ಶೈವಮತದ ಹಲವು ಮುಖಗಳು : ಭಾಗ ೩ - ಪಾಶುಪತ ಮತ
ಪಾಶುಪತ ಮತ
’ಪಶುಪತಿ’ಯ ಮತ ಅಥವಾ ’ಪಾಶುಪತ ಮತ’ವು ಬಹು ಪುರಾತನವಾದುದೆಂದು ಅನಿಸುತ್ತದೆ. ಶ್ವೇತಾಶ್ವತರ ಉಪನಿಷತ್ತಿನಲ್ಲಿ (೧.೧೧; ೬.೯; ೩.೨೦) ’ಪತಿ’, ’ಪಾಶ’ ಮತ್ತು ’ಪ್ರಸಾದ’ ಎನ್ನುವ ಶಬ್ದಗಳು ಉಪಯೋಗಿಸಲ್ಪಟ್ಟಿರೆ, ಶಿವನನ್ನು ’ಲಿಂಗ’ ರೂಪದಲ್ಲಿ ಪೂಜಿಸುವುದು, ಶಿವಲಿಂಗವನ್ನು ಬಲ ತೋಳಿನಲ್ಲಿ ಧರಿಸುವುದರ ಬಗ್ಗೆ ವಿವರಣೆಯು ನಮಗೆ ರಾಜ ಪ್ರವರಸೇನನ (ಕ್ರಿ.ಶ. ೪೨೮) ಶಿಲಾಶಾಸನದಲ್ಲಿ ದೊರೆಯುತ್ತದೆ, ಇಂದು ಕಾಂಬೋಡಿಯಾ/ಕಂಪೂಚಿಯ ದೇಶವೆಂದು ಕರೆಯಲ್ಪಡುತ್ತಿರುವ ಕಾಂಭೋಜ ದೇಶದಲ್ಲಿ ಕ್ರಿ.ಶ. ೫೫೦ಕ್ಕೆ ಸೇರಿರಬಹುದೆಂದು ಅಂದಾಜಿಸಿರುವ ಶಿವಲಿಂಗಗಳು ದೊರಕಿರುವುದು; ಇವೆಲ್ಲಾ ಸಂಗತಿಗಳು ಈ ಮತವು ಬಹು ಪುರಾತನವಾದುದೆನ್ನುವುದಕ್ಕೆ ಪುರಾವೆಗಳನ್ನು ಒದಗಿಸುತ್ತವೆ.
ಪಾಶುಪತ ಮತವು ಪ್ರಮುಖವಾಗಿ ಶೈವಾಗಮಗಳು, ಕೆಲವು ಪುರಾಣಗಳು ಮತ್ತು ಕೆಲವೊಂದು ವೇದೋತ್ತರ ಕಾಲಕ್ಕೆ ಸೇರಿದ ಚಿಕ್ಕ ಉಪನಿಷತ್ತುಗಳ ಮೇಲೆ ಅವಲಂಭಿತವಾಗಿದೆ. ಕೆಲವೊಂದು ಆಗಮಗಳೆಂದರೆ - ಕಾಮಿಕ, ಅಜಿತ, ಅಂಶುಮಾನ್, ಸುಪ್ರಭೇದ, ಸ್ವಯಂಭುವ, ರೌರವ, ಮೃಗೇಂದ್ರ, ಪೌಷ್ಕರ ಮತ್ತು ವಾತುಲ. ಪುರಾಣಗಳು ಯಾವುವೆಂದರೆ - ವಾಯು, ಕೂರ್ಮ ಮತ್ತು ಶಿವ ಪುರಾಣಗಳು. ಇವುಗಳ ಅಧಿಕಾರಯುಕ್ತತೆಯ ಬಗ್ಗೆ ಹೇಳುವುದಾದರೆ ಇವುಗಳನ್ನು ವೇದಕ್ಕೆ ಮತ್ತು ವೇದಾಂಗಗಳಿಗೆ ಸಮನಾದ ಮಹಾಭಾರತ ಮತ್ತು ಧರ್ಮಶಾಸ್ತ್ರಗಳೊಂದಿಗೆ ಪರಿಗಣಿಸಲಾಗಿದೆ.
