ಶೈವಮತದ ಹಲವು ಮುಖಗಳು: ಭಾಗ ೫ ವೀರಶೈವಮತ

ಶೈವಮತದ ಹಲವು ಮುಖಗಳು: ಭಾಗ ೫ ವೀರಶೈವಮತ

    ವೀರಶೈವಮತವನ್ನು 'ಲಿಂಗಾಯತ ಧರ್ಮ' ಅಥವಾ 'ಪಂಗಡ'ವೆಂದೂ ಕರೆಯಲಾಗಿದ್ದು, ಇದು ಶೈವಮತಗಳಲ್ಲಿನ ಒಂದು ವೈವಿಧ್ಯತೆಯಾಗಿದೆ ಮತ್ತು ಇದು ದಕ್ಷಿಣ ಭಾರತದ ಕರ್ಣಾಟಕ ಪ್ರಾಂತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಸಂಪ್ರದಾಯವಾದಿಗಳು ಈ ಧರ್ಮವು ಅನುಭಾವಿಗಳಾದ ರೇವಣಾರಾಧ್ಯ, ಮರುಳಾರಾಧ್ಯ, ಪಂಡಿತಾರಾಧ್ಯ ಮೊದಲಾದವರಿಂದ ಸ್ಥಾಪಿಸಲ್ಪಟ್ಟ ಪುರಾತನ ಧರ್ಮವೆಂದು ಪ್ರತಿಪಾದಿಸಿದರೆ, ಇನ್ನಿತರರು ಅದನ್ನು ವೀರಶೈವ ಧರ್ಮದ ಪೌರಾಣಿಕತೆಯನ್ನು ನಿರೂಪಿಸಲು ಈ ಕಾಲ್ಪನಿಕ ವ್ಯಕ್ತಿಗಳನ್ನು ಚಿತ್ರಿಸಲಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಆದರೆ ಎಲ್ಲರೂ ಒಪ್ಪಬಹುದಾದಂತಹ ಸಂಗತಿಯೇನೆಂದರೆ, ದೊರೆ ಬಿಜ್ಜಳನ (ಆಳ್ವಿಕೆಯ ಕಾಲ ಕ್ರಿ.ಶ. ೧೧೫೭ ರಿಂದ ೧೧೬೭) ಮಹಾಮಂತ್ರಿಯಾಗಿದ್ದ ಕ್ರಿ.ಶ. ೧೧೬೮ ಶಿವಕೈರಾದ ಬಸವಣ್ಣ ಅಥವಾ ಬಸವ ಎಂದೂ ಕರೆಯಲ್ಪಡುವ ಬಸವೇಶ್ವರರು, ಅದರ ಸ್ಥಾಪಕರಲ್ಲದಿದ್ದರೂ ವೀರಶೈವ ಮತದ ಪ್ರಧಾನ ಸಂಯೋಜಕರು ಮತ್ತು ಸುಧಾರಕರು. 

       ಅಲ್ಲಮ ಪ್ರಭು, ಚನ್ನಬಸವಣ್ಣ, ಮತ್ತು ಮಹಿಳಾ ಸಂತರಾದ ಅಕ್ಕ ಮಹಾದೇವಿಯಂತಹ ಮುನ್ನೂರಕ್ಕೂ ಅಧಿಕ ಸಂತರ ಸಮೂಹವೇ ಲಿಂಗಾಯತ ಚಳುವಳಿಯನ್ನು ಶ್ರೀಮಂತಗೊಳಿಸಿದೆ. ಈ ಮಹನೀಯರು ಅವರ ಕಾಲದ   ಜನರ ಸಾಮಾಜಿಕ ಮತ್ತು ಧಾರ್ಮಿಕ ಜೀವನ ಶೈಲಿಗಳಲ್ಲಿ ಕ್ರಾಂತಿಯನ್ನುಂಟು ಮಾಡಿದರು. 
 
