" ಅಪರಿಚಿತ "ಭಾಗ 3 (ಕಥೆ)
ರೈಟರ್ ತಂದಿಟ್ಟ ಎಫ್ಐಆರ್ ಗಳಿಗೆ ಸಹಿ ಮಾಡಿದ ಮಂಜಪ್ಪ ಗೌಡರು ಕಾಲಿಂಗ್ ಬೆಲ್ ಒತ್ತಿದರು. ಬಾಗಿಲಲ್ಲಿ ಬಂದು ನಿಂತ ಪಹರೆ ಪಿಸಿ ದೇವದಾಸನನ್ನು ಕರೆದು ಈ ಎಫ್ಐಆರ್ ಗಳನ್ನು ಡಿಸ್ಪ್ಯಾಚ್ ಮಾಡಿ ಕೇಸ್ ಫೈಲ್ ಮಾಡಿ ತರಲು ರಾಮಾಂಜನೇಯನಿಗೆ ಹೇಳು ಎಂದರು. ಅಷ್ಟರಲ್ಲಿ ಫೋನು ರಿಂಗುಣಿಸಿತು. ರಿಸೀವರ್ ಎತ್ತಿಕೊಂಡ ಮಂಜಪ್ಪ ಗೌಡರು ಹಲೋ ಎಂದರು. ಆ ತುದಿಯಲ್ಲಿ ಸುಳಗೋಡು ಪೋಲೀಸ್ ಹೊರಠಾಣೆಯ ಹೆಚ್ ಸಿ ಇದ್ದರು.
' ವೆಂಕಟಯ್ಯ ನಿಮ್ಮ ಹೊರಠಾಣೆ ವ್ಯಾಪ್ತಿಯ ಕುಮರಿ ವ್ಯಾಪ್ತಿಯ ಬಿದ್ರಕಾನಿನಲ್ಲಿ ಯಾರೋ ಒಬ್ಬ ಅನಾಮಧೇಯ ನೇಣು ಹಾಕಿಕೊಂಡ ಪ್ರಕರಣ ವರದಿ ಯಾಗಿದೆ. ಈ ಪ್ರಕರಣದ ತನಿಖೆಯ ಬಗ್ಗೆ ಇಲ್ಲಿಂದ ಹೆಚ್ ಸಿ ನುಸ್ರತ್ ಅಲಿ ಮತ್ತು ಪಿಸಿ ಆಂಜನೇಯ ಬರುತ್ತಿದ್ದಾರೆ, ನೀನು ಕುಮರಿ ಬಸ್ ಸ್ಟಾಪ್ನಲ್ಲಿ ಹಾಜರಿದ್ದು ಅವರಿಗೆ ಸಹಕರಿಸು, ನಾನೂ ಸಹ ಬರುತ್ತ್ತಿದ್ದೇನೆ ನಿಮ್ಮಲ್ಲಿ ಸಿಬ್ಬಂದಿ ಯಾರು ದೊರೆಯುತ್ತರಾರೆ ' ಎಂದರು ಮಂಜಪ್ಪ ಗೌಡ.
' ಸಾರ್ ಇರುವುದೆ ಎರಡು ಜನ ಸಿಬ್ದಂದಿ ವಿಲ್ ಫ್ರೆಡ್ ಮತ್ತು ಮಂಜುನಾಥ,, ಉಪಠಾಣೆ ಪಹರೆಗೆ ಒಬ್ಬನನ್ನು ಹಾಕಿದರೆ ಉಳಿಯುವವ ಒಬ್ಬನೆ ' ಎಂದರು ವೆಂಕಟಯ್ಯ.