ಆಗಮಗಳ ಕಾಲವು ಒಂದರಿಂದ ಹದಿನಾಲ್ಕನೇ ಶತಮಾನದವರೆಗೂ ಹರಡಲ್ಪಟ್ಟಿದೆ. ಅವುಗಳು ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ತಮಿಳುನಾಡಿನಲ್ಲಿ ಅಸ್ತಿತ್ವದಲ್ಲಿದ್ದವು. ಅವುಗಳಲ್ಲಿ ಎಲ್ಲವೂ ಅಲ್ಲದಿದ್ದರೂ ಕೆಲವೊಂದು ಕೃತಿಗಳು ಮೂಲ ತಮಿಳು ರಚನೆಗಳಾಗಿದ್ದು ತದನಂತರ ಸಂಸ್ಕೃತಕ್ಕೆ ಭಾಷಾಂತರ ಮಾಡಲ್ಪಟ್ಟವೋ ಅಥವಾ ಸಂಸ್ಕೃತದಲ್ಲಿ ನೇರವಾಗಿ ಬರೆಯಲ್ಪಟ್ಟವೋ? - ಈ ವಿಷಯದಲ್ಲಿ ವಿದ್ವಾಂಸರಲ್ಲಿ ಏಕಾಭಿಪ್ರಾಯವಿದ್ದಂತೆ ಕಾಣದು.
ಪ್ರಧಾನ ತತ್ವಗಳು
ಪಾಶುಪತ ಮತದಲ್ಲಿ ಚರ್ಚಿಸಲ್ಪಟ್ಟಿರುವ ವಿಷಯಗಳನ್ನು ತಾಂತ್ರಿಕವಾಗಿ ’ಪಂಚಾರ್ಥ’ಗಳು ಅಂದರೆ ಐದು ಮೂಲಭೂತ ವಿಷಯಗಳು ಎಂದು ಕರೆಯಲ್ಪಟ್ಟಿವೆ. ಅವುಗಳೆಂದರೆ - ಕಾರಣ, ಕಾರ್ಯ, ಯೋಗ, ವಿಧಿ ಮತ್ತು ದುಃಖಾಂತ.
ಕಾರಣ
ಕಾರಣ ಅಥವಾ ಮೂಲಭೂತ ಕಾರಣ ಎಂದರೆ ಇಲ್ಲಿ ಪತಿ (ಒಡೆಯ) ಎಂದು ಕರೆಯಲ್ಪಟ್ಟಿರುವ ಶಿವನು. ಅವನ ಇತರ ಹೆಸರುಗಳೆಂದರೆ - ರುದ್ರ, ಶಂಕರ, ಕಾಲ, ಬಾಲವಿಕರಣ, ಅಘೋರ, ಸರ್ವ, ಶರ್ವ, ತತ್ಪುರುಷ, ಈಶಾನ, ಈಶ್ವರ ಮತ್ತು ಬ್ರಹ್ಮಾ . ಅವನು ಅನಾದಿ (ಆದಿ ಮತ್ತು ಅಂತ್ಯಗಳಿಲ್ಲದವನು), ಅವ್ಯಯಯನು (ನಾಶವಿಲ್ಲದವನು) ಮತ್ತು ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಕರ್ತನು. ಅವನು ಪರಮೋತ್ತಮನು ಮತ್ತು ಸರ್ವಾಂತರ್ಯಾಮಿಯು. ಅವನು ಅನಂತ ಕರುಣಾಸಾಗರನು. ಪ್ರಣವ ಅಥವಾ ಓಂ ಎನ್ನುವುದು ಅವನನ್ನು ಅತ್ಯುತ್ತಮವಾಗಿ ಬಿಂಬಿಸುವ ಸಂಕೇತವಾಗಿದೆ.
