ತಾಂತ್ರಿಕ ಸಾಧನ (ಭಕ್ತಿಯೋಗದ ಅಂಶಗಳು)

ತಾಂತ್ರಿಕ ಸಾಧನ (ಭಕ್ತಿಯೋಗದ ಅಂಶಗಳು)

             ತಾಂತ್ರಿಕ ಸಾಧನವು ಭಕ್ತಿಯೋಗಕ್ಕೆ ಸೇರಿದ್ದು, ಅದರಷ್ಟೇ ವಿಶಾಲವಾದುದು ಮತ್ತು ಆಧ್ಯಾತ್ಮ ಸಾಧನದ ಸರ್ವಸ್ವವನ್ನೂ ಪ್ರತಿಪಾದಿಸುವುದು. ಅದು ರಾಜ, ಜ್ಞಾನ, ಭಕ್ತಿಯೋಗಗಳ ಅತ್ಯದ್ಭುತ ಸಮುಚ್ಛಯ. ಆಧ್ಯಾತ್ಮ ಬೆಳವಣಿಗೆಯ ಬೇರೆ ಬೇರೆ ಸೋಪಾನ ಪಂಕ್ತಿಗಳಲ್ಲಿರುವ ಬೇರೆ ಬೇರೆ ವ್ಯಕ್ತಿಗಳಿಗೆ ಅವರವರ ಯೋಗ್ಯತೆಗೆ ತಕ್ಕಂತೆ, ಎಲ್ಲರಿಗೂ ಸರಿದೂಗುವಂತಿದೆ. ಜೀವ ಪರಮಾತ್ಮರು ತತ್ವಶಃ ಒಂದೇ ಎಂಬ ಸತ್ಯವನ್ನು ಆಶ್ರಯಿಸಿ ಭಕ್ತನನ್ನು ಸಾಕಾರೋಪಾಸನೆಯ ಮೂಲಕ ಮೆಟ್ಟಿಲು ಮೆಟ್ಟಿಲಾಗಿ ಪರಮಸತ್ಯದ ಸಾಕ್ಷಾತ್ಕಾರ ಮತ್ತು ಅದರ ಫಲವಾದ ಮುಕ್ತಿಯ ಕಡೆ ಕರೆದೊಯ್ಯುವುದು ತಾಂತ್ರಿಕ ಸಾಧನೆ. 
 
               ಬೇರೆ ಬೇರೆ ಗುಂಪಿಗೆ ಸೇರಿದ ಭಕ್ತರಿಗೆ ಬೇರೆ ಬೇರೆ ಸಾಧನಗಳನ್ನು ತಂತ್ರಗಳು ವಿಧಿಸುವುವು. ಕೆಲವು ಆಧ್ಯಾತ್ಮ ಸಾಧನೆಯ ಪ್ರಥಮ ಹಂತಗಳಲ್ಲಿರುವವರಿಗೆ ಅನ್ವಯಿಸುವುವು. ತಾಮಸಪ್ರಕೃತಿಯವರು ಎಂದರೆ ಜಡಸ್ವಭಾವದವರು, ಅಜ್ಞಾನಿಗಳು, ಸೋಮಾರಿಗಳು, ಪಶುಸಮಾನರು. ಇವರಿಗಾಗಿ ವಿಧಿಸಿರುವ ಸಾಧನ ಮಾರ್ಗಕ್ಕೆ 'ಪಶ್ವಾಚಾರ' ಎಂದು ಹೆಸರು. ಮಧ್ಯಸ್ಥಾನದಲ್ಲಿರುವ ರಾಜಸ ಪ್ರಕೃತಿಯವರಿಗೆ, ಎಂದರೆ ಚಟುವಟಿಕೆ, ಆಸೆ, ಉತ್ಸಾಹಗಳಿಂದ ಕೂಡಿದವರಿಗೆ 'ವೀರಾಚಾರ'ವೆಂಬ ಸಾಧನಮಾರ್ಗವನ್ನು ತೋರಿಸುವುವು.
 
