ಅಸ್ತ್ರ
’ಅದು ಅಸ್ತ್ರ; ಹಿಡಿದಿಡಲು ಶಕ್ತಿ ಹುಟ್ಟುವ ತನಕ ಬಳಸಬೇಡ’
ಚಾಕು ಹಿಡಿದಿದ್ದ ಕೈಗಳಿಗೆ ಉಪದೇಶಿಸಿದ್ದರು ಅಪ್ಪ!
ಅವರೆಂದಿದ್ದು ಅರ್ಥವಾಗದಿದ್ದರೂ ಗಂಭೀರ ಮುಖದ
ಎದುರು ನಿಲ್ಲುವ ಎದೆಗಾರಿಕೆ ನನ್ನಲ್ಲಿರದೆ
ಕುಯ್ಯಬೇಕೆಂದಿದ್ದ ಕನಸಿಗೆ ತರ್ಪಣ ಬಿಟ್ಟಿದ್ದೆ
ಚಾಪೆ, ಸೋಫದ ಸ್ಪಂಜು, ಮರದ ತೊಗಟೆಗಳ
ನಿರಾಳದ ನಿಟ್ಟುಸಿರು ನನ್ನ ಕಿವಿದೆರೆಗಳಿಗೂ ಬಿದ್ದಿತ್ತು
ನನ್ನನ್ನು ಅಣಕಿಸಿದ್ದಕ್ಕೆ ಅವುಗಳ ಮೇಲೆ ಸಿಟ್ಟು ಹುಟ್ಟುತ್ತಿತ್ತು!
ಮುಂದೆಂದೋ ಯಾರ ಮಾತನ್ನೂ ಕೇಳಬೇಕಿರದಾಗ
ಮನದಾಸೆಗಳನ್ನೆಲ್ಲಾ ಈಡೇರಿಸುವೆ ಎಂದು ಪ್ರತಿಜ್ಞೆ ಮಾಡಿದ್ದೆ
ಮನೆಯಲ್ಲಿರದ ಅಪ್ಪನನ್ನು ಕೆಣಕಲೆಂದೇ ಹಿಡಿದಿದ್ದೆ ದೊಡ್ದ ಕತ್ತರಿ
ತೋಟವಿಡೀ ಕಳೆಯೋ ಗಿಡವೋ ಹೂವೋ ಹಣ್ಣೋ
ಒಂದೂ ನೋಡದೆ ಸಿಕ್ಕಿದ್ದನ್ನೆಲ್ಲಾ ಕತ್ತರಿಸಿದ್ದೆ.
ಅಪ್ಪ ನೋಡಿದ ನಂತರ ಅದೂ ಕೈಯಿಂದ ದೂರ -
ಎಟುಕದ ಎತ್ತರದಲ್ಲಿ ನಿಂತು ನನ್ನ ಕರೆಯುತ್ತಿತ್ತು.
ನನಗದನ್ನು ಬಳಸಲು ಗೊತ್ತಿದೆ ಎಂದು ಅತ್ತಿದ್ದಕ್ಕೆ
ಅಪ್ಪ ಮುಗುಳ್ನಗುತ್ತಾ ತಲೆ ನೇವರಿಸಿದ್ದರು.
’ಬಳಸಲ್ಪಡುವುದೇ ಉದ್ದೇಶವಲ್ಲ’
ಅರ್ಥವಾಗದ ನನ್ನ ದೃಷ್ಟಿಯ ಕಂಡು ಅದೇ ನಿಗೂಢತೆಯ ಧ್ವನಿ
’ಅರ್ಥವಾಗುವ ತನಕ ಮುಟ್ಟಬೇಡ’
ಅಂದು ಹುಟ್ಟಿದ್ದ ತುಂಡರಿಸುವ ವಾಂಛೆ ಈಗಿಲ್ಲ
ಕತ್ತರಿಸುವಾಗ ಹುಟ್ಟಿದ್ದ ಕೆಚ್ಚು ಈಗ ಹುಟ್ಟುವುದಿಲ್ಲ
ಚಾಕುವಿನಿಂದ ಉಗುರುಗಳನ್ನು ಕತ್ತರಿಸುವುದನ್ನು ಕಲಿತಿದ್ದೇನೆ
ದೊಡ್ಡ ಕತ್ತರಿಯಿಂದ ತೋಟವನ್ನು ಸ್ವಚ್ಛಗೊಳಿಸುತ್ತೇನೆ
’ನೀವು ಹೇಳಿದ ಮಾತುಗಳು ಈಗ ಅರ್ಥವಾಗತೊಡಗಿವೆ
ಇವುಗಳ ಉದ್ದೇಶ ನಾಶವಲ್ಲ, ಪಾಲನೆ’
ಸಂಧ್ಯೆಯ ಕೆಂಪು ಬಾನನ್ನು ನೋಡುತ್ತಾ ಅಪ್ಪ ಮುಗುಳ್ನಗುತ್ತಾರೆ.
