' ಅಪರಿಚಿತ' ಭಾಗ 2(ಕಥೆ)
' ಏ ಪರಸಪ್ಪ ಬಾ ಇಲ್ಲಿ, ಒಂದು ಯೂಡಿ ಪ್ರಕರಣ ವರದಿಯಾಗಿದೆ, ಡೆಡ್ ಬಾಡಿ ವಾಚ್ಗೆ ನುಸ್ರತ್ ಅಲಿ ಜೊತೆಗೆ ಹೋಗಿ ಅವರಿಗೆ ಸಹಾಯ ಮಾಡು ' ಎಂದರು ಮಂಜಪ್ಪ ಗೌಡರು.
' ಅಲ್ಲ ಸಾರ್ ನಾನು ನಿನ್ನೆ ರಾತ್ರಿ ಒಂಭತ್ತು ಗಂಟೆಯಿಂದ ಇವತ್ತಿನ ಬೆಳಗಿನ ಆರು ಗಂಟೆಯ ವರೆಗೆ ಇಡೀ ಊರ್ನ ನಾಯಿ ಸುತ್ತಿದ್ಹಂಗ ಸುತ್ತೇನಿ, ಕಣ್ಣು ಎಳಿಯಾಕ ಹತ್ಯಾವ, ಅಂತಾದರಾಗ ಮತ್ತ ಡ್ಯೂಟಿ ಹೇಳತೀರಲ್ರಿ ' ಎಂದ ಪರಸಪ್ಪ.
' ಮಹಾನುಭಾವ ಇದು ಪೋಲೀಸ್ ಕೆಲಸಪಾ, ಸಮಯ ಸಂಧರ್ಭ ಬಂದ್ಹಾಂಗ ಕೆಲಸ ಮಾಡಬೇಕಾಗತದ ' ಎಂದರು ಮಂಜಪ್ಪ ಗೌಡ.
' ಈ ಸ್ಟೇಶನ್ನಿನೊಳಗ ನಾ ಒಬ್ಬನ ಇರೋದೇನ್ರಿ, ಉಳದವ್ರು ಇಲ್ವಾ ? ಅವರ್ನ ಕಳಸ್ರಿ ' ಎಂದು ಪರಸಪ್ಪ ಮರು ಉತ್ತರಿಸಿದ,
' ನಾಲ್ಕು ಟ್ರೇನಿಂಗ್, ಐದು ವೆಕೆನ್ಸಿ, ಮೂರು ಬಂದೋಬಸ್ತು ಜನ ಎಲ್ಲದಾರ ನೀನರ ಹೇಳು ನೋಡೋಣ ' ಎಂದರು ನುಸ್ರತ್ ಅಲಿ.
' ಮೇಲಿನ ಆಫೀಸರ್ಸಗೆ ಬರದು ತಿಳಸ್ರಿ ನಮ್ಮ ಕಷ್ಟಾನೂ ಅವರಿಗೆ ಗೊತ್ತಾಗ್ಲಿ. ಬರಿ ಮುಕಳ್ಯಾಗ ಜೀಪು ಕಾರು ಇಟಗೊಂಡು ತಿರಗಿದಂಗಲ್ಲ ' ಎಂದು ಪರಸಪ್ಪ ಉಡಾಫೆಯ ಮಾತಾಡಿದ.