ಪಾಶುಪತ ಮತವು, ವೇದಾಂತ ತತ್ವಗಳಲ್ಲಿ ಇದ್ದಂತಲ್ಲದೆ ಶಿವ ಅಥವಾ ಈಶ್ವರನು ಕೇವಲ ನಿಮಿತ್ತ ಕಾರಣನೇ (ಸಂಯೋಜಕನು) ಹೊರತು ಅವನು ಉಪಾದಾನ(ವಸ್ತುತಃ) ಕಾರಣನಲ್ಲ ಎಂದು ಪ್ರತಿಪಾದಿಸುತ್ತದೆ. ’ಜೀವರು’ ಅಥವಾ ’ವ್ಯಕ್ತಿಗತ ಆತ್ಮ’ಗಳಿಗೆ ಪ್ರತ್ಯೇಕ ಅಸ್ತಿತ್ವವಿದ್ದರೂ ಕೂಡಾ, ಅವು ಅವನ ಸಂಪೂರ್ಣ ನಿಯಂತ್ರಣದಲ್ಲಿವೆ. ಅವನಿಂದಾಗಿ ಈ ಪ್ರಪಂಚವು ಮತ್ತು ಜೀವರುಗಳು ರೂಪಾಂತರ ಹೊಂದುತ್ತಾರೆ. ಆದರೆ ಶಿವನು ’ಪ್ರಾಸಾದಿ’(ಅನುಗ್ರಹವನ್ನು ಕೊಡುವವ)ಯಾದ್ದರಿಂದ, ಅವನು ಜೀವರುಗಳೆಡೆಗೆ ಸದಾ ಅನುಕಂಪವನ್ನು ಹೊಂದಿದವನಾಗಿರುತ್ತಾನೆ. ಆದ್ದರಿಂದ ಜೀವಿಗಳು ಅವನನ್ನು ಕುರಿತು ಧ್ಯಾನಮಾಡಿದಾಗ ಅವರು ಮುಕ್ತಿಯನ್ನು ಪಡೆಯುತ್ತಾರೆ.
ಇಲ್ಲಿ ಪಾಶುಪತ ಮತವು ಮಧ್ವರ (ಕ್ರಿ.ಶ. ೧೧೯೭ರಿಂದ ೧೨೭೬) ಸಿದ್ಧಾಂತವಾದ ’ದ್ವೈತ ವೇದಾಂತ’ಕ್ಕೆ ಅತೀ ಸಮೀಪದಲ್ಲಿದೆ ಎಂದರೆ ಅನುಚಿತವಾಗಲಾರದು. ಇವೆರಡರಲ್ಲಿರುವ ಏಕೈಕ ವ್ಯತ್ಯಾಸವೆಂದರೆ ಇಲ್ಲಿ ಶಿವನು ವಿಷ್ಣುವಿನ ಸ್ಥಾನದಲ್ಲಿದ್ದಾನೆ.
ಕಾರ್ಯ
’ಕಾರ್ಯ’ವು ಈ ಮೊದಲು ತಿಳಿಸಿದ ಐದು ಮೂಲಭೂತ ತತ್ವಗಳಲ್ಲಿ ಎರಡನೆಯದಾಗಿದೆ. ಇಲ್ಲಿ ಕಾರ್ಯವನ್ನು ಪರಿಣಾಮವಾಗಿ ಪರಿಗಣಿಸದೆ, ಯಾವುದು ಅಸ್ವತಂತ್ರ ಅಥವಾ ಪರಾವಲಂಭಿಯಾಗಿದೆಯೋ ಅದು ಎಂದು ಚಿತ್ರಿಸಲಾಗಿದೆ; ಕಾರಣವೆಂದರೆ ಯಾವುದು ಸ್ವತಂತ್ರವಾಗಿದೆಯೋ ಅಥವಾ ಇನ್ನೊಂದರ ಮೇಲೆ ಅವಲಂಭಿತವಾಗದೆ ಇದೆಯೋ ಅದು. ಈ ಅರ್ಥದಲ್ಲಿ ಈಶ್ವರ ಅಥವಾ ಶಿವ ಮಾತ್ರನೇ ಕಾರಣನು, ಈ ಪ್ರಪಂಚ ಮತ್ತು ಇದರಲ್ಲಿನ ಜೀವಿಗಳು ಕಾರ್ಯಗಳು ಏಕೆಂದರೆ ಅವರೆಡೂ ಅವನ ಮೇಲೆ ಅವಲಂಭಿತವಾಗಿವೆ.
