ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ
ತ್ರಿಪುರ ಸುಂದರಿ ಅಷ್ಟಕಮ್
ಶಂಕರಾಚಾರ್ಯರಿಂದ ರಚಿಸಲ್ಪಟ್ಟಿರುವ "ತ್ರಿಪುರಸುಂದರಿ ಅಷ್ಟಕಂ" ಸ್ತೋತ್ರಮಾಲಿಕೆಯ ಇಂಗ್ಲೀಷ್ ವ್ಯಾಖ್ಯಾನ ಗ್ರಂಥವನ್ನು ದೇವಿಯ ಆರಾಧಕರಾದ ಶ್ರೀಯುತ ಎಸ್. ಕಾಮೇಶ್ವರ್, ಮುಂಬಯಿ ಇವರು ಬರೆದಿರುತ್ತಾರೆ. ಶ್ರೀ ರಾಮಕೃಷ್ಣ ಮಠ, ಮೈಲಾಪೂರ್, ಮದ್ರಾಸು; ಇವರು ೧೯೮೬ನೇ ಇಸವಿಯಲ್ಲಿ ಇದರ ಎರಡನೆಯ ಆವೃತ್ತಿಯನ್ನು ಪ್ರಕಟಿಸಿರುತ್ತಾರೆ. ಅದಕ್ಕೆ ಮುನ್ನುಡಿಯನ್ನು ಮದ್ರಾಸಿನ ಸ್ಟೂಡೆಂಟ್ಸ್ ಹೋಮಿನ ಶ್ರೀಯುತ ಅಣ್ಣ ಅವರು ಬರೆದಿರುತ್ತಾರೆ. ಈ ಲೇಖನದಲ್ಲಿ ಮುನ್ನುಡಿಯ ಮೂರು ಪುಟಗಳು ಮತ್ತು ಮುಖ್ಯ ಪುಸ್ತಕದ ಆರು ಪುಟಗಳ ಅನುವಾದವನ್ನು ಈ ಕಂತಿನಲ್ಲಿ ಕೊಟ್ಟಿರುತ್ತೇನೆ. ಮುಂದಿನ ಕಂತುಗಳಲ್ಲಿ ತ್ರಿಪುರ ಸುಂದರಿ ಅಷ್ಟಕದ ಒಂದೊಂದೇ ಶ್ಲೋಕದ ವ್ಯಾಖ್ಯಾನವನ್ನು ಆಸ್ವಾದಿಸುತ್ತಾ ಸಾಗೋಣ. ತ್ರಿಪುರ ಸುಂದರಿ ಲಲಿತಾಂಬಿಕೆಯು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ.
"ತ್ರಿಪುರ ಸುಂದರಿ ಅಷ್ಟಕಮ್" ಸ್ತೋತ್ರಮಾಲಿಕೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಅದಕ್ಕೆ ಪೂರ್ವಭಾವಿಯಾಗಿ ಶಕ್ತಿ ಆರಾಧನೆ ಅಥವಾ ತಂತ್ರ ಸಾಧನೆಯನ್ನು ಅರಿತುಕೊಳ್ಳುವುದು ಅವಶ್ಯಕ. ಇದಕ್ಕೆ ಪೂರಕವಾದ ಬರಹ - ತಂತ್ರ ಸಾಧನೆ (ಭಕ್ತಿಯೋಗದ ಅಂಶಗಳು) ಗಾಗಿ ಈ ಕೊಂಡಿಯನ್ನು ನೋಡಿ :
http://sampada.net/blog/%E0%B2%A4%E0%B2%BE%E0%B2%82%E0%B2%A4%E0%B3%8D%E0%B2%B0%E0%B2%BF%E0%B2%95-%E0%B2%B8%E0%B2%BE%E0%B2%A7%E0%B2%A8-%E0%B2%AD%E0%B2%95%E0%B3%8D%E0%B2%A4%E0%B2%BF%E0%B2%AF%E0%B3%8B%E0%B2%97%E0%B2%A6-%E0%B2%85%E0%B2%82%E0%B2%B6%E0%B2%97%E0%B2%B3%E0%B3%81/14/08/2012/37938
ಮುನ್ನುಡಿ
ಶಕ್ತಿ ಆರಾಧನೆಯು ಕರ್ಮಯೋಗ, ಭಕ್ತಿಯೋಗ ಮತ್ತು ಜ್ಞಾನಯೋಗಳ ಮಾರ್ಗಗಳನ್ನು ಸಮನ್ವಯಗೊಳಿಸುತ್ತದೆ. ಮತ್ತು ಇದು ಆಧುನಿಕ ವಿಜ್ಞಾನವು ಕಂಡುಕೊಂಡ ವಿಷಯಗಳಿಗೆ ಹೊರತಾಗಿಲ್ಲ. ವಿವಿಧ ಮತಗಳ ಅನುಯಾಯಿಗಳು ತಮ್ಮ ತಮ್ಮಲ್ಲೇ ಪರಸ್ಪರ ಜಗಳವಾಡಿಕೊಂಡರೆ; ಶಾಕ್ತನಿಗಾದರೋ ಇವರಾರೊಂದಿಗೂ ಕಲಹವಿಲ್ಲ. ಪೂರ್ವಕಾಲದಲ್ಲಿ ಶಂಕರ ಭಗವತ್ಪಾದರು ಮತ್ತು ಆಧುನಿಕ ಕಾಲದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಜೀವನದ ಮೂಲಕ ವಿವಿಧ ಮತಗಳ ಸಮನ್ವಯವು ಸಾಧ್ಯವಾಗುವುದಲ್ಲದೆ ಅದರ ಅವಶ್ಯಕತೆಯೂ ಇದೆ ಎನ್ನುವುದನ್ನು ತೋರಿಸಿಕೊಟ್ಟರು. ಸತ್ಯದೆಡೆಗೆ ಭಕ್ತಿಯಿಂದ ಕೈಗೊಂಡ ಮಾರ್ಗಗಳೆಲ್ಲವೂ ಅಂತಿಮ ಗುರಿಯನ್ನು ಮುಟ್ಟುತ್ತವೆ, ಮಂತ್ರಗಳು ಪರಿಣಾಮವನ್ನುಂಟು ಮಾಡುತ್ತವೆ, ದೇವತೆಗಳು ಮತ್ತು ಉಚ್ಛತಮ ಶಕ್ತಿಗಳು ಅಸ್ತಿತ್ವದಲ್ಲಿ ಇವೆ, ಮತ್ತು ಜಗನ್ಮಾತೆಯು ಹಂತ-ಹಂತವಾಗಿ ಸಾಧಕನನ್ನು ಉಚ್ಛಸ್ತರದಲ್ಲಿರುವ ಚೇತನಗಳತ್ತ ಕೊಂಡೊಯ್ಯುತ್ತಾ ಕಡೆಯಲ್ಲಿ ಅವನು ಪರಿಪೂರ್ಣನಾಗಿ ಅಂತಿಮ ಸತ್ಯದಲ್ಲಿ ಒಂದಾಗುವುದರೊಂದಿಗೆ ಪರ್ಯಾವಸಾನಗೊಳ್ಳುತ್ತವೆ ಎಂದೂ ಈ ಮಹನೀಯರು ತೋರಿಸಿಕೊಟ್ಟರು.
ಶಂಕರಾಚಾರ್ಯರ, ’ಸೌಂದರ್ಯಲಹರಿ’, ’ಲಲಿತಾ ತ್ರಿಶತಿ ಭಾಷ್ಯಮ್’, ’ಪ್ರಪಂಚ ಸಾರ’ ಮತ್ತು ಲೆಕ್ಕವಿಲ್ಲದಷ್ಟು ಸ್ತೋತ್ರಗಳು ನಮಗೆ ’ಶಕ್ತಿ ಆರಾಧನೆ’ಯ ರಹಸ್ಯಗಳ ಮೇಲೆ ಪ್ರಗಾಢವಾದ ಬೆಳಕನ್ನು ಚೆಲ್ಲುತ್ತವೆ. ’ತ್ರಿಪುರ ಸುಂದರಿ ಅಷ್ಟಕ’ವು ಸಂಕ್ಷಿಪ್ತವಾಗಿದ್ದು, ಮಧುರವಾದ ಛಂದಸ್ಸನ್ನು ಒಳಗೊಂಡು, ಶಕ್ತಿ ಆರಾಧನೆಯ ತತ್ವ ಸಿದ್ಧಾಂತವನ್ನು ಅಂಗೈಯಗಲದ ಚಿಪ್ಪಿನೊಳಗೆ ಸಂಪೂರ್ಣವಾಗಿ ಹಿಡಿದಿಟ್ಟಂತೆ ಇದೆ. ಈ ಚಿಕ್ಕ ಹೊತ್ತುಗೆಯಲ್ಲಿ ಮುಂಬೈನ ಶ್ರೀಯುತ ಎಸ್. ಕಾಮೇಶ್ವರ್ ಅವರು ತಮ್ಮ ಅಧ್ಯಯನ ಮತ್ತು ಧ್ಯಾನದ ಫಲದಿಂದಾಗಿ ಅದನ್ನು ಸಮರ್ಥವಾಗಿ ಅಭಿವ್ಯಕ್ತಗೊಳಿಸಿದ್ದಾರೆ. ’ತ್ರಿಪುರ ಸುಂದರಿ’ ಹೆಸರಿನ ಮಹತ್ವವನ್ನು ಸಂಪೂರ್ಣವಾಗಿ ಪರಿಚಯ ಭಾಗದಲ್ಲಿ ಪ್ರಚುರಪಡಿಸಿದ್ದಾರೆ. ಪ್ರತಿಯೊಂದು ಶ್ಲೋಕವನ್ನು ಮೂಲ ಸಂಸ್ಕೃತ (ದೇವನಾಗರಿ ಲಿಪಿ)ದಲ್ಲಿ ಕೊಟ್ಟು, ಅದನ್ನನುಸರಿಸಿ ಸುಂದರವಾದ ಗದ್ಯರೂಪದ ಅನುವಾದ ಮತ್ತು ಮುಖ್ಯವಾದ ವಿಷಯಗಳ ಕುರಿತು ವಿವರವಾದ ಟಿಪ್ಪಣಿಯನ್ನು ಬರೆದಿರುತ್ತಾರೆ. ದೇವಿಯ ಪವಿತ್ರ ಕ್ಷೇತ್ರಗಳ ಕುರಿತಾಗಿ ಮತ್ತು ದೇವಿಯ ಕೃಪಾಕಟಾಕ್ಷಕ್ಕೆ ಒಳಗಾದ ಮಹನೀಯರ ಕುರಿತಾಗಿ ಪ್ರಚಲಿತದಲ್ಲಿರುವ ಹಲವಾರು ಸ್ವಾರಸ್ಯಕರವಾದ ಘಟನೆಗಳು ಮತ್ತು ಸ್ಥಳ ಪುರಾಣಗಳನ್ನು ಲೇಖಕರು ಸಂಗ್ರಹಿಸಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.