' ವಿಲ್ ಫ್ರೆಡ್ ನನ್ನು ಪಹರೆಗೆ ನೇಮಿಸಿ ನೀನು ಮಂಜುನಾಥನನ್ನು ಜೊತೆಗೆ ಕರೆದುಕೊಂಡು ಕುಮರಿಗೆ ಬಾ, ಸ್ಥಳಕ್ಕೆ ಭೇಟಿ ನೀಡಿ ಇನ್ಕ್ವೆಷ್ಟ್ ಮುಗಿಸಿ ಚುರ್ಚಗುಂಡಿಗೆ ಹೋಗೋಣ ಅಲ್ಲಿಯದೊಂದು ಲ್ಯಾಂಡ್ ಡಿಸ್ಪ್ಯೂಟ್ ಪಿಟಿಶನ್ ಇದೆ, ಹಾಗೆಯೆ ಸುಳಗೋಡಿನ ನೇಮಯ್ಯ ತನ್ನ ಮನ್ಯಾಗ ಇಸ್ಪೀಟು ಆಡಿಸ್ತಾ ಇದಾನೆ ಇದಕ್ಕೆಲ್ಲ ಪೋಲೀಸರ ಕುಮ್ಮಕ್ಕು ಇದೆ ಅಂತ ಒಂದು ಅನಾಮಧೇಯ ಅರ್ಜಿ ಬಂದಿದೆ ಈ ಬಗ್ಗೆ ಪರಿಶೀಲಿಸಬೇಕು ' ಎಂದರು ಮಂಜಪ್ಪ ಗೌಡರು.
*
ಠಾಣೆಯ ಮುಂದೆ ಗೇಟಿನ ಹತ್ತಿರ ನಿಂತು ನುಸ್ರತ್ ಅಲಿ ಬಸ್ಸಿನ ಬರುವಿಕೆಗಾಗಿ ಕಾಯುತ್ತ ನಿಂತರು. ಬಸ್ಸು ನಿಲ್ದಾಣ ಬಿಟ್ಟು ನಿಧಾನಕ್ಕೆ ಚಲಿಸಲು ಪ್ರಾರಂಭಿಸಿತು. ನುಸ್ರತ್ ತಮ್ಮ ಕೈಯಲ್ಲಿದ್ದ ಮೋಟು ಬೀಡಿಯನ್ನು ಬಾಯಲ್ಲಿಟ್ಟುಕೊಂಡು ಜೋರಾಗಿ ಒಂದು ದಮ್ಮು ಎಳೆದು ಆ ಬೀಡಿಯ ಮೋಟನ್ನು ಚರಂಡಿಗೆ ಎಸೆದು ರಸ್ತೆಯ ಬದಿಗೆ ಬಂದರು. ಬಸ್ಸು ಹತ್ತಿರ ಬರುತ್ತಿದ್ದಂತೆ ನಿಲ್ಲಿಸುವಂತೆ ಸಂಜ್ಞೆ ಮಾಡಿದರು, ಬಸ್ಸು ನಿಂತು ಕೊಂಡಿತು. ಚಾಲಕ ಮುಝಫ್ರ್ ಅವರಿಗೆ ವಂದಿಸಿದ, ಪ್ರತಿ ವಂದಿಸಿದ ನುಸ್ರತ್ ಬಸ್ ಹತ್ತಿ ಆಂಜನೇಯನಿಗಾಗಿ ಹುಡುಕಿದರು. ಆತ ಚಾಲಕನ ಸೀಟಿನ ಹಿಂಭಾಗದಲ್ಲಿ ಸೀಟು ಹಿಡಿದು ಕುಳಿತು ಕೊಂಡಿದ್ದ, ಅಲ್ಲಿಗೆ ಹೋಗಿ ನುಸ್ರತ್ ಆಸೀನರಾದರು. ಬಸ್ ಚಲಿಸಿತು. ಕಿಟಕಿಯ ಪಕ್ಕ ಕುಳಿತ ಆಂಜನೇಯ ಎದುರುಗಡೆ ಮತ್ತು ಬಲಭಾಗದ ಕಿಟಕಿಯ ಮೂಲಕ ಹೊರಗೆ ದೃಷ್ಟಿ ಹರಿಸಿದ. ಪಾರ್ವತಿ ನದಿಗೆ ಅಡ್ಡಲಾಗಿ ಕಟ್ಟಿದ ಬೃಹತ್ ಸೇತುವೆ, ಮತ್ತು ನಿನ್ನೆ ರಾತ್ರಿ ಸುರಿದ ಮುಂಗಾರು ಮಳೆಗೆ ಪ್ರಕೃತಿ ಸಸ್ಯರಾಶಿಗಳು ಮಿಂದು ಶುಭ್ರವಾಗಿ ನಳನಳಿಸುತ್ತಿದ್ದವು. ಗುಡ್ಡ ಬೆಟ್ಟಗಳ ಕಲ್ಲು ಬಂಡೆ ಗಳು ಅಂಕು ಡೊಂಕಾಗಿ ತೆರೆದು ಕೊಳ್ಳುತ್ತಿದ್ದ ಟಾರ್ ರಸ್ತೆ ಎಲ್ಲವೂ ಶುಭ್ರಗೊಂಡು ವಿಶೇಷ ಪ್ರಭೆಯಿಂದ ಹೊಳೆಯು ತ್ತಿದ್ದವು, ಪ್ರಕೃತಿ ಒಂದು ತರಹದ ಉನ್ಮಾದದ ಸ್ಥಿತಿಯಲ್ಲಿತ್ತು. ಆದರೆ ನೇಣು ಹಾಕಿಕೊಂಡು ಮೃತಪಟ್ಟ ಆ ಅಪರಿಚಿತ ವ್ಯಕ್ತಿ ಪ್ರಕೃತಿಯ ಚಲನಶೀಲತೆಗೆ ವಿಮುಖನಾಗಿ ತನ್ನ ಜೀವಕ್ಕೆ ಸಂಚಕಾರ ತಂದುಕೊಂಡು ಮರದ ರೆಂಬೆಗೆ ಜೋತು ಬಿದ್ದು ಕೊಳೆಯುತ್ತಿದ್ದ. ಸುತ್ತ ಮುತ್ತ ಸಹ್ಯಾದ್ರಿಯ ಉತ್ತುಂಗ ಗಿರಿ ಶೃಂಗಗಳು ಮೇಲೆ ವಿಶಾಲ ನೀಲ ಗಗನ, ಅಲ್ಲೆ ಮೇಲೇರಿ ಬರುತ್ತಿದ್ದ ಬೃಹತ್ ಗಾತ್ರದ ಬಿಳಿ ಕರಿ ಮೋಡಗಳ ಹಿಂಡು ಮಳೆಯ ಎಲ್ಲ ಲಕ್ಷಣಗಳೂ ಅಲ್ಲಿ ಗೋಚರಿಸುತ್ತಿದ್ದವು. ಇವತ್ತೊಂದು ದಿನ ಮಳೆ ಬಾರದಿರಲಿ ಎಂದು ಮನದಲ್ಲಿ ಅಂದುಕೊಂಡ ಆಂಜನೇಯ
' ಸಾರ್ ! ಈ ದಿನ ಸಾಯಂಕಾಲ ಮಳೆ ಸುರಿವ ಎಲ್ಲ ಲಕ್ಷಣಗಳು ಕಾಣುತ್ತಿವೆ, ಆ ಹೆಣದ ಅಂತ್ಯ ಸಂಸ್ಕಾರದ ಗತಿಯೇನು ? ಎಂದ.
' ಹೇಳಿ ಕೇಳಿ ಇದು ಮಲೆನಾಡು, ಮೇಲಾಗಿ ಮುಂಗಾರಿನ ಹಂಗಾಮು ಮಳೆ ಬರದೆ ಇರುತ್ತದೆಯೆ ! ಬಂದರೆ ಬರಲಿ ಮುಂದೆ ಏನಾಗುತ್ತದೋ ನೋಡೋಣ ' ಎಂದು ನುಸ್ರತ್ ಅಲಿ ಪ್ರತಿ ಹೇಳಿದರು.
