ಸಹಿ ಮಾಡುವ ಮುನ್ನ.....
ತಮ್ಮ ಕೆಲಸಕ್ಕೆ ರಾಜೀನಾಮೆ ಇತ್ತ ಬಳಿಕ ಸಿಲ್ವೆಸ್ಟರ್ ಹಾಯಾಗಿರಲು ಬಯಸಿದ್ದರು. ಅದಕ್ಕಾಗಿ ತಮಗೆ ಸಿಕ್ಕಿದ ಹಣದಿಂದ ಮನೆಯೊಂದನ್ನು ಖರೀದಿಸಿದರು. ಆದರೆ ಆ ಮನೆಯನ್ನು ತಮ್ಮ ತಂದೆಯ ಹೆಸರಿನಲ್ಲಿ ರಿಜಿಸ್ಟರ್ ಮಾಡಿದರು. ಕೆಲವೇ ವರುಷಗಳಲ್ಲಿ ತಂದೆಯೊಂದಿಗೆ ಅವರಿಗೆ ಮನಸ್ತಾಪ. ಇವರ ಮೇಲಿನ ಸಿಟ್ಟಿನಲ್ಲಿ, ತಂದೆಯವರು ಆ ಮನೆಯನ್ನು ಇವರ ತಮ್ಮನ ಹೆಸರಿಗೆ ವಿಲ್ ಮಾಡಿದರು. ಅನಂತರ ಸ್ವಲ್ಪ ಸಮಯದಲ್ಲೇ ತಂದೆಯವರು ವಿಧಿವಶರಾದರು.
ವಿಲ್ ಪ್ರಕಾರ ಆ ಮನೆ ಸಿಲ್ವೆಸ್ಟರ್ ಅವರ ತಮ್ಮನ ಪಾಲಿಗಾಯಿತು ಮತ್ತು ತಮ್ಮದೇ ಹಣದಿಂದ ಖರೀದಿಸಿದ ಮನೆಯಿಂದ ಸಿಲ್ವೆಸ್ಟರ್ ಹೊರ ನಡೆಯಬೇಕಾಯಿತು. ಈಗ ಅವರೇನೂ ಮಾಡುವಂತಿರಲಿಲ್ಲ. ಯಾಕೆಂದರೆ, ಹತ್ತು ವರುಷಗಳ ಮುನ್ನ ಆ ಮನೆಯ ಖರೀದಿಗೆ ಹಣ ಪಾವತಿಸುವ ಚೆಕ್ಕಿಗೆ ಸಹಿ ಮಾಡುವಾಗ, ಆ ಮನೆ ತನ್ನದೆಂದು ಸಾಧಿಸಲು ಅವಕಾಶ ನೀಡುವ ಯಾವ ದಾಖಲೆಯನ್ನೂ ಅವರು ಮಾಡಿಕೊಂಡಿರಲಿಲ್ಲ.
ಮನೆ ಜಪ್ತಿಗೆ ಬಂದಾಗ ........ ಅದೊಂದು ದಿನ ರಮೇಶರಾಯರ ಮನೆಗೆ ಕೋರ್ಟಿನ ಅಮೀನರು ಬಂದರು. ಅವರು ಏಕಾಏಕಿ ಮನೆ ಜಪ್ತಿ ಮಾಡಲು ಕೋರ್ಟಿನ ಆದೇಶ ತೋರಿಸಿದಾಗ ರಮೇಶರಾಯರಿಗೆ ಆಕಾಶ ಕಳಚಿ ತಲೆಯ ಮೇಲೆ ಬಿದ್ದಂತಾಯಿತು. ಅಮೀನರದ್ದು ಒಂದೇ ಮಾತು: "ನೀವು ಬ್ಯಾಂಕ್ ಸಾಲ ಕಟ್ಟಿಲ್ಲ. ಅದಕ್ಕಾಗಿ ಆರು ವರ್ಷ ಕೇಸ್ ನಡೆದು ಈಗ ಮನೆ ಜಪ್ತಿ ಆರ್ಡರ್ ಬಂದಿದೆ. ಮನೆ ಬಿಟ್ಟು ಕೊಡಿ." ರಮೇಶ ರಾಯರು ತನ್ನ ಮೇಲೆ ಕೋರ್ಟಿನಲ್ಲಿ ಕೇಸ್ ದಾಖಲಾದದ್ದೇ ಗೊತ್ತಿಲ್ಲ; ಒಂದು ವಾರ ಸಮಯ ಕೊಡಿ ಎಂದು ಅಂಗಲಾಚಿದರು. ಇವರ ಕಂಗಾಲು ಸ್ಥಿತಿ ಕಂಡು ಅಮೀನರಿಗೆ ಏನನ್ನಿಸಿತೋ, ಹಾಗೆಯೇ ಷರಾ ಬರಕೊಂಡು ಹೋದರು.