’ಕುಂಡಲಿನಿಯೋಗ’, ’ಗುರು ತತ್ವ’, ’ಸಿದ್ಧಿ’ಗಳು ಮತ್ತು ಇವುಗಳಿಗೆ ಸಂಭಂದಿಸಿದ ಅನೇಕ ವಿಷಯಗಳು ಹಾಗು ಪರಿಣಾಮಗಳ ಕುರಿತಾಗಿ ವಿವರವಾಗಿ ಚರ್ಚಿಸುವುದಲ್ಲದೆ ಅವಕ್ಕೆ ಪುರಾವೆಗಳನ್ನು ಶಾಸ್ತ್ರಗ್ರಂಥಗಳಿಂದ ಮತ್ತು ವಿದ್ವಜ್ಜನ ಪಂಡಿತರು ಹಾಗೂ ಋಷಿಮುನಿಗಳು ರಚಿಸಿದ ಕೃತಿಗಳಿಂದ ಉದಾಹರಿಸುವುದಲ್ಲದೆ ಅವಕ್ಕೆ ಸೂಕ್ತ ನಿರ್ಣಯಗಳನ್ನು ಕೂಡಾ ಮಂಡಿಸಿದ್ದಾರೆ. ಉದಾಹರಣೆಗೆ, ಸಿದ್ಧಿಗಳ ಕುರಿತಾಗಿ ಲೇಖಕರು, ಸ್ವಾಮಿ ವಿವೇಕಾನಂದರ ಹೇಳಿಕೆಯನ್ನು ದಾಖಲಿಸುತ್ತಾರೆ - "ಈ ವಿಧವಾದ ಶಕ್ತಿಗಳು ಅಂತಿಮ ಗುರಿಯಾಗಿರಿಸಿಕೊಂಡ ನಿತ್ಯಶುದ್ಧನೂ, ನಿತ್ಯಮುಕ್ತನೂ ಆದ ’ಚೈತನ್ಯ ಸ್ವರೂಪಿ’ಯನ್ನು ಕುರಿತಾದ ಜ್ಞಾನವನ್ನು ಪಡೆಯಲು ತೊಡಕುಗಳಾಗಿವೆ. ನನಗಾದರೋ, ಇವು ದಾರಿಯಲ್ಲಿರುವ ಅಡ್ಡಿಗಳು, ಇವುಗಳನ್ನು ಯೋಗಿಯು ತಿರಸ್ಕರಿಸಿದರೆ, ಅವನು ಅಂತಿಮ ಸತ್ಯವನ್ನು ಮನಗಾಣುತ್ತಾನೆ. ಒಂದು ವೇಳೆ ಯೋಗಿಯಾದವನು ಇವುಗಳನ್ನು ಪಡೆಯುವ ಪ್ರಲೋಭನೆಗೊಳಪಟ್ಟರೆ ಅವನ ಸಾಧನೆಯ ಹಾದಿಯು ಅಂತ್ಯವಾಗುತ್ತದೆ".
ಲೇಖಕರು ’ಶ್ರೀ ವಿದ್ಯಾ’ ಎಂದೂ ಕರೆಯಲ್ಪಡುವ ಲಲಿತಾ ತ್ರಿಪುರ ಸುಂದರಿ ದೇವಿಯ ಗಹನವಾದ ವಿಚಾರಗಳನ್ನು ಸರಳ ಭಾಷೆಯಲ್ಲಿ ವಿವರಿಸಿದ್ದು ಅವರ ಈ ಪ್ರಯತ್ನಕ್ಕೆ ದೇವಿಯ ಕೃಪಾಶೀರ್ವಾದವು ಲಭ್ಯವಾಗಿದೆ.