              ಇವೆರಡು ಗುಂಪಿನವರು ಅಧಿಕಾರ ಮತ್ತು ಶಕ್ತಿಗಳನ್ನು ಸಂಪಾದಿಸಿ, ಇಹಪರ ಸುಖವನ್ನು ಭೋಗಿಸುವ ಉದ್ದೇಶದಿಂದ ತಾಂತ್ರಿಕ ಸಾಧನವನ್ನು ಕೈಕೊಳ್ಳುವರು. ಇವರಿಗೆ ತಾಂತ್ರಿಕ ಸಾಧನವು ಪ್ರವೃತ್ತಿ ಮಾರ್ಗವಾಯಿತು. ಪ್ರವೃತ್ತಿ ಮಾರ್ಗದಲ್ಲಿ ಉಕ್ತವಾದ ವೈದಿಕ ದೇವಯಜ್ಞವು ಹೋಗಿ, ಅದರ ಬದಲು ತಾಂತ್ರಿಕ ಪೂಜಾಪದ್ಧತಿಯು ಇಂದಿನ ಕಾಲದಲ್ಲಿ ಸಾಮಾನ್ಯವಾಗಿ ಪ್ರಯೋಗದಲ್ಲಿ ಬಂದಿದೆ. ರಾಜಯೋಗದಲ್ಲಿ ಸಿದ್ಧಿಸುವ ಅಣಿಮಾದಿ ಅಷ್ಟಸಿದ್ಧಿಗಳು ತಾಂತ್ರಿಕ ಸಾಧನಗಳಿಂದಲೂ ದೊರಕುತ್ತವೆ. ಆದರೂ, ಶಕ್ತಿ ಮತ್ತು ಇಂದ್ರಿಯ ಸುಖಗಳನ್ನು ಅರಸುವ ತಾಂತ್ರಿಕ ಸಾಧನೆಯು, ಶುದ್ಧವಾದ, ವಿಶೇಷವಾದ, ನಿಸ್ವಾರ್ಥ ಪ್ರೇಮದ ದ್ವಾರಾ ದೈವಸಾಕ್ಷಾತ್ಕಾರವನ್ನು ಮಾಡಿಕೊಡುವ ಭಕ್ತಿಯೋಗವೆನಿಸಿಕೊಳ್ಳುವುದಿಲ್ಲ. 
 
               ಇನ್ನೊಂದು ವರ್ಗದ ಜನರು ಆಧ್ಯಾತ್ಮದ ಕೊನೆಯ ಸೋಪಾನದಲ್ಲಿರುವರು. ಇವರು ಸರ್ವಸಂಗ ಪರಿತ್ಯಾಗ ಮಾಡಿದವರು; ಸ್ವಭಾವತಃ ಸಾತ್ವಿಕ ಗುಣಸಂಪನ್ನರು, ಶಾಂತರು, ಪವಿತ್ರಾತ್ಮರು, ತೃಪ್ತರು, ಸ್ಪಷ್ಟದೃಷ್ಟಿಯುಳ್ಳವರು. ಅವರು ಇಂದ್ರಿಯ ಭೋಗವು ನಿರರ್ಥಕವೆಂಬುದನ್ನು ತಿಳಿದು, ದೈವಸಾಕ್ಷಾತ್ಕಾರಕ್ಕೋ, ಮುಕ್ತಿಗೋ, ನಿರಂತರ ಹಂಬಲಿಸುವವರು. ಇವರಿಗೆ ತಂತ್ರಗಳು 'ದಿವ್ಯಾಚಾರ'ವೆಂಬ ಪ್ರತ್ಯೇಕ ಸಾಧನ ಮಾರ್ಗವನ್ನು ವಿಧಿಸುವವು. ಈ ಸಾಧನವನ್ನು ಪ್ರಾಪಂಚಿಕ ವಿಷಯ ಸಂಗ್ರಹಕ್ಕಾಗಿ ಅಲ್ಲದೆ, ಕೇವಲ ಪ್ರೇಮದ ದ್ವಾರಾ ದೈವಸಾಕ್ಷಾತ್ಕಾರ ಹೊಂದಲು ವಿಧಿಸಿರುವವು. ಇದೊಂದು ಸಾಧನೆಯ ವೈಶಿಷ್ಟ್ಯ. ಆದ್ದರಿಂದ ಈ 'ದಿವ್ಯಾಚಾರ'ವೆಂಬ ತಾಂತ್ರಿಕ ಸಾಧನವೂ ಭಕ್ತಿಯೋಗಕ್ಕೆ ಸೇರಿದ್ದು. 
 
              ಅರವತ್ತನಾಲ್ಕು ತಂತ್ರಗ್ರಂಥಗಳಿವೆ. ಇವುಗಳಲ್ಲಿ ಮುಖ್ಯವಾದವು ಮಹಾನಿರ್ವಾಣ, ಕುಲಾರ್ಣವ, ಕುಲಸಾರ, ಪ್ರಪಂಚಸಾರ, ತಂತ್ರರಾಜ, ರುದ್ರಯಾಮಲ, ಬ್ರಹ್ಮಯಾಮಲ, ವಿಷ್ಣುಯಾಮಲ ಮತ್ತು ತೊದಲ ಮೊದಲಾದವು. ಈ ಶಾಸ್ತ್ರಗಳೆಲ್ಲ ಶಿವ ಪಾರ್ವತಿಯರ ಸಂಭಾಷಣೆಯ ರೂಪದಲ್ಲಿವೆ. ಕೆಲವು ತಂತ್ರ ಗ್ರಂಥಗಳಲ್ಲಿ ಶಿವನು ಪಾರ್ವತಿಯ ಪ್ರಶ್ನೆಗಳಿಗೆ ಉತ್ತರ ಕೊಡುವನು. ಇನ್ನು ಕೆಲವು ತಂತ್ರಗಳಲ್ಲಿ ಪಾರ್ವತಿಯೇ ಶಿವನ ಪ್ರಶ್ನೆಗೆ ಉತ್ತರ ಕೊಟ್ಟು ಬೋಧಿಸುವಳು. ಮೊದಲನೆಯ ವರ್ಗದ ಗ್ರಂಥ ಸಮೂಹಕ್ಕೆ ’ಆಗಮ’ಗಳೆಂದೂ, ಎರಡನೆಯ ಗ್ರಂಥಸಮೂಹಕ್ಕೆ ’ನಿಗಮ’ಗಳೆಂದೂ ಹೆಸರು. ಅವುಗಳು ನೂರಾರು ಪೂಜಾ ಪದ್ಧತಿಗಳನ್ನು ವಿವಿಧ ಸಾಧಕವರ್ಗಕ್ಕೆ ಹೇಳುವವು. ಆದರೂ, ಅವುಗಳಲ್ಲಿ ಎಲ್ಲ ಪೂಜಾಪದ್ಧತಿಗಳಿಗೂ ಅನ್ವಯಿಸಿರುವ ಸಾಮಾನ್ಯ ಅಂಶಗಳು ಕೆಲವು ಇರುವವು. 
 