ಈಶ್ವರನು ಕಾರಣನಾದರೂ ಕೂಡಾ, ಅವನಿಂದ ಪ್ರೇರಿತರಾದ ಜೀವರು ಸಹಾ ಸೃಷ್ಟಿಯ ಮುಂದುವರೆದ ಕ್ರಿಯೆಗಳಲ್ಲಿ ಕಾರಣರಾಗಬಹುದು. ಅದೇ ರೀತಿ ಪ್ರಕೃತಿ ಅಥವಾ ಪ್ರಧಾನವು ಪ್ರಪಂಚದ ಹೊರಹೊಮ್ಮುವಿಕೆಗೆ ಹೊಣೆಯಾಗಿರುವುದರಿಂದ ಅದು ಕೂಡಾ 'ಕಾರಣ'ವಾಗಬಹುದು. ಆದ್ದರಿಂದ ಇವೆರಡನ್ನೂ 'ಕಾರ್ಯ-ಕಾರಣ'ವೆಂದು ಕರೆದಿದ್ದಾರೆ.
ಪ್ರಕೃತಿಯಿಂದ ಉಂಟಾಗುವ ಈ ಪ್ರಪಂಚದ ಆವಿರ್ಭಾವವು ಸಾಂಖ್ಯ ತತ್ವದಲ್ಲಿ ಇರುವಂತೆಯೇ ಇದೆ.
ಇಲ್ಲಿ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು, ಈಶ್ವರನು ಮೂಲಭೂತ ಕಾರಣನಾಗಿರುವುದರಿಂದ ಈ ಪ್ರಪಂಚದ ಆವಿರ್ಭಾವದಿಂದ ಅವನ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ ಆದರೆ ಕಾರ್ಯ-ಕಾರಣವಾದ ಪ್ರಕೃತಿಯು ಮೇಲೆ ನಿಶ್ಚಿತವಾಗಿಯೂ ಪರಿಣಾಮ ಉಂಟಾಗುತ್ತದೆ. ಈ ವಿಷಯವನ್ನು ಎರಡು ಉದಾಹರಣೆಗಳು ಸ್ಪಷ್ಟಪಡಿಸುತ್ತವೆ. ಕಮಲವು ಅದರ ಮೇಲೆ ಸೂರ್ಯಕಿರಣಗಳು ಬಿದ್ದಾಗ ಅರಳುತ್ತದೆ. ಅದೇ ರೀತಿ ಕಬ್ಬಿಣದ ಚೂರುಗಳು ಅಯಸ್ಕಾಂತವು ಸನಿಹದಲ್ಲಿದ್ದಾಗ ಚಲಿಸುತ್ತವೆ. ಇವೆರಡೂ ಪ್ರಸಂಗಗಳಲ್ಲಿ ಕಮಲ ಮತ್ತು ಕಬ್ಬಿಣದ ಚೂರುಗಳ ಮೇಲೆ ಪರಿಣಾಮ ಉಂಟಾದರೂ ಕೂಡಾ, ಇಲ್ಲಿ ಸೂರ್ಯ ಅಥವಾ ಅಯಸ್ಕಾಂತವು ಯಾವುದೇ ರೀತಿಯ ಬದಲಾವಣೆಗೆ ಒಳಗಾಗುವುದಿಲ್ಲ. ಇದೇ ರೀತಿಯಾಗಿ ಪ್ರಕೃತಿ ಮತ್ತು ಜೀವಾತ್ಮರಿಂದ ಈ ಪ್ರಪಂಚದ ಸೃಷ್ಟಿಯಾದರೂ ಕೂಡಾ ಈಶ್ವರನು ಬದಲಾವಣೆ ಹೊಂದದೇ ಇರುತ್ತಾನೆ.