ಬೆಳಗಿನ ಹನ್ನೊಂದು ಗಂಟೆಯ ಸಮಯ ಬಸ್ಸು ಹೊಳೆಕಟ್ಟು ತಲುಪಿತು. ಪಾರ್ವತಿ ನದಿಯ ಜಲಾನಯನ ಪ್ರದೇಶದಲ್ಲಿ ಬಹುತೇಕ ನೀರು ತಳ ಕಂಡಿತ್ತು. ಮಳೆಗಾಲದಲ್ಲಿ ಜಲಾನಯನ ಪ್ರದೇಶದಲ್ಲಿ ಹರಡಿಕೊಂಡ ವಿಸ್ತಾರ ನೀರಿನ ಹರವಿನಲ್ಲಿ ಮುಳುಗಿದ್ದ ಸಣ್ಣ ಸಣ್ಣ ಗುಡ್ಡ ಬೆಟ್ಟಗಳು ಹೊರಬಂದು ತಮ್ಮನ್ನು ತೆರೆದು ಕೊಂಡಿದ್ದವು. ದೊಡ್ಡ ದೊಡ್ಡ ಮರಗಳ ಮೋಟು ಬೊಡ್ಡಗಳು ಅಲ್ಲಲ್ಲಿ ಗೋಚರಿಸಿ ತಮ್ಮ ಅಸ್ತಿತ್ವವನ್ನು ಸಾರುತ್ತಿದ್ದವು.. ಬಸ್ಸಿನ ಪ್ರಯಾಣಿಕ ರೆಲ್ಲ ಕೆಳಗೆ ಇಳಿದು ಲಾಂಚನ್ನು ಏರಿದರು, ಬಸ್ಸು ಸಹ ಲಾಂಚನ್ನೇರಿತು. ನಂತರ ಕೆಲ ಬೈಕು ಜೀಪುಗಳು ಲಾಂಚ ನ್ನೇರಿದವು. ಗತಕಾಲದ ಸುಶಾಂತ ಸಮೃದ್ಧ ಕುಮರಿ ಸೀಮೆಗೆ ಲಾಂಚ್ ಪಯಣಿಸಿತು ಒಳನಾಡ ಬಂದರು ಸಾರಿಗೆ ಇಲಾಖೆಯ ವ್ಯಾಪ್ತಿಗೆ ಬರುವ ಆ ಕಛೇರಿಯ ಸಿಬ್ಬಂದಿ ಪ್ರಯಾಣಿಕರಿಗೆ ಮತ್ತು ವಾಹನಗಳ ಮಾಲೀಕರಿಗೆ ಟಿಕೆಟ್ ಕೊಡುವ ಕಾರ್ಯದಲ್ಲಿ ತೊಡಗಿದರು. ಪ್ರಯಾಣಿಕರಿಗೆ ಟಿಕೆಟ್ ಹರಿಯುತ್ತ ಬಂದ ಸಿಬ್ಬಂದಿ ಸ್ವಾಮಿನಾಥನ್ ಅಲ್ಲೆ ಸನಿಹದಲ್ಲಿ ನಿಂತಿದ್ದ ನುಸ್ರತ್ ಅಲಿ ಮತ್ತು ಆಂಜನೇಯ ಅವರಿಗೆ ವಂದಿಸಿದ.
' ಸ್ವಾಮಿ ಈಗ್ಗೆ ಸುಮಾರು ಎಂಟು ಹತ್ತು ದಿನಗಳ ಹಿಂದೆ ಈ ಕಡೆಯ ಮಾಮೂಲಿ ಪ್ರಯಾಣಿಕರನ್ನು ಬಿಟ್ಟು ಬೇರೆ ಯಾರಾದರೂ ಒಬ್ಬ ನಿಮ್ಮ ಲಾಂಚ್ ಗಳಲ್ಲಿ ಆಚೆಗೆ ಏನಾದರೂ ಹೋಗಿದ್ದರೆ ?' ಎಂದು ಪ್ರಶ್ನಿಸಿದರು.