               ತಂತ್ರಗಳು ಶಕ್ತಿಪೂಜೆಯನ್ನು ವಿಧಿಸುವುವು. ದುರ್ಗಾ, ಚಂಡೀ, ಕಾಳೀ, ತಾರಾ, ಭುವನೇಶ್ವರೀ, ಜಗದ್ಧಾತ್ರೀ ಮೊದಲಾದ ಶಕ್ತಿಯ ರೂಪಗಳೇ ಆರಾಧ್ಯ ದೇವತೆಗಳು. ವಿಷ್ಣು ಪೂಜಕರಿಗೆ ವೈಷ್ಣವರೆಂದು ಕರೆಯುವ ಹಾಗೆ, ಶಕ್ತಿಪೂಜಕರಿಗೆ ’ಶಾಕ್ತ’ರೆಂದು ಹೆಸರು. ಶಾಕ್ತರು ತಮ್ಮ ಇಷ್ಟದೇವತೆ ಜಗನ್ಮಾತೆ ಎಂದು ಭಾವಿಸುವರು.
 
                ರೂಪ ಅದಾವುದರಾಗಲಿ, ಜಗನ್ಮಾತೆಯು, ನಿಜವಾಗಿಯೂ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಕರ್ತಳು. ಅವಳು ಆದ್ಯಂತ್ರಹಿತಳು, ದೇಶಕಾಲಾತೀತಳು, ಅನಂತಳು, ಸರ್ವವ್ಯಾಪಕಳು, ಅವಳು ಜ್ಞಾನದ ಖನಿ, ಚೈತನ್ಯಮಯೀ. ಸೃಷ್ಟಿ, ಸ್ಥಿತಿ, ಲಯಗಳು ಅವಳ ಲೀಲೆ, ಆದ್ದರಿಂದ ಅವಳು ಲೀಲಾಮಯಿ. ಸಾತ್ವಿಕ, ರಾಜಸ, ತಾಮಸವೆಂಬ ಮೂರು ದೈವಶಕ್ತಿಗಳಿಂದ ಕೂಡಿರುವವಳು, ಆದ್ದರಿಂದ ಅವಳು ತ್ರಿಗುಣಾತ್ಮಿಕೆ. ತಾಮಸಿಕ ಶಕ್ತಿಯ ಆವಿರ್ಭಾವವೇ ಜಡಪ್ರಕೃತಿ, ಜಡಪ್ರಪಂಚದಲ್ಲಿಯೂ, ಎಲ್ಲಾ ಜೀವಿಗಳಲ್ಲಿಯೂ, ಎಲ್ಲಾ ವಿಧವಾದ ಪರಿಣಾಮಗಳಿಗೂ ಕಾರಣವಾದ ಜಡ ಮತ್ತು ಪ್ರಾಣಶಕ್ತಿಯಾಗಿ, ರಾಜಸಿಕ ಗುಣದಿಂದ ಕಾಣಿಸಿಕೊಳ್ಳುವವಳು. ಸಾತ್ವಿಕ ಶಕ್ತಿಯಿಂದ ಅನಂತ ವ್ಯಾಪಾರಗಳನ್ನು ಮಾಡುವ ಮನಸ್ಸಾಗಿ ತೋರುವಳು. ಪ್ರತಿ ಜೀವಿಯಲ್ಲಿಯೂ ಅವರ ಅನುಭವ ಮತ್ತು ಕರ್ಮಗಳಿಗೆ ಕರ್ತೃವಾಗಿ ತೋರುವಳು. ಪ್ರಪಂಚವೆಂಬುವ, ಸದಾ ವಿಕಾರಕ್ಕೆ ಒಳಗಾದ, ನಾಮರೂಪಗಳಲ್ಲಿ ತಾನು ಪ್ರಕಾಶಿಸುವಳು. ನಿರಾಕಾರ, ನಿರ್ಗುಣ ಬ್ರಹ್ಮನಿಂದ ಎಂತೋ ಬಿಡುಗಡೆ ಹೊಂದಿದ ಪ್ರವಾಹರೂಪದ ವಿಕಾರಶಕ್ತಿಯೇ ಅವಳು. 
 
