ಅಮರ‌..ಮಧುರ..ಪ್ರೇಮ = ಭಾಗ 24 (ಕೊನೆಯ ಭಾಗ)

ಅಮರ‌..ಮಧುರ..ಪ್ರೇಮ = ಭಾಗ 24 (ಕೊನೆಯ ಭಾಗ)

ಪ್ರೇಮಳನ್ನು ಮಾತಾಡಿಸಲು ಅವರಪ್ಪ ಅಮ್ಮ ವಾರ್ಡ್ ಒಳಗೆ ಹೋದಾಗ ಆಗಷ್ಟೇ ಪ್ರೇಮ ನಿದ್ರೆಯಿಂದ ಎಚ್ಚರವಾಗಿದ್ದಳು. ಹಿಂದಿನ ದಿನವಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರೇಮ ಮರುದಿನವೇ ಆತ್ಮಹತ್ಯೆ ಪ್ರಯತ್ನ ಮಾಡಿಕೊಂಡಿದ್ದು ಎಲ್ಲರಿಗೂ ಆಘಾತವಾಗಿತ್ತು. ಅಪ್ಪ ಅಮ್ಮ ಒಳಗೆ ಬಂದಿದ್ದನ್ನು ನೋಡಿ ಅವರಿಗೆ ಏನು ಉತ್ತರ ಕೊಡಬೇಕೆಂದು ಗೊತ್ತಾಗದೆ ಪ್ರೇಮ ತಲೆ ತಗ್ಗಿಸಿ ಕುಳಿತಿದ್ದಳು. ಅವಳ ಪಕ್ಕದಲ್ಲಿ ಬಂದ ಅವಳಮ್ಮ ಅವಳ ತಲೆಯನ್ನು ನೇವರಿಸಿ ಪ್ರೇಮ ಯಾಕಮ್ಮ ಹೀಗೆ ಮಾಡಿಕೊಂಡೆ ಏನಾಯ್ತು ಅಂತ ಹೇಳಮ್ಮ.

 ಅಮ್ಮ ದಯವಿಟ್ಟು ನನ್ನನ್ನು ಈಗ ಏನೂ ಕೇಳಬೇಡಿ. ನಿಧಾನವಾಗಿ ಎಲ್ಲ ಹೇಳತ್ತೇನೆ. ಮೊದಲು ಅಮರ್ ಮತ್ತು ಮಧುರಳನ್ನು ಒಳಗೆ ಕಳಿಸಿ ನೀವು ಸ್ವಲ್ಪ ಆಚೆ ಇರುತ್ತೀರ. ನಾನು ಅವರೊಡನೆ ಮಾತಾಡಬೇಕು. ಸರಿ ಎಂದು ಅಪ್ಪ ಅಮ್ಮ ಇಬ್ಬರೂ ಆಚೆ ಬಂದು ಮಧು ಪ್ರೇಮ ನಿನ್ನ ಮತ್ತು ಅಮರ್ ಜೊತೆ ಮಾತಾಡಬೇಕಂತೆ. ನಾವು ಇಲ್ಲೇ ಕೂತಿರುತ್ತೇವೆ ನೀವು ಮಾತಾಡಿ ಬನ್ನಿ. ಮಧು ನಿಧಾನವಾಗಿ ಅವಳನ್ನು ಕಾರಣ ಏನು ಎಂದು ಕೇಳು ಮಧು. ಅವಳ ಮೇಲೆ ರೇಗಬೇಡ. ಸಮಾಧಾನವಾಗಿ ಕೇಳು. ಆಯ್ತಮ್ಮ ನೀನೇನೂ ಚಿಂತಿಸಬೇಡ ನಾವಿಬ್ಬರೂ ಮಾತಾಡುತ್ತೇವೆ.

 ವಾರ್ಡ್ ನೊಳಗೆ ಬಂದ ಅಮರ್ ಮತ್ತು ಮಧುರಳನ್ನು ನೋಡಿ ಪ್ರೇಮ ಎದ್ದು ಕುಳಿತಳು. ಮಧುರ ಅವಳ ಬಳಿ ಬಂದು ಪ್ರೇಮ ಈಗ ಹೇಗಿದೆ ಆರಾಮ್ ಎನಿಸುತ್ತಿದೆಯ?

