ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ
ಕಾಶ್ಮೀರ ಶೈವತತ್ವ
ಪರಿಚಯ
ಶೈವಮತವು ಭಾರತದ ಪ್ರಾಚೀನವಾದ ಧರ್ಮಾಧಾರಿತ ಆಧ್ಯಾತ್ಮಿಕ ಪದ್ಧತಿಯಾದರೂ, ಕಾಶ್ಮೀರದ ಕೆಲವು ಅಸಾಧಾರಣ ವಿದ್ವತ್ತಿನಿಂದ ಕೂಡಿದ ಮತ್ತು ಜ್ಞಾನಿಗಳಾದ ಬೋಧಕರು ಅವರ ಛಾಪಿನ ಸಿದ್ಧಾಂತವನ್ನು ಪ್ರಾಚುರ್ಯಪಡಿಸಿದರು. ಈ ಪದ್ಧತಿಯೇ ಮುಂದೆ 'ಕಾಶ್ಮೀರ ಶೈವತತ್ವ.' ಎಂದು ತತ್ವಶಾಸ್ತ್ರದ ದಾಖಲೆಗಳಲ್ಲಿ ಪ್ರಸಿದ್ಧಿ ಪಡೆಯಿತು. ಆದರೆ ಇದಕ್ಕೆ ಸೂಕ್ತವಾದ ತಾಂತ್ರಿಕ/ಪಾರಿಭಾಷಿಕ ಶಬ್ದ ಮತ್ತು ಒಪ್ಪಬಹುದಾದಂತ ಪದವೆಂದರೆ 'ಪ್ರತ್ಯಭಿಜ್ಞಾನದರ್ಶನ'.
ಮೂಲ ಸಾಹಿತ್ಯ
ಕಾಶ್ಮೀರ ಶೈವತತ್ವದ ಮೂಲ ಸಾಹಿತ್ಯವು ’ಸ್ವಚ್ಛಂದ’, ’ನೇತ್ರ’ ಮತ್ತು ’ವಿಜ್ಞಾನಭೈರವ’ ಮೊದಲಾದ ’ಆಗಮ’ ಗ್ರಂಥಗಳಾದರೂ ಕೂಡಾ ಪ್ರಮುಖವಾದ ಕೃತಿಗಳು ತದನಂತರ ಬಂದ ರಚನಕಾರರಿಂದ ರಚಿಸಲ್ಪಟ್ಟವು. ಅವುಗಳಲ್ಲಿ ಈ ಕೆಳಗಿನವು ಪ್ರಧಾನವಾಗಿವೆ: ’ಶಿವಸೂತ್ರ’ (ಕ್ರಿ.ಶ. ೯ನೇ ಶತಮಾನದಲ್ಲಿ ವಸುಗುಪ್ತನಿಗೆ ಉಪದೇಶಿಸಲ್ಪಟ್ಟಿದ್ದು), ವಸುಗುಪ್ತನ ’ಸ್ಪಂದಸೂತ್ರ’, ಕಲ್ಲಠನ (ವಸುಗುಪ್ತನ ಪ್ರಮುಖ ಶಿಷ್ಯ) ’ಸ್ಪಂದಸೂತ್ರಾವೃತ್ತಿ’, ಸೋಮಾನಂದನ (ಕ್ರಿ.ಶ. ೯ನೇ ಶತಮಾನ) ’ಶಿವದೃಷ್ಟಿ’ ಮತ್ತು ಉತ್ಪಲನ (ಕ್ರಿ.ಶ. ೯೦೦) ’ಈಶ್ವರಪ್ರತ್ಯಭಿಜ್ಞಾ’.
ತದನಂತರ ಬಂದ ರಚನಕಾರರಲ್ಲಿ ಅಭಿನವಗುಪ್ತನು (ಕ್ರಿ.ಶ. ೯೫೦-೧೦೦೦) ಅತ್ಯಂತ ಮೇಧಾವಿಯಾಗಿದ್ದನು. ಉತ್ಪಲನ ’ಈಶ್ವರಪ್ರತ್ಯಭಿಜ್ಞಾ’ ಕೃತಿಯ ಮೇಲೆ ಅವನು ಬರೆದ ವೃತ್ತಿ ಮತ್ತು ಸ್ವತಂತ್ರವಾಗಿ ರಚಿಸಿದ ’ತಂತ್ರಾಲೋಕ’ ಮತ್ತು ’ಪರಮಾರ್ಥಸಾರ’ ಇವುಗಳು ಅವನನ್ನು ಕಾಶ್ಮೀರ ಶೈವತತ್ವದ ದಾಖಲೆಗಳಲ್ಲಿ ಚಿರಸ್ಥಾಯಿಯನ್ನಾಗಿಸಿವೆ.