' ಅಲಿ ಏನ್ ಎಡವಟ್ಟ ಅದಾನ್ಲೆ ಇವ, ಹೋಗ್ಲಿ ಹೊಸಬದಾನ ಸರ್ವೀಸಾದಂಗ ಕೆಲಸಕ್ಕ ಹೊಂದಿಕೋತಾನ ಅಂದ್ರ ಇಂವ ಸುಧಾರಣಿ ಆಗೋ ಹಂಗ ಕಾಣೋದುಲ್ಲ, ಹೋಗಲಿ ವಿದ್ಯಾವಂತ ಅದಿ ರೈಟರ್ ಕೆಲಸ ಮಾಡು ಅಂದ್ರ ಒಲ್ಲೆ ಅಂತಾನ, ಇನ್ವೆಸ್ಟಿಗೇಶನ್ ಮಾಡು ಅಂದ್ರ ಅದಕೂ ಒಲ್ಲೆ ಅಂತಾನ, ಕೋರ್ಟ ಡ್ಯೂಟಿ ಮಾಡು ಇಲ್ಲ ಸಮನ್ಸ ವಾರೆಂಟ್ ಡ್ಯೂಟಿ ಮಾಡು ಅಂದ್ರ ಆಗೋದಿಲ್ಲ ಅಂತಾನ, ಬಿಗಿ ಡ್ಯೂಟಿ ಯಾವದು ಬಂದರೂ ತಪ್ಪಿಸಿ ಕೊಳ್ಳಾಕ ನೋಡ್ತಾನ ಇವನ ಹತ್ರ ಡ್ಯೂಟಿ ತುಗೊಳ್ಳೊದು ಒಂದು ಹರ ಸಾಹಸ ಆಗೇದ ' ಎಂದರು ಮಂಜಪ್ಪ ಗೌಡ.
' ಏನ್ ಹೊಸಬ ಸಾರ್ ಆರು ವರ್ಷ ಸರ್ವೀಸಾತು ಇದು ಎರಡನೆ ಸ್ಟೇಶನ್ ' ಎಂದರು ನುಸ್ರತ್ ಅಲಿ.
' ನಾ ಏನು ಆಡಬಾರದ್ದು ಆಡೇನಿ ಇರೋ ವಿಷಯಾನ ಹೇಳೀನಿ, ಕಂಡದ್ದು ಆಡಿದ್ರ ಕೆಂಡದಂಥಾ ಸಿಟ್ಟಂತ, ನಾನೂ ಡಬಲ್ ಡಿಗ್ರಿ ಮಾಡೇನ್ರಿ ನನಗ ಎಂಥಾ ಕೆಲಸ ಕೊಡಬೇಕು ಅಂತ ನಿಮಗ ಗೊತ್ತಾಗಬೇಕ್ರಿ ' ಎಂದ ಪರಸಪ್ಪ.
' ಏ ಪರಸಾ ಏನ ಮಾತಾಡ್ತೀಯೋ, ಒಳ್ಳೆ ಗಂವಾರ್ ಮಾತಾಡಿದ್ಹಾಂಗ ಮಾತಾಡ್ತಿಯಲ್ಲೊ, ನಾನೂ ನೀ ಬಂದಾಗಿನಿಂದ ನೋಡ್ಕೋಂತನ ಬಂದೀನಿ ತಕರಾರಿಲ್ಲದ ಒಮ್ಮೆರ ಕೆಲಸಾ ಮಾಡಿಯೇನು? ಡಬಲ್ ಡಿಗ್ರಿ ತಗೊಂಡೇನಿ ಅಂತಿ ಒಂದಷ್ಟು ಸನ್ನಿ ಸೂಕ್ಷ್ಮ ಬ್ಯಾಡನು. ನೀನೊಬ್ಬನ ಡಿಗ್ರಿ ತಗೊಂಡವ ಅನು ಈ ಸ್ಟೇಶನ್ಯಾಗ. ಆ ಲೋಕನ್ನ ನೋಡು ಡಿಎಸ್ಪಿ ಆಫೀಸಿನ್ಯಾಗ ಹ್ಯಾಂಗ ಕೆಲಸ ಮಾಡ್ಕೊಂಡು ಹೋಗಾಕ ಹತ್ಯಾನ, ಬರೆ ಎರಡ ವರ್ಷ ಸರ್ವೀಸ್ ಆಗೇದ ಅಂವಗ, ಅದ ಬ್ಯಾಡ ನಮ್ಮ್ ಸ್ಟೇಶನ್ ರೈಟರ್ ರಾಮಾಂಜನೇಯನ್ನ ನೋಡು ಅವನೂ ಬಿಎಸ್ಸಿ ಮಾಡ್ಯಾನ, ಅಂವ ಈಗ ಕೆಲಸ ಮಾಡ್ಕೊಂಡು ಹೋಗ್ತಾ ಇಲ್ಲನು, ನಿನಗೊಬ್ಬಗ ಪುಕ್ಕ ಬಂದಾವನು ' ಎಂದು ನುಸ್ರತ್ ಅಲಿ ದನಿ ಏರಿಸಿ ಮಾತನಾಡಿದರು.