ಆತ ' ನನಗೆ ಅಷ್ಟಾಗಿ ನೆನಪಿಲ್ಲ ಸಾರ್ ' ಎಂದು ಉತ್ತರಿಸಿದ.
ಸುಮಾರು ಇಪ್ಪತ್ತು ನಿಮಿಷಗಳ ಕಾಲ ಹಿನ್ನೀರಿನಲ್ಲಿ ಚಲಿಸಿದ ಲಾಂಚ್ ಆಚೆಯ ತಗುದಿ ತಲುಪಿ ಲಂಗರು ಹಾಕಿತು. ಪ್ರಯಾಣಿಕರು ದಾರಿಗುಂಟ ಮೇಲೇರ ತೊಡಗಿದರು. ಬೈಕ್ ಜೀಪು ಮತ್ತು ಬಸ್ಸುಗಳು ಲಾಂಚ್ನಿಂದ ಇಳಿದು ಮೇಲೇರ ತೊಡಗಿದವು. ಖಾಲಿಯಾದ ಲಾಂಚಿನಲ್ಲಿ ಆ ತುದಿಗೆ ಪಯಣಿಸಲು ಕಾದಿದ್ದ ಪ್ರಯಾಣಿಕರು, ಬಸ್ಸು ಬೈಕು ಮತ್ತು ಕಾರುಗಳು ಲಾಂಚನ್ನೇರಿದವು, ಆ ಲಾಂಚ್ ತನ್ನ ಮರು ಪ್ರಯಾಣವನ್ನು ಆರಂಭಿಸಿತು. ಲಾಂಚ್ ಇಳಿದ ನುಸ್ರತ್ ಅಲಿ ಮತ್ತು ಆಂಜನೇಯ ಮೇಲೇರಿ ಶ್ರೀ ಗಜಾನನ ಹೋಟೆಲ್ ಹತ್ತಿರ ಬಂದರು. ಅದಕ್ಕೆ ಸುಮಾರು ಐವತ್ತು ವರ್ಷಗಳ ಇತಿಹಾಸವಿದ್ದು ಆ ಭಾಗದಲ್ಲಿ ಪಯಣಿಸುವವರಿಗೆ ಹಸಿವು ಹಿಂಗಿಸುವ ಏಕೈಕ ಸ್ಥಳವಾಗಿತ್ತು.
' ಆಂಜನೇಯ ನಾವು ಕುಮರಿ ಗ್ರಾಮಕ್ಕೆ ಹೋದ ಮೇಲೆ ಮೃತನ ಶವ ತನಿಖಾ ಕ್ರಮ ಮತ್ತು ಪೋಸ್ಟ್ ಮಾರ್ಟಂ ಮುಗಿಯುವ ವರೆಗೆ ಪುರಸೊತ್ತು ಸಿಗುವುದಿಲ್ಲ. ನೇಣು ಹಾಕಿಕೊಂಡವ ಒಬ್ಬ ಅಪರಿಚಿತ; ಅವನ ಹೆಣ ಹೊರುವ ಕೆಲಸವೂ ನಮ್ಮ ಪಾಲಿಗೇ ಬರುತ್ತದೇನೋ, ಪ್ರಯಾಣಿಕರ ಉಪಹಾರ ಎಲ್ಲ ಮುಗಿಯುವ ವರೆಗೆ ಬಸ್ ಹೊರಡುವುದಿಲ್ಲ ನಾವೂ ಇಲ್ಲೆ ತಿಂಡಿ ತಿಂದು ಕಾಫಿ ಕುಡದು ಹೋಗೋಣ ' ಎಂದರು ನುಸ್ರತ್ ಅಲಿ.