-'ಅಣ್ಣ', ರಾಮಕೃಷ್ಣ ಮಿಷನ್, ಸ್ಟೂಡೆಂಟ್ಸ್ ಹೋಮ್, ಮದ್ರಾಸು - ೬೦೦ ೦೦೪.
__________________________________________________________________________________________
ಶ್ರೀ ತ್ರಿಪುರಸುಂದರಿ - ಪರಿಚಯ
ದೇವಿಯ ಹಲವು ಬಿರುದಾಂಕಿತಗಳಲ್ಲಿ 'ತ್ರಿಪುರ ಸುಂದರಿ'ಯು ಒಂದು. ಅದರ ಅರ್ಥ ಆಕೆ ಮೂರು ಲೋಕಗಳ ಚೆಲುವೆ ಅಥವಾ ಮೂಜಗಗಳಲ್ಲಿ ಅಪ್ರತಿಮ ಸೌಂದರ್ಯವತಿಯೆನ್ನುವುದು.
ತ್ರಿಪುರಾ
ಈ ಶಬ್ದವನ್ನು ಹಲವಾರು ರೀತಿಯಲ್ಲಿ ವಿವರಿಸಬಹುದಾಗಿದೆ.
೧) ತ್ರಿದೇಹಿ - ಪರಮಶಿವನು ಬ್ರಹ್ಮ-ವಿಷ್ಣು-ರುದ್ರ ಇವರ ಸಂಕೀರ್ಣವೆಂದು ಭಾವಿಸಲಾಗಿದೆ. ಕಾಳಿಕಾ ಪುರಾಣವು, ಪ್ರಥಮ ತತ್ವವೆಂದು ಕರೆಯಲ್ಪಡುವ ಪ್ರಧಾನದ ಇಚ್ಛೆಯಂತೆ, ಶಿವನ ದೇಹವು ಮುಮ್ಮಡಿಯಾಯಿತು; ಮೇಲಿನ ಭಾಗವು ಬ್ರಹ್ಮನದಾದರೆ, ಮಧ್ಯಭಾಗವು ವಿಷ್ಣುವಿನದು ಮತ್ತು ಕೆಳಗಡೆಯ ಭಾಗವು ರುದ್ರನದು. ಈ ಮೂರು ದೇಹಗಳು ಶಿವನಲ್ಲಿ ಇರುವುದರಿಂದ, ಅವನು ’ತ್ರಿಪುರ’ (ತ್ರಿದೇಹಿ) ಎಂದು ಕರೆಯಲ್ಪಟ್ಟರೆ ಅವನ ಸಂಗಾತಿಯು ’ತ್ರಿಪುರಾ’.
ಈ ಸಂದರ್ಭದಲ್ಲಿ, ಆಂಧ್ರ ಪ್ರದೇಶದ ಕಾಳಹಸ್ತಿಯಿಂದ ಇಪ್ಪತ್ತು ಮೈಲುಗಳಷ್ಟು ದೂರವಿರುವ ಗುಡಿಮಲ್ಲಮ್ ಎನ್ನುವ ಊರಿನಲ್ಲಿರುವ ಲಿಂಗದ ಬಗ್ಗೆ ತಿಳಿದುಕೊಳ್ಳುವುದು ಆಸಕ್ತಿದಾಯಕವಾಗಿದೆ. "ಇಲ್ಲಿರುವ ಲಿಂಗವು ಪರಶುರಾಮನಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದು, ಕೆಳಗಿನ ಭಾಗವು ಓರ್ವ ಗಂಧರ್ವನನ್ನು (ಸಂಗೀತಕ್ಕೆ ಉಪದೇವತೆಗಳೆಂದು ಪರಿಗಣಿಸಲ್ಪಟ್ಟವರ ಗುಂಪಿಗೆ ಸೇರಿದವನು) ಹೋಲುತ್ತದೆ; ಮಧ್ಯ ಭಾಗವು ತಲೆಗೆ ಮುಂಡಾಸು ಸುತ್ತಿರುವ ಪರಶುರಾಮನನ್ನು ಒಳಗೊಂಡರೆ, ಮೇಲ್ಭಾಗವು ಶಿವನ ಪ್ರತೀಕವಾದ ಲಿಂಗವಾಗಿದೆ. ಯಾವುದೋ ಒಂದು ಶಾಪಾರ್ಥವಾಗಿ ಬ್ರಹ್ಮನು ಚಿತ್ರಸೇನ ಎನ್ನುವ ಹೆಸರಿನ ಗಂಧರ್ವನಾದನು. ಈ ಕಾರಣದಿಂದ ಲಿಂಗದ ಕೆಳಗಿನ ಭಾಗವು ಬ್ರಹ್ಮನಾದರೆ, ಮಧ್ಯಭಾಗವು ವಿಷ್ಣುವನ್ನು ಪ್ರತಿನಿಧಿಸುತ್ತದೆ; ಏಕೆಂದರೆ ಪರಶುರಾಮನು ವಿಷ್ಣುವಿನ ಅವತಾರವಾದ್ದರಿಂದ." (ಶ್ರೀ ಜಗದ್ಗುರುವಿನ ಉಪದೇಶಂಗಳ್ - ಮೂಲ: ತಮಿಳು(?) ಅನುಚ್ಛೇದ ಪುಟ ೨೩, ೧೯೫೭).