ಸುಲಭದ ಮಾತಿಗೆ ಬಗ್ಗದ ಪರಸಪ್ಪನನ್ನು ಉದ್ದೇಶಿಸಿ ' ನೋಡು ಪರಸಪ್ಪ ಇಲ್ಲಿ ವಿಷಯ ಎಲ್ಲಾ ನಿನಗ ತಿಳದದ ನಾನೂ ನಿನಗ ಸೀರಿಯಸ್ಸಾಗೆ ಹೇಳ್ತೀನಿ, ನೀ ಇವತ್ತ ಸ್ಟೇಶನ್ಯಾಗ ಇದ್ದು ಹತ್ತು ವರ್ಷದ ಕ್ರೈಂ ಸ್ಟಾಟೆಸ್ಟಿಕ್ ಹಾಕಿ ಡಿಪಿಓಗೆ ಕಳಸು, ಇಲ್ಲಾಂದ್ರ ವೈರ್ ಲೆಸ್ ಕೆಲಸ ಮಾಡು, ಬರೋವು ಹೋಗೋವು ಯಾವ ಮೆಸೇಜ್ ಆಗ್ಲಿ ಪೆಂಡಿಂಗ್ ಇರಬಾರದು ಯಾವದು ನಿನಗ ಸರಿ ಅನಸ್ತದೋ ಅದನ್ನ ಮಾಡು ' ಎಂದರು ಮಂಜಪ್ಪ ಗೌಡರು.
ಅಷ್ಟರಲ್ಲಿ ಮುನಿಸ್ವಾಮಿ ಸಬ್ ಇನಸ್ಪೆಕ್ಟರ್ ರೂಮಿನ ಬಾಗಿಲಲ್ಲಿ ಕಾಣಿಸಿಕೊಂಡು ಕೈಮುಗಿದ. ಪಿಎಸ್ಐ ಆತನಿಗೆ ಕುಳಿತು ಕೊಳ್ಳುವಂತೆ ಸೂಚಿಸಿದರು. ಪಟೇಲ್ ಪರಮಯ್ಯ ಕೊಟ್ಟು ಕಳಿಸಿದ ದೂರನ್ನು ಸ್ವೀಕರಿಸಿ ಅದಕ್ಕೆ ಸ್ವೀಕೃತಿ ಹಾಕಿ ಪ್ರಕರಣದ ಸಂಖ್ಯೆ ಕಲಂನ್ನು ನಮೂದಿಸಿ ಪರಸಪ್ಪನ ಕೈಗೆ ಆ ದೂರನ್ನು ಕೊಟ್ಟು ರೈಟರ್ಗೆ ಕೊಟ್ಟು ಪ್ರಕರಣ ದಾಖಲಿಸಿ ಜೊತೆಗೆ ಎಲ್ಲ ಫಾರಂ ಮತ್ತು ಪೇಪರ್ ಗಳನ್ನು ತರುವಂತೆ ತಿಳಿಸಿದರು.
ರೈಟರ್ ರಾಮಾಂಜನೇಯನ ಕೊಠಡಿಗೆ ಬಂದ ಪರಸಪ್ಪ ಆ ದೂರನ್ನು ರೈಟರಿಗೆ ನೀಡಿ ಹೊರಗೆ ಬಂದು ಠಾಣೆಯ ಗೇಟ್ ಬಳಿ ಬಂದು ನಿಂತು ಬಸ್ ಸ್ಟಾಪ್ ಕಡೆಗೆ ಗಮನ ಹರಿಸ ತೊಡಗಿದ.
