ಬರೆಯುವೆ ನಿನಗಾಗಿ...(ಕಥೆ)
ಹಾಯ್ ಅಮೃತ,
ಹೇಗಿದ್ದೀಯ? ಅಮೃತ ಇವತ್ತು ದಿನಾಂಕ ಎಷ್ಟು ಗೊತ್ತ? ಗೊತ್ತಿರದೇ ಏನು ಈ ದಿನಾಂಕ ಮರೆಯಕ್ಕೆ ಆಗತ್ತಾ ಅಂತ ಕೇಳ್ತೀಯ? ಹೌದು ಅಮ್ಮು ಈ ದಿನ ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ದಿನ. ಯಾಕೆಂದರೆ ಇದೆ ದಿನ ತಾನೇ ನಾವಿಬ್ಬರೂ ಭೇಟಿ ಆಗಿದ್ದು.
ಅಮ್ಮು ನಿನಗೆ ನೆನಪಿದೆಯ? ಎರಡು ವರ್ಷದ ಹಿಂದೆ ಇದೆ ದಿನಾಂಕ...ಅಂದು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಚೆನ್ನೈಗೆ ಹೋಗುವ ರೈಲಿಗಾಗಿ ಕಾದು ಕುಳಿತಿದ್ದಾಗ ಇದ್ದಕ್ಕಿದ್ದಂತೆ ರೈಲ್ವೆ ನಿಲ್ದಾಣದಲ್ಲಿ ಗಲಾಟೆ ಗದ್ದಲ ಶುರುವಾಯಿತು. ಏನೆಂದು ನೋಡಿದರೆ ಯಾವುದೋ ಒಂದು ಗುಂಪು "ನ್ಯಾಯ ಬೇಕು, ನ್ಯಾಯ ಬೇಕು" ಎಂದು ಫಲಕಗಳನ್ನು ಹಿಡಿದು ಕೂಗುತ್ತ ಬರುತ್ತಿದ್ದರು.
ನಾನು ಆ ಕೂಗು ಬಂದ ಕಡೆ ನೋಡಿದರೆ ಅದೊಂದು ಹೆಣ್ಣು ಮಕ್ಕಳ ತಂಡ ಎಲ್ಲರೂ ಬಿಳೀ ಚೂಡಿದಾರ್ ಗಳನ್ನು ತೊಟ್ಟು ಕೈಯಲ್ಲಿ ಫಲಕ ಮತ್ತು ಕರಪತ್ರಗಳನ್ನು ಹಿಡಿದು ಕೂಗುತ್ತಾ ಬರುತ್ತಿದ್ದರು. ಎಲ್ಲ ಹುಡುಗಿಯರು ಅಂದಾಜು ಇಪ್ಪತ್ತು - ಇಪ್ಪತ್ತೆರಡರ ಆಸುಪಾಸಿನ ಯುವತಿಯರು. ನನಗೆ ಬಹಳ ಆಶ್ಚರ್ಯ ಆಯಿತು. ಈ ವಯಸಿನ ಹೆಣ್ಣು ಮಕ್ಕಳು ಸದಾ ಕಾಲ ಸ್ನೇಹಿತರು, ಮೊಬೈಲ್, ಕಾಲೇಜ್, ಪಾರ್ಟಿ, ಅಂತ ಇರುವವರು ಇದೇನಿದು ಇದ್ದಕ್ಕಿದ್ದಂತೆ ಹೀಗೆ ಪ್ರತಿಭಟನೆಗೆ ಮುಂದಾಗಿದ್ದಾರಲ್ಲ ಎಂದು ಆಲೋಚಿಸುತ್ತಿದ್ದೆ.