ಕ್ಷೇಮರಾಜ (ಕ್ರಿ.ಶ. ೯೭೫-೧೦೨೫), ಭಾಸ್ಕರ ಮತ್ತು ವರದರಾಜ ಮೊದಲಾದ ಪ್ರಸಿದ್ಧ ರಚನಕಾರರು ಈ ಪಂಗಡದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
ಆಧ್ಯಾತ್ಮಿಕ ತತ್ವಗಳು - ಸಂಕ್ಷಿಪ್ತವಾಗಿ
ಈ ಪದ್ಧತಿಯು ಪ್ರಪಂಚದ ಸೃಷ್ಟಿಯ ಕುರಿತಾಗಿ ೩೬ತತ್ವಗಳು ಅಥವಾ ಮೂಲಭೂತ ನಿಯಮಗಳನ್ನು ಪ್ರತಿಪಾದಿಸುತ್ತದೆ. ಅವುಗಳನ್ನು ಮೂರು ಮುಖ್ಯವಾದ ಗುಂಪುಗಳಾಗಿ ವಿಂಗಡಿಸಬಹುದು: ’ಶುದ್ಧತತ್ವ’, ’ಶುದ್ಧಾಶುದ್ಧತತ್ವ’ ಮತ್ತು ’ಅಶುದ್ಧತತ್ವ’.
ಶುದ್ಧತತ್ವಗಳು (ನಿರ್ಮಲ ಸಿದ್ಧಾಂತ) ಐದು, ಅವೆಂದರೆ: ಶಿವತತ್ವ, ಶಕ್ತಿತತ್ವ, ಸದಾಶಿವತತ್ವ, ಈಶ್ವರತತ್ವ ಮತ್ತು ಶುದ್ಧವಿದ್ಯಾತತ್ವ.
ಶುದ್ಧಾಶುದ್ಧತತ್ವಗಳು ಆರು, ಅವುಗಳೆಂದರೆ: ಮಾಯಾ, ಕಾಲ, ನಿಯತಿ, ರಾಗ, ವಿದ್ಯಾ ಮತ್ತು ಕಲಾ.
ಅಶುದ್ಧತತ್ವಗಳು ಇಪ್ಪತೈದು, ಅವುಗಳು ಈ ರೀತಿ ಇವೆ: ಪುರುಷತತ್ವ, ಪ್ರಕೃತಿತತ್ವ, ಬುದ್ಧಿ, ಅಹಂಕಾರ, ಮನಸ್, ಪಂಚೇಂದ್ರಿಯಗಳೆಂದು ಕರೆಯಲ್ಪಡುವ ಐದು ’ಜ್ಞಾನೇಂದ್ರಿಯ’ಗಳು, ಐದು ’ಕರ್ಮೇಂದ್ರಿಯಗ’ಳು, ಐದು ’ತನ್ಮಾತ್ರ’ಗಳು ಮತ್ತು ’ಪಂಚಭೂತ’ಗಳು.
ಈ ತತ್ವಗಳು ನಮಗೆ ಅದ್ವೈತ ವೇದಾಂತ ಮತ್ತು ಸಾಂಖ್ಯ ಪದ್ಧತಿಗಳಲ್ಲಿ ವಿವರಿಸಿರುವಂತೆ ಕಂಡುಬಂದರೂ ಅವುಗಳಲ್ಲಿ ಕೆಲವು ಮೂಲಭೂತ ವ್ಯತ್ಯಾಸಗಳು ಕಂಡುಬರುತ್ತವೆ. ಅವುಗಳನ್ನು ಒಂದೊಂದಾಗಿ ಪರಿಶೀಲಿಸೋಣ.
