಿಳಿಯಿತು.ಇದರಿಂದ ರಘುವಿಗೆ ಮನುವಿನ ಮೇಲಿದ್ದ ಅನುಮಾನ ಬಲವಾಯಿತು.ರಘು ಮೊದಲು ವಿನಯ ಮತ್ತು ಮನುವಿನ ನಡುವೆ ಯಾವ ಕಾರಣಕ್ಕಾಗಿ ಜಗಳ ನಡೆದಿರಬಹುದೆಂದು ಯೋಚಿಸಿದನು.ವಿನಯನ ಸ್ನೇಹಿತರಿಗೆ ಈ ಬಗ್ಗೆ ಕೇಳಿದಾಗ ಅವರು ತಮಗೆ ಅದರ ಬಗ್ಗೆ ಏನೂ ತಿಳಿದಿಲ್ಲವೆಂದು ಹೇಳಿದರು.ವಿನಯನ ಕೊಲೆಯಾಗುವದಕ್ಕಿಂತ ಮೊದಲು,ವಿನಯ ಮತ್ತು ಮನು ಕೋಣೆಯಲ್ಲಿ ಜಗಳವಾಡಿದ್ದಾರೆ.ಅಂದರೆ ಆ ಕೋಣೆಯಲ್ಲಿಯೇ ಏನಾದರು ಸುಳುಹು ಸಿಗಬಹುದೆಂದು ರಘು ಯೋಚಿಸಿದನು.ಆ ಕೋಣೆಯ ಬಗ್ಗೆ ವಿಚಾರಿಸಿದಾಗ,ಆ ಕೋಣೆಗೆ ಕೊಲೆಯಾದ ಮರುದಿನವೇ ಬೀಗ ಹಾಕಲಾಯಿತೆಂದು ತಿಳಿಯಿತು.ಆದರೂ ಆ ಕೋಣೆಯನ್ನು ಪರಿಶೀಲಿಸಿ ಏನಾದರೂ ವಿವರಗಳು ದೊರೆಯಬಹುದೇ ಎಂದು ಹುಡುಕಲು ರಘು ನಿರ್ಧರಿಸಿದನು.

ರಘು ವಿನಯನ ಕೋಣೆಯ ಬೀಗವನ್ನು ತೆರೆದು ಆ ಕೋಣೆಯನ್ನು ವಿವರವಾಗಿ ಪರಿಶೀಲಿಸತೊಡಗಿದನು.ಆ ಕೋಣೆಯಲ್ಲಿ ಎರಡು ಮಂಚಗಳು,ಎರಡು ಮೇಜು,ಎರಡು ಕುರ್ಚಿ ಮತ್ತು ಪುಸ್ತಕ ಮತ್ತು ಬಟ್ಟೆಗಳನ್ನು ಇಡಲು ಎರಡು ಕಪಾಟುಗಳಿದ್ದವು.ರಘು ಎಡ ಭಾಗದ ಮೇಜು ಕುರ್ಚಿಗಳನ್ನು ಪರಿಶೀಲಿಸಿದನು.ಎಡ ಭಾಗದ ಮೇಜಿನಲ್ಲಿದ್ದ ಪುಸ್ತಕಗಳನ್ನು ನೋಡಿದಾಗ ಅವುಗಳ ಮೇಲೆ ವಿನಯನ ಹೆಸರನ್ನು ಬರೆಯಲಾಗಿತ್ತು .ಅಂದರೆ ಕೋಣೆಯ ಎಡ ಭಾಗ ವಿನಯನಿಗೆ ಸೇರಿದ್ದು ಮತ್ತು ಬಲ ಭಾಗ ಮನುವಿಗೆ ಸೇರಿದ್ದು ಎಂದು ರಘುವಿಗೆ ತಿಳಿಯಿತು.ಹಾಗೆಯೇ ರಘು ಬಲ ಭಾಗದ ಮೇಜು ಕುರ್ಚಿಗಳನ್ನು ಪರಿಶೀಲಿಸಿದನು.ಬಲಭಾಗದ ಮೇಜಿನ ಮೇಲೆಯೂ ಕೆಲವು ಪುಸ್ತಕಗಳಿದ್ದವು.ಅವುಗಳಿಂದ ಯಾವ ವಿವರಗಳೂ ದೊರೆಯಲಿಲ್ಲ.ಹಾಗೆಯೇ ರಘು ವಿನಯನ ಕಪಾಟನ್ನು ತೆರೆದು ನೋಡಿದನು.ಅಲ್ಲಿ ವಿನಯನ ಕೆಲವು ಬಟ್ಟೆಗಳಿದ್ದವು.