ಆ...ಆ..ಆಕ್ಷಿ
ಮೆಟ್ರೋವಿನಲ್ಲಿ ಇಂದು ನನ್ನ ಪಕ್ಕದ ಸೀಟಿನ ಎದುರು ಪ್ರಾಮ್ನಲ್ಲಿ ಮುದ್ದಾದ ಮಗುವೊಂದಿತ್ತು. ನನ್ನ ಪಕ್ಕ ಕುಳಿತ ಮಗುವಿನ ಅಮ್ಮ(ಇರಬೇಕು) ಗಮನಿಸಿದೆ. ತನ್ನದೇ ಎಸ್.ಎಮ್.ಎಸ್ ಲೋಕದಲ್ಲಿ ಮಗ್ನಳಾಗಿದ್ದಳು. ನನ್ನ ಗಮನ ಮಗುವಿನತ್ತ ಇದ್ದದ್ದು ಅದಕ್ಕೆ ಗೊತ್ತಾಯಿತೇನೋ, ಬೊಚ್ಚು ಬಾಯಿ ಅಗಲಿಸಿ ನಕ್ಕಿತು. ನನಗೂ ಅದನ್ನು ಮಾತನಾಡಿಸಬೇಕಿತ್ತು. ಹಲೋ ಎಂದೆ...ಕೈ,-ಕಾಲು ಆಡಿಸುತ್ತಾ ಊ ಗುಟ್ಟಿತು. ಆ ಅಮ್ಮ, ನನ್ನತ್ತ ಕಿರುನಗೆ ಬೀರಿ, ಪ್ರಾಮ್ ಆಡಿಸಿ ಮಗುವಿನ ಬಾಯಿಗೆ ರಬ್ಬರ್ ನಿಪ್ಪಲ್ ಇಟ್ಟು ಮತ್ತೆ ತನ್ನ ಎಸ್.ಎಮ್.ಎಸ್ ಲೋಕದಲಿ ಮುಳುಗಿದಳು. ಅದ್ಯಾಕೋ ಗೊತ್ತಿಲ್ಲ, ಮಗುವನ್ನು ಎತ್ತಿಕೊಳ್ಳುವುದು, ರೈಲು-ಬಸ್ಸುಗಳಲ್ಲಿ ಮಡಿಲಲ್ಲಿ ಕೂಡಿಸಿಕೊಳ್ಳುವ ಪರಿಪಾಠವೇ ಇಲ್ಲಿಲ್ಲ. ಪರರು ಮುಟ್ಟಿದಲಿ-ಮಾತನಾಡಿಸಿದಲ್ಲಿ ಅನುಮಾನಾಸ್ಪದವಾಗಿ ನೋಡುತ್ತಾರೆ.
ಅಯ್ಯೋ ಪುಟ್ಟಿ, ನಿನ್ನ ಸ್ಪರ್ಶ, ಸಾನಿದ್ಧ್ಯ ಬಿಟ್ಟು ನಿಮ್ಮಮ್ಮನಿಗೆ ಮೊಬೈಲ್ ಸ್ಪರ್ಶವೇ ಹಿತವೇನೋ ಎಂದುಕೊಂಡೆ. ತಾಯಿ-ತಂದೆ-ಮಗುವಿನ ಬೆಚ್ಚನೆಯ ಅಪ್ಪುಗೆ, ಸ್ಪರ್ಶ ಹಿತ, ಭದ್ರತೆ, ಆತ್ಮೀಯತೆ ಕೊಡುತ್ತೆ. ಇದ್ದಕ್ಕಿದ್ದಂತೆ ಆಕ್ಷಿ ಎಂದು ಸೀನಿತು ಆ ಪುಟ್ಟಿ. ತಕ್ಷಣ ನನ್ನ ಅರಿವಿಲ್ಲದೇ ಶತಾಯಸ್ ಎಂದು ಬಾಯಲ್ಲಿ ಬಂದಿತು. ಇದೇನಿದು ಮಗುವನ್ನು ಮೊದಲು ನಗಿಸಿದಳು ಇದೇನೋ ಹೇಳುತ್ತಿದ್ದಾಳೆ ಎಂದು ಅನುಮಾನ ಪಟ್ಟಾಳೆಂಬ ಶಂಕೆಯಿಂದ, ಛಟ್ಟನೆ ಐ ಜಸ್ಟ್ ಸೆಡ್ "ಗಾಡ್ಬ್ಲೆಸ್" ಎಂದೆ. ಓ-ಮೈ ಮಮ್ ಟೆಲ್ಸ್ ಲೈಕ್ದಟ್ ಎಂದು ಮತ್ತೆ ಎಸ್.ಎಮ್.ಎಸ್. ನಲ್ಲಿ ಮುಳುಗಿದಳು ಆ ಮಹಾತಾಯಿ.
ಸೀನು -ಅಮ್ಮ, ಶತಾಯಸ್...ಈ ಬರಹಕ್ಕೆ ನಾಂದಿ ಹಾಡಿತು. ಸೀನುವುದು ಆ..ಆ...ಆಕ್ಷಿ ಗಾಳಿಯನ್ನು ಶ್ವಾಸಕೋಶಗಳಿಂದ ಹೊರದೂಡುವ ಒಂದು ದೈಹಿಕ ಪ್ರಕ್ರಿಯೆ. ಸೀನು ಎಂಬುದು ಗಾಳಿಯನ್ನು ಶ್ವಾಸಕೋಶಗಳಿಂದ ಮೂಗು ಮತ್ತು ಬಾಯಿಯ ಮೂಲಕ ಅರೆ ಸ್ವನಿಯಂತ್ರಿತ ಸೆಟೆತದ ಹೊರದೂಡುವಿಕೆ. ಇದು ಸಾಮಾನ್ಯವಾಗಿ ಬಾಹ್ಯ ಕಣಗಳು ನಾಸಿಕದ ಲೋಳೆಪೊರೆಗೆ ಉಪದ್ರವವನ್ನು ಕೊಟ್ಟಾಗ ಉಂಟಾಗುತ್ತದೆ. ಸೀನುವಿಕೆಯು, ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕಿನೆದುರಿಗೆ ಒಡ್ಡಿಕೊಂಡಾಗ, ಧೂಳು ಅಥವಾ ಹೊಟ್ಟೆ ಪೂರ್ತಿ ತುಂಬಿದಾಗ, ಅಥವಾ ವೈರಲ್ ಸೋಂಕು ತಗುಲಿದಾಗ ಉಂಟಾಗುತ್ತದೆ. ಹಾಗೆಯೇ ರೋಗ ಹರಡುವಿಕೆಯ ಮಾರ್ಗವೂ ಹೌದು.
ಚಳಿಗಾಲದಲ್ಲಿ ಶೀತ ನೆಗಡಿ ಜೊತೆಗೆ ಸೀನು ಸರ್ವೇ ಸಾಮಾನ್ಯ. ಶೀತದ ಆ ಅಕ್ಷೀ ಅಕ್ಷೀ ಬಾರದಿದ್ದಲ್ಲಿ ನಮ್ಮ ಅಸ್ತಿತ್ವಕ್ಕೆ ಬೆಲೆಯೇ ಇಲ್ಲ.ಶೀತದ ಆ ಆಕ್ಷಿಗೆ ಕಷಾಯದ ಔಷಧಿಯೇ ಹೊರತು ಇನ್ಯಾವ ನಂಬಿಕೆ/ಶಕುನಗಳು ಸಲ್ಲ.
ಸೀನಿದಾಕ್ಷಣ ಶತಾಯಸ್, ದೀರ್ಘಾಯಸ್, ನೂರಾಯಸ್ ಎಂದು ಹೇಳ್ತೀವಿ. ಹಿರಿಯರಿಂದ ನಾವು ಕಲಿತ ಅಭ್ಯಾಸವದು. ಆಯಸ್ಸಿಗೂ-ಸೀನಿಗೂ ನಂಟು? ಆದರೆ ಆ ಸೀನಿಗೆ ಅಂಟಿಗೆ ಅನೇಕ ಶಕುನಗಳ ಗಂಟು.