ಅಷ್ಟರಲ್ಲಿ ನನ್ನ ಮುಖದ ಮೇಲೆ ಒಂದು ಬಿಳಿ ದುಪ್ಪಟ್ಟ ಬಿತ್ತು ನಾನು ನನ್ನ ಆಲೋಚನೆಗಳಿಗೆ ಬ್ರೇಕ್ ಹಾಕಿ ಆ ದುಪ್ಪಟ್ಟವನ್ನು ಪಕ್ಕಕ್ಕೆ ಸರಿಸಿ ನೋಡಿದರೆ ನನ್ನ ಪಕ್ಕದಲ್ಲಿ ನೀನಿದ್ದೆ. ಅಮ್ಮು ನಿನಗೆ ನಿಜ ಹೇಳಬೇಕೆಂದರೆ ನೀನೇನೂ ಮೊದಲ ನೋಟದಲ್ಲೇ ಪ್ರೇಮ ಹುಟ್ಟಿಸುವಂಥಹ ಚೆಲುವೆಯೇನೂ ಆಗಿರಲಿಲ್ಲ. ಆದರೆ ಎರಡನೇ ನೋಟಕ್ಕೆ ಹುಟ್ಟುವಷ್ಟು ಆಗಿದ್ದೆ. ಅದಕ್ಕೆ ನನಗೆ ನಿನ್ನನ್ನು ಕಂಡ ಮೊದಲನೇ ನೋಟದಲ್ಲಿ ಪ್ರೀತಿ ಆಗಲಿಲ್ಲ.
ನಾನು ನಿನ್ನನ್ನೇ ನೋಡುತ್ತಾ ನಿಂತಿದ್ದಾಗ ನೀನು ನನ್ನ ಕೈಯಲ್ಲಿ ಕರಪತ್ರವೊಂದನ್ನು ಇಟ್ಟು ನಿನ್ನ ತಂಡದೊಂದಿಗೆ ಮುಂದೆ ಸಾಗಿದೆ. ನಾನು ಆ ಕರಪತ್ರವನ್ನು ಓದಿದಾಗ ರೈಲುಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧವಾಗಿ ನಿಮ್ಮ ಹೋರಾಟ ಎಂದು ಗೊತ್ತಾಯಿತು. ಅದಕ್ಕೋಸ್ಕರ ರೈಲುಗಳಲ್ಲಿ ಸಂಚಾರ ಮಾಡಿ ಜನರಿಗೆ ನಿಮ್ಮ ಹೋರಾಟದ ಅರಿವು ಮೂಡಿಸಲು ಹೊರಟಿರುವುದಾಗಿ ತಿಳಿಯಿತು. ಆದರೆ ನಿಮ್ಮ ವಯಸಿಗೆ ಈ ಹೋರಾಟ ಸರಿ ಹೊಂದುವುದಿಲ್ಲ ಎಂದು ಆ ಕ್ಷಣಕ್ಕೆ ಎನಿಸಿತು.
ಅಷ್ಟರಲ್ಲಿ ರೈಲು ಸದ್ದು ಮಾಡಿಕೊಂಡು ಬಂದು ನಿಂತಿತು. ನಾನು ಮೊದಲೇ ನಿಗದಿಪಡಿಸಿದ್ದ ನನ್ನ ಸೀಟಿಗೆ ಹೋಗಿ ಲಗೇಜ್ ಇಟ್ಟು ಕುಳಿತೆ. ನನ್ನ ಅಕ್ಕ ಪಕ್ಕ ಯಾರೂ ಇರಲಿಲ್ಲ. ರೈಲು ಹೊರಡಕ್ಕೆ ಇನ್ನೂ ಹತ್ತು ನಿಮಿಷ ಇತ್ತು. ನಾನು ಮತ್ತೆ ಕೆಳಗಿಳಿದು ನೀರಿನ ಬಾಟಲ್ ತೆಗೆದುಕೊಂಡು ಒಳಗೆ ಹೋಗುವಾಗ ಮತ್ತೆ ನಿಮ್ಮ ತಂಡ ನನ್ನ ಬೋಗಿಯ ಕಡೆ ಬರುವುದು ಕಂಡು ಓಹೋ ಬಹುಶಃ ನೀವೂ ನನ್ನ ಬೋಗಿಯಲ್ಲೇ ಸಂಚರಿಸುತ್ತಿರುವುದು ಎಂದುಕೊಂಡು ನೋಡೋಣ ಎಂದು ಅಲ್ಲೇ ನಿಂತೇ. ನನ್ನ ಊಹೆಯಂತೆ ನೀನು ಮತ್ತೆ ನಿನ್ನ ತಂಡದ ಐದು ಮಂದಿ ಒಳಗೆ ಹೋಗಿ ನನ್ನ ಸೀಟಿನ ಅಕ್ಕ ಪಕ್ಕ ಮೇಲೆ ಕೆಳಗೆ ಆಕ್ರಮಿಸಿಕೊಂಡಿರಿ.