ಸಬ್ ಇನಸ್ಪೆಕ್ಟರ್ ರೂಮಿನಿಂದ ಹೊರ ಬಂದು ಬಸ್ ಸ್ಟ್ಯಾಂಡ್ ಕಡೆಗೆ ಹೊರಟ ಮುನಿಸ್ವಾಮಿಯನ್ನು ತಡೆದು ನಿಲ್ಲಿಸಿ' ಏನೊ ಮುನಿಸ್ವಾಮಿ ಯಾರೋ ಅದು ನೇಣು ಹಾಕ್ಕೊಂಡವರು, ಎಷ್ಟು ದಿವಸ ಆತೋ ಅಂವ ನೇಣು ಹಾಕ್ಕೊಂಡು ' ಎಂದು ಪರಸಪ್ದ ಆತನನ್ನು ಪ್ರಶ್ನಿಸಿದ. '
ಯಾರೋ ಗೊತ್ತಿಲ್ಲ ಸಾರ್, ಆತ ನಮ್ಮ ಗ್ರಾಮದ ಸುತ್ತು ಮುತ್ತಲಿನ ಜನದ ಹಾಗೆ ಕಾಣುವುದಿಲ್ಲ, ಹೆಣ ಕೊಳೆಯುತ್ತ್ತಿದೆ, ಹತ್ತಿರ ಹೋಗದಷ್ಟೂ ದುರ್ವಾಸನೆ ಹರಡಿದೆ. ದನ ಕಾಯುವ ಹುಡುಗರು ಯಾರೋ ಮೊನ್ನೆ ನೋಡಿದರಂತೆ, ವಿಷಯ ತಿಳಿದ ಪಟೇಲರು ನಿನ್ನೆ ಸ್ಥಳಕ್ಕೆ ಹೋಗಿ ನೋಡಿ ಬಂದು ದೂರು ಬರೆಸಿ ಕೊಟ್ಟು ಇಲ್ಲಿಗೆ ತಲುಪಿಸಲು ಹೇಳಿದ್ಚರು ಅದನ್ನು ಈಗ ತಂದು ಕೊಟ್ಟೆ ' ಎಂದು ವಿವರಿಸಿದ.
' ಆಯ್ತು ನೀನು ಹೋಗು ' ಎಂದು ಮುನಿಸ್ವಾಮಿಗೆ ಹೇಳಿದ ಪರಸಪ್ಪ ತನ್ನ ಪ್ಯಾಂಟಿನ ಜೋಬಿನಿಂದ ಬ್ರಿಸ್ಟಾಲ್ ಸಿಗರೇಟ್ ಪ್ಯಾಕ್ ತೆಗೆದು ಅದರಿಂದ ಒಂದು ಸಿಗರೇಟನ್ನು ಎಳೆದುಕೊಂಡು ತುಟಿಗಳ ಮಧ್ಯೆ ಇರಿಸಿ, ಲೈಟರನ್ನು ಹೊರ ತೆಗೆದು ಎರಡೂ ಹಸ್ತಗಳ ಮಧ್ಯೆ ಹಿಡಿದು ಹೊತ್ತಿಸಿ ಲೈಟರಿನಿಂದ ಎದ್ದ ಜ್ವಾಲೆಯನ್ನು ಸಿಗರೇಟಿನ ತುದಿಗೆ ಸೋಕಿಸಿ ಜೋರಾಗಿ ಧೂಮವನ್ನು ಒಳಗೆಳೆದುಕೊಂಡ, ನಿಧಾನವಾಗಿ ಸಿಗರೇಟ್ ಆಸ್ವಾದನೆಗೆ ತೊಡಗಿದ. ಸಿಗರೇಟಿನ ತುದಿಯ ಮುಂದೆ ಸಂಗ್ರಹವಾದ ಬೂದಿಯನ್ನು ಕೊಡವಿ ಮತ್ತೆ ತುಟಿಗಳ ಮಧ್ಯೆ ಇರಿಸಿಕೊಂಡ. ಅಷ್ದರಲ್ಲಿ ಸಗರಪುರದಿಂದ ಶ್ರೀ ಕೃಷ್ಣ ಟ್ರಾನ್ಸ್ ಪೋರ್ಟ ಕಂಪನಿಯ ಬಸ್ಸೊಂದು ಠಾಣೆಯ ಎದುರು ನಿಂತಿತು. ಬಸ್ಸಿನಿಂದಿಳಿದ ಪಿಸಿ ಆಂಜನೇಯ ಠಾಣೆಯ ಒಳಗೆ ನಡೆದ.
ಇದನ್ನು ಗಮನಿಸಿದ ಪರಸಪ್ಪ ಸಿಗರೇಟಿನ ಕೊನೆಯ ಜುರುಕಿಯನ್ನು ಎಳೆದು ಚರಂಡಿಗೆ ಎಸೆದು ರೈಟರ್ ಕೊಠಡಿಗೆ ಬಂದ. ' ರಾಮಾಂಜನಿ ಯೂಡಿಆರ್ ಡೆಡ್ ಬಾಡಿ ವಾಚ್ ಗೆ ಪಾಸ್ ಪೋರ್ಟ ಬರದೀ ಏನೋ ' ಎಂದು ರೈಟರ್ ರಾಮಾಂಜನೇಯನನ್ನು ಪ್ರಶ್ನಿಸಿದ.
' ಡಿಸಿಆರ್ ಬಿ ಯಿಂದ ಹತ್ತು ವರ್ಷದ ಕ್ರೈಂ ಸ್ಟಾಟೆಸ್ಟಿಕ್ಸ್ ಕೇಳ್ಯಾರ ಅದನ್ನ ಮಾಡ್ತಾ ಇದೀನಿ ಒಂಚೂರು ನೀನ ಬರ್ಕೊಳ್ಳೊ ' ಎಂದು ರಾಮಾಂಜನಿ ಕೇಳಿಕೊಂಡ. '
' ಅದು ರೈಟರ್ ಕೆಲಸ ಕಣಯ್ಯ ನೀನ ಬರದು ಕೊಡಬೇಕು, ನನಗ ಹುಷಾರಿಲ್ಲ ಡೆಡ್ ಬಾಡಿ ವಾಚ್ಗೆ ಆಂಜೇಯನಿಗೆ ಪಾಸ್ಪೋರ್ಟ ಬರಿ ' ಎಂದ ಪರಸಪ್ಪ.
' ಅಂವ ಮೂರು ದಿವಸಾತು ಊರ ಬಿಟ್ಟು ಸಮನ್ಸ್ ವಾರಂಟ್ ಜಾರಿ ಬಗ್ಗೆ ಮೈಸೂರು ಗುಂಡ್ಲುಪೇಟೆ ಕಡೆಗೆ ಹೋದವ ಇವತ್ತ ಈಗಿನ್ನೂ ಬಂದಾನ ಹೇಳೋಕೂ ಒಂಚೂರು ಮನುಷ್ಯತ್ವ ಬ್ಯಾಡನು ' ಎಂದ ರಾಮಾಂಜನೇಯ.