ಈ ಪದ್ಧತಿಯಲ್ಲಿ ಮೂಲಭೂತ ತತ್ವವಾವುದೆಂದರೆ ಅದು ಶಿವತತ್ವ, ಅದನ್ನು ’ಪರಮಸಂವಿತ್’ ಅಥವಾ ’ಪರಮಚೈತನ್ಯಸ್ವರೂಪಿ’/’ಪರಮ ಶುದ್ಧ’ನು ಎಂದು ಸಾಮಾನ್ಯವಾಗಿ ವರ್ಣಿಸಿರುವುದರಿಂದ, ಇದು ಅದ್ವೈತ ವೇದಾಂತದ ನಿರ್ಗುಣ ಬ್ರಹ್ಮಕ್ಕೆ ಸಮನಾದದ್ದು. ಆದರೆ ಅಲ್ಲಿ ಪ್ರತಿಪಾದಿಸಿರುವ ಎರಡು ವಿಷಯಗಳಿಗೆ - ಸಗುಣ ಮತ್ತು ನಿರ್ಗುಣಗಳಿಗೆ ಇಲ್ಲಿ ಐದು ವಿಷಯಗಳನ್ನು ಎತ್ತಿಕೊಂಡಿದ್ದಾರೆ.
ಈ ’ಪರಮಸಂವಿತ್’ ಎನ್ನುವುದು ಮೂಲಭೂತ ತತ್ವವಾಗಿದ್ದು ಇದರಿಂದ ಇತರೆಲ್ಲಾ ತತ್ವಗಳು ಆವಿರ್ಭವಿಸಿವೆ. ಅದು ನಿತ್ಯನಿರಂತವಾಗಿದ್ದು ವರ್ಣನೆಗೆ ನಿಲುಕದ್ದಾಗಿದೆ.
ಶಕ್ತಿತತ್ವವು ಮೂಲತಃ ಆ ಪರಮಸಂವಿತ್ತಿನ ಪ್ರಥಮ ಸ್ಪಂದನ ಅಥವಾ ಮೊದಲ ತರಂಗದ ಉತ್ಪನ್ನವಾಗಿದೆ. ಪರಮಾನಂದ ಅಥವಾ ಆನಂದವು ಅದರ ಮುಖ್ಯ ಲಕ್ಷಣವಾಗಿದೆ. ಅದು ಸೃಷ್ಟಿಯ ಮುಂದಿನ ಎಲ್ಲಾ ಚಲನೆಗಳಿಗೆ ಮೂಲವಾಗಿ ಅದು ’ಅಹಂ’ ಅಥವಾ ’ನಾನು’ ಎನ್ನುವ ಪ್ರಜ್ಞೆಯು ಉದ್ಭವಿಸಲು ಕಾರಣವಾಗುತ್ತದೆ.
ಇದರ ನಂತರ ಬರುವುದೇ ಸದಾಶಿವತತ್ವ, ಇದು ಪರಮಸಂವಿತ್ತಿನ ಮುಂದುವರಿದ ವಿಕಸನ ಕ್ರಿಯೆಯಾಗಿದ್ದು, ಇದರಲ್ಲಿ ’ಅಹಮ್’ (ನಾನು) ಮತ್ತು ’ಇದಮ್’ (ಇದು- ಸೃಷ್ಟಿ) ಎನ್ನುವ ಪ್ರಜ್ಞೆಗಳು ಉಂಟಾಗುತ್ತವೆ ಮತ್ತು ಇವುಗಳಲ್ಲಿ ಮೊದಲನೆಯದಾದ ಅಹಮಿಕೆಯು ಹೆಚ್ಚು ಪ್ರಚುರವಾಗಿರುತ್ತದೆ. ಈ ಘಟ್ಟದಲ್ಲಿ ಇದಮ್ ಅಂದರೆ ಸೃಷ್ಟಿಯು ಇನ್ನೂ ಸೂಕ್ಷ್ಮರೂಪದಲ್ಲಿರುವುದರಿಂದ, ಸದಾಶಿವನಿಗೆ ಅಹಮಿದಮ್ ಅಂದರೆ ತಾನು ಮತ್ತು ಮುಂದೆ ಹೊರಹೊಮ್ಮಲಿರುವ ಸೃಷ್ಟಿಯೊಂದಿಗೆ ಏಕಾತ್ಮತಾ ಭಾವವು ಉಂಟಾಗಬಹುದು.