ಆ ಜಾಗದಲ್ಲಿ ನಾನೊಬ್ಬನೇ ಹುಡುಗ ನೀವೆಲ್ಲರೂ ಹುಡುಗಿಯರು ಅದೂ ಹೋರಾಟಗಾರರು ಎಂದು ನೆನೆಸಿಕೊಂಡು ಭಯ ಆಯ್ತು :)
ಅಷ್ಟರಲ್ಲಿ ರೈಲು ಹೊರಡಲು ಸಿದ್ಧವಾಯ್ತು. ನಾನು ಒಳಗೆ ಬಂದು ನನ್ನ ಅಪ್ಪರ್ ಬರ್ತ್ ಹತ್ತಲು ಹೋದಾಗ ನೀವೆಲ್ಲರೂ ನನ್ನ ನೋಡಿದ ನೋಟ ಅದೆಷ್ಟು ಭಯಂಕರವಾಗಿತ್ತೆಂದರೆ ಹುಲಿಗಳ ಮಧ್ಯೆ ಜಿಂಕೆ ಮರಿಯೊಂದು ಸಿಕ್ಕಂತಾಗಿತ್ತು. ಅಷ್ಟರಲ್ಲಿ ನನ್ನ ಕೈಲಿದ್ದ ಕರಪತ್ರ ನೋಡಿ ನೀನೆ ನನ್ನನ್ನು ಮಾತಾಡಿಸಿದೆ ಅಲ್ಲ ಅಮ್ಮು. ಅಮ್ಮು ನಾನು ನಿನಗೆ ಮೊದಲೇ ಹೇಳಿರಲಿಲ್ಲವ ನಿನ್ನದು ಎರಡನೇ ನೋಟದಲ್ಲಿ ಪ್ರೀತಿ ಹುಟ್ಟಿಸುವಂಥಹ ಚೆಲುವೆಂದು. ಹಾಗೆ ಆಗಿ ಹೋಯ್ತು ನನಗೆ ಲವ್ ಅಟ್ ಸೆಕಂಡ್ ಸೈಟ್ ಆಗಿ ಹೋಗಿತ್ತು.
ನೀನೆ ಕೇಳಿದೆ ನನ್ನನ್ನು, ಕರಪತ್ರ ಓದಿದಿರಾ? ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು? ಆಗ ನನಗೆ ಸ್ವಲ್ಪ ಸಮಾಧಾನವಾಯಿತು ನಿಮ್ಮವರೇ ನನಗೆ ಸ್ವಲ್ಪ ಜಾಗ ಕೊಟ್ಟರು ಕುಳಿತುಕೊಳ್ಳಲು. ನನಗೂ ಅಷ್ಟು ಬೇಗ ಮಲಗಬೇಕು ಎಂದಿರಲಿಲ್ಲ. ಅದೂ ಅಲ್ಲದೆ ಅಪ್ಪರ್ ಬರ್ತ್, ತಲೆ ಬಗ್ಗಿಸಿಕೊಂಡು ನನ್ನ ಕೈಲಿ ಆಗುತ್ತಿರಲಿಲ್ಲ. ಅವರು ಜಾಗ ಕೊಟ್ಟ ತಕ್ಷಣ ಹಿಂದೆ ಮುಂದೆ ಯೋಚಿಸದೆ ಕುಳಿತು ಬಿಟ್ಟೆ.