ತಾವು ಬ್ಯಾಂಕಿನ ಯಾವ ಸಾಲ ಬಾಕಿ ಮಾಡಿದ್ದಂತ ರಮೇಶ ರಾಯರಿಗೆ ಅರ್ಥವಾಗಲಿಲ್ಲ. ನೇರವಾಗಿ ಬ್ಯಾಂಕಿಗೆ ಹೋಗಿ ಕೇಳಿದರು. "ಅದೇ ೫೦,೦೦೦ ರೂಪಾಯಿ ಸಾಲ" ಎಂಬುದು ಬ್ಯಾಂಕಿನವರ ಉತ್ತರ. ಅಷ್ಟು ಮೊತ್ತದ ಸಾಲ ತಾನು ತಗೊಂಡೇ ಇಲ್ಲ ಎಂದು ರಮೇಶ ರಾಯರು ವಾದಿಸಿದರು. ಕೊನೆಗೆ ಬ್ಯಾಂಕಿನವರು "ಇದೇ ನಿಮ್ಮ ಸಾಲದ ಅರ್ಜಿಯ ಯಾಥಾಪ್ರತಿ" ಎಂದು ಕೈಬರಹದ ದಾಖಲೆಯೊಂದನ್ನು ತೋರಿಸಿದರು. ಅದರಲ್ಲಿದ್ದ ಸಹಿ ಮಾತ್ರ ರಮೇಶರಾಯರದ್ದು, ಆದರೆ ಕೈಬರಹ ರಮೇಶರಾಯರದ್ದಲ್ಲ.
ಈಗ ರಮೇಶ ರಾಯರಿಗೆ ನೆನಪಾಯಿತು. ಹನ್ನೆರಡು ವರುಷಗಳ ಹಿಂದಿನ ಮಾತು. ಅವರ ಮೊದಲನೆಯ ಸಾಲದಲ್ಲಿ ಸುಮಾರು ಹತ್ತು ಸಾವಿರ ರೂಪಾಯಿ ಬಾಕಿಯಿತ್ತು. ತಾಯಿಯ ಅನಾರೋಗ್ಯದಿಂದಾಗಿ ಹಣದ ಅಡಚಣೆ ಇದೆ, ಸಾಲ ತೀರಿಸಲು ಸಮಯ ಕೊಡಿ ಎಂದು ಬ್ಯಾಂಕಿನಲ್ಲಿ ವಿನಂತಿಸಿದಾಗ, "ಹಾಗೆಯೇ ಬರೆದು ಕೊಡಿ" ಎಂದು ಇವರಿಗೊಂದು ಖಾಲಿ ಕಾಗದದ ಹಾಳೆ ಕೊಟ್ಟಿದ್ದರು. ತುರ್ತಿನಲ್ಲಿದ್ದ ರಮೇಶ ರಾಯರು "ಹಾಗಂತ ನೀವೇ ಬರೆದುಕೊಳ್ಳಿ" ಎಂದು ಖಾಲಿ ಹಾಳೆಗೆ ಸಹಿ ಮಾಡಿ ಕೊಟ್ಟಿದ್ದರು. ಅನಂತರ ಏನಾಯಿತೆಂದು ರಮೇಶ ರಾಯರಿಗೆ ಈಗ ಅರ್ಥವಾಯಿತು.
ಆ ಖಾಲಿ ಹಾಳೆಯನ್ನು ಇನ್ನೊಂದು ಸಾಲಕ್ಕೆ ಅರ್ಜಿಯಾಗಿ ಭರ್ತಿ ಮಾಡಿ, ರಮೇಶರಾಯರ ಹೆಸರಿನಲ್ಲಿ ಇನ್ನೊಂದು ಬ್ಯಾಂಕ್ ಸಾಲ ತೆಗೆಯಲಾಗಿತ್ತು. ಈ ಸಾಲಕ್ಕೆ ಚಿಕ್ಕಾಸೂ ಕಟ್ಟದೆ ಇದ್ದಾಗ ರಮೇಶರಾಯರ ವಿರುದ್ಧ ಕೋರ್ಟಿನಲ್ಲಿ ದಾವೆ ಹೂಡಲಾಗಿತ್ತು. ಅವರಿಗೆ ಆ ದಾವೆಯ ನೋಟೀಸ್ ಜ್ಯಾರಿ ಆಗಿತ್ತು. ಆಗ ಅವರು ಬ್ಯಾಂಕಿಗೆ ಹೋಗಿ ವಿಚಾರಿಸದೆ ಇದ್ದುದೇ ತಪ್ಪಾಯಿತು. ಕೋರ್ಟಿನಲ್ಲಿ ದಾವೆ ಮುಂದುವರಿದು, ಡಿಕ್ರಿ ಆಗಿ, ಈಗ ಆ ಸಾಲಕ್ಕೆ ಭದ್ರತೆಯಾಗಿದ್ದ ಮನೆಯ ಜಪ್ತಿಗೆ ಅಮೀನರು ಬಂದಾಗಿತ್ತು. ತನ್ನ ಮನೆ ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ರಮೇಶರಾಯರು ಕುಸಿದು ಕುಳಿತರು.
ರಾಮರಾಯರ ಗ್ಯಾರಂಟಿ ........ ರಾಮರಾಯರು ಪ್ರಸಿದ್ಧ ಹೋಟೆಲಿನ ಮಾಲೀಕರು. ನಾಮದೇವ ಅವರ ಸಹಪಾಠಿ. ಒಂದು ದಿನ ನಾಮದೇವ ಇವರ ಬಳಿ ಬಂದು, "ನಿನ್ನಿಂದ ಒಂದು ಉಪಕಾರವಾಗಬೇಕು" ಎಂದು ಪೀಠಿಕೆ ಹಾಕಿದ. "ಏನಾಗಬೇಕು ಹೇಳು, ಸಂಕೋಚ ಬೇಡ" ಎಂದರು ರಾಮರಾಯರು.
"ಮತ್ತೇನಿಲ್ಲ, ನನ್ನ ಮಗಳನ್ನು ಇಂಜಿನಿಯರಿಂಗ್ ಕೋರ್ಸಿಗೆ ಸೇರಿಸ ಬೇಕಾಗಿದೆ. ಅದಕ್ಕಾಗಿ ಹಣ ಬೇಕಾಗಿತ್ತು. ಬ್ಯಾಂಕಿಗೆ ಸಾಲಕ್ಕೆ ಅರ್ಜಿ ಕೊಟ್ಟಾಗಿದೆ. ಸಾಲ ಮಂಜೂರು ಮಾಡಬೇಕಾದರೆ ಅವರಿಗೆ ಗ್ಯಾರಂಟಿ ಬೇಕು. ನೀನು ಗ್ಯಾರಂಟಿ ಪತ್ರ ಕೊಟ್ಟರೆ ಬ್ಯಾಂಕಿನವರು ಒಪ್ಪಿಕೊಳ್ತಾರೆ" ಎಂದು ನಾಮದೇವ ಲವಲೇಶವೂ ಅನುಮಾನ ಬಾರದಂತೆ ಮಾತನಾಡಿದ. ಅವನನ್ನು ನಂಬಿದ ರಾಮರಾಯರು, ಅವನ ಮಗಳಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಬ್ಯಾಂಕಿಗೆ ಹೋಗಿ ಗ್ಯಾರಂಟಿ ಪತ್ರಕ್ಕೆ ಸಹಿ ಮಾಡಿಯೇ ಬಿಟ್ಟರು. ಅದನ್ನು ಮರೆತೂ ಬಿಟ್ಟರು.