' ಮತ್ತ ನಾವೇನು ಇಲ್ಲೆ ಅರಾಮ ಅದೀವಂತ ತಿಳದಿ ಏನು ? ನಾವೂ ಬೆಳತನಕ ಡ್ಯೂಟಿ ಮಾಡಿದವರ, ನಿನ್ನಂಗ ಬರಿ ನಾಕಕ್ಷರ ಬರದು ಮನಿಗೆ ಹೋಗಿ ಅರಾಮ ಆಗಿ ಮಲಗಿ ಬಂದಿಲ್ಲ ತಿಳಕೊ, ಇಲ್ಲೆಲ್ಲ ನಿಮ್ಮದ ದರ್ಬಾರ ಆಗಿ ಬಿಟ್ಟದ, ಇಲ್ಲಿಗೆ ನೀನ ಸಬ್ ಇನಸ್ಪೆಕ್ಟರ್ ಆಗಿ ಬಿಟ್ಟಿ ' ಎಂದು ಪರಸಪ್ಚಪ ಧ್ವನಿ ಏರಿಸಿ ಪ್ರಚೋದಿಸಿ ಮಾತ ನಾಡಿದ.
' ನಾನೇನೂ ಸಬ್ ಇನಸ್ಪೆಕ್ಟರ್ ಅಲ್ಲ, ಸಾಹೇಬರು ನಿನಗ ಪಾಸ್ ಪೋರ್ಟ ಬರಿಯಾಕ ಹೇಳ್ಯಾರ, ಆಂಜನೇಯನಿಗೆ ಪಾಸ್ ಪೋರ್ಟ ಬರಿ ಅಂತ ನೀ ನನಗ ಹೇಳ್ತಿ, ನಾನು ಸಾಹೇಬರು ಹೇಳಿದ ಮಾತು ಕೇಳಲೋ ಇಲ್ಲ ನಿನ್ನ ಮಾತು ಕೇಳಲೋ. ಪಾಸ್ ಪೋರ್ಟ ಬರದು ಇಟ್ಟೇನಿ ಹೆಸರು ಬಕಲ್ ನಂಬರ್ ಅವರ ಬರೀಲಿ ತುಗೊಂಡು' ಹೋಗು ಎಂದು ಪಾಸ್ ಪೋರ್ಟ ಪುಸ್ತಕವನ್ನು ಪರಸಪ್ಪನ ಮುಂದೆ ತಳ್ಳಿದ. '
' ಸಹಿ ಮಾಡ್ಸೋದು ಕೊಡೋದು ಅದು ನಿನ್ನ ಕೆಲಸ ನೀ ಮಾಡು ' ಎಂದು ಪರಸಪ್ಪ ಮರು ನುಡಿದ.
' ಸಬ್ ಇನಸ್ಪೆಕ್ಟರ್ ನಿನಗ ಪಾಸ್ ಪೋರ್ಟ ಬರಿಯಾಕ ಹೇಳ್ಯಾರ, ನಿನ್ನ ಹೆಸರು ಬರದು ಸಹಿ ಹಾಕಿಸಿ ಕೊಡ್ತೇನಿ ತುಗೊಂಡು ಹೋಗು ' ಎಂದು ರಾಮಾಂಜನೇಯ ಹೇಳಿದ.
' ಏನ ಕಾಡ್ತೀರಲೆ ನನಗ ಹುಷಾರಿಲ್ಲ ಅಂತ ಪದೇ ಪದೇ ಬಡ್ಕೊಳ್ಳಾಕ ಹತ್ತೇನಿ, ಬರೆ ನಿಮ್ದ ನೀವ್ ಹೇಳ್ತೀರಿ ಒಂದು ಕ್ವಾರ್ಟರ್ ಸೀಟು ಪೇಪರ್ ಕೊಡು ರಜಾ ಬರದು ಕೊಡ್ತೀನಿ ' ಎಂದ ಪರಸಪ್ಪ.
' ಏನೋ ರಾಮಾಂಜನಿ ಅದು ಪರಸನ ತಕರಾರು ' ಎಂದು ದಫೇದಾರ್ ನುಸ್ರತ್ ಅಲಿ ಪರಿಸ್ಥಿತಿಯನ್ನು ತಿಳಿ ಗೊಳಿಸಲು ನೋಡಿದರು.