ಉತ್ತರ, ದಕ್ಷಿಣ ಭಾರತದಲ್ಲಿ ಒಳ್ಳೆಯ ಕಾರ್ಯಕ್ಕೆ ಹೊರಡುವ ಮೊದಲು ಒಂದು ಸೀನು ಬಂದಲ್ಲಿ ಕಾರ್ಯಕ್ಕೆ ವಿಘ್ನ, ಎರಡನೆಯ ಆಕ್ಷಿ ಬರುವುದೇನೋ ಎಂದು ಕಾಯುತ್ತಾರೆ, ಬರದಿದ್ದಲ್ಲಿ ಪರಿಹಾರ ಉಂಟು. ಒಂದು ನಿಮಿಷ ಕುಳಿತು ಅಥವಾ ಒಂದು ತೊಟ್ಟು ನೀರು ಕುಡಿದು ಹೊರಡುತ್ತಾರೆ. ಪಶ್ಚಿಮ ಭಾರತದಲ್ಲಿ ಇಷ್ಟಪಟ್ಟವರು ನೆನೆಪಿಸಿಕೊಳ್ಳುತ್ತಿದ್ದಾರೆ ಎಂದಾದಲ್ಲಿ ಇನ್ನೂ ಕೆಲವೆಡೆ ಮದುವೆಯಾದ ಹೆಣ್ಣು ಸೀನಿದಲ್ಲಿ "ಅತ್ತೆ" ಸೊಸೆಯನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಗೇಲಿ ಮಾಡುತ್ತಾರೆ. ನಮ್ಮ ಹಾಗೆಯೇ ಇರಾನಿಯರಲ್ಲೂ ಒಂದು ಸೀನು ಅಶುಭ/ ಎರಡು ಶುಭ.
ಚೀನ, ವಿಯಟ್ನಾಂ, ಜಪಾನೀಯರಲ್ಲಿ ಸೀನು ಬಂದ ವ್ಯಕ್ತಿಯ ಕುರಿತು ಆತನ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ ಎಂಬ ನಂಬಿಕೆ. ಅದರಲ್ಲೂ ಒಂಟಿ ಸೀನು ಆ ವ್ಯಕ್ತಿಯ ಬಗ್ಗೆ-ಕೆಟ್ಟಮಾತು, ಎರಡು ಸೀನು-ಒಳ್ಳೆಯ ಮಾತು ಹಾಗೂ ಮೂರು ಸೀನು-ಪ್ರೀತಿಸುತ್ತಾರೆ ಎಂಬ ನಂಬಿಕೆ.
ಪಾಕಿಸ್ತಾನಿಯರಲ್ಲಿ "ಸೀನಿದ ವ್ಯಕ್ತಿಯ ಪತ್ನಿ, ಅಚ್ಚುಮೆಚ್ಚಿನ ಬಂಧು-ಬಾಂಧವರು ನೆನಪಿಸಿಕೊಳ್ಳುತ್ತಿದ್ದಾರೆ ಎಂಬ ನಂಬಿಕೆ. ನೇಪಾಳೀಯರು ಕೂಡ ಸೀನಿದಾಕ್ಷಣ "ಯಾರೋ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಸೀನಿದವರ ತಲೆಯ ಮೇಲೆ ಕೈ ಇಡುತ್ತಾರಂತೆ. ಅಮೇರಿಕನ್ನರಲ್ಲಿ ಸೀನಿದ ವ್ಯಕ್ತಿ ಸತ್ಯ ಹೇಳುತ್ತಿದ್ದಾನೆ ಎಂಬ ನಂಬಿಕೆ ಇದ್ದರೆ ಜರ್ಮನ್ನರಲ್ಲಿ ಮೂರು ಸೀನು ಬಂದಲ್ಲಿ ಉಡುಗೊರೆ ದೊರಕುವುದೆಂಬ ನಂಬಿಕೆ. ಸ್ಕಾಟ್ಲ್ಯಾಂಡಿನಲ್ಲಿ ಮಗು ಹುಟ್ಟಿದ ತಕ್ಷಣ "ಸೀನು" ಬಂದಲ್ಲಿ ಆ ಮಗು ಅಪ್ಸರೆಯರ ದಿಗ್ಬಂಧನದಿಂದ ಮುಕ್ತಿ ದೊರಕಿ ಭುವಿಗೆ ಬಂದಿತು ಎಂಬ ನಂಬಿಕೆ. ಸ್ಪೈನ್ನಲ್ಲಿ ಒಂದು ಸೀನು-ಆರೋಗ್ಯ ಪ್ರಾಪ್ತಿ, ಎರಡು-ಆರೋಗ್ಯ, ಐಶ್ವರ್ಯ ಪ್ರಾಪ್ತಿ. ಮೂರು/ನಾಲ್ಕಾದಲ್ಲಿ ಅಲರ್ಜಿ-ರೋಗ ಪ್ರಾಪ್ತಿ, ವೈದ್ಯೋ ನಾರಾಯಣೋ ಹರಿಃ! ಪ್ರಾಚೀನ ಗ್ರೀಸಿನಲ್ಲಿ "ಸೀನು" ಶುಭ ಶಕುನ ಹಾಗೂ ಭವಿಷ್ಯ ಸೂಚಕ ಶುಭಸಂಕೇತ ಎಂದು ಪರಿಗಣಿಸಲಾಗುತ್ತಿತ್ತು.