ಪ್ರಧಾನ ತತ್ವಗಳು
 
        'ವೀರಶೈವಮತ'ದ ವಿಶೇಷ ಲಕ್ಷಣವೆಂದರೆ ಅದು 'ಶಿವಲಿಂಗ' ಅಥವಾ 'ಲಿಂಗ'ಕ್ಕೆ ವಿಶೇಷ ಮಹತ್ವವನ್ನು ನೀಡಿ, ಅದನ್ನು ಅತ್ಯಂತ ಪವಿತ್ರಭಾವನೆ ಕಾಣುವುದಲ್ಲದೆ, ಶ್ರದ್ಧಾ ಭಕ್ತಿಗಳಿಂದ ಪೂಜಿಸುತ್ತಾರೆ; ಆದ್ದರಿಂದ ಇದಕ್ಕೆ 'ಲಿಂಗಾಯತ ಮತ' (ಲಿಂಗವನ್ನು ಮೂಲಾಧಾರವೆಂದು ತಿಳಿಯುವ ಮತ) ಎಂದು ಕರೆದಿರುವುದು ಅತ್ಯಂತ ಸೂಕ್ತವಾಗಿದೆ. 'ಲಿಂಗ'ವನ್ನು ಯೋಗ್ಯ ಗುರುವಿನಿಂದ  ದೀಕ್ಷೆಯ ಮೂಲಕ ಪಡೆದುಕೊಂಡ ನಂತರ ಅದನ್ನು ದೇಹದಲ್ಲಿ ಯಾವಾಗಲೂ ಧಾರಣೆ ಮಾಡಬೇಕು, ಇದರಿಂದ ದೇಹದ ಪ್ರತಿ ಅಂಗವೂ ಶುದ್ಧಿಯಾಗುತ್ತದೆ. 
 
         ಈ ಧರ್ಮದ ಪ್ರಧಾನ ತತ್ವಗಳೆಂದರೆ: ಶಿವನು ಸರ್ವಶ್ರೇಷ್ಠನಾದ ಭಗವಂತ. ಲಿಂಗವು ಅವನ ಪ್ರಧಾನ ಪ್ರತೀಕ ಅಥವಾ ಚಿಹ್ನೆ. 'ನಮಃ ಶಿವಾಯ' ಎನ್ನುವ ಪಂಚಾಕ್ಷರಿ ಮಂತ್ರವು ಮೋಕ್ಷಸಾಧಕವಾದ ಆಧ್ಯಾತ್ಮಿಕ ಸೂತ್ರ. 'ಪಂಚಾಚಾರ'ಗಳು ಮತ್ತು 'ಅಷ್ಟಾವರಣ'ಗಳು ಮುಖ್ಯವಾದ ಸದಾಚಾರ ಸಂಹಿತೆಗಳು. 'ಶಕ್ತಿವಿಶಿಷ್ಠಾದ್ವೈತ'ವು ಈ ಪದ್ಧತಿಯ ಮೂಲ ಸಿದ್ಧಾಂತ. 
 
         ಸೃಷ್ಟಿ ಕ್ರಿಯೆಯನ್ನು ಕುರಿತು ಕಾಶ್ಮೀರ ಶೈವಮತವು ಪ್ರತಿಪಾದಿಸಿರುವ ೩೬ ತತ್ವಗಳನ್ನೇ ವೀರಶೈವಮತವು ಅಳವಡಿಸಿಕೊಂಡಿದೆ. 
 
ಅನುಸರಿಸಬೇಕಾದ ನೀತಿ ನಿಯಮಾವಳಿಗಳು:
 
