ಜೋಗಣಿ

ಜೋಗಣಿ

ಕವನ


ಜೋಗಣಿ 

ನಾ ಊರ್ ಹೊರಗಿರಾಕಿ
ತಂದಿ ಅನ್ನಾವ್ ಇಲ್ಲ
ಹೆತ್ತಾಕಿ ಹೇಳಿದ್ದು, 'ನೀ ದೇವ್ರ ಮಗಳು ಬಾಳ' ಅಂತ.
ಹೊಟ್ಟ್ಯಾಗ್ ಉರಿಯೋ ಹಸಿವಿಗಿ, ಆಕಿ ಮಾಡಿದ್
'ಜನ್ರ್ ಸೇವಾ' ಇಲ್ಲಿ ಹೇಳ್ವ್ಹಂತಹದಲ್ಲ.
ಬ್ಯಾಡ ಅಂದ್ರು ಬೆಳದ್ ನಿಂದ್ರೋ ಈ ಬೇವರ್ಸಿ ಮೈಗಿ
ತುಂಡು ಲಂಗದ ಕೇಡು.
ಯಾರದ್ದೋ ತೊಟ್ಟ ಹರದ್ ಬಟ್ಯಾಗ್ ತೊಡಿ ಹುಡುಕೋ
ಮ್ಯಾಲ್ ಜಾತಿ ಮಂದಿಗಿ ಆಗ ಜಾತಿ ನೆನಪಾಗಂಗೆಯಿಲ್ಲ.
ಹುಟ್ಟಿದ್ ಹದಿನಾರಕ್ಕ ಹೆರೆ ಬಂತು ಅಂತ ಊರ ಅಂತು.
ಹೆಣ್ ದೇವ್ರ ಜ್ಯಾತ್ರ್ಯಗ್ "ದೆವ್ರಿಗ್ ಬಿಟ್ಟದ್ದು" ಆಯ್ತು.
ಅದೇದಿನ ರಾತ್ರಿ ಗೌಡ್ರ ಮಗ್ಗಲಿನ್ಯಾಗ್ ಹಾಸಗಿ ಸುಖ !
ಮರುದಿನ ತೊಟ್ಟಿಲು, ಇಟ್ಟ ಹೆಸರು 'ಜೋಗಣಿ' !.
ಊರಿನ ಬರಗಾಲಕ್ಕ, ಸೀರಿ ಉಟ್ಟವರ ಹೂಸ್ತ್ಲಾಗಿನ್ ಮಾತು,
ಮರ್ವಾದಸ್ತುರ್ ಅನ್ನೋರ್ ಮಾತಿಗ್ ಸೋತು,
ನಾ ಮಾಡಿದ್ ಬೆತ್ಲೆಸೆವಾ, ಯಾರೂ ನೋಡಿಲ್ಲ ಅನ್ನುವಂಗಿಲ್ಲ !,
ಇದಾದ್ ಮ್ಯಾಕ್ ನಾ ಇದ್ದದ್ದು ಮಿಂಚ್ ಹುಳುದ್ದಂಗ...,
ಹಗಲಿನ್ಯಾಗ್ ಯಾರಿಗೂ ಕಂಡದ್ದು ಇಲ್ಲ, ನೆನಪಾದ್ದದ್ದು ಇಲ್ಲ !.
ಹೆಣ್ತಿ ಬ್ಯಾಸತ್ತೋರಿಗಿ ನಾ ಚೆಲುವಿ.
'ಯಪ್ಪಾ ಹಸಿವೋ' ಅನ್ನೋ ಹೈಕ್ಳ ಬಾಯಾಗ್
ಕಸಾ ತುಂಬಿದ ಮಂದಿ ಕಿಸ್ಯಾ ಖಾಲಿ ಮಾಡ್ಕೊಂಡಿದ್ದು
ನನ್ ಮಗ್ಗಲ್ನ್ಯಾಗ್ ಬಿದ್ದು ಖಂದ್ಯೇಲಿ ಆರಿಸಿದ್ಮ್ಯಾಕ....
ಹಗಲೆಲ್ಲ ಛೀ...ಥೂ ... ಎಂದುಗುಳಿದ ಸುಸಂಸ್ಕೃತ ನಾಯಿಗಳು,
ರಾತ್ರಿ ಬಂದು ನನ್ ಮೈ ನೆಕ್ಕಿದ್ದು,
ಕತ್ಲಾಗಿನ್ ದೃಶ್ಯ ಕಾಣಂಗಿಲ್ಲ .....
ಖೌದ್ಯಾಗಿನ್ ಮಾತು ಕೆಲ್ಸಂಗಿಲ್ಲ.....

 

ರಾಜೇಂದ್ರಕುಮಾರ್ ರಾಯಕೋಡಿ - Copyright©

Comments