ನಾಲ್ಕನೆಯದಾದ ಈಶ್ವರತತ್ವದಲ್ಲಿ, ಸೃಷ್ಟಿ ಅಥವಾ ಇದಮ್ ಎನ್ನುವುದು, ಅಹಮ್ ಅಥವಾ ನಾನು ಎನ್ನುವ ಪ್ರಜ್ಞೆಯೊಂದಿಗೆ ಸಮಾನವಾದ ಪ್ರಾಮುಖ್ಯತೆಯಿಂದ ಕೂಡಿರುತ್ತದೆ.
ಪರಮಸಂವಿತ್ನ ಐದನೆಯದಾದ ರೂಪಾಂತರವಾದ ಶುದ್ಧವಿದ್ಯಾತತ್ವದಲ್ಲಿ ಇದಮ್ ಅಥವಾ ಸೃಷ್ಟಿಯು ಹೆಚ್ಚು ಪ್ರಾಮುಖ್ಯತೆಯಿಂದ ಕೂಡಿರುತ್ತದೆ. ಇದು ಸೃಷ್ಟಿ ಕ್ರಿಯೆಯ ಅಥವಾ ವಿಕಸನದ ಅಥವಾ ಹೊರಹೊಮ್ಮುವಿಕೆಯ ಪ್ರಾರಂಭದ ಹಂತ.
ಈ ಐದೂ ತತ್ವಗಳನ್ನು ಸೇರಿಸಿ ’ಶಕ್ತ್ಯಾಂಡ’ವೆಂದು ಕರೆಯಲಾಗಿದೆ.
ಮುಂದಿನ ಆರು ತತ್ವಗಳನ್ನು ’ಮಾಯಾಂಡ’ವೆಂದು ಕರೆದಿದ್ದಾರೆ.
ಮಾಯೆಯೆನ್ನುವುದು ಶಿವನ ಅದ್ವಿತೀಯ ಶಕ್ತಿಯಾಗಿದ್ದು, ಅದು ಸಾಧ್ಯವಿಲ್ಲದ್ದನ್ನು ಸಾಧ್ಯವಾಗಿಸುತ್ತದೆ. ಅದು ಅದ್ವೈತ ಸಿದ್ಧಾಂತವು ಪ್ರತಿಪಾದಿಸುವಂತೆ ಕೇವಲ ಅವಿದ್ಯೆಯನ್ನುಂಟು ಮಾಡುವ ಭ್ರಾಮಕ ಶಕ್ತಿಯಾಗಿರದೆ, ಇದು ಶಿವನ ನಿಜವಾದ ಸತ್ವವಾಗಿದ್ದು ಇದರಿಂದ ಶಿವನು ತನ್ನನ್ನು ತಾನು ಆವರಿಸಿಕೊಂಡು, ಹಿಂದೆ ಇರದಿದ್ದ ನಾಮ, ರೂಪ, ಭೇದ ಮೊದಲಾದವುಗಳನ್ನು ಉಂಟುಮಾಡುತ್ತಾನೆ.
ಈ ಮಾಯೆಯು ’ಪಂಚಕಂಚುಕ’ ಅಥವಾ ಐದು ಹೊದಿಕೆ/ಪೊರೆ/ಕವಚಗಳನ್ನು ಹುಟ್ಟುಹಾಕಿ ಅವು ಮೇಲ್ನೋಟಕ್ಕೆ ಶಿವನ ಶಕ್ತಿಯನ್ನು ಮೊಟಕುಗೊಳಿಸುವಂತೆ ಮಾಡಿ ಅವನನ್ನು ಕಾಲ, ನಿಯತಿ (ಕಾರ್ಯಕಾರಣ ಸಂಭಂದಕ್ಕೆ ಒಳಗಾಗುವಂತೆ ಮಾಡುವುದು, ಕರ್ಮ ನಿಯಮಗಳಿಗೆ ಕಟ್ಟಿಹಾಕುವುದು), ರಾಗ (ಆಸೆ ಮತ್ತು ಬಂಧನಗಳು), ವಿದ್ಯಾ (ಪರಿಮಿತ ಜ್ಞಾನ ಮತ್ತು ಅವಿದ್ಯೆ/ಮೌಢ್ಯ) ಮತ್ತು ಕಲಾ (ಪರಿಮಿತ ಕ್ರಿಯಾಶಕ್ತಿ) ಇವುಗಳಿಗೆ ಬದ್ಧನಾಗಿರುವ ಜೀವಾತ್ಮನಾಗಿ (ಪ್ರತ್ಯೇಕ ಆತ್ಮ) ಕಾಣುವಂತೆ ಮಾಡುತ್ತದೆ.
