ಇಂಜಿನಿಯರ್-ಇಂಗು

ಇಂಜಿನಿಯರ್-ಇಂಗು

 

"ಅಣ್ಣಾ..   ದಯವಿಟ್ಟು ಎದ್ದೇಳು..ಘಂಟಿ ಎಂಟ್ ಆಗ್ಲಿಖತ್ತದ ಇವತ್ತು ಬೈ ಚಾನ್ಸ್  ನನ್ನ  ಕಾಲೇಜ್ ಬಸ್ ಮಿಸ್ ಆಯಿತು,ಸರಿಯಾದ ಟೈಮಿಗೆ ಹೋಗ್ಲಿಲ್ಲಂದ್ರೆ  ಇವತ್ತಿಂದ ಶುರು ಅಗೋ ಇಂಟರ್ನಲ್ಸ್  ಮಿಸ್  ಆಗ್ತಾವ.. ಪ್ಲೀಸ್ ನನಗ ಕಾಲೇಜ್ ತನಕ ನಿನ್ನ  ಗಾಡಿನಾಗ  ಬಿಟ್ಟು ಬಾ ... ಅಪ್ಪಾಜಿ... ನೀವಾದ್ರು ಹೇಳ್ರಿ ಅಣ್ಣಗ ಒಟ್ಟ  ಏಳಲಿಕ್ಕೆ   ಒಲ್ಲೇ ಅಂತಾನ ..... "


ಹೀಗೆ  ಸಾಗಿತ್ತು ನನ್ನ ತಂಗಿ ನನ್ನನ್ನು ಓಲೈಸುವ ಪರಿ .ಸುಖವಾದ ನಿದ್ದೆಯನ್ನು  ಇವಳು ಹಾಳು  ಮಾಡಿದ್ದರಿಂದ ನನಗಂತೂ ಭಯಂಕರ ಸಿಟ್ಟು ಬಂದಿತ್ತು . ಇಂಜಿನಿಯರಿಂಗ್  ಕೊನೆಯ ವರ್ಷದಲ್ಲಿ ಓದುತ್ತಿರುವ ಹಾಗು ಅದೇ ಕಾಲೇಜ್ನಲ್ಲಿ ಅವಳಿಗಿಂತ ಒಂದು ವರ್ಷ ಸೀನಿಯರ್ ಆಗಿರುವ ನನ್ನ  ಇಮೇಜನ್ನು ಸಹಾ ಪರಿಗಣಿಸದೆ  ಸಮಯ ಸಿಕ್ಕಾಗ ನನ್ನ ತಪ್ಪುಗಳನ್ನು ಅಮ್ಮನ ಮುಂದೆ ಹೇಳಿ ನನ್ನನು  ಇಕ್ಕಟ್ಟಿಗೆ ಸಿಲುಕಿಸುವ ಇವಳಿಗೆ ಇವತ್ತು  ಸೇಡು ತಿರಿಸಿಕೊಳ್ಳಲು ಒಳ್ಳೆಯ ಅವಕಾಶವೆಂದು ಸುಮ್ಮನೆ ಮಲಗಿರುವ ನಾಟಕ ಮಾಡಿ ಅವಳು ಗೊಗರೆದಸ್ಟು ನಾನು ಖುಷಿಪಟ್ಟು ಕೊನೆಗೂ ಎಲ್ಲರ ಒತ್ತಾಸೆಯ ಮೇರೆಗೆ ನನ್ನ ಶಯನೋತ್ಸವ ಮುಗಿಸಿದೆ .

 
ಯದ್ದಿದ್ದೆ ತಡ ಸ್ವಲ್ಪ ರೇಗಿದ ಧ್ವನಿಯಲ್ಲಿ   "ಏನ್ ಸುಮಾ.. ನಿನಗ ಸ್ವಲ್ಪರ ಜವಾಬ್ದಾರಿ ಅದೇನು ?  ಇಂಜಿನಿಯರಿಂಗ್ ಅಂದ್ರೆ ಸುಮ್ನೆ ಏನು ಎಷ್ಟು ಕಷ್ಟ ಪಡಬೇಕು .. ನಿಂಗ ಇವತ್ತು ಪರೀಕ್ಷಾ  ಅದ ಅಂಬೋ ಒಂದಿಷ್ಟು ಖಬರರ ಅದಿಲ್ಲೋ ಟೈಮ್ ಟೇಬಲ್ ಮೊದ್ಲೇ ಗೊತ್ತಿತ್ತೋ ಇಲ್ಲೋ ?  ಸ್ವಲ್ಪ ಜಲ್ದಿ ಎದ್ದು ಬಸ್ ಹತ್ತಲಿಕ್ಕೆ ಏನು ಆಗಿತ್ತು ಧಾಡಿ .. ಅಲ್ಲ.... ಇವತ್ತು ಪರೀಕ್ಷಾ ದಿನಾನು ಇಷ್ಟು ಅಲಕ್ಷ್ಯ ಮಾಡಿದ್ರೆ ಮುಂದೆ ಫೈನಲ್  ಇಯರ್ನಾಗ  ಏನ್ ಮಾಡ್ತಿ ? , ಪ್ರಾಜೆಕ್ಟುವೈವಾ ಮತ್ತ ಎಸ್ಟೊಂದು ಸುಬ್ಜೆಕ್ಟಸ್ ಹ್ಯಾಂಗ ಮ್ಯಾನೇಜ್ ಮಾಡ್ತಿ?  ”ಹೀಗೆ ಬೈಗುಳ ಅಭಿಷೇಕ ನನ್ನಿಂದ ಅವಳಿಗೆ ಆಯಿತು.

 
ಅಪ್ಪಾಜಿ ಅಮ್ಮನ ಸಹಾನುಭೂತಿ  ತಂಗಿಯಜೋತಿಗೆ ಇದ್ದರೂ ಇವಳನ್ನು ಬಿಟ್ಟು ಬರುವ ಕೆಲಸ ನನ್ನಿಂದಲೇ ಆಗಬೇಕಾದ್ದರಿಂದ  ಅವರು ನನ್ನ ಬೈಗುಳ ಕುರಿತು ಜಾಣ ಕಿವುಡನ್ನು ಪ್ರದರ್ಶಿಸಿ ನನ್ನನ್ನು ಪುಸಲೈಸಿ ಅವಳಿಗೆ ಒಂದಿಷ್ಟು ಸುಮ್ನೆ ಜಬರಿಸುವ ನಾಟಕ ಮಾಡಿ "ಇವತ್ತಂತು ಬಿಟ್ಟು ಬರ್ತಾನ ಪ್ರತಿದಿನ ಹಿಂಗ ಮಾಡಬ್ಯಾಡಾ... ಪಾಪ ಅಪ್ಪಣ್ಣಗ ಮುಂಜಾನೆ ಎದ್ದೆಳೋದು ಎಷ್ಟು ಕಷ್ಟ ಅಂತ ನಿಂಗ ಗೊತ್ತದೋ ಇಲ್ಲೋ ?  ”ಎಂದು ನನಗೆ ಗೊತ್ತಿಲ್ಲದೇ ಬಿಟ್ಟುಬರುವ ಕೆಲಸ ಒಪ್ಪಿಸಿಬಿಟ್ಟಿದ್ದರು.

 
ನನಗಿಂತಲೂ ಶಿಸ್ತಿನಲ್ಲಿ ನೂರು ಪಾಲು ಮುಂದೆ ಇರುವ ನನ್ನ ತಂಗಿ ತಾನು ಈಗಿರುವ  ಸಂಧರ್ಭವನ್ನು ಹಾಗು ನಾನು ಪಡೆದುಕೊಳ್ಳುತ್ತಿರುವ ಅದರ ಸಂಪೂರ್ಣ ಲಾಭವನ್ನು  ತಿಳಿದು  ಸುಮ್ಮನೆ ಸಪ್ಪನೆಯ ಮಾರಿ ಮಾಡಿಕೊಂಡಿದ್ದಳು ...ಒಳಗೊಳಗೇ ಹಲ್ಲು ಕಟಿಯುತ್ತಿದ್ದರು ಈಗ ಇವನ ಜೊತೆ ವಾಗ್ವಾದ ಮಾಡಿ ಪ್ರಯೋಜನವಿಲ್ಲವೆಂದು ಸುಮ್ಮನೆ ಗಾಡಿ ಹತ್ತಿದಳು .

