ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ - ‍ಮಧೂರು

ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ - ‍ಮಧೂರು

ಕೇರಳ ರಾಜ್ಯದ ಕಾಸರಗೋಡುವಿನಿಂದ ಈಶಾನ್ಯಕ್ಕೆ ೭ ಕಿ.ಮೀ ದೂರದಲ್ಲಿರುವ ಕ್ಷೇತ್ರ ಮಧೂರು. ಇಲ್ಲಿ ಶ್ರೀಮದನಂತೇಶ್ವರನು ಪ್ರತಿಷ್ಠೆಗೊಂಡು ಪೂಜಿಸಲ್ಪಡುತ್ತಿರುವನಾದರೂ, ಗೋಡೆಯಲ್ಲಿ ಮೂಡಿಬಂದ ಶ್ರೀ ವಿನಾಯಕನೇ ಪ್ರಸಿದ್ಧನು. ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಕ್ಷೇತ್ರ. ಸ್ವಲ್ಪ ದೂರದಲ್ಲಿ ಕಾಣಿಸುವ ಬೆಟ್ಟಗಳು ಅದರ ತಪ್ಪಲಲ್ಲಿ ಇರುವ ತೆಂಗು-ಅಡಿಕೆ ತೋಟಗಳು ಕ್ಷೇತ್ರಕ್ಕೆ ಮೆರುಗನ್ನು ನೀಡುತ್ತದೆ. ದೇವಸ್ಥಾನದ ಮುಂಭಾಗದಲ್ಲಿ ಮಧುವಾಹಿನಿ ಹೊಳೆ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತದೆ. ಪೂರ್ವಾಭಿಮುಖವಾಗಿ ಗಜಪೃಷ್ಠಾಕಾರದ ಮೂರು ಅಂತಸ್ತಿನಲ್ಲಿ ಇರುವುದು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ. ಮೇಲಿನ ಎರಡು ಅಂತಸ್ತುಗಳಿಗೆ ತಾಮ್ರದ ಮತ್ತು ಕೆಳಗಿನ ಅಂತಸ್ತಿಗೆ ಹಂಚಿನ ಹೊದಿಕೆ. ದೇವಾಲಯದ ಸುತ್ತಲೂ ವಿವಿಧ ಕೆತ್ತನೆ ಕೆಲಸಗಳನ್ನು ಕಾಣಬಹುದು. ’ಗಜಪೃಷ್ಠ’ ಆಕಾರವು ಪ್ರಾಚೀನ ಬೌದ್ಧರ ಕೊಡುಗೆ ಎನ್ನುವ ಪ್ರತೀತಿಯಿದೆ. ಕರಾವಳಿಯ ಭಾರಿ ಮಳೆ ಮತ್ತು ಹವಾಮಾನಗಳು ಇವುಗಳ ರಚನೆಯ ಮೇಲೆ ಪ್ರಭಾವ ಬೀರಿದೆ. ಹಾಗೆ ನೇಪಾಳಿ ಶೈಲಿಯ ಪ್ರಭಾವವೂ ಇರಬಹುದು ಎಂದು ಊಹಿಸಲಾಗಿದೆ.

ದೇವಾಲಯದ ಪಶ್ಚಿಮ ಭಾಗದಲ್ಲಿ ಸಣ್ಣ ಗೋಪುರವಿದೆ. ಇಲ್ಲಿಂದಲೇ ಭಕ್ತರು ಆಗಮಿಸಬೇಕು. ದ್ವಾರದ ಎಡಭಾಗದಲ್ಲಿ ಭೋಜನ ಶಾಲೆಯಿದೆ. ಪಶ್ಚಿಮದ್ವಾರದಲ್ಲಿ ದೇವಾಲಯದ ಹಿಂಭಾಗ ಕಾಣಿಸುತ್ತದೆ. ಭೋಜನ ಶಾಲೆಯಿಂದ ಪೂರ್ವಕ್ಕೆ ಸ್ವಲ್ಪ ದೂರದಲ್ಲಿ ಪುಷ್ಕರಿಣಿಯಿದೆ. ಅಲ್ಲಿಂದ ಬಲಕ್ಕೆ ಚಲಿಸಿದರೆ ದೇವಸ್ಥಾನದ ಮುಂಭಾಗ. ದೇವಸ್ಥಾನದ ಮುಂಭಾಗದಲ್ಲಿ ಮಧುವಾಹಿನಿ ನದಿ ಕಾಣಿಸುತ್ತದೆ. ಮಳೆಗಾಲದಲ್ಲಿ ಉಕ್ಕಿ ಹರಿದು ದೇವಸ್ಥಾನಕ್ಕೆ ನುಗ್ಗುವುದು ಇದೆ. ದೇವಸ್ಥಾಕ್ಕೆ ಒಳಹೊಕ್ಕ ಕೂಡಲೇ ಎಡಕ್ಕೆ ಸೇವಾ ಕಚೇರಿಯಿದೆ. ಎಲ್ಲಾ ಪ್ರಕಟಣೆಗಳು/ಫಲಕಗಳು ಕನ್ನಡದಲ್ಲೂ ಇದೆ. ದೇವಸ್ಥಾನದ ಮುಂಭಾಗದಲ್ಲಿ ಕಂಚಿನ ದ್ವಜಸ್ತಂಭವನ್ನು ಕಾಣಬಹುದು. ಅನಂತೇಶ್ವರನ ಮೂರ್ತಿಯು ಪೂರ್ವಾಭಿಮುಖವಾಗಿ ಪ್ರತಿಷ್ಠೆಗೊಂಡಿದೆ. ದೇವಸ್ಥಾನಕ್ಕೆ ಸುತ್ತು ಬರಲು ಹೋಗುವಾಗ ಮೊದಲು ಸಿಗುವುದು ಕಾಶಿ ವಿಶ್ವನಾಥ ಗುಡಿ. ಅಲ್ಲಿಯೇ ಪಕ್ಕದಲ್ಲಿ ಪ್ರಸಾದ ವಿತರಣೆ ಕೇಂದ್ರ ಕೂಡ ಇದೆ. ಇನ್ನು ಸ್ವಲ್ಪ ಮುಂದಕ್ಕೆ ಹೋದರೆ ಕಾಣಿಸುವುದು ಸಿದ್ಧಿವಿನಾಯಕನ ವಿಗ್ರಹ. ಇದು ದಕ್ಷಿಣಕ್ಕೆ ಮುಖ ಮಾಡಿದೆ. ಈ ವಿಗ್ರಹ ಅಷ್ಟು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಸನಿಹದಿಂದ ನೋಡಿದರೆ ಸ್ವಲ್ಪ-ಮಟ್ಟಿಗೆ ಕಾಣಿಸುತ್ತದೆ. ಇನ್ನು ಮುಂದಕ್ಕೆ ಹೋದರೆ ಅಯ್ಯಪ್ಪ ಮತ್ತು ಪಾರ್ವತಿಯ ಗುಡಿಗಳಿವೆ. ಅಲ್ಲೇ ಪಕ್ಕದಲ್ಲಿ ಗಣಹೋಮಕ್ಕೆಂದಿರಿಸಿದ ತೆಂಗಿನಕಾಯಿ ರಾಶಿ ಕಾಣಿಸುತ್ತದೆ. ಹಾಗೆ ಕುಂಬಳಕಾಯಿ ರಾಶಿ ಕೂಡ ಕಾಣಬಹುದು. ಮತ್ತೆ ಮುಂಭಾಗಕ್ಕೆ ವಾಪಾಸ್ ಬಂದರೆ ಸುಬ್ರಹ್ಮಣ್ಯನ ಗುಡಿ ಇದೆ. ಅದರ ಪಕ್ಕದಲ್ಲಿ ದೇವಸ್ಥಾನದ ಪಾಕಶಾಲೆ ಹಾಗೂ ಬಾವಿ ಕೂಡ ಇದೆ. ಬಾವಿಯ ಮಂಟಪದಲ್ಲಿ ಟಿಪ್ಪುಸುಲ್ತಾನನ ಖಡ್ಗದ ಗುರುತು ಇದೆ. ಈ ದೇವಸ್ಥಾನವನ್ನು ಅವನು ಕೆಡವಲು ಬಂದಿದ್ದ ಎಂಬ ಇತಿಹಾಸವಿದೆ. ಆದರೆ ಇಲ್ಲಿ ನೀರು ಕುಡಿದಿದ್ದರಿಂದ ಯಾವುದೇ ಹಾನಿಯನ್ನು ಮಾಡದೆ, ಕೇವಲ ಖಡ್ಗದ ಕುರುಹನ್ನು ಮಾತ್ರ ಬಿಟ್ಟು ಹೋಗಿದ್ದಾನೆ. ಇದರ ಫಲವಾಗಿ ಮಾಯಪ್ಪಾಡಿ ರಾಜರ ನೇತೃತ್ವದಲ್ಲಿ ೧೭೯೫ರಲ್ಲಿ ಬೃಹತ್ ಮೂಡಪ್ಪ ಸೇವೆ ಜರುಗಿದೆ. ದೇವಾಸ್ಥಾನದ ಸುತ್ತಲೂ ವಿಶಾಲವಾದ ಆವರಣವಿದೆ. ಹಾಗೆ ವರ್ಣರಂಜಿತ ತೈಲಚಿತ್ರಗಳನ್ನು ಗೋಡೆಗಳ ಮೇಲೆ ಕಾಣಬಹುದು.
 
ಗರ್ಭಗುಡಿಯಲ್ಲಿರುವ ಶಿವನ ಲಿಂಗವು ವಿಶಿಷ್ಟ ರೀತಿಯಲ್ಲಿದ್ದು ಏನೋ ತಾಗಿದ ಗುರುತಿನಂತಿದೆ. ಮಧೂರು ಕ್ಷೇತ್ರದ ಬಳಿ ಒಮ್ಮೆ "ಮದರು" ಎಂಬ ಸ್ತ್ರೀಯೊಬ್ಬಳು ಸೊಪ್ಪು ಹೆರೆಯುತ್ತಿದ್ದಾಗ ಆಕೆಯ ಕತ್ತಿಯು ಶಿಲೆಯೊಂದಕ್ಕೆ ತಾಗಿ ರಕ್ತ ಹರಿಯಲು ಆರಂಭವಾಯಿತು. ಅದನ್ನು ಅವಳು ಗಾಬರಿಯಿಂದ ತನ್ನ ಮನೆಯವರಿಗೆ ತಿಳಿಸಿದಾಗ, ಅವರೆಲ್ಲ ಒಂದಾಗಿ ಸೀಮೆಯ ಅರಸರ ಬಳಿ ಹೇಳಿಕೊಂಡರು. ಅರಸರೂ ಮತ್ತು ಅಲ್ಲಿರುವವರು ಒಕ್ಕೊರಲಿನಿಂದ ’ಜಲಾಶಯವಿರುವ ಪ್ರಶಸ್ತ ಜಾಗದಲ್ಲಿ ಕಾಣಿಸಿಕೊಂಡರೆ ಮಂದಿರ ನಿರ್ಮಿಸಿ ಪೂಜಿಸುವೆವು’ ಎಂದು ಭಕ್ತಿಯಿಂದ ಪ್ರಾರ್ಥಿಸಿದಾಗ ವಿಗ್ರಹವು ಮಧುವಾಹಿನಿ ತಟದಲ್ಲಿ ಕಾಣಿಸಿಕೊಂಡಿತಂತೆ. ಆ ಪ್ರದೇಶದಲ್ಲಿ ಸ್ವಭಾವ ವೈರವನ್ನು ಮರೆತು ಹುಲಿ-ದನಗಳು ಸ್ನೇಹದಿಂದ ಇರುವುದನ್ನು ಕಂಡು ಅವರು ಇದುವೇ ಯೋಗ್ಯ ಸ್ಥಳವೆಂದು ಅಲ್ಲಿಯೇ ಮಂದಿರ ನಿರ್ಮಿಸಿ ಪೂಜಿಸತೊಡಗಿದರೆಂದು ಜಾನಪದ ಕಥೆಗಳು ಹೇಳುತ್ತವೆ. ದೇವಾಲಯದ ಹಿಂಭಾಗದಲ್ಲಿ ಈಗ ಒಂದು ಅರಳಿ ಕಟ್ಟೆಯಿದೆ. ಹುಲಿ-ದನಗಳು ವಿಶ್ರಮಿಸಿಕೊಂಡಿದ್ದನ್ನು ನೆನಪಿಸುವ ಹುಲಿ-ಕಲ್ಲನ್ನು ಅಲ್ಲಿ ಈಗಲೂ ಕಾಣಬಹುದು. ’ಮದರು’ ಎಂಬ ಹೆಸರೇ ನಂತರ ಗ್ರಾಮೀಣ ಆಡುಭಾಷೆಯಲ್ಲಿ ಮುಂದೆ ’ಮಧೂರು’ ಎಂದಾಯಿತು ಎಂಬ ನಂಬಿಕೆಯಿದೆ.
ಗೋಡೆಯಲ್ಲಿ ಮೂಡಿದ ಗಣಪ:
’ಮಧೂರಿನ’ ಅರ್ಚಕರ ಮಕ್ಕಳು ಒಮ್ಮೆ ಉತ್ಸವಕ್ಕೆ ಬಂದು ಗೋಡೆಯಲ್ಲಿ ಗಣಪತಿಯ ಚಿತ್ರ ಬರೆದು ಹೂಗಳಿಂದ ಅಲಂಕರಿಸಿ ಪೂಜಿಸುತ್ತಾ ಹಿರಿಯರು ಪೂಜಾಕಾರ್ಯಕ್ಕಾಗಿ ತಂದ ಅಕ್ಕಿಯ ಹುಡಿಯನ್ನು ನೀರಿನಲ್ಲಿ ಕಲಸಿ ಉಂಡೆಯಂತೆ ಮಾಡಿ ನೈವೇದ್ಯ ಮಾಡುತ್ತಾ ಶ್ರದ್ಧಾ ಭಕ್ತಿಗಳಿಂದ ಪೂಜೆಯಲ್ಲಿ ತನ್ಮಯರಾಗಿದ್ದರಂತೆ. ಹಿರಿಯರು ಇದನ್ನು ಕಂಡು ಅಚ್ಚರಿಗೊಂಡು ವಿಧಿವತ್ತಾದ ಪೂಜೆ ನಡೆಸಿದರಂತೆ. ಮಕ್ಕಳು ಮಾಡಿದ "ಹಸಿ ಅಕ್ಕಿ ಹುಡಿಯಿಂದ ಕಲಸಿದ ಉಂಡೆ"ಯ ಪ್ರತೀಕವಾಗಿ ಬೆಲ್ಲ ಸೇರಿಸಿದ, ಸಂಪೂರ್ಣ ಬೇಯದ "ಪಚ್ಚಪ್ಪ"ದ ನೈವೇದ್ಯ ಅಂದಿನಿಂದ ಆರಂಭವಾಯಿತು. ಮುಂದೆ ಕಡುಶರ್ಕರಪಾಕದಿಂದ ಈ ಚಿತ್ರದ ಉಬ್ಬು ಶಿಲ್ಪವನ್ನು ರಚಿಸಿ, ಅಲ್ಲಿಗೆ ಚಿಕ್ಕ ಬಾಗಿಲಿನಿಂದ ಕೂಡಿದ ಗುಡಿಯನ್ನು ನಿರ್ಮಿಸಿದರೆಂಬ ಜಾನಪದ ಇತಿಹಾಸವಿದೆ. ಇಲ್ಲಿ ಇರುವುದು ಬಲಮುರಿ ಗಣಪತಿ ವಿಗ್ರಹ ಅಂದರೆ ಸೊಂಡಿಲು ಬಲಭಾಗಕ್ಕೆ ತಿರುಗಿಕೊಂಡಿದೆ.
