ಫಿಲ್ಟರ್ ಕಾಫೀ!

ಫಿಲ್ಟರ್ ಕಾಫೀ!

ಸುರಿಯುತ್ತಿರುವ ಮಳೆಯಲ್ಲಿ (ಬೆಂಗಳೂರಲ್ಲಿ ಮಳೆ ಬರುತ್ತಿಲ್ಲ ಬಿಡಿ ಆದರೂ ಇರುವ ಸ್ವಲ್ಪ ಚಳಿಗೆ) ಬೆಳಗ್ಗೆ ಎದ್ದ ಕೂಡಲೇ ಎಲ್ಲರಿಗೂ ಒಂದು ಲೋಟ ಕಾಫೀ ಬೇಕೆನ್ನಿಸುವುದು ಸಹಜ. ಅಮ್ಮ ಇಲ್ಲೇ ಇದ್ದರೆ ನಿಮ್ಮ ಪುಣ್ಯ, ಕಾಫೀ ಕುಡಿಯುವ ಭಾಗ್ಯ ನಿಮಗೆ, ಅಮ್ಮ ಕಾಫೀ ಅಂದರೆ ಸಾಕು ಸ್ವಲ್ಪ ಹೊತ್ತಿಗೆ ನಿಮ್ಮೆದುರಿಗೆ ಬಿಸಿ ಬಿಸಿಯಾದ ಕಾಫೀ ಬಂದುಬಿಡುತ್ತದೆ. ಆದರೆ ಅಮ್ಮ ಊರಿನಲ್ಲಿದ್ದರೆ ಕಾಫೀ ಮಾಡುವುದು ನಮ್ಮ ಕರ್ಮ. ಹೆಂಡತಿಗೆ ಕಾಫೀ ಮಾಡಲು ಬಂದರೆ ಸ್ವಲ್ಪ ಪುಣ್ಯ ಮಾಡಿರಬಹುದು ನೀವು, ಅಕಸ್ಮಾತ್ ಬಾರದಿದ್ದರೆ ನೀವೇ ಅಡಿಗೆ ಮನೆಗೆ ಪ್ರವೇಶ ಮಾಡಬೇಕಾಗುವುದು.

ಕಾಫೀ ಫಿಲ್ಟರ್ ಇಲ್ಲದಿದ್ದರೆ ಮೊದಲು ಒಂದು ಫಿಲ್ಟರ್ ಖರೀದಿಸಬೇಕು! ಒಂದು ಕಪ್ಪಿನಷ್ಟು ನೀರನ್ನು ಕುದಿಸಿ.
೫ರಿಂದ ೬ ಚಮಚದಷ್ಟು ಕಾಫೀ ಪುಡಿಯನ್ನು ಮೇಲಿನ ಬಾಕ್ಸಿಗೆ ಹಾಕಿ ಆಮೇಲೆ ಜಾಲರಿಯನ್ನು ಅದರ ಮೇಲಿಡಿ ನಂತರ ಕುದಿಯುತ್ತಿರುವ ನೀರನ್ನು ಜಾಲರಿಯ ಮೇಲೆ ಸುರಿದು ಮುಚ್ಚಳವನ್ನು ಹಾಕಿ. ಕೆಳಗಿನ ಬಾಕ್ಸಿಗೆ ನಿಧಾನಕ್ಕೆ ಡಿಕಾಕ್ಷನ್ ಇಳಿಯುತ್ತದೆ. ೨-೩ ಘಂಟೆಯೊಳಗೆ ಡಿಕಾಕ್ಷನ್ ರೆಡಿಯಾಗಿರುತ್ತದೆ.

ಡಿಕಾಕ್ಷನ್ ಆದ ಬಳಿಕ ಒಂದು ಲೋಟ ಹಾಲಿಗೆ ಮುಕ್ಕಾಲು ಚಮಚದಷ್ಟು ಸಕ್ಕರೆಯನ್ನು ಹಾಕಿ ಸಕ್ಕರೆ ಕರಗಿ ಹಾಲು ಬಿಸಿಯಾದ ಬಳಿಕ ಸ್ವಲ್ಪ ಡಿಕಾಕ್ಷನ್ ಅದಕ್ಕೆ ಹಾಕಿ (ಕಾಫೀ ಕಲರ್ ಬರುವಷ್ಟು) ಆಮೇಲೆ ಅದನ್ನು ೪-೫ ಬಾರಿ ನೊರೆಬರುವ ತನಕ ಎತ್ತಿಹಾಕಿ (ಕೆಳಕ್ಕಲ್ಲ!!) ಆಮೇಲೆ ಲೋಟಕ್ಕೆ ಹಾಕಿ ಕಿಟಕಿಯ ಬಳಿ ಬಂದು ಕುಳಿತು ತಣ್ಣನೆಯ ಹವಾಮಾನವನ್ನು ಅನುಭವಿಸುತ್ತಾ ಗೋಳಿಬಜೆಯನ್ನು (ಇದಕ್ಕೆ ಗಣೇಶಣ್ಣನ ಸಹಾಯ ಪಡೆಯಬಹುದು ಸಿಗದಿದ್ದ ಪಕ್ಷದಲ್ಲಿ ಬಾರಿಮುತ್ತುವನ್ನು ಸಂಪರ್ಕಿಸಬಹುದು!)  ಮೆಲ್ಲುತ್ತಾ ಆಮೇಲೆ ಬಿಸಿಯಾದ ಫಿಲ್ಟರ್ ಕಾಫಿಯನ್ನು ಸವಿಯಬಹುದು.

ಬೆಳಗ್ಗೆ ಡಿಕಾಕ್ಷನ್ ರೆಡಿ ಇರಬೇಕೆಂದರೆ ಹಿಂದಿನ ರಾತ್ರಿಯೇ ಮೇಲೆ ತಿಳಿಸಿದಂತೆ ಮಾಡಿ. ಬೆಳಗಿನ ಹೊತ್ತಿಗೆ ಕಾಫೀ ಮಾಡಲು ಸುಲಭವಾಗುತ್ತದೆ. ಅಕಸ್ಮಾತ್ ಫಿಲ್ಟರ್ ಆಗದಿದ್ದ ಪಕ್ಷದಲ್ಲಿ, ಸ್ವಲ್ಪ ನೀರನ್ನು (ಒಂದು ಚಮಚದಷ್ಟು) ಕುದಿಸಿ ಮೇಲಿನ ಬಾಕ್ಸಿನೊಳಗೆ ಹಾಕಿ. ಆಮೇಲೆ ಸರಾಗವಾಗಿ ಇಳಿಯುತ್ತದೆ ಅದೂ ಆಗದಿದ್ದ ಪಕ್ಷದಲ್ಲಿ ಮೇಲಿನ ಬಾಕ್ಸನ್ನು ಸ್ವಲ್ಪ ಓರೆಯಾಗಿ ಇಡಿ ಆಗ ಸುಲಭವಾಗಿ ಇಳಿಯುತ್ತದೆ, ಒಂದೊಮ್ಮೆ ಇವ್ಯಾವ ಕಸರತ್ತುಗಳಿಂದ ಡಿಕಾಕ್ಷನ್ ಆಗದಿದ್ದರೆ ಪಕ್ಕದಲ್ಲಿರುವ ದರ್ಶಿನಿಗೆ ಹೋಗಿ ಬೈ-ಟು ಕಾಫೀ ಕುಡಿದು ಬನ್ನಿ!

Rating
No votes yet

Comments