 ಹಾ ಮಧು ಪರವಾಗಿಲ್ಲ.   

 ಸರಿ ಪ್ರೇಮ ಅಪ್ಪ ಅಮ್ಮ ಎಷ್ಟು ನೊಂದುಕೊಂಡಿದ್ದಾರೆ ಎಂದು ನೋಡಿದೆಯ? ಅಮ್ಮ ಅಂತೂ ಒಂದೇ ಸಮನೆ ಅಳುತ್ತಿದ್ದಾಳೆ. ನೆನ್ನೆ ಎಲ್ಲ ಚೆನ್ನಾಗಿದ್ದವಳು ಇದ್ದಕ್ಕಿದ್ದಂತೆ ಇಂಥಹ ನಿರ್ಧಾರ ಏಕೆ ತೆಗೆದುಕೊಂಡಳು ಎಂದು ಅವರು ಕಂಗಾಲಾಗಿದ್ದಾರೆ. ಪ್ರೇಮ ದಯವಿಟ್ಟು ಏನಾಯ್ತು ಯಾಕೆ ಈ ನಿರ್ಧಾರ ತೆಗೆದುಕೊಂಡೆ ಎಂದು ಹೇಳು.

 ಮಧುರಳ ಮಾತನ್ನು ಕೇಳಿ ಪ್ರೇಮ ಒಮ್ಮೆ ಅಮರ್ ಕಡೆ ತೀಕ್ಷ್ಣವಾಗಿ ನೋಡಿದಳು. ಅಮರನ ಮುಖದಲ್ಲಿ ಮತ್ತದೇ ನಿರ್ಲಿಪ್ತತೆ ಕಾಣುತ್ತಿತ್ತು. ನಡೆದಿರುವ ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ನಿಂತಿದ್ದ. ಪ್ರೇಮ ಮತ್ತೆ ಮಧುರಳ ಕಡೆ ತಿರುಗಿ ಮಧು ಇದಕ್ಕೆಲ್ಲ ಏನು ಕಾರಣ ಎಂದು ಅಮರನನ್ನು ಕೇಳು ಎಂದಳು. ಮಧುರಗೆ ಒಂದು ಕ್ಷಣ ಗಲಿಬಿಲಿಯಾಗಿ ಅಮರನ ಕಡೆ ನೋಡಿ ಅಮರ್ ಏನು ನಡೆಯುತ್ತಿದೆ ಇಲ್ಲಿ ನನಗೊಂದೂ ಅರ್ಥವಾಗುತ್ತಿಲ್ಲ. ಅವಳೇನೋ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾಳೆ. ಕಾರಣ ಕೇಳಿದರೆ ನಿನ್ನನ್ನು ಕೇಳು ಎನ್ನುತ್ತಿದ್ದಾಳೆ. ಅಮರ್ ಏನಿದೆಲ್ಲ ನಿಮ್ಮಿಬ್ಬರ ನಡುವೆ ಏನು ನಡೆಯಿತು ಹೇಳು ಪ್ಲೀಸ್..

 ಮಧು ನನ್ನನ್ನು ಏನು ಕೇಳುತ್ತೀಯ ನೀನು ಹೇಳಿದ ಹಾಗೆ ಅವಳನ್ನು ಮಾಡುವೆ ಆಗಲು ಒಪ್ಪಿದೆ ನಾನು. ಅವಳು ಆತ್ಮಹತ್ಯೆ ಮಾಡಿಕೊಂಡರೆ ನನ್ನನ್ನು ಏನು ಕೇಳುತ್ತೀಯ ಅವಳನ್ನೇ ಕೇಳು ಎಂದು ಕಟುವಾಗಿ ಉತ್ತರಿಸಿದ. ಮಧುರ ಮತ್ತೆ ಪ್ರೇಮ ಕಡೆ ನೋಡಿ ದಯವಿಟ್ಟು ಯಾರಾದರೂ ಒಬ್ಬರು ಹೇಳಿ ಏನು ಎಂದು.