೨)ತ್ರಯೀಮಯೀ (ತ್ರಿವಿಧ ರೂಪಿಣಿ): ದೇವಿಯ ಮಂತ್ರವು 'ತ್ರಿ' ಅಥವಾ ಮೂರು ಅಕ್ಷರಗಳಿಂದ ಕೂಡಿದೆ, ಅವಳ 'ಪಂಚದಶಾಕ್ಷರಿ' (ಹದಿನೈದು ಅಕ್ಷರಗಳ) ಮಂತ್ರವು ಮೂರು ಕೂಟಗಳಿಂದ (ಉಚ್ಛ ಸ್ಥಾಯಿಗಳಿಂದ) ಕೂಡಿದೆ - ’ವಾಗ್ಭವ ಕೂಟ’, ’ಕಾಮರಾಜ ಕೂಟ’ ಮತ್ತು ’ಶಕ್ತಿ ಕೂಟ’; ಅವಳು ನಿವಸಿಸುವ ನಾಡಿಗಳು (ನರ ಕೇಂದ್ರಗಳು) ಮೂರು - ಸುಷುಮ್ನಾ, ಪಿಂಗಳ ಮತ್ತು ಇದಾ; ಅವಳ ಶಕ್ತಿಗಳು ಮೂರು - ಇಚ್ಛಾ ಶಕ್ತಿ (ಸಂಕಲ್ಪ), ಕ್ರಿಯಾ (ಕಾರ್ಯ) ಶಕ್ತಿ ಮತ್ತು ಜ್ಞಾನ (ಚೈತನ್ಯ) ಶಕ್ತಿ; ದೇವಿಯು ನಿವಸಿಸುವ ಶ್ರೀ ಚಕ್ರವು ಜ್ಯಾಮಿತಿಯ ಮೂರು ಅಂಶಗಳಾದ ವೃತ್ತಗಳು, ಕೋನಗಳು ಮತ್ತು ರೇಖೆಗಳಿಂದ ರಚಿಸಲ್ಪಟ್ಟಿದೆ; ಅವಳು ಅಂತರ್ಯಾಮಿಯಾಗಿರುವ ಲೋಕಗಳು ಮೂರು - ಸ್ವರ್ಗಲೋಕ, ಭೂಲೋಕ ಮತ್ತು ಪಾತಾಳ ಲೋಕ; ಅವಳು ಸರ್ವಾಂತರಯಾಮಿಯಾಗಿರುವ ಪವಿತ್ರ ಸ್ಥಳಗಳಲ್ಲೆಲ್ಲಾ ಅವಳು ಮೂರು ರೀತಿಗಳಲ್ಲಿ ಇರುತ್ತಾಳೆ - ಸ್ಥೂಲ ಶರೀರ, ಸೂಕ್ಷ್ಮ ಶರೀರ ಮತ್ತು ಕಾರಣ ಶರೀರ; ಅವೆಲ್ಲವುಗಳಿಗೆ ಮೂರು ಸ್ಥಿತಿಗಳಿವೆ - ಜಾಗ್ರತ್ (ಎಚ್ಚರದ ಸ್ಥಿತಿ), ಸ್ವಪ್ನ (ಕನಸಿನ ಸ್ಥಿತಿ) ಮತ್ತು ಸುಷುಪ್ತಿ (ಗಾಢನಿದ್ರೆಯ ಸ್ಥಿತಿ). ವಿಶ್ವದ ಮೂಲ ಪ್ರಕೃತಿ ಅಥವಾ ಪ್ರಥಮ ತತ್ವವಾಗಿ, ದೇವಿಯು ಅಂತರ್ಯಾಮಿಯಾಗಿರುವ ಈ ಜಗತ್ತು ಮೂರುಗುಣ ಅಥವಾ ಶಕ್ತಿಗಳ ಮಾರ್ಪಾಡುಗಳಿಂದ ಉಂಟಾಗಿದೆ - ಸತ್ವ (ಲಯಬದ್ಧತೆ), ರಜಸ್ (ಚಟುವಟಿಕೆ) ಮತ್ತು ತಮಸ್ (ನಿರ್ಲಿಪ್ತತೆ).
