ನಮಸ್ಕಾರ‌

ನಮಸ್ಕಾರ‌

ದಿನದ ಮೊದಲ ಬಾರಿಗೆ  ಗುರುಗಳೋ, ಹಿರಿಯರೋ, ಪರಿಚಿತರೋ ಅಥವ ಸಹೋದ್ಯೋಗಿಗಳೋ ಎದಿರಾದರೆ ‘ನಮಸ್ಕಾರ’ ಆನುವುದು ಭಾರತೀಯ ಸಂಸ್ಕೃತಿಯ ದ್ಯೋತಕ. ಹಾಗೆ ನಮಸ್ಕಾರ ಅನ್ನುವಾಗ ಗೊತ್ತಿಲ್ಲದೆ ಕೈ ಮುಗಿದಿರುತ್ತದೆ ಮತ್ತು ತಲೆ ಬಾಗಿ ವಂದಿಸುವುದು ನಡೆದಿರುತ್ತದೆ. ‘ನಂ’ ಧಾತುವಿನಿಂದ ನಿಷ್ಪನ್ನವಾದ ನಮಸ್ಕಾರ ‘ಬಾಗು’ ಅನ್ನುವ ಅರ್ಥವನ್ನೇ ಹೊಂದಿದೆ. ಅಂದರೆ ನಮಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ, ಜ್ಞಾನದಲ್ಲಿ ಮುಂದಿರುವವರ ಮುಂದೆ ಬಾಗಲೇ ಬೇಕೆಂಬುದು ಅಂತರಾರ್ಥ. ನನ್ನದೆಂಬುದು ಯಾವುದೂ ಇಲ್ಲ, ಎಲ್ಲವೂ ಆ ಸರ್ವಶಕ್ತನದು ಅನ್ನುವ ನಿರಹಂಕರಣ ಕೂಡ ನಮಸ್ಕರಿಸುವುದರಲ್ಲಿದೆ. ತಲೆ ಎಂದರೆ ಶಿರ. ಅರ್ಥಾಂತರದಲ್ಲಿ ಮನುಷ್ಯ ದೇಹದ ಕಳಸ. ಅಂದರೆ ಅದು ಅಹಂಕಾರದ ಕೇಂದ್ರ ಸ್ಥಳ. ತಲೆ ತಗ್ಗಿಸಿ ಅಂದರೆ ಅಹಂಕಾರವನ್ನು ಅದುಮಿ ಅನ್ಯರಿಗೆ ಗೌರವ ಕೊಡುವ ಕ್ರಿಯೆ ನಮಸ್ಕರಿಸುವುದರಲ್ಲಿದೆ. ಆದ್ದರಿಂದಲೇ ಗೌರವಪೂರ್ವಕ ನಮಸ್ಕಾರವೆಂದರೆ ತಲೆ ಬಾಗಿಸಿ ಕೈ ಮುಗಿಯುವ ಅಭಿವಾದನೆ. ಹೆತ್ತವರಿಗೆ, ಗುರುಗಳಿಗೆ, ಆಶ್ರಯ ದಾತರಿಗೆ, ಅನ್ನದಾತರಿಗೆ ನಮಸ್ಕರಿಸುವುದು ನಮ್ಮ ಸಂಪ್ರದಾಯ. ನಂ- ಅಂದರೆ ನಮಿಸು ಬಾಗು ಅನ್ನುವುದು ಹಳೆಯ ಕಾಲದ ದೇವಸ್ಥಾನಗಳ ಗರ್ಭಗುಡಿ ಹೊಕ್ಕಾಗ ಅರಿವಾಗುತ್ತದೆ. ಮನುಷ್ಯಾಕೃತಿಯ ಎತ್ತರಕ್ಕಿಂತಲೂ ಕಡಿಮೆ ಎತ್ತರದ ಈ ಗರ್ಭಗುಡಿಯೊಳಗೆ ಪ್ರವೇಶಿಸಬೇಕೆಂದರೆ ತಲೆ ತಗ್ಗಿಸಿಯೇ ನಡೆಯಬೇಕು. 