 ಪ್ರೇಮ ಒಂದು ದೀರ್ಘವಾದ ಉಸಿರು ಎಳೆದುಕೊಂಡು ನಡೆದ ವಿಷಯವೆಲ್ಲ ತಿಳಿಸಿದಳು. ಮಧುರಗೆ ಎಲ್ಲವನ್ನು ಕೇಳಿ ದಿಗ್ಭ್ರಾಂತಿಯಿಂದ ಅಮರನ ಕಡೆ ನೋಡಿ ಅಮರ್ ನೀನು ಇಷ್ಟು ಕಟುವಾಗಿ ವರ್ತಿಸುತ್ತೀಯ ಎಂದು ಎಣಿಸಿರಲಿಲ್ಲ. ಅಮರ್ ನಿನಗೆ ಇಷ್ಟ ಇಲ್ಲದಿದ್ದರೆ ಆಗುವುದಿಲ್ಲ ಎಂದು ಹೇಳಬೇಕಿತ್ತು. ಅದು ಬಿಟ್ಟು ಈ ರೀತಿ ಮಾಡಿದ್ದೀಯ ಒಂದು ವೇಳೆ ಅವಳಿಗೆ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ...

 ಮಧು ಸಾಕು ನಿಲ್ಲಿಸು ನಿನ್ನ ತಂಗಿ ಮಾಡಿದ ದ್ರೋಹಕ್ಕಿಂತ ನಾನೇನೂ ದೊಡ್ಡ ದ್ರೋಹ ಮಾಡಿಲ್ಲ. ಅವಳ ಹಾಗೆ ನಾನು ಸುಳ್ಳು ಹೇಳಿಲ್ಲ. ನನ್ನ ಮನಸಿನಲ್ಲಿ ಇದ್ದದ್ದನ್ನು ಹೇಳಿದೆ ಅಷ್ಟೇ. ಅಷ್ಟಕ್ಕೇ ಅವಳು ಆತ್ಮಹತ್ಯೆ ಪ್ರಯತ್ನ ಮಾಡಿದರೆ ಅದರಲ್ಲಿ ನನ್ನ ತಪ್ಪೇನು? ಈಗಲೂ ನಾನು ಅವಳನ್ನು ಮದುವೆ ಆಗಲು ಸಿದ್ಧನಿದ್ದೇನೆ.

 ಬೇಡ ಅಮರ್ ನೀನು ಹಾಕೋ ಭಿಕ್ಷೆ ನನಗೆ ಬೇಕಾಗಿಲ್ಲ ಎಂದು ಪ್ರೇಮ ಕಿರುಚಿದಳು. ಜೀವನ ಪೂರ್ತಿ ನನಗೆ ಆ ಶಿಕ್ಷೆ ಬೇಡ ಅಮರ್. ನನ್ನ ಪುಣ್ಯ ಮದುವೆಗೆ ಮುಂಚೆಯೇ ನಿನ್ನ ಮನಸಿನ ವಿಷಯ ತಿಳಿಸಿ ತುಂಬಾ ಉಪಕಾರ ಮಾಡಿದೆ ಅಮರ್. ಇಲ್ಲವಾದಲ್ಲಿ ಪ್ರತಿ ಕ್ಷಣ, ಪ್ರತಿ ದಿನ ಕೊರಗಬೇಕಿತ್ತು. ಅದಕ್ಕೆ ನಿನಗೊಂದು ದೊಡ್ಡ ಥ್ಯಾಂಕ್ಸ್.

 ಮಧು ನಿನ್ನಿಂದ ಒಂದು ಸಹಾಯ ಆಗಬೇಕಿತ್ತು ಎಂದಳು ಪ್ರೇಮ. ಏನದು ಪ್ರೇಮ? ಮಧು ನೀನು ಅಮರ್ ನನ್ನು ಮದುವೆ ಆಗಬೇಕು.