’ಕಾರ್ಯ’ಗಳಲ್ಲಿ, ’ಜೀವಾತ್ಮ’ನು ಅತ್ಯಂತ ಪ್ರಮುಖವಾದದ್ದು. ಅವನನ್ನು ’ಪಶು’ ಎಂದು ಕರೆದಿದ್ದಾರೆ ಏಕೆಂದರೆ ಅವನು ’ಪಾಶ’ಕ್ಕೆ ಒಳಪಟ್ಟು ತಾನು ’ಚೇತನಾರೂಪಿ’ಯೆನ್ನುವುದನ್ನು ಮರೆತು ತನ್ನನ್ನು ತಾನು ಮನೋದೈಹಿಕ ಸಂಕೀರ್ಣವಾಗಿ ಕಾಣುತ್ತಾನೆ(ಪಶ್ಯತಿ); ಆದರೆ ಶಿವನನ್ನು ’ಪಶುಪತಿ’ (ಪಶುಗಳ ಒಡೆಯ) ಎಂದು ಸಾರಿದ್ದಾರೆ.
’ಪಶು’ ಅಥವಾ ’ಜೀವನು’ ನಿತ್ಯನಿರಂತರನೂ, ಸರ್ವವ್ಯಾಪಿಯೂ ಆಗಿದ್ದು ನೋಡುವ ಶಕ್ತಿ (ದೃಕ್ಶಕ್ತಿ) ಮತ್ತು ಚಟುವಟಿಕೆಯ ಶಕ್ತಿ(ಕ್ರಿಯಾ ಶಕ್ತಿ)ಗಳನ್ನು ಹೊಂದಿದವನಾಗಿದ್ದಾನೆ.
’ಪಶು’ಗಳು ತಮ್ಮ ಆಧ್ಯಾತ್ಮಿಕ ವಿಕಾಸಕ್ಕನುಗುಣವಾಗಿ ಎರಡು ಗುಂಪುಗಳಾಗಿ ವಿಂಗಡಿಸಲ್ಪಟ್ಟಿದ್ದಾರೆ - ’ಸಂಜನ’ (ದೇಹ, ಮನಸ್ಸು ಮತ್ತು ಪಂಚೇಂದ್ರಿಯಗಳಿಂದ ಬಂಧನಕ್ಕೊಳಪಟ್ಟವರು) ಮತ್ತು ’ನಿರಂಜನ’ (ಮುಕ್ತ ಜೀವಿಗಳು).
ಪಶುವನ್ನು ಬಂಧಿಸುವ ಪಾಶಗಳು ಅಥವಾ ಕಟ್ಟುಗಳನ್ನು ಮಲ ಅಥವಾ ಕಶ್ಮಲಗಳೆಂದು ಕರೆಯಲ್ಪಟ್ಟಿವೆ. ಅವುಗಳು ಮೂರು ವಿಧ - ಆಣವಮಲ, ಮಾಯೀಯಮಲ ಮತ್ತು ಕರ್ಮಮಲ.
ಪಶು ಅಥವಾ ಜೀವಿಯನ್ನು ತಾನು ಅನಂತನಾಗಿದ್ದರೂ ಕೂಡಾ ಈ ಪರಿಮಿತ ದೇಹದೊಂದಿಗೆ ಗುರುತಿಸಿಕೊಳ್ಳುವಂತೆ ಮಾಡುವ ಮಲವೇ 'ಆಣವಮಲ'. ಈಶ್ವರನ ಮಾಯಾ ಶಕ್ತಿಯಿಂದ ಉಂಟಾಗುವ ಬಂಧನಕ್ಕೆ ಕಾರಕವಾಗಿರುವುದೇ ’ಮಾಯೀಯಮಲ’. ನಮ್ಮ ಪೂರ್ವಕರ್ಮಗಳಿಂದಾಗಿ ಪರಿಮಿತಿಗೊಳಪಡಿಸುವ ಮಲವೇ - ’ಕರ್ಮಮಲ’.