ಬಟ್ಟೆಗಳ ಜೊತೆ ದೇವರ ಚಿತ್ರಪಟಗಳೂ,ಪೆನ್ನು ಇತ್ಯಾದಿಗಳಿದ್ದವು.ಆ ಕಪಾಟಿನ ಕೆಳಗಡೆಯ ಸಾಲಿನಲ್ಲಿ ಕಂಡು ಬಣ್ಣದ ಕವರ್ ಒಂದು ಬಿದ್ದಿತ್ತು.ಆ ಕವರನ್ನು ತೆಗೆದುಕೊಂಡು ಪರಿಶೀಲಿಸಿದಾಗ,ಆ ಕವರಿನಲ್ಲಿ ಒಂದು ಸುಂದರವಾದ ಹುಡುಗಿಯ ಫೋಟೋ ಕಂಡುಬಂದಿತು.ಆ ಫೋಟೋ ಹಿಂಭಾಗದಲ್ಲಿ "ಸುಜಾತ..ಐ ಲವ್ ಯು...ಫ್ರಂ ವಿನಯ್" ಎಂದು ಬರೆದಿತ್ತು.ಅಂದರೆ ವಿನಯ ಸುಜಾತ ಎಂಬ ಹುಡುಗಿಯ ಪ್ರೇಮಪಾಶದಲ್ಲಿ ಸಿಲುಕಿದ್ದ ಎಂಬ ವಿಷಯ ರಘುವಿಗೆ ತಿಳಿಯಿತು.ಅದರ ಜೊತೆಗೆ ಈ ಹುಡುಗಿಯೂ ಕೂಡ ಕೊಲೆಗೆ ಕಾರಣವಿರಬಹುದೆಂದು ಶಂಕಿಸಿ ರಘು ಆ ಕವರನ್ನು ತನ್ನ ಬಳಿ ಇರಿಸಿಕೊಂಡನು.ರಘು ಮನುವಿನ ಕಪಾಟನ್ನು ತೆರೆದಾಗ ಅವನಿಗೆ ಶಾಕ್ ಹೊಡೆದಂತಾಯಿತು.ಆ ಕಪಾಟು ಖಾಲಿಯಾಗಿತ್ತು.ಅಂದರೆ ಆ ಕಪಾಟಿನಲ್ಲಿ ಕೊಲೆಗೆ ಸಂಬಂಧಪಟ್ಟ ವಿವರಗಳಿದ್ದುದರಿಂದ ಆ ಕಪಾಟನ್ನು ಖಾಲಿ ಮಾಡಲಾಗಿದೆ ಎಂದು ರಘುವಿಗೆ ಸ್ಪಷ್ಟವಾಗಿಹೋಗಿತ್ತು.ಕೊಲೆಗಾರ ತುಂಬಾ ಚಾಣಾಕ್ಷತನ ಉಪಯೋಗಿಸಿ ಕೊಲೆಯ ಮುಂಚೆಯೇ ಅಥವಾ ಕೊಲೆಯಾದ ನಂತರ ಎಲ್ಲ ಸಾಕ್ಷ್ಯಗಳನ್ನು ನಾಶಪಡಿಸಿದ್ದನು.ಹಾಗೆಯೇ ರಘು ಮಂಚಗಳ ಕೆಳಗಡೆ ಏನಾದರೂ ಸುಳುಹು ಸಿಗಬಹುದೇ ಎಂದು ಪರಿಶೀಲಿಸಿದನು.ಮಂಚಗಳ ಕೆಳಗಡೆ ಅಲ್ಲಲ್ಲಿ ಏನೋ ಒಂದು ಬಿಳಿಯ ಪುಡಿ ಚೆಲ್ಲಿದ್ದು ಕಂಡುಬಂದಿತು.ಆ ಪುಡಿಯನ್ನು ಪರೀಕ್ಷಿದಾಗ ಅದು ಗಾಂಜಾ ಎಂದು ತಿಳಿಯಿತು.ಇದರಿಂದ ರಘುವಿಗೆ ಈ ಕೊಲೆಯ ಸಮಸ್ಯೆ ತುಂಬಾ ಜಟಿಲವಾಗತೊಡಗಿದೆ ಎನ್ನಿಸಿತು.ಈ ಕೊಲೆಯ ಹಿಂದೆ ಡ್ರಗ್ ಮಾಫಿಯ ಅಡಗಿರುವದು ರಘುವಿಗೆ ಅತ್ಯಂತ ಸ್ಪಷ್ಟವಾಗಿ ತಿಳಿಯಿತು.ರಘು ಹೇಗಾದರೂ ಮಾಡಿ ಮನುವನ್ನು ಪತ್ತೆ ಹಚ್ಚಬೇಕೆಂದು ನಿರ್ಧರಿಸಿದನು.