ಆಂಜನೇಯ ರಾತ್ರಿ ಮೈಸೂರಿನಲ್ಲಿ ಊಟ ಮಾಡಿ ಬಸ್ಸೇರಿದವ ದಾರಿಯಲ್ಲಿ ಮತ್ತೆಲ್ಲೂ ಇಳಿದಿರಲಿಲ್ಲ. ಬೆಳಿಗ್ಗೆ ಶಿವಪುರದಲ್ಲಿ ಬಸ್ಸಿಳಿದವ ಅಲ್ಲಿಯೆ ಒಂದು ಟೀ ಕುಡಿದು ನಿರ್ಗುಂಡಿಗೆ ಹೋಗುವ ಬಸ್ ಹತ್ತಿದವ ಬಂದವನು ನೇರ ಹೊರಟು ಬಂದಿದ್ದ. ನಿಜಕ್ಕೂ ಆತನಿಗೆ ಹಸಿವಾಗ ತೊಡಗಿತ್ತು. ನುಸ್ರತ್ ಅಲಿ ಯವರನ್ನು ಅನುಸರಿಸಿ ಹೊಟೆಲ್ ಒಳಗೆ ಹೋದ.ಅಲ್ಲಿ ಬೆಂಚೊಂದರ ಮೇಲೆ ಕುಳಿತಿದ್ದ ಬಸ್ಸಿನ ಡ್ರೈವರ್ ಬನ್ನಿ ಸಾರ್ ಎಂದು ಕರೆದು ಅವರಿಗೆ ಕುಳಿತು ಕೊಳ್ಳಲು ಸ್ವಲ್ಪ ಜಾಗೆ ಬಿಟ್ಟುಕೊಟ್ಟ. ಇಬ್ಬರೂ ಅಲ್ಲಿ ಹೋಗಿ ಕುಳಿತು ಕೊಂಡರು.
ಬಸ್ಸಿನ ಡ್ರೈವರ್ ನುಸ್ರತ್ ಅಲಿ ಯವರನ್ನು ಉದ್ದೇಶಿಸಿ ' ಏನ್ ಸಾರ್ ! ಈ ಕಾಡಿಗೆ ಬಂದ್ರಿ ' ಎಂದ.
ಅವರೂ ಅದೇ ತಮಾಷೆಯ ಧ್ವನಿಯಲ್ಲಿ ' ನೀ ಬಂದಿ ಅಲ್ಲ ಹಂಗ ನಾವೂ ಬಂದ್ವಿ' ಎಂದರು.
' ನಮ್ಮದು ಬಿಡಿ ಸಾರ್ ಡ್ರೈವರ್ ಕೆಲಸ ಕಂಪನಿಯವರು ಹೇಳಿದಲ್ಲಿಗೆ ಹೋಗಬೇಕು ' ಎಂದು ಡ್ರೈವರ್ ಮರು ಉತ್ತರಿಸಿದ.
' ನಮ್ಮದೂ ಹಂಗನಪಾ ಪೋಲೀಸ್ ಕೆಲಸ ದೊಡ್ಡವರು ಹೇಳಿದಲ್ಲಿಗೆ ಹೋಗಬೇಕು, ಅದಕ್ ಬಂದ್ವಿ ' ಎಂದರು ನುಸ್ರತ್ ಅಲಿ.
' ಏನರ ಕೇಸ್ ಗೀಸ್ ಆಗಿದೆಯಾ ಹಂಗೆಲ್ಲ ಸುಮ್ಮನೆ ನೀವು ಬರೋವ್ರಲ್ಲ ' ಎಂದ ಡ್ರೈವರ್.