ವಿಶೇಷಗಳು
೧) ಇಲ್ಲಿ ಗಣಪನಿಗೆ ಮೂಡಪ್ಪ ಸೇವೆ, ಉದಯಾಸ್ತಮಾನ ಸೇವೆ, ಗಣಹೋಮ ಸೇವೆ ವಿಶೇಷ. ಶಿವನಿಗೆ ರುದ್ರಾಭಿಷೇಕ ವಿಶೇಷ ಸೇವೆಯಾಗಿದೆ.
೨) ಪ್ರತಿ ವರ್ಷ ಐದು ದಿವಸಗಳ ಕಾಲ ವಾರ್ಷಿಕ ಉತ್ಸವ ನಡೆಯುತ್ತದೆ. ನಾಲ್ಕನೆಯ ದಿನ ’ಬೆಡಿ’ ಉತ್ಸವ. ಅಲ್ಲಲ್ಲಿ ಕಟ್ಟೆ ಪೂಜೆ, ಆರತಿ, ಹಣ್ಣುಕಾಯಿಗಳ ಸ್ವೀಕಾರವಿದ್ದು ಉಳಿಯತ್ತಡ್ಕ ಮೂಲಸ್ಥಾನ ಕಟ್ಟೆಯಲ್ಲಿ ಪೂಜೆ ಕಳೆದು ಮರಳಿ ಬಂದು ಮಧೂರು ಬೆಡಿಕಟ್ಟೆಯಲ್ಲಿ ವಿಶೇಷ ಸಿಡಿಮದ್ದುಗಳ ಬೆಡಿ ಸೇವೆ. ಮರುದಿನ ರಾತ್ರಿ ಧ್ವಜಾವರೋಹಣ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆಗಳೊಂದಿಗೆ ಉತ್ಸವವು ಕೊನೆಗೊಳ್ಳುವುದು. ಉತ್ಸವದ ಐದು ದಿವಸಗಳಲ್ಲಿಯೂ ಸಂಗೀತ, ಸಾಹಿತ್ಯ, ನೃತ್ಯ, ನಾಟಕ, ಗಾನಮೇಳ, ಯಕ್ಷಗಾನ ಬಯಲಾಟಗಳು ಜನಮನ ರಂಜಿಸುವವು.
೩) ಪ್ರತಿ ದಿನ ಮಧ್ಯಾಹ್ನ ಊಟದ ವ್ಯವಸ್ಥೆ ಇದೆ. ೧೨:೩೦ಗೆ ಮುಂಚಿತವಾಗಿ ಸೇವಾ ಕೌಟರಿನಲ್ಲಿ ಚೀಟಿ ಪಡೆಯಬೇಕು.
ಹೋಗುವುದು ಹೇಗೆ
೧) ಕಾಸರಗೋಡಿನಿಂದ ಬೇಕಾದಷ್ಟು ಬಸ್ಸು ಓಡಾಡುತ್ತವೆ.
೨) ಮಂಗಳೂರಿನಿಂದ ನೇರ ಬಸ್ಸು ಸೇವೆ ಇಲ್ಲ. ಕಾಸರಗೋಡಿಗೆ ಬಂದು ಹೋಗಬೇಕು.
೩) ಮಂಗಳೂರಿನಿಂದ ಟ್ಯಾಕ್ಸಿ ಮಾಡಿಕೊಂಡು ಬಂದರೆ ಒಳ್ಳೆಯದು. ಹಾಗೆ ಅನಂತಪುರಕ್ಕೂ ಹೋಗಿ ಬರಬಹುದು.