ಮೂರು ವರುಷಗಳ ನಂತರ ಬ್ಯಾಂಕಿನಿಂದ ರಾಮರಾಯರಿಗೊಂದು ನೋಟೀಸು ಬಂತು. "ನಿಮ್ಮ ಗ್ಯಾರಂಟಿಯ ಅನುಸಾರ ರೂಪಾಯಿ ೨,೧೦,೦೦೦ ಸಾಲವನ್ನು ೧೫ ದಿನದಲ್ಲಿ ಮರುಪಾವತಿಸಿ. ಇಲ್ಲವಾದರೆ, ಸಾಲ ವಸೂಲಿಗಾಗಿ ಕಾನೂನು ಕ್ರಮ ಜರಗಿಸಲಾಗುವುದು." ರಾಮರಾಯರಿಗೆ ಅದೇನೆಂಬುದೇ ಅರ್ಥವಾಗಲಿಲ್ಲ. ಬ್ಯಾಂಕಿಗೆ ಹೋಗಿ ಕೇಳಿದಾಗ ವಿಷಯ ತಿಳಿದು ತಲೆ ಚಚ್ಚಿಕೊಂಡರು. ನಾಮದೇವ ಮಗಳ ಇಂಜಿನಿಯರಿಂಗ್ ಕೋರ್ಸಿಗಾಗಿ ಸಾಲ ಪಡೆದಿರಲಿಲ್ಲ. ಆತ ವ್ಯಾಪಾರಕ್ಕಾಗಿ ರೂಪಾಯಿ ೧,೫೦,೦೦೦ ಸಾಲ ಪಡೆದು ಮರುಪಾವತಿಸಲೇ ಇಲ್ಲ. ಅದಕ್ಕೆ ಬಡ್ಡಿ, ಚಕ್ರ ಬಡ್ಡಿ, ದಂಡ ಬಡ್ಡಿ, ವಿಮಾ ಕಂತು ಎಲ್ಲ ಸೇರಿ ಈಗ ಬಾಕಿ ರೂಪಾಯಿ ಎರಡು ಲಕ್ಷ ಮೀರಿತ್ತು.
ನಾಮದೇವ ಮೂರು ವರುಷಗಳ ಮುಂಚೆ ಊರು ಬಿಟ್ಟಿದ್ದ. ಅವನು ಈಗ ಎಲ್ಲಿದ್ದಾನೆ ಎಂಬುದೇ ತಿಳಿದಿರಲಿಲ್ಲ. ಅವನಿಗೆ ಬ್ಯಾಂಕ್ ಕಳಿಸಿದ ನೋಟೀಸುಗಳೆಲ್ಲ "ವಿಳಾಸದಾರರು ಮನೆ ಬಿಟ್ಟಿದ್ದಾರೆ" ಎಂಬ ಷರಾದೊಂದಿಗೆ ವಾಪಾಸು ಬಂದಿದ್ದವು.
ನಮ್ಮ ಸಹಿಯ ಬೆಲೆ ........ ಈ ಎಲ್ಲ ಪ್ರಕರಣಗಳಲ್ಲಿ ಅನ್ಯಾಯ ಹಾಗೂ ಮೋಸ ಆಗಿದೆ ಎಂಬುದು ನಿಜ. ಆದರೆ ಹೀಗೇಕಾಯಿತು? ಏಕೆಂದರೆ, ಬಾಧಿತರು ಸಹಿ ಮಾಡುವ ಮುನ್ನ ಜಾಗರೂಕತೆ ವಹಿಸಲಿಲ್ಲ. ನಮ್ಮಲ್ಲಿ ಹಲವರಿಗೆ "ಸಹಿ ಮಾಡಿ" ಎಂದೊಡನೆ ತಕ್ಷಣ ಸಹಿ ಮಾಡುವ ಅಭ್ಯಾಸ. (ಹೆಬ್ಬೆಟ್ಟು ಹಾಕುವ ಹಲವರಿಗೂ ಇದೇ ಅಭ್ಯಾಸ.) ಅವರು ಇಂತಹ ಅನ್ಯಾಯ ಹಾಗೂ ಮೋಸಕ್ಕೆ ಒಳಗಾಗುತ್ತಾರೆ.