 ಪ್ರೇಮ ನಿನಗೇನೂ ತಲೆ ಕೆಟ್ಟಿದ್ಯ? ಯಾಕೆ ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದೀಯ. ನೆನ್ನೆ ತಾನೇ ನಿನಗೂ ಅಮರ್ ಗೂ ನಿಶ್ಚಯ ಆಗಿದೆ. ಈಗ ನೋಡಿದರೆ ಹೀಗೆ ಮಾತಾಡ್ತಾ ಇದ್ದೀಯ. ಇದು ಸಾಧ್ಯವಿಲ್ಲ ಪ್ರೇಮ. ನನಗೆ ಅಮರ್ ಮೇಲೆ ಯಾವುದೇ ಭಾವನೆ ಇಲ್ಲ. ಬರುವುದೂ ಇಲ್ಲ. ಅಷ್ಟಕ್ಕೂ ಅಪ್ಪ ಅಮ್ಮನ ಬಗ್ಗೆ ಯೋಚನೆ ಮಾಡಿದ್ದೀಯ? ಅವರಿಗೆ ಏನಾದರೂ ಈ ವಿಷಯವೆಲ್ಲ ತಿಳಿದರೆ ಅವರ ಪರಿಸ್ಥಿತಿ ಏನೆಂದು ಯೋಚನೆ ಮಾಡಿದ್ದೀಯ? ಖಂಡಿತ ನಾನು ಇದಕ್ಕೆ ಒಪ್ಪುವುದಿಲ್ಲ. ಪ್ರೇಮ ನೀನು ಸ್ವಲ್ಪ ಹೊತ್ತು ಮಲಗು ನಾನು ಅಮರ್ ಜೊತೆ ಸ್ವಲ್ಪ ಮಾತಾಡಿ ಬರುತ್ತೇನೆ ಎಂದು ಅಲ್ಲಿಂದ ಎದ್ದು ಅಮರನ ಕೈ ಹಿಡಿದು ದರದರನೆ ಎಳೆದುಕೊಂಡು ಆಸ್ಪತ್ರೆಯ ಹಿಂಭಾಗಕ್ಕೆ ಬಂದಳು. ಸುತ್ತಲೂ ಯಾರೂ ಇಲ್ಲದ್ದನ್ನು ಗಮನಿಸಿ ಅಮರನ ಕೆನ್ನೆಗೆ ಒಂದು ಬಿಗಿದಳು.

 ಇದನ್ನು ನಿರೀಕ್ಷಿಸಿರದ ಅಮರ್ ಗೆ ಶಾಕ್ ಕೊಟ್ಟಂತಾಯಿತು. ಮಧುರ ಅಮರನನ್ನು ದುರುಗುಟ್ಟಿ ನೋಡುತ್ತಾ ಅಮರ್ ನಿನ್ನನ್ನು ನೀನು ಏನಂದುಕೊಂಡಿದ್ದೀಯ? ಅವಳೇನೋ ನಿನ್ನ ಮೇಲಿನ ಪ್ರೀತಿಯಿಂದ ನಿನಗೆ ಸುಳ್ಳು ಹೇಳಿ ಮೋಸ ಮಾಡಿರಬಹುದು. ಅದಕ್ಕೆ ನೀನು ಅವಳಿಗೆ ಜೀವನ ಪೂರ್ತಿ ಶಿಕ್ಷೆ ಕೊಡಲು ಹೊರಟಿದ್ದೆಯ? ದೇವರು ದೊಡ್ಡವನು ಅವಳನ್ನು ಗಂಡಾಂತರದಿಂದ ಪಾರು ಮಾಡಿದ. ಒಂದು ವೇಳೆ ಅವಳಿಗೇನಾದರೂ ಆಗಿದ್ದರೆ ನಾನು ನಿನ್ನನ್ನು ಸುಮ್ಮನೆ ಬಿಡುತ್ತಿರಲಿಲ್ಲ ಅಮರ್. ಅಮರ್ ಈಗಲೂ ಹೇಳುತ್ತೇನೆ ನನಗೆ ನಿನ್ನ ಮೇಲೆ ಯಾವುದೇ ಭಾವನೆ ಇಲ್ಲ, ಅದು ಹುಟ್ಟುವುದೂ ಇಲ್ಲ. ಅಮರ್ ನಾವು ಪ್ರೀತಿಸುವವರಿಗಿಂತ ನಮ್ಮನ್ನು ಪ್ರೀತಿಸುವವರೊಂದಿಗೆ ನಮ್ಮ ಬಾಳು ಚೆನ್ನಾಗಿರುತ್ತದೆ ಅಮರ್.