     ಮೂರು ರೀತಿಯ ಮಲಗಳು (ಈ ಮೊದಲೇ ತಿಳಿಸಿರುವ - ಆಣವಮಲ, ಮಾಯೀಯಮಲ ಮತ್ತು ಕರ್ಮಮಲ) ಇಲ್ಲದಿದ್ದರೆ ಜೀವಿ ಅಥವಾ ಪಶು(ವ್ಯಕ್ತಿ)ವು ಶಿವ(ಪತಿ)ನಷ್ಟೇ ಮೇಧಾವಿಯಾಗಿರುತ್ತಿದ್ದ. ಈ ಮಲಗಳಿಂದ ವಿಮುಕ್ತನಾಗಲು, ವ್ಯಕ್ತಿಯು ಸಕಾಲದಲ್ಲಿ ಯೋಗ್ಯ ಗುರುವಿನ ಮೂಲಕ ದೀಕ್ಷೆಯನ್ನು ಪಡೆಯಬೇಕು. ದೀಕ್ಷೆಯು ಸರಳವಾದ ಧಾರ್ಮಿಕ ವಿಧಿಯಾಗಿದ್ದು, ಗುರುವು ಲಿಂಗವನ್ನು ಪೂಜಿಸಿ ಅದನ್ನು ಶಿಷ್ಯನ ಕೊರಳಿಗೆ ಕಟ್ಟುತ್ತಾನೆ; ಅದು ಅವನ ಕೊರಳಲ್ಲಿ ಕಂಠಾಭರಣದಂತೆ ತೂಗಾಡುತ್ತಿರುತ್ತದೆ. ಲಿಂಗವನ್ನು ಸಾಮಾನ್ಯವಾಗಿ ಬೆಳ್ಳಿಯ ಕರಡಿಗೆಯಲ್ಲಿ ಇರಿಸಿರುತ್ತಾರೆ. ಈ ಮೂಲಕ ಗುರುವು "ನಮಃ ಶಿವಾಯ" ಎನ್ನುವ ಮಂತ್ರೋಪದೇಶವನ್ನು ಕೊಡುವುದಲ್ಲದೆ ಆಧ್ಯಾತ್ಮಿಕ ಶಕ್ತಿಯನ್ನೂ ಶಿಷ್ಯನಿಗೆ ಧಾರೆಯೆರೆಯುತ್ತಾನೆ. ಮಹಿಳೆಯರೂ ಕೂಡಾ ಈ ಪಂಗಡದಲ್ಲಿ ದೀಕ್ಷೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. 
 
   ದೀಕ್ಷೆಯನ್ನು ಪಡೆದುಕೊಂಡ ವ್ಯಕ್ತಿಯು ವೀರಶೈವಮತವು ಪ್ರಚುರಪಡಿಸಿರುವ, 'ಪಂಚಾಚಾರ'ಗಳೆಂದು ಕರೆಯಲ್ಪಡುವ ಐದು ನಿಯಮಗಳನ್ನು ಪಾಲಿಸುವುದಲ್ಲದೆ ತನ್ನನ್ನು ತಾನು 'ಅಷ್ಟಾವರಣ'ಗಳಿಂದ (ಎಂಟು ರೀತಿಯ ಕವಚಗಳಿಂದ) ಕಾಪಾಡಿಕೊಳ್ಳಬೇಕು. 
 
ಪಂಚಾಚಾರಗಳು ಈ ರೀತಿ ಇವೆ:
 
೧) ಲಿಂಗಾಚಾರ - ಪ್ರತಿನಿತ್ಯವೂ ತನಗೆ ದೀಕ್ಷೆಯಲ್ಲಿ ಕೊಟ್ಟ ಲಿಂಗವನ್ನು ಪೂಜಿಸುವುದು.
೨) ಸದಾಚಾರ - ಹಣವನ್ನು ನೀತಿಯುಕ್ತ ಮಾರ್ಗದಿಂದ ಗಳಿಸಬೇಕು ಮತ್ತು ಉಳಿಕೆಯನ್ನು ಅವಶ್ಯಕತೆಯಿದ್ದವರಿಗೆ ಮತ್ತು ಜಂಗಮರಿಗೆ (ಸಂಚಾರಿಗಳಾದ ಧರ್ಮೋಪದೇಶಕರು) ಸಹಾಯ ಮಾಡಲು ಉಪಯೋಗಿಸಬೇಕು.
೩) ಶಿವಾಚಾರ - ಎಲ್ಲಾ ಲಿಂಗಾಯತರನ್ನು ಶಿವಸಮಾನರೆಂದು ಭಾವಿಸಿ ಒಂದೇ ರೀತಿಯಾಗಿ ಕಾಣಬೇಕು.
೪) ಭೃತ್ಯಾಚಾರ - ಶಿವ ಮತ್ತು ಅವನ ಭಕ್ತರಲ್ಲಿ ದೈನ್ಯತೆಯನ್ನು ಬೆಳೆಸಿಕೊಳ್ಳಬೇಕು. 
೫) ಗಣಾಚಾರ - ತನ್ನ ಧರ್ಮವನ್ನು ಅತ್ಯಂತ ಉತ್ಸಾಹದಿಂದ ಕಾಪಾಡಬೇಕು, ತನ್ನ ದೇವರು ಮತ್ತು ಧರ್ಮದ ಅವಹೇಳನೆ ಮಾಡುವವರ ಅಥವಾ ಅಗೌರವದಿಂದ ಕಾಣುವವರ ವಿರುದ್ಧ ಪ್ರತಿಭಟಿಸಬೇಕು ಮತ್ತು ಪ್ರಾಣಿಹಿಂಸೆಯನ್ನು ಸಹಿಸಬಾರದು. 
 