ಆದ್ದರಿಂದ ನಾವೆಲ್ಲರೂ ನಮ್ಮ ಸಹಿಯ ಬೆಲೆ ತಿಳಿದುಕೊಳ್ಳಬೇಕಾಗಿದೆ. ಯಾವುದೇ ಕಾಗದಪತ್ರದಲ್ಲಿ ನಾವು ಮಾಡುವ ಸಹಿ, ಅಲ್ಲಿ ಬರೆದ (ಮುದ್ರಿಸಿದ) ವಿಷಯಕ್ಕೆ ನಮ್ಮ ಸಂಪೂರ್ಣ ಸಮ್ಮತಿಯನ್ನು ಸೂಚಿಸುತ್ತದೆ. ಸಹಿ ಮಾಡಿದ ನಂತರ "ವಿಷಯ ತಿಳಿಯದೆ ಸಹಿ ಮಾಡಿದೆ" ಎನ್ನುವಂತಿಲ್ಲ. ಸಹಿ ಮಾಡಿದಾತ ತನ್ನದೇ ಸಹಿಯನ್ನು ನಿರಾಕರಿಸುವಂತೆಯೂ ಇಲ್ಲ. ಒಂದು ವೇಳೆ ನಿರಾಕರಿಸಿದರೂ ಅದು ಯಾರ ಸಹಿ ಎಂದು ಸಾಬೀತು ಮಾಡಲು ಸಾಧ್ಯವಿದೆ - ಸಾಕ್ಷಿಗಳ ಅಥವಾ ಕೈಬರಹ ತಜ್ನರ ಮೂಲಕ. ಒಂದು ದಾಖಲೆಗೆ ನಾವು ಸಹಿ ಮಾಡಿದ್ದನ್ನು ಸೂಚಿಸುವ ನಮ್ಮದೇ ಇನ್ನೊಂದು ಪತ್ರದ ಸಹಾಯದಿಂದ ಅಥವಾ ಸರಕಾರಿ ಕಚೇರಿಗಳಲ್ಲಿ (ತಹಸೀಲ್ದಾರ್ ಕಚೇರಿ, ರಿಜಿಸ್ಟ್ರಾರ್ ಕಚೇರಿ) ಇರುವ ರಿಜಿಸ್ಟರುಗಳ ಸಹಾಯದಿಂದಲೂ ಸಾಬೀತು ಮಾಡಬಹುದು.
ಸಾಲಕ್ಕೆ ಗ್ಯಾರಂಟಿ ........ ನಮ್ಮ ಜನಪರ ಸಂಘಟನೆಯಾದ ಮಂಗಳೂರಿನ ಬಳಕೆದಾರರ ವೇದಿಕೆಗೆ ಬಂದ ಮಹನೀಯರೊಬ್ಬರು ಬ್ಯಾಂಕಿನ ಮೆನೇಜರರ ವಿರುದ್ಧ ದೂರು ಹೇಳಿದರು. "ಆ ಬ್ಯಾಂಕಿನ ಒಬ್ಬ ಸಾಲಗಾರನಿಗೆ ನಾನು ಗ್ಯಾರಂಟಿ ಅಂತ ಕಾಗದಕ್ಕೆ ಸಹಿ ಹಾಕಿದ್ದು ಹೌದು. ಆದರೆ ಅವನಿಗೆ ಸಾಲದ ಬಾಕಿ ಕಟ್ಟುವ ತಾಕತ್ತಿದ್ದರೂ ಬ್ಯಾಂಕಿನ ಮೆನೇಜರ್ ಅವನಿಂದ ಬಾಕಿ ವಸೂಲಿ ಮಾಡುವ ಬದಲು ನನ್ನನ್ನು ಪೀಡಿಸುತ್ತಿದ್ದಾರೆ. ಇದು ಸರಿಯೇ?" ಎಂಬುದವರ ಪ್ರಶ್ನೆ.
ಬ್ಯಾಂಕಿನವರು ಸಾಲ ವಸೂಲಿಗಾಗಿ ನೇರವಾಗಿ ಗ್ಯಾರಂಟಿದಾರನನ್ನೇ ಬೆಂಬತ್ತಬಹುದು. ಆದರೆ ಇದು ಹಲವರಿಗೆ ಗೊತ್ತಿಲ್ಲ. ಸಾಲಗಾರನಿಂದ ಸಾಲ ವಸೂಲಿ ಮಾಡಲಾಗದಿದ್ದಲ್ಲಿ ಮಾತ್ರ ಗ್ಯಾರಂಟಿದಾರನಿಂದ ಸಾಲ ವಸೂಲಿಗೆ ಬ್ಯಾಂಕಿನವರು ಮುಂದಾಗುತ್ತಾರೆ ಎಂದು ಅನೇಕರು ಭಾವಿಸುತ್ತಾರೆ. ಇದು ತಪ್ಪು ತಿಳಿವಳಿಕೆ.