 ಮಧು ಅದೇ ಮಾತನ್ನು ನೀನೆ ಏಕೆ ಅನ್ವಯಿಸಿಕೊಳ್ಳಬಾರದು? ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ತಾನೇ ನೀನು ನನ್ನೊಡನೆ ಯಾಕೆ ಜೀವನವನ್ನು ಹಂಚಿಕೊಳ್ಳಬಾರದು?

 ಅಮರ್ ನಿನಗೆ ಹೇಗೆ ಹೇಳಲಿ? ನನಗೆ ನಿಜವಾಗಿಯೂ ನಿನ್ನ ಮೇಲೆ ಆ ಭಾವನೆ ಇಲ್ಲ. ಒಂದು ವೇಳೆ ನಾನು ನಿನ್ನನ್ನು ಮದುವೆ ಆದರು ಜೀವನ ಪೂರ್ತಿ ನೀನೊಂದು ಜಡ ವಸ್ತುವಿನ ಜೊತೆ ಬಾಳಿದಂತೆ ಇರುತ್ತದೆ. ಹಾಗಾಗಿ ದಯವಿಟ್ಟು ನನ್ನ ಮಾತು ಕೇಳಿ ಪ್ರೇಮಳನ್ನು ಮದುವೆ ಆಗು. ಅವಳೇ ನಿನಗೆ ಸರಿಯಾದ ಜೋಡಿ. ಹೇಗಿದ್ದರೂ ನಿಮ್ಮಿಬ್ಬರ ನಡುವೆ ಒಡನಾಟ ಚೆನ್ನಾಗಿದೆ. ಅವಳಂತೂ ನಿನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾಳೆ. ಅದಕ್ಕೆ ಅವಳು ಆತ್ಮಹತ್ಯೆ ಪ್ರಯತ್ನವೇ ಸಾಕ್ಷಿ. ಅಮರ್ ದಯವಿಟ್ಟು ನನ್ನ ಮಾತು ಕೇಳು. ಇದರ ಮೇಲೆ ನಿನ್ನಿಷ್ಟ ಅಮರ್...ಬೈ..

ನಾಲ್ಕು ತಿಂಗಳ ನಂತರ...

ಶ್ರೀನಿಧಿ ಕಲ್ಯಾಣ ಮಂಟಪವನ್ನು ಸ್ವಚ್ಹ ಮಾಡಲು ಬಂದ ಕೆಲಸದವರು ಮಂಟಪದ ಮುಂಭಾಗದಲ್ಲಿ ಹಾಕಿದ್ದ ಅಮರ್ ಮತ್ತು ಪ್ರೇಮ ಎಂಬ ಬೋರ್ಡನ್ನು ತೆಗೆಯುತ್ತ ಲೇ ಇಲ್ಲಿ ನೋಡ್ಲಾ ಹುಡುಗಿ ಹೆಸರು ಮಾತ್ರ ಬೇರೆ ಐತೆ ಹುಡುಗನ ಹೆಸರು ಅಮರ್ ಅಂತಲೇ ಐತೆ. ಮೊದಲೇ ಗೊತ್ತಿದ್ದರೆ ಇದೆ ಬೋರ್ಡನ್ನು ಹಾಕ್ಬೋದಿತ್ತು ಕಣ್ಲಾ...ಅಣ್ಣಾ ಹುಡುಗಿ ಹೆಸರು ಏನಣ್ಣ?

 ಮಧುರ ಅಂತ ಕಣ್ಲಾ..

Rating
No votes yet

Comments