ಯೋಗದ ಸಹಾಯದಿಂದ ಪಶುವು ಎಲ್ಲಾ ರೀತಿಯ ಮಲಗಳಿಂದ ತನ್ನನ್ನು ಪರಿಶುದ್ಧಗೊಳಿಸಿಕೊಂಡು ದುಃಖಾಂತ ಸ್ಥಿತಿಯನ್ನು ಹೊಂದುತ್ತಾನೆ. ಇಲ್ಲಿ ದುಃಖಾಂತವೆಂದರೆ ಎಲ್ಲಾ ವಿಧವಾದ ಯಾತನೆಗಳಿಂದ ಬಿಡುಗಡೆ ಹೊಂದುವುದು.
ಯೋಗ
ಕಾರ್ಯವನ್ನು ತಿಳಿದುಕೊಂಡ ನಂತರ ಅದು ನಮ್ಮನ್ನು ಮುಂದಿನ ವಿಷಯಕ್ಕೆ ಕೊಂಡೊಯ್ಯುತ್ತದೆ ಅದುವೇ ಯೋಗ. ಆತ್ಮನನ್ನು (ಪಶುವನ್ನು) ಈಶ್ವರ(ಪಶುಪತಿ)ನೊಂದಿಗೆ ಸಂಯೋಗ(ಜೋಡಣೆ)ಗೊಳಿಸುವುದೇ ಯೋಗವೆಂದಿದ್ದಾರೆ. ಐಹಿಕ ಸುಖಭೋಗಗಳ ಮೇಲೆ ಮಮತೆಯನ್ನು ಇಟ್ಟುಕೊಳ್ಳದೆ ಈಶ್ವರನೊಬ್ಬನೇ ಜೀವನದ ಅಂತಿಮ ಲಕ್ಷ್ಯವೆಂದು ಭಾವಿಸುವುದು ಯೋಗದ ಭಾಗವಾಗಿದೆ. ಈ ಯೋಗವು ಈಶ್ವರನ ಕೃಪೆಯಿಂದ ಉಂಟಾಗಬಹುದು ಅಥವಾ 'ಪಶು'ವು ಅವನೊಬ್ಬನೇ ರಕ್ಷಕನೆಂದು ಅವನಲ್ಲಿ ಸಂಪೂರ್ಣ ಶರಣಾಗತಿಯನ್ನು ಹೊಂದುವುದರಿಂದಲೂ ಉಂಟಾಗಬಹುದು.
'ಯಮ'ಗಳಾದ ಅಹಿಂಸೆ, ಬ್ರಹ್ಮಚರ್ಯ (ಇಂದ್ರಿಯ ನಿಗ್ರಹ), ಸತ್ಯ (ಜೀವಿಗಳಿಗೆ ಉಪಯೋಗವಾಗುವಂತಹ ನಿಜವನ್ನು ನುಡಿಯುವುದು), ಅಸಂಗ್ರಹ (ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳದೇ ಇರುವುದು) ಮೊದಲದವುಗಳು ಯೋಗ ಸಾಧನೆಯಲ್ಲಿ ನಮಗೆ ಉಪಯುಕ್ತವಾದವುಗಳು. ಅದರಂತೆ ನಿಯಮಗಳಾದ, ಅಕ್ರೋಧ (ಸಿಟ್ಟನ್ನು ಜಯಿಸಿವುದು), ಗುರುಸೇವೆ, ಶೌಚ, ಮಿತಾಹಾರ ಮತ್ತು ಜಾಗರೂಕತೆ (ಎಚ್ಚರಿಕೆ) ಕೂಡಾ ಉಪಯುಕ್ತವಾಗಿವೆ.