ಮೂಗರ್ಜಿಯಿಂದ ಮಾನನಷ್ಟ ........ ಅದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಅತಿರೇಕಗಳ ಬಗ್ಗೆ ಜನಜಾಗೃತಿಯ ಮಹಾಪೂರದ ಸಮಯ. ಅರಣ್ಯ ಇಲಾಖೆಯ ಕರ್ಮಕಾಂಡದ ಪ್ರಕರಣಗಳು ವಾರ್ತಾಪತ್ರಿಕೆಯಲ್ಲಿ ಒಂದಾದ ಮೇಲೊಂದರಂತೆ ಪ್ರಕಟವಾಗುತ್ತಿದ್ದವು. ಜನಜಾಗೃತಿಯ ಪ್ರವಾಹದಿಂದಾಗಿ ಕಂಗೆಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಇದರಿಂದ ಬಚಾವಾಗಲು ಏನಾದರೂ ಮಾಡಬೇಕೆಂದು ಚಡಪಡಿಸಿದರು.
ಅಂತೂ ತಮ್ಮ ಇಲಾಖೆಯೊಂದಿಗೆ ಷಾಮೀಲಾಗಿದ್ದ ಕೆಲವರನ್ನು ಪುಸಲಾಯಿಸಿ, ಪತ್ರಿಕಾ ಅಂಕಣಕಾರರ ವಿರುದ್ಧ ಮೂಗರ್ಜಿ ಬರೆಯುವ ಹುನ್ನಾರ ಮಾಡಿದರು. ಮೂಗರ್ಜಿಗೆ ಸಹಿಗಳು ಬೇಕಲ್ಲ? ಅದಕ್ಕೊಂದು ಕುತಂತ್ರ ಮಾಡಿದರು. ಮದುವೆ ಮನೆಯೊಂದರಲ್ಲಿ ಔತಣದೂಟ ಮಾಡಿ ಹರಟೆ ಹೊಡೆಯುತ್ತಿದ್ದ ಹಲವರೆದುರು ಆ ಮೂಗರ್ಜಿ ಇಟ್ಟು, ಸಹಿ ಮಾಡಿ ಎಂದು ಕೇಳಿಕೊಂಡರು. ಎಲ್ಲರೂ ಸಹಿ ಮಾಡಿದ್ದೇ ಮಾಡಿದ್ದು. ಯಾವುದಕ್ಕೆ ಸಹಿ ಹಾಕುತ್ತಿದ್ದೇವೆ ಎಂದು ಯಾರೊಬ್ಬರೂ ಓದಿಕೊಳ್ಳಲಿಲ್ಲ.
ಅದಾಗಿ ಕೆಲವೇ ದಿನಗಳಲ್ಲಿ ಹಾಗೆ ಸಹಿ ಮಾಡಿದ್ದ ಹಲವರಿಗೆ ಅದರ ಬಿಸಿ ತಟ್ಟಿತು - ಆ ಮೂಗರ್ಜಿಯಲ್ಲಿ ಅಪಮಾನಕರ ಹೇಳಿಕೆ ಮತ್ತು ಆಧಾರರಹಿತ ಆಪಾದನೆಗಳನ್ನು ಮಾಡಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ವಕೀಲರಿಂದ ನೋಟೀಸು ಬಂದಾಗ.
ಸಹಿ ಮಾಡಿದರೆ ಎಲ್ಲ ಮುಗಿಯಿತೇ? ........ ನಾವು ಸಹಿ ಮಾಡಿದೊಡನೆ ಎಲ್ಲ ಮುಗಿದು ಹೋಯಿತು ಅಂತಲ್ಲ. ಅಚಾತುರ್ಯದಿಂದ ಅಥವಾ ಬೆದರಿಕೆಗೆ ಹೆದರಿ ಸಹಿ ಮಾಡಿದ್ದರೆ ಹಾಗಂತ ಸಾಬೀತು ಮಾಡಬಹುದು. ಹೇಗಂತೀರಾ? ಅಚಾತುರ್ಯದಿಂದ ಬರೆದದ್ದು ತಪ್ಪಾಗಿದ್ದರೆ, ಅದು ಹೇಗಾಯಿತೆಂದು ಸಂಬಂಧಿಸಿದ ಎಲ್ಲರಿಗೂ ಪತ್ರ ಬರೆದು ತಿಳಿಸಬಹುದು. ಉದಾಹರಣೆಗೆ, ಒಂದು ವಸ್ತುವಿನ ಬೆಲೆ ರೂ.೧೦ ಎಂಬ ಬದಲಾಗಿ ರೂ.೧೦೦ ಎಂದು ಬರೆದಿದ್ದರೆ, ಅದನ್ನು ಹಾಗೆಯೇ ಬೇರೆ ಬಿಲ್ ಬರೆದು ತಿಳಿಸಬೇಕು.