೪) ಸ್ವಂತ ವಾಹನದಲ್ಲಿ ಮಂಗಳೂರಿನಿಂದ ಬರುವವರಿಗೆ ಮೊದಲು ಚೌಕಿ ಎಂಬ ಪ್ರದೇಶ ಸಿಗುತ್ತದೆ(ಕಾಸರಗೋಡಿಗಿಂತ ೪ ಕಿ.ಮೀ ಮುಂಚೆ). ಅಲ್ಲಿಂದ ಎಡಕ್ಕೆ ತಿರುಗಿಕೊಂಡು ಹೋಗಬೇಕು. ಮಾರ್ಗಸೂಚಕಗಳು ಇಲ್ಲದಿರುವುದರಿಂದ ಆಗಾಗ ಸ್ಥಳೀಯರ ಸಹಾಯ ಪಡೆಯಲೇಬೇಕು. ಇಲ್ಲವಾದಲ್ಲಿ ಕಾಸರಗೋಡಿನಿಂದ ಹೋಗಬಹುದು (ಇಲ್ಲಿ ಮಾರ್ಗಸೂಚಕಗಳು ಇರಬಹುದು).
ಉಳಿದುಕೊಳ್ಳಲು
ಮಧೂರಿನಲ್ಲಿ ಉಳಿದುಕೊಳ್ಳಲು ಮಧುವಾಹಿನಿ ಅತಿಥಿ ಗೃಹವಿದೆ. ಇಲ್ಲವಾದಲ್ಲಿ ಕಾಸರಗೋಡಿನಲ್ಲಿ ಬೇಕಾದಷ್ಟು ಅತಿಥಿ ಗೃಹಗಳಿವೆ. ಕರ್ನಾಟಕವೇ ಬೇಕೆಂದರೆ ಮಂಗಳೂರು ಇಲ್ಲವೇ ಪುತ್ತೂರಿನಲ್ಲಿ ಉಳಿದುಕೊಳ್ಳಬಹುದು.
ದರ್ಶನದ ಸಮಯ
ಬೆಳಿಗ್ಗೆ ೬:೩೦ ಇಂದ ಮಧ್ಯಾಹ್ನ ೧೨:೩೦
ಸಂಜೆ ೫:೩೦ ಇಂದ ರಾತ್ರಿ ೮:೩೦
ಭೇಟಿ ಕೊಡುವ ಸಮಯ
ನವೆಂಬರ್-ಫೆಬ್ರವರಿ ತಿಂಗಳುಗಳು. ಸಂಕಷ್ಟಿ, ಚೌತಿ, ಶಿವರಾತ್ರಿ, ಭಾನುವಾರ ಮತ್ತು ವಾರ್ಷಿಕ ಉತ್ಸವದಂದು ಅಪಾರ ಜನಸಂದಣಿ ಇರುತ್ತದೆ.
ಹತ್ತಿರದ ಪ್ರೇಕ್ಷಣೀಯ ಸ್ಥಳಗಳು
ಅನಂತಪುರದ ಸರೋವರ ದೇವಸ್ಥಾನ, ಕಾಸರಗೋಡು ದೀಪಸ್ತಂಭ, ಬೇಕಲ ಕೋಟೆ, ಕುಂಬಳೆ ಗೋಪಾಲಕೃಷ್ಣ ದೇವಸ್ಥಾನ.
 
ಮಹಾಪೂಜೆಯ ವೀಡಿಯೊ
ಮಹಾಪೂಜೆಯ ವೀಡಿಯೊ ಕಾಣಿರಿ
www.youtube.com/watch
ದೇವಾಲಯದ ಹಿನ್ನೆಲೆ ಮತ್ತು ವಿಗ್ರಹಗಳ ಮಾಹಿತಿ: ಕ್ಷೇತ್ರ ಪರಿಚಯ ಪುಸ್ತಕದಿಂದ
ಚಿತ್ರಗಳು ಮತ್ತು ವಿಡಿಯೋ : ನಂದಕುಮಾರ
ಸೂಚನೆ: ಇದರ ಆಂಗ್ಲ ಆವೃತ್ತಿಯನ್ನು ನನ್ನ ಬ್ಲಾಗಿನಲ್ಲಿ ಕಾಣಬಹುದು

 

Rating
No votes yet

Comments