ಕುಟುಂಬ ಯೋಜನೆಗೆ ಮಾದರಿಯಾದ ಜಂಗಮಸೋವೇನಹಳ್ಳಿ ಗ್ರಾಮ

ಕುಟುಂಬ ಯೋಜನೆಗೆ ಮಾದರಿಯಾದ ಜಂಗಮಸೋವೇನಹಳ್ಳಿ ಗ್ರಾಮ

      

 

 ಜನಸಂಖ್ಯೆಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕುಟುಂಬ ಯೋಜನೆಯನ್ನು ಜಾರಿಗೊಳಿಸಿ, ಅದನ್ನು ಯಶಸ್ವಿಗೊಳಿಸಲು ಸಾಕಷ್ಟು ಹಣವನ್ನು ವೆಚ್ಚ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜಂಗಮಸೋವೇನಹಳ್ಳಿ ಎಂಬ ಗ್ರಾಮ ಹಲವಾರು ದಶಕಗಳಿಂದಲೂ ಸದ್ದಿಲ್ಲದೇ ಅದನ್ನು ಪಾಲಿಸಿಕೊಂಡು ಬರುತ್ತಿರುವುದು ಅಚ್ಚರಿಯಾದರೂ ನಿಜ ಸಂಗತಿ.

      ಶಿವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಂಗಮಸೋವೇನಹಳ್ಳಿ ಗ್ರಾಮ ತಾಲೂಕು ಕೇಂದ್ರದಿಂದ ೨೦ ಕಿ.ಮೀ ದೂರವಿದೆ. ೧೩೦ ಮನೆಗಳಿರುವ ಈ ಗ್ರಾಮದ ಅಂದಾಜು ಜನಸಂಖ್ಯೆ ೧,೦೦೦. ಗ್ರಾಮದಲ್ಲಿ ಒಕ್ಕಲುತನವೇ ಪ್ರಧಾನ ಉದ್ಯೋಗ. ಇಡೀ ಗ್ರಾಮದಲ್ಲಿ ಕೇವಲ ೩ ಜನ ಮಾತ್ರ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಪದವಿ ಪಡೆದವರು ಬೆರಳೆಣಿಕೆಯಷ್ಟು ಜನ. ವಿಶೇಷವೆಂದರೆ ಇಡೀ ಗ್ರಾಮ ಕುಟುಂಬ ಯೋಜನೆಗೊಳಪಟ್ಟಿದೆ. ಇಲ್ಲಿ ಆರೋಗ್ಯ ಇಲಾಖೆಯ ಪ್ರಭಾವವಾಗಲಿ, ಯಾರದೇ ಒತ್ತಡವಾಗಲಿ ಇಲ್ಲ. ಸ್ವಯಂಪ್ರೇರಿತರಾಗಿಯೇ ಇಲ್ಲಿನ ಜನ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿದ್ದಾರೆ. ಇಡೀ ಗ್ರಾಮದಲ್ಲಿ ಪ್ರತಿಯೊಂದು ಕುಟುಂಬದಲ್ಲೂ ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆಗೊಳಗಾದವರು ಸಿಗುತ್ತಾರೆ. ಶಸ್ತ್ರಚಿಕಿತ್ಸೆಗೊಳಗಾದವರೆಂದರೆ ಇತ್ತೀಚೆಗೆ ಮದುವೆಯಾದವರಷ್ಟೇ ಎಂದು ಶಿವಪುರ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಅಂಜಿನಮ್ಮ ಹೇಳುತ್ತಾರೆ. ಇಲ್ಲಿ ಚಿಕ್ಕ ವಯಸ್ಸಿನಲ್ಲಿನ ಮದುವೆಯೂ ಇಲ್ಲ. ಸಾಮಾನ್ಯವಾಗಿ ಇಲ್ಲಿನ ಜನ ೨೫ ವರ್ಷ ಮೇಲ್ಪಟ್ಟೇ ಮದುವೆಯಾಗುತ್ತಾರೆ. ಪ್ರತಿ ಮನೆಯಲ್ಲೂ ದಂಪತಿಗೆ ಇಬ್ಬರಿಗಿಂತ ಹೆಚ್ಚಿಗೆ ಮಕ್ಕಳಿಲ್ಲ. ಅದು ಗಂಡಾಗಲಿ, ಹೆಣ್ಣಾಗಲಿ ೨-೩ ಮಕ್ಕಳ ನಂತರ ಎಲ್ಲರೂ ಕಡ್ಡಾಯವಾಗಿ ಕುಟುಂಬ ಯೋಜನೆ ಶಸ್ತ್ರಕ್ರಿಯೆಗೊಳಗಾತ್ತಾರೆಂಬುದು ವಿಶೇಷವಾದ ಸಂಗತಿಯಾಗಿದೆ. ಅಚ್ಚರಿಯ ಸಂಗತಿಯೆಂದರೆ ಇಲ್ಲಿನ ಜನತೆಗೆ ಅದೊಂದು ಸಹಜ ಪ್ರಕ್ರಿಯೆಯಾಗಿದೆ. ಮೊದಲೆಲ್ಲ ಪುರುಷರೇ ಹೆಚ್ಚು ಶಸ್ತ್ರಚಿಕಿತ್ಸೆಗೊಳಪಡುತ್ತಿದ್ದರು, ಇತ್ತೀಚೆಗೆ ಮಹಿಳೆಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ. ಇದು ಹಲವಾರು ದಶಕಗಳಿಂದಲೂ ನಡೆದುಕೊಂಡು ಬಂದ್ದದು. ಇದಕ್ಕೆ ಏನು ಪ್ರೇರಣೆ? ಎಂದು ಗ್ರಾಮಸ್ಥರನ್ನು ಪ್ರಶ್ನಿಸಿದರೆ, ಯಾವ ಪ್ರೇರಣೆಯೂ ಇಲ್ಲವೆನ್ನುತ್ತಾರೆ. ಗ್ರಾಮದಲ್ಲಿ ಕಡೆಮನಿ ಭರಮಪ್ಪ ಎಂಬ ವ್ಯಕ್ತಿಗೆ ಮಾತ್ರ ೧೨ ಜನ ಮಕ್ಕಳಿರುವುದನ್ನು ಹೊರತುಪಡಿಸಿದರೆ ಯಾವ ಕುಟುಂಬದಲ್ಲೂ ಹೆಚ್ಚಿನ ಮಕ್ಕಳ ಸಂಖ್ಯೆಯಿಲ್ಲ. ಬಸವರಾಜ ಎಂಬವರಿಗೆ ಇಬ್ಬರು ಹೆಣ್ಣುಮಕ್ಕಳು, ನಂದಿ ಹಂಪಣ್ಣ, ಅಗ್ರಹಾರದ ವೀರಣ್ಣ, ದಾಸಪ್ಪರ ನಾಗರಾಜ ಇವರೆಲ್ಲರಿಗೂ ತಲಾ ೩ ಜನ ಹೆಣ್ಣುಮಕ್ಕಳ್ದಿದಾರೆ ಆದರೆ ಗಂಡು ಮಗುವಿನ ಆಸೆ ಇರಿಸಿಕೊಳ್ಳದೆ ಈ ಎಲ್ಲ ಕುಟುಂಬಗಳೂ ಕುಟುಂಬ ಯೋಜನೆಯ ಶಸ್ತ್ರಚಿಕಿತ್ಸೆಗೊಳಗಾಗಿವೆ. 
         ಈ ಎಲ್ಲದರ ಪರಿಣಾಮವೆಂದರೆ ಈ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಾಗಿಲ್ಲ. ಕಳೆದ ೧೦-೧೫ ವರ್ಷಗಳಿಂದಲೂ ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ ೧೨೫ರ ಗಡಿಯನ್ನು ದಾಟಿಲ್ಲ. ಈ ರೀತಿಯಲ್ಲಿ ಕುಟುಂಬ ಯೋಜನೆಯನ್ನು ಪಾಲಿಸಲು ಕಾರಣವೇನೆಂದು ಕೇಳಿದರೆ, ‘ಇರೋ ಜಮೀನೂ ಸ್ವಲ್ಪ, ಕೂಲಿ ಮಾಡ್ಕೊಂಡು ಬದುಕ್ಬೇಕು, ಎಷ್ಟು ಮಕ್ಕಳಿದ್ರೂ ಅಷ್ಟೆ, ಅದಕ್ಕೇ ಕುಟುಂಬ ಯೋಜನೆ ಪಾಲಿಸ್ತೀವಿ’ ಎಂದು ನಂದಿ ಜಂಬಣ್ಣ ಹೇಳುತ್ತಾರೆ. ಈ ವಿಷಯದಲ್ಲಿ ಇಡೀ ಗ್ರಾಮದಲ್ಲಿಯೇ ಒಗ್ಗಟ್ಟಿದೆ, ಜನಸಂಖ್ಯೆ ನಿಯಂತ್ರಣದ ಬಗ್ಗೆ ಇಲ್ಲಿ ಯಾರೂ ಉಪನ್ಯಾಸ ನೀಡಿಲ್ಲ, ಯಾವ ಕಾರ್ಯಕ್ರಮಗಳೂ ಆಗಿಲ್ಲ, ಎಲ್ಲರೂ ತಾವೇ ಹೋಗಿ ಶಸ್ತ್ರಚಿಕಿತ್ಸೆಗೊಳಗಾಗಿ ಬರುತ್ತಾರೆಂದು ಗ್ರಾಮದ ಉಪ್ಪಾರ ಹೂಲೆಪ್ಪ, ಜಗದೀಶ, ಗೊಲ್ಲರ ಹನುಮಂತಪ್ಪ, ಬಾರಿಕರ ಹೂಲೆಪ್ಪ, ಸಿ.ಎಂ.ಮಲ್ಲಿಕಾರ್ಜುನಯ್ಯ, ಎಚ್.ಹನುಮಂತಪ್ಪ ಹೇಳುತ್ತಾರೆ. ಕುಟುಂಬ ಯೋಜನೆಗೆ ಸಂಬಂಧಿಸಿದಂತೆ ಇಲ್ಲಿನ ಜನತೆ ಹಾಗೂ ಅವರ ವಿಚಾರಗಳು ಮಾದರಿಯಾಗಿವೆ. 
 
 

Comments