ಮತ್ತೊಮ್ಮೆ ಕರಪತ್ರವನ್ನು ನೋಡಿ ನಿಮ್ಮ ತಂಡವನ್ನು ಒಮ್ಮೆ ನೋಡಿ ಮತ್ತೆ ನಿನ್ನ ಕಡೆ ನೋಡಿ ಹೇಳಿದೆ. ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರ ಇದನ್ನು ಹೀಗೆ ಮುಂದುವರೆಸಿ. ಎಲ್ಲರಲ್ಲೂ ಜಾಗೃತಿ ಮೂಡಿಸಿ. ನಿಮಗೆ ಯಾವ ರೀತಿಯಲ್ಲಾದರೂ ನನ್ನಿಂದ ಸಹಾಯ ಬೇಕಿದ್ದರೆ ಕೇಳಿ ನಾನೂ ಬರುತ್ತೇನೆ ಎಂದು ಹೇಳಿದೆ. ಅದಕ್ಕೆ ನಿಮ್ಮವರೆಲ್ಲರೂ ಒಂದು ಸ್ಮೈಲ್ ಕೊಟ್ಟು ಎಲ್ಲರೂ ತಮ್ಮ ತಮ್ಮ ಪರಿಚಯ ಮಾಡಿಕೊಂಡು ಒಬ್ಬೊಬ್ಬರೂ ನಿಮ್ಮ ಹೋರಾಟದ ಬಗ್ಗೆ ಮಾತಾಡಲು ಶುರು ಮಾಡಿದರು. ಆಗಲೇ ನಿನ್ನ ಹೆಸರು ಅಮೃತ ಎಂದೂ, ನೀವೆಲ್ಲರೂ ಒಂದೇ ಕಾಲೇಜಿನಲ್ಲಿ ಓದುತ್ತಿರುವುದಾಗಿ, ಪ್ರತಿ ವಾರಾಂತ್ಯದಲ್ಲಿ ಒಂದೊಂದು ಊರಿಗೆ ರೈಲಿನಲ್ಲಿ ಹೋಗಿ ಈ ರೀತಿಯ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಇದು ಕಡೆಯ ವಾರ ಎಂತಲೂ ಗೊತ್ತಾಯಿತು.
ಸುಮಾರು ಎರಡು ಗಂಟೆಗಳ ಕಾಲ ಮಾತಾಡಿ ಇನ್ನೇನು ಮಲಗಲು ಸಿದ್ಧವಾಗಲು ಮೇಲೆ ಹೋದೆ. ನನ್ನ ಪಕ್ಕದ ಬರ್ತ್ಗೆ ನೀನು ಬಂದಿದ್ದು ಮತ್ತಷ್ಟು ಸಂತೋಷವಾಗಿತ್ತು. ಅದೇನೋ ಗೊತ್ತಿಲ್ಲ ಅಮ್ಮು ಅಲ್ಲಿ ನಮ್ಮಿಬ್ಬರನ್ನು ಬಿಟ್ಟು ಇನ್ನೆಲ್ಲರಿಗೂ ನಿದ್ದೆ ಹತ್ತಿತ್ತು. ನಾನು ಒಮ್ಮೆ ನಿನ್ನ ಕಡೆ ನೋಡಿ ನಕ್ಕಾಗ ನೀನು ಸಹ ನಕ್ಕೆ. ಆ ಕತ್ತಲಲ್ಲಿ ನೀನು ಕೈಯಲ್ಲಿ ಹಿಡಿದದ ಮೊಬೈಲ್ ಬೆಳಕು ನಿನ್ನ ಮುಖದ ಮೇಲೆ ಬಿದ್ದು ನಿನ್ನ ನಗು ತುಂಬಾ ಮುದ್ದಾಗಿ ಕಂಡಿತು. ಅಷ್ಟು ದಿವಸ ಬರೀ ಹುಣ್ಣಿಮೆಯ ಬೆಳಕಿನಲ್ಲಿ ಮಾತ್ರ ಹುಡುಗಿಯರು ಚೆನ್ನಾಗಿ ಕಾಣಿಸುತ್ತಾರೆ ಎಂಬ ಭ್ರಮೆಯಲ್ಲಿದ್ದೆ ಆದರೆ ಮೊಟ್ಟ ಮೊದಲ ಬಾರಿಗೆ ಮೊಬೈಲ್ ಬೆಳಕಿನಲ್ಲೂ ಚೆನ್ನಾಗಿ ಕಾಣಿಸುತ್ತಾರೆ ಎಂದು ಗೊತ್ತಾಯಿತು.
ಅಮ್ಮು ಸಮಾನ ವಯಸ್ಕರು ಬಹು ಬೇಗ ಸ್ನೇಹಿತರಾಗಿಬಿಡುತ್ತಾರೆ ಎಂದು ಮತ್ತೊಮ್ಮೆ ಸಾಬೀತಾಗಿತ್ತು. ನಾವಿಬ್ಬರೂ ಕೆಲವೇ ಗಂಟೆಗಳಲ್ಲಿ ತುಂಬಾ ಹತ್ತಿರ ಎನಿಸುವಷ್ಟು ಗೆಳೆಯರಾಗಿ ಬಿಟ್ಟಿದ್ದೆವು. ಮೊಬೈಲ್ ನಂಬರ್ ಗಳು, ಇಮೇಲ್ ಐಡಿಗಳು, ಫೇಸ್ ಬುಕ್ ಅಕೌಂಟ್ ಗಳು, ಮನೆಯ ಅಡ್ರೆಸ್ಸ್ ಗಳು ವಿನಿಮಯವಾಗಿದ್ದವು.