ಬೆದರಿಕೆ ಅಥವಾ ಬಲಾತ್ಕಾರಕ್ಕೆ ಹೆದರಿ ಸಹಿ ಮಾಡಿದ್ದಾದರೆ, ಅನಂತರ ಬೇಗನೇ ಸಂಬಂಧಿಸಿದ ಎಲ್ಲರಿಗೂ ರಿಜಿಸ್ಟರ್ಡ್ ಪತ್ರ ಬರೆದು ತಿಳಿಸತಕ್ಕದ್ದು - ಅದು ನಿಮ್ಮ ಇಚ್ಚೆಗೆ ವಿರುದ್ಧವಾಗಿ ಮಾಡಿಸಿಕೊಂಡ ಸಹಿ ಎಂಬುದನ್ನು. ಉದಾ: ಬ್ಯಾಂಕಿನ ಚೆಕ್, ಕರಾರುಪತ್ರ, ತಪ್ಪೊಪ್ಪಿಗೆ ಪತ್ರ ಅಥವಾ ಮೃತ್ಯುಪತ್ರ (ವಿಲ್)ಕ್ಕೆ ಅಂಜಿಕೆಯಿಂದ ಸಹಿ ಮಾಡಿದ್ದಾಗ. ಅಗತ್ಯವಿದ್ದರೆ, ಈ ಬಗ್ಗೆ ಪೊಲೀಸ್ ಠಾಣೆಗೂ ದೂರು ನೀಡಬಹುದು.
ಒಂದು ಮಾತು ನೆನಪಿರಲಿ: ಸಹಿ ಮಾಡುವುದು ಸುಲಭ; ಅನಂತರ "ನನಗೆ ಸಹಿ ಮಾಡುವ ಉದ್ದೇಶ ಇರಲಿಲ್ಲ" ಎಂದು ಸಾಬೀತು ಪಡಿಸುವುದು ಬಹಳ ಕಷ್ಟ. ಆದ್ದರಿಂದ ಈ ಎಲ್ಲ ತೊಂದರೆಗಳಲ್ಲಿ ಸಿಲುಕಿ ಕೊಳ್ಳದಿರಲು ಮುಂಜಾಗರೂಕತೆಯೇ ಮದ್ದು.
೧) ಖಾಲಿ ಕಾಗದದ ಹಾಳೆಗೆ ಯಾವತ್ತೂ ಸಹಿ ಮಾಡಬಾರದು.
೨) ನಿಮ್ಮ ಸಹಿಯ ಜೊತೆಯಲ್ಲೇ ದಿನಾಂಕ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿರಿ.
೩) ಸಿಕ್ಕಸಿಕ್ಕ ಕಾಗದದ ಹಾಳೆಗಳಲ್ಲಿ, ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಸಹಿ ಮಾಡಬಾರದು.
೪) ಏನನ್ನೇ ಬರೆದು ಸಹಿ ಮಾಡುವ ಮುನ್ನ ಓದಿಕೊಳ್ಳಿರಿ. ಬರೆದದ್ದು ಸ್ಪಷ್ಟವಾಗಿಲ್ಲ ಎಂದಾದರೆ, ತಿದ್ದಿ ಬರೆಯಿರಿ.
೫) ಒಪ್ಪಂದ ಪತ್ರಕ್ಕೆ ಸಹಿ ಮಾಡುವ ಮುನ್ನ ಎರಡು-ಮೂರು ಸಲ ಓದಿರಿ. ನಿಮಗೆ ಅರ್ಥವಾಗದ್ದರ ಬಗ್ಗೆ ನಂಬಿಕಸ್ಥರ ಬಳಿ ಚರ್ಚಿಸಿರಿ. ಪರಿಣತ ವಕೀಲರಿಂದಲೂ ಕೇಳಿ ತಿಳಿಯಬಹುದು. ಒಬ್ಬರು ವಕೀಲರು ಹೇಳಿದ್ದು ಅರ್ಥವಾಗದಿದ್ದರೆ, ನಿಮಗೆ ಅರ್ಥವಾಗುವಂತೆ ವಿವರಿಸಬಲ್ಲ ವಕೀಲರನ್ನೇ ಸಂಪರ್ಕಿಸಿರಿ.