ಅಷ್ಟಾವರಣಗಳು ಯಾವುವೆಂದರೆ: 
 
೧) ಗುರು - ಗುರುವಿನಲ್ಲಿ ನಂಬಿಕೆ ಮತ್ತು ಗೌರವಗಳನ್ನಿಡುವುದು.
೨) ಲಿಂಗ - ಲಿಂಗವನ್ನು ಪೂಜ್ಯ ಭಾವನೆ ಮತ್ತು ಭಕ್ತಿಭಾವದಿಂದ ಕಾಣುವುದು.
೩) ಜಂಗಮ - ವಿರಕ್ತರಲ್ಲಿ ಮತ್ತು ಜಂಗಮರಲ್ಲಿ ಭಕ್ತಿಯನ್ನಿರಸಬೇಕು.
೪) ಪಾದೋದಕ - ಗುರು ಅಥವಾ ಜಂಗಮರ ಪಾದಗಳನ್ನು ತೊಳೆದ ನೀರಿನಿಂದ ತನ್ನನ್ನು ಪ್ರೋಕ್ಷಿಸಿಕೊಳ್ಳುವುದು ಅಥವಾ ಆ ನೀರನ್ನು ಸೇವಿಸುವುದು. 
೫) ಪ್ರಸಾದ - ಪೂಜೆಗೆ ನೈವೇದ್ಯವಾಗಿ ಇರಿಸಿದ ಆಹಾರವನ್ನು ಸ್ವೀಕರಿಸುವುದು. 
೬) ಭಸ್ಮ - ಪ್ರವಿತ್ರ ಭಸ್ಮವನ್ನು (ವಿಭೂತಿಯನ್ನು) ಹಣೆಗೆ ಮತ್ತು ದೇಹದ ಇತರ ಭಾಗಗಳಲ್ಲಿ ವಿಧಿಪೂರ್ವಕವಾಗಿ ಧರಿಸುವುದು. 
೭) ರುದ್ರಾಕ್ಷ - ರುದ್ರಾಕ್ಷಿಯ ಮಣಿಹಾರದಿಂದ ಜಪವನ್ನು ಕೈಗೊಳ್ಳುವುದು ಮತ್ತು ರುದ್ರಾಕ್ಷಿಯನ್ನು ದೇಹದಲ್ಲಿ ಧರಿಸುವುದು.
೮) ಮಂತ್ರ - ದೀಕ್ಷಾ ಗುರುವಿನ ಆದೇಶದಂತೆ ಪಂಚಾಕ್ಷರಿ ಮಂತ್ರವಾದ 'ನಮಃ ಶಿವಾಯ'ವನ್ನು ಪದೇ ಪದೇ ಹೇಳಿಕೊಳ್ಳುತ್ತಿರುವುದು. 
 