೩)ತ್ರಿಮೂರ್ತಿಗಳಿಗೆ ಪೂರ್ವಿಕಳು: ಬ್ರಹ್ಮ-ವಿಷ್ಣು-ರುದ್ರ - ಇವರ ಬಗ್ಗೆ ಪೂಜ್ಯ ಋಷಿಯಾದ ಅಭಿಯುಕ್ತನು ಹೀಗೆ ಹೇಳಿರುವನು, "ಏಕೆಂದರೆ ದೇವಿಯು ಈ ಮೂರು ರೂಪಗಳನ್ನು (ತ್ರಿಮೂರ್ತಿಗಳನ್ನು) ಸೃಷ್ಟಿಸಿದ್ದರಿಂದ, ಏಕೆಂದರೆ ಅವಳು ಎಲ್ಲರಿಗಿಂತಲೂ ಹಿಂದಿನವಳು (ಪುರೋಭವ), ಏಕೆಂದರೆ ಅವಳು ಮೂರು ರೂಪಗಳಲ್ಲಿ ಅಸ್ತಿತ್ವದಲ್ಲಿರುವುದರಿಂದ (ತ್ರಯೀಮಯಿ), ಏಕೆಂದರೆ ಈ ಮೂರು ಲೋಕಗಳು ಲಯವಾದ ನಂತರವೂ ಅವಳು ಇವನ್ನು ಪುನಃ ಸೃಷ್ಟಿಸುವುದರಿಂದ ತಾಯಿ 'ಅಂಬಿಕಾ'ಗೆ ತ್ರಿಪುರಾ ಎನ್ನುವುದು ಅತ್ಯಂತ ಸೂಕ್ತವಾದ ಹೆಸರು. (ತ್ರಿಮೂರ್ತಿರ್ ಸರ್ಗಚ್ಛ ಪುರೋಭವತ್ವತ್ ತ್ರಯೀಮಯತ್ವಾಚ್ಛ ಪ್ರಾಯೋಂಬಿಕಾಯಾಸ್ತ್ರಿಪುರೇತಿ ನಾಮ (ಉಲ್ಲೇಖ - ನಟನಾನಂದನಾಥನ ಕಾಮಕಲಾವಿಲಾಸದ ೧೩ ಮತ್ತು ೧೪ನೇ ಶ್ಲೋಕಗಳಿಗೆ ಬರೆದ ವ್ಯಾಖ್ಯಾನ, ಇಂಗ್ಲೀಷ ಅನು: ಸರ್ ಜಾನ್ ವುಡ್ರಾಫ್).
ಸುಂದರಿ-ಚೆಲುವೆ: ಪ್ರೀತಿಯುಂಟು ಮಾಡುವುದು ಮತ್ತು ಸಂತೋಷವನ್ನು ಉಕ್ಕಿಸುವುದು ಸೌಂದರ್ಯ ಎನ್ನುವ ವಸ್ತುವಿನಲ್ಲಿ ಬೇರ್ಪಡಿಸಲಾಗದೆ ಇರುವ ಗುಣಗಳು. "ಒಂದು ಸುಂದರವಾಗಿರುವ ವಸ್ತುವು ನಿರಂತರವಾದ ಸಂತಸಕ್ಕೆ ಕಾರಣ" (ಕೀಟ್ಸ್, ಎಂಡಿಮಿಯಾನ್). [A thing of beauty is a joy for ever (Keats, Endymion)]. ಒಂದು ಪರಿಮಿತ ವಸ್ತುವಿನೊಳಗೆ ಅಪ್ರತಿಹತವಾದ ಆನಂದವು ಇರಲಾರದು; ಅದರಿಂದ ದೊರಕುವ ಆನಂದವು ಶಾಶ್ವತವಲ್ಲದ್ದು(ನಶ್ವರವಾದದ್ದು). ಶ್ರುತಿಗಳು ಸಾರುತ್ತವೆ, "ಯಾವುದು ಅನಂತವೋ ಅದರಲ್ಲಿ ಪರಮಾನಂದವು ಇರುತ್ತದೆ, ಯಾವುದು ಪರಿಮಿತವೋ (ಸಾಂತವೋ) ಅದರಲ್ಲಿ ಪರಮಾನಂದವು ದೊರಕಲಾರದು, ಅನಂತತೆಯೊಂದೇ ಪರಮಾನಂದವು". (ಯೋವೈ ಭೂಮಾ ತತ್ ಸುಖಮ್; ನಾಲ್ಪೇ ಸುಖಮಸ್ತಿ; ಭೂಮೈವ ಸುಖಮ್. ಚಾಂದೋಗ್ಯ ಉಪನಿಷತ್ತು,೭.೩೩.