' ಸಾರ್! ಪರಸಪ್ಪ ಡೆಡ್ ಬಾಡಿ ವಾಚ್ಗೆ ಬರೋದಿಲ್ಲಂತ, ಆಂಜನೇಯಗ ಹಾಕು ನನಗ ಹುಷಾರಿಲ್ಲ ಅಂತ ತಕರಾರು ಮಾಡ್ತಾ ಇದಾನೆ ' ಎಂದ ರಾಮಾಂಜನೇಯ.
' ಇಷ್ಟೊತ್ತಿನ ತನಕ ಸರೀನ ಇದ್ನಲ್ಲೊ ಇದ್ದಕಿದ್ದಾಂಗ ಏನ್ ರೋಗ ಸುರುವಾತು ಅಂವಗ' ಎಂದರು ನುಸ್ರತ್ ಅಲಿ.
' ಅಯ್ಯೋ ಬಿಡಿ ಸಾರ್ ನಮ್ಮ ಕಷ್ಟ ನಮಗಾದರ ನಿಮ್ಮ ತಮಾಷೆ ನಿಮಗ ' ಎನ್ನುತ್ತ ಕೆಮ್ಮುತ್ತ ಬಂದ ಪರಸಪ್ಪ ಎರಡು ದಿನಗಳ ರಜಾ ಕೋರಿಕೆ ಪತ್ರವನ್ನು ಸಬ್ ಇನಸ್ಪೆಕ್ಟರ್ ಮುಂದೆ ಇಟ್ಟ.
' ಡ್ಯೂಟಿಗೆ ಮೆನ್ ಇಲ್ಲ ಅಂತ ನಾವು ಸಾಯ್ತಾ ಇದೀವಿ, ಇಂಥಾ ಹೊತ್ನ್ಯಾಗ ರಜಾ ಕೊಡು ಅಂದ್ರ ಹ್ಯಾಂಗೋ ಪರಸ, ಹೋಗು ರೆಸ್ಟ ತಗೊಂಡು ನೈಟ್ ಡ್ಯೂಟಿಗೆ ಬಾ ಹೋಗು ' ಎಂದ ಮಂಜಪ್ಪ ಗೌಡರು
' ಅಲಿ ನೀನು ಆಂಜನೇಯನನ್ನು ಕರೆದುಕೊಂಡು ಈಗಿಂದೀಗ ಬಿದ್ರಕಾನಿಗೆ ಹೋಗಿ ಕೇಸ್ ಅಟೆಂಡ್ ಮಾಡು ನಾನು ಆ ಮೇಲೆ ಬರ್ತೀನಿ ಎಂದರು. ರೈಟರ್ ರೂಮಿಗೆ ಹೋದ ನುಸ್ರತ್ ಅಲಿ ' ರಾಮಾಂಜನಿ ಪಾಸ್ ಪೋರ್ಟನ್ಯಾಗ ಆಂಜನೇಯನ ಹೆಸರು ಬರಿ ಎಲ್ಲ ಫಾರಗಳನ್ನು ಎರಡೆರಡು ಸೆಟ್ ಅಂವಗ ಕೊಡು ' ಎಂದರು.
' ಸಾರ್ ನಾನು ಊರು ಬಿಟ್ಟು ಮೂರು ದಿವಸ ಆತು ಇವತ್ತ ಬಂದೇನಿ, ಸರಿಯಾಗಿ ನಿದ್ದೆ ಇಲ್ಲ, ಯೂನಿ ಫಾರ್ಮ ಬೇರೆ ಹೊಲಸಾಗ್ಯಾವ ಬೇರೆ ಯಾರನರ ಕರ್ಕೊಂಡು ಹೋಗ್ರಿ., ಇನ್ನೊಂದ ಸಲ ಬೇಕಾದ್ರ ನಾನ ಬರ್ತೆನಿ ' ಎಂದು ಆಂಜನೇಯ ತನ್ನ ಅಹಬಾಲನ್ನು ಅವರ ಮುಂದೆ ಇಟ್ಟ.