ಇಷ್ಟೆಲ್ಲಾ ಮಾತುಕತೆಯ ನಡುವೆ ನನಗೆ ನಿನ್ನ ಹೆಸರನ್ನು ಪದೇ ಪದೇ ಅಮೃತ ಎಂದು ಕರೆಯುವುದು ಕಷ್ಟವಾಗುತ್ತಿದ್ದದ್ದನ್ನು ಗಮನಿಸಿದ ನೀನೆ ನಿನ್ನ ಮುದ್ದು ಹೆಸರು ಅಮ್ಮು ಎಂದು ಹಾಗೆ ಕರೆಯಬಹುದೆಂದು ಹೇಳಿದೆ. ನನಗೂ ಅದೂ ಬಹಳ ಮುದ್ದಾದ ಹೆಸರೆನಿಸಿತು...ನೀನು ಮುದ್ದೆನಿಸಿರಬೇಕಾದರೆ ನಿನ್ನ ಮುದ್ದು ಹೆಸರು ಮುದ್ದೆನಿಸುವುದಿಲ್ಲವ?
ಇದ್ದಕ್ಕಿದ್ದಂತೆ ನನ್ನ ಮೊಬೈಲ್ ರಿಂಗಾಯಿತು. ಯಾರೆಂದು ನೋಡಿದರೆ ನನ್ನ ಗೆಳೆಯ ಕರೆ ಮಾಡಿದ್ದ ಕಾಕತಾಳೀಯವೆಂಬಂತೆ ಅವನೂ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ನನ್ನದು S3 ಆದರೆ ಅವನದು S8 ಆಗಿತ್ತು. ಸರಿ ಅವನಿಗೆ ಮುಂದಿನ ಸ್ಟೇಷನ್ ನಲ್ಲಿ ಬರುತ್ತೇನೆ ಎಂದು ಹೇಳಿ ಕರೆ ಕಟ್ ಮಾಡಿದೆ. ಕರೆ ಕಟ್ ಮಾಡಿದ ಹತ್ತೇ ನಿಮಿಷದಲ್ಲಿ ಸ್ಟೇಷನ್ ಬಂತು.
ನನಗೆ ನಿನ್ನನ್ನು ಬಿಟ್ಟು ಹೋಗಲು ಮನಸೇ ಇರಲಿಲ್ಲ. ಆದರೂ ಏನು ಮಾಡುವುದು...ಸರಿ ಅವನೊಡನೆ ಮಾತಾಡಿ ಮುಂದಿನ ಸ್ಟೇಷನ್ ಗೆ ಮತ್ತೆ ಬರುತ್ತೇನೆ ಎಂದು ಹೇಳಿ ಬ್ಯಾಗ್ ಅಲ್ಲೇ ಬಿಟ್ಟು ಅವನಿದ್ದ ಬೋಗಿಗೆ ಹೋದೆ.ಅಲ್ಲಿ ಹೋಗಿ ಅವನೊಡನೆ ಮಾತಾಡುತಿದ್ದರೂ ಮನಸೆಲ್ಲ ನಿನ್ನ ಬಳಿಯೇ ಇತ್ತು ಅಮ್ಮು. ರೈಲು ಸ್ಟೇಷನ್ ಬಿಟ್ಟು ಅರ್ಧ ಗಂಟೆ ಆಗಿತ್ತು. ಇನ್ನೇನು ಇನ್ನೊಂದು ಕಾಲು ಗಂಟೆಯಲ್ಲಿ ಇನ್ನೊಂದು ಸ್ಟೇಷನ್ ಬರುತ್ತದೆ ಅಲ್ಲಿ ಇಳಿದು ಮತ್ತೆ ವಾಪಸ್ ಬರಬೇಕು ಎಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ರೈಲು ನಿಂತಿತು. ಯಾವುದೂ ಸ್ಟೇಷನ್ ಇಲ್ಲವಲ್ಲ ಯಾಕೆ ನಿಂತಿತು ಎಂದುಕೊಳ್ಳುತ್ತಿದ್ದಾಗಲೇ ಜನರ ಕೂಗಾಟ ಕೇಳಿಸಿತು. ಎಲ್ಲರೂ ಬೋಗಿಗಳಿಂದ ಇಳಿದು ಓದುತ್ತಿದ್ದರು. ಯಾಕೆ ಏನಾಯ್ತು ಎಂದು ಕೆಳಗಿಳಿದರೆ ಯಾವುದೋ ಬೋಗಿಯಿಂದ ಬೆಂಕಿ ಬರುತ್ತಿದೆ. ಗಾಭರಿಯಿಂದ ಜನರ ಜೊತೆ ನಾನು ಅತ್ತ ಓಡಿ ಬಂದೆ.