೧). ಇದನ್ನು ವಿವರಿಸುತ್ತಾ ಆದಿ ಶಂಕರರು ಹೀಗೆಂದು ಅಭಿಪ್ರಾಯ ಪಡುತ್ತಾರೆ, "...... ಯಾವುದು ಅಲ್ಪವೋ ಅದರಲ್ಲಿ ಪರಮಾನಂದವು ಇರುವುದಿಲ್ಲ; ಏಕೆಂದರೆ ಅಲ್ಪವಾದುದರಲ್ಲಿ ಅಥವಾ ಸಣ್ಣದರಲ್ಲಿ ಯಾವಾಗಲೂ ಇರುವುದಕ್ಕಿಂತ ಇನ್ನೂ ಹೆಚ್ಚು ಬೇಕೆನ್ನುವ ಕೋರಿಕೆಯು ಉಂಟಾಗುತ್ತದೆ; ಈ ಕೋರಿಕೆಯು ಯಾತನೆ ಅಥವಾ ದುಃಖ/ತಾಪಕ್ಕೆ ಮೂಲ; ಮತ್ತು ಈ ಪ್ರಪಂಚದಲ್ಲಿ ನಮಗೆ ಕಂಡುಬರುವುದೇನೆಂದರೆ ಯಾವುದು ತಾಪಕ್ಕೆ ಕಾರಣವಾಗಿದೆಯೋ; (ಜ್ವರ ಹಾಗೂ ಇತರೇ ರೋಗಗಳು) - ಇವು ಪರಮಾನಂದವಲ್ಲ. ಆದ್ದರಿಂದ ಯಾವುದು ಅಲ್ಪವಾಗಿದೆಯೋ ಅದರಿಂದ ಆನಂದವುಂಟಾಗದೆಂದು ಹೇಳಿರುವುದು ಸರಿಯಾಗಿಯೇ ಇದೆ; ಆದ್ದರಿಂದ ಅನಂತವು ಮಾತ್ರವೇ ಪರಮಾನಂದವನ್ನುಂಟು ಮಾಡುತ್ತದೆ; ಏಕೆಂದರೆ ಅನಂತದಲ್ಲಿ ತಾಪವನ್ನುಂಟು ಮಾಡುವ (ಕೋರಿಕೆ ಮೊದಲಾದವು) ಯಾವುದೇ ಕಾರಣಗಳು ದೊರೆಯುವುದಿಲ್ಲ (ಇಂಗ್ಲೀಷ್ ಅನು: ಡಾll ಸರ್. ಗಂಗಾನಾಥ ಝಾ, ಪುಟ ೪೦೨, ೧೯೪೨).
ಕಾಲ, ದೇಶ ಮತ್ತು ಕಾರಣಗಳಿಗೆ ಅತೀತವಾಗಿ, ಅನಂತವು ರೂಪಾಂತರಕ್ಕೆ ಹೊರತಾಗಿದೆ; ಆದ್ದರಿಂದ ಅದು ಸಾರ್ವಕಾಲಿಕ ಸತ್ಯ. ಅನಂತವಾದ ಪರಮಾನಂದ ಮತ್ತು ಕೊನೆಗೊಳ್ಳದ ಸೌಂದರ್ಯಗಳು ಅಂತಿಮ ಸತ್ಯದ ಗುಣಗಳು. "ಸೌಂದರ್ಯವೇ ಸತ್ಯ ಮತ್ತು ಸತ್ಯವೇ ಸೌಂದರ್ಯ", ಎಂದು ಕೀಟ್ಸ್ ವಿವರಿಸುತ್ತಾನೆ (ಓಡ್ ಆನ್ ಏ ಗ್ರೀಷಿಯನ್ ಅರ್ನ್ - "Beauty is Truth, truth beauty" - Ode on a Grecian urn ). ಕಾಳಿದಾಸನು ಅದನ್ನು ಹಿಗ್ಗಿಸುತ್ತಾ, "ಸೌಂದರ್ಯವೆನ್ನುವುದು ಯಾವಾಗಲೂ ಮಾಸದೇ ಇರುವುದು, ಆದರೆ ತನ್ನ ತಾಜಾತನವನ್ನು ಪ್ರತಿಕ್ಷಣವೂ ನವೀಕರಿಸಿಕೊಳ್ಳುತ್ತದೆ" (ಪ್ರತಿಕ್ಷಣಂ ಯಾನ್ನವತಾಮ್ ಉಪೈತಿ ತದೇವ ರೂಪಮ್ ರಮಣೀಯತಾಃ, ಕುಮಾರ ಸಂಭವಮ್, ೩.೫೬). ಸಂತ ಅಗಸ್ಟೀನನು ಉದ್ಗರಿಸುತ್ತಾನೆ, "ಓ ಪುರಾತನ ಕಾಲದ ಚೆಲುವೆ ಆದರೂ ನಿತ್ಯನೂತನೆ!".