             ಇದೇ ಹಿಂದುವಿನ ಸಾಕಾರಬ್ರಹ್ಮ , ಅದು ಸ್ವತಃ ಪುರುಷನೂ ಅಲ್ಲ, ಸ್ತ್ರೀಯೂ ಅಲ್ಲ. ಆದರೂ ಭಕ್ತನ ಭಾವನೆಗೆ ಅನುಸಾರವಾಗಿ ಪುಂ ಅಥವಾ ಸ್ತ್ರೀ ರೂಪವನ್ನು ಧರಿಸಬಲ್ಲದು. ವೈಷ್ಣವರೂ, ಶೈವರೂ, ಸೌರರೂ, ಗಾಣಪತ್ಯರೂ, ಪುಂಭಾವವನ್ನು ಮೆಚ್ಚುವರು. ಶಾಕ್ತರಾದರೋ, ಸಾಕಾರಬ್ರಹ್ಮನನ್ನು ಜಗನ್ಮಾತೆಯೆಂದು ಕಾಣುವರು. ದೇವರು ತಾಯಿಯೆಂಬ ಭಾವನೆಯು, ಭಕ್ತನಿಗೂ, ಅವನ ಇಷ್ಟದೇವತೆಗೂ ಮಧುರಬಾಂಧವ್ಯವನ್ನು ಕಲ್ಪಿಸುವುದು. ಭಕ್ತನು ಮಗುವಿನಂತೆ ಜಗನ್ಮಾತೆಯ ಪ್ರೇಮಾದರಗಳಿಗೆ ಪಾತ್ರನಾಗುವನು. 
 
             ಜೀವಾತ್ಮ ಪರಮಾತ್ಮರ ಐಕ್ಯವನ್ನು ಜ್ಞಾಪಕಕ್ಕೆ ತಂದುಕೊಡುವುದು ತಾಂತ್ರಿಕ ಸಾಧನೆಯ ಇನ್ನೊಂದು ವೈಶಿಷ್ಟ್ಯ. ಶಕ್ತಿಯು ಬ್ರಹ್ಮನಿಂದ ಹರಿದು ಬಂದು, ಎಲ್ಲ ನಾಮರೂಪ ವಿಕಾರಗಳಲ್ಲಿಯೂ ವ್ಯಕ್ತವಾಗುವಳು. ಜಗನ್ಮಾತೆಯ ಪೂಜೆಗೆ ಮೊದಲು, ಸಾಧಕನು, ತನ್ನ ಜೀವಾತ್ಮನು ಪರಮಾತ್ಮನಲ್ಲಿ ಐಕ್ಯವಾಗಿರುವನೆಂದೂ, ಸೃಷ್ಟಿಯಲ್ಲಿರುವುದೆಲ್ಲ ಮಾಯವಾಗಿರುವುದೆಂದೂ ಭಾವಿಸಬೇಕು. ಅನಂತರ ನಿರಾಕಾರ ಬ್ರಹ್ಮನಿಂದ, ಆರಾಧಕನಾದ ತಾನೂ, ಆರಾಧ್ಯ ದೇವತೆಯಾದ ಜಗನ್ಮಾತೆಯೂ, ಹುಟ್ಟಿದಂತೆ ಭಾವಿಸಬೇಕು. ದೇವಿಯ ಮಣ್ಣಿನ ಪ್ರತಿಮೆಯಲ್ಲಿ, ತನ್ನ ಆತ್ಮನಿಗೂ, ಪ್ರತಿಮೆಗೂ, ತಾಂತ್ರಿಕ ಸಂಬಂಧವನ್ನು ಕಲ್ಪಿಸಿ, ಪ್ರಾಣಪ್ರತಿಷ್ಠೆ ಮಾಡಬೇಕು. ಆಗ ಪ್ರತಿಮೆಯು ದೇವಿಯ ಸಜೀವ ಸಂಕೇತವಾಗುವುದು. ಸಾಧಕನು ಈ ಮೂರ್ತಿಯನ್ನು ದೇವಿಯೆಂದು ಪೂಜಿಸಿ, ನೈವೇದ್ಯಾದಿಗಳನ್ನು ಅರ್ಪಿಸುವನು. 
 