ತಲೆ ಬಾಗಿಸಿ, ಕೈ ಮುಗಿದು, ಧ್ಯಾನಿಸುತ್ತಲೇ ಪ್ರದಕ್ಷಿಣೆ ಹಾಕಿ ದೀರ್ಘದಂಡ ನಮಸ್ಕ್ಕಾರ ಹಾಕುವುದರಲ್ಲಿ ಶಾರೀರಿಕ ಕ್ರಿಯೆಗಳಷ್ಟೇ ಅಲ್ಲದೆ ಅವು ಮಾನಸಿಕ ಸಿದ್ಧತೆಯನ್ನೂ ಬೇಡುತ್ತವೆ. ಆರ್ತತೆಯ ಭಾವವಿಲ್ಲದಿದ್ದಲ್ಲಿ ಮನಸ್ಸು ಮಣಿಯುವುದಿಲ್ಲ. ಮನಸ್ಸು ಮಣಿಯದೇ ಅಹಂಕಾರ ತೀರುವುದಿಲ್ಲ. ಹಾಗಿಲ್ಲದ ನಮಸ್ಕಾರ ಒಣ ಶಿಷ್ಟಾಚಾರವಾಗುತ್ತದೆಯೇ ವಿನಾ ಸದ್ಗುಣವಾಗುವುದೇ ಇಲ್ಲ. ದೇಹ ಮನಸ್ಸು ಮತ್ತು ಆಲೋಚನೆಗಳು ಒಂದು ಸಹಜ ಬಿಂದುವಿನಲ್ಲಿ ಸಂಧಿಸಿದಾಗಷ್ಟೇ ವಿನಯ ಒಡಮೂಡುತ್ತದೆ.ಅಹಂಕಾರ ಅಳಿಯುತ್ತದೆ. ಆದರೆ ಇಂದಿನ ವರ್ತಮಾನದಲ್ಲಿ ವ್ಯಾವಹಾರಿಕತೆಯೇ ಮುಖ್ಯವಾದ ಲೌಕಿಕದಲ್ಲಿ ನಮಸ್ಕಾರವೆನುವುದು ಶುಷ್ಕ ಯಾಂತ್ರಿಕ ಕ್ರಿಯೆಯಾಗುತ್ತಿದೆ. ನಮಸ್ಕರಿಸಲ್ಪಡಬೇಕಾದ ಜಾಗದಲ್ಲಿರುವವರು ಜಾತಿ ಆಧಾರಿತ, ಲಿಂಗ ಬೇಧದ ಪ್ರತೀಗಾಮಿ ನಡೆಯುಳ್ಳವರಾಗಿದ್ದರೆ ನಮಸ್ಕ್ಕರಿಸುವವನಿಗೆ ಸಹಜ ಗೌರವ, ವಿನಯ, ವಿವೇಚನೆಗಳು ದೂರವಾಗಿ ಶಿಷ್ಟಾಚಾರದ ಕ್ರಿಯೆಯಾಗಿ ಉಳಿಯುತ್ತದೆ. ಇಷ್ಟಕ್ಕೂ ನಮಸ್ಕಾರ ಅಂದವರ ಮನಸ್ಸಿನಲ್ಲಿ ಇರುವ ನಿಜಭಾವವೇನು ಅನ್ನುವುದು ನಮಸ್ಕರಿಸಲ್ಪಟ್ಟವರಿಗೆ ಅರಿಯುವ ರೀತಿಯಾದರೂ ಇಲ್ಲವಲ್ಲ! ದ್ರೋಹ ಚಿಂತನ, ಸ್ವಾರ್ಥ, ಸೇಡಿನ ಭಾವ ಇದ್ದೂ ವಿನಯದ ನಾಟಕ ನಡೆದಿರಬಹುದಲ್ಲ?