   'ಪಂಚಾಚಾರ'ಗಳು ಮತ್ತು 'ಅಷ್ಟಾವರಣ'ಗಳು 'ವೀರಶೈವ' ಅಥವಾ 'ಲಿಂಗಾಯತ'ನನ್ನು ಎಲ್ಲಾ ವಿಧವಾದ ಮಲಗಳಿಂದ ಶುದ್ಧಗೊಳಿಸುವುದರಿಂದ - ಕಡೇ ಪಕ್ಷ ತಾತ್ವಿಕವಾಗಿ - ಅವನು ಯಾವುದೇ ರೀತಿಯ ಶಾಸ್ತ್ರವಿಧಿತ/ಧಾರ್ಮಿಕ ಸೂತಕಗಳನ್ನು ಆಚರಿಸಬೇಕಾಗಿಲ್ಲ ಮತ್ತು ಸತ್ತನಂತರ ಅವನ ದೇಹವನ್ನು ಸುಡುವ ಅವಶ್ಯಕತೆಯಿಲ್ಲ. ಆದಕಾರಣ ಅದನ್ನು ಹೂಳುತ್ತಾರೆ. 
 
ಶಕ್ತಿವಿಶಿಷ್ಟಾದ್ವೈತದ ಸಿದ್ಧಾಂತಗಳು
 
      ರಾಮಾನುಜರ 'ವಿಶಿಷ್ಟಾದ್ವೈತ' ಪದ್ಧತಿಯಂತೆ ವೀರಶೈವರೂ ಕೂಡಾ ಒಂದು ರೀತಿಯ ವಿಶಿಷ್ಟಾದ್ವೈತ ತತ್ವವನ್ನು ಒಪ್ಪಿಕೊಳ್ಳುತ್ತಾರೆ ಆದರೆ ಇದು ಅದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ರಾಮಾನುಜರ ವಿಶಿಷ್ಟಾದ್ವೈತ ಪದ್ಧತಿಯಲ್ಲಿ, ಬ್ರಹ್ಮವು ಅದ್ವೈತಿ (ದ್ವಿತೀಯವಿಲ್ಲದ್ದು) ಆದರೆ ವಿಶೇಷವಾದದ್ದು (ವಿಶಿಷ್ಟ); ಏಕೆಂದರೆ ಅದರಲ್ಲಿ ಪ್ರಕೃತಿ (ಚಿತ್) ಮತ್ತು ಜೀವರುಗಳು (ಅಚಿತ್) ಎನ್ನುವ ಎರಡು ಅಂಶಗಳು ಅವನೊಳಗೆ ಅಂತರ್ಗತವಾಗಿ ಬೇರ್ಪಡಿಸಲಾಗದ ಸಂಗತಿಗಳಾಗಿ ಇವೆ. ಆದರೆ ವೀರಶೈವ ಮತದಲ್ಲಿ, ವಿಶಿಷ್ಟತ್ವವು ಕೇವಲ ಅವನ 'ಶಕ್ತಿ'ಗೆ ಪರಿಮಿತವಾಗಿದೆ; ಅಂದರೆ ಶಿವನ ಆ ಶಕ್ತಿಯಿಂದ ಈ ಪ್ರಪಂಚದ ಸೃಷ್ಟಿ, ಸ್ಥಿತಿ ಮತ್ತು ಲಯಗಳು ಉಂಟಾಗುತ್ತವೆ. ಬ್ರಹ್ಮ ಅಥವಾ ದೇವರು ಮತ್ತು ಅವನ ಶಕ್ತಿಯು ಬೇರೆಯಲ್ಲ (ವಿಭಿನ್ನವಲ್ಲ); ಬೆಂಕಿ ಮತ್ತು ಅದರ ಶಾಖದಂತೆ ಅಥವಾ ಬೆಳಕು ಮತ್ತು ಸೂರ್ಯನ ಹಾಗೆ. ಮತ್ತು ಬ್ರಹ್ಮನಿಗೆ ಯಾವಾಗಲೂ ತನ್ನ ಶಕ್ತಿಯ ಕುರಿತಾಗಿ ಅರಿವಿರುತ್ತದೆ. ಆದ್ದರಿಂದ ಇಲ್ಲಿ ವಿಶಿಷ್ಟತ್ವವು ಅಂತರ್ಗತವಾಗಿರುವ ಶಕ್ತಿಯ ಕುರಿತಾಗಿ ಕೇವಲ ವಿಮರ್ಶೆ ಅಥವಾ 'ಸ್ವಯಂಪ್ರಜ್ಞೆ'ಗೆ  ಪರಿಮಿತವಾಗಿದೆ. ಆದ್ದರಿಂದ ಈ ಪದ್ಧತಿಗೆ 'ಶಕ್ತಿವಿಶಿಷ್ಟಾದ್ವೈತ' ಎಂದು ಹೆಸರಾಗಿದೆ. 
 