             ತಾಂತ್ರಿಕ ಸಾಧನೆಯು ವೇದಾಂತ ಸತ್ಯವಾದ ಆತ್ಮನ ದೇವತ್ವವನ್ನು ನಾಮರೂಪಗಳ ಮೂಲಕ ಗ್ರಹಿಸಲು ಈ ಪ್ರಕಾರ ಸಾಧಕನಿಗೆ ಸಹಾಯ ಮಾಡುವುದು. ಮುಕ್ತಿಪ್ರದವಾದ ಅಂತಿಮ ಸತ್ಯದ ಅರಿವುಂಟುಮಾಡಿಕೊಡುವ ವಿದ್ಯಾಶಾಲೆಯನ್ನೋ ಅಥವಾ ಪ್ರಯೋಗಶಾಲೆಯನ್ನೋ ಹೋಲುವುದು ಈ ತಾಂತ್ರಿಕ ಸಾಧನೆ. ವಿವೇಕ ವಿಚಾರಗಳಿಂದ ಜ್ಞಾನಯೋಗಿಯು ಸಾಧಿಸುವುದನ್ನೇ ತಾಂತ್ರಿಕಸಾಧಕನು ತನ್ನ ಅರ್ಚನಾಕ್ರಮದಿಂದ ಸಾಧಿಸಲು ಯತ್ನಿಸುವನು.
 
            ಹ್ರೀಂ, ಕ್ಲೀಂ ಮೊದಲಾದ ಬೀಜಮಂತ್ರ ಜಪವು ಎಲ್ಲ ತಂತ್ರಗಳಿಗೂ ಸಾಮನ್ಯವಾದ ವಿಷಯ. ಪ್ರತಿಯೊಂದು ಬೀಜಮಂತ್ರವೂ, ಒಂದೊಂದು ದೇವತಾಸ್ವರೂಪವನ್ನು ಸೂಚಿಸುತ್ತದೆ. ರೂಪ ಯಾವುದಾದರೂ, ಇಷ್ಟ ದೈವವೇ ಸೃಷ್ಟಿ ಸ್ಥಿತಿ ಲಯಕರ್ತಳು ಆದರೂ ಬೇರೆ ಬೇರೆ ದೇವತಾರೂಪಗಳಿಗೆ, ವಿವಿಧ ಗುಣಗಳಿಂದ ಕೂಡಿದ ಬೇರೆ ಬೇರೆ ವ್ಯಕ್ತಿತ್ವವೂ ಕಾಣಬರುವುದು. ಕಾಳೀ, ತಾರಾ, ಷೋಡಶೀ, ಚಂಡೀ, ದುರ್ಗಾ, ಜಗದ್ಧಾತ್ರೀ ಮೊದಲಾದ ದೇವೀ ರೂಪಗಳು ಬೇರೆ ಬೇರೆ. ಅವರ ಗುಣಗಳು ಪ್ರತ್ಯೇಕ. ಪ್ರತಿಯೊಂದು ರೂಪ ಮತ್ತು ಗುಣಕ್ಕೂ, ಪ್ರತ್ಯೇಕವಾದ ಬೀಜಮಂತ್ರ, ಮತ್ತು ನಾಮವಿರುವಿದು. ತಂತ್ರಗಳು ವಿಧಿಸುವ ರೀತಿಯಲ್ಲಿ ಮಂತ್ರ ಜಪಿಸುವುದರಿಂದ, ಮನಸ್ಸು ಶುದ್ಧವಾಗಿ ಇಷ್ಟದೇವಿಯ ಸಾಮೀಪ್ಯವನ್ನು ಪಡೆಯಬಹುದು. ಜಪಮಾಡುವಾಗ ಬೀಜಮಂತ್ರವನ್ನು ಕುರಿತು ಧ್ಯಾನ ಮಾಡುವುದು ಹೆಚ್ಚು ಹೆಚ್ಚು ಫಲಕಾರಿ. 
 