' ಯಾರೋ ಒಬ್ಬರು ಎಲ್ಲಿಯವರೋ ಗೊತ್ತಿಲ್ಲ ಬಿದ್ರಕಾನ್ ಜಿಗ್ನ್ಯಾಗ ನೇಣು ಹಾಕ್ಯೊಂಡು ಸತ್ತಾನ, ಆ ಬಗ್ಗೆ ಕೇಸ್ ಆಗ್ಯೇದ ಅದಕ ಹೋಂಟೇವಿ ' ಎಂದರು ನುಸ್ರತ್ ಅಲಿ.
' ಮುಝಫರ್ ನೀ ಏನರ ಇಲ್ಲಿಯವರು ಅಲ್ಲದ ಬೇರೆ ಜನ ಯಾರನಾದ್ರೂ ನಿಮ್ಮ ಬಸ್ಸಿನಾಗ ಈಗ ಎಂಟ್ಹತ್ತು ದಿನದ ಕೆಳಗ ಏನರ ನೋಡಿದ್ಹಂಗ ನೆನಪದ ಏನು ' ಎಂದರು ನುಸ್ರತ್.
' ನಂದು ಡ್ರೈವರ್ ಕೆಲಸ ಇದನೆಲ್ಲ ನಾ ಹ್ಯಾಂಗ ಗಮನಿಸಲಿ, ನಮ್ಮ ಕಡಕ್ಟರ್ ರಾಮಪ್ಪನ್ನ ಕೇಳೋಣ ' ಎಂದ ಡ್ರೈವರ್. ಆತನ ಪಕ್ಕದಲ್ಲಿಯೆ ಕುಳಿತಿದ್ದ ಕಂಡಕ್ಟರ್ ರಾಮಪ್ಪ ಎಷ್ಟೋ ಜನ ಬರ್ತಾರ, ನಾ ಅಷ್ಟಾಗಿ ಗಮನಿಸಿದ ಹಾಗೆ ಬೇರೆಯವರು ಯಾರೂ ಕಂಡ್ಹಂಗಿಲ್ಲ ಫೋಟೋ ಗೀಟೋ ಇದ್ದರ ನೋಡಿ ಹೇಳ ಬಹುದಿತ್ತು' ಎಂದ.
' ಫೋಟೋ ಗೀಟೋ ಇದ್ದರ ನಮ್ಮನ್ಯಾಕ ಕೇಳ್ತಿದ್ದರು ಅವರ ಪತ್ತೆ ಮಾಡತಿದ್ದರು ' ಎಂದ ಡ್ರೈವರ್..
' ನೋಡು ಆಂಜನೇಯ ಗಡದ್ದಾಗಿ ಇಲ್ಲೆ ಹೊಟ್ಟಿ ತುಂಬಿಸಿಕೊಂಡು ಬಿಡು, ಹೊಳ್ಳಿ ನೀ ಮನಿಗೆ ಹೋಗೋ ತನಕ ಏನೂ ಇಲ್ಲ ನೋಡು ' ಎಂದರು ನುಸ್ರತ್ ಅಲಿ. ಅವರಿಬ್ಬರೂ ಕಾಫಿ ತಿಂಡಿ ಮುಗಿಸಿ ಬಸ್ ಏರಿ ಕುಳಿತರು, ಬಸ್ಸು ಕುಮರಿ ಸೀಮೆಯ ಕಡೆಗೆ ಚಲಿಸ ತೊಡಗಿತು.
( ಮುಂದುವರಿದುದು )
Comments
ಉ: " ಅಪರಿಚಿತ "ಭಾಗ 3 (ಕಥೆ)
In reply to ಉ: " ಅಪರಿಚಿತ "ಭಾಗ 3 (ಕಥೆ) by makara
ಉ: " ಅಪರಿಚಿತ "ಭಾಗ 3 (ಕಥೆ)
ಉ: " ಅಪರಿಚಿತ "ಭಾಗ 3 (ಕಥೆ)
In reply to ಉ: " ಅಪರಿಚಿತ "ಭಾಗ 3 (ಕಥೆ) by bhalle
ಉ: " ಅಪರಿಚಿತ "ಭಾಗ 3 (ಕಥೆ)