’ಆವತ್ತು ನಾನಂದಿದ್ದು ನಿನ್ನ ಕೈಯಲ್ಲಿದ್ದ ಕಬ್ಬಿಣಕ್ಕೆ ಅಲ್ಲ’
ಸುದೀರ್ಘ ಮೌನ! ಭೋರ್ಗರೆವ ಸಮುದ್ರ, ಬೀಸುವ ಗಾಳಿ
ಏನೂ ಬದಲಾಗಿಲ್ಲ ಇನ್ನೂ.. ಮತ್ತದೇ ಅರ್ಥವಾಗದ ಅಸಹನೆ ಕಾಡುತ್ತದೆ
ಹಣ್ಣಾದ ಕೂದಲಿನ ನಡುವೆ ಅಪ್ಪ ಈಗೀಗ ಮೌನಿ
ತಲೆಯಾಡಿಸುತ್ತಾರೆ; ಮುಗುಳ್ನಗುತ್ತಾರೆ - ಮತ್ತೆ ನಿರ್ಲಿಪ್ತ ದೃಷ್ಟಿ
ಸಮುದ್ರ ದಂಡೆಗೆ ಅವರು ಬರುವುದಿಲ್ಲ
ನಾನೊಬ್ಬನೇ ಹೋಗಿ ಕುಳಿತುಬಿಡುತ್ತೇನೆ
ನೆನಪಿನೊರತೆಯಲ್ಲಿನ ಚಾಕು, ತೋಟ - ಕತ್ತರಿಗಳಿಲ್ಲ!
ಅಪ್ಪ ಅಂದಿದ್ದ ಅಸ್ತ್ರ ಏನು ಎಂದು ಈಗ ಅರ್ಥವಾಗಿದೆ
ದೂರದಲ್ಲೆಲ್ಲೋ ಕಾಣುವ ದೋಣಿಯಂತೆ ಅದೂ ಹೊಳೆಯುತ್ತದೆ
ಮನಸ್ಸಿನೊಳಗೆ; ನಾನೇ ಕತ್ತರಿಯ ರೂಪ,
ನನ್ನೊಳು ಹುಟ್ಟುವ ಭಾವನೆಗಳೇ ಚಾಕುವಿನ ಅಲಗು
ಅರಿವಾದ ನಂತರ ಅಪ್ಪನ ಮುಗುಳ್ನಗು ನನ್ನ ಮುಖದಲ್ಲೂ ಮೂಡುತ್ತದೆ
Comments
ಉ: ಅಸ್ತ್ರ
In reply to ಉ: ಅಸ್ತ್ರ by partha1059
ಉ: ಅಸ್ತ್ರ
In reply to ಉ: ಅಸ್ತ್ರ by santhosh_87
ಉ: ಅಸ್ತ್ರ
ಉ: ಅಸ್ತ್ರ
In reply to ಉ: ಅಸ್ತ್ರ by ksraghavendranavada
ಉ: ಅಸ್ತ್ರ
In reply to ಉ: ಅಸ್ತ್ರ by santhosh_87
ಉ: ಅಸ್ತ್ರ
In reply to ಉ: ಅಸ್ತ್ರ by Premashri
ಉ: ಅಸ್ತ್ರ @ ಸಂತೋಷ್ ಅವ್ರೇ
ಉ: ಅಸ್ತ್ರ
ಉ: ಅಸ್ತ್ರ
In reply to ಉ: ಅಸ್ತ್ರ by kavinagaraj
ಉ: ಅಸ್ತ್ರ