            ತಾಂತ್ರಿಕ ಸಾಧನಗಳಿಗೆಲ್ಲಾ, ಸಾಮಾನ್ಯವಾದ ಇನ್ನೊಂದು ವಿಷಯವಿದೆ. ಈ ವಿಷಯದಲ್ಲಿ ತಂತ್ರಗಳಿಗೂ, ಜ್ಞಾನಯೋಗಕ್ಕೂ ಅಜಗಜಾಂತರವಿರುವುದು. ಅದೆಂದರೆ ಜ್ಞಾನಯೋಗವು ವಿಷಯವಾಸನೆಗಳಿಂದ ದೂರವಾಗಿರು ಎನ್ನುವುದು. ತಂತ್ರಗಳು ವಿಷಯಗಳನ್ನು ಧೈರ್ಯದಿಂದ ಇದಿರಿಸಿ, ಜಯಶೀಲರಾಗಿ ಎನ್ನುವುವು. ಕೆಲವು ತಂತ್ರಸಾರಗಳ ಪ್ರಕಾರ, ಸಾಧಕನು ಚಿತ್ತರಂಜಕವಾದ ಇಂದ್ರಿಯ ವಸ್ತುಗಳ ಮಧ್ಯದಲ್ಲಿದ್ದುಕೊಂಡು, ಮನಸ್ಸನ್ನು ವಿಷಯಗಳಿಂದ ಬೇರ್ಪಡಿಸಿ, ಇಷ್ಟದೇವತಾಧ್ಯಾನದಲ್ಲಿ ಮಗ್ನನಾಗಬೇಕೆಂದು ವಿಧಿಸುವುವು. ಈ ರೀತಿಯಲ್ಲಿ ಅವನು ಇಂದ್ರಿಯ ಆಕರ್ಷಣೆಯನ್ನು ಶುದ್ಧದೈವ ಪ್ರೇಮವನ್ನಾಗಿ ಮಾರ್ಪಡಿಸಿಕೊಳ್ಳಬೇಕು. ಉದಾಹರಣೆಗಾಗಿ ಸಾರಾಯಿ, ಹೆಂಗಸು ಇವರ ಸಂಪರ್ಕ ಕೆಲವು ತಾಂತ್ರಿಕ ಉಪಾಸನೆಗಳಿಗೆ ಅತ್ಯಾವಶ್ಯಕ. ಆದರೆ ಮತ್ತಿಗಾಗಿ ಹೆಂಡವನ್ನು, ವಿಲಾಸಕ್ಕಾಗಿ ಹೆಂಗಸನ್ನು ಉಪಯೋಗಿಸಬಾರದು. ಸಾಧಕನು ಇವುಗಳ ಆಕರ್ಷಣೆಯನ್ನು ತಡೆಗಟ್ಟಿ, ಇಷ್ಟದೇವಿಯ ಧ್ಯಾನಮಾಡಬೇಕು, ಇದು ’ವೀರಸಾಧನೆ’, ಆದರೆ ಈ ಸಾಧನೆಯಲ್ಲಿ ಜಯಶೀಲನಾದರೆ ಒಂದೇಬಾರಿಗೆ ಇಂದ್ರಿಯ ಅವನ ಸ್ವಾದೀನಕ್ಕೆ ಬರುವುದು. 
 
         ಇಂಥಾ ಕಷ್ಟತರ ಸಾಧನೆಯಿಂದಲೇ ತಂತ್ರಸಾಧನೆಗೆ ಕೆಟ್ಟ ಹೆಸರು ಬಂದಿರುವುದು. ಇದು ದುಷ್ಟ ಮತ್ತು ನಿಂದನೀಯವಾದ ಸಾಧನೆಯಲ್ಲ. ದೈವಸಾಕ್ಷಾತ್ಕಾರವಾದಾಗ, ಮುಕ್ತಿಧ್ಯೇಯವನ್ನು ಮುಟ್ಟುವೆವೆಂಬುದು ಹಿಂದೂಗಳ ನಂಬಿಕೆ. ಸಾಕ್ಷಾತ್ಕಾರವಾಗುವುದು ಮನಸ್ಸನ್ನು ಸಂಪೂರ್ಣವಾಗಿ ದೇವರಲ್ಲಿ ನಿಲ್ಲಿಸಿದಾಗ. ಎಲ್ಲ ಯೋಗಗಳ ಅಡಿಗಲ್ಲು ಇದೇ. ಈ ಗುರಿ ಇಟ್ಟುಕೊಂಡೇ ತಂತ್ರಗಳು ಈ ವಿಚಿತ್ರ ಸಾಧನಮಾರ್ಗವನ್ನು ಹೇಳಿರುವುವು. 
 
            ಸರ್ವಸಾಮಾನ್ಯವಾದ, ಅಜೇಯವಾದ ಭಾವಗಳನ್ನು ಎಲ್ಲ ವಿಷಯಗಳಿಂದಲೂ ತಿರುಗಿಸಿ, ಮನಸ್ಸನ್ನು ಒಂದೇ ವಿಷಯ ಚಿಂತನೆಯಲ್ಲಿ ನಿಲ್ಲಿಸುವಂತೆ ಮಾಡುವುದೇ ಈ ಸಾಧನಾ ಕ್ರಮದ ಗುರಿ. ಸ್ತ್ರೀಸಂಗದಲ್ಲಿ ತೀವ್ರ ಆಸಕ್ತಿ, ಮತ್ತು ಸಾವಿನ ಭಯ, ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಬಹುದು. ಸಾಧಕನನ್ನು ಇವೆರಡು ಅಜೇಯವಾದ ಭಾವಗಳಿಗೆ ತುತ್ತುಮಾಡಿದಾಗ, ಅವನ ಚಿಂತೆಯೆಲ್ಲಾ ಒಂದೇ ವಿಷಯದಲ್ಲಿ ಕೇಂದ್ರೀಕೃತವಾಗುವುದು. ಆಗ ಅವನನ್ನು ಅದೇ ಮಾರ್ಗದಲ್ಲಿ ಮುಂದುವರೆಯಲು ಎಡೆಗೊಡದೆ, ತಂತ್ರಗಳು ಏಕಾಗ್ರತೆ ಪಡೆದ ಚಿತ್ತವನ್ನು ಈಶ್ವರನ ಮೇಲೆ ತಿರುಗಿಸುವಂತೆ ಉಪದೇಶಿಸುವುವು. ಈ ವಿಧವಾದ ಸಾಧನೆಯಿಂದ ಕೆಲಸವು ಸುಲಭವಾಗುವುದು. ದೂರದರ್ಶಕ ಯಂತ್ರವನ್ನು ಸರಿಪಡಿಸಿಕೊಳ್ಳಲು, ನಕ್ಷತ್ರಗಳನ್ನು ನೋಡುವುದರ ಮೊದಲು, ವಿಶ್ವದ ಯಾವುದಾದರೊಂದು ದೂರವಸ್ತುವಿನ ಮೇಲೆ ಕೇಂದ್ರೀಕರಿಸುವಂತೆ, ಈ ಸಾಧನೆಯೂ, ಮನಸ್ಸು ದೇವರೆಡೆ ನಿಲ್ಲುವುದಕ್ಕೆ ಮೊದಲು ಮತ್ಯಾವುದಾದರೊಂದು ವಿಷಯದಲ್ಲಿ ನಿಲ್ಲುವಂತೆ ಮಾಡುವುದು. 
 