ಮಣಿದಿರಲಿ ಮುಡಿ, ಮತ್ತೆ ಮುಗಿದಿರಲಿ ಕಯ್, ಮತ್ತೆ ಮಡಿಯಾಗಿರಲಿ ಬಾಳ್ವೆ ಅನ್ನುವುದು ಕುವೆಂಪು ನಮಗೆ ಕೊಟ್ಟ ದೃಷ್ಟಿ. ಕೇವಲ ಆಂಗಿಕ ವಿನ್ಯಾಸವನ್ನೇ ಅಲ್ಲದೆ ಮುಂದಿನ ಬದುಕಲ್ಲೂ ಕಳಂಕ ತಟ್ಟದಂತೆ ಬಾಳಬೇಕೆನ್ನುವ ಪರಿ ಅದೆಷ್ಟು ಸೊಗಸಾದುದು. ಕಳಂಕ ಬರದ ಹಾಗೆ ಅಂದರೆ ಶುಚಿತ್ವದ ಘನಸ್ತಿಕೆ. ಅದನ್ನು ಕಾಪಿಟ್ಟುಕೊಳ್ಳುವುದೆಂದರೆ ಅದೊಂದು ಅಸಿಧಾರ ವ್ರತ. ಅಂದರೆ ಕತ್ತಿಯಲುಗಿನ ಮೇಲಣ ನಡೆ. ಕೊಂಚ ಎಚ್ಚರತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಧೃಢ ಇಚ್ಛಾಶಕ್ತಿ, ಕನಿಷ್ಠ ಬದ್ಧತೆ ಮತ್ತು ಲೋಕ ನಿಂದನೆಯ ಭಯ ಶುಚಿತ್ವದ ಪರಮ ಸೋಪಾನಗಳು. ಈ ಸೋಪಾನಗಳಲ್ಲಿ ಕೊಳೆ ಕೂರದಂತೆ ಕಾಪಿಡುವ ಕ್ರಿಯೆ ಲಘುವಾದುದೇನೂ ಅಲ್ಲ. ಅದೊಂದು ಭಾವಶುದ್ಧಿಯ ನಿತ್ಯ ಸೂತ್ರ.  ನಿರಂತರವಾಗಿ ಮನವನ್ನು ಶೋಧಿಸಿಕೊಳ್ಳುತ್ತಲೇ ಇರುವವರು ಮಾತ್ರ ಇದನ್ನು ಮಾಡಬಲ್ಲರು. ಆದರೆ ಮನಸ್ಸಿನ ಮೇಲೆ ಲೌಕಿಕದ ಕೊಳೆ ಕಲ್ಮಶಗಳನ್ನು ಹಾಯಗೊಡದೆ ಚಿತ್ತಚಾಂಚಲ್ಯಕ್ಕೊಳಗಾಗದೇ ಭಾವನೈರ್ಮಲ್ಯ ಕಾಪಾಡಿಕೊಳ್ಳುವುದು ಎಲ್ಲರಿಂದ ಸಾಧ್ಯವಿಲ್ಲದ ಸಂಗತಿ. ‘ಮನವ ಶೋಧಿಸಬೇಕು ನಿಚ್ಚ, ದಿನ ದಿನ ಮಾಡುವ ಪಾಪ ಪುಣ್ಯದ ವೆಚ್ಚ’ ಅನ್ನುವ ದಾಸರ ಮಾತು ಕೂಡ ಇದನ್ನೇ ಧ್ವನಿಸಿದೆ.

ಆದರೆ ಇತ್ತೀಚೆಗೆ ನಮ್ಮ ನಮಸ್ಕಾರಗಳೆಲ್ಲ ಲೌಕಿಕದ ರಿಚ್ಯುಯೆಲ್‍ಗಳಾಗಿ ಬದಲಾಗಿವೆ. ಅಂದರೆ ಗೌರವ ಭಾವ, ಪ್ರಪತ್ತಿ ಭಾವ, ಸ್ನೇಹ ಭಾವಗಳಿಲ್ಲದ ತೋರುಗಾಣಿಕೆಯ ನಮಸ್ಕಾರ ಕೈಕುಲುಕುವುದರೊಂದಿಗೆ ಮುಗಿಯುತ್ತಿದೆ. ತಲೆ ಬಾಗಿ ನಮಸ್ಕರಿಸುವುದಕ್ಕೂ ಕೈಕೊಟ್ಟು ಅಂದರೆ ಹಸ್ತ ಲಾಘವ ಮಾಡಿ ಯುದ್ಧಕ್ಕೆ ಆಹ್ವಾನಿಸುವುದಕ್ಕೂ ವ್ಯತ್ಯಾಸಗಳಿದ್ದೇ ಇವೆ. ಭಾವ ಶುದ್ಧಿಯು ಆತ್ಮ ಗೌರವಗಳಿಲ್ಲದಿದ್ದಲ್ಲಿ ಹುಟ್ಟುವುದು ಕಷ್ಟ ಸಾಧ್ಯದ ಮಾತು. ನಮಸ್ತೆ ಅನ್ನುವುದು ಇಂಥಲ್ಲಿ ಬರಿ ಹಾಜರಿಯ ಸಂಕೇತ ಮಾತ್ರವೇ ವಿನಾ ಭಾಗವಹಿಸುವಿಕೆಯ ದ್ಯೋತಕವಾಗುವುದಿಲ್ಲ.

 

Comments