ಪ್ರಕೃತಿಯಿಂದ ಪ್ರಾರಂಭವಾಗುವ ಮುಂದಿನ ಗುಂಪಿನ ತತ್ವಗಳನ್ನು ’ಪ್ರಕೃತ್ಯಾಂಡ’ ಎಂದು ಕರೆಯಲಾಗಿದೆ. ಪ್ರಕೃತಿಯು ಸತ್ವ, ರಜೋ ಮತ್ತು ತಮೋ ಗುಣಗಳ ನಿಖರವಾದ ಸಮತೋಲನ ಸ್ಥಿತಿಯಲ್ಲಿರುವ ಸಂಕೀರ್ಣ. ಯಾವಾಗ ಈ ಸಮತೋಲನ ಸ್ಥಿತಿಯು ವ್ಯತ್ಯಸ್ಥಗೊಳ್ಳುವುದೋ, ಅವುಗಳಿಂದ ಒಂದೊಂದಾಗಿ ಆವಿರ್ಭವಿಸುವ ಉತ್ಪನ್ನಗಳೆಂದರೆ - ಬುದ್ಧಿ (ವಿವೇಚನೆಯ ಸಂಗಾತಿಗಳು), ಅಹಂಕಾರ (ನಾನು ಎನ್ನುವ ಭಾವನೆ, ವೈಯ್ಯಕ್ತಿಕತೆಯ ಭಾವನೆ ಮತ್ತು ಪ್ರತ್ಯೇಕತೆಯ ಭಾವನೆ), ಮನಸ್ (ಮನಸ್ಸು, ಸಾಮಾನ್ಯ ಆಲೋಚನಾ ಶಕ್ತಿ, ಭಾವನೆಗಳನ್ನು ಮತ್ತು ಸಮ್ಮತಿಯನ್ನು ವ್ಯಕ್ತಗೊಳಿಸುವುದು), ಐದು ಜ್ಞಾನೇಂದ್ರಿಯಗಳು (ಅರಿವಿನ ಅಂಗಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಅಥವಾ ಸ್ಪರ್ಷೇಂದ್ರಿಯ), ಐದು ಕರ್ಮೇಂದ್ರಿಯಗಳು (ಕರ್ಮವನ್ನು ಮಾಡುವ ಅಂಗಗಳು - ಮಾತು, ಕೈಗಳು, ಪಾದಗಳು ಮತ್ತು ಎರಡು ವಿಸರ್ಜನಾಂಗಗಳು) ಮತ್ತು ಐದು ತನ್ಮಾತ್ರೆಗಳು (ಭೂಮಿ, ಅಪ್, ತೇಜ, ವಾಯು ಮತ್ತು ಆಕಾಶ ಇವುಗಳ ಸೂಕ್ಷ್ಮಧಾತುಗಳು).
ತನ್ಮಾತ್ರಗಳು, ಅವುಗಳ ಪರಸ್ಪರ ಸಂಕರಣದಿಂದಾಗಿ, ಪಂಚ ಮಹಾಭೂತಗಳು ಅಥವಾ ಸ್ಥೂಲ ಧಾತುಗಳನ್ನು ಉತ್ಪಾದಿಸುತ್ತವೆ. ತದನಂತರ ಸೃಷ್ಟಿ ಕ್ರಿಯೆಯು ಅವುಗಳಿಂದ ಪ್ರಾರಂಭವಾಗುತ್ತದೆ. ಈ ಗುಂಪಿನ ತತ್ವಗಳನ್ನೇ ’ಪೃಥಿವ್ಯಾಂಡವೆಂದು’ ಕರೆದಿದ್ದಾರೆ.