            ಸಾರಾಯಿ ಸೇವಿಸಿ, ಇಲ್ಲವೆ ಸ್ತ್ರೀಯರ ಜತೆಯಲ್ಲಿದ್ದು ಕಾಮಾಸಕ್ತಿಯನ್ನು ಉನ್ನತಸ್ಥಿತಿಗೆ ಹೆಚ್ಚಿಸಿ, ಸಾಧಕನು ದೇವರ ಧ್ಯಾನದಲ್ಲಿ ಮಗ್ನನಾಗಬೇಕೆಂದು, ತಂತ್ರಗಳು ಹೇಳುವುದು ಈ ಕಾರಣಕ್ಕಾಗಿಯೇ. ಇನ್ನು ಕೆಲವು ಸಾಧನೆಗಳಲ್ಲಿ ಭಕ್ತನು ಭಯಾನಕ ಸನ್ನಿವೇಶಗಳಲ್ಲಿ ಕುಳಿತು, ಧ್ಯಾನಾಸಕ್ತನಾಗಬೇಕೆಂದು ಹೇಳಿವೆ. ಸ್ಮಶಾನದಲ್ಲಿ ಏಕಾಕಿಯಾಗಿ ಅಮಾವಾಸ್ಯೆಯ ರಾತ್ರಿ ಶವದಮೇಲೆ ಕುಳಿತು ಧ್ಯಾನಮಾಡೆಂದು ವಿಧಿಸುವುವು. 
 
            ಈ ತಂತ್ರೋಪಾಯಗಳು ಸಾಧಕನನ್ನು ಜಾಗ್ರತೆ ಗುರಿಮುಟ್ಟುವಂತೆ ಮಾಡುವುದೇನೋ ನಿಜ. ಆದರೆ ಅಜಾರೂಕರಿಗೆ ಈ ಮಾರ್ಗವು ಅಪಾಯದಿಂದ ತುಂಬಿದೆ. ಸರ್ವಸಂಗಪರಿತ್ಯಾಗಿಯು, ಈ ಮಾರ್ಗವನ್ನು ಹಿಡಿದರೆ ಬಹಳ ಜಾಗರೂಕನಾಗಿರಬೇಕು. ಈ ಧೀರಸಾಧನೆಗಳು ವಿಧಿಸುವಂತೆ ಭಾವಗಳನ್ನು ಉದ್ರೇಕಿಸಿಕೊಂಡಾಗ, ಆ ಭಾವಗಳಿಗೆ ತುತ್ತಾಗಿ ವಿಷಯಸುಖಾನುಭವಕ್ಕೆ ಇಳಿದುಬಿಡಬಹುದು. ಆಗ ಅವನ ದೇವರನ್ನು ಕಾಣುವ ಪ್ರಯತ್ನವೆಲ್ಲಾ ಅವನ ದೈಹಿಕ, ಮಾನಸಿಕನಾಶದಲ್ಲಿ ಪರ್ಯಾವಸಾನವಾಗುವುದು. 
 
            ತಾಂತ್ರಿಕ ಸಾಧನೆಯಿಂದ ಅನೇಕರು ಶ್ರೇಯಸ್ಸನ್ನು ಪಡೆದಿದ್ದಾರೆ. ರಾಮಪ್ರಸಾದ, ವಾಮಪಕ್ಷರು ಬಂಗಾಳದಲ್ಲಿ ಈ ಸಾಧನೆಯಲ್ಲಿ ಹೆಸರಾಂತರಾದವರು. ಈ ಎಲ್ಲ ತಂತ್ರಸಾಧನೆಗಳನ್ನು ಒಂದೊಂದಾಗಿ ಕೈಗೊಂಡು, ಎಲ್ಲದರಲ್ಲಿಯೂ ಜಯಶೀಲರಾಗಿ, ಈ ಮಾರ್ಗಗಳೆಲ್ಲ ದೈವಸಾಕ್ಷಾತ್ಕಾರಕ್ಕೆ ಸರಿಯಾದ ಮಾರ್ಗಗಳೇ ಎಂಬುದನ್ನು ಈ ಕಾಲದಲ್ಲಿ ಶ್ರೀ ರಾಮಕೃಷ್ಣರು ದೃಢಪಡಿಸಿರುವರು. 
 