' ಏನ್ ಮಾಡೋದಪ ಪರಸಾ ನೋಡಿದ್ರ ಎಡವಟ್ಟು ತಕ್ಕೊಂಡು ಕೂತಾನ. ನಿನ್ನ ಸಮಸ್ಯೇನೂ ಅರ್ಥ ಆಗತದ ಆದರ ಪರಿಸ್ಥಿತಿ ಹಂಗಿಲ್ಲ. ಅಲ್ಲೊಬ್ಬಂವ ಗತಿಕಾಣದ ಹದಿನೈದು ದಿವಸದಿಂದ ಮರದ ರೆಂಬಿಗೆ ನೇತಾಡ್ಕೊಂಡು ಕೊಳಿಯಾಕ ಹತ್ಯಾನ. ನೀನೆನು ಗಣ ರಾಜ್ಯೋತ್ಸವದ ಪರೇಡ್ಗೆ ಹೊಂಟಿಲ್ಲ ಅಂವಗೊಂದು ಗತಿ ಕಾಣಿಸಿ ಬಂದು ಒಂದ ಸರ್ತಿ ಶುದ್ದಾಗಿ ಬಡುವಂತಿ ನಡಿ. ತುಗೋ ಕ್ಲಿಪ್ ಬೋರ್ಡ ಫಾರಂ ಗಳ ಸೆಟ್ಟು. ಬಸ್ ಸ್ಟ್ಯಾಂಡಿನ ಹತ್ರ ನಾಯಕರ ಅಂಗಡ್ಯಾಗ ನಾನು ಹೇಳೇನಿ ಅಂತ ಹೇಳಿ ಎರಡು ಡಜನ್ ಬಿಳಿ ಪೇಪರ್ ನಾಲ್ಕು ಕಾರ್ಬನ್ ಶೀಟ್ ತುಗೊಂಡು ಒಂಭತ್ತು ಗಂಟೇಕ ಬರೋ ಬಸ್ಸಿಗೆ ಹತ್ತಿ ನನಗೊಂದು ಸೀಟು ಹಿಡ್ಕೊಂಡು ಬಾ ನಾ ಇಲ್ಲೆ ಬಸ್ ಹತ್ತತೇನಿ ' ಎಂದರು ನುಸ್ರತ್ ಅಲಿ.
( ಮುಂದುವರಿದುದು )
ಅಪರಚಿತ ಭಾಗ 1ನೋಡಲು ಲಿಂಕ್ :sampada.net/blog/%E0%B2%85%E0%B2%AA%E0%B2%B0%E0%B2%BF%E0%B2%9A%E0%B2%BF%E0%B2%A4-%E0%B2%AD%E0%B2%BE%E0%B2%971%E0%B2%95%E0%B2%A5%E0%B3%86/02/08/2012/37749
Comments
ಉ: ' ಅಪರಿಚಿತ' ಭಾಗ 2(ಕಥೆ)
In reply to ಉ: ' ಅಪರಿಚಿತ' ಭಾಗ 2(ಕಥೆ) by partha1059
ಉ: ' ಅಪರಿಚಿತ' ಭಾಗ 2(ಕಥೆ)
ಉ: ' ಅಪರಿಚಿತ' ಭಾಗ 2(ಕಥೆ)
In reply to ಉ: ' ಅಪರಿಚಿತ' ಭಾಗ 2(ಕಥೆ) by makara
ಉ: ' ಅಪರಿಚಿತ' ಭಾಗ 2(ಕಥೆ)
ಉ: ' ಅಪರಿಚಿತ' ಭಾಗ 2(ಕಥೆ)
In reply to ಉ: ' ಅಪರಿಚಿತ' ಭಾಗ 2(ಕಥೆ) by kamalap09
ಉ: ' ಅಪರಿಚಿತ' ಭಾಗ 2(ಕಥೆ)