ಮಲೆನಾಡಿನ ಶ್ರೀಮಂತ ಹಣ್ಣುಗಳು

ಮಲೆನಾಡಿನ ಶ್ರೀಮಂತ ಹಣ್ಣುಗಳು

ಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಈಗಿನ ಬೆಲೆ ಏರಿಕೆಯಲ್ಲಿ ಹಣ್ಣು ಕೊಳ್ಳುವುದು ಮಾತ್ರ ಸಾಧ್ಯವಾಗುತ್ತಿಲ್ಲ. ಬಾಲ್ಯದಲ್ಲಿ ಯಥೇಚ್ಛವಾಗಿ ತಿನ್ನುತ್ತಿದ್ದ ಕೆಲವು ಹಣ್ಣುಗಳು ಪುಕ್ಕಟೆ ಲಭ್ಯ. ಹೆಚ್ಚು ವಿಟಮಿನ್ ಆಗರ. ಅವುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ೧) ಉಲಿಗೆ ಹಣ್ಣು= ತೊಂಡೆಕಾಯಿಯ ಆಕಾರ. ಹಣ್ಣಾದಾಗ ಹಣ್ಣುತೊಂಡೆಕಾಯಿಯ ಆಕಾರ. ಸ್ವಲ್ಪ ಬೂದಿಮಿಶ್ರಿತ ಹೊರಲೇಪ. ಕಾಯಿ ತಿನ್ನಲು ಬರುವುದಿಲ್ಲ. ಹಣ್ಣು ಹುಳಿಮಿಶ್ರಿತ ಸಿಹಿ. ಸಿಹಿ ಅಂಶ ಕಡಿಮೆ. ಹುಳಿಯ ಅಂಶವೇ ಅಧಿಕ. ಮುಳ್ಳು ಇದ್ದರೂ ಗಿಡದಿಂದ ಕೀಳುವುದು ಸುಲಭ. ೨) ಕಲ್ಲುಸಂಪಿಗೆ ಹಣ್ಣು= ಇದು ಚೆರ್ರಿ ಹಣ್ಣಿನ ಆಕಾರದಲ್ಲಿರುತ್ತದೆ.ಕೆಂಪು ಬಣ್ಣ. ಬೀಜ ಇರುತ್ತದೆ. ಸಿಹಿಮಿಶ್ರಿತ ಹುಳಿ. ಮಾಗಿದ ಹಣ್ಣು ತುಂಬಾ ಸಿಹಿ. ಮರದ ತುಂಬಾ ದೊಡ್ಡ ದೊಡ್ಡ ಮುಳ್ಳು. ಪಕ್ಕದಲ್ಲೊಂದು ಸಣ್ಣ ಮರವಿದ್ದರೆ ಅದನ್ನು ಹತ್ತಿ ಈ ಹಣ್ಣನ್ನು ಕೊಯ್ಯುವುದು ಸೂಕ್ತ. ಮರ ಹೆಚ್ಚು ಎತ್ತರ ಹೋಗುವುದಿಲ್ಲವಾದ್ದರಿಂದ ದೋಟಿಯಿಂದ ಕೊಯ್ಯಬಹುದು. ೩) ಕಬಳಿಹಣ್ಣು= ಉಪ್ಪಿನಕಾಯಿ ಹಾಕುವ ಕಬಳೆ ಅಲ್ಲ. ಇದು ಗಟ್ಟಿಯಾದ ಮುಳ್ಳುಸಹಿತ ಬಳ್ಳಿಯಂತೆ ಇರುವ ಗಿಡದಲ್ಲಿ ಬಿಡುತ್ತದೆ. ಕಾಫಿ ಬಣ್ಣ. ಕಾಳುಮೆಣಸಿನಂತೆ ಅಥವಾ ಅದಕ್ಕಿಂತ ಸ್ವಲ್ಪ ದೊಡ್ಡದಾಗಿರುತ್ತದೆ. ಕಾಳುಮೆಣಸಿನಲ್ಲಿ ನೆರಿಗೆಗಳಿದ್ದರೆ ಇದರಲ್ಲಿ ಇರುವುದಿಲ್ಲ. ಇದರ ಸಿಪ್ಪೆಯನ್ನು ಮಾತ್ರ ತಿನ್ನಬಹುದು. ಬೀಜ ದೊಡ್ಡದಾಗಿರುತ್ತದೆ. ಹಣ್ಣು ಸಿಹಿಯಾಗಿರುತ್ತದೆ. ೪) ಮುಳ್ಳು ಹಣ್ಣು (ಬ್ರಹ್ಮರಲೆ ಹಣ್ಣು)= ಗಿಡದ ತುಂಬಾ ಮುಳ್ಳು. ಕಡಲೆಕಾಳಿನ ಗಾತ್ರದಲ್ಲಿ ಗೊಂಚಲು ಗೊಂಚಲಾಗಿ ಬಿಡುತ್ತದೆ. ಹಳದಿ ಬಣ್ಣ. ತುಂಬಾ ಸಿಹಿ ಮತ್ತು ಪರಿಮಳ. ತಿನ್ನುವಾಗ ಹಿಟ್ಟುಹಿಟ್ಟಾಗಿ ಹಲ್ಲಿಗೆ ಸಿಗುತ್ತದೆ. ೫) ಕಾಕಿ ಹಣ್ಣು= ಇದು ತೋಟದಲ್ಲಿ ಅಥವಾ ಮನೆಯ ಹಿತ್ತಲಿನಲ್ಲಿ ಬೆಳೆಯುವ ಗಿಡ. ಇದರ ಸೊಪ್ಪು ತಂಬುಳಿ ಮಾಡಲು ಬರುತ್ತದೆ. ತಂಬುಳಿ ಗಾಢ ಹಸಿರು ಬಣ್ಣವಾಗುತ್ತದೆ. ಹಣ್ಣು ದೊಡ್ಡಕಾಳುಮೆಣಸಿನ ಗಾತ್ರದ್ದಾಗಿದ್ದು ತುಂಬಾ ಮೃದು. ಕಪ್ಪು ಬಣ್ಣ. ಇಡಿಯಾಗಿ ತಿನ್ನಬಹುದು. ಇದನ್ನು ನಗರಗಳ ಮನೆಯ ಕಾಪೌಂಡ್ ಒಳಗೆ ಕೂಡ ಬೆಳೆಯಬಹುದು. ೬) ನೇರಲೆ ಹಣ್ಣು= ನೇರಳೆ ಹಣ್ಣು. ಇದಕ್ಕೆ ಹೆಚ್ಚಿನ ವಿವರಣೆ ಅಗತ್ಯವಿಲ್ಲ. ನಗರಗಳಲ್ಲಿ ಮಾರುವುದಕ್ಕೆ ಸಿಗುವ ಹಣ್ಣು ತುಂಬಾ ದೊಡ್ಡದಿರುತ್ತದೆ. ಇದಕ್ಕಿಂತಲೂ ಚಿಕ್ಕ ಗಾತ್ರದ ಹಣ್ಣು ಕಾಡಿನಲ್ಲಿ ದೊರೆಯುತ್ತದೆ. ತಿನ್ನಲು ತುಂಬಾ ರುಚಿ. (ನೇರಲೆ ವನದಲ್ಲಿ ಮಂಗಗಳಂತೆ ಮರ ಏರಿ ಎಂಟು ಹತ್ತು ಸ್ನೇಹಿತರು ಒಟ್ಟಾಗಿ ತಿಂದು ಬೀಜವನ್ನು ಕೆಳಗೆ ಉಗುಳಿ ಮನೆಗೆ ಬಂದು ನಾಲಿಗೆಯಲ್ಲಾದ ಬಣ್ಣವನ್ನು ತೋರಿಸುತ್ತಿದ್ದೆವು)

Comments