ವಿಧಿ
ವಿಧಿಯು ಪಂಚಾರ್ಥಗಳಲ್ಲಿ ನಾಲ್ಕನೆಯದಾಗಿದೆ. ವಿಧಿಯೆಂದರೆ ಈ ಮತದಲ್ಲಿ ಪ್ರಸ್ತಾವಿಸಿರುವ ಪದ್ಧತಿಗಳಾದ ಭಸ್ಮಸ್ನಾನ (ದೇಹದ ಮೇಲೆ ಪವಿತ್ರ ಬೂಧಿಯನ್ನು ಚಲ್ಲಿಕೊಳ್ಳುವುದು), ಉಪಹಾರ* (ಉದ್ದೇಶಪೂರ್ವಕವಾಗಿ ಜನರು ಸಾಧಕನ ಸಹವಾಸದಿಂದ ದೂರವುಳಿಯುವಂತೆ ವ್ಯವಹರಿಸುವುದು), ಜಪ (ಶಿವನ ಮಂತ್ರವನ್ನು ಪದೇ ಪದೇ ಉಚ್ಛರಿಸುವುದು) ಮತ್ತು ಪ್ರದಕ್ಷಿಣೆ (ಶಿವಲಿಂಗವನ್ನು ವೃತ್ತಾಕಾರವಾಗಿ ಸುತ್ತುವುದು).
(*ಉಪಾಹಾರವಲ್ಲವೆನ್ನುವುದನ್ನು ಗಮನಿಸಿ; ಕೆಲವೊಂದು ಉಪಾಹಾರ ಗೃಹಗಳನ್ನು ನೋಡಿದರೆ ಉಪಹಾರವೇ ಲೇಸು!)
ದುಃಖಾಂತ
ಪಂಚಾರ್ಥಗಳಲ್ಲಿ 'ದುಃಖಾಂತ'ವು ಕಡೆಯದಾಗಿದೆ. ದುಃಖಾಂತವೆಂದರೆ ದುಃಖ ಮತ್ತು ಯಾತನೆಗಳಿಂದ ಸಂಪೂರ್ಣ ಬಿಡುಗಡೆ ಹೊಂದುವುದು, ಮುಕ್ತಿ ಎಂದರೂ ಇದೇ. ಮನಸ್ಸನ್ನು ಎಲ್ಲಾ ವಿಷಯ ವಸ್ತುಗಳಿಂದ ಹಿಂತೆಗೆದುಕೊಂಡು ಅದನ್ನು ಕೇವಲ 'ಪಶುಪತಿ'ಯೆಡೆಗೆ ತಿರುಗಿಸುವುದರಿಂದ ಅದು ಸಾಧ್ಯವಾಗುತ್ತದೆ. ಇದು ಸಂಪೂರ್ಣ ಶರಣಾಗತಿಗೆ ದಾರಿ ಮಾಡಿಕೊಟ್ಟು ಅವನ ಸನಿಹದಲ್ಲಿ ವಾಸಿಸುವಂತೆ (ಸಮೀಪ ಪ್ರಾಪ್ತಿ) ಮಾಡುತ್ತದೆ. ಈ ರೀತಿಯ ಮುಕ್ತಿಯಲ್ಲಿ, ಸಾಂಖ್ಯದಲ್ಲಿ ಹೇಳಿರುವಂತೆ ಕೈವಲ್ಯ ಪ್ರಾಪ್ತಿಯಲ್ಲ ಅಂದರೆ ಆತ್ಮವು ಏಕಾಕಿಯಾಗಿ ಉಳಿಯುವುದಿಲ್ಲ, ಅಥವಾ ಅದ್ವೈತ ವೇದಾಂತದಲ್ಲಿ ಪ್ರಸ್ತಾವಿಸಿರುವಂತೆ ಐಕ್ಯವಾಗುವುದಲ್ಲ. ಇಲ್ಲಿ ಪಶುವು ಪಶುಪತಿಯ ಸನಿಹದಲ್ಲಿ ನಿರಂತರವಾಗಿ ಇರುತ್ತಾನೆ.