ಷಟ್‍ಸ್ಥಲ ಸಿದ್ಧಾಂತ
 
        ವೀರಶೈವ ಪಂಗಡದಲ್ಲಿ 'ಶಿವ' ಅಥವಾ 'ಬ್ರಹ್ಮ'ವು ಸ್ಥಲವೆಂದು ಕರೆಯಲ್ಪಟ್ಟಿದೆ. ಅವನು 'ಸ್ಥಲ'ನು ಏಕೆಂದರೆ ಅವನು ಆಕಾಶ ಅಥವಾ ಸ್ಥಲದಂತೆ ಎಣೆಯಿಲ್ಲದವನು ಅಥವಾ ಅನಂತನು. ಸ್ಥಲ ಪದದ ನಿಷ್ಪತ್ತಿಯಿಂದಲೂ ಅದನ್ನು ಯಾವುದರಿಂದ ಪ್ರಪಂಚವು ಆವಿರ್ಭಾವಗೊಂಡು, ನೆಲೆಗೊಂಡು ಮತ್ತು ಯಾವುದರಲ್ಲಿ ಲಯವಾಗುತ್ತದೋ ಅದು ಸ್ಥಲ ಎಂದು ಅರ್ಥೈಸಬಹುದು. (ಸ್ಥ = ನೆಲೆಗೊಂಡ; ಲ=ಲೀನವಾಗುವ/ಲಯವಾಗುವ). 
 
          'ಷಟ್‍ಸ್ಥಲ ಸಿದ್ಧಾಂತ'ದ ಪ್ರಕಾರ, ಶಿವನು ತನ್ನನ್ನು ತಾನು ಎರಡು ರೂಪಗಳಾಗಿ ವಿಭಾಗಿಸಿಕೊಳ್ಳುತ್ತಾನೆ, ಅವೆಂದರೆ - 'ಲಿಂಗ' ಮತ್ತು 'ಅಂಗ', ಇದರಲ್ಲಿ ಮೊದಲನೆಯದು ತಾನೇ ಆದರೆ ಎರಡನೆಯದು 'ಜೀವ'ನು. ಇವೆರಡೂ ಮುಂದಿನ ಹಂತದಲ್ಲಿ ಮೂರು ಮೂರು ಭಾಗಗಳಾಗಿ ವಿಭಜಿಸಲ್ಪಡುತ್ತವೆ; ಅದರಲ್ಲಿ ಲಿಂಗವು - 'ಇಷ್ಟಲಿಂಗ', 'ಪ್ರಾಣಲಿಂಗ' ಮತ್ತು 'ಭಾವಲಿಂಗ'ವಾದರೆ, ಅಂಗವು - 'ತ್ಯಾಗಾಂಗ', 'ಭೋಗಾಂಗ' ಮತ್ತು 'ಯೋಗಾಂಗ'ವಾಗುತ್ತದೆ. 
 