ಈ ಪದ್ಧತಿಯಲ್ಲಿ ಗಮನದಲ್ಲಿರಿಸಬೇಕಾದ ಪ್ರಧಾನ ಅಂಶಗಾಳಾವುವೆಂದರೆ, ಅವು: ೧) ಸೃಷ್ಟಿಯು ಶಿವನ ಶಕ್ತಿಯ ಆವಿರ್ಭಾವವಾಗಿದೆ. ೨) ಸೃಷ್ಟಿ ಕ್ರಿಯೆಯಲ್ಲಿ ಭಂದಿತವಾಗಿರುವ ವ್ಯಕ್ತಿಗತ ಆತ್ಮವು ವಾಸ್ತವದಲ್ಲಿ ಶಿವನೇ ಆಗಿದೆ. ೩) ಸಾಂಖ್ಯ ಪದ್ಧತಿಯಲ್ಲಿ ಹೇಳಿರುವಂತೆ ಮೂಲಭೂತ ಆಕಾಶ ತತ್ವಗಳು ೨೫ ಆಗಿರದೆ ಈ ಪದ್ಧತಿಯಲ್ಲಿ ಅವುಗಳ ಸಂಖ್ಯೆಯು ೩೬ ಆಗಿರುತ್ತದೆ.
ಸೃಷ್ಟಿಮಾಡಲ್ಪಟ್ಟಿರುವ ಪ್ರಪಂಚವು ಶಿವನ ಹೊರಹೊಮ್ಮುವಿಕೆ ಅಥವಾ ಆವಿರ್ಭಾವವಾಗಿರುವುದರಿಂದ ಅದು ಶಿವನಲ್ಲದೆ ಬೇರೆಯಲ್ಲ. ಆದರೆ ಅದಕ್ಕೆ ಪ್ರತ್ಯೇಕ ಅಸ್ತಿತ್ವವೂ ಇದ್ದಂತೆ ತೋರಿಕೆಯನ್ನುಂಟು ಮಾಡುತ್ತದೆ. ಆದ್ದರಿಂದ ಈ ಪದ್ಧತಿಯು ಭಗವಂತ (ಶಿವ) ಮತ್ತು ಅವನ ಸೃಷ್ಟಿಯನ್ನು ಭೇದಾಭೇದ (ಭಿನ್ನತೆ ಮತ್ತು ಅಭಿನ್ನತೆ) ಸಿದ್ಧಾಂತದ ಪ್ರಕಾರ ಒಪ್ಪಿಕೊಳ್ಳುತ್ತದೆ.
ಅದೇ ರೀತಿಯಾಗಿ, ಜೀವಾತ್ಮನು (ಪ್ರತ್ಯೇಕ ಜೀವಿಯು) ಪಶು (ಭಂದಿತನಾದ ಆತ್ಮ/ಬದ್ಧ ಜೀವಿ) ಕೂಡಾ ಸ್ವಯಂ ಶಿವನೇ ಆಗಿದೆ. ’ಪ್ರತ್ಯಭಿಜ್ಞಾ’ ಅಥವಾ ಶಿವನ ನಿಜ ಸ್ವರೂಪವನ್ನು ಪದೇ ಪದೇ ಜ್ಞಾಪಿಸಿಕೊಳ್ಳುವುದರಿಂದ ಜೀವನು ತನ್ನನ್ನು ಆವರಿಸಿದ ಪೊರೆಗಳನ್ನು (ಆವರಣಗಳನ್ನು) ಕಳಚಿಕೊಂಡು ಶಿವನೊಂದಿಗೆ ತಾದಾತ್ಮ್ಯವನ್ನು ಹೊಂದುತ್ತಾನೆ. ಇದೇ ಮುಕ್ತಿ ಅಥವಾ ಬಿಡುಗಡೆ.
ಆದರೆ ಇದನ್ನು ಗಳಿಸಲು ಇರುವ ಏಕೈಕ ಮಾರ್ಗವೆಂದರೆ, ಗುರುವಿನ (ಆಧ್ಯಾತ್ಮಿಕ ಬೋಧಕ) ಸೇವೆಯನ್ನು ಕೈಗೊಳ್ಳುವುದು, ಶಾಸ್ತ್ರಗ್ರಂಥಗಳ ಅಧ್ಯಯನ ಅಥವಾ ಅವುಗಳ ಬೋಧನೆಗಳನ್ನು ಶ್ರವಣ ಮತ್ತು ಮನನ ಮಾಡುವುದು ಹಾಗೂ ಯೋಗಾಭ್ಯಾಸವನ್ನು ಮಾಡುವುದು. ಆದರೆ ಅಂತಿಮ ವಿಮೋಚನೆಯು ಕೇವಲ ಶಿವಾನುಗ್ರಹದಿಂದ (ಶಿವನ ಕೃಪೆಯಿಂದ) ಮಾತ್ರ ಸಾಧ್ಯ; ಇದನ್ನು ತಾಂತ್ರಿಕವಾಗಿ ’ಶಕ್ತಿಪಾಥ’ (ಭಗವಂತನ ಶಕ್ತಿಯ ಅವರೋಹಣ/ಇಳಿಕೆ/ಇಮಡುವಿಕೆ) ಎಂದು ಕರೆಯಲಾಗಿದೆ.