(Hinduism at a glance, Written by Swami Nirvedaananda, "ಮಿಂಚುನೋಟಕೆ ಹಿಂದೂಧರ್ಮ", ಮೂಲ ಲೇಖಕರು: ಸ್ವಾಮಿ ನಿರ್ವೇದಾನಂದ. ಅನುವಾದ ಮತ್ತು ಪ್ರಕಟಣೆ: ಶ್ರೀರಾಮಕೃಷ್ಣಾಶ್ರಮ, ಮೈಸೂರು. ಈ ಪುಸ್ತಕದ ಭಕ್ತಿಯೋಗದ ತಾಂತ್ರಿಕ ಸಾಧನ ಅಧ್ಯಾಯದಿಂದ ಈ ಭಾಗವನ್ನು ಆಯ್ದುಕೊಳ್ಳಲಾಗಿದೆ. ಪುಟಗಳು - ೭೧ ರಿಂದ ೭೭)
 
ವಿ.ಸೂ. : ಶಂಕರಾಚಾರ್ಯರಿಂದ ರಚಿಸಲ್ಪಟ್ಟಿರುವ  "ತ್ರಿಪುರಸುಂದರಿ ಅಷ್ಟಕ" ಸ್ತೋತ್ರಮಾಲಿಕೆಯ ಇಂಗ್ಲೀಷ್ ವ್ಯಾಖ್ಯಾನ ಗ್ರಂಥವನ್ನು ದೇವಿಯ ಆರಾಧಕರಾದ ಶ್ರೀಯುತ ಎಸ್. ಕಾಮೇಶ್ವರ, ಮುಂಬಯಿ ಇವರು ಬರೆದಿರುತ್ತಾರೆ. ಶ್ರೀ ರಾಮಕೃಷ್ಣ ಮಠ, ಮೈಲಾಪೂರ್, ಮದ್ರಾಸು; ಇವರು ೧೯೮೬ನೇ ಇಸವಿಯಲ್ಲಿ ಇದರ ಎರಡನೆಯ ಆವೃತ್ತಿಯನ್ನು ಪ್ರಕಟಿಸಿರುತ್ತಾರೆ. ಇದನ್ನು ಕನ್ನಡಕ್ಕೆ ಅನುವಾದಿಸುವ ಒಂದು ಸಣ್ಣ ಪ್ರಯತ್ನವನ್ನು ನಾನು ಮಾಡಿ ಅದನ್ನು ಸಂಪದದಲ್ಲಿ ಕೆಲವು ಕಂತುಗಳಲ್ಲಿ ಪ್ರಕಟಪಡಿಸಬೇಕೆಂಬ ಆಶಯವನ್ನು ಹೊಂದಿದ್ದೇನೆ. ಈ ಸ್ತೋತ್ರಮಾಲಿಕೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಅದಕ್ಕೆ ಪೂರ್ವಭಾವಿಯಾಗಿ ಶಕ್ತಿ ಆರಾಧನೆ ಅಥವಾ ತಂತ್ರ ಸಾಧನೆಯನ್ನು ಅರಿತುಕೊಳ್ಳುವುದು ಅವಶ್ಯಕ. ಆ ದೃಷ್ಟಿಯಿಂದ ಈ ಬರಹವನ್ನು ಪೀಠಿಕೆಯಾಗಿ ಇಲ್ಲಿ ಕೊಟ್ಟಿದ್ದೇನೆ. 
 
ಚಿತ್ರ ಕೃಪೆ: ಗೂಗಲ್ - 
http://www.google.co.in/imgres?hl=en&sa=X&biw=1241&bih=533&tbm=isch&prmd=imvns&tbnid=nIv0HiKdkwXYDM:&imgrefurl=http://www.adityarudraksha.com/Shree_Lalitambica_Devi.html&docid=0NGVZCs14mqN6M&imgurl=http://www.adityarudraksha.com/images/LALITAMBICA-DEVI.jpg&w=282&h=388&ei=g8ApULWrPIHZrQeBp4GgDg&zoom=1&iact=hc&vpx=827&vpy=187&dur=1898&hovh=263&hovw=191&tx=103&ty=176&sig=110207964646523070807&page=4&tbnh=149&tbnw=108&start=48&ndsp=19&ved=1t:429,r:17,s:48,i:279
 
Rating
No votes yet

Comments