     ಯಾವಾಗ ಜೀವಿಯು ಈ ಪ್ರಪಂಚದ ಮೇಲಿನ ಮಮತೆಯನ್ನು ತೊರೆಯುತ್ತಾನೆಯೋ, ಆಗ ಅವನು 'ತ್ಯಾಗಾಂಗ'ನೆಂದು ಕರೆಯಲ್ಪಟ್ಟು, ಗುರುವು ಅವನಿಗೆ ದೀಕ್ಷಾಸಮಯದಲ್ಲಿ 'ಇಷ್ಟಲಿಂಗ'ವನ್ನು ಕೊಡುತ್ತಾನೆ; ಅದು ಅವನಿಗೆ ಉಪಾಸನೆ ಅಥವಾ ಪೂಜೆಗೆ ಸಾಧನವಾಗುತ್ತದೆ. ಯಾವಾಗ ಜೀವಿಯು ಇಷ್ಟಲಿಂಗದ ಉಪಾಸನೆಯಿಂದ ಪರಿಶುದ್ಧನಾಗಿ, ಅವನು ಪ್ರಾಪಂಚಿಕ ಭೋಗಗಳನ್ನು ಶಿವನ ಕೃಪೆಯೆಂದು ತಿಳಿದು ಅನುಭವಿಸುತ್ತಾನೆಯೋ, ಆಗ ಅವನು 'ಭೋಗಾಂಗ'ನಾಗಿ 'ಪ್ರಾಣಲಿಂಗ' (ಅವನ ಹೃದಯದಲ್ಲಿ ಸ್ಥಾಪಿಸಲ್ಪಟ್ಟ ಶಿವ)ವನ್ನು ಅರಿಯುತ್ತಾನೆ. ಯಾವಾಗ ಅವನು ಮತ್ತಷ್ಟು ಉನ್ನತಿಯನ್ನು ಹೊಂದಿ, ಅತ್ಯುನ್ನತವಾದ ಪ್ರಜ್ಞೆಯನ್ನು ಸಹಸ್ರಾರದಲ್ಲಿ ಪಡೆಯುತ್ತಾನೋ, ಆಗ ಅವನನ್ನು 'ಯೋಗಾಂಗ'ನೆಂದು ಕರೆಯುತ್ತಾರೆ ಮತ್ತು ಅವನು 'ಪರಮಾನಂದ'ವನ್ನು ಅನುಭವಿಸುತ್ತಾ 'ಭಾವಲಿಂಗ'ವೆಂದು ಕರೆಯಲ್ಪಡುವ ಶಿವನೊಂದಿಗೆ ತಾದಾತ್ಮ್ಯವನ್ನು ಹೊಂದುತ್ತಾನೆ. 
 
ಉಪಸಂಹಾರ
 
  ಪ್ರಾಚೀನ ಶೈವಮತದಲ್ಲಿ ಬೇರೂರಿದ್ದ ವೀರಶೈವ ಧರ್ಮವು ಸಂತರ ಸಮೂಹದಿಂದ ಪೋಷಿಸಲ್ಪಟ್ಟಿತು. ಅದು ಸಾಮಾಜಿಕ ಸಮಾನತೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತಂದು, ಕೆಲಸ (ಕಾಯಕ) ಮಾಡುವುದರ ಮೇಲೆ ಒತ್ತು ಕೊಟ್ಟು, 'ಕಾಯಕ'ವನ್ನು ಕೇವಲ ಸಾಮಾಜಿಕ ಕರ್ತವ್ಯವಾಗಿಯಲ್ಲದೆ ಆಧ್ಯಾತ್ಮಿಕ ಉನ್ನತಿಯ ಭಾಗವಾಗಿಯೂ ಕೂಡಾ ಪ್ರಚುರಪಡಿಸಿದ್ದರಿಂದ ಅದು ಬೃಹತ್ ಸಂಖ್ಯೆಯ ಅನುಯಾಯಿಗಳನ್ನು ಪಡೆದುಕೊಂಡಿತು. ಸಾಮಾಜಿಕ ಕ್ರಾಂತಿಯ ಅದರ ಭಾಗಗಳು ಮಸುಕಾಗಿ ಹೋಗಿದ್ದರೂ (ಜಾತಿ ವ್ಯವಸ್ಥೆಯು ಇಂದೂ ಕೂಡಾ ಹಿಂದೂ ಸಮಾಜದಲ್ಲಿ ಪ್ರಬಲವಾಗಿರುವುದರಿಂದ) ಅದರ ಇತರೇ ಸಾಮಾಜಿಕ-ಧಾರ್ಮಿಕ ಅಂಶಗಳು ಖಂಡಿತವಾಗಿಯೂ ಹಿಂದೂ ಧರ್ಮವನ್ನು ಶ್ರೀಮಂತಗೊಳಿಸಿವೆ. 
                                 