 
ಗಾಡಿ ನಡೆಸುವಾಗ  ದಾರಿಯುದ್ದಕ್ಕೂ ನನ್ನದು ಮತ್ತದೇ ಪ್ರವರ... ಇಂಜಿನಿಯರಿಂಗ್ ಓದೋವಾಗ ಇರಬೇಕಾದ ಶಿಸ್ತಿನ ಬಗ್ಗೆ ನಾನು ಮನಸೋ ಇಚ್ಚೆ ಭಾಷಣ ಮಾಡಿ ಮುಂದೆ ಓದಿನ ಬಗ್ಗೆ ಸ್ವಲ್ಪ ಗಮನ ಹರಿಸಬೇಕೆಂದು ಬೈದು ಸಮಯ ಸಿಕ್ಕಾಗಲೆಲ್ಲ , "ಈಗ ನನ್ನೇ ತೊಗೋ ....." ಅಂತ ನನ್ನನ್ನೇ ಮುಂದಿನ ರೋಲ್ ಮಾಡೆಲ್ ಆಗಿ ಮಾಡಿಕೊ ಎಂಬುವ ಧಾಟಿಯಲ್ಲಿ ಹೇಳುವದೆಲ್ಲವನ್ನು ಹೇಳಿ ಅತ್ಯಂತ ಹಗುರವಾಗಿ ವಿಜಯೋತ್ಸಾಹದಲ್ಲಿ  ಕಾಲೇಜ್ ಪಾರ್ಕಿಂಗ್ ನಲ್ಲಿ ಆಕೆಯನ್ನು ಬಿಟ್ಟು ಇನ್ನೇನು ಮರಳಿ ಮನೆಗೆ ಬರಬೇಕು .. ಅಷ್ಟರಲ್ಲಿ ನನ್ನ ಕ್ಲಾಸ್ಮೇಟ್ ಕಲ್ಯಾಣಿ ಸಿಕ್ಕಿದಳು.... ಹಾಯ್ - ಹಲೋ ಆದ ಬಳಿಕ ಅವಳು ಸ್ವಲ್ಪ ತರಾತುರಿಯಲ್ಲಿ ಇರುವುದನ್ನು ಗಮನಿಸಿದೆ . ಕೈಯಲ್ಲಿ ಪೆನ್ನು ದಪ್ಪನೆಯ ಆಂಟೆನಾ ಅಂಡ್ ವೇವ ಪ್ರೋಪಗೆಶನ್ ಪುಸ್ತಕ ಹಿಡಿದು ಓದಿಕೊಳ್ಳುತ್ತಾ  " ಏನ್  ದಾಸ್ ಪ್ರೆಪರೆಶನ್  ಅಗೆದಿಯೋ ಇಲ್ಲವೋ ?" ಎಂದು ಕೇಳಿದಳು .
 
ನಾನೆಂದೆ "ಯಾವ ಪ್ರೆಪರೆಶನ್ ಕಲ್ಯಾಣಿ ....?"

 
ಕಲ್ಯಾಣಿ:  "ಯಾವ ಪ್ರೆಪರೆಶನ್ ಅಂದ್ರೆ ಏನ್ ಅರ್ಥ ಏನು ತಮಾಷೆ ಮಾಡ್ತಾ ಇದ್ದಿಯಾ ಇನ್ನೊಂದು ಐದು ನಿಮಿಷದೊಳಗೆ ಶುರುವಾಗುವ ನಮ್ಮ ಇಂಟರ್ನಲ್ಸ್ ಪರೀಕ್ಷೆಯ ಪ್ರೆಪರೆಶನ್... "

 
 
ನಾನು : " ...........??????!!!.... ......... "

 
ಸ್ವಲ್ಪ ಸುಧಾರಿಸಿ ಕೊಂಡು ಅವಳ ಬಳಿ ಒಂದು ಎಕ್ಷ್ಟ್ರಾ  ಪೆನ್ ಇದೆಯಾ ಎಂದು ಕೇಳಿದೆ ...

 
ಅವಳು :  "ನಿಂದು ಯಾವಾಗಲು ಇದೆ ಗೋಳು .... ಅಲ್ಲ ಇಂಟರ್ನಲ್ಸ್ ಇರೋವಾಗಾದ್ರು  ಪೆನ್ ತಂದಿಲ್ಲವ.. ಅಂತ  ನನ್ನ ತಲೆಗೆ ಸ್ವಲ್ಪ ಕುಕ್ಕಿ ಪೆನ್ ಕೊಟ್ಟಳು .

 
ನಾನು ಇಂಟರ್ನಲ್ಸ್ ಬರೆದು ತಂಗಿ ಮನೆಗೆ ಬರುವ ಮುಂಚೆ ಮನೆ ಸೇರಿದೆ ...

 
ಪರೀಕ್ಷೆಯಲ್ಲಿ  "ನಾಪಾಸ್"  ಆದೆ ಅಂತ ಪ್ರತ್ಯೇಕವಾಗಿ ಹೇಳಬೇಕೇ ???

 

 

Comments