ಮಾನವನ ಬದುಕಿಗೂ ನಂಬಿಕೆಗೂ ಬೇರ್ಪಡಿಸಲಾಗದ ಸಂಬಂಧ. ನಂಬಿಕೆ ಎಂಬುದು ಅವರವರ ಭಾವಕ್ಕೆ! ಯಾರೂ ಅದಕ್ಕೆ ಕಾರಣವೇನು ಎಂದು ಶೋಧಿಸಲು ಹೋಗುವುದಿಲ್ಲ ಅನೇಕ ನಂಬಿಕೆಗಳು, ಸಂಪ್ರದಾಯಗಳು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿ ಬೆಳೆದು ಕೊಂಡು ಬಂದಿವೆ. ಈ ಕೆಲವೊಂದು ನಂಬಿಕೆಗಳು ಮೂಢನಂಬಿಕೆ ಎನಿಸುವುದೂ ನಿಜ.
ಎಚ್ಚರವಿರಲಿ:- ಆ...ಆ..ಆಕ್ಷೀಯಲ್ಲಿ ಒಂದು ಲಕ್ಷ ರೋಗಾಣುಗಳನ್ನು ಹೊರಸೂಸುತ್ತದೆ ಹಾಗೂ ಒಂದು ಘಂಟೆಗೆ ನೂರು ಮೈಲಿ ವೇಗವುಳ್ಳದ್ದು "ಸೀನು". ನಾಯಿ, ಬೆಕ್ಕು ಹಾಗೂ ಇಗುವಾನ ಕ್ಕೂ ಉಂಟು ಸೀನಿನ ನಂಟು.
ಅಬ್ಬಬ್ಬಾ ಆಕ್ಷಿಯೇ...ನಿನಗೂ ಗಿನ್ನಿಸ್ ದಾಖಲೆಯೇ?
ಲೈಬ್ರರಿ ಆಫ್ ಕಾಂಗ್ರೆಸ್ ಪ್ರಕಾರ ಆಕ್ಷಿಗೆ ಗಿನ್ನಿಸ್ ದಾಖಲೆಯೂ ಉಂಟು. ಜನವರಿ ೧೯೮೧ ರಿಂದ ಸೆಪ್ಟೆಂಬರ್ ೧೯೮೩ ರರಲ್ಲಿ ೯೭೮ ದಿನಗಳವರೆಗೆ ಇಂಗ್ಲೆಂಡಿನ ೧೨ ವರುಷದ ಡೋನ ಗ್ರಿಫಿತ್ ಎಂಬ ಹುಡುಗಿಗೆ ಪ್ರತಿ ಐದು ನಿಮಿಷಗಳಿಗೊಮ್ಮೆ ಸೀನು ಬಂದಿತಂತೆ.
Comments
ಉ: ಆ...ಆ..ಆಕ್ಷಿ
In reply to ಉ: ಆ...ಆ..ಆಕ್ಷಿ by ksraghavendranavada
ಉ: ಆ...ಆ..ಆಕ್ಷಿ
In reply to ಉ: ಆ...ಆ..ಆಕ್ಷಿ by nanjunda
ಉ: ಆ...ಆ..ಆಕ್ಷಿ
In reply to ಉ: ಆ...ಆ..ಆಕ್ಷಿ by ಗಣೇಶ
ಉ: ಆ...ಆ..ಆಕ್ಷಿ
In reply to ಉ: ಆ...ಆ..ಆಕ್ಷಿ by ksraghavendranavada
ಉ: ಆ...ಆ..ಆಕ್ಷಿ
ಉ: ಆ...ಆ..ಆಕ್ಷಿ
In reply to ಉ: ಆ...ಆ..ಆಕ್ಷಿ by makara
ಉ: ಆ...ಆ..ಆಕ್ಷಿ
In reply to ಉ: ಆ...ಆ..ಆಕ್ಷಿ by makara
ಉ: ಆ...ಆ..ಆಕ್ಷಿ
ಉ: ಆ...ಆ..ಆಕ್ಷಿ
In reply to ಉ: ಆ...ಆ..ಆಕ್ಷಿ by partha1059
ಉ: ಆ...ಆ..ಆಕ್ಷಿ