"ದಾಗ್ ಅಚ್ಚೆ ಹೈ"

"ದಾಗ್ ಅಚ್ಚೆ ಹೈ"

ಕವನ

"ದಾಗ್ ಅಚ್ಚೆ ಹೈ"

ದುಬಾರಿ ಸಾಬೂನುನಿಂದ ಹಿಡಿದು
ಅಗ್ಗದ ಎಲ್ಲಾ ಸಾಬೂನನ್ನೂ ಬಳಸಿ,
ತಿಕ್ಕಿ ತಿಕ್ಕಿ ಮೈ ಮತ್ತು ಬಟ್ಟೆಗಳನು ತೊಳೆದುಕೊಂಡು  
ಶುಭ್ರವಾಗಿ, ಶುದ್ದವಾಗಿ,
ಸುಘಂದದ ಎಣ್ಣೆ ಒರಿಸಿಕೊಂಡು ತಯಾರಾಗುತ್ತೇನೆ.
ಮೈಗೆನೋ ಸಮಾಧಾನ,
ಆದರೆ ನನ್ನ ಮನದೊಳಗೆ,
ಸತ್ತರೂ ಮತ್ತೆ ಮತ್ತೆ ಹುಟ್ಟುವ
ಈ ಪ್ರೇಮದ, ಕಾಮದ, ದ್ವೇಷದ, ಕೋಪದ
ಕ್ರೌರ್ಯದ, ಹೊಟ್ಟೆಕಿಚ್ಚಿನ ಕೀಟಾಣುಗಳಿಗೆ
ಯಾವ ಸಾಬುನಿನಿಂದ ಉಜ್ಜಿ ತೊಳೆಯಬೇಕು ಮಹಾಸ್ವಾಮಿ..

ಮತ್ತೆ ಆ ಜಾಹಿರಾತಿನವರು ಮಕ್ಕಳಿಗೆ (ದೊಡ್ಡವರಿಗೂ...)
“ದಾಗ್ ಅಚ್ಚೆ ಹೈ”ಎಂದು ಕಲಿಸುತ್ತಾರೆ.
ನನ್ನ ಬದುಕಿಗಂಟಿದ ಸುತ್ತ ಮುತ್ತಲಿನ ಜನ,
ಬದುಕು ಬಯಸದ ಯಾವುದಾವುದೋ
ಅವಿವೇಕದ, ಅಜ್ಞಾನದ ಹೊಲಸು ಬಟ್ಟೆಗಳನು
ಮೈಮನಸುಗಳಿಗೆ ತೊಟ್ಟು ಮೆರೆಯುವಾಗ,
ಜಾಹಿರಾತಿನವರ ಮಾತು ನಿಜವಿರಬಹುದೆಂದು
ನಾನು ಸುಮ್ಮನಾಗುತ್ತೇನೆ ..

ಮೈತೊಳೆಯುವುದು ಎಂದರೆ ಏನು ಎಂದು ಗೊತ್ತಿರದ,
ತಿಪ್ಪೆಯ ಗಲೀಜು ಕಾಗದ, ಪ್ಲಾಸ್ಟಿಕ್ ಗಳೇ ಮೈಗಂಟಿಸಿ,
ಮಾನಮುಚ್ಚಿಕೊಳ್ಳಲು ಹವಣಿಸುವ,
ಕೀಟಾಣುಗಳಲ್ಲಿ ಕೀಟಾಣುವಾಗಿ
ಒಮ್ಮೆ ಅಳುತ್ತ, ಒಮ್ಮೆ ನಗುತ್ತ ಜೀವಿಸುತ್ತಿರುವ
ರಸ್ತೆ ಅಂಚಿನ ಅನಾಥ ಮಕ್ಕಳನು ನೋಡಿ
 ತಿಳಿದೂ ತಿಳಿಯದಂತೆ ನಾನು ಕೂಡ
“ದಾಗ್ ಅಚ್ಚೆ ಹೈ”ಎನ್ನುತ್ತೇನೆ …

ರಾಜೇಂದ್ರಕುಮಾರ್ ರಾಯಕೋಡಿ - Copyright©

Comments