                                                              ******
ಹಿನ್ನುಡಿ
 
        ಎರಡು ಪ್ರಮುಖ ಪಂಗಡಗಳಾದ ವಿಷ್ಣು ಮತ್ತು ಶಕ್ತಿ (ಅಥವಾ ದೇವಿ), ಶಿವನ ಪಂಗಡ (ಅಥವಾ ಶೈವಮತ) ಕೂಡಾ ಹಿಂದೂ ಧರ್ಮದ ಸಂಪ್ರದಾಯ ಮತ್ತು ಆಧ್ಯಾತ್ಮಿಕ ಉನ್ನತಿಗೆ ತನ್ನ ಕಾಣಿಕೆಯನ್ನು ಸಲ್ಲಿಸಿದೆ. ಇದರ ಮೂಲವು ವೇದಗಳಲ್ಲಿ ಅಡಗಿದ್ದರೂ ಇದು ಎರಡನೇ ಸಾಲಿನ ಶಾಸ್ತ್ರಗ್ರಂಥಗಳಾದ ಆಗಮಗಳು, ಪುರಾಣಗಳು ಮುಂತಾದವುಗಳಿಂದ ಪೋಷಿಸಲ್ಪಟ್ಟು ಶೈವಮತವು ಬಹುಜನರ ಮನ್ನಣೆಯನ್ನು ಗಳಿಸುವುದಲ್ಲದೆ ಅಪಾರ ಜನಪ್ರಿಯನ್ನು ಪಡೆದ ಪದ್ಧತಿಯಾಗಿದೆ. ಅದಲ್ಲದೆ ಹಿಂದೂ ಧರ್ಮದ ಇತರ ಪದ್ಧತಿಗಳು, ಪಂಗಡಗಳು ಮತ್ತು ಉಪಪಂಗಡಗಳೊಂದಿಗೆ ಹದವಾಗಿ ಮಿಳಿತಗೊಂಡಿದೆ. 
 
----------------------------------------------------------------------------------
ವಿ.ಸೂ.: ಇದು 'Facets of Saivism - Swami Harshananda' ಎನ್ನುವ ಆಂಗ್ಲ ಭಾಷೆಯ ಪುಸ್ತಕದ ಅನುವಾದದ ಭಾಗ. ಪ್ರಕಟಣೆ ಶ್ರೀ ರಾಮಕೃಷ್ಣ ಆಶ್ರಮ, ಬೆಂಗಳೂರು (ಪುಟಗಳು ೪೪ ರಿಂದ ೫೬)
----------------------------------------------------------------------------------
 ಈ ಸರಣಿಯ ಹಿಂದಿನ ಲೇಖನ ಶೈವಮತದ ಹಲವು ಮುಖಗಳು: ಭಾಗ ೪ಕ್ಕಾಗಿ ಈ ಕೆಳಗಿನ ಕೊಂಡಿಯನ್ನು ನೋಡಿ 
http://sampada.net/blog/%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B3%80%E0%B2%9C%E0%B2%BF-%E0%B2%AE%E0%B3%8D%E0%B2%AF%E0%B2%BE%E0%B2%9C%E0%B2%BF%E0%B2%95%E0%B3%8D-%E0%B2%AE%E0%B2%BE%E0%B2%A1%E0%B2%BF%E0%B2%A6%E0%B3%8D%E0%B2%A6%E0%B3%81-%E0%B2%9C%E0%B2%AE%E0%B2%BE%E0%B2%A8%E0%B2%BE%E0%B2%A6-%E0%B2%9C%E0%B3%8B%E0%B2%95%E0%B3%81%E0%B2%97%E0%B2%B3%E0%B3%81-%E0%B3%A7%E0%B3%AA/10/08/2012/37884
Rating
No votes yet

Comments