ರಘು ವಿನಯನ ಕೋಣೆಯಿಂದ ಹೊರಬಂದು ವಿನಯನ ಸ್ನೇಹಿತರಿಗೆ ಸುಜಾತಳ ಬಗ್ಗೆ ವಿಚಾರಿಸಿದನು.ವಿನಯನ ಸ್ನೇಹಿತರು,ಸುಜಾತ ಮತ್ತು ವಿನಯ ಪರಸ್ಪರ ಪ್ರೀತಿಸುತ್ತಿದ್ದರು.ಸುಜಾತ ಇಲ್ಲೇ ಲೇಡಿಸ್ ಹಾಸ್ಟೆಲಿನಲ್ಲಿ ವಾಸವಾಗಿದ್ದಾಳೆ ಎಂದು ತಿಳಿಸಿದರು.ರಘು ಲೇಡಿಸ್ ಹಾಸ್ಟೆಲಿಗೆ ಹೋಗಿ ಸುಜಾತಳನ್ನು ಕಂಡು ಅವಳಿಗೇನಾದರೂ ಮನುವಿನ ಬಗ್ಗೆ ಗೊತ್ತಿದೆಯೇ ಎಂದು ವಿಚಾರಿಸಲು ನಿರ್ಧರಿಸಿದನು.ರಘು ಲೇಡಿಸ್ ಹಾಸ್ಟೆಲಿಗೆ ಹೋಗಿ ಸುಜಾತಳ ಬಗ್ಗೆ ವಿಚಾರಿಸಿದಾಗ ಅವಳು ಸ್ವಲ್ಪ ದಿನಗಳ ಹಿಂದೆ ತನ್ನ ಸ್ವಂತ ಊರಾದ ಹಾಸನಕ್ಕೆ ಹೋಗಿರುವ ವಿಷಯ ತಿಳಿಯಿತು.ರಘು ಸುಜಾತಳ ವಿಳಾಸ ಪಡೆದು ಹಾಸನಕ್ಕೆ ಹೋಗಿ ಅವಳ ವಿಚಾರಣೆ ನಡೆಸಬೇಕೆಂದು ನಿರ್ಧರಿಸಿದನು.ಯಾವಾಗ ರಘು ಸುಜಾತಳ ಹಾಸ್ಟೆಲಿನ ಕದ ತಟ್ಟಿದನೋ ಆವಾಗಲೇ ಅವನನ್ನೇ ಹಿಂಬಾಲಿಸುತ್ತಿದ್ದ ಕಣ್ಣುಗಳು ಕೋಪದಿಂದ ಉರಿಯತೊಡಗಿದವು.ರಘುವಿಗೆ ತನ್ನನ್ನೇ ಹಿಂಬಾಲಿಸುತ್ತಿರುವ ಕಣ್ಣುಗಳ ಬಗ್ಗೆ ಸ್ವಲ್ಪವೂ ಸುಳಿವಿರಲಿಲ್ಲ.
***************************************************************************************************************
ಅಧ್ಯಾಯ -5 - ಮುಗಿಯಿತು
ಅಧ್ಯಾಯ -6 - ನಾಳೆ
ಅಧ್ಯಾಯ -4 - ಕ್ಕೆ  ಲಿಂಕ್

http://sampada.net/%E0%B2%B5%E0%B3%8D%E0%B2%AF%E0%B3%82%E0%B2%B9-%E0%B2%AA%E0%B2%A4%E0%B3%8D%E0%B2%A4%E0%B3%87%E0%B2%A6%E0%B2%BE%E0%B2%B0%E0%B2%BF-%E0%B2%95%E0%B2%BE%E0%B2%A6%E0%B2%82%E0%B2%AC%E0%B2%B0%E0%B2%BF-%E0%B2%85%E0%B2%A7%E0%B3%8D%E0%B2%AF%E0%B2%BE%E0%B2%AF-4

Comments