ನಾನು‍‍, ಗೂಗಲ್ ಮತ್ತು ದೋಸೆ...!!

ನಾನು‍‍, ಗೂಗಲ್ ಮತ್ತು ದೋಸೆ...!!

ಕವನ

 ನಾನೇಕೆ ಹೀಗಾದೇ?

ನಾಲಿಗೆಯಿಂದಾಚೆ ಹೊರಬರಲು ತವಕಿಸುತ್ತಿರುವ

ಮಾತುಗಳನ್ನು, ಗಂಟಲಿನಲ್ಲಿಯೇ ಅದುಮಿ

ಅವುಗಳ ಜನ್ಮಸಿದ್ದ ಹಕ್ಕನ್ನು ಕಸಿದುಕೊಂಡು

ಮಮತೆಯ ಸುಳಿಯಾದ ಕೈಕೆಯಿಂತಾದೆ,

ಸಾರಿನ ಒಗ್ಗರಣೆಗೆ ಹಾಕಿದ ಸಾಸುವೆಗಳು

ಸಿಡಿಯುವಂತೆ ಸಿಡಿಯಲು ಸಿದ್ದವಾದ ಮಾತುಗಳನ್ನು,

ಹುಣಸೆಯ ರಸವನ್ನು ಹಿಂಡಿದ ಕೂಡಲೇ ಸುಮ್ಮನೇ

ಒಳಗೆಯೇ ಕೊತಕೊತನೆ ಕುದಿಯುವಂತೆ ಮಾಡಿದ್ದು,

ಮಕ್ಕಳ ಮೇಲಿನ ಮಮತೆಯೋ?

ಗಂಡನ ಮೇಲಿನ ಮೋಹವೋ?

ಅಥವಾ ಅಮ್ಮನಿಂದ ಬಂದ ಅಲ್ಪ ಸ್ವಲ್ಪ ಸಂಸ್ಕಾರವೋ?

ಇರಲಿ ಬಿಡಿ,

ಇಂಟರನೆಟ್ಟಿನ ಆ ಗೂಗಲ್ ಸರ್ಚ ಇಂಜಿನಿಗಿಂತ

ನಾನೇನು ಕಡಿಮೆಯೇ? ಅದು ಬರಿ ತನ್ನಲ್ಲಿ

ಅಡಗಿಸಿಟ್ಟಿರುವ ಮಾಹಿತಿಗಳನ್ನು ಮಾತ್ರ ಹೊರಗೆಡವುತ್ತದೆ,

ಆದರೆ ನಾನು ಅಡುಗೆ ಮನೆಯಲ್ಲಿರುವ ಅಲ್ಪಸ್ವಲ್ಪ

ದಿನಸಿಯಲ್ಲಿಯೇ ತಿಂಗಳ ಕೊನೆಯಲ್ಲಿ ಮನೆಗೆ ಬಂದ

ಅತಿಥಿಗಳ ಹೊಟ್ಟೆ ಮತ್ತು ಮಸನ್ನು, ಎರಡನ್ನೂ

ತುಂಬಿಸುತ್ತೇನೆ...!!

ಹೊತ್ತಾಯಿತು ನಾನಿನ್ನು  ಬರುತ್ತೇನೆ,

ಮಗಳಿಗೆ ಇಷ್ಟವೆಂದು ದೋಸೆ ಮಾಡಲು ಅಕ್ಕಿ

ನೆನೆಹಾಕಿದ್ದೇನೆ ರುಬ್ಬಬೇಕು, ಹಿಟ್ಟು ನೆನೆದು

ಚೆನ್ನಾಗಿ ಹುಳಿ ಬಂದರೇನೆ ದೋಸೆಗಳು

ಗರಿಗರಿಯಾಗಿತ್ತವೆ......!!

ದಿನಾ ಸಾಯುವವರಿಗೆ ಅಳುವವರು ಯಾರು....?

 

Comments