೬) ಒಪ್ಪಂದ ಪತ್ರಗಳ ಮೊದಲ ಮತ್ತು ಕೊನೆಯ ಪಾರಾಗಳನ್ನು ಮಾತ್ರ ಓದುವುದು ಅಪಾಯಕಾರಿ. ಅದನ್ನು ಸಮಗ್ರವಾಗಿ ಓದಿರಿ. ಅದಕ್ಕೆ ಲಗತ್ತಿಸಿದ ನಕ್ಷೆ, ಚಿತ್ರ, ಅನುಬಂಧ, ರಶೀದಿ, ದಾಖಲೆಗಳು ಎಲ್ಲವನ್ನೂ ಮತ್ತೆಮತ್ತೆ ಪರಿಶೀಲಿಸಿ, "ಸರಿಯಾಗಿದೆ" ಎಂದು ಖಚಿತಪಡಿಸಿ ಕೊಳ್ಳಿರಿ.
೭) ಸಾಮೂಹಿಕ ಅರ್ಜಿಗೆ ಸಹಿ ಹಾಕುವ ಮುನ್ನ ಎಚ್ಚರ. ಅದಕ್ಕೆ ಲಗತ್ತಿಸಿದ ಹಾಳೆಯ ಮೇಲ್ಭಾಗದಲ್ಲಿ ಪುಟಸಂಖ್ಯೆ, ವಿಷಯ ಮತ್ತು ದಿನಾಂಕ ಬರೆದಿಲ್ಲ ಎಂದಾದರೆ ನೀವೇ ಬರೆಯಿರಿ. ಏಕೆಂದರೆ, ನಿಮ್ಮ ಸಹಿಯಿರುವ ಹಾಳೆಯನ್ನು ದುರುದ್ದೇಶದಿಂದ ಬೇರೊಂದು ಅರ್ಜಿಗೆ ಲಗತ್ತಿಸಿದರೆ ನಿಮಗೆ ತೊಂದರೆ.
೮) ಅರ್ಜಿ, ವಕಾಲತ್ತು, ಕರಾರುಪತ್ರ, ವ್ಯಾಜ್ಯಪತ್ರ, ಸಾಲದ ದಾಖಲೆಪತ್ರ - ಇಂತಹ ದಾಖಲೆಗಳಿಗೆ ಸಹಿ ಮಾಡುವಾಗ ಯಾಥಾಪ್ರತಿ ತೆಗೆದಿರಿಸಿರಿ- ಅದರಲ್ಲೇನಿದೆ ಎಂಬುದರ ನೆನಪಿಗಾಗಿ.
ನಿಮ್ಮ ಸಹಿ ದೊಡ್ಡ ಸೊತ್ತು. ಆದ್ದರಿಂದ ಪೆನ್ನೆತ್ತಿಕೊಳ್ಳುವ ಮುನ್ನ ಚೆನ್ನಾಗಿ ಯೋಚಿಸಿರಿ. ನಿಮಗೆ ಯಾವುದೇ ತೊಂದರೆ ಇಲ್ಲ ಎಂಬ ವಿಶ್ವಾಸವಿದ್ದರೆ ಮಾತ್ರ ಸಹಿ ಮಾಡಿರಿ.
Comments
ಉ: ಸಹಿ ಮಾಡುವ ಮುನ್ನ.....
In reply to ಉ: ಸಹಿ ಮಾಡುವ ಮುನ್ನ..... by makara
ಉ: ಸಹಿ ಮಾಡುವ ಮುನ್ನ.....
ಉ: ಸಹಿ ಮಾಡುವ ಮುನ್ನ.....
In reply to ಉ: ಸಹಿ ಮಾಡುವ ಮುನ್ನ..... by partha1059
ಉ: ಸಹಿ ಮಾಡುವ ಮುನ್ನ.....
ಉ: ಸಹಿ ಮಾಡುವ ಮುನ್ನ.....
In reply to ಉ: ಸಹಿ ಮಾಡುವ ಮುನ್ನ..... by veena wadki
ಉ: ಸಹಿ ಮಾಡುವ ಮುನ್ನ.....
In reply to ಉ: ಸಹಿ ಮಾಡುವ ಮುನ್ನ..... by veena wadki
ಉ: ಸಹಿ ಮಾಡುವ ಮುನ್ನ.....
In reply to ಉ: ಸಹಿ ಮಾಡುವ ಮುನ್ನ..... by addoor
ಉ: ಸಹಿ ಮಾಡುವ ಮುನ್ನ.....