ಒಂದು ಕ್ಷಣ ನನ್ನ ಕಣ್ಣನ್ನು ನಾನೇ ನಂಬಲಾಗಲಿಲ್ಲ ಆ ಇಡೀ ಬೋಗಿ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿತ್ತು. ಒಳಗಡೆಯಿಂದ ಜನ ಒಂದೇ ಸಮನೆ ಚೀರುತ್ತಿದ್ದರು. ಒಂದೆಡೆ ಬೋಗಿಯ ಬಾಗಿಲು ಬಂದಾಗಿತ್ತು ಇನ್ನೊಂದೆಡೆಯ ಬಾಗಿಲಿನಿಂದ ಜನ ಆಚೆ ಬರಲು ಪರದಾಡುತ್ತಿದ್ದರು. ನೆರೆದಿದ್ದ ಜನ ಏನೂ ಮಾಡಲು ತೋಚದೆ ಆ ಘೋರವನ್ನು ನೋಡುತ್ತಾ ನಿಂತಿದ್ದರು.ನಾನು ತಕ್ಷಣ ಪೋಲಿಸ್, ಫೈರ್ ಹಾಗೂ ಅಂಬ್ಯುಲೆನ್ಸ್ ಗೆ ಕರೆ ಮಾಡಿದೆ. ಅಷ್ಟರಲ್ಲಿ ಯಾರೋ ಯಾವ ಬೋಗಿ ಎಂದ ಹಾಗೆ ಕೇಳಿಸಿತು. ಹೌದು ಅಲ್ಲಿಯವರೆಗೆ ಯಾವ ಬೋಗಿಯೆಂದೆ ನೋಡಿರಲಿಲ್ಲ. ತಕ್ಷಣ ಕಂಗಾಲಾಗಿ ಯಾವ ಬೋಗಿ ಎಂದು ನೋಡಿದರೆ S3 ಎಂದಿತ್ತು. ತಕ್ಷಣ ನನ್ನ ಕಣ್ಣುಗಳು ಕತ್ತಲಾವಾರಿಸಿ ಅಲ್ಲೇ ಕುಸಿದು ಬಿದ್ದೆ.
ನನ್ನ ಸ್ನೇಹಿತ ನನ್ನನ್ನು ಎಬ್ಬಿಸಿದ. ಕರೆ ಮಾಡಿ ಅರ್ಧ ಗಂಟೆಯ ನಂತರ ಫೈರ್ ಬ್ರಿಗೆಡ್ ನವರು ಬಂದರು. ಸತತವಾಗಿ ಒಂದು ಗಂಟೆಯ ಕಾಲ ಬೆಂಕಿ ನಂದಿಸಿದರು. ಬೆಂಕಿಯಿಂದ ಕೇವಲ ಹತ್ತು ಮಂದಿ ಮಾತ್ರ ತಪ್ಪಿಸಿಕೊಂಡಿದ್ದರು. ಬೋಗಿಯಲ್ಲಿ ಉಳಿದಿದ್ದ ಮೂವತ್ತು ಮಂದಿ ಸುಟ್ಟು ಕರಕಲಾಗಿದ್ದರು. ಆ ಉಳಿದಿದ್ದ ಹತ್ತು ಮಂದಿಯಲ್ಲಿ ೭ ಜನ ಗಂಡಸರು, ಇಬ್ಬರು ಹೆಂಗಸರು ಹಾಗೂ ಒಂದು ಮಗು ಇತ್ತು. ನನಗೆ ಇನ್ನು ಮುಂದೆ ಅಲ್ಲಿರಲು ಆಗದೆ ಅಲ್ಲಿಂದ ಹೊರಟು ಬಿಟ್ಟೆ.