ಪಾಶುಪತದ ಶಾಸ್ತ್ರಗ್ರಂಥಗಳು, ದುಃಖಾಂತ ಸ್ಥಿತಿಯ ಭಾಗವಾಗಿ ದಿವ್ಯದೃಷ್ಟಿ (ಅತೀಂದ್ರಿಯ ದೃಷ್ಟಿ) ಮತ್ತು ದಿವ್ಯಶ್ರವಣ (ಅತೀಂದ್ರಿಯ ಶ್ರವಣ); ಇಂತಹ ಗುಣಗಳು ಒಲಿಯುತ್ತವೆ ಎಂದು ಸಾರುತ್ತವೆ. ಆದರೆ ಆ ಗ್ರಂಥಗಳು, ಯೋಗಿಯು ಇಂತಹ ಅತೀಂದ್ರಿಯ ಶಕ್ತಿಗಳಿಂದ ದೂರವಿರಬೇಕೆಂದು ಎಚ್ಚರಿಸುತ್ತವೆ; ಏಕೆಂದರೆ ಇವುಗಳು ಯೋಗಿಯು ನಿಜವಾದ ಮುಕ್ತಿಯನ್ನು ಸಾಧಿಸುವಲ್ಲಿ ತೊಡಕುಗಳಾಗಿ ಪರಿಣಮಿಸುತ್ತವೆ.
---------------------------------------------------------------------------------------------------
ಈ ಸರಣಿಯ ಹಿಂದಿನ ಲೇಖನಕ್ಕೆ "ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ", ಈ ಕೊಂಡಿಯನ್ನು ನೋಡಿ:
http://sampada.net/blog/%E0%B2%B6%E0%B3%88%E0%B2%B5%E0%B2%AE%E0%B2%A4%E0%B2%A6-%E0%B2%B9%E0%B2%B2%E0%B2%B5%E0%B3%81-%E0%B2%AE%E0%B3%81%E0%B2%96%E0%B2%97%E0%B2%B3%E0%B3%81-%E0%B2%AD%E0%B2%BE%E0%B2%97-%E0%B3%A8-%E0%B2%95%E0%B2%BE%E0%B2%B6%E0%B3%8D%E0%B2%AE%E0%B3%80%E0%B2%B0-%E0%B2%B6%E0%B3%88%E0%B2%B5%E0%B2%A4%E0%B2%A4%E0%B3%8D%E0%B2%B5/07/08/2012/37820
----------------------------------------------------------------------------------
ವಿ.ಸೂ. ಇದು 'Facets of Saivism - Swami Harshananda' ಎನ್ನುವ ಆಂಗ್ಲ ಭಾಷೆಯ ಪುಸ್ತಕದ ಅನುವಾದದ ಭಾಗ. ಪ್ರಕಟಣೆ ಶ್ರೀ ರಾಮಕೃಷ್ಣ ಆಶ್ರಮ, ಬೆಂಗಳೂರು (ಪುಟಗಳು ೨೯ ರಿಂದ ೩೯)
----------------------------------------------------------------------------------
Rating
Comments
ಉ: ಶೈವಮತದ ಹಲವು ಮುಖಗಳು : ಭಾಗ ೩ - ಪಾಶುಪತ ಮತ
In reply to ಉ: ಶೈವಮತದ ಹಲವು ಮುಖಗಳು : ಭಾಗ ೩ - ಪಾಶುಪತ ಮತ by ksraghavendranavada
ಉ: ಶೈವಮತದ ಹಲವು ಮುಖಗಳು : ಭಾಗ ೩ - ಪಾಶುಪತ ಮತ
In reply to ಉ: ಶೈವಮತದ ಹಲವು ಮುಖಗಳು : ಭಾಗ ೩ - ಪಾಶುಪತ ಮತ by partha1059
ಉ: ಶೈವಮತದ ಹಲವು ಮುಖಗಳು : ಭಾಗ ೩ - ಪಾಶುಪತ ಮತ
ಉ: ಶೈವಮತದ ಹಲವು ಮುಖಗಳು : ಭಾಗ ೩ - ಪಾಶುಪತ ಮತ
In reply to ಉ: ಶೈವಮತದ ಹಲವು ಮುಖಗಳು : ಭಾಗ ೩ - ಪಾಶುಪತ ಮತ by shashikannada
ಉ: ಶೈವಮತದ ಹಲವು ಮುಖಗಳು : ಭಾಗ ೩ - ಪಾಶುಪತ ಮತ