ಯಾವಾಗ ಪರಮಾನಂದವು ಮೂರ್ತ ರೂಪವನ್ನು ಪಡೆಯುತ್ತದೆಯೋ, ಅದು ಸುಂದರಿ, ’ಸರ್ವಾಂಗಸುಂದರಿ’ (ಲಲಿತಾ ತ್ರಿಶತಿ, ನಾಮಾವಳಿ ೧೩೦). "ಅವಳು ಎಲ್ಲಾ ಅಂಗಗಳಲ್ಲೂ, ಸರ್ವಾಂಗಗಳಲ್ಲೂ ಸೌಂದರ್ಯವತಿಯಾಗಿದ್ದಾಳೆ; ಅಂದರೆ ಎಲ್ಲಾ ಅವಯವಗಳು - ತಲೆ, ಕೈ, ಕಾಲು, ಮುಂತಾದವುಗಳು ಸರಿಯಾದ ಪ್ರಮಾಣದಲ್ಲಿ (ಪ್ರಮಾಣಬದ್ಧವಾಗಿ) ಸಾಮುದ್ರಿಕ ಶಾಸ್ತ್ರದಲ್ಲಿ ವಿಷದ ಪಡಿಸಿರುವಂತೆ ಇರುತ್ತವೆ. ಆದ್ದರಿಂದ ಸೌಂದರ್ಯದ ಎಲ್ಲಾ ಲಕ್ಷಣಗಳು ಅವಳಲ್ಲಿ ಮನೆಮಾಡಿವೆ (ಶಂಕರರ ಭಾಷ್ಯ, ಇಂಗ್ಲೀಷ್ ಅನುವಾದ: ಡಾll ಸೂರ್ಯನಾರಾಯಣ ಮೂರ್ತಿ).
ತ್ರಿಪುರಸುಂದರಿ.....
ಚ್ಯುತಿಯುಂಟಾಗುವ...(ನಿರಂತರ ಬದಲಾವಣೆ ಹೊಂದುತ್ತಿರುವ) - ಎಲ್ಲಾ ವಿಧವಾದ ಮೂರು ರೂಪಗಳಲ್ಲಿ, ಅಚ್ಯುತಳಾಗಿರುವವಳು ದೇವಿಯು, ಆದ್ದರಿಂದ ಅವಳು ತ್ರಿಪುರಸುಂದರಿ; ಮೂಜಗದ ಅಪ್ರತಿಮ ಚೆಲುವೆ, ಎಂದು ಕರೆಯಲ್ಪಟ್ಟಿದ್ದಾಳೆ. ಒಂದು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಆಸಕ್ತಿಕರ ವಿಷಯಗಳಲ್ಲಿ, ದೇವಿಯ ಎಲ್ಲಾ ರೂಪಾಂತರಗಳಲ್ಲಿ (ಅವತಾರಗಳಲ್ಲಿ) ಶ್ರೀ ರಾಮಕೃಷ್ಣ ಪರಮಹಂಸರು ಅನುಭವಿಸಿದವುಗಳಲ್ಲಿ (ಪ್ರತ್ಯಕ್ಷ ನೋಡಿದ್ದರಲ್ಲಿ/ಸಾಕ್ಷಾತ್ಕರಿಸಿಕೊಂಡದ್ದರಲ್ಲಿ) ರಾಜರಾಜೇಶ್ವರಿಯ ರೂಪವು ಅವರಿಗೆ ಅತ್ಯಂತ ರಮಣೀಯವಾಗಿ ಕಂಡಿತ್ತಂತೆ.
ವಿ.ಸೂ. : ಈ ಕಂತಿನ ಮುನ್ನುಡಿ ಮತ್ತು ಪರಿಚಯ ಭಾಗವು ’ತ್ರಿಪುರ ಸುಂದರಿ ಅಷ್ಟಕಮ್" - ಪ್ರಕಟಣೆ(೧೯೮೬): ಅಧ್ಯಕ್ಷರು, ಶ್ರೀ ರಾಮಕೃಷ್ಣ ಮಠ, ಮೈಲಾಪುರ್, ಮದ್ರಾಸ್ - ೬೦೦ ೦೦೪, ಪುಸ್ತಕದ ಮುನ್ನುಡಿಯ ನಾಲ್ಕು ಪುಟಗಳು ಮತ್ತು ಮುಖ್ಯ ಪುಸ್ತಕದ ಅರು ಪುಟಗಳ ಅನುವಾದದ ಭಾಗವಾಗಿದೆ.
ಚಿತ್ರ ಕೃಪೆ: ಗೂಗಲ್ -
http://www.google.co.in/imgres?hl=en&sa=X&biw=1517&bih=688&tbm=isch&prmd=imvns&tbnid=EOIlYRHkmPy9mM:&imgrefurl=http://www.flickr.com/photos/inspiring-place/4161856054/&docid=rYFRz65Q5Sm2NM&imgurl=http://farm3.staticflickr.com/2779/4161856054_35593aaea9.jpg&w=500&h=500&ei=i_ssUIK2HMLXrQfEtICwDw&zoom=1&iact=hc&vpx=1249&vpy=163&dur=2225&hovh=225&hovw=225&tx=151&ty=179&sig=110207964646523070807&page=2&tbnh=156&tbnw=144&start=28&ndsp=34&ved=1t:429,r:8,s:28,i:183
Rating
Comments
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ
In reply to ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ by nanjunda
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ
In reply to ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ by ksraghavendranavada
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ
In reply to ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ by Prakash Narasimhaiya
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ
In reply to ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ by ksraghavendranavada
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ
In reply to ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ by ಗಣೇಶ
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ
In reply to ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ by sathishnasa
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೧: ಮುನ್ನುಡಿ ಮತ್ತು ಪರಿಚಯ