ಅಂತಿಮವಾಗಿ, ಈ ಪದ್ಧತಿಯ ಪ್ರಕಾರ ಶಿವನು ತನಗೆ ತಾನೇ ಆವರಣಗಳಿಂದ ಮುಚ್ಚಲ್ಪಟ್ಟು ಬದ್ಧ ಜೀವನಾಗುತ್ತಾನೆ. ಈ ಶಿವನೇ ಪುನಃ ತನ್ನ ನಿಜ ಸ್ವರೂಪವನ್ನು ಕಂಡುಕೊಂಡು ಮತ್ತೆ ಅದನ್ನು ಮೊದಲಿನಂತೆ ಗಳಿಸಿಕೊಳ್ಳುತ್ತಾನೆ.
ಆದ್ದರಿಂದ ’ಸ್ವಾತ್ಮವಿಸ್ಮರಣೆ’ - ತನ್ನನ್ನು ತಾನೇ ಮರೆಯುವುದು ಮತ್ತು ’ಸ್ವಾತ್ಮಪ್ರತ್ಯಭಿಜ್ಞ’ - ತನ್ನನ್ನು ತಾನೇ ಜ್ಞಾಪಿಸಿಕೊಳ್ಳುವುದು ಶಿವನ ಈ ಲೀಲಾ ಪ್ರಪಂಚದಲ್ಲಿ ಎರಡು ಅಂಕಗಳು.
-----------------------------------------------------------------------------------
ವಿ.ಸೂ. ಇದು 'Facets of Saivism - Swami Harshananda' ಎನ್ನುವ ಆಂಗ್ಲ ಭಾಷೆಯ ಪುಸ್ತಕದ ಅನುವಾದದ ಭಾಗ. ಪ್ರಕಟಣೆ ಶ್ರೀ ರಾಮಕೃಷ್ಣ ಆಶ್ರಮ, ಬೆಂಗಳೂರು (ಪುಟಗಳು ೧೮ ರಿಂದ ೨೮)
--------------------------------------------------------------------------------------
ಈ ಸರಣಿಯ ಹಿಂದಿನ ಲೇಖನಕ್ಕೆ "ಶೈವಮತದ ಹಲವು ಮುಖಗಳು : ಭಾಗ ೧ - ಮುನ್ನುಡಿ, ಪರಿಚಯ, ಕಾಲಾಮುಖರು ಮತ್ತು ಕಾಪಾಲಿಕರು", ಈ ಕೊಂಡಿಯನ್ನು ನೋಡಿ :
http://sampada.net/blog/%E0%B2%B6%E0%B3%88%E0%B2%B5%E0%B2%AE%E0%B2%A4%E0%B2%A6-%E0%B2%B9%E0%B2%B2%E0%B2%B5%E0%B3%81-%E0%B2%AE%E0%B3%81%E0%B2%96%E0%B2%97%E0%B2%B3%E0%B3%81-%E0%B2%AD%E0%B2%BE%E0%B2%97-%E0%B3%A7-%E0%B2%AE%E0%B3%81%E0%B2%A8%E0%B3%8D%E0%B2%A8%E0%B3%81%E0%B2%A1%E0%B2%BF-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%95%E0%B2%BE%E0%B2%B2%E0%B2%BE%E0%B2%AE%E0%B3%81%E0%B2%96%E0%B2%B0%E0%B3%81-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%95%E0%B2%BE%E0%B2%AA%E0%B2%BE%E0%B2%B2%E0%B2%BF%E0%B2%95%E0%B2%B0%E0%B3%81/05/08/2012/37808
Rating
Comments
ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ
In reply to ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ by Krishna Kulkarni
ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ
In reply to ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ by makara
ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ
In reply to ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ by makara
ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ
In reply to ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ by Krishna Kulkarni
ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ
ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ
In reply to ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ by ksraghavendranavada
ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ
ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ
In reply to ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ by nanjunda
ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ
In reply to ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ by makara
ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ
In reply to ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ by makara
ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ
In reply to ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ by nanjunda
ಉ: ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