ಅಮ್ಮು ಅಂದಿನಿಂದ ಪ್ರತಿ ದಿನ ನಿನ್ನ ಮೊಬೈಲ್ ಕರೆ ಮಾಡುತ್ತಿದ್ದೇನೆ, ಯಾವತ್ತಾದರೂ ಒಂದು ದಿನ ನಿನ್ನ ಮೊಬೈಲ್ ರಿಂಗಾಗುತ್ತದೆ ಎಂಬ ಆಸೆಯಿಂದ..
ಅಮ್ಮು ಅಂದಿನಿಂದ ಪ್ರತಿ ದಿನ ನಿನಗೆ ಇಮೇಲ್ ಮಾಡುತ್ತಿದ್ದೇನೆ, ಯಾವತ್ತಾದರೂ ಒಂದು ದಿನ ನಿನ್ನಿಂದ ಉತ್ತರ ಬರಬಹುದೇನೋ ಎಂದು..
ಅಮ್ಮು ಅಂದಿನಿಂದ ಪ್ರತಿ ದಿನ ನಿನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಒಂದು ಮೆಸೇಜ್ ಹಾಕುತ್ತಿದ್ದೇನೆ, ಯಾವತ್ತಾದರೂ ನೀನು ಲೈಕ್ ಎಂದು ಒತ್ತುತ್ತೀಯ ಎಂದು..
ಅಮ್ಮು ಅಂದಿನಿಂದ ಇದೂ ಸೇರಿ ನಾನು ನಿನಗೆ ಬರೆದ ಒಟ್ಟು ಪತ್ರಗಳ ಸಂಖ್ಯೆ ೬೬೦. ಒಂದು ದಿನವಾದರೂ ನಿನ್ನಿಂದ ಪ್ರತ್ಯುತ್ತರ ಬರುತ್ತದೆ ಎಂದು...
ಅಮ್ಮು ಒಂದೇ ಒಂದು ಸಾರಿ ಬಂದು ನಿನ್ನ ಆ ದುಪ್ಪಟ್ಟವನ್ನು ನನ್ನ ಮುಖದ ಮೇಲೆ ಹಾಕಿ ಹೋಗು ಅಮ್ಮು...
ಇಂತಿ ನಿನ್ನ ಪ್ರೀತಿಸುವ...
ಅಂಕಿತ್.
Comments
ಉ: ಬರೆಯುವೆ ನಿನಗಾಗಿ...(ಕಥೆ)
In reply to ಉ: ಬರೆಯುವೆ ನಿನಗಾಗಿ...(ಕಥೆ) by Chikku123
ಉ: ಬರೆಯುವೆ ನಿನಗಾಗಿ...(ಕಥೆ)
ಉ: ಬರೆಯುವೆ ನಿನಗಾಗಿ...(ಕಥೆ)
In reply to ಉ: ಬರೆಯುವೆ ನಿನಗಾಗಿ...(ಕಥೆ) by bhalle
ಉ: ಬರೆಯುವೆ ನಿನಗಾಗಿ...(ಕಥೆ)
In reply to ಉ: ಬರೆಯುವೆ ನಿನಗಾಗಿ...(ಕಥೆ) by partha1059
ಉ: ಬರೆಯುವೆ ನಿನಗಾಗಿ...(ಕಥೆ)
In reply to ಉ: ಬರೆಯುವೆ ನಿನಗಾಗಿ...(ಕಥೆ) by bhalle
ಉ: ಬರೆಯುವೆ ನಿನಗಾಗಿ...(ಕಥೆ)
ಉ: ಬರೆಯುವೆ ನಿನಗಾಗಿ...(ಕಥೆ)
In reply to ಉ: ಬರೆಯುವೆ ನಿನಗಾಗಿ...(ಕಥೆ) by makara
ಉ: ಬರೆಯುವೆ ನಿನಗಾಗಿ...(ಕಥೆ)
ಉ: ಬರೆಯುವೆ ನಿನಗಾಗಿ...(ಕಥೆ) @ಜಯಂತ್ ಅವ್ರೇ
In reply to ಉ: ಬರೆಯುವೆ ನಿನಗಾಗಿ...(ಕಥೆ) @ಜಯಂತ್ ಅವ್ರೇ by venkatb83
ಉ: ಬರೆಯುವೆ ನಿನಗಾಗಿ...(ಕಥೆ) @ಜಯಂತ್ ಅವ್ರೇ